ಸುಡು ವಾಸ್ತವಗಳ ನಡುವೆ ಅಂಬೇಡ್ಕರ್‌ ಪ್ರಸ್ತುತತೆ

na-divakara-ambedkar

ಸುಡು ವಾಸ್ತವಗಳ ನಡುವೆ ಅಂಬೇಡ್ಕರ್‌ ಪ್ರಸ್ತುತತೆ

 

 

ಪ್ರಜಾತಂತ್ರದ ಸಿಕ್ಕುಗಳು ಜಟಿಲವಾದಷ್ಟೂ ಅಂಬೇಡ್ಕರ್‌ ಹೆಚ್ಚುಹೆಚ್ಚು ಪ್ರಸ್ತುತವಾಗುತ್ತಾರೆ

ನಾ ದಿವಾಕರ

 

    ಭಾರತ ಇಂದು ಸಂದಿಗ್ಧ ಪರಿಸ್ಥಿತಿಯಲ್ಲಿದೆ. ಭೌಗೋಳಿಕ ಅಖಂಡತೆ ಹಾಗೂ ರಾಷ್ಟ್ರೀಯ ಭದ್ರತೆಯ ಆಶಯಗಳ ನಡುವೆಯೂ ಆಂತರಿಕವಾಗಿ ಭಾರತೀಯ ಸಮಾಜ ತನ್ನ ಪ್ರಾಚೀನ ಪಾರಂಪರಿಕ ಹಾಗೂ ಸಾಂಸ್ಕೃತಿಕ ಕೊಂಡಿಗಳನ್ನು ಇಂದಿಗೂ ಜೀವಂತವಾಗಿಯೇ ಇರಿಸಿಕೊಂಡಿರುವುದರಿಂದ, ಸಾಂವಿಧಾನಿಕವಾಗಿ ನಿಷೇಧಿಸಲಾಗಿರುವ ಅಸ್ಪೃಶ್ಯತೆ-ಅಸಮಾನತೆಗಳು ಇನ್ನೂ ಜೀವಂತವಾಗಿದೆ. ಹಾಗೆಯೇ ಸಂವಿಧಾನವು ಈ ದೇಶದ ಸಾರ್ವಭೌಮ ಪ್ರಜೆಗಳಿಗೆ ವಿಧ್ಯುಕ್ತವಾಗಿ ನೀಡುವ ಸಮಾನತೆಯ ನೆಲೆಗಳು ಮೇಲ್ನೋಟಕ್ಕೆ ಸುಂದರವಾಗಿ ಕಾಣುವಂತಿದ್ದರೂ, ಒಳಹೊಕ್ಕು ನೋಡಿದಾಗ ಮಹಿಳಾ ಸಂಕುಲದ ನಡುವೆ, ಆದಿವಾಸಿಗಳ ಆವರಣದಲ್ಲಿ, ಶೋಷಿತ ಸಮುದಾಯಗಳ ಅಂಗಳದಲ್ಲಿ, ಅಲ್ಪಸಂಖ್ಯಾತರ ಚೌಕಟ್ಟುಗಳಲ್ಲಿ ಹಾಗೂ ದುಡಿಯುವ ವರ್ಗಗಳ ಜೋಪಡಿಗಳ ನಡುವೆ ಅಸಮಾನತೆಯ ನೆಲೆಗಳು ತಮ್ಮ ಸೂಕ್ಷ್ಮ ಎಳೆಗಳನ್ನು ಇಂದಿಗೂ ಉಳಿಸಿಕೊಂಡಿರುವುದನ್ನು ಗುರುತಿಸಬಹುದು. ಸಂವಿಧಾನಾತ್ಮಕವಾಗಿ ನಿಷೇಧಿತವಾಗಿರುವ ಅಸ್ಪೃಶ್ಯತೆಯ ಆಚರಣೆಗಳು ರೂಪಾಂತರ ಹೊಂದಿ ಹೊಸ ಆಯಾಮಗಳನ್ನು ಪಡೆದುಕೊಳ್ಳುತ್ತಿರುವಂತೆಯೇ, ಶ್ರೇಣೀಕೃತ ಜಾತಿ ವ್ಯವಸ್ಥೆ ಮತ್ತು ವರ್ಣಾಶ್ರಮ ಧರ್ಮದ ಮೂಲ ಸೆಲೆಗಳು ತಮ್ಮ ಮೂಲ ತಾತ್ವಿಕ ಸ್ವರೂಪದಲ್ಲೇ ಉಳಿದುಕೊಂಡಿವೆ.

 

ಈ ಜಟಿಲ ಸಿಕ್ಕುಗಳ ನಡುವೆಯೇ ಭಾರತ ಮತ್ತೊಂದು ಚಾರಿತ್ರಿಕ ದಿನವನ್ನು ಆಚರಿಸುತ್ತಿದೆ. ಏಪ್ರಿಲ್‌ 14 ರಂದು ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುವ ಡಾ. ಬಿ.ಅರ್.‌ ಅಂಬೇಡ್ಕರ್‌ ಅವರ 133ನೆಯ ಜನ್ಮದಿನಾಚರಣೆ ಶೋಷಿತ ಹಾಗೂ ಅವಕಾಶ ವಂಚಿತ ಜನಸಮುದಾಯಗಳ ಅಸ್ಮಿತೆಯನ್ನು ಪುನಃಪುನಃ ದೃಢೀಕರಿಸುವ ಒಂದು ದಿನವೂ ಆಗಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಸ್ವಾತಂತ್ರ್ಯ ಪಡೆದು 75 ವರ್ಷಗಳಾದರೂ, ಭಾರತವನ್ನು ಒಂದು ಗಣತಂತ್ರ ಎಂದು ಘೋಷಿಸಿ ನಮ್ಮದೇ ಆದ ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡು 73 ವರ್ಷಗಳೇ ಸಂದಿದ್ದರೂ, ಇಂದಿಗೂ ಸಂವಿಧಾನದ ಆಶಯದಂತೆ ಅಥವಾ ಡಾ. ಬಿ.ಅರ್.‌ ಅಂಬೇಡ್ಕರ್‌ ಅವರ ಆಶಯದಂತೆ ಸಾಮಾಜಿಕ ಹಾಗೂ ಆರ್ಥಿಕ ಸಮಾನತೆಯನ್ನು ಏಕೆ ಸಾಧಿಸಲಾಗಿಲ್ಲ ಎಂಬ ಪ್ರಶ್ನೆ ನಮ್ಮನ್ನು ಕಾಡದೆ ಹೋದರೆ, ಬಹುಶಃ ಈ ದಿನಾಚರಣೆಯೂ ಮತ್ತೊಂದು ಹಬ್ಬದಂತೆ ಸಾಂಕೇತಿಕವಾಗಿಬಿಡುತ್ತದೆ. ಸಂವಿಧಾನ ರಚನೆಯ ಸಂದರ್ಭದಲ್ಲಿನ ಅಂಬೇಡ್ಕರ್‌ ಅವರ ಭಾಷಣಗಳು, ಬರಹಗಳು ಮತ್ತು ಇವುಗಳಲ್ಲಿ ಅಂತರ್ಗತವಾಗಿದ್ದಂತಹ ಆತಂಕಗಳನ್ನು ವರ್ತಮಾನದ ಸಂದರ್ಭದಲ್ಲಿ ಗಮನಿಸಿದಾಗ, ಬಹುಶಃ ಭಾರತ ಅಂಬೇಡ್ಕರ್‌ ಕನಸಿನ ಭಾರತವನ್ನು ತಲುಪಲು ನಾವಿನ್ನೂ ಬಲುದೂರ ಕ್ರಮಿಸಬೇಕಿದೆ ಎನಿಸುವುದು ಸಹಜ.

 

ಸಾಮಾಜಿಕ ವಾಸ್ತವಗಳ ನಡುವೆ ಅಂಬೇಡ್ಕರ್‌

ಏಕೆ ಹೀಗನಿಸುತ್ತದೆ ಎಂಬ ಪ್ರಶ್ನೆಯೂ ನಮ್ಮನ್ನು ಕಾಡಬೇಕಲ್ಲವೇ ? ಇನ್ನು ಐದು ವರ್ಷಗಳಲ್ಲಿ ಐದು ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯಾಗಿ ಹೊರಹೊಮ್ಮಿ ವಿಶ್ವಗುರು ಎನಿಸಿಕೊಳ್ಳುವ ಭಾರತದ ತಳಮಟ್ಟದ ಜನಸಮುದಾಯಗಳನ್ನು ಈ ಪ್ರಶ್ನೆ ಏಕೆ ದಿನನಿತ್ಯ ಕಾಡುತ್ತಿದೆ. ಆಳವಾದ ಸಂಶೋಧನೆ ಅಥವಾ ಅಧ್ಯಯನದ ಗೊಡವೆಗೇ ಹೋಗದೆ, ನಮ್ಮ ಸುತ್ತಲಿನ ಸಮಾಜದತ್ತ ಒಮ್ಮೆ ಕಣ್ಣು ಹಾಯಿಸಿದರೂ ಉತ್ತರ ದೊರೆಯುತ್ತದೆ. ಆದರೆ ಹಾಗೆ ಕಾಣುವುದಕ್ಕೂ ನಮ್ಮ ನೋಟದೊಳಗೊಂದು ಸೂಕ್ಷ್ಮ ಒಳನೋಟ ಇರಬೇಕಾಗುತ್ತದೆ. ಭವಿಷ್ಯದ ಮಾರ್ಗವನ್ನು ರೂಪಿಸಲು ದೂರದರ್ಶಿತ್ವದ ಅವಶ್ಯಕತೆ ಇರುವಂತೆಯೇ ವರ್ತಮಾನದ ಸುಡು ವಾಸ್ತವಗಳನ್ನು ಅರ್ಥಮಾಡಿಕೊಳ್ಳಲು ಸೂಕ್ಷ್ಮದರ್ಶಕ ಒಳನೋಟಗಳೂ ಅತ್ಯವಶ್ಯವಾಗಿ ಇರಬೇಕಾಗುತ್ತದೆ. ಈ ಒಳನೋಟಗಳನ್ನು ತೀಕ್ಷ್ಣಗೊಳಿಸಬೇಕಾದರೆ ನಮ್ಮ ಹಿತವರ್ಗದ ಸಮಾಜ ನಿರ್ಮಿಸಿಕೊಂಡಿರುವ ಎತ್ತರದ ಗೋಡೆಗಳನ್ನು ದಾಟಿ ನೋಡುವ ವ್ಯವಧಾನವನ್ನೂ ಬೆಳೆಸಿಕೊಳ್ಳಬೇಕಾಗುತ್ತದೆ. ಈ ಗೋಡೆಗಳಿಂದಾಚೆಗೆ ನೋಡುತ್ತಿರುವಾಗಲೇ ನಮಗೆ ನಮ್ಮ ಶ್ರೇಣೀಕೃತ ಸಮಾಜ ನಿರ್ಮಿಸಿರುವಂತಹ ಶತಮಾನಗಳಷ್ಟು ಹಳೆಯದಾದ ಜಾತಿ ಭೇದದ ಗೋಡೆಗಳನ್ನು, ಗೋಡೆಯೊಳಗಿನ ಒಳಬಿರುಕುಗಳನ್ನು ಭೇದಿಸಿ ಈ  ಗೋಡೆಗಳಿಗೆ ಸುಭದ್ರ ತಳಪಾಯ ಒದಗಿಸಿರುವ ನೆಲದ ಸಂಸ್ಕೃತಿಯನ್ನೂ ಸಹ ಗಂಭೀರವಾಗಿ ಪರಾಮರ್ಶಿಸಬೇಕಾಗುತ್ತದೆ. ಡಾ. ಬಿ.ಆರ್.‌ ಅಂಬೇಡ್ಕರ್‌ ಅವರನ್ನು ಗಂಭೀರವಾಗಿ ಅಧ್ಯಯನ ಮಾಡಿದರೆ ಬಹುಶಃ ಈ ಒಳನೋಟಗಳು ತೀಕ್ಷ್ಣವಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.

 

ಭಾರತ ಒಂದು ಬಲಿಷ್ಠ ಆರ್ಥಿಕ ಶಕ್ತಿಯಾಗಿ ವಿಶ್ವದ ಅಗ್ರಮಾನ್ಯ ರಾಷ್ಟ್ರಗಳ ಪಂಕ್ತಿಯಲ್ಲಿ ಮುಂಚೂಣಿಯಲ್ಲಿ ನಿಂತಿರುವಾಗಲೇ ಬಡತನ, ಹಸಿವು, ಸಾಮಾಜಿಕ ಅಸಮಾನತೆ ಮತ್ತು ತಾರತಮ್ಯದ ವಾಸ್ತವಗಳು ನಮ್ಮ ಕಣ್ಣಿಗೆ ರಾಚುತ್ತಿರುವ ಈ ಸಂದರ್ಭದಲ್ಲಿ, ಅಂಬೇಡ್ಕರ್‌ ಅವರ ಜನ್ಮ ದಿನವನ್ನು ಯಾವ ನೆಲೆಯಲ್ಲಿ ನಿಂತು ಆಚರಿಸಬೇಕು ? ಮೂಲತಃ ಡಾ. ಬಿ.ಆರ್.‌ ಅಂಬೇಡ್ಕರ್‌ ನಮಗೆ ಮೂರು ವಿಭಿನ್ನ ಸ್ತರಗಳಲ್ಲಿ ಕಾಣುತ್ತಾರೆ. ಮೊದಲನೆಯದು ಉದಾರವಾದಿ ಪ್ರಜಾಪ್ರಭುತ್ವವಾದಿಯಾಗಿ, ಎರಡನೆಯದಾಗಿ ಸಮಾಜವಾದಿ ಸಮಾಜ ಸುಧಾರಕರಾಗಿ ಹಾಗೂ ಮೂರನೆಯದಾಗಿ ಶೋಷಿತ ಸಮುದಾಯಗಳ ವಿಮೋಚಕನಾಗಿ. ಈ ಮೂರೂ ಸ್ತರಗಳಲ್ಲಿನ ಅಂಬೇಡ್ಕರರನ್ನು ವರ್ತಮಾನದ ಪರಿಸ್ಥಿತಿಗಳೊಡನೆ ಮುಖಾಮುಖಿಯಾಗಿಸಿ ನೋಡಿದಾಗ, ಅಂಬೇಡ್ಕರ್‌ ಅವರ ಮೂಲ ಆಶಯಗಳನ್ನು ತಲುಪುವುದಕ್ಕೂ ನಮ್ಮಿಂದ ಏಕೆ ಸಾಧ್ಯವಾಗಿಲ್ಲ ಎಂಬ ಜಿಜ್ಞಾಸೆ ಖಂಡಿತವಾಗಿಯೂ ಮೂಡಲೇಬೇಕಲ್ಲವೇ ?

 

ಡಿಜಿಟಲ್‌ ಯುಗದ ಉಚ್ಛ್ರಾಯ ಹಂತದಲ್ಲಿರುವ ಭಾರತದ ಆರ್ಥಿಕತೆ ಅಂಬೇಡ್ಕರ್‌ ಪ್ರತಿಪಾದಿಸಿದ ಸಮಾಜವಾದಿ ಆರ್ಥಿಕ ದೃಷ್ಟಿಕೋನದಿಂದ ಸಂಪೂರ್ಣವಾಗಿ ವಿಮುಖವಾಗಿದೆ. ಸಂವಿಧಾನ ರಚನೆಗೂ ಮುನ್ನ ನಡೆದ ಚರ್ಚೆಗಳಲ್ಲಿ  ಭೂಮಿಯ ರಾಷ್ಟ್ರೀಕರಣವನ್ನಷ್ಟೇ  ಅಲ್ಲದೆ ದೇಶದ ನೈಸರ್ಗಿಕ ಸಂಪನ್ಮೂಲಗಳನ್ನಾಧರಿಸಿದ ಎಲ್ಲ ಉತ್ಪಾದನಾ ಚಟುವಟಿಕೆಗಳೂ, ಕೈಗಾರಿಕೆಗಳೂ ಸಹ ಸರ್ಕಾರದ ಸ್ವಾಮ್ಯದಲ್ಲಿರಬೇಕು ಎಂದು ಅಂಬೇಡ್ಕರ್‌ ಬಲವಾಗಿ ಪ್ರತಿಪಾದಿಸಿದ್ದರು. 20ನೆಯ ಶತಮಾನದ ಸೋವಿಯತ್‌ ಕ್ರಾಂತಿ ಮತ್ತು ತದನಂತರದ ಸಮಾಜವಾದಿ ಜಗತ್ತಿನ ಬೆಳವಣಿಗೆಗಳೂ ಸಹ ಅಂಬೇಡ್ಕರ್‌ ಅವರ ಈ ಚಿಂತನೆಗಳಿಗೆ ಪ್ರೇರಣೆಯಾಗಿರಬಹುದು. ಆದರೆ ವರ್ತಮಾನದ ಭಾರತ ಸಮಾಜವಾದಿ ಆರ್ಥಿಕತೆಗೆ ತಿಲಾಂಜಲಿ ನೀಡಿ ಪರಿಪೂರ್ಣ ಬಂಡವಾಳಶಾಹಿ ರಾಷ್ಟ್ರವಾಗುವ ನಿಟ್ಟಿನಲ್ಲಿ ದಾಪುಗಾಲು ಹಾಕುತ್ತಿದೆ. ಕೈಗಾರಿಕಾ ಕ್ರಾಂತಿ ಹಾಗೂ ಸಮಾಜವಾದಿ ಕ್ರಾಂತಿಯಿಂದ ಪ್ರೇರಿತರಾಗಿ ಅಂಬೇಡ್ಕರ್‌ ಸಾಂವಿಧಾನಿಕವಾಗಿ ರೂಪಿಸಿದ ಹಲವಾರು ಕಾರ್ಮಿಕ ಕಾನೂನುಗಳು ಇಂದು ಅಪ್ರಸ್ತುತವಾಗುತ್ತಿವೆ. ಎಂಟು ಗಂಟೆ ದುಡಿಮೆಯ ಚಾರಿತ್ರಿಕ ಹಕ್ಕು ಸಹ ಇಂದು ಇಲ್ಲವಾಗುತ್ತಿದೆ. ಹಾಗೆಯೇ ಕೃಷಿ ಭೂಮಿಯೂ ಸಹ ಖಾಸಗಿ ಕಾರ್ಪೋರೇಟ್‌ ಮಾರುಕಟ್ಟೆ ಪಾಲಾಗುತ್ತಿದೆ. ಅಂಬೇಡ್ಕರ್‌ ಪ್ರತಿಮೆಗೆ ವಂದಿಸುವ ಮುನ್ನ ಈ ದೇಶದ ಪ್ರತಿಯೊಬ್ಬ ಕಾರ್ಮಿಕನಲ್ಲೂ ತಾನು ವಂಚಿಸಲ್ಪಡುತ್ತಿದ್ದೇನೆ ಎಂಬ ಭಾವಪ್ರಜ್ಞೆ ಮೂಡಬೇಕಲ್ಲವೇ ?

 

ಮೂಲತಃ ಡಾ. ಬಿ. ಆರ್.‌ ಅಂಬೇಡ್ಕರ್‌ ಪ್ರಜಾಪ್ರಭುತ್ವವಾದಿ. ಪಶ್ಚಿಮ ರಾಷ್ಟ್ರಗಳಲ್ಲಿ ನಡೆದ ಪ್ರಜಾಸತ್ತಾತ್ಮಕ ಕ್ರಾಂತಿಕಾರಿ ಬೆಳವಣಿಗೆಗಳ ಅಧ್ಯಯನದೊಂದಿಗೇ ವಿಶ್ವದ ಇತರ ದೇಶಗಳಲ್ಲಿ ಶೋಷಿತ ಸಮುದಾಯಗಳು ಎದುರಿಸಿದ ಸವಾಲುಗಳು, ನಡೆಸಿದ ಸಂಘರ್ಷಗಳು ಹಾಗೂ ಅನುಭವಿಸಿದ ಯಾತನೆಗಳನ್ನು ಆಳವಾಗಿ ಅಧ್ಯಯನ ಮಾಡುವ ಮೂಲಕ, ಭಾರತೀಯ ಸಮಾಜದಲ್ಲಿನ ಶೋಷಣೆಯ ವಿಭಿನ್ನ ಆಯಾಮಗಳ ಸಂಶೋಧನೆಯನ್ನು ನಡೆಸಿ, ಭಾರತೀಯ ಸಮಾಜಕ್ಕೆ ಅಗತ್ಯವಾದಂತಹ ಪ್ರಜಾತಂತ್ರದ ತಾತ್ವಿಕ ಭೂಮಿಕೆಯನ್ನು ಅಂಬೇಡ್ಕರ್‌ ಸಿದ್ಧಪಡಿಸಿದ್ದರು. ಪ್ರಜಾಪ್ರಭುತ್ವವನ್ನು ಕೇವಲ ರಾಜಕೀಯ ನೆಲೆಯಲ್ಲಿ ಗುರುತಿಸದೆ, ಸಾಮಾಜಿಕ ಹಾಗೂ ಆರ್ಥಿಕ ಪ್ರಜಾಪ್ರಭುತ್ವವನ್ನೂ ಬಲವಾಗಿ ಪ್ರತಿಪಾದಿಸಿದ್ದ ಅಂಬೇಡ್ಕರ್‌ ಅವರ ಬರಹಗಳಲ್ಲಿ ಪ್ರಜಾಪ್ರಭುತ್ವದ ಮೂಲ ಆಶಯಗಳನ್ನೂ ಗುರುತಿಸಬಹುದು. ಜನಸಮುದಾಯಗಳಲ್ಲಿ ಸಮಾನತೆಯನ್ನು ಮೂಡಿಸುವ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪಾಲಿಸದ ಅಥವಾ ಅನುಮೋದಿಸದ ಯಾವುದೇ ಪಕ್ಷ ಅಥವಾ ಗುಂಪು ಅಂಬೇಡ್ಕರರ ಅನುಯಾಯಿಗಳಾಗಲು ಸಾಧ್ಯವೇ ಇಲ್ಲ.

 

ಆದರೂ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದ ಅಧಿಕಾರ ರಾಜಕಾರಣದಲ್ಲಿರುವ ಯಾವುದೇ ಮುಖ್ಯವಾಹಿನಿಯ ಪಕ್ಷದಲ್ಲೂ ಆಂತರಿಕ ಪ್ರಜಾತಂತ್ರದ ಲವಲೇಶವೂ ಕಾಣುವುದಿಲ್ಲ. ಎಲ್ಲ ಪಕ್ಷಗಳೂ ಅಂಬೇಡ್ಕರ್‌ ಅವರ ಚಿಂತನೆ, ತತ್ವ ಮತ್ತು ಸಿದ್ಧಾಂತಗಳನ್ನು ಅನುಸರಿಸುವ ಭರವಸೆ ನೀಡಿದರೂ, ತಾವೇ ಅಂಬೇಡ್ಕರರ ನೈಜ ವಾರಸುದಾರರು ಎಂದು ಎದೆಯುಬ್ಬಿಸಿ ಘೋಷಿಸಿದರೂ, ಯಾವುದೇ ಪಕ್ಷದಲ್ಲೂ ಪ್ರಜಾಪ್ರಭುತ್ವದ ಮೌಲ್ಯಗಳು ಆಂತರಿಕವಾಗಿ ನೆಲೆಗೊಂಡಿಲ್ಲ. ಅಂಬೇಡ್ಕರ್‌ವಾದದ ನೆಲೆಯಲ್ಲೇ ಸ್ಥಾಪನೆಯಾಗಿರುವ ಬಹುಜನ ಸಮಾಜ ಪಕ್ಷ, ಆರ್‌ಪಿಐ ಮತ್ತಿತರ ರಾಜಕೀಯ ಪಕ್ಷಗಳೂ, ದೇಶಾದ್ಯಂತ ಹಂಚಿಹೋಗಿರುವ ನೂರಾರು ದಲಿತ ಸಂಘಟನೆಗಳೂ ಸಹ ತಮ್ಮ ಆಂತರಿಕ ಕಾರ್ಯನಿರ್ವಹಣೆಯಲ್ಲಿ ಪ್ರಜಾತಂತ್ರದ ಮೌಲ್ಯಗಳನ್ನು ಅಳವಡಿಸಿಕೊಂಡಿಲ್ಲ ಎನ್ನುವುದು ದುರಂತ ವಾಸ್ತವ. ಹಾಗಿದ್ದರೂ ಎಲ್ಲ ಪಕ್ಷಗಳೂ, ಗುಂಪುಗಳೂ ಅಂಬೇಡ್ಕರ್‌ ವಾರಸುದಾರರು ಎಂದು ಸಂವಿಧಾನವನ್ನು ಎದೆಗವುಚಿಕೊಳ್ಳುತ್ತಿವೆ. ಇದು ಆತ್ಮಾವಲೋಕನಕ್ಕೊಳಗಾಗಬೇಕಾದ ವಿಚಾರ.

 

 

ಮೂರನೆಯದಾಗಿ ನಾವು ಅಂಬೇಡ್ಕರ್‌ ಅವರನ್ನು ಶೋಷಿತ ಸಮುದಾಯಗಳ, ಮಹಿಳೆಯರ , ಅಂಚಿಗೆ ತಳ್ಳಲ್ಪಟ್ಟವರ ಹಾಗೂ ಅವಕಾಶವಂಚಿತರ ವಿಮೋಚಕನಂತೆ ಸಹಜವಾಗಿಯೇ ಕಾಣುತ್ತೇವೆ. ಆದರೆ ನಮ್ಮ ಸುತ್ತಲಿನ ಸಮಾಜದಲ್ಲಿ ಅಂತರ್ಗತವಾಗಿರುವ ಪ್ರಾಚೀನ ನಡವಳಿಕೆಗಳನ್ನು, ಬೇರೂರಿರುವ ತಾರತಮ್ಯದ ನೆಲೆಗಳನ್ನು ಹಾಗೂ ನಡೆದುಕೊಂಡು ಬಂದಿರುವ ಶೋಷಣೆಯ ಮಾರ್ಗಗಳನ್ನು ತೊಡೆದುಹಾಕುವಲ್ಲಿ ಯಾವ ರೀತಿಯ ಪ್ರಯತ್ನಗಳನ್ನು ಮಾಡಿದ್ದೇವೆ ? ದಲಿತ ಸಂಘಟನೆಗಳನ್ನು ಪ್ರತಿನಿಧಿಸುವ, ವಿಮೋಚನಾ ಹೋರಾಟಗಳು ಮತ್ತು ಮಾನವ ಹಕ್ಕುಗಳ ಹೋರಾಟದಲ್ಲಿ ನಿರತರಾಗಿರುವ, ಸಮಾನತೆಗಾಗಿ ಶ್ರಮಿಸುವ ಪ್ರತಿಯೊಬ್ಬ ಕಾರ್ಯಕರ್ತರಲ್ಲೂ ಈ ಜಿಜ್ಞಾಸೆ ಮೂಡಲೇಬೇಕಿದೆ. ಏಕೆಂದರೆ ನಮ್ಮ ಸುತ್ತಲೂ ನಡೆಯುತ್ತಿರುವ ಮಹಿಳಾ ದೌರ್ಜನ್ಯಗಳಿಗೆ, ಅತ್ಯಾಚಾರಗಳಿಗೆ, ಸಾಮಾಜಿಕ ಬಹಿಷ್ಕಾರಗಳಿಗೆ ಹಾಗೂ ಅಸ್ಪೃಶ್ಯತೆಯಂತಹ ಅಮಾನುಷ ನಡವಳಿಕೆಗಳಿಗೆ ವಿಶಾಲ ಸಮಾಜ ಮೌನ ವಹಿಸಿದೆ. ಸಾಂಘಿಕ ನೆಲೆಯಲ್ಲಿ ವ್ಯಕ್ತವಾಗುವ ಪ್ರತಿರೋಧ, ಪ್ರತಿಭಟನೆ, ಹಕ್ಕೊತ್ತಾಯಗಳನ್ನು ಹೊರತುಪಡಿಸಿದರೆ, ಸಂವಿಧಾನದ ಫಲಾನುಭವಿಗಳ ನಡುವೆಯೂ ಈ ವಿಚಾರಗಳಲ್ಲಿ ನಿಷ್ಕ್ರಿಯತೆ ಎದ್ದು ಕಾಣುವಂತಿದೆ. ಮಧ್ಯಮ ಹಾಗೂ ಮೇಲ್‌ ಮಧ್ಯಮ ಹಿತವಲಯದ ದಲಿತ ಸಮುದಾಯದ ನಡುವೆ‌ ಈ ಅನಾಚಾರಗಳ ವಿರುದ್ಧ ಅತಿಕ್ಷೀಣ ಧ್ವನಿಯೂ ಕೇಳದಿರುವುದು ಶತಮಾನದ ದುರಂತ ಎನ್ನಬಹುದು.

 

ನವ ಉದಾರವಾದ ಮತ್ತು ಬಂಡವಾಳಶಾಹಿ ಆರ್ಥಿಕತೆಯ ಫಲಾನುಭವಿಯಾದ ಸಮಾಜದ ಒಂದು ವರ್ಗ ಈ ಬೌದ್ಧಿಕ ನಿಷ್ಕ್ರಿಯತೆಯನ್ನು ಸಾತ್ವಿಕ ನಿರ್ಲಿಪ್ತತೆ ಎಂದು ಪರಿಭಾವಿಸಿ ತನ್ನ ಹಿತರಕ್ಷಣೆಯ ಗೋಡೆಗಳನ್ನು ಮತ್ತಷ್ಟು ಎತ್ತರಕ್ಕೆ ಏರಿಸಿರುವುದರಿಂದಲೇ ಗೋಡೆಯಿಂದಾಚೆಗೆ ನಡೆಯುತ್ತಿರುವ ಗೌರವ ಹತ್ಯೆಯ ಹೆಸರಿನ ಮರ್ಯಾದಾಹೀನ ಕೊಲೆಗಳು, ಜಾತಿ ದೌರ್ಜನ್ಯಗಳು, ಅಸ್ಪೃಶ್ಯತೆಯ ಆಚರಣೆ , ಜಾತಿ ಚೌಕಟ್ಟುಗಳನ್ನು ರಕ್ಷಿಸುವ ಸಾಮಾಜಿಕ ಬಹಿಷ್ಕಾರಗಳು ಇದಾವುದೂ ನಮಗೆ ಗೋಚರಿಸುತ್ತಿಲ್ಲ. ಹಾಗೆಯೇ ಶೋಷಿತ ಸಮುದಾಯಗಳನ್ನು ಕಾಡುತ್ತಿರುವ ಕಡುಬಡತನ, ದಾರಿದ್ರ್ಯ, ಹಸಿವೆ, ವಸತಿಹೀನತೆ, ಸಾಮಾಜಿಕ ಅಭದ್ರತೆ, ಆರ್ಥಿಕ ಅನಿಶ್ಚಿತತೆ ಮತ್ತು ನಿರುದ್ಯೋಗದ ಬವಣೆಯೂ ನಮಗೆ ಕಾಣುತ್ತಿಲ್ಲ. ತಾತ್ವಿಕವಾಗಿ ಅಂಬೇಡ್ಕರ್‌ವಾದ ಮತ್ತು ಮನುವಾದವನ್ನು ಜಾತಿ ಶ್ರೇಣೀಕರಣ ನೆಲೆಯಲ್ಲಿ ಮುಖಾಮುಖಿಯಾಗಿಸುತ್ತಿರುವ ನಮಗೆ ಇವೆರಡರ ನಡುವೆ ಸದ್ದಿಲ್ಲದೆ ನುಸುಳಿಹೋಗುತ್ತಿರುವ ಕಾರ್ಪೋರೇಟ್‌ ಮಾರುಕಟ್ಟೆ ಹಾಗೂ ಬಂಡವಾಳದ ಶಕ್ತಿಗಳು ಗೋಚರಿಸುತ್ತಲೇ ಇಲ್ಲ.

 

ವಿಸ್ತರಿಸಬೇಕಾದ ಅಂಬೇಡ್ಕರ್‌ ಚಿಂತನೆ

 

ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಅಂಬೇಡ್ಕರ್‌ ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ಅರ್ಥಮಾಡಿಕೊಂಡಿರುವ ವಿಧಾನದಲ್ಲೇ ಭಾರತೀಯ ಸಮಾಜದಲ್ಲಿ ಶತಮಾನಗಳಿಂದ ಬೇರೂರಿದ್ದ ಊಳಿಗಮಾನ್ಯ ಧೋರಣೆ ಮತ್ತು ಅದರಿಂದ ಉಗಮಿಸುವ ಆರ್ಥಿಕ ಅಸಮಾನತೆಯ ನೆಲೆಗಳನ್ನೂ ಗುರುತಿಸಿದ್ದರು. ಭಾರತೀಯ ಸಮಾಜದ ವರ್ಗ ನೆಲೆಗಳನ್ನು ಜಾತಿಯ ಚೌಕಟ್ಟಿನೊಳಗಿಟ್ಟು ಅಧ್ಯಯನ ಮಾಡಿದ್ದರಿಂದಲೇ ಅಂಬೇಡ್ಕರ್‌ ಅವರಿಗೆ ಭಾರತದ ಜಾತಿಗಳು ಆವರಿಸಲ್ಪಟ್ಟ ವರ್ಗಗಳು (Enclosed Classes) ನಂತೆ ಕಂಡಿದ್ದವು. ಕಮ್ಯುನಿಸಂ ಕುರಿತು ಅಂಬೇಡ್ಕರ್‌ ಅವರಿಗಿದ್ದ ಕೆಲವು ತಾತ್ವಿಕ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಅವರು, ಕಮ್ಯುನಿಸ್ಟ್‌ ಸಿದ್ಧಾಂತ ಪ್ರತಿಪಾದಿಸುವ ಕಾರ್ಮಿಕರ ಏಳಿಗೆ, ವರ್ಗ ಸಮಾಜದ ಮುನ್ನಡೆ, ವರ್ಗ ತರತಮಗಳ ನಿವಾರಣೆ ಮತ್ತು ಶೋಷಣೆಯ ಎಲ್ಲ ಆಯಾಮಗಳನ್ನೂ ಭೇದಿಸುವ ತಾತ್ವಿಕ ನಿಲುಮೆಗಳನ್ನು ತಮ್ಮದೇ ಆದ ಸೈದ್ಧಾಂತಿಕ ಪರಿಭಾಷೆಯಲ್ಲಿ ವ್ಯಾಖ್ಯಾನಿಸಿದ್ದರು. ಹಾಗಾಗಿಯೇ ಕಾರ್ಮಿಕ ಕಾನೂನುಗಳನ್ನು ರೂಪಿಸುವಲ್ಲಿ ಅಂಬೇಡ್ಕರ್‌ ವಿಶೇಷ ಆಸ್ಥೆ ವಹಿಸಿದ್ದನ್ನು ಗುರುತಿಸಬಹುದು.

 

ಅಂಬೇಡ್ಕರ್‌ ಅವರ ಈ ವಿಶಾಲ ಚಿಂತನೆ ಮತ್ತು ಮುಕ್ತ ಧೋರಣೆ ವರ್ತಮಾನದ ಭಾರತಕ್ಕೆ ಅತ್ಯವಶ್ಯವಾಗಿ ಬೇಕಿದೆ. ವರ್ಗ ಸಂಘರ್ಷದ ನೆಲೆಗಳೂ ದುರ್ಬಲವಾಗುತ್ತಿರುವ ಈ ಸಂದರ್ಭದಲ್ಲೇ, ಬಂಡವಾಳಶಾಹಿ ಮಾರುಕಟ್ಟೆಯು ದೇಶದ ನೆಲ, ಜಲ, ಅರಣ್ಯ  ಹಾಗೂ ನೈಸರ್ಗಿಕ ಸಂಪನ್ಮೂಲಗಳ ಮೇಲೆ ತನ್ನ ಒಡೆತನ ಸಾಧಿಸಲು ವ್ಯವಸ್ಥಿತ ಜಾಲಗಳನ್ನು ನಿರ್ಮಿಸಿದೆ. ಸಂವಿಧಾನ ನೀಡಿರುವ ಕಾನೂನಾತ್ಮಕ ಸವಲತ್ತು, ಸೌಲಭ್ಯಗಳ ಫಲಾನುಭವಿಗಳಾದ ಒಂದು ಬೃಹತ್‌ ಸಮಾಜ ಇಂದು ಈ ಬಂಡವಾಳಶಾಹಿ ಆರ್ಥಿಕತೆಯನ್ನು ಒಪ್ಪಿಕೊಂಡು ಮುನ್ನಡೆಯುತ್ತಿದೆ. ಮೇಲ್ನೋಟಕ್ಕೆ ಕಾಣುವ ಈ ಸಮಾಜವೇ ಐದು ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯತ್ತ ಧಾವಿಸುತ್ತಿರುವ ಭಾರತವನ್ನೂ ಪ್ರತಿನಿಧಿಸುತ್ತದೆ. ಮತ್ತೊಂದೆಡೆ ಜಾತಿ ವ್ಯವಸ್ಥೆಯ ಕರಾಳ ಬೇರುಗಳೂ, ಜಾತಿ ಶ್ರೇಷ್ಠತೆಯಿಂದಲೇ ಉದ್ಭವಿಸುವ ಅಸ್ಪೃಶ್ಯತೆಯಂತಹ ಹೀನಾಚರಣೆಗಳು, ಪಿತೃಪ್ರಧಾನತೆಯಿಂದ ಉಗಮಿಸುವ ಮಹಿಳಾ ದೌರ್ಜನ್ಯಗಳು ಇವೆಲ್ಲವೂ  ಸಹ ಅಲ್ಲಲ್ಲಿ ತಮ್ಮ ಅಸ್ತಿತ್ವವನ್ನು ನಿರೂಪಿಸುತ್ತಲೇ ಇವೆ.

 

ಈ ಸಿಕ್ಕುಗಳ ನಡುವೆಯೇ ಭಾರತ ಇಂದು ಡಾ. ಬಿ.ಆರ್‌. ಅಂಬೇಡ್ಕರ್‌ ಅವರನ್ನು ಮತ್ತೆ ಮತ್ತೆ ನೆನೆಯುತ್ತಿದೆ. ಏಪ್ರಿಲ್‌ 14ರಂದು 133ನೆಯ ಜನ್ಮದಿನಾಚರಣೆಯ ಸಂದರ್ಭದಲ್ಲಿ ಅಂಬೇಡ್ಕರರನ್ನು ಸ್ಮರಿಸುತ್ತಾ ಸಂಭ್ರಮಿಸುವ ಪ್ರತಿಯೊಂದು ಮನಸ್ಸಿನೊಳಗೂ ಆತ್ಮಜಾಗೃತಿಯ ಒಂದು ಕ್ಷೀಣ ಧ್ವನಿಯಾದರೂ ಸುಳಿಯುವಂತಾದರೆ, ನಾವು ಅಂಬೇಡ್ಕರ್‌ ಸೂಚಿಸುವಂತಹ ತೀಕ್ಷ್ಣ ಒಳನೋಟಗಳನ್ನು ಮತ್ತಷ್ಟು ಮೊನಚುಗೊಳಿಸಬೇಕಾಗುತ್ತದೆ.

ಈ ಭರವಸೆಯನ್ನಿಟ್ಟುಕೊಂಡೇ  ಜೈ ಭೀಮ್‌ ಘೋಷಣೆಯೊಂದಿಗೆ ಅಂಬೇಡ್ಕರರನ್ನು ನೆನೆಯೋಣ.

-೦-೦-೦-೦-