ಮಣ್ಣು ಕಥನ- ಕೃಷಿ ಸಾಹಿತ್ಯಕ್ಕೆ ಅನನ್ಯ ಕೊಡುಗೆ

Odina preetigagi

ಮಣ್ಣು ಕಥನ- ಕೃಷಿ ಸಾಹಿತ್ಯಕ್ಕೆ ಅನನ್ಯ ಕೊಡುಗೆ

ಓದಿನ ಪ್ರೀತಿಗಾಗಿ

ಮಲ್ಲಿಕಾರ್ಜುನ ಹೊಸಪಾಳ್ಯ


 

    ಹಿರಿಯರಾದ ಕೃಷ್ಣಮೂರ್ತಿ ಬಿಳಿಗೆರೆಯವರ ಈ ಪುಸ್ತಕ ಓದು ಮುಗಿಸಿದಾಗ ಒಂದು ಸಮಗ್ರ ಕೃಷಿ ತೋಟವನ್ನು ಅಡ್ಡಾಡಿ ಬಂದ ದಟ್ಟ ಅನುಭವವಾಗುತ್ತದೆ. ತೋಟ ಹೊಕ್ಕಾಗ ಕಣ್ಣಿಗೆ ಬೀಳುವ ಜೀವಂತ ಬೇಲಿ, ನೀರಿನ ಹೊಂಡ, ಹಣ್ಣು-ಹಂಪಲು, ಹಕ್ಕಿ-ಪಕ್ಷಿಗಳು, ಸೊಪ್ಪು-ಸೆದೆ, ಹುಲ್ಲುಗಳು, ಗೊಬ್ಬರದ ಗುಡ್ಡೆ, ಅಡಿಕೆ-ತೆಂಗುಗಳಂತೆಯೇ ಈ ಪುಸ್ತಕದಲ್ಲಿಯೂ ವೈವಿಧ್ಯಮಯ ಬರಹಗಳಿವೆ. 

  ಪುಸ್ತಕದಲ್ಲಿ ಆರಂಭದ 50-60 ಪುಟ ನೀರಿಗೆ ಸಂಬಂಧಿಸಿದ ಲೇಖನಗಳಿವೆ. ಇಲ್ಲಿ ನೀರಿನ ಚರಿತ್ರೆ, ನೀರ ಸಂಕಷ್ಟದ ಹೆಜ್ಜೆಗಳು, ತಲಪರಿಗೆ ವಿವರ, ಕಾವೇರಿಯ ದಾರುಣ ಕತೆಗಳು ದಾಖಲಾಗಿವೆ. ಮಳೆಯ ಏರಿಳಿತಗಳ ವಿವರಗಳೂ ಹಾಗೂ ಅದರಿಂದಾಗುತ್ತಿರುವ ಸಂಕಷ್ಟಗಳೂ ಈ ಬರಹಗಳಲ್ಲಿ ಕಣ್ಣಿಗೆ ರಾಚುತ್ತವೆ. “ಈಗಿಂದೀಗಲೇ ಒಂದಾಗಿ ತಮ್ಮ ಊರಲ್ಲೊಂದು “ನೀರಿನ ಕೂಟ” ರಚಿಸಿಕೊಂಡು ಹಳ್ಳದ ಹಾದಿ ಬಿಡಿಸುವ ಕೆಲಸ ಆರಂಭಿಸುವುದು ಅಗತ್ಯ” ಎಂದು ನೀರಿನ ಸಂಕಷ್ಟದಿಂದ ಪಾರಾಗುವ ಸರಳ ಮಾರ್ಗವನ್ನೂ ಬಿಳಿಗೆರೆಯವರು ನೀಡುತ್ತಾರೆ. 

   ‘ನಗರವಾಸಿಗರಿಗೊಂದು ನೀರ ಪತ್ರ’ ಮನ ಕಲಕುವ ಲೇಖನ. ನೂರಾರು ಮೈಲಿ ದೂರದ ನೀರಿಗೆ ಕಾಯುತ್ತಾ ಕೂರುವ ಬದಲು ಮಾಳಿಗೆ ಮೇಲೆ ಬೀಳುವ ಮಳೆನೀರನ್ನು ಗಮನಿಸಿ ಎಂಬ ಆಗ್ರಹ ಇಲ್ಲಿದೆ. “ಈ ಮಳೆ ನೀರಲ್ಲಿ ಮಿಂಚಿನ ರುಚಿಯಿದೆ. ಸೂರ್ಯನ ಬೆಳಕಿದೆ, ಸಿಹಿಯಿದೆ. ಗಾಳಿಯ ಜೀವವಿದೆ. ಆಕಾಶದ ಪ್ರೀತಿಯ ಹಾಡು ಇದರೊಳಗೆ ಬೆರೆತಿದೆ. ಹಳಸಿದ ನೀರು ಬೇಡವೆಂದಾದರೆ ಮಳೆ ನೀರು ಸಂಗ್ರಹಿಸಿ ಕುಡಿಯುವುದೊಂದೆ ಮಾರ್ಗ, ಅದು ಮಳೆ ನೀರ ಮಾರ್ಗ”. ಈ ವಿವರಣೆ ಓದುತ್ತಿದ್ದರೆ ಮಳೆ ನೀರನ್ನು ಬೊಗಸೆಯಲ್ಲಿ ಹಿಡಿದು ಕುಡಿಯಬೇಕೆಂಬ ಹಂಬಲವಾಗುವುದು ಸುಳ್ಳಲ್ಲ.

  ರೈತರದು ಆತ್ಮಹತ್ಯೆಯಲ್ಲ ಹತ್ಯೆ ಮತ್ತೊಂದು ವಿಶಿಷ್ಟ ಬರಹ. ಇಡೀ ಕೃಷಿ ರಂಗಕ್ಕೆ ಕನ್ನಡಿ ಹಿಡಿಯುತ್ತದೆ. ರಾಗಿ, ಭತ್ತ, ಕಾಳು-ಕಡ್ಡಿ ಬೆಳೆಯುತ್ತಿದ್ದ ಭೂಮಿಗಳು ಬೆಳಕರಿಯುವಷ್ಟರಲ್ಲಿ ಲೇಔಟುಗಳಾಗಿ, ರೋಡುಗಳಾಗಿ, ಬೈಪಾಸುಗಳಾಗಿ, ಕೈಗಾರಿಕೆಗಳಾಗಿ ಪರಿವರ್ತನೆಯಾಗುತ್ತಿರುವ ಈ ಹೊತ್ತಿನಲ್ಲಿ ಕೃಷಿಯೂ, ಕೃಷಿಕರೂ ಸಾಗುತ್ತಿರುವ ಅವಸಾನದ ಚಿತ್ರಣ ಕಟ್ಟಿಕೊಡುತ್ತಾರೆ. “ ಮಹಾಯುದ್ಧ, ಮಹಾವಿಜಯ, ಅಶ್ವಮೇಧ, ರಾಜಸೂಯ, ತುಲಾಭಾರ, ಆನೆಯ ಮೇಲೆ ಅಂಬಾರಿ, ದರ್ಬಾರು ಸಂಗೀತ, ಕಾವ್ಯ, ವಾಯುವಿಹಾರ, ತೀರ್ಥಯಾತ್ರೆ, ವಿಶ್ವಪ್ರವಾಸ, ವಿಮಾನ ಯಾನ, ಸ್ಟಾರ್ ಹೋಟೇಲ್ ಕಾರುಬಾರು, ರೆಸಾರ್ಟ್ ಮುಂತಾದ ಅತಿರೇಕಗಳನ್ನು ಕನಸಿನಲ್ಲೂ ಇಷ್ಟಪಡದ ರೈತರಿಗೆ ಇಂದಿಗೂ ಯಾಕೆ ಈನಾಡಿ ಕಷ್ಟಗಳು ” ಎಂದು ಪ್ರಶ್ನಿಸುತ್ತಾರೆ. “ ಸಾಂಪ್ರದಾಯಿಕ ಬೆಳೆಗಳನ್ನು ಸಾಂಪ್ರದಾಯಿಕ ರೀತಿಯಲ್ಲಿ ಬೆಳೆದವರು, ವಾಣಿಜ್ಯ ಬೆಳೆಗಳನ್ನು ವೈಜ್ಞಾನಿಕ ಪದ್ಧತಿಯಲ್ಲಿ ಬೆಳೆದವರು ಎರಡೂ ಬಗೆಯ ರೈತರೂ ಮಗ್ಗ ಮಲಗಿದ್ದಾರೆ. ಸಹಜ, ಸಾವಯವ, ಜೈವಿಕ, ನೈಸರ್ಗಿಕ ಕೃಷಿ ಮಾದರಿಗಳೂ ಈಗ ಕೇವಲ ಶಬ್ಧಗಳಾಗಿ ಕೇಳಿಸುತ್ತಿವೆ. ಆದ್ದರಿಂದ ಇದು ಬೆಳೆಪದ್ಧತಿ, ವಿಧಾನಗಳ ಸಮಸ್ಯೆ ಅಲ್ಲವೆ ಅಲ್ಲ ಎಂಬುದು ಈಗೀಗ ತಿಳಿಯಹತ್ತಿದೆ ” ಎಂಬ ಮಾತುಗಳನ್ನು ಓದುತ್ತಿದ್ದರೆ ಮಂಕು ಕವಿದಂತಾಗುತ್ತದೆ. ಮುಂಬರುವ ದಿನಗಳ ಬಗ್ಗೆ ಭಯವೆನಿಸುತ್ತದೆ. 


ಇದಕ್ಕೆ ಉತ್ತರವಾಗಿ ಬೆವರು ಶಾಸ್ತ್ರ ಆಧಾರಿತ ಕಾನೂನುಗಳು ಬರಬೇಕೆಂಬ ಆಗ್ರಹವೂ ಇಲ್ಲಿದೆ, ಅದರೊಟ್ಟಿಗೇ 26 ಅಂಶಗಳ ಪಟ್ಟಿಯನ್ನೂ ನೀಡುತ್ತಾರೆ. ವ್ಯಕ್ತಿಗಳೂ, ಸಮುದಾಯಗಳೂ, ಆಡಳಿತಗಾರರೂ ಗಮನಿಸಬೇಕಷ್ಟೇ. ಜೊತೆಗೆ ನಿಜ ಶ್ರೀಮಂತಿಕೆಯ ಹೊಸ ಮಾನದಂಡಗಳ ಪ್ರಸ್ಥಾಪವೂ ಒಂದು ಲೇಖನದಲ್ಲಿದೆ. ದೈಹಿಕ ಶ್ರಮ, ಬೆವರು ಮತ್ತು ತಂಗಾಳಿಯ ಸಂಧಾನ, ಹಕ್ಕಿ ಹಾಗೂ ಹಸಿರು ವೀಕ್ಷಣೆ, ಸೈಕಲ್ ಸವಾರಿ, ಕಾಲ್ನಡಿಗೆ, ಆಟಕ್ಕೆ, ಹಾಡಿಗೆ, ಊಟಕ್ಕೆ ಸಮಯ . . . ಮುಂತಾದವೇ ಆ ಮಾನದಂಡಗಳು. 


    ಇದು ಹತ್ತು-ಹಲವು ಕೃಷಿಕರ ಚರಿತ್ರೆಯ ದಾಖಲೆಯೂ ಆಗಿರುವುದು ಗಮನಾರ್ಹ. ಇಲ್ಲಿ ಪ್ರಸ್ಥಾಪವಾಗಿರುವ ಎಲ್ಲರೂ ತುಮಕೂರು ಜಿಲ್ಲೆಯವರೇ. ಮಾರಗೊಂಡನಹಳ್ಳಿಯ ಸದಾಶಿವಪ್ಪ, ಶಿವನಂಜಯ್ಯ ಬಾಳೆಕಾಯಿ, ಬಿ.ಜೆ. ಕುಮಾರಸ್ವಾಮಿ, ತೋವಿನಕೆರೆಯ ಪದ್ಮರಾಜ್, ಒಂಟಿ ಕಲ್ಲಟ್ಟಿ ತಿಮ್ಮಯ್ಯ, ಚಂದ್ರಶೇಖರ್-ಪಂಕಜ, ತಿಪ್ಪೂರಿನ ಗುರುಲಿಂಗಪ್ಪ, ತೊರೆ ಮಾವಿನಹಳ್ಳಿಯ ಡಾ. ನಂಜಪ್ಪ, ಓದೇಕಾರ್ ನೀಲಕಂಠಮೂರ್ತಿ, ಅಮ್ಮನಘಟ್ಟದ ಶಂಕರಪ್ಪ, ಬಸಿ ಕಾಲುವೆ ಬಸವಲಿಂಗಪ್ಪ, ಯಗಚಿಹಳ್ಳಿ ರಾಮಕೃಷ್ಣಪ್ಪ, ಕೆರೆಗೋಡಿಯ ಅಶ್ವಿನಿ ಮುಂತಾದವರ ಕೃಷಿ ಅನುಭವಗಳು, ಸೋಲು-ಗೆಲುವುಗಳು, ಪುಟ್ಟ ಸಂದರ್ಶನಗಳು, ಅವರು ಅನುಸರಿಸುವ ವಿಶಿಷ್ಟ ಬೇಸಾಯ ವಿಧಾನಗಳು, ಅವರು ಮಾಡುತ್ತಿರುವ ತಪುö್ಪಗಳೂ ದಾಖಲಾಗಿವೆ. ಒಂದೇ ಜಿಲ್ಲೆಯವರಾದರೂ ಜಗತ್ತಿನ ಎಲ್ಲ ಕೃಷಿಕರನ್ನೂ ಪ್ರತಿನಿಧಿಸುವ ಹೆಜ್ಜೆಗುರುತುಗಳು ಇವರದ್ದಾಗಿದೆ. ಬಿಳಿಗೆರೆಯವರು ಈ ತೋಟಗಳಿಗೆ ಹತ್ತಾರು ಸಲ ಸುತ್ತಾಡಿ, ಅವರ ಒಳ-ಹೊರಗನ್ನು ಬಲ್ಲ ಸಲುಗೆಯಿಂದಾಗಿ ಈ ಬರಹಗಳಲ್ಲಿ ವಿಶಿಷ್ಟ ಆತ್ಮೀಯತೆ ಎದ್ದು ಕಾಣುತ್ತದೆ. 

ನಿತ್ಯದ ಬಳಕೆಯಿಂದ ಕಣ್ಮರೆಯಾಗುತ್ತಿರುವ ದೇಸಿ ಕನ್ನಡ ನುಡಿಗಟ್ಟುಗಳ ರಾಶಿಯನ್ನೇ ಈ ಪುಸ್ತಕದಲ್ಲಿ ಕಾಣಬಹುದು. ಹಳ್ಳಿಗಳಲ್ಲಿ ಮಾಡುವ ಥರಾಂತರ ಅಡುಗೆಗಳ ಪ್ರಸ್ಥಾಪವನ್ನು ಬಿಳಿಗೆರೆಯವರು ಕೊಟ್ಟಿದ್ದಾರೆ. ಅದರಲ್ಲಿ ಸಿಹಿ ಪದಾರ್ಥಗಳ ಪಟ್ಟಿ ಗಮನಿಸಿ;


“ಸೀಪರು (ಸಿಹಿಗಳು)"


ಗಟ್ಟಕ್ಕಿ ಪಾಯಸ, ಹೆಸರುಬೇಳೆ ಪಾಯಸ, ರವೆ ಪಾಯಸ, ಗೋಧಿ ಪಾಯಸ, ರಾಗಿ ಕೀರು, ಕಡ್ಲೆಬೇಳೆ ಪಾಯಸ, ಹಾಲು ಕೀರು, ಕಿಚಡಿ, ಒಡ್ರಾಗಿ ಶಾವಿಗೆ, ಅಕ್ಕಿ ಶಾವಿಗೆ, ತೊಗರಿಬೇಳೆ ಒಬ್ಬಟ್ಟು, ಕಡ್ಲೆಬೇಳೆ ಒಬ್ಬಟ್ಟು, ಕಾಯಿ ಒಬ್ಬಟ್ಟು, ಎಳ್ಳು ಒಬ್ಬಟ್ಟು, ಹುರುಳಿಕಾಳು ಒಬ್ಬಟ್ಟು, ಗೆಣಸು ಒಬ್ಬಟ್ಟು, ಹುರುಳಿ ಕಾಯಿಬೆಲ್ಲ, ಅಕ್ಕಿಕಾಯಿ ಬೆಲ್ಲ, ಅವಲಕ್ಕಿ ಕಾಯಿಬೆಲ್ಲ, ಕಾಯಿ ಮಿಠಾಯಿ, ಕಡ್ಲೆ ಮಿಠಾಯಿ, ಕಡ್ಲೆಕಾಯಿ ಮಿಠಾಯಿ, ಪುರಿಉಂಡೆ, ರವೆ ಉಂಡೆ, ಕಡ್ಲೆತಮ್ಟ, ಅಕ್ಕಿತಮ್ಟ. ಎಳ್ಳುತಮ್ಟ, ಹಾಲುಂಡಿಗೆ, ಕುಂಬಳಕಾಯಿ ಸೀ ಹಲ್ವ , ಹುರುಳಿತಮ್ಟ, ಹೆಸರುಕಾಳು ತಮ್ಟ,

    ಹೊಸ ತಲೆಮಾರಿನ ಮಾತುಗಳಲ್ಲಿ ಎಲ್ಲಾ ಸಿಹಿತಿಂಡಿಗಳೂ ‘ಡೆಸರ್ಟು’ ಗಳಾಗಿಬಿಟ್ಟಿವೆ. ಹಂಗಿರುವಾಗ ಈ ನುಡಿಗಟ್ಟುಗಳನ್ನು ಆಡುವವವರು ಯಾರು, ಅವು ತಲೆಮಾರಿನಿಂದ ತಲೆಮಾರಿಗೆ ಕೈಬದಲಾಗುವುದು ಹೇಗೆ. ಇಲ್ಲಿನ ಪ್ರತಿ ಪುಟದಲ್ಲಿಯೂ ವಿಸ್ಮೃತಿಗೆ ಸರಿಯುತ್ತಿವ ಇಂತಹಾ ಪದ ವೈವಿಧ್ಯವಿದೆ. ಹಾಗೆಂದು ಅವುಗಳನ್ನು ಬಳಸಲೇಬೇಕೆಂಬ ಹಂಬಲದಿಂದ ಬಲವಂತವಾಗಿ ತುರುಕಿರುವುದಲ್ಲ. ಸಹಜವಾಗಿ ಬರುತ್ತವೆ. ಅದು ಬಿಳಿಗೆರೆಯವರ ಬರಹದ ದೊಡ್ಡ ಶಕ್ತಿ ಹಾಗೂ ವಿಶಿಷ್ಟತೆ.  ಒಂದು ವಾಕ್ಯವನ್ನು ನೋಡಿ;  “ ಮಳೆಗಾಲದಲ್ಲಿ ತಿಪ್ಪೆಗಳೂ ತರಕಾರಿ ತೋಟಗಳಾಗುತ್ತಿದ್ದವು. ಅದು ಹೇಗೋ ನಾಲ್ಕಾರು ಕುಂಬಳ ಬೀಜಗಳು ಅವಿತು ಉಳಿದು ಮೊಳತು ಮೋಪಾಗಿ ಅಲ್ಲೆಲ್ಲಾ ಆವರಿಸಿ ಹಬ್ಬಿ ಬಳ್ಳಿಯ ಹಬ್ಬ ನೆರವೇರುತ್ತಿತ್ತು. ಗೆಣ್ಣುಗೆಣ್ಣೆಗೂ ಕಾಯಿಗಳು ಒಡಮೂಡುತ್ತಿದ್ದವು .” 

   ಒಂದು ಹಸಿರು ಕಕ್ಕುವ ಕುಂಬಳ ಬಳ್ಳಿಯನ್ನು ಕಂಡಾಗ ನಮ್ಮ ಮನಸ್ಸಿಗೆ ಹೇಗೆ ಉಲ್ಲಾಸವಾಗುತ್ತದೆಯೋ, ಮೇಲಿನ ವಿವರಣೆಯನ್ನು ಓದಿದಾಗಲೂ ಅಷ್ಟೇ ಉಲ್ಲಾಸವಾಗುತ್ತದೆ. ನಾವು ಆ ಪರಿಸರದಲ್ಲಿಯೇ ಇದ್ದೇವೆ ಎಂಬ ಭಾವ ಒಡಮೂಡುತ್ತದೆ. 

    ಪುಟ್ಟ ಹಿತ್ತಲಿನ ಬಗ್ಗೆ ಎಷ್ಟು ಸೊಗಸಾಗಿ ಬರೆಯುತ್ತಾರೆಂದರೆ; “ ಮನುಷ್ಯರಿಗಿಂತಾ ಮನೆಯನ್ನು ಸುತ್ತುವರಿದಿರುತ್ತಿದ್ದ ಈ ಗಿಡಗಳೇ ಎದ್ದು ಕಾಣುತ್ತಿದ್ದವು. ಅವುಗಳ ಮಾತೇ ದೊಡ್ಡದಾಗಿ ಕೇಳುತ್ತಿತ್ತು. ಹಾಗೆಂದು ಈ ಹಿತ್ತಲು ಕೇಳಿದ್ದು ಕೊಡುತ್ತಿತ್ತು ಎಂದಲ್ಲ, ಹಳ್ಳಿಯ ಜನರ ಎಲ್ಲಾ ಭಂಗಗಳನ್ನು ನೀಗುತ್ತಿತ್ತು ಎಂದೂ ಅಲ್ಲ. ಹಸಿರು ದೀಪಗಳು ಮನೆಯ ಮುಂದೆ ಉರಿಯುತ್ತಿದ್ದವು. ಮಕ್ಕಳಿಗೆ ಕಣ್ಣಳತೆಯಲ್ಲೇ ಹಕ್ಕಿಪಕ್ಷಿಗಳ ಸ್ನೇಹ ಸಿಗುತ್ತಿತ್ತು. ಮನೆ, ತಾನೂ ಏನೋ ಉತ್ಪಾದಿಸಿ, ಎಂಥದೋ ಸುಖ ಅನುಭವಿಸುತ್ತಿತ್ತು, ಹೀಗೆ ಮನೆಯೆಂಬುದು ಈ ಹಿತ್ತಲ ಪ್ರಭಾವಳಿಯಲ್ಲಿ ಆಸರೆ ಪಡೆದು ಸೆರೆಮನೆಯಾಗಿಬಿಡಬಹುದಾದ ಅಪಾಯದಿಂದ ಪಾರಾಗುತ್ತಿತ್ತು  ”

   ನಾಲ್ಕೇ ಸಾಲುಗಳು ಹಾಗೂ ಐವತ್ತೇ ಪದಗಳಲ್ಲಿ ಒಂದು ಹಿತ್ತಿಲಿನ ಇತಿ-ಮಿತಿ, ಅಗತ್ಯ, ಅನಿವಾರ್ಯಗಳೆಲ್ಲವನ್ನೂ ಎಷ್ಟು ಚೆಂದಾಗಿ ವಿವರಿಸುತ್ತಾರೆ ನೋಡಿ. ಪದಗಳ ದುಡಿಮೆ ಥಟ್ಟನೆ ಸೆಳೆಯುತ್ತದೆ. 

   ಇಲ್ಲಿನ ಬರಹಗಳ ಶೀರ್ಷಿಕೆಗಳೇ ಆಕರ್ಷಕ, ಒಂದೆರಡು ಉದಾಹರಣೆ ನೋಡಿ; “ಕೆಲವುö ಸಾವಯವ ತೋಟಗಳ ಒಳನೋಟಗಳು, ತಿಪ್ಪೆ ಸಾಮ್ರಾಜ್ಯ, ತರಾವರಿ ಸಾರುಗಳು, ಹುಲ್ಲಿನ ಕಾಂತಿ, ಬೆಂಕಿ ಬೊಮ್ಮರು” ಇತ್ಯಾದಿ. ಹಕ್ಕಿಗಳ ಕಥನ, ಕೋತಿ ಹಿಡಿಯುವ ಅನುಭವ ಬರಹಗಳು ಅತ್ಯುತ್ತಮ ಪ್ರಬಂಧಗಳಾಗಿ ಗಮನಸೆಳೆಯುತ್ತವೆ. 

   ಇಲ್ಲಿನ ಎಲ್ಲ ಬರಹಗಳಿಗೂ ಜನಸಾಮಾನ್ಯರೇ ಕೇಂದ್ರವಾಗಿರುವುದು ಗಮನಾರ್ಹ. ನೀರ ಚರಿತ್ರೆಯನ್ನಾಗಲಿ, ನದಿಯ ದುರಂತವಾಗಲಿ, ನವಿಲಿನ ಪುಳಕವಾಗಲೀ ಅಥವಾ ಅದರ ಹಾವಳಿಯಾಗಲೀ ಸಾಮಾನ್ಯರ ಹಾಗೂ ಕೃಷಿಕರ ದೃಷ್ಟಿಕೋನದಿಂದಲೇ  ಚಿತ್ರಿತವಾಗಿವೆ. 

   ಎರಡೂವರೆ ದಶಕಗಳಿಂದ ಕೃಷ್ಣಮೂರ್ತಿ ಬಿಳಿಗೆರೆಯರೊಂದಿಗೆ ನನ್ನ ಒಡನಾಟವಿದೆ. ಬೀಜ ಯಾತ್ರೆಯಲ್ಲಿ, ಸಿರಿಸಮೃದ್ಧಿ ಸಭೆಗಳಲ್ಲಿ, ತೋಟದ ಓಡಾಟಗಳಲ್ಲಿ, ಹಾಡುಗಾರಿಕೆಯಲ್ಲಿ ಜತೆಗಿದ್ದೇವೆ. ಎಳೆತಲೆಮಾರುಗಳಿಗೆ ಪಾಠ, ಕೃಷಿ ಮತ್ತು ಸಾಹಿತ್ಯವನ್ನು ಒಂದುಗೂಡಿಸಿ ಕೊಂಡೊಯ್ಯುವ ಅವರ ಕ್ರಿಯಾಶೀಲತೆ, ಲವಲವಿಕೆ ಹಾಗೂ ಬದುಕಿನ ಪ್ರೀತಿ ನನಗೆ ಅಚ್ಚು-ಮೆಚ್ಚು. 

   ನನಗೆ ಒಂದು ಸಮಗ್ರ ತೋಟ ಸುತ್ತಾಡಿದ ಅನುಭವ ಕೊಟ್ಟ ಈ ಪುಸ್ತಕವು ನಿಮಗೂ ಹಾಗೇ ಅನ್ನಿಸುವುದರಲ್ಲಿ ಸಂಶಯವಿಲ್ಲ. ಕನ್ನಡ ಕೃಷಿ ಸಾಹಿತ್ಯಕ್ಕೆ ಒಂದು ಅನನ್ಯ ಕೊಡುಗೆ ಇದು.