ಶ್ರೀನಿವಾಸ್ : ಅಮ್ಮನಘಟ್ಟ ಸಾಂಸ್ಕೃತಿಕ ಪರಂಪರೆ ಎಂಬ ಚೊಚ್ಚಲ ಸಂಭ್ರಮದಲ್ಲಿ ಎಂ.ಎಚ್.ನಾಗರಾಜು

ಶ್ರೀನಿವಾಸ್ : ಅಮ್ಮನಘಟ್ಟ ಸಾಂಸ್ಕೃತಿಕ ಪರಂಪರೆ ಎಂಬ ಚೊಚ್ಚಲ ಸಂಭ್ರಮದಲ್ಲಿ ಎಂ.ಎಚ್.ನಾಗರಾಜು
ಶ್ರೀನಿವಾಸ್ : ಅಮ್ಮನಘಟ್ಟ ಸಾಂಸ್ಕೃತಿಕ ಪರಂಪರೆ ಎಂಬ ಚೊಚ್ಚಲ ಸಂಭ್ರಮದಲ್ಲಿ ಎಂ.ಎಚ್.ನಾಗರಾಜು

ಶ್ರೀನಿವಾಸ್ : ಅಮ್ಮನಘಟ್ಟ ಸಾಂಸ್ಕೃತಿಕ ಪರಂಪರೆ ಎಂಬ ಚೊಚ್ಚಲ ಸಂಭ್ರಮದಲ್ಲಿ
ಎಂ.ಎಚ್.ನಾಗರಾಜು


ಗುಬ್ಬಿಗೆ ಕೂಗಳತೆ ದೂರದಲ್ಲಿರುವ ಅಮ್ಮನಘಟ್ಟ ಗ್ರಾಮ ಕಳೆದ ಮೂವತ್ತು ವರ್ಷಗಳಿಂದ ನನಗೆ ಚಿರಪರಿಚಿತ. ಆ ಗ್ರಾಮದ ಕವಿಮಿತ್ರ, ವಕೀಲ ಬಿ.ವಿ. ರಾಜೀವ್ ಅವರಿಂದ ಇರಬಹುದು, ಸಾವಯುವ ಕೃಷಿಕ-ಸಾಧಕ ಶಂಕರಪ್ಪ ಅವರಿಂದ ಇರಬಹುದು, ಅಥವಾ ಆ ಊರಿನ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿದ್ದ ಕೆ. ಸಂಜೀವಯ್ಯ ಅವರಿಂದ ಇರಬಹುದು. ಒಟ್ಟಾರೆ ಆ ಗ್ರಾಮದ ಬಗ್ಗೆ ಒಂದು ರೀತಿಯ ಮಮಕಾರ ಆಗಿನಿಂದಲೂ ಬೆಳೆದಿತ್ತು.
ಮಲೆನಾಡಿನ ಪರಿಸರದ ಹಳ್ಳಿಯೊಂದರ ಸುಂದರವಾದ ಚಿತ್ರಣದಂತೆ ಕಾಣುವ, ಸದಾ ತೆಂಗು ಕಂಗು ಅಡಿಕೆ ಮತ್ತಿತರ ಬೆಳೆಗಳೊಂದಿಗೆ ಆವೃತ್ತವಾಗಿ ಕಂಗೊಳಿಸುವ ಈ ಗ್ರಾಮ ಇತ್ತೀಚೆಗೆ ಒಂದು ಕಾರಣದಿಂದ ಮುನ್ನೆಲೆಗೆ, ಚರ್ಚೆಗೆ ಬಂದಿದೆ. ಏನೆಂದರೆ ಅದೇ ಊರಿನ ಕಿರಿಯ ಗೆಳೆಯ ಶ್ರೀನಿವಾಸ ಎ.ಜಿ. `ಅಮ್ಮನಘಟ್ಟ ಸಾಂಸ್ಕೃತಿಕ ಪರಂಪರೆ’ ಎಂಬ ಕೃತಿಯನ್ನು ರಚಿಸಿ ಲೋಕಾರ್ಪಣೆ ಮಾಡಿ ಚರ್ಚೆಗೆ, ಮುನ್ನೆಲೆಗೆ ಕಾರಣರಾಗಿದ್ದಾರೆ.
ಇತಿಹಾಸದಲ್ಲಿ ಎಂ.ಎ ಸ್ನಾತಕೋತ್ತರ ಪದವಿಯನ್ನು ಪಡೆದು, ಗುಬ್ಬಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಶ್ರೀನಿವಾಸ್ ಕೇವಲ ಅಧ್ಯಾಪನಕ್ಕಷ್ಟೇ ಸೀಮಿತರಾದವರಲ್ಲ. ಅದರಾಚೆಗೆ ಕ್ಷೇತ್ರಕಾರ್ಯ, ಸಂಶೋಧನೆ, ಮಾಹಿತಿ ಸಂಗ್ರಹ, ಅಧ್ಯಯನ, ಬರವಣಿಗೆ ಮತ್ತು ಪ್ರಕಾಶನದಲ್ಲಿಯೂ ತೊಡಗಿಸಿಕೊಂಡವರು. ಅವರ ಈ ಕ್ರಿಯಾಶೀಲತೆ, ಹೊಸದನ್ನು ಹುಡುಕುವ-ಬರೆಯುವ-ಪ್ರಚುರಪಡಿಸುವ -ಸೃಜನಶೀಲ ಮನೋಭಾವ ಬೆರಗು ಮೂಡಿಸುತ್ತದೆ. ಅವರೊಬ್ಬ ತುಂಬ ಶ್ರದ್ಧೆಯ, ಗಂಭೀರ ಮನೋಭಾವದ ಸಂಶೋಧಕ, ಅಧ್ಯಯನಶೀಲ ವ್ಯಕ್ತಿ ಎಂಬುದನ್ನು ಅವರು ಈ ಕೃತಿಯ ಮೂಲಕ ತೋರಿಸಿಕೊಟ್ಟಿದ್ದಾರೆ. ಇದು ವೈಯಕ್ತಿಕವಾಗಿ ನನಗೆ ತುಂಬ ಇಷ್ಟವಾಗುವ ಸಂಗತಿ. ಸ್ಥಳೀಯ ಇತಿಹಾಸ ಅಧ್ಯಯನದ ದಾರಿಯಲ್ಲಿ ಅವರು ನಡೆಯುತ್ತಿರುವುದು ನನ್ನ ಅವರ ಮೇಲಿನ ವಿಶೇಷ ಪ್ರೀತಿಗೆ ಕಾರಣವಾಗಿದೆ
ಇನ್ನು ಕೃತಿಗೆ ಬರೋಣ. ಅಧ್ಯಯನದ ದೃಷ್ಟಿಯಿಂದ ಹೇಳಬೇಕೆಂದರೆ, ಈಗ ಮ್ಯಾಕ್ರೊ ಹಿಸ್ಟರಿಯ ಕಾಲ ಮುಕ್ತಾಯವಾಗಿ ಮೈಕ್ರೊ ಹಿಸ್ಟರಿಯ ಕಾಲ ಆರಂಭವಾಗಿದೆ. ಮ್ಯಾಕ್ರೋ ಹಿಸ್ಟರಿಯಲ್ಲಿ ಈಗಾಗಲೇ ಬಹಳಷ್ಟು ಅಧ್ಯಯನ ಆಗಿದೆ, ಕೆಲಸ ಆಗಿದೆ. ಆದರೆ ಮೈಕ್ರೋ ಹಿಸ್ಟರಿಯಲ್ಲಿ ಇನ್ನೂ ಕೆಲಸಗಳಾಗಬೇಕಾಗಿದೆ. ಬಾಕಿ ಇತಿಹಾಸವನ್ನು ಬರೆದು ಮುಗಿಸಬೇಕಾಗಿದೆ. ಈ ಮೈಕ್ರೋ ಹಿಸ್ಟರಿಯಲ್ಲಿ ಸ್ಥಳೀಯ ಇತಿಹಾಸ, ಮೌಖಿಕ ಇತಿಹಾಸ, ಸಬಾಲ್ಟçನ್ ಚರಿತ್ರೆ, ಅಂಚಿನ ಜನರ, ನಿರ್ಲಕ್ಷಿತ ಜನರ ಬದುಕಿನ ಚರಿತ್ರೆ ಇತ್ಯಾದಿ ಅಡಕವಾಗಿವೆ. ಶ್ರೀನಿವಾಸರ ಈ ಕೃತಿ ಈ ಹಾದಿಯಲ್ಲಿ ರೂಪುಗೊಂಡಿರುವ ಒಂದು ಮಹತ್ವದ ಕೃತಿಯಾಗಿದೆ.
`ಅಮ್ಮನಘಟ್ಟ ಸಾಂಸ್ಕೃತಿಕ ಪರಂಪರೆ’ ಲೇಖಕ ಶ್ರೀನಿವಾಸ ಎ.ಜಿ. ಅವರ ಚೊಚ್ಚಲ ಸಂಭ್ರಮದ ಕೃತಿ. ಕೃತಿಯನ್ನು ಕೈಯಲ್ಲಿ ಹಿಡಿದು ಸ್ಪರ್ಶಿಸಿದ ಕೂಡಲೇ ಅದರ ಸೊಬಗು, ಸೌಂದರ್ಯ, ಮುದ್ರಣದಲ್ಲಿನ ಅಚ್ಚುಕಟ್ಟುತನ ಎದ್ದುಕಾಣುತ್ತದೆ, ಖುಷಿಯಾಗುತ್ತದೆ. ಯಾವುದರಲ್ಲೂ ಲೋಪವಾಗದಂತೆ ಕೃತಿ ಸುಂದರವಾಗಿ ಮೂಡಿಬಂದಿದೆ. ಇದು ಎಲ್ಲ ಪುಸ್ತಕಪ್ರಿಯರ ಮೆಚ್ಚುಗೆಗೆ ಕಾರಣವಾಗಿದೆ.
ಬೆಂಗಳೂರು ನಿವೇದಿತ ಪ್ರಕಾಶನದಿಂದ ಕೃತಿ ಪ್ರಕಟಗೊಂಡಿದ್ದು ೧೬೪ ಪುಟಗಳನ್ನು ಹೊಂದಿದೆ. ಸಹನಾ ಗ್ರಾಫಿಕ್ಸ್ನ ಅಕ್ಷರ ವಿನ್ಯಾಸ, ಹಜರತ್ ಅಲಿ ಅವರ ಮುಖಪುಟ ವಿನ್ಯಾಸ ಗಮನ ಸೆಳೆಯುವಂತಿದೆ.  `ನಮ್ಮೂರಿನ ಜನರ ಪ್ರೀತಿ, ವಿಶ್ವಾಸ ಸಹಕಾರಕ್ಕೆ ನನ್ನ ಈ ಕಿರುಕೃತಿಯನ್ನು ಅರ್ಪಿಸುತ್ತಿದ್ದೇನೆ’ ಎಂದು ಅರ್ಪಣೆಯಲ್ಲಿ ಹೇಳಿರುವ ಲೇಖಕರ ಈ ಕೃತಿಗೆ ವಿಶ್ರಾಂತ ಇತಿಹಾಸ ಪ್ರಾಧ್ಯಾಪಕ, ಸಂಶೋಧಕ ಡಾ|| ಕೆ.ಬಿ. ಶಿವತಾರಕ್ ಅವರು ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ, ಕೃತಿಯ ಘನತೆಯನ್ನು ಎತ್ತಿಹಿಡಿದಿದ್ದಾರೆ, ಅದರಲ್ಲಿರುವ ಸ್ಥಳೀಯ ಚರಿತ್ರೆಯ ಸಂಗತಿಗಳನ್ನು ಕುರಿತು ಕ್ಷಕಿರಣಗಳನ್ನು ಬೀರಿದ್ದಾರೆ.
ಹಾಗೇ ಲೇಖಕರೂ ಸಹ ಏಕಾಂಗಿ ಹಾಗೂ ಸಂಗಾತಿಗಳೊAದಿಗೆ ಕೂಡಿ ನಡೆಸಿದ ಸಂಶೋಧನಾ ಕಾರ್ಯ, ಅದರ ಜೊತೆಗೆಯಾಗಿ ನಡೆಸಿದ ಅಧ್ಯಯನಕಾರ್ಯ, ಕೃತಿ ರಚನೆಯಲ್ಲಿ ಪ್ರಕಟಣೆಯಲ್ಲಿನ ಸಂಕಟಗಳು, ನೆರವಿಗೆ ಬಂದ ಆತ್ಮೀಯ ಜನರು ಕುರಿತು ಸವಿಸ್ತಾರವಾಗಿ ಬರೆದುಕೊಂಡಿದ್ದಾರೆ. ಹಾಗೇ ಕೃತಿಗೆ ಪಾರಂಪರಿಕ ದೇವಾಲಯಗಳ ಅಧ್ಯಯನಕಾರ ಕೆಂಗೇರಿ ಚಕ್ರಪಾಣಿ ಅವರು ಬೆನ್ನುಡಿಯ ಮಾತುಗಳನ್ನು ದಾಖಲಿಸಿದ್ದಾರೆ.
ಹನ್ನೆರಡು ಅಧ್ಯಾಯಗಳಿರುವ ಕೃತಿಯಲ್ಲಿ ಮೊದಲನೆಯದೇ ಭೌಗೋಳಿಕ ಪರಿಚಯ ಮತ್ತು ಸ್ಥಳನಾಮ ನಿಷ್ಪತ್ತಿ. ಗುಬ್ಬಿ ತಾಲ್ಲೂಕು ಕಸಬ ಹೋಬಳಿಗೆ ಸೇರಿದ ಅಮ್ಮನಘಟ್ಟ ಗ್ರಾಮ ಮತ್ತು ಅದರ ಸುತ್ತಮುತ್ತಲಿನ ಭೌಗೋಳಿಕ ಪರಿಸರ, ನೆಲ, ಜಲ, ಜನ, ಜಾನುವಾರು, ಹವಾಮಾನ... ಹೀಗೆ ಎಲ್ಲದರ ನಿಖರವಾದ ಪರಿಚಯ ಮಾಡಿಕೊಟ್ಟು ಅಂಕಿಅAಶಗಳ ಸಹಿತ ಮಾಹಿತಿ ಒದಗಿಸಿದ್ದಾರೆ. ಈ ಮೂಲಕ ಕೃತಿಗೊಂದು ಪೀಠಿಕೆಯನ್ನು ನೈಸರ್ಗಿಕ ಹಿನ್ನೆಲೆಯನ್ನು ನೀಡಿದ್ದಾರೆ.
ಎರಡನೇ ಅಧ್ಯಾಯದಲ್ಲಿ ಆ ನೆಲದಲ್ಲಿ ನಡೆದಾಡಿದ ಆರಂಭದ ಮಾನವನ ಹೆಜ್ಜೆಗುರುತುಗಳನ್ನು ಮೂಡಿಸುವ / ಕಂಡುಹಿಡಿಯುವ ಪ್ರಯತ್ನ ಮಾಡಿದ್ದಾರೆ. ಅಂದರೆ ಶಿಲಾಯುಗ ಅಥವಾ ಪ್ರಾಗೈತಿಹಾಸಿಕ ಕಾಲ ಎಂದು ನಾವು ಕರೆಯುವ ಕಾಲಮಾನದ ಮಾನವನ ಬದುಕನ್ನು, ಸಂಸ್ಕೃತಿಯನ್ನು ಕಟ್ಟಿಕೊಡುವ ಕೆಲಸವನ್ನು ಸಮರ್ಥವಾಗಿ ಮಾಡಿದ್ದಾರೆ. ಸೂಕ್ಷö್ಮ ಶಿಲಾಯುಗ ಮತ್ತು ನೂತನ ಶಿಲಾಯುಗದ ಜನರು ಬಳಸುತ್ತಿದ್ದ ಅನೇಕ ಆಯುಧಗಳನ್ನು, ಉಪಕರಣಗಳನ್ನು ಪತ್ತೆ ಹಚ್ಚಿ ಈ ಗ್ರಾಮ ಚರಿತ್ರೆಯನ್ನು ಹಲವು ಸಾವಿರ ವರ್ಷಗಳ ಹಿಂದಕ್ಕೆ ವಿಸ್ತರಿಸಿದ್ದಾರೆ, ಬೆಳೆಸಿದ್ದಾರೆ. ಹಾಗೇ ಪ್ರಾಗೈತಿಹಾಸಿಕದ ನಂತರದ ಚಾರಿತ್ರಿಕ ಕಾಲದ ಐತಿಹಾಸಿಕ ಸಂಗತಿಗಳನ್ನು ದಾಖಲಿಸಿದ್ದಾರೆ. ಆಧುನಿಕ ಕಾಲದಲ್ಲಿ ಬ್ರಿಟೀಷರ ವಿರುದ್ಧ ನಡೆದ ಸತ್ಯಾಗ್ರಹ ಹೋರಾಟವನ್ನು ವಿವರಿಸಿದ್ದಾರೆ. ಆ ಗ್ರಾಮದ ಜನರು ಸ್ವಾತಂತ್ರö್ಯ ಹೋರಾಟಕ್ಕೆ ಸ್ಪಂದಿಸಿದ ರೀತಿಯನ್ನು ವಿವರಿಸಿದ್ದಾರೆ.
ನಂತರದ ಹಲವು ಅಧ್ಯಾಯಗಳಲ್ಲಿ ಅಮ್ಮನಘಟ್ಟ ಗ್ರಾಮದ ದೇವಾಲಯಗಳು, ಮೂರ್ತಿಶಿಲ್ಪಗಳು, ವೀರಗಲ್ಲುಗಳು ಮತ್ತು ಮಾಸ್ತಿಕಲ್ಲುಗಳು, ಜಲಸಂಪತ್ತು ಮತ್ತು ಆಚರಣೆಗಳು ಹೀಗೆ ಎಲ್ಲವನ್ನೂ ತಳಸ್ಪರ್ಶಿಯಾಗಿ ಅಧ್ಯಯನ ಮಾಡಿ ಅವುಗಳ ಚಾರಿತ್ರಿಕ ಮಹತ್ವಗಳನ್ನು ಗುರುತಿಸಿದ್ದಾರೆ.
ಗ್ರಾಮದ ಸಾಮಾಜಿಕ ವ್ಯವಸ್ಥೆ, ಧಾರ್ಮಿಕ ಸ್ಥಿತಿಗತಿ, ಆರ್ಥಿಕ ಸ್ಥಿತಿಗತಿ, ಕರಕುಶಲ ಕಲೆಗಳು, ಜಾನಪದ ವೈಶಿಷ್ಟö್ಯಗಳನ್ನು ಕುರಿತು ವ್ಯಾಪಕವಾಗಿ ಅಧ್ಯಯನ ಮಾಡಿ ಅಪೂರ್ವ ಒಳನೋಟಗಳನ್ನು ಬೀರಿದ್ದಾರೆ. ವಿಸ್ಮೃತಿಗೆ ಜಾರುತ್ತಿರುವ ಈ ಹಿಂದಿನ ಜನರ ಬದುಕನ್ನು ಅಕ್ಷರಗಳಲ್ಲಿ ಕಟ್ಟಿಕೊಡುವ ಪ್ರಾಮಾಣಿಕ ಕೆಲಸವನ್ನು ಮಾಡುವುದರಲ್ಲಿ ಯಶಸ್ವಿಯಾಗಿದ್ದಾರೆ.
ಕೊನೆಯ ಹನ್ನೆರಡನೇ ಅಧ್ಯಾಯದಲ್ಲಿ ಶ್ರೇಷ್ಠ ಸಾಧಕರು ಶೀರ್ಷಿಕೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಆ ಊರಿನ ಪ್ರತಿಭಾವಂತರು ತೋರಿದ ಶ್ರೇಷ್ಠತೆಯನ್ನು, ಸಾಧಿಸಿದ ಸಾಧನೆಯನ್ನು ದಾಖಲಿಸಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿನ ಸಾಧಕರಾದ ಶಂಕರಪ್ಪ ಎ.ಎಸ್., ಮಹೇಶ್ ಎ.ಎಸ್., ಶ್ರೀನಿವಾಸ ಎ.ಜಿ., ಡಾ. ಎ.ಎಲ್. ಶಿವರುದ್ರಪ್ಪ, ಎ.ಎಸ್. ಗೀತಾ ಮೊದಲಾದ ಮಹನೀಯರನ್ನು ದಾಖಲಿಸಿದ್ದಾರೆ. ಹೀಗೆ ಅಮ್ಮನಘಟ್ಟ ಗ್ರಾಮದ ಸ್ವರೂಪ, ಇತಿಹಾಸ, ಸಂಸ್ಕೃತಿ, ಸಾಧನೆಗಳನ್ನು ಶ್ರೇಷ್ಠತೆಗಳನ್ನು ಸಂರ್ಪೂವಾಗಿ ಒಂದೆಡೆ ದಾಖಲಿಸುವ ಪ್ರಯತ್ನ ಮಾಡಿ ಅದರಲ್ಲಿ ಯಶಸ್ವಿಯಾಗಿದ್ದಾರೆ.
ಅನುಬಂಧದಲ್ಲಿ ಗ್ರಾಮ ಸಂಸ್ಕೃತಿಗೆ ಸಂಬAಧಿಸಿದ ಪೂರಕವಾದ ಅಪೂರ್ವ ಛಾಯಾಚಿತ್ರಗಳನ್ನು, ಗ್ರಾಮದ ಭುಪಟವನ್ನು ನೀಡಿದ್ದಾರೆ. ಕೊನೆಯಲ್ಲಿ ಕೃತಿ ರಚನೆಗಾಗಿ ದುಡಿಸಿಕೊಂಡು ಆಕರಗಳ ದಾಖಲಾತಿ ನೀಡಿದ್ದಾರೆ.
ಕನ್ನಡದ ಕಣ್ವ, ಆಚಾರ್ಯ ಬಿ.ಎಂ.ಶ್ರೀಕAಠಯ್ಯನವರು ಹೇಳುವ ಜನವಾಣಿ ಬೇರು, ಕವಿವಾಣಿ ಹೂವು ಎಂಬAತೆ ಒಂದು ದೇಶದ ಇತಿಹಾಸದಲ್ಲಿ ಹಾಸುಹೊಕ್ಕಾಗಿರುವುದು ಜನಪದ ಸಂಸ್ಕೃತಿ. ಶಿಷ್ಟ ಸಂಸ್ಕೃತಿಯ ಮೂಲಬೇರುಗಳಿರುವುದು ಹಳ್ಳಿಗಳಲ್ಲಿ. ಇಂದಿನ ದಿನಗಳಲ್ಲಿ ವೇಗವಾಗಿ ಬೆಳೆಯುತ್ತಿರುವ ಆಧುನಿಕತೆ ಮತ್ತು ನಗರೀಕರಣಗಳ ಪ್ರಭಾವದಿಂದಾಗಿ ಮರೆಯಾಗುವ ಮುನ್ನ ಅಥವಾ ಚಹರೆ ಕಳೆದುಕೊಳ್ಳುವ ಮುನ್ನ ಅವನ್ನೆಲ್ಲ ದಾಖಲಿಸುವ, ಸಮಗ್ರ ಚರಿತ್ರೆಯನ್ನು ಬರೆಯುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಯುವ ಸಂಶೋಧಕ ಎ.ಜಿ. ಶ್ರೀನಿವಾಸ್ ಮತ್ತು ಅವರ ಈ ಕೃತಿ ಮಾದರಿಯಾಗಿದೆ ಎಂದು ಬೆನ್ನುಡಿಗಾರರು ಹೇಳಿರುವ ಮಾತು ಉಲ್ಲೇಖಾರ್ಹವಾಗಿದೆ ಸಕಾಲಿಕವಾಗಿದೆ.
ಒಟ್ಟಾರೆ ಶ್ರೀನಿವಾಸ್ ತಮ್ಮ ಸಂಶೋಧನೆಯ ಭಾಗವಾಗಿ ಗ್ರಾಮದ ಭೌಗೋಳಿಕ ಸ್ವರೂಪ, ಗ್ರಾಮದ ರಚನೆ, ಗ್ರಾಮದ ಜನರು, ಜನರ ಜಾತಿಗಳು, ಪಂಗಡಗಳು, ಸಾಮಾಜಿಕ ಜೀವನದ ವಿಶೇಷ ಆಚರಣೆಗಳು, ಧಾರ್ಮಿಕ ನಂಬಿಕೆಗಳು, ಆಯಗಾರ ಪದ್ಧತಿ, ಗ್ರಾಮಾಡಳಿತ ಹೀಗೆ ಎಲ್ಲವನ್ನು ಕೃತಿಯಲ್ಲಿ ಹಂತ ಹಂತವಾಗಿ ದಾಖಲಿಸಿದ್ದಾರೆ. ಈ ಮೂಲಕ ತಮ್ಮ ಹುಟ್ಟೂರಿನ ಗ್ರಾಮ ಚರಿತ್ರೆಗೆ ಲಿಖಿತ ರೂಪ ನೀಡಿದ್ದಾರೆ. ಯಾವುದೇ ಐತಿಹಾಸಿಕ ಮಾಹಿತಿ ಅವರ ಕಣ್ಣಳತೆಯಿಂದ, ಅಧ್ಯಯನದ ವ್ಯಾಪ್ತಿಯಿಂದ ದೂರಸರಿದಿಲ್ಲ. ಆ ಮಟ್ಟಿಗೆ ಅವರು ಎಚ್ಚರ ವಹಿಸಿದ್ದಾರೆ.
ಯುವ ಸಂಶೋಧಕ ಶ್ರೀನಿವಾಸ್ ಎ.ಜಿ ಅವರು ತುಂಬ ಶ್ರದ್ಧೆಯಿಂದ, ಆಸಕ್ತಿಯಿಂದ ಕ್ಷೇತ್ರಕಾರ್ಯ ಮಾಡಿದ್ದಾರೆ. ಪೂರಕ ಪುರಾವೆಗಳನ್ನು ದುಡಿಸಿಕೊಂಡಿದ್ದಾರೆ. ಹೀಗೆ ಸಂಶೋಧನೆ ಮಾಡಿ ಸಂಗ್ರಹಿಸಿದ ಮಾಹಿತಿಯನ್ನಿಟ್ಟಿಕೊಂಡು ಅಧ್ಯಯನ ಮಾಡಿದ್ದಾರೆ. ಅನಗತ್ಯ ಎನ್ನಿಸಿದವುಗಳನ್ನು ಕೈಬಿಟ್ಟಿದಾರೆ. ಅಗತ್ಯ ಎನ್ನಿಸಿದ ಸಂಗತಿಗಳನ್ನು ಇಟ್ಟುಕೊಂಡು, ಇವುಗಳ ನೆರವಿನೊಂದಿಗೆ ಅಮ್ಮನಘಟ್ಟ ಸಾಂಸ್ಕೃತಿಕ ಪರಂಪರೆ ಕೃತಿಯನ್ನು ರಚಿಸಿದ್ದಾರೆ.
ಈಗ್ಗೆ ಒಂದು ತಿಂಗಳ ಹಿಂದೆ ಕೃತಿಯ ಲೋಕಾರ್ಪಣೆ ಸಮಾರಂಭದಲ್ಲಿ ಭಾಗಿಯಾದ ಸಂತಸ ನನ್ನದು. ಸಂಶೋಧಕ ಬರಹಗಾರರಾದ ಡಾ|| ಕೆ.ಬಿ. ಶಿವತಾರಕ್ ಅವರನ್ನು ನೋಡುವ ಅವಕಾಶವೂ ನನಗೆ ಒದಗಿಬಂದಿದ್ದು ನನಗೆ ಖುಷಿಕೊಡುವ ಸಂಗತಿ. ಮಹತ್ವದ ಕೃತಿ ರಚನೆ ಮೂಲಕ ಶ್ರೀನಿವಾಸ್ ತನ್ನ ಸಹ ಸಂಶೋಧಕರಿಗೆ ಮಾದರಿಯಾಗಿದ್ದಾರೆ, ಸ್ಫೂರ್ತಿಯಾಗಿದ್ದಾರೆ. ಸ್ಥಳೀಯ ಚರಿತ್ರೆಯ ಭಾಗವಾಗಿ ಇನ್ನು ಏನೇನು ಕೆಲಸಗಳನ್ನು ಮಾಡಬಹುದು, ಸಂಶೋಧನೆಗಳನ್ನು ನಡೆಸಬಹುದು ಎಂಬುದನ್ನು ಸಾಂಕೇತಿಕವಾಗಿ ತೋರಿಸಿಕೊಟ್ಟಿದ್ದಾರೆ. ಕೃತಿ ನನ್ನ ಇಷ್ಟದ ಓದಿನ ಭಾಗವಾಗಿ ಬಲು ಖುಷಿಕೊಟ್ಟಿದೆ.