ಹಿಜಾಬ್ ಇಂದು ಇದ್ದಕ್ಕಿದ್ದಂತೆ  ವಿವಾದಕ್ಕೊಳಗಾದುದು ಹೇಗೆ? ಒಡನಾಡಿ ಸ್ಟಾನ್ಲಿ

ಹಿಜಾಬ್ ಇಂದು ಇದ್ದಕ್ಕಿದ್ದಂತೆ  ವಿವಾದಕ್ಕೊಳಗಾದುದು ಹೇಗೆ? ಒಡನಾಡಿ ಸ್ಟಾನ್ಲಿ

ಹಿಜಾಬ್ ಇಂದು ಇದ್ದಕ್ಕಿದ್ದಂತೆ  ವಿವಾದಕ್ಕೊಳಗಾದುದು ಹೇಗೆ? ಒಡನಾಡಿ ಸ್ಟಾನ್ಲಿ
 
ಹಿಜಾಬ್ ಇಂದು ಇದ್ದಕ್ಕಿದ್ದಂತೆ  ವಿವಾದಕ್ಕೊಳಗಾದುದು ಹೇಗೆ?
ಒಡನಾಡಿ ಸ್ಟಾನ್ಲಿ

ಹಿಜಾಬ್ ಎಂಬ ಪದ ತಿಳಿಯದವರು ಇಂದು ಯಾರೂ ಇಲ್ಲ ಅನಿಸುತ್ತೆ. ನನ್ನ ಹನ್ನೆರಡು ವರ್ಷ ವಯಸ್ಸಿನ ಕಿರಿಮಗಳೇ ಕೇಳಿದಳು. ಅಲ್ಲಪ್ಪಾ.. ಈ ಹಿಜಾಬು ಏಕೆ ಇವತ್ತು ಇಶ್ಯೂ ಆಗ್ತಿದೆ? ಅವರು ಅದನ್ನ ನಾನು ಹುಟ್ಟೋ ಮುಂಚೆಂದೇನೇ ವೇರ್ ಮಾಡ್ತಾ ಇದ್ದಾರಲ್ವಾ? ಅಂತ. ನಾನು ಹೇಳಿದೆ. "ಹಿಮಾನ್ಯಾ,  ಅವರು ನಮ್ಮಪ್ಪನ ಅಪ್ಪ ಹುಟ್ಟುವ ಮುಂಚೆಯಿಂದನೇ ಅದನ್ನು ತೊಡುತ್ತಾ ಬಂದಿದ್ದಾರೆ ಕಣೋ. ಇನ್ ಫ್ಯಾಕ್ಟ್, ನಮ್ಮ constitution ಇರಲಿ, ಬ್ರಿಟಿಷರು ಬರುವ ಮುಂಚೆಯೇ  ಅದು ನಮ್ಮ ಮುಸ್ಲಿಂ ಹೆಣ್ಣು ಮಕ್ಕಳ ದೈನಂದಿನ ಸಾಂಸ್ಕೃತಿಕ ಬದುಕಿನ ಭಾಗವಾಗಿತ್ತು. ಇವತ್ತು ನಡೆಯುತ್ತಿರುವುದು ಏನಿದ್ದರೂ  ಒಂದು ಧರ್ಮ - ರಾಜಕೀಯ ಪ್ರಹಸನ ಅಷ್ಟೇ!"


"ನಮ್ ಕ್ಲಾಸಲ್ಲಿ ಮಾತ್ರ ಮುಸ್ಲಿಂ ಫ್ರೆಂಡ್ಸು ಯಾರೂ ಹಿಜಾಬ್ ಹಾಕಲ್ಲಪ್ಪಾ. ಆದ್ರೆ ಸ್ಕೂಲ್ ನಲ್ಲಿ  ಒಬ್ಬ ಸಿಖ್ ಹುಡುಗ ತಲೆಯ ಮೇಲೆ ಏನೋ ಕಟ್ಟಿರ್ತಾನೆ" ಹಿಮಾನ್ಯ ಮತ್ತೆ ಹೇಳಿದಳು. " ತುಂಬಾ ಸಂತೋಷದ ವಿಚಾರ. ಈಗೀಗ ಬಹಳಷ್ಟು  ಅಪ್ಪ - ಅಮ್ಮಂದಿರು ಎಲ್ಲಾ ಧರ್ಮಗಳಲ್ಲೂ ಲಿಬರಲ್ ಆಗ್ತಿದ್ದಾರೆ. ಹಾಗಾಗಿ ಮಕ್ಕಳೂ ಕೆಲವು ಕಟ್ಟುಪಾಡುಗಳಿಂದ ಹೊರಬಂದಿದ್ದಾರೆ ಅಂದ್ಕೊ. ಆದ್ರೆ ಧರ್ಮದ ಚೌಕಟ್ಟಿನಿಂದ ಹೊರಬರುವುದು ಎಲ್ಲರಿಗೂ ಸುಲಭ ಸಾಧ್ಯವಾದುದಲ್ಲ. ಶಿಕ್ಷಣ ಪಡೆಯುತ್ತಲೇ ಎಲ್ಲಾ ಸಂಕೊಲೆಗಳು ಕ್ರಮೇಣ ಕಳಚಿಕೊಳ್ಳುತ್ತವೆ. ಅಲ್ಲಿಯವರೆಗೂ ಸಹಿಷ್ಣುತೆ, ಧರ್ಮ ಸೂಕ್ಷ್ಮತೆ ಇರಲೇ ಬೇಕಲ್ವಾ? ಮೌಢ್ಯವಲ್ಲದ ಧಾರ್ಮಿಕ ಆಚರಣೆಗಳ ಬಗ್ಗೆ ಎಲ್ಲರಿಗೂ ಪರಸ್ಪರ ಗೌರವ ಇರಲೇಬೇಕಾಗುತ್ತೆ. ನಮ್ಮ ಸಂವಿಧಾನ ಅಂದ್ರೆ constitution ಇದೆಯಲ್ಲಾ.. ಅದು ಧಾರ್ಮಿಕ ಹಕ್ಕನ್ನು ಮೂಲಭೂತವಾಗಿ ನೀಡಿದೆ. ಅದಕ್ಕೆ ಅಪಚಾರವಾಗಬಾರದು.


ನಮ್ಮ ಹುಟ್ಟು ಹಾಗಿರಲಿ. ಮದ್ಯಪ್ರಾಚ್ಯದಲ್ಲಿ ಇಸ್ಲಾಂ ಧರ್ಮ ಉದಯಿಸುವ ಮುಂಚೆಯಿಂದಲೇ ಯಹೂದ್ಯ ಮಹಿಳೆಯರು ಸಾಮಾಜಿಕ ಹಾಗೂ ಸಾಂಸ್ಕೃತಿಕ ಭಾಗವಾಗಿ ಹೇಗೆ ಹಿಜಾಬನ್ನು ಹಾಸುಹೊಕ್ಕಾಗಿಸಿಕೊಂಡಿದ್ದರೆಂದರೆ ಹಿಜಾಬ್ ಇಲ್ಲದೆ ಅವರಿಲ್ಲ ಎಂಬುವಷ್ಟರ ಮಟ್ಟಿಗೆ. ಪ್ರಜಾತಂತ್ರವಿಲ್ಲದ ದೇಶಗಳೂ ಸೇರಿದಂತೆ ಪ್ರಪಂಚದಲ್ಲೆಲ್ಲೂ   ಮಹಿಳೆಯ ಈ ಧಾರ್ಮಿಕ ಉಡುಪಿಗೆ ಕೈ ಹಾಕಿರಲಿಲ್ಲ.  ಇಂತಹ ಹಿಜಾಬ್ ಇಂದು ಇದ್ದಕ್ಕಿದ್ದಂತೆ  ವಿವಾದಕ್ಕೊಳಗಾದುದು ಹೇಗೆ?


ದಶಕದ ಹಿಂದೆ, ಅಂತಾರಾಷ್ಟ್ರೀಯ ಫುಟ್ಬಾಲ್ ರಂಗದಲ್ಲೂ ಹಿಜಾಬ್ ಸದ್ದು ಮಾಡಿತ್ತು. ಹಿಜಾಬ್ ತೊಟ್ಟು ಫುಟ್ಬಾಲ್ ಪಂದ್ಯಾವಳಿಯಲ್ಲಿ  ಭಾಗವಹಿಸುವಂತಿಲ್ಲ ಎಂಬುದು ಅನೇಕರ ದೂರು. ಆದರೆ ಫಿಫಾ ಆ ನಿಷೇಧವನ್ನು ತೆಗೆದುಹಾಕಿ, " ಹಿಜಾಬ್ ತೊಡುವುದು ಒಂದು ಸಮುದಾಯದ ಹೆಣ್ಣು ಮಕ್ಕಳ ಸಾಂಸ್ಕೃತಿಕ ಆಚರಣೆ. ಅದಕ್ಕೂ ಆಟಕ್ಕೂ ಸಂಬಂಧವಿಲ್ಲ. ಆ ಕಾರಣಕ್ಕಾಗಿ ಹೆಣ್ಣು ಮಕ್ಕಳು ಆಟದಲ್ಲಿ ಪಾಲ್ಗೊಳ್ಳದಂತೆ ಆಗಬಾರದು" ಎಂದಿತ್ತು. ಅದೊಂದು ವಿವೇಕಯುತ ನ್ಯಾಯ ತೀರ್ಮಾನವಾಗಿತ್ತು.


ಅದೇ ರೀತಿ ಕಳೆದ ಎರಡು ವರ್ಷಗಳ ಹಿಂದೆ, ಪ್ರಪಂಚದ ಅತ್ಯಂತ ಹಿರಿಯ ಪ್ರಜಾತಂತ್ರ ಹೊಂದಿರುವ ಇಂಗ್ಲೆಂಡ್ ನಲ್ಲಿ ಸೈಂಟ್ ಮೇರೀಸ್ ಚೇಂಬರ್ಸ್ ನ ಸದಸ್ಯೆ ರಾಫಿಯಾ ಅರ್ಷದ್ ರವರನ್ನು ಮಿಡಲ್ಯಾಂಡ್ ಸರ್ಕ್ಯೂಟ್ಸ್ ನ ನ್ಯಾಯಾಧೀಶೆ ಯನ್ನಾಗಿ  ನೇಮಿಸಲಾಯಿತು.  "ಇದೊಂದು ಮಾನವೀಯ ಸರ್ಕಾರದ ಮಹೋನ್ನತ ನಡೆ. ನನ್ನ ವೈಯಕ್ತಿಕ ಸಾಧನೆಯನ್ನು ಮೀರಿ, ವೈವಿದ್ಯತೆ ಹೊಂದಿದ ಸಮುದಾಯಗಳು ವ್ಯವಸ್ಥೆಯ ಭಾಗವೆನಿಸುವುದರಲ್ಲಿ ಸರ್ಕಾರ ತೋರುವ ನೈತಿಕ ಹೊಣೆಗಾರಿಕೆ ಹಾಗೂ ನೀಡಿದ ಬೆಂಬಲ ಇದಾಗಿದೆ" ಎಂಬುದು ನಲವತ್ತೆರಡರ ಹರೆಯದ ರಾಫಿಯಾರವರ ಮನದಾಳದ ಮಾತು.

ಶಿಕ್ಷಣ  ಸಾಗುತ್ತಿರುವ ದಿಕ್ಕಿನತ್ತ ದಿಟ್ಟಿಸಿದರೆ ದಿಗಿಲಾಗುತ್ತಿದೆ.  ರಾಜಪಥದಿಂದ ಜಾರಿ ಮೊರಿ ದಾರಿ ಹಿಡಿದು, ಗಬ್ಬು ನಾರುತ್ತಿರುವ ಈಗಿನ ಶಿಕ್ಷಣ ವ್ಯವಸ್ಥೆಯಿಂದ ನಮ್ಮ ಮಕ್ಕಳಿಗೆ ಸಿಗುವುದಾದರೂ ಏನು ಎಂಬುದೇ ನಮ್ಮ ಪ್ರತಿಕ್ಷಣದ ಚಿಂತೆಯಾಗಿದೆ. ನಮಗೆ ಶಾಲೆಗಳು ಧಾರ್ಮಿಕ ಕೇಂದ್ರಗಳಿಗಿಂತಲೂ ಮುಖ್ಯವಾಗಬೇಕಿದ್ದವು. ಸಂವಿಧಾನವನ್ನು ಧರ್ಮಗ್ರಂಥಕ್ಕಿಂತಲೂ ಹೆಚ್ಚಾಗಿ ಆರಾಧಿಸಬೇಕಿತ್ತು. ಮೈಮೇಲಿನ ಸಮವಸ್ತ್ರಕ್ಕಿಂತ ಮನದೊಳಗಿನ ಜ್ಞಾನ, ವಿವೇಕ, ವಿವೇಚನೆ ಮುಖ್ಯವಾಗಬೇಕಿತ್ತು. ಆದರೆ ಹಾಗಾಗುತ್ತಿಲ್ಲ. ಹೆಚ್ಚಾಗಿ ಆರಾಧಿಸಬೇಕಿತ್ತು. ಮೈಮೇಲಿನ ಸಮವಸ್ತ್ರಕ್ಕಿಂತ ಮನದೊಳಗಿನ ಜ್ಞಾನ, ವಿವೇಕ, ವಿವೇಚನೆ ಮುಖ್ಯವಾಗಬೇಕಿತ್ತು. ಆದರೆ ಹಾಗಾಗುತ್ತಿಲ್ಲ. ಪ್ರಜಾತಂತ್ರದ ಮೂಲ ಸೂತ್ರಕ್ಕೇ  ಮರ್ಮಾಘಾತ ನೀಡುವಂತೆ ಪಾಠಶಾಲೆಯನ್ನು ಕೆಡವಿ ಅದರ ಅವಶೇಷಗಳ ಮೇಲೆ ಇತಿಹಾಸದ ಸ್ಮಾರಕವನ್ನು ಕಟ್ಟುವ ಪಟ್ಟು ಹಿಡಿಯಲಾಗಿದೆ.  ಶಾಲೆಯೊಳಗಿನ ಎಳೆಯ ಮನಸ್ಸುಗಳ ನಡುವೆ ಕಂದಕವನ್ನು ಕೊರೆದು ಅದರ ತುಂಬಾ ದ್ವೇಷದ ಲಾವಾರಸವನ್ನು ತುಂಬಲಾಗುತ್ತಿದೆ. ತುಂಡು ಬಟ್ಟೆಯ ಕಾರಣಕ್ಕಾಗಿ, ತಮ್ಮ ತಮ್ಮ ಧರ್ಮಗಳನ್ನು ಮೆರೆಸಲು  ಪ್ರತಿಯೊಬ್ಬ ವಿದ್ಯಾರ್ಥಿ ಹಠಕ್ಕೆ ಬಿದ್ದಿದ್ದಾರೆ. ಹೀಗಿರುವಾಗ, ಈ ಪಾಳು ಬಿದ್ದ ಕಟ್ಟಡಗಳಲ್ಲಿ ಕಲಿಯುವ ವಿಚಾರಗಳಾದರೂ ಏನಿವೆ ಹೇಳಿ?


ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ನಿಜಕ್ಕೂ ಅಷ್ಟು ಮುಖ್ಯವೇ? ಹಾಜರಾತಿಗಿಂತಲೂ? ಕಲಿಕೆಗಿಂತಲೂ? ಜ್ಞಾನ ನೀಡದಿದ್ದರೂ ಸಮವಸ್ತ್ರ ಮುಖ್ಯವೆನ್ನುವ ಜ್ಞಾನಿಗಳನ್ನು ಎನೆಂದು ಕರೆಯೋಣ? ಹಾಗಾದರೆ ಧಾರ್ಮಿಕತೆಯನ್ನೇ ನೆಚ್ಚಿಕೊಂಡಿರುವ ಸನ್ಯಾಸಿಗಳು, ಕ್ರೈಸ್ತ ಸನ್ಯಾಸಿನಿಯರು, ಬ್ರಹ್ಮ ಕುಮಾರಿಯರು,  ಪಾದ್ರಿಗಳು, ಮೌಲ್ವಿಗಳು, ಜಗದ್ಗುರುಗಳು, ಸಿಖ್ಖರು, ವಿಶ್ವವಿದ್ಯಾನಿಲಯಗಳಿಂದ ಶಿಕ್ಷಣ ಪಡೆಯುವುದು ಇನ್ನು ಸಾಧ್ಯವಿಲ್ಲವೇ? ಅಥವಾ ಈ ವಸ್ತ್ರಸಂಹಿತೆ ಮುಸ್ಲಿಂ ಹೆಣ್ಣು ಮಕ್ಕಳಿಗೆ ಮಾತ್ರ ಅನ್ವಯವೇ?


ಸ್ವತಃ ಧಾರ್ಮಿಕ ಸಂಕೋಲೆಗಳಿಂದ ಬಿಡಿಸಿಕೊಂಡು ಮನುಷ್ಯತ್ವದೊಡನೆಯಷ್ಟೇ ಬದುಕುತ್ತಿರುವ ನಮ್ಮಂಥವರು ಯಾವ ಧರ್ಮವನ್ನೂ ಇಲ್ಲಿ ವಹಿಸಿಕೊಳ್ಳುತ್ತಿಲ್ಲ. ಆದರೆ ಧಾರ್ಮಿಕ ಸಮನ್ವಯತೆ, ಸಹಿಷ್ಣುತೆಯನ್ನು ಪ್ರತಿಪಾದಿಸಬೇಕಿದೆ.


ನೋಡಿ, ನಮ್ಮ ದೇಶದ ಬುನಾದಿಯ ವಿನ್ಯಾಸವೇ ಬೇರೆ. ಇದರ ಮೇಲೆ  ವೈವಿದ್ಯತೆಯನ್ನಷ್ಟೇ ಕಟ್ಟಬಹುದು ಹೊರತಾಗಿ ಏಕತಾನತೆ ಬೆಳಗಲಾರದು. ಏನೇನೋ ಕಟ್ಟುವ  ದುಸ್ಸಾಹಸ ಹೆಚ್ಚು ದಿನ ನಡೆಯಲಾರದು. ಇದ್ದಕ್ಕಿದ್ದಂತೆ ಮುಸ್ಲಿಂ ಸಹೋದರಿಯರ ಹಿಜಾಬಿನೆಡೆ ವಕ್ರ ದೃಷ್ಟಿ ಬಿದ್ದಿದೆ.  ಹೇಗೋ ಒಂದಿಷ್ಟು ಮಹಿಳೆಯರು ಮೂರ್ನಾಲ್ಕು ದಶಕಗಳಿಂದ ಹಿಜಾಬ್ ಹಾಕಿಕೊಂಡು, ಹೊರಬಂದು ವ್ಯಾಸಾಂಗ ಮಾಡುತ್ತಿರುವುದು ಸಂತೋಷ ಪಡಬೇಕಾದ ಸಂಗತಿ. ಭಾರತೀಯ ಸಂವಿಧಾನದ ಅಷ್ಟೂ ಆಶಯಗಳು ಈ ಬುರ್ಖಾದ ಹಿಂದಿನ ಕಣ್ಣುಗಳಲಿವೆ. ಬುರ್ಖಾ ವ್ಯವಸ್ಥೆಯಿಂದ ಮುಕ್ತರಾಗಲು ಮಹಿಳೆಯರಿಗೆ ಇಷ್ಟವಿಲ್ಲವೆಂದೇ?  ಅನೇಕರು ಹಿಜಾಬ್ ನಿಂದಲೂ ಈಗಾಗಲೇ ಹೊರಬಂದಿದ್ದಾರೆ. ಆದರೆ ಅದನ್ನು ' ನಾವು' ತೀರ್ಮಾನಿಸಬೇಕಾದದ್ದಲ್ಲ. ಬದಲಾವಣೆ ಶಿಕ್ಷಣದೊಡನೆ ಸಮುದಾಯದೊಳಗಿನಿಂದ ಬರಬೇಕಾದದ್ದು. ನಮ್ಮ ಸ್ಪಂದನೆಯನ್ನಷ್ಟೇ ಅವರು ಕೇಳಿಕೊಳ್ಳುವುದು. ಪ್ರತಿಕ್ರಿಯೆಯನ್ನಲ್ಲ. ಬಟ್ಟೆಯಲ್ಲೇನಿದೆ ಮಣ್ಣು? ಒಳಗಣ್ಣಿನಿಂದ ನೋಡುವುದನ್ನು ಅಭ್ಯಸಿಸಿದ ದೇಶ ನಮ್ಮದು. ಉಡುಗೆಯಿಲ್ಲದೆ ಬದುಕಿ ತೋರಿದ 'ಅಕ್ಕ'ಳನ್ನು ಗೌರವದಿಂದ ಕಂಡು, ಆಕೆಯ ಪಾದ ಪೂಜೆಗೈದ ನಾಡು ನಮ್ಮದು. ಸರ್ವಜ್ಞ, ಗಾಂಧಿಯಂಥಹ ತುಂಡುಬಟ್ಟೆ ಫಕೀರರು ಮಹಾತ್ಮರಾದ ನೆಲ ನಮ್ಮದು. ಬ್ರಿಟಿಷರ ದುರಾಡಳಿತವಿದ್ದ ದಿನಗಳಲ್ಲಿ ಮಹಾತ್ಮ ತುಂಡುಬಟ್ಟೆ ಧರಿಸಿ, ಬ್ರಿಟಿಷ್ ಪಾರ್ಲಿಮೆಂಟ್ ನ ವಸ್ತ್ರಸಂಹಿತೆಯನ್ನು ಮೀರಿ, ದುಂಡುಮೇಜಿನ ಪರಿಷತ್ತಿನ ಒಳಹೊಕ್ಕಾಗ ಸೂಟು-ಬೂಟು ಹೊಂದಿದ್ದ ಸರ್ವ ಸದಸ್ಯರು ತಾವಾಗಿಯೇ  ಎದ್ದುನಿಂತು ಭಕ್ತಿ,ಗೌರವ ಸೂಚಿಸಿ ಬರಮಾಡಿಕೊಂಡಿದ್ದರು. ನಮ್ಮ ಮಕ್ಕಳನ್ನು ನಡೆಸಿಕೊಳ್ಳುವ ವಿಷಯದಲ್ಲಿ ಬ್ರಿಟೀಷರಿಗಿಂತಲೂ ದುರುಳರಾದೆವೇ ನಾವು? ಅತ್ಯಂತ ಕಟ್ಟುನಿಟ್ಟಿನ ಶಿಸ್ತು ಹೊಂದಿರುವ ಭಾರತೀಯ ಸೈನ್ಯದಲ್ಲೂ ಸಹ ಸಿಖ್ ಸಮುದಾಯ ತನ್ನ ಸಾಂಸ್ಕೃತಿಕ ಹಾಗೂ ಧಾರ್ಮಿಕ ಅಸ್ಮಿತೆ ಯೊಡನೆ  ಮಾನ್ಯತೆಗಳಿಸಿದೆ. ಈಗಿರುವ ದೇಶದಲ್ಲಿ ಹಿಜಾಬ್ ಧರಿಸಿ  ಕಾಲೇಜಿಗೆ ಬಂದ ಅಪ್ರಾಪ್ತ ಬಾಲಕಿಯರನ್ನು ಆರೋಪಿಗಳಂತೆ ಕಂಡು ಒಳಸೇರಿಸದ ಶಿಕ್ಷಕರ ನಡವಳಿಕೆ ಉಚಿತವೇ? ಧರ್ಮಾಂಧತೆಗೆ ಬಲಿಬಿದ್ದು ತನ್ನ ಮಕ್ಕಳನ್ನೇ ಶಾಲೆಗೆ ಸೇರಿಸದಂತಾದನೇ ಪೋಷಕನೂ ಆದ ಶಿಕ್ಷಕ? ಇನ್ನೊಂದೆಡೆ ನೋಡಿ. ಸಂವಿಧಾನಾತ್ಮಕವಾಗಿ ನಡೆದುಕೊಳ್ಳಬೇಕಾದ ಮಾದ್ಯಮದ ಜನ ಅವಮಾನದಿಂದ ಕುಂದಿಹೋದ ಈ ಮಕ್ಕಳನ್ನು ಅಟ್ಟಾಡಿಸುತ್ತಾ ಛಾಯಾಚಿತ್ರ ತೆಗೆಯುತ್ತಿದ್ದಾರೆ.   ಏನಾಗಿದೆ ಈ ಜನಕ್ಕೆ?


ಧಾರ್ಮಿಕ ಚೌಕಟ್ಟಿನಿಂದ ಹೊರ ಬಂದು ಒಂದಿಷ್ಟು ದೂರ ಹೆಜ್ಜೆ ಹಾಕಿದವರಿಗೆ ತಾವಿದ್ದ ಹಾಗೂ ಇತರೇ ಸೀಮಿತ ಧರ್ಮಗಳ ಎಲ್ಲಾ ಆಯಾಮಗಳ ಸಂಪೂರ್ಣ ಚಿತ್ರಣ ಮುನ್ನೂರರವತ್ತು ಡಿಗ್ರಿಯಷ್ಟು ವಿಶಾಲವಾಗಿ ಪ್ರಬುದ್ಧತೆಯೊಡನೆ ಸೆರೆ ಹಿಡಿಯುವ  ದೃಷ್ಟಿಕೋನ ಹೊಂದಿಯಾರು. ಮಹಾ ಬಂಗಲೆ ಎಂದುಕೊಂಡಿರುವ ನಾವು ವಾಸಿಸುವ ಮನೆ ಎಷ್ಟು ಸಣ್ಣದು ಎಂದು ತಿಳಿಯುವುದು ನಾವು ಅಲ್ಲಮನ ಬಯಲಲ್ಲಿ ನಿಂತಾಗ ಮಾತ್ರ. ಹಾಗೆ ಈ ಬಯಲೆಷ್ಟು ಸೀಮಿತ ಎಂದರಿಯಬೇಕಾದರೆ ಹಕ್ಕಿಯಂತೆ ಮುಗಿಲೆತ್ತರಕ್ಕೆ ಹಾರಿ, ಭುವಿಯ ಪರಿಧಿ ದಾಟಿ, ನಿರ್ವಾತವನ್ನು ಸೇರಿ, ಸಹಸ್ರಾರು ಮೈಲಿ ಪಯಣಿಸಿ ಕಂಡರಿಯದಿದ್ದ ಗ್ರಹದ ಮೇಲೆ ಕಾಲೂರಬೇಕು. ಹಾಗೆ ಆದಾಗಲೇ ನಾವೆಷ್ಟು ಸಣ್ಣವರು ಎಂಬುದು ನಮಗೆ ತಿಳಿದೀತು. ಮನುಷ್ಯ ಈ ಪ್ರಕ್ರಿಯೆ ಗೊಳಗಾದಾಗಲಷ್ಟೇ ಹೆಸರಿಲ್ಲದ ಮಾನವೀಯ ಧರ್ಮದ ಭಾಗವಾಗಿ ಎಲ್ಲವನ್ನೂ, ಎಲ್ಲರನ್ನೂ ಪ್ರೀತಿಸುವ, ಗೌರವಿಸುವ, ಒಳಗೊಳ್ಳುವ ಜೀವನವನ್ನು ರೂಢಿಸಿಕೊಳ್ಳುತ್ತಾನೆ. 


"ಗುಡಿ ಚರ್ಚು ಮಸಜೀದುಗಳ ಬಿಟ್ಟು ಹೊರಬನ್ನಿ" ಎಂಬ ಕುವೆಂಪುರವರ ಕರೆಗೆ ಓಗೊಟ್ಟ ಜನರ ಸಂಖ್ಯೆ ಎಷ್ಟಿರಬಹುದು ನಮ್ಮ ರಾಜ್ಯದಲ್ಲಿ? ಅತ್ಯಲ್ಪ. ಪೆರಿಯಾರರ ತಮಿಳುನಾಡಿನಲ್ಲೂ. ಹಾಗಂತ ಇವರಷ್ಟೇ ಉತ್ತಮರು, ಜಾತ್ಯಾತೀತರು, ಧರ್ಮ ಸಹಿಷ್ಣುಗಳು ಎಂದಲ್ಲ. ಇವರುಗಳಲ್ಲಿ ಧರ್ಮಗಳಿಂದ ಹೊರಬಂದು, ಜಾತಿ - ಪಂಗಡಗಳಿಗೆ ಸೀಮಿತರಾದವರಿದ್ದಾರೆ. ಆದರೆ, ಧರ್ಮದ ಚೌಕಟ್ಟನ್ನು ದಾಟಲಾಗದೆ, ತಮ್ಮ ದರ್ದು ನಿಮಿತ್ತ, ಭಕ್ತಿಗಾಗಿ ಅಲ್ಲದಿದ್ದರೂ ಸಮುದಾಯ ಹಾಗೂ ಭವಿಷ್ಯದ ಭಯದಿಂದ ಅಲ್ಲೇ ಉಳಿದವರು ಕೆಟ್ಟವರೆಂದಲ್ಲ. ಮೂಲತಃ ಧರ್ಮದ ಪರಿಕಲ್ಪನೆಗೆ ನಾವು ಒಡ್ಡಿಕೊಂಡಿದ್ದೇ ನಮ್ಮ ವೈಯಕ್ತಿಕ ಹಾಗೂ ಕುಟುಂಬದ ರಕ್ಷಣೆಗಾಗಿ ಅಲ್ಲವೇ?   ಪುರುಷ ಸಮುದಾಯದ ದಾಳಿಯಿಂದ ರಕ್ಷಣೆ ಹೊಂದಲು ರಕ್ಷಣೆಗಾಗಿ ಪುರುಷ ಪ್ರಧಾನ ವ್ಯವಸ್ಥೆಯು ನೀಡಿದ ಪರದೆಯ ಹಿಂದೆ ಸರಿದು ನೂರಾರು ವರ್ಷಗಳಿಂದ ಈ ಭಕ್ತಿ ಮಾರ್ಗಕ್ಕೆ ಒಗ್ಗಿಕೊಂಡ ಹೆಣ್ಣುಮಕ್ಕಳ ಸ್ಥಿತಿಯೂ ಹೀಗೆಯೇ.   ಇವರಿಗೆ ಸ್ವಾತಂತ್ರ್ಯದ ಅಭಿಲಾಷೆ ಇಲ್ಲವೆಂದಲ್ಲ. ಅದನ್ನು ಗಳಿಸುವ ನಿಟ್ಟಿನಲ್ಲಿ ಅವರು ಕಾಲೇಜು ಮೆಟ್ಟಿಲಿಗೆ ದಾಪುಗಾಲು ಹಾಕಿರುವುದು ಒಂದು ಸಾಹಸವೇ. ಮನೆಯ ಗರ್ಭಗುಡಿಯಲ್ಲಿ ಬಂಧಿಯಾಗುವುದಕ್ಕಿಂತ ಹಿಜಾಬ್ ನಿಂದ ಸುತ್ತಲ್ಪಟ್ಟು ಮುಖ್ಯವಾಹಿನಿಯಲ್ಲಿ ಬರೆಯುವುದನ್ನು ಅವರು ಸ್ವಾತಂತ್ರ್ಯದ ಮೊದಲ ಹೆಜ್ಜೆ ಎಂದುಕೊಂಡಿದ್ದಾರೆ. ಸದ್ಯಕ್ಕೆ ಅದು ಅವರ ಧಾರ್ಮಿಕ ಅಸ್ಮಿತೆಯೂ ಹೌದು. ಈ ಧರ್ಮ ಸಂಕಟವನ್ನು ಅರಿಯುವ ಸೂಕ್ಷ್ಮತೆ ನಮ್ಮದಾಗಬೇಕಿದೆ.


ಆದರೆ ಸಂಪ್ರದಾಯವಾದಿಗಳ ನೆಲದಲ್ಲಿ ಇಂತಹ ಬೇಡದ ಪ್ರಹಸನಗಳ  ಕೆಟ್ಟ ಪರಿಣಾಮ ಮಾತ್ರ ಹೆಣ್ಣು ಮಕ್ಕಳ ಹಾಗೂ ಕೆಳ ವರ್ಗದ ಮೇಲೆಯೇ. ಇದರಿಂದಾಗಿ ಇವರ ಶಿಕ್ಷಣ ಮೊಟಕುಗೊಳಿಸುತ್ತಿದೆ. ವೈಯಕ್ತಿಕ ಸ್ವಾತಂತ್ರ್ಯದ ಹಾದಿ ಮತ್ತಷ್ಟು ದುರ್ಗಮವಾಗುತ್ತಿದೆ. ಧಾರ್ಮಿಕ ಸಂಪ್ರದಾಯವಾದಿಗಳು ಮೇಲುಗೈ ಹೊಂದುತ್ತಿದ್ದಾರೆ. ಧಾರ್ಮಿಕ ಹಕ್ಕಿನ ಹೋರಾಟದ ಭರದಲ್ಲಿ, ಹಿಜಾಬನ್ನಷ್ಟೇ ತೊಡುತ್ತಿದ್ದ ಯುವತಿಯರು ಬುರ್ಖಾವನ್ನೂ ಧರಿಸಿ   ಭಾವಾವೇಶದೊಡನೆ ಮತ್ತೆ  ಕೋಶಾವಸ್ಥೆಗೆ ತೆರಳುತ್ತಿರುವುದರಿಂದ ಸಮುದಾಯದೊಳಗಿನ ಸಂಪ್ರದಾಯವಾದಿಗಳು ವಿಜಯದ ನಗೆ ಬೀರುತ್ತಿದ್ದರೆ, ವಿಮೋಚನೆಗಾಗಿ ನಡೆದ ಮಹಿಳಾ ಹೋರಾಟ ಹಿಮ್ಮುಖವಾಗಿ ಓಡುತ್ತಿರುವಂತೆ ಭಾಸವಾಗುತ್ತಿದೆ. ನೋವಿನ ಸಂಗತಿ!
---ಒಡನಾಡಿ ಸ್ಟ್ಯಾನ್ಲಿ