ಭೋಗ ನಂದೀಶ್ವರದಲ್ಲಿ ಶಿವೋತ್ಸವ

ಭೋಗ ನಂದೀಶ್ವರದಲ್ಲಿ ಶಿವೋತ್ಸವ

ಭೋಗ ನಂದೀಶ್ವರದಲ್ಲಿ ಇಂದಿನಿಂದ ಶಿವೋತ್ಸವ

ಜಾತ್ರೆ-ಉತ್ಸವ

ಬಾಬು ಆರ್.ಎಲ್

 

            ಸುಮಾರು 2000ಕ್ಕೂ ಅಧಿಕ ವರ್ಷಗಳ ಶ್ರೀಮಂತ ಇತಿಹಾಸವಿರುವ ಹೆಗ್ಗಳಿಕೆ ಕನ್ನಡನಾಡಿನದ್ದು. ಚಾಲುಕ್ಯರು, ಹೊಯ್ಸಳರು, ಗಂಗರು ಹಾಗೂ ವಿಜಯನಗರ ಸಾಮ್ರಾಜ್ಯ ಸೇರಿದಂತೆ ಹಲವು ಮಹಾ ಸಾಮ್ರಾಜ್ಯಗಳು ಹಾಗೂ ರಾಜವಂಶಸ್ಥರು ಕನ್ನಡ ನಾಡ(ಕರ್ನಾಟಕ)ನ್ನು ಆಳಿ ಇಲ್ಲಿಯ ಇತಿಹಾಸ, ಸಂಸ್ಕೃತಿ, ಭಾಷಾಭಿವೃದ್ಧಿ ಹಾಗೂ ಬೆಳವಣಿಗೆಗೆ ಕಾರಣಕರ್ತರಾಗಿದ್ದಾರೆ.

            ಕನ್ನಡ ನಾಡು ಕೇವಲ ಭಾಷೆಯಿಂದ ಮಾತ್ರವಲ್ಲದೆ ಹಲವಾರು ವಿಭಿನ್ನ ವಿಶಿಷ್ಟ ಪ್ರದೇಶ, ಸಾಂಸ್ಕೃತಿಕ ಆಚರಣೆಗಳಿಂದಲೂ ಸಹ ಹೆಸರುವಾಸಿಯಾಗಿರುವುದು ಒಂದು ಗಮನಾರ್ಹ ಸಂಗತಿ. ಅಂತಹ ಸಾಂಸ್ಕೃತಿಕ ಆಚರಣೆಗಳ ಪೈಕಿ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಗ್ರಾಮದಲ್ಲಿ ನಡೆಯುವ ಶ್ರೀ ಭೋಗನಂದೀಶ್ವರ ಜಾತ್ರಾ ಮಹೋತ್ಸವವು ಅಗ್ರ ಪಂಕ್ತಿಯಲ್ಲಿ ನಿಲ್ಲುತ್ತದೆ.

ಭೋಗನಂದೀಶ್ವರನ ಇತಿಹಾಸ

            ಶ್ರೀ ಭೋಗನಂದೀಶ್ವರ ಸ್ವಾಮಿ ದೇವಾಲಯದ ಅರ್ಚಕರೇ ಹೇಳುವಂತೆ ಕ್ರಿ.ಶ. ಸುಮಾರು 6ನೇ ಶತಮಾನದ ರತ್ನಾವಳಿ ಮಹಾರಾಣಿಯವರು ಭೋಗನಂದೀಶ್ವರ ದೇವರ ಲಿಂಗ ಪ್ರತಿಷ್ಠಾಪನೆ ಮಾಡಿದರು. ಮುಂದುವರೆದು 8 ಹಾಗೂ 9ನೇ ಶತಮಾನದಲ್ಲಿ ಚೋಳ ವಂಶದ ಕೊನೆಯ ರಾಜರಾದ ರಾಜ ರಾಜೇಂದ್ರ ಚೋಳನು ದೇವಾಲಯದ ಕಟ್ಟಡಕ್ಕೆ ಅಡಿಪಾಯ ಹಾಕಿದನು ಎನ್ನಲಾಗಿದೆ.

            ನಂತರದ ಹೊಯ್ಸಳ ವಂಶದ ಆಳ್ವಿಕೆಯ ಅವಧಿಯಲ್ಲಿ ನಂದಿಗ್ರಾಮದಲ್ಲಿ ಉಮಾಮಹೇಶ್ವರ ಎಂಬ ಹೆಸರಿನಲ್ಲಿ ಕಲ್ಯಾಣಮಂಟಪ ಒಂದನ್ನು ನಿರ್ಮಿಸಿದ್ದಾರೆ. ಅಂದಿನಿಂದ ಪ್ರತಿವರ್ಷ ಮಹಾಶಿವರಾತ್ರಿಯ ದಿನದಂದು ಗಿರಿಜಾ ಕಲ್ಯಾಣ ಹಾಗೂ ಬ್ರಹ್ಮರಥೋತ್ಸವ ಕಾರ್ಯಕ್ರಮಗಳೆಲ್ಲವೂ ಇದೆ ಕಲ್ಯಾಣಮಂಟಪದಲ್ಲಿ ನಡೆಯುತ್ತವೆ ಎಂಬುದು ವಿಶೇಷ ಆಕರ್ಷಣೆ.

    ಹೊಯ್ಸಳರಷ್ಟೇಅಲ್ಲದೇಗಂಗರು,ಇತರರಾಜವಂಶಸ್ಥರಾದಪಲ್ಲವರುತಮ್ಮ ಆಳ್ವಿಕೆಯ ಅವಧಿಯಲ್ಲಿ ದೇವಾಲಯದಜೀರ್ಣೋದ್ದಾರಕ್ಕೆಶ್ರಮಿಸಿಕಲೆ ವಾಸ್ತುಶಿಲ್ಪಕ್ಕೆ ಸಂಬಂಧಿಸಿದಂತೆ ಡಮರುಗ, ಢಕ್ಕೆ, ಶಿವ ನಟರಾಜ ಸ್ವರೂಪ, ಶಿಲಾಬಾಲಿಕೆ ಹಾಗೂ ವಿಷ್ಣು ದೇವರುಗಳ ಕೆತ್ತನೆಗಳು ಹಾಗೂ ಇತರೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ದೇವಾಲಯದ ಜನಪ್ರಿಯತೆಗೆ ಮುನ್ನುಡಿ ಬರೆದಿದ್ದಾರೆ.

            ದೇವಾಲಯದ ಅಭಿವೃದ್ಧಿ ಕಾರ್ಯಗಳ ಯಾನವು 15ನೇ ಶತಮಾನದ ವಿಜಯನಗರ ಸಾಮ್ರಾಜ್ಯದ ಸಾಮ್ರಾಟ ಶ್ರೀಕೃಷ್ಣದೇವರಾಯರ ಕಾಲದವರೆಗೂ ಮುಂದುವರೆದಿತ್ತು. ಒಂದೊಂದು ಕಾಲಘಟ್ಟದಲ್ಲಿ ಒಂದೊಂದು ರಾಜಮನೆತನದವರುಈ ದೇವಾಲಯವನ್ನು ನಿರ್ಮಿಸಿದ್ದು, ಸುಮಾರು 800 ವರ್ಷಗಳ ಅವಧಿಯನ್ನು ನಿರ್ಮಾಣ ಕಾರ್ಯಕ್ಕೆಂದು ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗುತ್ತದೆ.

ಬ್ರಹ್ಮರಥೋತ್ಸವ ತೇರು ಕಟ್ಟುವ ಕಾರ್ಯವು ಆರಂಭ

            ಇನ್ನು ಜಾತ್ರೆಯ ಆಚರಣೆಯ ಕುರಿತು ಹೇಳುವುದಾದರೆ. ನಿರ್ದಿಷ್ಟವಾಗಿ ಇಂಥದ್ದೇ ವರ್ಷ ಆಚರಣೆಗೆ ಬಂತೆಂದು ಹೇಳಲಾಗದೇ ಇದ್ದರು ಪುರಾತನ ಕಾಲದಿಂದಲೂ ನಡೆದು ಬಂದಿದೆ ಎನ್ನುತ್ತಾರೆ ಬಲ್ಲವರು. ಜಾತ್ರೆಯ ದಿನಗಳಲ್ಲಿ ಇಲ್ಲಿನ ಜೋಡಿ ಕಲ್ಲಿನ ರಥ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದ್ದು, ಪ್ರತಿವರ್ಷದ ರಥಸಪ್ತಮಿ ದಿನದಂದು ರಥಕ್ಕೆ ಅಡಿಪಾಯ ಹಾಕಿ ಮುಂದಿನ ಪೌರ್ಣಮಿಯ ದಿನ ರಥ ನಿರ್ಮಾಣ ಮಾಡಲಾಗುತ್ತದೆ. ಈಗಾಗಲೇ ಯೋಗ ಮತ್ತು ಭೋಗ ನಂದೀಶ್ವರ ಬ್ರಹ್ಮರಥೋತ್ಸವ ತೇರುಗಳನ್ನು ಕಟ್ಟುವ ಕಾರ್ಯವು ಭರದಿಂದ ಸಾಗುತ್ತಿದ್ದು, ರಥದ ಚಕ್ರಗಳಿಗೆ ಅಚ್ಚುಗಳ ಜೋಡಣೆ, 30 ಅಡಿ ಎತ್ತರದ ಗೋಪುರವನ್ನು ಸಾರ್ವೆ ಗೊಜ್ಜು , ಬಿದಿರು, ತೆಂಗಿನ ಪಟ್ಟಿಗಳಿಂದ ರಥವನ್ನು ಕಟ್ಟಲಾಗಿದೆ. ಇದನ್ನು ಶಿವರಾತ್ರಿ ಹಬ್ಬಕ್ಕೆ ಎರಡು ದಿನ ಮುಂಚಿತವಾಗಿ ರಥವನ್ನು ಹಸ್ತಾಂತರಿಸಲಾಗುತ್ತದೆ. ಪ್ರತಿವರ್ಷ ಶಿವರಾತ್ರಿಯ ಮಾರನೆಯದಿನ ಶಿವ ಪಾರ್ವತಿ ಮತ್ತು ಗಣೇಶ ಮೂರ್ತಿ ಪ್ರತಿಷ್ಠಾಪನೆಯ ಎರಡು ರಥಗಳ ಜಾತ್ರಾ ಮಹೋತ್ಸವ ಆರಂಭವಾಗಿ ಬಹಳ ವೈಭವೋಪೇತವಾಗಿ ಸಹಸ್ರಾರು ಮಂದಿ ಭಕ್ತಗಣದ ಸಮ್ಮುಖದಲ್ಲಿ ನೆರವೇರುತ್ತದೆ.

            ಜಾತ್ರೆಯ ಪ್ರಯುಕ್ತ ಅಂಕುಲದಾರ್ಪಣೆ, ಕಂಕಣಧಾರಣೆ, ಶೇಷವಾಹನ, ವೃಷಭವಾಹನ, ಗಿರಿಜಾ ಕಲ್ಯಾಣ, ಬ್ರಹ್ಮ ರಥೋತ್ಸವ, ಓಕುಳಿ, ವಸಂತೋತ್ಸವ, ಉಯ್ಯಾಲೋತ್ಸವ ಸೇರಿದಂತೆ ವಿಶಿಷ್ಟ ಕಾರ್ಯಕ್ರಮಗಳು ನಡೆದು ಕೊನೆ ದಿನ ವೃಷಭಧ್ವಜ ಅವರೋಹಣದೊಂದಿಗೆ ಮುಕ್ತಾಯವಾಗುತ್ತದೆ.

            ಪ್ರತಿ ವರ್ಷವೂ ಶಿವರಾತ್ರಿಯ ಜಾಗರಣೆ ಪ್ರಯುಕ್ತ ನೆರೆದಿರುವ ಭಕ್ತಸಮೂಹಕ್ಕೆ ದೇವಾಲಯ ಆವರಣದಲ್ಲಿ ಧಾರ್ಮಿಕ ಮುಧ  ಮತ್ತು  ಮನರಂಜನೆ ನೀಡುವ ಸಲುವಾಗಿ ಸಾಂಸ್ಕೃತಿಕ ಹಾಗೂ  ಧಾರ್ಮಿಕ  ಕಾರ್ಯಕ್ರಮಗಳು ಜರುತ್ತಿದ್ದವು. ಆದರೆ ಈ ಬಾರಿ ಶಿವೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ವಿಶೇಷವಾಗಿ ಸರಿಗಮಪ ಖ್ಯಾತಿಯ ಹೆಸರಾಂತ ಕಲಾವಿದರಿಂದ ಸಂಗೀತ ಕಾರ್ಯಕ್ರಮ, ಹೆಸರಾಂತ ಹಾಸ್ಯ ಕಲಾವಿದರಿಂದ ನಗೆ ಹಬ್ಬ, ಕೇರಳದ ಖ್ಯಾತ ಚಂಡೆ ವಾದಕರಿಂದ ಚಂಡೆ ವಾದನ, ಹರಿಕಥೆ ಹಾಗೂ ಭಜನೆ ಸೇರಿದಂತೆ ವಿಶೇಷ ಜನಪ್ರಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

            ಜಾತ್ರೆ ನಡೆಯುವ ಅಷ್ಟೂ ದಿನಗಳು ರಥ ಬೀದಿಯ ಇಕ್ಕೆಲಗಳಲ್ಲಿ ಆಟಿಕೆ, ತಿಂಡಿ-ತಿನಿಸು, ಪಾನೀಯ ಸೇರಿದಂತೆ ವಿವಿಧ ರೀತಿಯ ಮಳಿಗೆಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗುತ್ತಿದೆ.

            ಶಿವೋತ್ಸವ ಜಾತ್ರೆಯನ್ನು ಯಶಸ್ವಿಯಾಗಿ ನೆರವೇರಿಸುವ ಸಲುವಾಗಿ ಜಿಲ್ಲಾಡಳಿತವು ವಿವಿಧ ಸಮಿತಿಗಳನ್ನು ರಚಿಸುವ ಮೂಲಕ ಭಕ್ತರಿಗೆ ಯಾವುದೇ ರೀತಿಯ ಕೊರತೆ ಬಾರದಂತೆ ನಿಗಾ ವಹಿಸಿದೆ.

            ಜಾತ್ರೆಯಲ್ಲಿ ಕುಡಿಯುವ ನೀರಿನ ಪೂರೈಕೆ, ಅನ್ನ ಸಂತರ್ಪಣೆ, ಸ್ವಚ್ಛತಾ ನಿರ್ವಹಣೆ, ಹೆಚ್ಚಿನ ಬಸ್ ಸೌಕರ್ಯ, ಕೃಷಿ ಮತ್ತು ತೋಟಗರಿಕಾ ಬೆಳೆಗಳ ವಸ್ತು ಪ್ರದರ್ಶನ, ಸ್ವ ಸಹಾಯ ಸಂಘಗಳು ಉತ್ಪಾದಿಸಿರುವ ವಸ್ತುಗಳನ್ನು ಮಾರಾಟ ಮಾಡಲು ಮಳಿಗೆಗಳನ್ನು  ಸಹ ತೆರೆಯಲು ಅನುವು ಮಾಡಿಕೊಡಲಾಗಿದೆ.

            ಈ ಜಾತ್ರೆಯಲ್ಲಿ ರಾಜ್ಯದ ಮೂಲೆ ಮೂಲೆಯಿಂದ ಹಾಗೂ  ಹೊರ  ರಾಜ್ಯಗಳಿಂದ  ಭಕ್ತರು ಆಗಮಿಸಿ ತಮ್ಮ ಇಷ್ಟಾರ್ಥಗಳನ್ನು ನೆರವೇರಿಸುವಂತೆ ಮೊರೆಯಿಡುತ್ತಾರೆ. ಅದರಲ್ಲೂ ನೆರೆ ರಾಜ್ಯವಾದ ಆಂಧ್ರಪ್ರದೇಶದ ಜನರು ಗ್ರಾಮಕ್ಕೆ ಬಂದು ಜಾತ್ರೆಯಲ್ಲಿ ಪಾಲ್ಗೊಳ್ಳುವುದಲ್ಲದೆ ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಜನಪ್ರಿಯ ಪ್ರವಾಸಿ ತಾಣ ನಂದಿಬೆಟ್ಟವನ್ನೂ ಕೂಡ ನೋಡಿ ಸವಿಯಬಹುದಾಗಿದೆ.

            ಪ್ರತಿ ಶಿವರಾತ್ರಿಗೆ ರಾಜ್ಯದ ವಿವಿಧ ಭಾಗದಿಂದ ಹಳ್ಳಿಕಾರ್, ಅಮೃತ್ ಮಹಲ್, ದೇವಣ್ಣಿ ಹಾಗೂ ಖಿಲ್ಲಾರಿ ಸೇರಿದಂತೆ ವಿವಿಧ ತಳಿ ರಾಸುಗಳನ್ನು ಜಾತ್ರೆಯ ವಾರದ ಮುಂಚೆಯೇ ಕರೆತಂದುರಾಸುಗಳಪ್ರದರ್ಶನಇಡಲಾಗುತ್ತದೆ. ಆರೋಗ್ಯ ಮತ್ತು ಪಶು ಇಲಾಖೆಯಿಂದ ಪ್ರದರ್ಶನಕ್ಕಿಟ್ಟರಾಸುಗಳನ್ನುತಪಾಸಣೆಮಾಡಿಉತ್ತಮ ರಾಸುಗಳಿಗೆ ವಿಶೇಷವಾಗಿ ಬಹುಮಾನ ವಿತರಿಸಲಾಗುತ್ತದೆ ಎನ್ನುತ್ತಾರೆ ಭೋಗ ನಂದೀಶ್ವರ ದೇವಾಲಯದ ಅರ್ಚಕರಾದ    ವಿಕಾಸ್ .

 

ಸಂತಸ ತಂದಿದೆ ಶಿವೋತ್ಸವ

            ಕಳೆದ ಎರಡು ವರ್ಷಗಳಿಂದ  ಸರ್ಕಾರದಿಂದ ಕೊರೊನಾ ಸೋಂಕು ನಿಯಂತ್ರಣ ಮಾರ್ಗಸೂಚಿಗಳಿರುವ ಕಾರಣ ನಂದಿ ಜಾತ್ರೆಯು ಸಾಂಕೇತಿಕವಾಗಿ ನಡೆದಿತ್ತು. ಈ ಬಾರಿ ಜಿಲ್ಲಾಡಳಿತದಿಂದ ಶಿವೋತ್ಸವ  ವಿಜೃಂಭಣೆಯಿಂದ ಆಚರಿಸುತ್ತಿರುವುದು ತುಂಬಾ ಸಂತಸವಾಗಿದೆ.

 ನವೀನ್, ಸ್ಥಳೀಯ ನಿವಾಸಿ