ಕತಾ ಸರಿತ್ಸಾಗರ  ಡಾ. ವಿಜಯ ರಾಘವೇಂದ್ರ

ಕತಾ ಸರಿತ್ಸಾಗರ  ಡಾ. ವಿಜಯ ರಾಘವೇಂದ್ರ

ಕತಾ ಸರಿತ್ಸಾಗರ   ಡಾ. ವಿಜಯ ರಾಘವೇಂದ್ರ

ಕತಾ ಸರಿತ್ಸಾಗರ

 ಡಾ. ವಿಜಯ ರಾಘವೇಂದ್ರ

 

ಮೂಳೆಯ ಮಜ್ಜೆಯದೊಳಿಷ್ಟು ವಷ೯ ಜಡವಾಗಿ ಕುಳಿತಿದ್ದೆನೋ ಕಾಣೆ, ಚಲನೆ ಶುರುವಾಯಿತು ಒಮ್ಮೆಲೆ. ಆದರೆ, ನಿಧಾನವಾಗಿ ನನ್ನಲ್ಲಿ ಕಬ್ಬಿಣದ ಅಂಶ ಮೀಥೈನ್‌ ಕೊಬಾಲಮೈನ್‌ ಜೊತೆಯಾಗಿ ಹೀಮಾಗಿ ಲವಲವಿಕೆ ಸೃಷ್ಟಿಸಿತು. ಮಜ್ಜೆಯು ಹಿಡಿತದ ಅಪ್ಪುಗೆ ಸಡಿಲವಾಗಿ ರಕ್ತನಾಳದಲ್ಲಿ ಸರಾಗವಾಗಿ ತೂರಿ, ಜಾರಿ ರಕ್ತದ ದ್ರಾವಣದಲ್ಲಿ ತೇಲಾಡಿ ಕಣ್ಣು ಬಿಡುವ ಸಂಭ್ರಮವಿನ್ನೂ ಮುಗಿಯುವ ಮೊದಲೇ ನನ್ನ ಎಲ್ಲಾ ಜೀವ ರಹಸ್ಯದ ಕೇಂದ್ರಬಿಂದುವಾಗಿದ್ದ (ಕೋಷಕೇಂದ್ರ) ನನ್ನಿಂದ ಬೇರಾಗುವ ಸಂಚನ್ನು ನನ್ನೊಳಗಣ ಮೈಟೋಕಾಂಡ್ರಿಯಾಗಾಲ್ಲಿ ಆಪರೇಟಸ್‌ ಇನ್ನಿತರೆಗಳು ಸೇರಿ ರೂಪಿಸಿರುವುದು ಕಂಡು ಹೌಹಾರಿದೆ. ನ್ಯೂಕ್ಲಿಯಸ್‌ ಅಂತವಾ೯ಣಿ ನುಡಿಯಿತು. ನೀನು ಕಬ್ಬಿಣದ ಅಪಾರ ಖನಿಜಾಂಶವನ್ನು ಹೊಂದಿರುವೆ. ನಿನ್ನ ಜೀವನದ ಕೊನೆಯ ಉದ್ದೇಶ ಚಲನೆ ಇಲ್ಲದ ಆನೇಕ ಜೀವಕೋಶಗಳಿಗೆ ಶ್ವಾಸಕೋಶದಿಂದ ಆಮ್ಲಜನಕ ತಂದುಕೊಟ್ಟು ಶಕ್ತಿ ಸಂಚಯವಾಗಲು ಸೃಷ್ಟಿಯ ಸಂಕಲ್ಪ ಸಜೀವವಾಗಿರಲು ನಾನು ನನ್ನಿತರ ಗೆಳೆಯರು ನಿನಗೆ ಭಾರವಾಗಿರಲೆಂದು ನಿನ್ನಿಂದ ಹೊರಹೋಗಲೇಬೇಕು. ಹಠ ಮಾಡಿದರೆ ಅಗೋ ಆ ರೆಟಿಕ್ಯುಲೋಸೈಟ್‌ನಂತೆ ಅಪ್ರಬುದ್ಧ ಕೆಂಪು ರಕ್ತಕಣವಾಗೇ ಅಪ್ರಯಾಜಕನಾಗಿ ಉಳಿದು ಬಿಡುವೆ ಎನ್ನುತ್ತಲೇ ನನ್ನಿಂದ ಕೊಸರಿ, ಹೊಸರಿ ಹೊರಗೋಗಿ ಕಣ್ಣ ಮುಂದೆ ಕಳೆದು ಹೋದರು. ನನ್ನೊಳಗಲ್ಲದೆ ಅವರು ಬದುಕಲಾರರೆಂದು ನೆನಪಾಗಿ ಮೈ ಜುಮ್ಮೆಂದಿತು.

 

ಪಕ್ಕದಲ್ಲಿ ನನ್ನಂತೆಯೇ ಇದ್ದ ಕೆಂಪುರಕ್ತಕಣ ಹೇಳಿತು. "ಚಲ್‌ ಮೇರಿ ಬಾಯಿ ಬಾಹರ್‌ ತೂಪಾನ್‌ ಪಡಾ ಹೈ" ನನ್ನಂತಹ ಹಲವರು ವೇಗವಾಗಿ ಹೃದಯಕ್ಕೋಗಿ, ಹೃದಯದಿಂದ ಶ್ವಾಸಕೋಶಕ್ಕೋಗಿ ಶ್ವಾಸಕೋಶದಲ್ಲಿ ಇಂಗಾಲದ ಡೈಆಕ್ಸೈಡ್‌ ಹೊರಹಾಕಿ, ಆಮ್ಲಜನಕವ ತೆಗೆದುಕೊಂಡು ಒತ್ತಡದ ಕೆಲಸದಲ್ಲಿರುವ ದೇಹದ ವಿವಿಧ ಜೀವಕೋಶಗಳಿಗೆ ಪೂರೈಸುವ ಕೆಲಸದಲ್ಲಿ ತೊಡಗಿಕೊಂಡೆ. "ಏನಾಯಿತು" ಗೊತ್ತಿಲ್ಲ, ಹೊರಗಿನ ಪ್ರಪಂಚದ ಯಾವುದೋ ದುಷ್ಟಶಕ್ತಿಯ ನಡುವೆ ಅಳಿವು ಉಳಿವಿನ ಹೋರಾಟ ನಡೆಯುತ್ತಿರಬೇಕು ಎಂದನೊಬ್ಬ ಮುದುಕ. ನೋಡುತ್ತಲೇ ಆಗಷ್ಟೇ ಮುಖಪರಿಚಯವಾಗಿದ್ದ ಕೆಲ ಗೆಳೆಯರು ಕಳೆದುಹೋದರು. ಕಿಡ್ನಿಯಿಂದ ಮೂಳೆಯ ಮಜ್ಜೆಗೆ ಮತ್ತಷ್ಟು ಕೆಂಪು ರಕ್ತ ಕಣಗಳನ್ನು ಬೇಗ ಬಿಡುಗಡೆಮಾಡುವ ಸಂದೇಶ ರವಾನೆಯಾಯಿತು. ಅನೇಕ ಕಿರಿಯರು ಒಮ್ಮೆಲೆ ಜೀವದ್ರವದಲ್ಲಿ ಬಿಡುಗಡೆಯಾದರು. ಅದರಲ್ಲಿ ಕೆಲವರು ಅಪ್ರಬುದ್ಧರು, ಶಕ್ತಿಹೀನರೂ ಆಗಿದ್ದರು. ಅವರೆಲ್ಲ ಶ್ರಮವಹಿಸಿ ದುಡಿಯುತ್ತಿದ್ದರು. ನಮ್ಮ ನಾಲ್ವರಿಗೆ ಒಬ್ಬರಂತೆ ಕಾಣುತ್ತಿದ್ದ ಕಿರುಬಿಲ್ಲೆಗಳು ಅಥವಾ ಪ್ಲೆಟ್‌ಲೆಟ್ಸ್‌ ಸಂಖ್ಯೆಯಲ್ಲಿ ಕಡಿಮೆಯಾದರು. ಅವರೆಲ್ಲಾ ಒಟ್ಟಾಗಿ ಜೀವದ್ರವ ರಕ್ತನಾಳಗಳಿಂದ ಹೊರ ಒಸರದಂತೆ ಒಟ್ಟಾಗಿ ಬಲೆ ನೇಯುತ್ತಿದ್ದಾರೆಂಬ ಸುದ್ದಿಬಂತು. ಜೀವದ್ರವ ಹೊಸರುವ ಪಕ್ಕದಲ್ಲೇ ಒಂದೆರಡು ಬಾರಿ ತಿರುಗಿದೆ. ಸುತ್ತಮುತ್ತನಿನ ಗೆಳೆಯರಲ್ಲಿ ಕೆಲವರು ಕಳೆದು ಹೋದದ್ದು ಗಮನಿಸಿದೆ.

 

ಬಿಳಿರಕ್ತದ ಕಣಗಳನೇಕರು ಆಗಾಗ್ಗೆ ಎದುರು ಬದರಾಗುತ್ತಿದ್ದರು. ಅವರಲ್ಲಿ ಮುಖ್ಯವಾಗಿ ಐದು ಪಂಗಡಗಳಿದ್ದವು. ಅದರಲ್ಲಿ ಕೆಲವರು ದಪ್ಪಗಿದ್ದು ವೈರಿಗಳನ್ನು ನುಂಗಿಬಿಡುತ್ತಿದ್ದರು. ಕೆಲವೊಮ್ಮೆ ವೈರಿಗಳು ನ್ಯೂಟ್ರೋಫಿಲ್ಸ್‌ಗಳು ತನುವನ್ನು ಸೀಳಿ ಹೊರ ಬರುತ್ತಿದ್ದುದುಂಟು. ವೈರಿಗಳ(ವೈರಾಣುಗಳು) ಸಾಮಥ್ಯ೯ ಹೆಚ್ಚಾದಷ್ಟು ನಮ್ಮ ಪರಿಸರದಲ್ಲಿ ಕಾವೇರಿ ಕೆಂಪಾಗಿ ನಮ್ಮ ಸಾಮಥ್ಯ೯ದಲ್ಲಿ ಕುಂದಾಗಿ ಆಯಾಸ ಉಸಿರುಗಟ್ಟಿಸುತ್ತವೆ ಎನ್ನುವಷ್ಟದಲ್ಲಿ ವೈರಾಣುಗಳು ತಮ್ಮಷ್ಟಕ್ಕೆ ತಾವು ಸಾಯುವುದನ್ನು ಕಂಡು ನಿಟ್ಟುಸಿರುಬಿಟ್ಟಾಗ ಗೆಳೆಯನೊಬ್ಬ ಕಳೆದು ಹೋದ ಉಸಿರ ಪುನಃ ಪಡೆದುಕೊಳ್ಳುತ್ತಾ ಭುಜದ ಮೇಲೊರಗಿ ನುಡಿದ ದೇವರು ದೊಡ್ಡವನು. ಲಿಂಪೋಸೈಟ್‌ ಎಂಬ ಬಿಳಿರಕ್ತದ ಪಂಗಡದವರಂತೂ ಸತ್ತ ವೈರಾಣುಗಳ ಪೋಸ್ಟ್‌ಮಾಟ೯ಮ್‌ ಮಾಡಿ ಸ್ಪ್ಲೀನ್‌ ಗುಲ್ಮ ಎಂಬ ಅಂಗಾಂಶಕ್ಕೆ ವರದಿಸಲ್ಲಿಸುವ ಪತ್ತೇದಾರಿಗಳಂತೆ ಕೆಲಸ ಮಾಡುತ್ತಿದ್ದರು.

ಎಷ್ಟು ಅಂತ ಗೊತ್ತಿಲ್ಲ, ಎಲ್ಲವೂ ಸಾಧಾರಣ ಸ್ಥಿತಿಗೆ ಬಂತು. ಹಾಗೇ ಆಮ್ಲಜನಕ ಒಯ್ಯುತ್ತಾ ವಿವಿಧ ಜೀವಕೋಶಗಳ ಒಡನಾಟದಲ್ಲಿ ಒಳ್ಳೆಯವನಾಗಿ ಸಲುಗೆ ಸಾಧಿಸಿದ ಮೇಲೆ ಮಾತನಾಡಲಾರಂಬಿಸಿದೆ.

 

ಯಕೃತ್‌ನಲ್ಲಿನ ಜೀವಕೋಶ ಜೀವರಸದಲ್ಲಿರುವ ತ್ಯಾಜ್ಯವನ್ನು ವಿಂಗಡಿಸಿ ವಿಷವನ್ನು ವಿಷಕಾರಿಯಲ್ಲದ ರೀತಿಯಲ್ಲಿ ಪರಿವತಿ೯ಸುತ್ತಿದ್ದ ಕೊಂಚ ದಪ್ಪಗಿದ್ದ, ಬೆಳ್ಳಗಿದ್ದ ಅವನ ಕೆಲಸದಲ್ಲಿ ಕೊಂಚ ಮಂದವಾಗಿದ್ದ. ಕೇಳಿದರೆ ಅವನಲ್ಲಿರುವ ಕರಗದ ಸಕ್ಕರೆ ಅಂಶ ಅವನಿಗೆ ನಿದ್ದೆ ತರಿಸುತ್ತಿದೆ ಎಂದ.

 

ಕಿಡ್ನಿಯಲ್ಲಿನ ಜೀವಕೋಶದ ಗೆಳೆಯನೊಬ್ಬ ರಕ್ತದ ಶುದ್ದೀಕರಣ, ರಕ್ತದೊತ್ತಡ ಮಾಪನ ಮತ್ತು ನನ್ನಂತ ಕೆಂಪುರಕ್ತ ಕಣಗಳ ಸಂಖ್ಯೆಯನ್ನು ಎಣಿಸಿ ಮೂಳೆಮೊಳಗಿನ ಮಜ್ಜೆಗೆ ಸಂದೇಶ ರವಾನಿಸುತ್ತಿದ್ದ. ಅವನು ಇತ್ತೀಚೆಗೆ ಕಾಯಿಲೆಗೊಳಗಾಗಿದ್ದನಂತೆ. ಅದಕ್ಕೇ ತುಸು ಪೇವಲವಾಗಿ, ನೀರಸವಾಗಿ ಕೆಲಸ ಮಾಡುತ್ತಿದ್ದ.

 

"ಹೇಯ್‌ ನಿನ್ನಲ್ಲಿ ಕಬ್ಬಿಣದ ಅಂಶದ ಕೊರತೆಯಿದೆ". ಗುಲ್ಮದ ಗೆಳೆಯನೊಬ್ಬ ನುಡಿದ. ಹಾಗೇನಿಲ್ಲಾ ನಾನು ಆರೋಗ್ಯವಾಗಿಯೇ ಇದ್ದೇನೆ". ನಕ್ಕನವ. " ಇದು ಸ್ಮಷಾನ ಮುದುಕರ, ಅಶಕ್ತರಿಗೆ ಘೋರಿಗಳ ಕಟ್ಟುವ ಸ್ಥಳ" ಎದೆ ಜುಮ್ಮೆಂದಿತು. " ನೀನು ಮತ್ತೊಮ್ಮೆ ಬಂದಾಗ ಪರೀಕ್ಷಿಸುತ್ತೇನೆ. ಈಗ ನಿನ್ನ ಹಾಗೇ ಬಿಟ್ಟಿರುತ್ತೇನೆ ಎಂದ. ಮತ್ತೊಮ್ಮೆ ಅತ್ತ ಹೋಗಲೇಬಾರದೆಂದು ನಿಧ೯ರಿಸಿದೆ. ಅವನು ಕೈ ಹಿಡಿದು ಆಪ್ಯಾಯತೆಯಿಂದಲೇ ಹೇಳಿದ. ಒಮ್ಮೊಮ್ಮೆ ನಮ್ಮ ಮೂಲ ಮಜ್ಜೆಯಲ್ಲೇ ಕಾಯಿಲೆಗಳಿರುತ್ತವೆಯೆಂದು ಅದರಿಂದ ಸೃಸ್ಟಿಯಾಗುವ ಕೆಂಪು ರಕ್ತಕಣಗಳು ಅಶಕ್ತರೂ, ಅಸ್ವಭಾವಿಕರಾಗಿರುತ್ತಾರೆ. ಅವರಿಂದ ಇಡೀ ವ್ಯವಸ್ಥೆಗೆ ತೊಂದರೆಯೆಂದು ವ್ಯವಸ್ಥೆಯನ್ನು ಸ್ವಚ್ಛಮಾಡುವುದು ಅವಶ್ಯಕವೆಂದು ನನ್ನಂತ ಇಬ್ಬರು ಅಶಕ್ತರ ಬದಲಿಗೆ ಒಬ್ಬ ಶಕ್ತನಿರುವುದು ಒಳಿತಲ್ಲವೇ ಎಂದು ನಲ್ಮೆಯಿಂದ ಹೇಳಿದ. ನಿನ್ನ ದೇಹ ಬಾಡಿಗೆ ಮಾತ್ರ. ಅದು ನೀನಲ್ಲ ಎಂದಿದ್ದು ದೂರದಿಂದ ಕೇಳಿದಂತಾಯಿತು.

 

ಎಲ್ಲೋ ಒಂದೆಡೆ ಭಯ ಶುರುವಾಯಿತು. ಬದುಕುವ ಆಸೆ ಜಾಸ್ತಿಯಾಯಿತು. ಕರುಳಿನ ಜಠರದ ಜೀವಕೋಶಗಳ ಮುಂದೆ ಮಂಡಿಯೂರಿ ಕಬ್ಬಿಣದ ಅಂಶಕ್ಕಾಗಿ ಅಂಗಲಾಚಿದೆ. ಇದ್ದವರು ಕೊಟ್ಟರು. ಇಲ್ಲದವರು ಇಲ್ಲವೆಂದರು. ಇದ್ದೂ ಇಲ್ಲದವರು?

 

ಹೃದಯದ ಜಿಡ್ಡಿನಿಂದ ಕಿರಿದಾದ ರಕ್ತದ ಓಣಿಗಳಲ್ಲಿ ಅಲ್ಲಿನ ಲಯಬದ್ಧ ಚಲನೆಯಲ್ಲಿ ಅನೇಕ ಬಾರಿ ಅನಿಸುವುದುಂಟು, ನಮ್ಮನ್ನು ಮೀರಿದ ಒಳಗೊಂಡ ಕಾಣದ ಅಥವಾ ನಮ್ಮೊಳಗಿನ, ನಮ್ಮರಿವಿಗೆ ಬಾರದ ಆಯಾಮಗಳಿವೆಯೇ ನನ್ನ ಸುತ್ತಲಿನ ಪ್ರಪಂಚದ ಲಯಕಾರನಾರು, ನನ್ನ ಸ್ಥಿತಿಗತಿ ನಿಧ೯ರಿಸುವುದಾರು, ನನ್ನ ಸುತ್ತ ಇರುವುದು ಭ್ರಮೆಯೇ. ಒಮ್ಮೊಮ್ಮೆ ಮನಸ್ಸಿನಲ್ಲಿರುವುದನ್ನು ನುಡಿದೆ. ಕೆಲವರು ನಕ್ಕರು. ಕೆಲವರು ಹುಚ್ಚನೆಂದರೆ ಕೆಲವರು ವೇದಾಂತಿಯೆಂದರು.  ಅನೇಕ ಹೊಸ ಹುಡುಗರು ಮುಪ್ಪಾಯಿತೆಂದು ನಗಾಡಿದರು.

 

ಕೆಲಸಮಾಡುವ ಮಾಂಸ ಖಂಡಗಳಿಗೆ ಪ್ರಾಣಶ್ವಾಸವ ಕೊಟ್ಟೆ. ಬೆಳಗ್ಗೆ ಯೋಗಿಗಳಂತೆ ಕುಳಿತು ಒಂದಕೊಂದು ಬೆಸೆದುಕೊಂಡರು, ಯಾವ ಕೆಲಸ ಮಾಡಬೇಕೆಂದು ನಿಯಂತ್ರಣ ಹೇರುವ ಮೆದುಳಿನ ನರಗಳ ಸಮೂಹದ ಮಧ್ಯೆ ಹರಿದಾಡಿದೆ. ಅವರೆಷ್ಟು ಧ್ಯಾನಾಸಕ್ತರಾಗಿದ್ದರೆಂದರೆ ನನ್ನ ಗಮನಿಸುತ್ತಲೇ ಇರಲಿಲ್ಲ. ಮತ್ತೊಂದು ಜನ್ಮವಿದ್ದರೆ ಅವರಂತಾಗಬೇಕೆಂದುಕೊಂಡೆ.

 

ಮುಂಚಿನಷ್ಟು ಉತ್ಸಾಹ ಹುಮ್ಮಸ್ಸು ಈಗಿಲ್ಲವೆನಿಸಿತು. ಈ ವ್ಯವಸ್ಥೆಯ ಒಳಗೆ ಎಲ್ಲರೊಂದಾಗಿ ಕೆಲವರಲ್ಲೊಬ್ಬರಾಗಿ ದುಡಿದು ಜೀವನದ ಸಾಥ೯ಕ್ಯ ಕಂಡುಕೊಳ್ಳುವ ಸಂಭಾವ್ಯ ಕ್ಷೀಣವಾಗತೊಡಗಿತ್ತು. "ಸತ್ತ ನಂತರ ಬದುಕುವ ಅದಮ್ಯ ಆಸೆ ಅಮರಿಹೋಗುತಿತ್ತು.

ಪ್ರತಿ ಸಾರಿಯೂ ಹೊಸ ಕಾವಲುಗಾರ ಎದುರಾದಾಗಲೆಲ್ಲ ವಿಕಟವಾಗಿ ನಗುತ್ತಿರುವ ಸ್ಪ್ಲೀನ್‌ ಗುಲ್ಮಾದಂತಿತ್ತು. 

 

ಅದೇಗೋ ಬಂದನೋ ನನ್ನೊಡಲಲ್ಲೊಬ್ಬ ಪರಜೀವಿ, ಪ್ಲಾಸ್ಮೋಡಿಯಂ ಎಂಬ ಪರಜೀವಿ ಬೆಳೆಯತೊಡಗಿದ. ಬೆಳೆದಂತೆ ಭಾರವಾದ ನನ್ನಲ್ಲಿನ ಎಲ್ಲವನ್ನೂ ಹೀರಿಕೊಂಡ. ನನ್ನವರೆಲ್ಲಾ ನನ್ನಿಂದ ದೂರವಾದರು. ನನ್ನನ್ನು ಹೊಡೆದು ಹೊರಬರುವ ಅವನ ಪ್ರಯತ್ನಕ್ಕೆ ವಿರುದ್ಧವಾಗಿ ಹೋರಾಡತೊಡಗಿದೆ.

 

ನನಗೆ ಗೊತ್ತಾಯ್ತು ನಾನು ಸಾಯುತ್ತೇನೆ. ಬಹುಷಃ ದೇವರು ನೆರವು ನೀಡುವ ಮುನ್ನ ನನ್ನೊಡನ ಬಗೆದು ಹೊರಬಂದು ಪರಜೀವಿ ಮತ್ತೊಬ್ಬ ಕೆಂಪುರಕ್ತಕಣವನ್ನು ಆವರಿಸುವ ಮುನ್ನ ಆವರನ್ನು ನನ್ನೊಡಲಲ್ಲೆ ಬಂದಿಸಿಟ್ಟು ಗುಲ್ಮಾನ ಕಾವಲುಗಾರನಿಗೆ ಒಪ್ಪಿಸುವುದೇ ನನ್ನ ಧ್ಯೇಯ ಎನಿಸಿತು. ವಿಪರೀತ ಆಯಾಸ ಪರಜೀವಿಯೊಡನೆ ಅಂತಃಕಲಹ ಕಳೆದು ಕಳೆದು ಬರುವ ಪ್ರಜ್ಞೆ ಸುಧೀಘ೯ ಸಮಯವಿರಬೇಕು.  ಗುಲ್ಮಾನ ಕಾವಲುಗಾರನ ಮುಂದೆ ಮೊಣಕಾಲೂರಿ ಕುಳಿತೆ. ಯಾರಿಂದ ಇಷ್ಟುದಿನ ತಪ್ಪಿಸಿ ತಿರುಗುತ್ತಿದ್ದೆನೋ ಅವನಿಗೇ ತಲೆಯೊಡ್ಡಿದೆ. ಜೀವನದಲ್ಲಿನ ಸಾಥ್ಯ೯ಕ್ಯಕ್ಕಿಂತ ಸಾವಿನಲ್ಲೇ ಸಾಥ್ಯ೯ಕ್ಕೆ ಕಾಣಲಣಿಯಾದೆ. ಕಾವಲುಗಾರ ಒಮ್ಮೆಲೇ ಒಳಗೆಳೆದುಕೊಂಡ. ನಾನು ಪುಡಿಪುಡಿಯಾಗುತ್ತಿರುವಾಗ ಪರಜೀವಿ ಸಾವಿನ ಆಕ್ರಂದನೊ+ ಮಧ್ಯೆ ನನ್ನ ಕಟ್ಟ ಕಡೆಯ ನೆನಪೊಂದೇ, ಗುಲ್ಮಾನ ಕಾವಲುಗಾರ ಕುಣಿಯುತ್ತಿದ್ದ. ದೇವರು ಕಣ್ತೆರೆದ. ಬಹುಷಃ ಪರಜೀವಿಗಳು ತಮ್ಮಷ್ಟಕ್ಕೆ ತಾವೇ ಬಹುಷಃ ಪರಜೀವಿಗಳು ತಮ್ಮಷ್ಟಕ್ಕೆ ತಾವೇ ಸಾಯತೊಡಗಿರಬೇಕು...

 

ನೀರವ-ನಿಶ್ಯಬ್ಧ-ಅಖಂಡ ಮೌನ-ಅನಂತತೆಯ ಆದಿಯಲ್ಲೇ ಯಕೃತ್‌ನ ಜೀವಕೋಶವೊಂದರಲ್ಲಿ ಜೀವ ಸಂಚನವಾಗಿ ಎಳೆಯವನಾಗಿ ಬೆರಗಿನಿಂದ ಕಣ್ತರೆದೆ. ನನ್ನಲ್ಲಿನ ನ್ಯೂಕ್ಲಿಯಸ್‌, ಮೈಟೋಕಾಂಡ್ರಿಯ ಗಾಲ್ಲಿ ಆಪರೇಟಸ್‌ಗಳು ನನ್ನಿಂದ ಬೇರೆಯಾಗುವುದಿಲ್ಲವಷ್ಟೆ.