ಸ್ವಂತದ ಮನೆಯನ್ನೇ ಹಾಸ್ಟೆಲ್ ಮಾಡಿದ ‘ತುಮಕೂರು ಗಾಂಧಿ’-ಚಿಕ್ಕಣ್ಣ,IAS (R)

ಸ್ವಂತದ ಮನೆಯನ್ನೇ ಹಾಸ್ಟೆಲ್ ಮಾಡಿದ ‘ತುಮಕೂರು ಗಾಂಧಿ’

ಸ್ವಂತದ ಮನೆಯನ್ನೇ ಹಾಸ್ಟೆಲ್ ಮಾಡಿದ  ‘ತುಮಕೂರು ಗಾಂಧಿ’-ಚಿಕ್ಕಣ್ಣ,IAS (R)

 

ಸ್ವಂತದ ಮನೆಯನ್ನೇ ಹಾಸ್ಟೆಲ್ ಮಾಡಿದ

‘ತುಮಕೂರು ಗಾಂಧಿ’


ಚಿಕ್ಕಣ್ಣ ಐಎಎಸ್(ವಿ)
9844542396
(ಹಿಂದಿನ ‘ ಕಿನ್ನರಿ’ಯಿಂದ) 


ಮಧುಗಿರಿಯಲ್ಲಿ ಪ್ರೌಢಶಿಕ್ಷಣ

 ಮಧುಗಿರಿ ಸರ್ಕಾರಿ ಪ್ರೌಢಶಾಲೆ ಸುಮಾರು 12 ಎಕರೆ ಪ್ರದೇಶದಲ್ಲಿ ಊರಿಗೆ ಹೊಂದಿಕೊಂಡಂತೆಯೇ ಕಟ್ಟಲಾಗಿತ್ತು. ಇದೊಂದು ಪಾರಂಪರಿಕ ಕಟ್ಟಡ, ಶತಮಾನದಷ್ಟು ಹಳೆಯದು. ಮುಂದಿನ ಭಾಗ ಕಲ್ಲಿನಲ್ಲಿ ಕಟ್ಟಲ್ಪಟ್ಟು ಸೂರಿಗೆ ಮಂಗಳೂರು ಹೆಂಚು ಹೊದಿಸಿದ್ದರು. ಸುಮಾರು 20 ವಿಶಾಲವಾದ ಕೊಠಡಿಗಳು, ಲ್ಯಾಬ್‌ಗಳು, ವಿಶಾಲವಾದ ಲೈಬ್ರರಿ, ಮಧ್ಯೆ ಚೌಕಾಕಾರದ ಕ್ವಾಡ್ರಂಗಲ್‌ನಲ್ಲಿ ಉತ್ತರಕ್ಕೆ ಒಂದು ಸುಮಾರು 2 ಅಡಿ ಎತ್ತರದ ಪ್ಲಾಟ್ ಫಾರಂ, ದಿನಾ 10-30ಕ್ಕೆ ಬೆಲ್ ಆದ ಮೇಲೆ ವಿದ್ಯಾರ್ಥಿಗಳು ಸಾಲು ಸಾಲಾಗಿ ನಿಂತು ಪ್ರಾರ್ಥನೆ ಮಾಡಬೇಕು. ಪ್ಲಾಟ್ ಫಾರಂ ಮೇಲೆ ಜಯತೀರ್ಥರಾವ್ ಎಂಬ ಹೆಸರಿನ ಮುಖ್ಯೋಪಾಧ್ಯಾಯರು, ಅವರ ಪಕ್ಕದಲ್ಲಿ ಇತರ ಮಾಸ್ತರುಗಳು ನಿಂತು ಪ್ರಾರ್ಥನೆಯಲ್ಲಿ ಪಾಲುಗೊಳ್ಳುತ್ತಿದ್ದರು.

 ಒಂದು ತಿಂಗಳ ಬಸ್ ಓಡಾಟದಿಂದ ನನಗೂ ಬೇಜಾರಾಗಿತ್ತು. ಅಪ್ಪನ ಕಿಸೆಗೂ ದಿನ ಬಸ್‌ಚಾರ್ಜ್ ರೂಪದಲ್ಲಿ ಖರ್ಚಾಗುತ್ತಿತ್ತು. ಇದಕ್ಕೆ ಪರಿಹಾರ ಹುಡುಕಲು ರಾತ್ರಿ ಸಭೆ ನಡೆಯಿತು. ಅಕ್ಕ ಭಕ್ತರಹಳ್ಳಿಗೆ ಹೋಗಿ ನೆಲೆಗೊಳ್ಳುವವರೆಗೂ ನಾನು ಮಧುಗಿರಿಯಲ್ಲಿ ಯಾವುದಾದರೊಂದು ರೂಮ್ ಮಾಡಿಕೊಂಡು ಅಡಿಗೆ ಮಾಡಿಕೊಂಡು ಜೀವನ ನಡೆಸುತ್ತಾ ಶಾಲೆಗೆ ಹೋಗುವುದು. ಇದನ್ನು ಹಳ್ಳಿಯಿಂದ ಮಧುಗಿರಿಗೆ ಓದಲು ಬರುವ ಎಲ್ಲಾ ಹುಡುಗರೂ ಮಾಡುತ್ತಿದ್ದರು. ಅದರಂತೆ ನಾನು ಮಧುಗಿರಿಯ ಶಂಕರ್ ಟಾಕೀಸಿನ ಮುಂದಿನ ರಸ್ತೆ (ಈಗಿನ ಸಂತೆ ಮೈದಾನ) ಯಲ್ಲಿ ಮುನಿಪಾಲಿಟಿ ಕಛೇರಿ ಎದುರು ಕಾರ್ಪೆಹಳ್ಳಿಯ ಕರಿಯಣ್ಣ, ಮಾರಣ್ಣ ಇರಲು ರೂಮು ಮಾಡಿಕೊಂಡಿದ್ದು ಆ ರೂಮಲ್ಲೇ ನನಗೆ ವಾಸ ಮಾಡಲು ಅನುಮತಿ ಸಿಕ್ಕಿತು. ಟ್ರಂಕಿನ ತುಂಬಾ ಅಕ್ಕಿ, ಸಾಂಬಾರ ಪುಡಿ, ಚಟ್ಟಿ ಪುಡಿ ಡಬ್ಬಿಗಳಿದ್ದವು. ಒಂದೆರಡು ಶರಟು, ಪ್ಯಾಂಟು, ಬನಿಯನ್‌ಗಳಿದ್ದವು, ಹಾಸಿಗೆ, ಬೆಡ್‌ಶೀಟನ್ನು ಮಧುಗಿರಿಯಲ್ಲಿಯೇ ಕೊಂಡುಕೊAಡೆ. ಬೆಳಿಗ್ಗೆ ಎದ್ದು ಮೂವರೂ ಅನ್ನ ಮಾಡಿಕೊಂಡು ಅದಕ್ಕೆ ಚಿತ್ರಾನ್ನ ಕಲಸಿ ತಿಂದು 10 ಗಂಟೆಗೆ ಶಾಲೆಗೆ ಒಟ್ಟಾಗಿ ಹೋಗುತ್ತಿದ್ದೆವು.

 ಶನಿವಾರ ಬಂತೆಂದರೆ ಶಾಲೆ ಮುಗಿಸಿ ಬಸ್ಸಿನಲ್ಲಿ ತಿಪ್ಪನಹಳ್ಳಿ ಕಡೆ ದೌಡಾಯಿಸಿ, ಸೋಮವಾರ ಬೆಳಗ್ಗೆ ಮತ್ತೆ ಶಾಲಾ ಸಮಯಕ್ಕೆ ವಾಪಸ್ಸು ಬರುತ್ತಿದ್ದೆ. ಭಾನುವಾರ ಊರಲ್ಲಿ ಗದ್ದೆಗೆ ನೀರು ಹಾಯಿಸುವುದೂ, ಹೋರಿಗಳನ್ನು ಮೇಯಿಸುವುದು, ತೋಟಕ್ಕೆ ಕೆಮ್ಮಣ್ಣು, ಗೊಬ್ಬರ ಹಾಕಿಸುವುದು ಮುಂತಾದ ಕೆಲಸಗಳನ್ನು ನಿಭಾಯಿಸುತ್ತಿದ್ದೆ. ಹೀಗೆ ಓದು ಮತ್ತು ಕೃಷಿಯ ಕೆಲಸ ಎರಡನ್ನೂ ಮೇನೇಜ್ ಮಾಡುತ್ತಿದ್ದೆ. 

ನಾಮಕರಣ


 ಅಕ್ಕನ ಮಗ ತುಂಬಾ ಆರೋಗ್ಯವಂತನಾಗಿ ರೂಪವಂತನಾಗಿ ಬೆಳೆಯುತ್ತಿದ್ದ. ಮನೆಮಂದಿಗೆಲ್ಲಾ ಪ್ರೀತಿಪಾತ್ರನಾಗಿದ್ದ. ಸದಾ ಯಾರಾದರೂ ಒಬ್ಬರು, ಅವನನ್ನು ಎತ್ತಿಕೊಂಡು ಮುದ್ದಾಡುತ್ತಿದ್ದೆವು, ಹೊತ್ತು ಹೋಗುವುದೇ ಗೊತ್ತಾಗುತ್ತಿರಲಿಲ್ಲ. ಹೀಗಿರುವಾಗ ಅಕ್ಟೋಬರ್‌ನ ಒಂದು ದಿನ ಮಗುವಿಗೆ ನಾಮಕರಣ ಎಂದು ಗೊತ್ತಾಯಿತು. ಭಕ್ತರಹಳ್ಳಿಯಿಂದ ಗಾಡಿಯಲ್ಲಿ ಒಂದಿಷ್ಟು ಜನ ನೆಂಟರು ಬಂದರು. ದಸರಾ ರಜೆಯಾದ ಕಾರಣ ನಾನೂ ಊರಲ್ಲಿದ್ದೆ. ತೊಟ್ಟಿಲು ಸಿಂಗರಿಸಿ ಪಾಪುವಿಗೆ ಮಹದೇವ ಎಂದು ನಾಮಕರಣ ಮಾಡಿ ತೊಟ್ಟಿಲು ಪೂಜೆ ಮಾಡಿ ನಾನೇ ಮಲಗಿಸಿ ತೂಗಿದೆ. ಊಟವಾದ ಮೇಲೆ ಭಕ್ತರಹಳ್ಳಿಗೆ ಅಲ್ಲಿಂದ ಬಂದವರು ಹಿಂದಿರುಗಿದರು - ಅಕ್ಕ ಮತ್ತು ಪಾಪು ಜೊತೆ.

 ಅಕ್ಕ ಭಕ್ತರಹಳ್ಳಿಗೆ ಬಂದ ಮೇಲೆ ವಾರಕ್ಕೆರಡು ಬಾರಿ ಬೆಳಗ್ಗೇನೋ, ಸಂಜೆನೋ ಬಾಡಿಗೆಗೆ ಸೈಕಲ್ ತೆಗೆದುಕೊಂಡು, ಅವರ ಮನೆಗೆ ಹೋಗಿ ಬರುತ್ತಿದ್ದೆ. 'ರೂಂ ಬಿಟ್ಟು ಇಲ್ಲೇ ಬಾ, ಇಲ್ಲಿಂದಲೇ ಸ್ಕೂಲಿಗೆ ಹೋಗು" ಎಂದು ಅಕ್ಕ ಬಲವಂತ ಮಾಡುತ್ತಿದ್ದರು. ಭಾವನವರೂ ಅದಕ್ಕೆ ದನಿಗೂಡಿಸಿದರು. 'ಇಲ್ಲಾ ಈ ವರ್ಷ ರೂಂನಲ್ಲೇ ಇರ್ತೀನಿ, 2ನೇ ವರ್ಷಕ್ಕೆ ಇಲ್ಲೇ ಬಂದು ಇರ್ತೀನಿ' ಎಂದು ಸಮಾಧಾನ ಮಾಡುತ್ತಿದ್ದೆ. ಮಾಸಿದ ಬಟ್ಟೆಗಳನ್ನು ಅಲ್ಲಿಯೇ ಬಿಟ್ಟು, ಒಗೆದ ಬಟ್ಟೆಗಳನ್ನು ಧರಿಸಿ ವಾಪಸ್ಸು ಬರುತ್ತಿದ್ದೆ. ಅಕ್ಕ ಅವುಗಳನ್ನು ಒಗೆದು ಒಣಗಿಸಿ ಮಡಿಚಿಟ್ಟಿದ್ದು, ಮುಂದಿನ ಬಾರಿ ಬಂದಾಗ ಅವುಗಳನ್ನು ಒಯ್ಯುತ್ತಿದ್ದೆ.

 ಶಾಲೆಯಲ್ಲಿ ಎಲ್ಲವೂ ಶಿಸ್ತುಬದ್ಧವಾಗಿದ್ದು, ಸಮಯಕ್ಕೆ ಸರಿಯಾಗಿ ಪಾಠ ಪ್ರವಚನಗಳು ನಡೆಯುತ್ತಿದ್ದವು, ಇಂಗ್ಲೀಷನ್ನು ಬೋಧಿಸಲು ನೋವಿನಕೆರೆಯ ಟಿ.ಎ ನಾಗರಾಜು ಹಾಗೂ ಎನ್. ರಾಮಮೂರ್ತಿಯವರೂ ಇದ್ದರು. ಕನ್ನಡಕ್ಕೆ ಅಹಮದ್ ಷರೀಫರು, ಆಫ್ಷನಲ್ ಹಿಸ್ಟರಿಗೆ ಪಿ.ಕೆ.ಎಂ., ಹಿಂದಿಗೆ ಒಬ್ಬರು ಲೇಡಿ ಟೀಚರ್ (ಹೆಸರು ಮರೆತುಹೋಗಿದೆ), ಹೆಚ್.ಎಂ. ಜಯತೀರ್ಥರಾವ್ ಅವರು ವಿಜ್ಞಾನ, ಗಣಿತ ತೆಗೆದುಕೊಳ್ಳುತ್ತಿದ್ದರು. ರೂಮಿನಲ್ಲಿದ್ದ ಇಬ್ಬರು ಸ್ನೇಹಿತರೂ ನಮ್ಮ ಕಡೆಯವರೇ... ಆಗಿದ್ದರಿಂದ ಹೊಂದಾಣಿಕೆ ಇತ್ತು. ಅಡಿಗೆಯನ್ನು ಮೂವರೂ ಸೇರಿ, ಸೀಮೆಎಣ್ಣೆ ಸ್ಟೌವಿನಲ್ಲಿ ಮಾಡಿಕೊಳ್ಳುತ್ತಿದ್ದೆವು. ಒಂದೊAದು ದಿನ ಉಪ್ಪಿಟ್ಟು ಮಾಡಿ ತಿನ್ನುತ್ತಿದ್ದವು. ಮೊದಲನೇ ವರ್ಷ ಹೀಗೆ ಕಳೆದು. 1958ರ ಏಪ್ರಿಲ್‌ನಲ್ಲಿ ಬೇಸಿಗೆ ರಜೆ ಬಂತು ; ಊರಿಗೆ ಹೋದೆವು.

ಹೈಸ್ಕೂಲ್ ಎರಡನೇ ವರ್ಷ


 ಊರಲ್ಲಿ ಬೇಸಿಗೆಯಲ್ಲಿ ಯಥೇಚ್ಚವಾಗಿ ಮಾವಿನ ಹಣ್ಣು, ಹಲಸಿನ ಹಣ್ಣು ಬಾಳೆಹಣ್ಣು ತಿಂದು ತೇಗುವ ಅವಕಾಶವಾಗಿತ್ತು. ನಮ್ಮ ದೊಡ್ಡ ತೋಟದಲ್ಲಿಯೇ ಹಲಸಿನ ಮರ, 25 ಕಸಿ ಮಾವಿನ ಗಿಡ ಕಾಯಿ ಬಿಟ್ಟು ಹಣ್ಣಾಗಿ ಕೆಳಗೆ ಬೀಳುತ್ತಿದ್ದವು. ಕೋತಿಗಳು ತೋಟದಲ್ಲಿ ಸೇರಿಕೊಂಡು ತೆಂಗಿನಕಾಯಿ, ಮಾವಿನಕಾಯಿಗಳನ್ನು ಉದುರಿಸಿ ಹಾಳು ಮಾಡುತ್ತಿದ್ದವು. ನಾವು ಮೂರು ಜನ ಹುಡುಗರೂ ಒಂದೊಂದು ಮಾವಿನ ಮರ ಹತ್ತಿ ಹಣ್ಣಾಗಿದ್ದ ಮಾವಿನ ಹಣ್ಣುಗಳನ್ನು ಕಿತ್ತುಕೊಂಡು ತೃಪ್ತಿಯಾಗುವವರೆಗೂ ತಿಂದು ಸಿಪ್ಪೆ ಕೆಳಗೆ ಎಸೆಯುತ್ತಾ, ಮಾವಿನ ರಸವನ್ನು ಅಂಗಿಗಳಿಗೆ ಒರೆಸುತ್ತಾ ಮರಕೋತಿ ಆಟ ಆಡುತ್ತಿದ್ದೆವು. ನಂತರ 3 ಜನರೂ ಮಾವಿನ ಗಿಡದ ಕೆಳಗೆ, ಹೋಗಿ ತೋಪಿನಲ್ಲಿ ಬಿದ್ದಿರುತ್ತಿದ್ದ ಒಣಗಿದ ಎಲೆ, ಹೂಗಳನ್ನು ಅಚ್ಚುಕಟ್ಟಾಗಿ ಗುಡಿಸಿ ಗುಡ್ಡೆ ಮಾಡಿ, ಬುಟ್ಟಿ ತುಂಬ ಮಾವಿನ ಹಣ್ಣನ್ನು ಹೊತ್ತು ಮನೆಗೆ ಬರುತ್ತಿದ್ದೆವು.


 1957, ಮೇ ತಿಂಗಳು ಕಳೆದು ಜೂನ್ ಮೊದಲನೇ ತಾರೀಖು ಶಾಲೆ ಆರಂಭವಾಯಿತು, ಈ ವರ್ಷ ಭಕ್ತರಹಳ್ಳಿಯಿಂದಲೇ ಶಾಲೆಗೆ ಹೋಗಿ ಬರುವುದು ಎಂದು ತೀರ್ಮಾನವಾದಂತೆ, ಟ್ರಂಕು ಹೊತ್ತುಕೊಂಡು ನಾನು ಭಕ್ತರಹಳ್ಳಿಗೆ ಹೋದೆ. ಅಕ್ಕನಿಗೆ ಅತೀವವಾದ ಸಂತೋಷ. ತುಂಬಿದ ಮನೆ, ಒಟ್ಟು ಕುಟುಂಬ ಅವರದು. 3 ಜನ ಅಣ್ಣತಮ್ಮಂದಿರಲ್ಲಿ ದೊಡ್ಡವರು ಗುಂಡಪ್ಪನವರು, ಅವರ ಹೆಂಡತಿ ಸಂಕಮ್ಮ. ಎರಡನೆಯವರು ನಮ್ಮ ಭಾವ ವಕೀಲಪ್ಪ, ನಮ್ಮ ಅಕ್ಕ, ಅವರ ಪುಟ್ಟ ಕಂದ ಮಹದೇವ. ಅವರ ತಮ್ಮ ನರಸಪ್ಪ. ಅವರು ಸದಾ ಅವರ ಅಕ್ಕ ಜಯಮ್ಮನವರ ಜೊತೆ, ಅವರ ಯಜಮಾನರಾದ ಪಾಪಣ್ಣನವರ ಜತೆ ಇರುತ್ತಿದ್ದರು. ಅವರು ಮೂಲತಃ ಪಿಡಬ್ಲ್ಯೂಡಿಯಲ್ಲಿ ಸೂಪರ್‌ವೈಸರ್ ಆಗಿ ವರ್ಗವಾದ ಊರುಗಳಿಗೆ ಹೋಗುತ್ತಿದ್ದರು. ಅವರ ಜತೆ ನರಸಪ್ಪನವರೂ ಇರುತ್ತಿದ್ದರು. ಬಹಳ ವರ್ಷಗಳ ನಂತರ ಹುಟ್ಟಿದ್ದ ಮಗನಾದ ಸಿದ್ದೇಶ ಇದ್ದರು. ಭಾವನವರ ತಾಯಿ ನರಸಜ್ಜಿಗೆ ವಯಸ್ಸಾಗಿ ಸದಾ ಊರ ದೇವರಾದ ನರಸಿಂಹ, ಕಾವಲಮ್ಮ ದೇವಿಯ ಪೂಜೆ ಮಾಡುತ್ತಾ ಕಾಲ ಕಳೆಯುತ್ತಿದ್ದರು.

 ಭಕ್ತರಹಳ್ಳಿಯಿಂದ ಸುಮಾರು ಒಂದು ಡಜನ್ ಹುಡುಗರು ಮಧುಗಿರಿ ಹೈಸ್ಕೂಲಿಗೆ ಹೋಗಿ ಬರುತ್ತಿದ್ದರು, ಅವರ ಜತೆ ನಾನೂ ಸೇರಿಕೊಂಡೆ. ಎದುರು ಮನೆ ಶಾನುಭೋಗ ಸತ್ಯನಾರಾಯಣಪ್ಪನವರ ಮಗಳನ್ನು ಹೈಸ್ಕೂಲ್ 1ನೇ ತರಗತಿ ಸೇರಿಸಿದ್ದರು. ಒಂದು ದಿನ ಭಾವನವರ ಹತ್ತಿರ ಸತ್ಯನಾರಾಯಣಪ್ಪನವರು ಬಂದು, 'ನಮ್ಮ ಮಗಳನ್ನು ಸ್ಕೂಲಿಗೆ ಕಳುಹಿಸುತ್ತಿದ್ದೇನೆ. ಊರ ಹುಡುಗರ ಮೇಲೆ ನನಗೆ ನಂಬಿಕೆ ಬರ‍್ತಿಲ್ಲ. ನಿಮ್ಮ ಬಾಮೈದ ಚಿಕ್ಕಣ್ಣ ದೊಡ್ಡಮನೆ ಹುಡುಗ, ಸಭ್ಯನಂತೆ ಕಾಣಿಸುತ್ತಾನೆ. ಅವನ ಜೊತೆ ಮಗಳನ್ನು ಶಾಲೆಗೆ ಕಳುಹಿಸಬೇಕು, ಆಗಬಹುದಾ' ಅಂದರು. ಅದನ್ನು ಕೇಳಿಸಿಕೊಂಡ ಅಕ್ಕ ನನ್ನನ್ನು ಕರೆದು 'ಶಾನುಭೋಗರು ಏನೋ ಕೇಳ್ತಾ ಇದ್ದಾರೆ, ಬಾ’ ಎಂದರು. ವಿಷಯವನ್ನೆಲ್ಲಾ ಭಾವ ಹೇಳಿದ ಮೇಲೆ 'ಆಗಲಿ' ಎಂದೆ.

 ಸರಿ, ಪ್ರತಿ ದಿನ ನಾನು, ಲಕ್ಷ್ಮೀನಾರಾಯಣ, ಶ್ರೀ ರಾಮಪ್ಪ, ಶಾನುಭೋಗರ ಮಗಳು ಒಟ್ಟಾಗಿ 3 ಕಿಮೀ ಹಾದು ಮಧುಗಿರಿ ಸೇರಿ ಶಾಲೆ ಮುಗಿಸಿ ವಾಪಸ್ಸು ಬರುತ್ತಿದ್ದೆವು. ಬರೀ ಕಾಲಲ್ಲಿ ಓಡಾಡುತ್ತಿದ್ದ ನನ್ನ ಕಷ್ಟಕ್ಕೆ ಮರುಗಿ ತಂದೆಯವರು ನನಗೆ ಅಬ್ದುಲ್ ಸಮದ್ ಅವರ ಕಬ್ಬಿಣ, ಪೇಂಟು, ಚಪ್ಪಲಿ ಅಂಗಡೀಲಿ ಒಂದು ಜತೆ ಚಪ್ಪಲಿ ಕೊಡಿಸಿದರು, ಅವು ನನ್ನ ಜೀವನದಲ್ಲಿ ನನ್ನ ಪಾದರಕ್ಷಣೆಗೆಂದು ಬಂದ ಮೊದಲ ಅಂಗರಕ್ಷಕರು.

 ಶಾಲೆ ಮುಗಿಸಿ ಮನೆಗೆ ಬರುವಷ್ಟರಲ್ಲಿ 6 ಗಂಟೆಯಾಗುತ್ತಿತ್ತು. ಬಂದ ಕೂಡಲೇ ಪಾಪುನ ಎತ್ತಿಕೊಂಡು ಅವನ ಜತೆ ಆಟ ಆಡುತ್ತಿದ್ದೆ. ಹೀಗೆ ಆಟ ಆಡುತ್ತಿರುವಾಗ ಗಿಲಕಿಯಿಂದ ಶಬ್ದ ಮಾಡಿದರೂ ಅವನು ಅದನ್ನು ಕೇಳಿಸಿಕೊಳ್ಳುತ್ತಿರಲಿಲ್ಲ. ಚಪ್ಪಾಳೆ ತಟ್ಟಿ ಜೋರಾಗಿ ಶಬ್ದ ಮಾಡಿದರೂ ಆ ಕಡೆ ತಿರುಗುತ್ತಿರಲಿಲ್ಲ. ನನಗೆ ಅನುಮಾನ ಬಂದು ಅಕ್ಕನಿಗೆ ಹೇಳಿದೆ. 'ಹೌದು ನನಗೂ ಹಂಗೇ ಅನಿಸುತ್ತೆ' ಎಂದು ಹೇಳಿ ರಾತ್ರಿ ಭಾವನ ಮುಂದೆ ಈ ವಿಷಯ ಹೇಳಿದೆವು. ಇನ್ನೂ 'ಚಿಕ್ಕ ಹುಡುಗ, ಒಂದು ವರ್ಷನೂ ಆಗಿಲ್ಲ ಮುಂದೆ ಸರಿಹೋಗ್ಬೋದು, ನೋಡೋಣ' ಎಂದರು.

 ಸುಮಾರು 3 ತಿಂಗಳು ಶಾಲೆಗೆ ಹೋಗಿ ಬಂದು ಮಾಡುತ್ತಿದ್ದೆ. ಬೆಳಿಗ್ಗೆ 8 ಗಂಟೆಗೆ ತಿಂಡಿ ತಿಂದು ಶಾಲೆಗೆ ಹೋದರೆ ಸಂಜೆ 6 ಗಂಟೆಗೆ ವಾಪಸ್ಸು ಬಂದಾಗ ಅಕ್ಕ ಏನಾದರೂ ಹೊಟ್ಟೆಗೆ ತಿನ್ನಲು ಕೊಡುತ್ತಿದ್ದರು. ಮಧ್ಯಾಹ್ನದ ಹೊತ್ತು ತುಂಬಾ ಹಸಿವಾಗಿ ಗ್ಯಾಸ್ಟಿಕ್ ಆಗುತ್ತಿತ್ತು. ಊರಿಗೆ ಹೋದಾಗ ಅಪ್ಪನಿಗೆ ಹೇಳಿದೆ. ಶಾಲೆ ಎದುರು ಕೃಷ್ಣ ಭವನದಲ್ಲಿ ಮಧ್ಯಾಹ್ನದ ಹೊತ್ತು ಬೇಕಾದ ತಿಂಡಿ ತಿನ್ನಲು ಹೋಟೆಲ್ ಓನರ್‌ಗೆ ಹೇಳಿ ತಿಂಗಳಿಗೊಮ್ಮೆ ಪಾವತಿಸುವ ವ್ಯವಸ್ಥೆ ಆಯಿತು.


 ಅಕ್ಕನ ಮನೆಯಲ್ಲಿ ನಾನಿದ್ದುದು ಗುಂಡಪ್ಪನ ಹೆಂಡತಿ ಸಂಕಮ್ಮನವರಿಗೆ ಸರಿಹೊಂದಲಿಲ್ಲ. ಅವರಿಗೆ ಮದುವೆಯಾಗಿ 6 ವರ್ಷವಾದರೂ ಮಕ್ಕಳಾಗದೇ ಅಕ್ಕನನ್ನು ಕಂಡರೆ ಉರಿದು ಬೀಳುತ್ತಿದ್ದರು. ಗುಂಡಪ್ಪನವರೇನೋ ಎಲ್ಲವನ್ನು ಸಹಿಸುತ್ತಿದ್ದರು. ಶಾಲೆಯಿಂದ ಹಿಂದಿರುಗಿ ಮನೆಯ ಮುಂದಿನ ಕಸವನ್ನೆಲ್ಲಾ ಗುಡಿಸಿ, ಮುಖ ತೊಳೆದುಕೊಂಡು ಸೀಮೆಎಣ್ಣೆ ದೀಪ ಹಚ್ಚಿ ಓದಲು ಕೂತರೆ, ನರಸಜ್ಜಿ ಬಂದು ನನಗೆ ಅದಕ್ಕೆ ಬೇಕು, ಇದಕ್ಕೆ ಬೇಕು ಎಂದು ಹೇಳಿ ಬುಡ್ಡಿಯನ್ನು ಎತ್ತಿಕೊಂಡು ಹೋಗುತ್ತಿದ್ದರು. ಇದರಿಂದಾಗಿ ಅಕ್ಕನಿಗೂ ಅವರಿಗೂ ಮನಸ್ತಾಪವಾಗುವುದು, ಹೊಂಗೆ ಎಣ್ಣೆ ದೀಪ ಹಚ್ಚಿ ಕೊಡುವರು. ಅದಕ್ಕೂ ಅಜ್ಜಿ ತಕರಾರು ಮಾಡುವರು, ಹೀಗೆ ಅಂತೂ ಇಂತೂ 2ನೇ ವರ್ಷದ ಶಾಲೆಯನ್ನು ಏಪ್ರಿಲ್ 1958ರಲ್ಲಿ ಮುಗಿಸಿ ಟ್ರಂಕ್ ಸಮೇತ ಊರಿಗೆ ಬಂದೆ.

 ಈ ಮಧ್ಯೆ 1957ರಲ್ಲಿ ಮಧುಗಿರಿ - ಕೊರಟಗೆರೆ ದ್ವಿಕ್ಷೇತ್ರದ ಸದಸ್ಯತ್ವ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಮುಕ್ಕಣ್ಣಪ್ಪನವರು ಸೋತು, ಮಾಲಿಮರಿಯಪ್ಪನವರು ಶಾಸಕರಾಗಿ ಆಯ್ಕೆಯಾದರು. ತುಮಕೂರು ಗಾಂಧಿ ಎಂದು ಹೆಸರಾಗಿದ್ದ ಸೌಮ್ಯ ಸ್ವಭಾವದ ಅವರು ಮಧುಗಿರಿಯಲ್ಲಿ ಸುಮಾರು 10 ವರ್ಷದಿಂದ ಲಾಯರಾಗಿ ಕೆಲಸ ಮಾಡುತ್ತಿದ್ದರು. ಪಕ್ಕದ ಸಿದ್ದಾಪುರದಲ್ಲಿ ಜಮೀನು ಹೊಂದಿದ್ದು ಅಲ್ಲಿಯೇ ಮನೆ ಮಾಡಿಕೊಂಡಿದ್ದರು.

 ಮಧುಗಿರಿಯ ಮಲ್ಲೇಶ್ವರಸ್ವಾಮಿ ದೇವಸ್ಥಾನ, ಪಕ್ಕದ ವೆಂಕಟರಮಣ ದೇವಸ್ಥಾನ ಎರಡೂ ಊರಿನ ದೊಡ್ಡ ದೇವಸ್ಥಾನಗಳು, ಇವುಗಳನ್ನು ಮಧುಗಿರಿಯನ್ನಾಳಿದ ಮಹಾನಾಡಪ್ರಭು ಚಿಕ್ಕಪ್ಪಗೌಡರು ಕಟ್ಟಿಸಿದರೆಂದು ಇತಿಹಾಸವಿದೆ. ಅವುಗಳ ಗೋಪುರಗಳು ಸುಮಾರು ದೂರದ ಹಳ್ಳಿಗಳಿಗೆ ಕಾಣಿಸುತ್ತಿದ್ದವು.

 ವಿಧಾನಸಭೆಗೆ ಆಯ್ಕೆಯಾದ ಮೇಲೆ ಮಾಲಿಮರಿಯಪ್ಪನವರು ಮಲ್ಲೇಶ್ವರಸ್ವಾಮಿ ದೇವಸ್ಥಾನದ ರಸ್ತೆಯ ತಮ್ಮ ಮನೆಯನ್ನು, ಸಾರ್ವಜನಿಕ ವಿದ್ಯಾರ್ಥಿನಿಲಯವನ್ನಾಗಿ ಪರಿವರ್ತಿಸಿ, ಹಳ್ಳಿಯಿಂದ ಬರುವ ಮಕ್ಕಳಿಗೆ ಓದಲು ವ್ಯವಸ್ಥೆ ಮಾಡಿದ್ದರು. ಅವರ ಬಲಗೈ ಬಂಟನಾಗಿ, ನಮ್ಮ ಅಣ್ಣತಮ್ಮಂದಿರ ಪೈಕಿಯ ರಂಗಾಪುರದ ಆರ್. ಚಿಕ್ಕಯ್ಯನವರು ವಕೀಲರಾಗಿದ್ದುಕೊಂಡು, ಹಾಸ್ಟೆಲ್‌ನ ವಾರ್ಡನ್ ಆಗಿದ್ದರು. ಆರ್. ಚಿಕ್ಕಯ್ಯನವರು ನಮ್ಮ ತಂದೆಗೆ ಬೇಕಾದವರಾಗಿದ್ದರು. ಅಂದರೆ ಅವರು ರಂಗಾಪುರದ ಚೌಡೇಶ್ವರಿ ಒಕ್ಕಲು, ನಾವು ತಿಪ್ಪನಹಳ್ಳಿ ಚೌಡೇಶ್ವರಿ ಒಕ್ಕಲು. ಹೀಗೆ ಅಣ್ಣತಮ್ಮಂದಿರಾಗಿದ್ದು, ಅವರು ನಮ್ಮ ತಂದೆಯವರನ್ನು ಅಣ್ಣ ಎಂದೇ ಸಂಬೋಧಿಸುತ್ತಿದ್ದರು.


(ಮುಂದಿನ ‘ಕಿನ್ನರಿ’ಗೆ)


ಮಾಲಿ ಮರಿಯಪ್ಪನವರ ಪರಿಚಯ 


ಚಿಕ್ಕಣ್ಣನವರ ಈ ಲೇಖನದಲ್ಲಿ ಪ್ರಸ್ತಾಪವಾಗಿರುವ ದಿವಂಗತ ಮಾಲಿ ಮರಿಯಪ್ಪನವರ ಪುಟ್ಟ ಪರಿಚಯ ಹೀಗಿದೆ.


1912ರ ಫೆಬ್ರವರಿ 18ರಂದು ಶಿರಾ ಪಟ್ಟಣದಲ್ಲಿ ಜನಿಸಿದ ಮಾಲಿ ಮರಿಯಪ್ಪನವರು, ಮೈಸೂರಿನ ಮಹಾರಾಜ ಕಾಲೇಜು ಹಾಗೂ ಪುಣೆಯ ರ‍್ಗುಸನ್ ಕಾಲೇಜಿನಲ್ಲಿ ಬಿ.ಎ ಹಾಗೂ ಎಲ್ ಎಲ್ ಬಿ ವ್ಯಾಸಂಗ ಮಾಡುತ್ತಾರೆ. 1931ರ ಜೂನ್ ಎರಡರಂದು ಲಕ್ಷö್ಮಮ್ಮನವರನ್ನು ಮದುವೆ ಆಗುತ್ತಾರೆ.


ನ್ಯಾಯವಾದಿಗಳು ಹಾಗೂ ಕೃಷಿಕರೂ ಆಗಿದ್ದ ಇವರು 1936ರಿಂದ ಭಾರತೀಯ ರಾಷ್ಡ್ರೀಯ ಕಾಂಗ್ರೆಸ್ ಸದಸ್ಯರಾಗಿ ಸಾರ‍್ವಜನಿಕ ಜೀವನ ಆರಂಭಿಸುತ್ತಾರೆ. 


1947-51, 1952-57, 57-62 ಈ ಮೂರು ಅವಧಿಗೆ ಮಧುಗಿರಿ-ಕೊರಟಗೆರೆ ದ್ವಿಸದಸ್ಯ ವಿಧಾನ ಸಭಾ ಕ್ಷೇತ್ರದಿಂದ ಮೈಸೂರು ಅಸೆಂಬ್ಲಿಯ ಶಾಸಕರಾಗಿ ಚುನಾಯಿತರಾಗಿ ಕರ‍್ಯನರ‍್ವಹಿಸುತ್ತಾರೆ. ಹಾಗೂ 1965-67ರ ಅವಧಿಗೆ ತುಮಕೂರು ಲೋಕ ಸಭಾ ಕ್ಷೇತ್ರದ ಲೋಕ ಸಭಾ ಸದಸ್ಯರೂ ಆಗುತ್ತಾರೆ. ಚುನಾವಣೆಗಳಲ್ಲಿ ನಿರಂತರ ಗೆಲ್ಲುವ ಜೊತೆಗೆ ಮಾಲಿ ಮರಿಯಪ್ಪನವರು ಮೈಸೂರು ಪ್ರದೇಶ ಕಾಂಗ್ರೆಸ್‌ನಲ್ಲಿ ವಿವಿಧ ಮಹತ್ವದ ಹುದ್ದೆಗಳನ್ನು ನಿಭಾಯಿಸುತ್ತಾರೆ. ತುಮಕೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಕರ‍್ಯರ‍್ಶಿ, ಪ್ರದೇಶ ಕಾಂಗ್ರೆಸ್ ಕಾರ‍್ಯಕಾರಿ ಸಮಿತಿ ಸದಸ್ಯ, ತುಮಕೂರಿನಲ್ಲಿ 1962ರಲ್ಲಿ ನಡೆದ ವರ‍್ಷಿಕ ಅಧಿವೇಶನದ ಸ್ವಾಗತ ಸಮಿತಿ ಸದಸ್ಯ, ತುಮಕೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಡಳಿತ ಮಂಡಳಿ ನಿರ‍್ದೇಶಕ, ಅಖಿಲ ಭಾರತ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಟಾಟಾ ಇನ್ಸಿಟಿಟ್ಯೂಟ್, ಬಳ್ಳಾರಿ ಸ್ಪಿನ್ನಿಂಗ್ ಮತ್ತು ವೀವಿಂಗ್ ಮಿಲ್‌ಗಳ ನಿರ‍್ದೇಶಕ, ಹಿಂದೂಪುರದ ಸೇವಾ ಮಂದಿರದ ನಿರ‍್ದೇಶಕರಾಗಿ ಕಾರ‍್ಯ ನಿರ‍್ವಹಿಸಿದ್ದಾರೆ. ಜೊತೆಗೆ ವಲ್ಲಭಬಾಯಿ ಪಟೇಲ್ ಮೆಮೋರಿಯಲ್ ನ್ಯಾಶನಲ್ ಸೊಸೈಟಿ ಹಾಗೂ ಮಹಾತ್ಮ ಗಾಂಧಿ ನ್ಯಾಶನಲ್ ಎಜುಕೇಶನ್ ಸೊಸೈಟಿ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ. 


ಗಾಂಧೀ ವಿಚಾರಧಾರೆಯನ್ನು ಅನುಸರಿಸುತ್ತ ಹಳ್ಳಿಗಳ ಸಮಗ್ರ ಬೆಳವಣಿಗೆಯತ್ತ ಸದಾ ಗಮನ ಹರಿಸುತ್ತಿದ್ದ ಇವರು ಹಳ್ಳಿಗರ ವ್ಯಾಜ್ಯಗಳನ್ನು ಪಂಚಾಯಿತಿ ಮಟ್ಟದಲ್ಲೇ ಬಗೆಹರಿಸಲೂ ಮುಂದಾಗುತ್ತಿದ್ದರು. ರೈತರ ಸಹಕಾರ ಸಂಘಗಳ ಸ್ಥಾಪನೆ, ಅಸ್ಪೃಶ್ಯತೆ ನಿವಾರಣೆ, ಅಧ್ಯಯನಬದ್ಧ ಶಿಸ್ತಿನ ಜೀವನಕ್ಕೆ ಆದ್ಯತೆ ನೀಡಿದ್ದರು. ಕಲಿಕೆಗೆ ಪೂರಕವಾಗಿ ಜನರಲ್ ಹಾಸ್ಟೆಲ್‌ಗಳು ಹಾಗೂ ಪಂಚಮರ ಹಾಸ್ಟೆಲ್ ಗಳನ್ನು ಆರಂಭಿಸಲು ಶ್ರಮಿಸಿದ್ದಲ್ಲದೆ ಮಧುಗಿರಿಯ ಅವರ ಸ್ವಂತ ಮನೆಯನ್ನೇ ಹಾಸ್ಟೆಲ್ ಆಗಿ ಪರಿವರ್ತಿಸಿದ್ದರು. 


ಶ್ರೀಯುತರು ಕೇವಲ 56ರ ವಯಸ್ಸಿನಲ್ಲೇ 1968ರಲ್ಲಿ ನಿಧನರಾಗುತ್ತಾರೆ. ಇವರ ನಂತರ ತುಮಕೂರು ಲೋಕ ಸಭಾ ಕ್ಷೇತ್ರದಿಂದ ಕೆ.ಲಕ್ಕಪ್ಪನವರು ಚುನಾಯಿತರಾಗುತ್ತಾರೆ.