ಡಾಲರ್ ಎದುರು ಇನ್ನಷ್ಟು ಕುಸಿದ ರೂಪಾಯಿ ಸಾರ್ವಕಾಲಿಕ ದಾಖಲೆಯ ಅಪಮೌಲ್ಯ
ಒಂದು ಡಾಲರ್ ವಿನಿಮಯ ಮೌಲ್ಯ ರೂ.89.78
‘ ಬೆವರ ಹನಿʼ ವಿಶೇಷ

ಎಸ್.ಆರ್.ವೆಂಕಟೇಶ ಪ್ರಸಾದ್
ಬೆಂಗಳೂರು : ಭಾರತೀಯ ರೂಪಾಯಿಯ ಮೌಲ್ಯ ಇತ್ತೀಚಿನ ದಿನಗಳಲ್ಲಿ ಡಾಲರ್ ಎದುರು ಅಪಮೌಲ್ಯಗೊಳ್ಳುತ್ತಾ ತನ್ನ ದಾಖಲೆಗಳನ್ನು ತಾನೇ ಮುರಿಯುತ್ತ ಕುಸಿತದ ಹೊಸ-ಹೊಸ ದಾಖಲೆಗಳನ್ನು ನಿರ್ಮಿಸುತ್ತ ಇದ್ದದ್ದು, ಸೋಮವಾರ(ಡಿ.1) 34 ಪೈಸೆ ಕುಸಿದು ಸಾರ್ವಕಾಲಿಕ ಪತನ ಕಂಡು 89.78 ರೂಪಾಯಿಗಳಿಗೆ ಜಾರಿದೆ. ನವೆಂಬರ್ 21ರಂದು ಡಾಲರ್ ಎದುರು 98 ಪೈಸೆ ಕುಸಿದು 89.66 ರೂಪಾಯಿಗಳಿಗೆ ತಲುಪಿದ್ದೇ ವಿನಿಮಯ ದರದ ಈವರೆಗಿನ ಅಪಮೌಲ್ಯದ ಬಹು ದೊಡ್ಡ ಕಳಪೆ ದಾಖಲೆಯಾಗಿತ್ತು. ಸೋಮವಾರದ ಕುಸಿತ ರೂಪಾಯಿಗೆ ಏಷ್ಯಾದಲ್ಲೇ ಅತ್ಯಂತ ಕಳಪೆ ಕರೆನ್ಸಿ ಎನ್ನುವ ಅಪಖ್ಯಾತಿ ತಂದಿದೆ.
ಡಾಲರ್ ಎದುರು ರೂಪಾಯಿ ನವೆಂಬರ್ 3 ರಿಂದ ಡಿಸೆಂಬರ್ ಒಂದರ ವೇಳೆಗೆ ಒಂದು ರೂಪಾಯಿ ಕುಸಿದಿದೆ. ಇದೇ ರೀತಿ ಜಾಗತಿಕ ಮತ್ತು ಆರ್ಥಿಕ ಒತ್ತಡಗಳು ಮುಂದುವರಿದರೆ ಅಪಮೌಲ್ಯ 90 ರೂಪಾಯಿಗಳವರೆಗೆ ಜಾರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.
ವಿದೇಶಿ ಬಂಡವಾಳವನ್ನು ಭಾರೀ ಪ್ರಮಾಣದಲ್ಲಿ ಹೊರ ತೆಗೆಯುತ್ತಿರುವುದು, ದೇಶೀಯವಾಗಿ ಕಚ್ಚಾ ತೈಲ ಮತ್ತು ಚಿನ್ನದ ಆಮದುದಾರರಿಂದ ಡಾಲರ್ ಗೆ ಹೆಚ್ಚುತ್ತಿರುವ ಬೇಡಿಕೆಯು ರೂಪಾಯಿ ಮೌಲ್ಯದ ಮೇಲೆ ಒತ್ತಡ ಹೇರುತ್ತಿದೆ ಎನ್ನಲಾಗುತ್ತಿದೆ.
ರೂಪಾಯಿ ಮೌಲ್ಯ ಕುಸಿತವು ಆಮದು ಮಾಡಿಕೊಳ್ಳುವ ವಸ್ತುಗಳ ವೆಚ್ಚವನ್ನು ಹೆಚ್ಚಿಸುತ್ತದೆ. ಭಾರತ ಸರ್ಕಾರ ಮತ್ತು ಭಾರತೀಯ ಕಂಪನಿಗಳು ಅಮೆರಿಕದ ಡಾಲರ್ ಗಳಲ್ಲಿ ಸಾಲಗಳನ್ನು ಪಡೆದಿರುತ್ತವೆ.ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತವು ಈ ಸಾಲಗಳನ್ನು ಮರು ಪಾವತಿಸುವ ವೆಚ್ಚವನ್ನು ಹೆಚ್ಚಿಸುತ್ತವೆ.
ಆರ್ಥಿಕ ಸ್ಥಿರತೆಯ ಕುಸಿತವು ರೂಪಾಯಿ ಮೌಲ್ಯ ಕುಸಿತದ ಕಾರಣಗಳಲ್ಲಿ ಒಂದು ಎಂದು ಆರ್ಥಿಕ ತಜ್ಞರು ಹೇಳುತ್ತಾರೆ. ಸರ್ಕಾರದ ಆರ್ಥಿಕ ನೀತಿಗಳು ಮತ್ತು ಜಾಗತಿಕ ಆರ್ಥಿಕ ಪರಿಸ್ಥಿತಿಗಳು ರೂಪಾಯಿ ಭವಿಷ್ಯವನ್ನು ನಿರ್ಧರಿಸುವ ಪ್ರಮುಖ ಅಂಶಗಳು.
ಭಾರತದ ಆರ್ಥಿಕತೆಯ ಇತಿಹಾಸದಲ್ಲಿ ರೂಪಾಯಿಯ ಮೌಲ್ಯದ ಏರಿಳಿತವು ಒಂದು ಮಹತ್ವದ ಅಂಶ. 2000 ನೇ ಇಸವಿಯಲ್ಲಿ 44.94 ರೂಪಾಯಿಗಳಿಗೆ ಒಂದು ಅಮೆರಿಕನ್ ಡಾಲರ್ ದೊರೆಯುತ್ತಿದ್ದದ್ದು, 2025 ಡಿಸೆಂಬರ್ ಒಂದರಂದು ಅದೇ ಒಂದು ಡಾಲರ್ ಗೆ 89.78 ರೂಪಾಯಿಗಳು ಬೇಕಾಯಿತು.ಅಂದರೆ, ಕಳೆದ 25 ವರ್ಷಗಳ ಅವಧಿಯಲ್ಲಿ ರೂಪಾಯಿ ಮೌಲ್ಯ ಶೇಕಡ 98.8 ರಷ್ಟು ಕುಸಿತ ಕಂಡಿದೆ. ಈ ಕುಸಿತ ಮತ್ತು ಕುಸಿತದ ಆತಂಕ ಭಾರತೀಯ ಆರ್ಥಿಕತೆಯ ಬೆಳವಣಿಗೆ, ವಿದೇಶಿ ಹೂಡಿಕೆಗಳು, ಆಮದು-ರಫ್ತಿನ ಸಮತೋಲನ ಮತ್ತು ನಮ್ಮೆಲ್ಲರ ಜೀವನ ಶೈಲಿಯ ಮೇಲೆ ಗಂಭೀರ ಪ್ರಭಾವವನ್ನು ಬೀರುತ್ತಿವೆ.

1990 ರಲ್ಲಿ ಭಾರತ ದೇಶ ಹೊಸ ಆರ್ಥಿಕತೆಗೆ ತೆರೆದುಕೊಂಡಾಗ ಡಾಲರ್ ಎದುರು ರೂಪಾಯಿಯ ಮೌಲ್ಯ 17 ರೂಪಾಯಿ ಆಗಿತ್ತು. ಮರು ವರ್ಷದಲ್ಲಿ 1991ರಲ್ಲಿ ಬಾಕಿ ಹಣ ಪಾವತಿ ಸಮಸ್ಯೆ (ಬಿಒಪಿ)ಯಿಂದ 90 ಪೈಸೆ ಕುಸಿತ ಕಂಡು 17.90 ರೂಪಾಯಿಗಳಿಗೆ ತಲುಪಿತ್ತು.2000 ದ ವೇಳೆಗೆ ಪ್ರತಿ ಡಾಲರ್ ಗೆ 44-47 ರೂಪಾಯಿಗಳಿಗೆ ತಲುಪಿದ ರೂಪಾಯಿ ಮೌಲ್ಯ, 2010ರ ವೇಳೆಗೆ 45-46 ರೂಪಾಯಿಗಳಾಗಿತ್ತು. 2014ರಲ್ಲಿ 60.95 ಇದ್ದದ್ದು,2025ರ ವೇಳೆಗೆ 88- 89 ರೂಪಾಯಿಗಳ ಆತಂಕಕಾರಿ ಹಂತಕ್ಕೆ ಬಂದು ತಲುಪಿದೆ.
ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎನ್ನುವುದು ಭಾರತದ ಹೆಗ್ಗಳಿಕೆ. ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕತೆ ಹೊಂದಿದ ರಾಷ್ಟ್ರವಾಗುವತ್ತ ದಾಪುಗಾಲು.ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕ (ಜುಲೈ-ಸೆಪ್ಟೆಂಬರ್)ದಲ್ಲಿ ದೇಶದ ಒಟ್ಟಾರೆ ಆಂತರಿಕ ಉತ್ಪನ್ನವು(ಜಿಡಿಪಿ) ಕಳೆದ ಆರು ತ್ರೈಮಾಸಿಕದಲ್ಲೇ ದಾಖಲೆ ಪ್ರಮಾಣದ ಶೇಕಡಾ 8.2ಕ್ಕೆ ಏರಿಕೆಯಾಗಿ ನಿರೀಕ್ಷೆಗೂ ಮೀರಿದ ಪ್ರಗತಿ ಸಾಧಿಸಿ ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂಬ ಸ್ಥಾನವನ್ನು ಉಳಿಸಿಕೊಂಡಿದೆ. ಆದರೆ,ಡಾಲರ್ ಎದುರು ರೂಪಾಯಿಯ ನಿರಂತರ ಅಪಮೌಲ್ಯ ಆ ಪ್ರಯತ್ನಗಳಿಗೆ ದೊಡ್ಡ ಕಪ್ಪು ಚುಕ್ಕೆ. ಏಕೆಂದರೆ, ಜಾಗತಿಕ ಆರ್ಥಿಕ ಗಾತ್ರದ ಅಳತೆಯ ಮಾನದಂಡ ಅಮೆರಿಕನ್ ಡಾಲರ್. ದುರ್ಬಲ ರೂಪಾಯಿ ಎಂದರೆ ವಿನಿಮಯ ದರವು ಭಾರತದ ಉತ್ಪಾದನೆಯಲ್ಲಿನ ಬೆಳವಣಿಗೆಯನ್ನು ಕುಗ್ಗಿಸುತ್ತದೆ.
ಸ್ಥಿರ ವಿದೇಶಿ ವಿನಿಮಯ ಮೀಸಲು ಮತ್ತು ಚಾಲ್ತಿ ಖಾತೆಯಂತಹ ಚೇತರಿಸಿಕೊಳ್ಳುವ ಮೂಲ ಗುಣ ಹೊಂದಿರುವ ಭಾರತದ ಆರ್ಥಿಕತೆಯ ನಡುವೆಯೂ ಅಪಮೌಲ್ಯದ ದೌರ್ಬಲ್ಯ ಮುಂದುವರೆಯುತ್ತಿದೆ.
ನಿರಂತರ ಅಪಮೌಲ್ಯದ ಕಾರಣಗಳು:
1.ಅಮೆರಿಕ ಡಾಲರ್ ನ ಬಲ ಮತ್ತು ಜಾಗತಿಕ ಹಣಕಾಸು ನೀತಿಯಲ್ಲಿನ ಬದಲಾವಣೆಗಳು: ಅಮೆರಿಕದ ಫೆಡರಲ್ ರಿಸರ್ವ್ ನ ಈ ವರ್ಷದ ಮೂರನೇ ಹಾಗೂ ಅಂತಿಮ ದರ ಕಡಿತದ ನಿರೀಕ್ಷೆಯಲ್ಲಿ ಅಮೆರಿಕದ ಡಾಲರ್ ಸೂಚ್ಯಂಕ 100 ಅಂಶವನ್ನು ದಾಟಿ ಆರು ತಿಂಗಳ ಅವಧಿಯಲ್ಲಿನ ಗರಿಷ್ಠ ಮಟ್ಟವನ್ನು ತಲುಪಿದೆ.ಇದು ಜಾಗತಿಕ ಅನಿಶ್ಚಿತತೆಯ ನಡುವೆ ಈ ವರ್ಷ ಅಪಮೌಲ್ಯಗೊಳ್ಳುತ್ತಿರುವ ರೂಪಾಯಿ ಸೇರಿದಂತೆ ಉತ್ತಮವಾಗಿ ಬೆಳೆಯುತ್ತಿರುವ ಹಣಕಾಸು ಮಾರುಕಟ್ಟೆಗಳ ಕರೆನ್ಸಿಗಳ ಮೇಲೆ ಒತ್ತಡ ಹೇರಿದೆ.
ವಿನಿಮಯ ದರ ಕುಸಿತದ ಹಿಂದೆ ಅತಿ ಹೆಚ್ಚು ಪ್ರಭಾವವನ್ನು ಅಮೆರಿಕಾ ಫೆಡರಲ್ ರಿಸರ್ವ್‌ನ ನೀತಿಗಳು ಬೀರುತ್ತವೆ.ಯುಎಸ್ ಫೆಡ್ ಬಡ್ಡಿ ದರಗಳನ್ನು ಹೆಚ್ಚಿಸಿದಾಗ, ವಿದೇಶಿ ಹೂಡಿಕೆದಾರರು ಹೆಚ್ಚಿನ ಆದಾಯವನ್ನು ನಿರೀಕ್ಷಿಸಿ ಉದಯೋನ್ಮುಖ ಮಾರುಕಟ್ಟೆಗಳಲ್ಲಿ ಒಂದಾದ ಭಾರತವೂ ಸೇರಿದಂತೆ ಇತರ ದೇಶಗಳಿಂದ ತಮ್ಮ ಬಂಡವಾಳವನ್ನು ಹೊರ ತೆಗೆದು ಡಾಲರ್ ಆಧಾರಿತ ಸ್ವತ್ತುಗಳಿಗೆ ವರ್ಗಾಯಿಸುತ್ತಾರೆ. ಈ ಬಂಡವಾಳದ ಹೊರಹರಿವು ರೂಪಾಯಿಯ ಮೇಲೆ ತೀವ್ರ ಅಪಮೌಲ್ಯೀಕರಣದ ಒತ್ತಡವನ್ನು ಹೇರುತ್ತದೆ.
2.ಜಾಗತಿಕ ರಾಜಕೀಯ ಉದ್ವಿಗ್ನತೆಗಳಿಂದ ಅನಿಶ್ಚಿತತೆ: ಉದಾಹರಣೆಗೆ ರಷ್ಯಾ-ಉಕ್ರೇನ್ ಸಂಘರ್ಷ ಮತ್ತು ಅಮೆರಿಕ-ಚೀನಾ ಆರ್ಥಿಕ ಪೈಪೋಟಿ ಅಂತರರಾಷ್ಟ್ರೀಯ ಹೂಡಿಕೆದಾರರಲ್ಲಿ ಅಪಾಯದ ಭಾವನೆಗಳನ್ನು ಸೃಷ್ಟಿಸುತ್ತಿವೆ. ಈ ಸಂದರ್ಭಗಳಲ್ಲಿ, ಹೂಡಿಕೆದಾರರು ಸಾಮಾನ್ಯವಾಗಿ ಅಮೆರಿಕ ಡಾಲರ್ ಅನ್ನು ಸುರಕ್ಷಿತ ಸ್ವತ್ತು ಎಂದು ಪರಿಗಣಿಸಿ ಅದರ ಕಡೆಗೆ ವಲಸೆ ಹೋಗುತ್ತಾರೆ. ಇದರಿಂದ ಜಾಗತಿಕವಾಗಿ ಡಾಲರ್ ಬೇಡಿಕೆ ಹೆಚ್ಚಾಗಿ, ರೂಪಾಯಿ ಸೇರಿದಂತೆ ಏಷ್ಯಾದ ಇತರ ಕರೆನ್ಸಿಗಳೂ ದುರ್ಬಲಗೊಳ್ಳುತ್ತವೆ.
ಕಳೆದ ಎರಡು ತಿಂಗಳ ಅವಧಿಯಲ್ಲಿ ಅಮೆರಿಕ ಡಾಲರ್ ಶೇಕಡ 3.6 ರಷ್ಟು ಏರಿಕೆ ಕಂಡಿದ್ದರೆ;ಇದಕ್ಕೆ ವ್ಯತಿರಿಕ್ತವಾಗಿ ಚೀನಾದ ಯುವಾನ್ ಶೇಕಡ 1.3 ಮತ್ತು ಇಂಡೋನೇಷಿಯಾದ ರುಪಿಯಾ ಶೇಕಡ 2.9ರಷ್ಟು ಅಪಮೌಲ್ಯಗೊಂಡಿವೆ. ಅದನ್ನು ಮೀರಿಸುವಂತೆ ಭಾರತದ ಕರೆನ್ಸಿಯಾದ ರೂಪಾಯಿ ಶೇಕಡಾ 4.6 ರಷ್ಟು ಕುಸಿತ ಕಂಡಿರುವುದು ಇದಕ್ಕೆ ಸ್ಪಷ್ಟ ಉದಾಹರಣೆ. ಅಮೆರಿಕದಲ್ಲಿನ ಆಡಳಿತದ ಸ್ಥಗಿತದ ಘಟನೆಯೂ ಸಹ ಅನಿಶ್ಚಿತತೆಯು ಕರೆನ್ಸಿ ಮಾರುಕಟ್ಟೆಯಲ್ಲಿ ಶಾರ್ಟ್ ಕವರಿಂಗ್ ಮೂಲಕ ಡಾಲರ್ ನ್ನು ಮತ್ತಷ್ಟು ಬಲಪಡಿಸಿತು.
3.ವ್ಯಾಪಾರ ಕೊರತೆ:78.15 ಬಿಲಿಯನ್ ಡಾಲರ್ ಭಾರತದ ಆಮದು ಮತ್ತು ರಫ್ತಿನ ನಡುವಿನ ವ್ಯತ್ಯಾಸದ ಮೊತ್ತ.2025 ರ ಅಕ್ಟೋಬರ್ ವೇಳೆಗೆ ಭಾರತದ ಆಮದಿನ ಪ್ರಮಾಣ ಶೇಕಡಾ 14.87 ರಷ್ಟು ಏರಿಕೆ ಕಂಡಿದ್ದರೆ;ರಫ್ತಿನಲ್ಲಿ ಅಲ್ಪ ಪ್ರಮಾಣದ ಕುಸಿತ ಕಂಡಿದೆ.ಇದರಿಂದ ವ್ಯಾಪಾರ ಕೊರತೆ ಹೆಚ್ಚಿತು.
ಆಮದು-ರಫ್ತು ಪ್ರಮಾಣ
(2025 ರ ಏಪ್ರಿಲ್-ಅಕ್ಟೋಬರ್ ನಡುವೆ):ಒಟ್ಟು ಆಮದು:569.95 ಬಿಲಿಯನ್ ಡಾಲರ್ (ಶೇಕಡಾ 5.74 ಏರಿಕೆ),ಒಟ್ಟು ರಫ್ತು:491.80 ಬಿಲಿಯನ್ ಡಾಲರ್ (ಶೇಕಡಾ 4.84 ಏರಿಕೆ),ಏರಿಕೆ 2024 ರ ಇದೇ ಅವಧಿಯಲ್ಲಿನ ಅಂಕಿ-ಅಂಶದ ಹೋಲಿಕೆಯ ನಂತರದ್ದು.
ರಫ್ತಿನಲ್ಲಿ ಹಿನ್ನೆಡೆ-ಆಮದು ಹೆಚ್ಚಳ:ರಫ್ತು ಮತ್ತು ಆಮದಿನ ನಡುವಿನ ಅಸಮತೋಲನ ನಿವ್ವಳ ಹಣಕಾಸಿನ ಮತ್ತು ಹಣಕಾಸಿನ ಹರಿವನ್ನು ದುರ್ಬಲಗೊಳಿಸುತ್ತಿದೆ. 2025ರಲ್ಲಿ ಚಾಲ್ತಿ ಖಾತೆ ಕೊರತೆಯು ಶೇಕಡ 0.6 ರಿಂದ 2026ರ ಹಣಕಾಸು ವರ್ಷದಲ್ಲಿ ದೇಶದ ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ)ದ ಶೇಕಡ 1.2ಕ್ಕೆ ವಿಸ್ತರಿಸುವ ನಿರೀಕ್ಷೆ ಇದೆ.
4.ಬಂಡವಾಳ ಹೊರ ಹರಿವು ಮತ್ತು ದುರ್ಬಲ ದೇಶಿಯ ಸೂಚಕಗಳು: ಷೇರು ಮಾರುಕಟ್ಟೆಯಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರ(ಎಫ್ ಐಐ) ನಿರಂತರ ಮಾರಾಟ,ವಿದೇಶಿ ಬಂಡವಾಳ ಹೂಡಿಕೆ (ಎಸ್ ಪಿಐ) ಒಳ ಹರಿವು(0.3 ಬಿಲಿಯನ್ ಡಾಲರ್- ಹಣಕಾಸು ವರ್ಷದ ಆರಂಭದಿಂದ ನಿರ್ದಿಷ್ಟ ದಿನಾಂಕದವರೆಗೆ) ಮತ್ತು ನಿಧಾನಗತಿಯ ನಿವ್ವಳ ವಿದೇಶಿ ನೇರ ಹೂಡಿಕೆ(ಎಫ್ ಡಿಐ) -2025ರ ಮೊದಲ ತ್ರೈಮಾಸಿಕದಲ್ಲಿ 5.7 ಬಿಲಿಯನ್ ಡಾಲರ್ ಇದ್ದದ್ದು, 2ನೇ ತ್ರೈಮಾಸಿಕದ ವೇಳೆಗೆ 1.9 ಬಿಲಿಯನ್ ಡಾಲರ್ ಗೆ ಕುಸಿದಿದೆ. ಸ್ಥಿರವಾದ ಚಾಲ್ತಿ ಖಾತೆಯ ಹೊರತಾಗಿಯೂ ಬಂಡವಾಳದ ಹೊರ ಹರಿವು ಹೆಚ್ಚಾಗಿದೆ.
5.ರಾಜಕೀಯ ಸ್ಥಿರತೆ ಮತ್ತು ಅಂತರರಾಷ್ಟ್ರೀಯ ಸಂಬಂಧಗಳು: ವಿದೇಶಿ ಹೂಡಿಕೆದಾರರ ಹೂಡಿಕೆಯ ಆಸಕ್ತಿ ಮತ್ತು ಅದರ ಮೂಲಕ ಕರೆನ್ಸಿ ಸ್ಥಿರತೆ ಮತ್ತು ಮೌಲ್ಯದ ಮೇಲೆ ದೇಶದ ರಾಜಕೀಯ ಸ್ಥಿರತೆ ಮತ್ತು ಅಂತರರಾಷ್ಟ್ರೀಯ ಸಂಬಂಧಗಳು ಪ್ರಭಾವ ಬೀರುತ್ತವೆ.
ಜೊತೆಗೆ,ವಿದೇಶಿ ಹೂಡಿಕೆದಾರರು ಸಹಜವಾಗಿ ತಾನು ಹೂಡಿಕೆ ಮಾಡ ಬಯಸುವ ದೇಶಗಳಲ್ಲಿ ಶಾಂತಿ-ಸುವ್ಯವಸ್ಥೆ ಮತ್ತು ಸೌಹಾರ್ದ ವಾತಾವರಣವನ್ನು ನಿರೀಕ್ಷಿಸುತ್ತಾರೆ.ವಿದೇಶಿ ಹೂಡಿಕೆಯ ಒಳ ಹರಿವು ಹೆಚ್ಚಾದಂತೆ ದೇಶಿಯ ಕರೆನ್ಸಿ ಮೌಲ್ಯ ಬಲಗೊಳ್ಳುತ್ತಾ ಹೋಗುತ್ತದೆ.
ದೇಶಿಯವಾಗಿ ದುರ್ಬಲ ಸ್ಥೂಲ ದತ್ತಾಂಶವು ಒತ್ತಡವನ್ನು ಹೆಚ್ಚಿಸಿದೆ. ಉತ್ಪಾದನೆ ಖರೀದಿ ವ್ಯವಸ್ಥಾಪಕ ಸೂಚ್ಯಂಕ (ಪಿಎಂಐ) 59.9 ಕ್ಕೆ ಇಳಿದಿದೆ. ಸಂಯೋಜಿತ ಪಿಎಂಐ 57.4 ರಲ್ಲಿದೆ(9 ತಿಂಗಳ ಕನಿಷ್ಠ).ಖಾಸಗಿ ವಲಯದ ಚಟುವಟಿಕೆ ಆರು ತಿಂಗಳ ಕನಿಷ್ಠ ಮಟ್ಟವನ್ನು ತಲುಪಿದೆ.ಇದು ನಿಧಾನಗತಿಯ ಆರ್ಥಿಕ ಬೆಳವಣಿಗೆಯನ್ನು ಸೂಚಿಸುತ್ತದೆ.
ಕಳೆದ 25 ವರ್ಷಗಳಲ್ಲಿ ಭಾರತದ ರೂಪಾಯಿ ಮೌಲ್ಯವು ಅಮೆರಿಕಾ ಡಾಲರ್ ಎದುರು ಶೇಕಡಾ 98.7 ಕ್ಕಿಂತ ಹೆಚ್ಚು ಅಪಮೌಲ್ಯಗೊಂಡಿದೆ. ಈ ಕುಸಿತವು ಕೇವಲ ಜಾಗತಿಕ ಅಂಶಗಳಿಂದ ಉಂಟಾಗಿಲ್ಲ; ಬದಲಿಗೆ, ದೀರ್ಘಕಾಲದ ವ್ಯಾಪಾರ ಕೊರತೆ, ದೇಶೀಯ ಹಣದುಬ್ಬರ ವ್ಯತ್ಯಾಸ ಮತ್ತು ಆಮದುಗಳ ಮೇಲಿನ ರಚನಾತ್ಮಕ ಅವಲಂಬನೆ ಪ್ರಮುಖ ಚಾಲನಾ ಶಕ್ತಿಗಳಾಗಿವೆ.
ಸ್ಥಿರ ಕರೆನ್ಸಿಗೆ ಬೆಂಬಲ ಸಾಲದು:
ಭಾರತವು ವಿಶ್ವದ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದ್ದರೂ, ಸ್ಥಿರ ಕರೆನ್ಸಿಯನ್ನು ಬೆಂಬಲಿಸಲು ಈ ಬೆಳವಣಿಗೆ ಸಾಕಾಗುತ್ತಿಲ್ಲ.
ರೂಪಾಯಿ ಮೌಲ್ಯದ ಕುಸಿತವು ಆಮದು ಹಣದುಬ್ಬರವನ್ನು ಹೆಚ್ಚಿಸುತ್ತದೆ. ಸಾಮಾನ್ಯ ಜನರ ಕೊಳ್ಳುವ ಶಕ್ತಿಯನ್ನು ಕಡಿಮೆ ಮಾಡುತ್ತದೆ ಮತ್ತು ವಿದೇಶಿ ಸಾಲದ ಹೊರೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ, ರೂಪಾಯಿಯ ದುರ್ಬಲತೆಯನ್ನು ಜಾಗತಿಕ ಆರ್ಥಿಕತೆಯ ಅನಿವಾರ್ಯ ಹೊಂದಾಣಿಕೆ ಎಂದು ಮಾತ್ರ ಸ್ವೀಕರಿಸಬಾರದು. ಬದಲಿಗೆ, ನೀತಿ ನಿರೂಪಕರು ಇಂಧನ ಸ್ವಾವಲಂಬನೆ, ಉತ್ಪಾದನಾ ವಲಯವನ್ನು ಬಲಪಡಿಸುವಂತಹ ರಚನಾತ್ಮಕ ಸುಧಾರಣೆಗಳನ್ನು ತಕ್ಷಣವೇ ಕೈಗೊಳ್ಳಬೇಕು.
ಈ ದೀರ್ಘಕಾಲೀನ ಆರ್ಥಿಕ ಕಾರ್ಯತಂತ್ರಗಳಿಂದ ಮಾತ್ರ ಭಾರತದ ಆರ್ಥಿಕ ಬೆಳವಣಿಗೆಯನ್ನು ರೂಪಾಯಿ ಮೌಲ್ಯದ ಜೊತೆಗೆ ಸ್ಥಿರತೆಯೊಂದಿಗೆ ಸಮನ್ವಯಗೊಳಿಸಲು ಮತ್ತು ಸಾಮಾನ್ಯ ನಾಗರಿಕರ ಮೇಲೆ ಆಗುವ ಹಣದುಬ್ಬರದ ಹೊರೆಗಳನ್ನು ಕಡಿಮೆ ಮಾಡಲು ಸಾಧ್ಯ.
ರೂಪಾಯಿ ಅಪಮೌಲ್ಯ ತಡೆ ಹೇಗೆ ?
ರೂಪಾಯಿಯ ಅಪಮೌಲ್ಯವನ್ನು ನಿಯಂತ್ರಿಸಿ ದೀರ್ಘಕಾಲೀನ ಸ್ಥಿರತೆಗೆ ಕೇವಲ ರಿಸರ್ವ್ ಬ್ಯಾಂಕಿನ ಮಧ್ಯಸ್ಥಿಕೆಯಷ್ಟೇ ಸಾಲದು.ಅದಕ್ಕಾಗಿ ಆರ್ಥಿಕ ನೀತಿಯು ಈ ಕೆಳಕಂಡ ರಚನಾತ್ಮಕ ಸವಾಲುಗಳನ್ನು ಎದುರಿಸಬೇಕು:
1.ಇಂಧನ ಮತ್ತು ವ್ಯಾಪಾರ ಸ್ವಾವಲಂಬನೆ:
ದೀರ್ಘಕಾಲೀನ ವ್ಯಾಪಾರ ಕೊರತೆ ಮತ್ತು ರೂಪಾಯಿ ಮೇಲಿನ ಒತ್ತಡವನ್ನು ನಿವಾರಿಸಲು, ಕಚ್ಚಾ ತೈಲ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪನ್ನಗಳಂತಹ ಪ್ರಮುಖ ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಅಗತ್ಯ. ದೇಶೀಯವಾಗಿ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವುದು ಮತ್ತು ಪರ್ಯಾಯ ಇಂಧನ ಮೂಲಗಳಿಗೆ ಹೂಡಿಕೆ ಮಾಡುವುದರಿಂದ ಡಾಲರ್‌ಗೆ ಇರುವ ನಿರಂತರ ಬೇಡಿಕೆಯನ್ನು ಕಡಿಮೆ ಮಾಡಬಹುದು. ಇದು ರೂಪಾಯಿಯ ಸ್ಥಿರತೆಗೆ ಅಡಿಪಾಯ ಹಾಕುತ್ತದೆ.
2.ರಫ್ತು ಪ್ರೋತ್ಸಾಹ ಮತ್ತು ವೈವಿಧ್ಯೀಕರಣ:
ರಫ್ತನ್ನು ಹೆಚ್ಚಿಸಲು ದೀರ್ಘಕಾಲೀನ ಮತ್ತು ಪರಿಣಾಮಕಾರಿ ಕಾರ್ಯತಂತ್ರಗಳು ಬೇಕಾಗುತ್ತವೆ. ರಫ್ತು ಪ್ರಕ್ರಿಯೆಯ ವೆಚ್ಚಗಳನ್ನು ಕಡಿಮೆ ಮಾಡುವುದು ಮತ್ತು ರಫ್ತು ಉತ್ಪನ್ನಗಳನ್ನು ವೈವಿಧ್ಯಗೊಳಿಸುವುದು ಮುಖ್ಯವಾಗಿದೆ. ಕೇವಲ ಸಾಂಪ್ರದಾಯಿಕ ರಫ್ತುಗಳ ಬದಲು, ಕೃತಕ ಬುದ್ಧಿಮತ್ತೆ ಉತ್ಪನ್ನಗಳು ಮತ್ತು ಇ-ಉತ್ಪನ್ನಗಳಂತಹ ತಂತ್ರಜ್ಞಾನ ಆಧಾರಿತ ಉತ್ಪನ್ನಗಳ ರಫ್ತಿನತ್ತ ಗಮನ ಹರಿಸಬೇಕು.
3.ಬಂಡವಾಳ ಹರಿವಿನ ನಿರ್ವಹಣಾ ವಿಧಾನಗಳ ಮರುಪರಿಶೀಲನೆ:
ಜಾಗತಿಕ ಅನಿಶ್ಚಿತತೆಯ ಹಿನ್ನೆಲೆಯಲ್ಲಿ ಬಂಡವಾಳ ಹೊರಹರಿವಿನ ಅಪಾಯಗಳನ್ನು ನಿರ್ವಹಿಸಲು, ಆರ್‌ಬಿಐ ಬಂಡವಾಳದ ಅತಿಯಾದ ಹೊರಹರಿವು ಅಥವಾ ಅನಿಯಂತ್ರಿತ ಒಳಹರಿವನ್ನು ನಿಯಂತ್ರಿಸಲು ಬಂಡವಾಳ ನಿಯಂತ್ರಣ ಮತ್ತು ನಿಯಂತ್ರಕ ಕ್ರಮಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕಾಗುತ್ತದೆ.
bevarahani1