ಇವುಗಳನ್ನೇ ಅಲ್ಲವೇ ಕವಿತೆ ಅನ್ನೋದು...

ಇವುಗಳನ್ನೇ ಅಲ್ಲವೇ ಕವಿತೆ ಅನ್ನೋದು...


ಗಾಂಭೀರ‍್ಯ, ಚಾಂಚಲ್ಯ, ಸಂಭ್ರಮ, ವಿಷಾಧ, ಹಿಡಿ ಹಿಡಿ ಪ್ರೀತಿ, ಚಿಟಿಕೆ ಸ್ವಾರ್ಥದ ಜೊತೆಗೆ ಅಗಾಧ ಸೂಕ್ಷ್ಮತೆಯನ್ನು ರೂಢಿಸಿಕೊಂಡ ಕವಿತೆಗಳ ಧ್ವನಿ ಕವಿಯ ವ್ಯಕ್ತಿತ್ವಕ್ಕಿಂತ ಬೇರೆಯಾಗಿ ಕಾಣುವುದಿಲ್ಲ. ಸಾರ್ವಜನಿಕವಾಗಿದ್ದುಕೊಂಡೇ ಖಾಸಾ ಖಾಸಾ ಖಾಸಗಿತನವನ್ನು ಮೈಗೂಢಿಸಿಕೊಳ್ಳುವ, ಏಕಾಂತದ ಸಂಗತಿಗಳನ್ನೂ ಸಾರ್ವತ್ರಿಕವಾಗಿಸಿ ಕಾಡುವಂತೆ ಮಾಡುವ ಮಾಯಕ ಕವಿಯ ಸ್ವತ್ತು. ಆ ಥರದ ಕವಿತ್ವ ರೂಢಿಸಿಕೊಂಡವರು ರಂಗಮ್ಮ ಹೊದೇಕಲ್.


ಬಿಡಿ ಬಿಡಿ ಸಾಲುಗಳ ಮುಖಾಂತರವೇ ಕಾವ್ಯಲೋಕದ ಬಹುತೇಕರ ಮಾತಲ್ಲಿ, ಮನಸ್ಸಲ್ಲಿ ಸದಾ ಎಡತಾಕುವ ಇವರು ಎಲ್ಲರಿಗೂ ಪರಿಚಿತರೇ, ಆದರೂ ಪ್ರಸಿದ್ಧಿಯಿಂದ ಮಾರು ದೂರ.


 
ತುಮಕೂರಿನ ಬಳಿಯ ಹೊದೇಕಲ್ ಗ್ರಾಮದ ತುಂಬು ಕುಟುಂಬದಲ್ಲಿ ತುಂಬು ಪ್ರೀತಿ ಮತ್ತು ಸಂಕಟಗಳ ನಡುವೆಯೇ ಬೆಳೆದ ಇವರಲ್ಲಿ ಕಾವ್ಯಕ್ಕೆ ಬೇಕಾದ ಸರಕಿಗೆ ಕೊರತೆಗಳೇನಿರಲಿಲ್ಲ. ಬರೆಯುವುದಕ್ಕಿಂತ ಓದುವುದನ್ನು, ಓದಿದ್ದನ್ನು ಹಂಚಿಕೊಳ್ಳುವುದನ್ನು ತೀವ್ರವಾಗಿ ಅಭ್ಯಸಿಸಿಕೊಂಡಿರುವ ರಂಗಮ್ಮ ಹೊದೇಕಲ್ ಅವರ ಬಾಯಲ್ಲಿ ಎಷ್ಟೊಂದು ಹಿರಿ ಕಿರಿಯರ ಭೇದವಿಲ್ಲದೆ ಎಷ್ಟೊಂದು ಕವಿ/ಕವಯಿತ್ರಿಯರ ಸಾಲುಗಳು ಸದಾ ಸರಾಗವಾಗಿ ಹರಿದಾಡುತ್ತಿರುತ್ತವೆ. ತಮ್ಮದೇ ಒಂದು ಮಾನವೀಯ ಬಳಗವನ್ನು ಕಟ್ಟಿಕೊಂಡು ಸದಾ ಕ್ರಿಯಾಶೀಲರಾಗಿರುವ ಇವರು ಸಾಹಿತ್ಯಿಕ, ಶೈಕ್ಷಣಿಕ, ಸಾಮಾಜಿಕ ಕೆಲಸಗಳಲ್ಲಿ ಸದಾ ನಿರತರು.



ಬರೆಯುವುದನ್ನು ಅತ್ಯಂತ ಶ್ರದ್ಧೆಯಿಂದ ಒಲಿಸಿಕೊಂಡು ತಮ್ಮ ಅದ್ಭುತ ಬರವಣಿಗೆಯ ಶೈಲಿಯ ’ರಂಗು ಫಾಂಟ್’ನಿಂದ ಹೆಚ್ಚು ಜನಪ್ರಿಯರಾಗಿದ್ದಾರೆ. ಜನಪ್ರಿಯತೆಯ ನಿರೀಕ್ಷೆಯೇ ಇಲ್ಲದೆಯೂ ಸುಮಾರು ಎರಡು ದಶಕಗಳ ಕಾಲ ತಮ್ಮ ಅದ್ಭುತ ಕೈ ಬರಹದಿಂದ ಸಾಹಿತ್ಯಿಕ ಪತ್ರಿಕೆ ’ಶೈನಾ’ವನ್ನು ರೂಪಿಸಿ ನಾಡಿನ ಖ್ಯಾತನಾಮರು, ಸಾಹಿತ್ಯಾಸಕ್ತರಿಗೆ ತಲುಪಿಸುವ ಕೆಲಸ ಮಾಡಿದ್ದಾರೆ.


ಜೆರಾಕ್ಸ್ ಘಮದ ಕಪ್ಪು ಬಿಳುಪಿನ ’ಶೈನಾ’ವನ್ನು ಮುಟ್ಟುವ, ಓದುವ ಸುಖ ಅನುಭವಿಸಿದವರಿಗೇ ಗೊತ್ತು. ಶೈನಾದ ಮೂಲಕ ಪತ್ರಸಾಹಿತ್ಯದ ರುಚಿ ಹತ್ತಿಸಿ ಒಂದೊಮ್ಮೆ ಪತ್ರ ಬರವಣಿಗೆಯ ಅಭಿಯಾನವನ್ನೇ ನಡೆಸಿದ್ದಕ್ಕೆ ಕುರುಹಾಗಿ ಈಗಲೂ ಅವರ ಬಳಿ ಎಷ್ಟೊಂದು  ಪ್ರಮುಖರ ಪತ್ರಗಳಿವೆ. ಅಕ್ಷರ ಸರಸ್ವತಿ ಅಂತಲೂ ಕರೆಯಲ್ಪಡುವ ಇವರ ಮುದ್ದಾದ ಕೈಬರಹ ಹತ್ತು ಹಲವು ಪುಸ್ತಕಗಳ ಹೆಸರು, ಆಹ್ವಾನ ಪತ್ರಿಕೆ, ಪೋಸ್ಟರ್, ಮನೆಯ ನೇಮ್‌ಪ್ಲೇಟ್‌ಗಳಲ್ಲಿ ಪ್ರೀತಿಯಿಂದ ಅಚ್ಚಾಗಿದೆ.



ಬದುಕು ಬಹಳ ದೊಡ್ಡದು ಅಂತಲೇ ಮಾತಾಡುವ ಇವರ ಕಣ್ಣಲ್ಲಿ ತುಂಬಿರುವ ಭರ್ತಿ ಭರ್ತಿ ಕನಸುಗಳಲ್ಲಿ ಸ್ವಂತಕ್ಕಂತ ಎಷ್ಟಿವೆಯೋ? ಆದರೆ ಬಹಳ ಆಸೆಯಿಂದ, ಆಸ್ಥೆಯಿಂದ ಹೆಣೆದ ಕನಸುಗಳಲ್ಲಿ ಇವರ ಶಾಲೆಯ ಮಕ್ಕಳೆಲ್ಲಾ ಹಾಯಾಗಿ ಆಡಾಡಿಕೊಂಡಿದ್ದಾರೆ. ಪಠ್ಯದ ಜೊತೆಗೆ ಜೀವನ ಪಾಠವನ್ನು ಆತ್ಮೀಯವಾಗಿ ಹೇಳಿಕೊಡುವ ರಂಗಮ್ಮ ಟೀಚರ್ ಮಕ್ಕಳೆಲ್ಲರ ಆಲ್ ಟೈಮ್ ಫೇವರೇಟ್.


ಹಾಡು, ಕೋಲಾಟ, ಕವಿತೆಯ ಓದು, ಮುದ್ದಾದ ಕೈ ಬರಹದಲ್ಲಿ ಬರೆಯುವುದು ಎಲ್ಲಕ್ಕಿಂತ ಮುಖ್ಯವಾಗಿ ಮನಸಾರೆ ನಗುವುದನ್ನು, ನೋವಿಗೆ ಮರುಗುವುದನ್ನು ಕಲಿಸಿಕೊಟ್ಟಿರುವುದಕ್ಕೆ ಸಾಕ್ಷಿ ಬೇಕಿದ್ದರೆ ಅವರ ಶಾಲೆಗೆ ತಪ್ಪದೇ ಭೇಟಿ ನೀಡಬಹುದು. ಶಾಲೆಗೆ ಬೇಕಾದ ಸಂಪನ್ಮೂಲಗಳನ್ನು ಕ್ರೋಢೀಕರಿಸುವಲ್ಲೂ ಹೆಚ್ಚು ಆಸಕ್ತಿ ವಹಿಸಿ ತಮ್ಮ ಸ್ನೇಹ ಬಳಗದಿಂದಲೇ ಶಾಲಾ ಅಭಿವೃದ್ಧಿಗೆ ತಮ್ಮದೇ ಆದ ಕಾಣಿಕೆ ನೀಡಿದ್ದಾರೆ. ಪ್ರೈಮರಿ ಶಾಲೆಯ ಮಕ್ಕಳ, ಅದೂ ಹಳ್ಳಿಯೊಂದರ ಶಾಲೆಯ ಮಕ್ಕಳ ಮಾತಿನಲ್ಲಿನ ಸೂಕ್ಷ್ಮತೆ, ಅವರ ಕೆಲಸದಲ್ಲಿನ ಕ್ರಿಯಾಶೀಲತೆಯ ಹಿಂದೆ ರಂಗಮ್ಮ ಹೊದೇಕಲ್‌ರವರ ಶ್ರಮ ಸಾಕಷ್ಟಿದೆ. ಅವರ ಚಟುವಟಿಕೆಗಳಿಗೆ ನೀರೆರೆಯುವ ಕೆಲಸವನ್ನು ನಿಯಮಿತವಾಗಿ ಮಾಡಿಕೊಂಡು ಬಂದುದರ ಪರಿಣಾಮವಾಗಿ ಅವರ ಬೆನ್ನ ಹಿಂದೆ ಇಂದು ಪುಟಾಣಿ ರಂಗಮ್ಮ ಸೈನ್ಯವೇ ಸಿದ್ಧವಾಗಿದೆ. ಅವರವರೇ ಸೇರಿಕೊಂಡು ಸಾಹಿತ್ಯ ಮತ್ತು ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡು ರಂಗಮ್ಮ ಟೀಚರ್‌ನ ಹೆಸರುಳಿಸುವ ಹಾದಿಯಲ್ಲಿದ್ದಾರೆ.



ಕಾವ್ಯ, ಕಥೆ, ಪ್ರಬಂಧ ಹೀಗೆ ಪುಸ್ತಕ ಪ್ರಕಟಣೆಯ ವಿಷಯಕ್ಕೆ ಬಂದರೆ ಬರೆದದ್ದನ್ನೆಲ್ಲಾ ಪ್ರಕಟಿಸುವ ಯಾವ ಉಮೇದು ಇಲ್ಲದೇ ಬಹಳಷ್ಟು ಬರಹಗಳು ಹಾಗಾಗೇ ಹಂಚಿಹೋಗಿವೆ. ಈ ನಡುವೆ ಅವರ "ಜೀವ ಪ್ರೀತಿಯ ಹಾಡು" ಕವನ ಸಂಕಲನ ಪ್ರಕಟಗೊಂಡು ಹಲವು ಪ್ರಶ‌ಸ್ತಿಗಳನ್ನು ದಕ್ಕಿಸಿಕೊಂಡಿತು. ಇದೇ ಸಂಕಲನದ "ಒಂದಿಷ್ಟು ಪ್ರಾರ್ಥನೆಗಳು" ಕವಿತೆ ಎಷ್ಟು ಜನರ ಬಾಯಲ್ಲಿ ನಿತ್ಯದ ಪ್ರಾರ್ಥನೆಯ ಹಾಡಾಗಿಯೂ ಗೆದ್ದಿದೆ.  ತುಮಕೂರು ವಿ.ವಿ.ಯ ಬಿ.ಎ. ಕನ್ನಡದ ಪಠ್ಯವಾಗಿಯೂ ಈ ಕವಿತೆ ಸಾಹಿತ್ಯ ವಿದ್ಯಾರ್ಥಿಗಳ ಓದಿಗೆ ಲಭ್ಯವಾಗಿರುವುದು ಖುಷಿಯ ಸಂಗತಿ.


ನಂತರದಲ್ಲಿನ ಅವರ ಬಿಡಿ ಬಿಡಿ ಕವಿತೆಗಳ ಸಾಲು "ಹೃದ್ಯ ಕಾವ್ಯ" ಅವರ ಮುದ್ದಾದ ಕೈ ಬರಹದಲ್ಲೇ ಪ್ರಕಟಗೊಂಡು ಅಪೂರ್ವ ಚಿತ್ರಪುಸ್ತಕದ ರೀತಿ ಹೆಚ್ಚು ಸದ್ದು ಮಾಡಿತು. ಪ್ರಕಟಗೊಂಡ ತಿಂಗಳ ಒಳಗೆ ಭರ್ತಿ ಸಾವಿರ ಪುಸ್ತಕಗಳು ಮಾರಾಟವಾಗಿ ಎರಡನೇ ತಿಂಗಳ ಹೊತ್ತಿಗೆ ಮರುಮುದ್ರಣಗೊಂಡ ಖ್ಯಾತಿ ಇದರದು.



ಪ್ರಶಸ್ತಿ ಗಳಿಂದ ಮಾರು ದೂರ ನಿಲ್ಲುವ ಇವರಿಗೆ ಸ್ಥಳೀಯ ಸಂಘಟನೆಗಳ ಪ್ರೀತಿ ಪೂರ್ವಕ ಗೌರವಗಳ ಜೊತೆ ಮುಂಬೈ ಕನ್ನಡ ಸಂಘ,ಕರ್ನಾಟಕ ಲೇಖಕಿಯರ ಸಂಘದ ವಿಶಿಷ್ಠ ಲೇಖಕಿ ಪ್ರಶಸ್ತಿ, ಮತ್ತು ಈಚೆಗೆ ಬನಶಂಕರಮ್ಮ ದತ್ತಿನಿಧಿ ಪ್ರಶಸ್ತಿ,ತುಮಕೂರು ರೋಟರಿ,ಭೂಮಿ ಬಳಗ,ಕರ್ನಾಟಕ ಕಾವಲು ಸಮಿತಿ,ನೃಪ ಪ್ರಶಸ್ತಿ ಸಂದಿವೆ.ಕನ್ನಡ ಕೈ ಬರಹಕ್ಕಾಗಿ ರಾಜ್ಯಮಟ್ಟದ ಹಲವು ಬಹುಮಾನಗಳೂ ದೊರೆತಿವೆ.



ಒಟ್ಟಾರೆ ರಂಗಮ್ಮ ಹೊದೇಕಲ್ ಅಂದರೆ ಸಿಕ್ಕರೆ ಸಮುದ್ರ,  ಹಿಡಿದರೆ ಆಕಾಶ, ಮುಟ್ಟಿದರೆ ಅಂತಃಸತ್ವ, ಕಿವಿಯಾದರೆ ಮಾನವೀಯ ದನಿಯ ಕರುಣೆ. ಸಾಹಿತ್ಯ, ಕವಿತೆ ಅಂದರೆ ಇದೇ ಆದರೆ ರಂಗಮ್ಮ ಹೊದೇಕಲ್ ಈ ಕಾಲದ ಕವಿತೆ. ಓದಲೇ ಬೇಕಾದ, ಆದರೆ ಓದಿಸಲು ಈ ಕಾಲದ ಗುಂಪಿನಾಚೆಗೆ ನಿಂತ ಈ ಕಾಲದ, ಇದೇ ಕಾಲದ ಕವಿತೆ ಹಾಗು ಒಂದು ಸಂಪದ್ಬರಿತ ಕಥೆ.


       ~ಡಾ.ಎಚ್.ಸಿ.ಭವ್ಯ ನವೀನ್.ಹಾಸನ