ಭೂಮಿಯಲ್ಲಿ ಕಾಲೂರಿ ಆಕಾಶದ ಧ್ಯಾನ
ಮನುಷ್ಯ ಹೀಗೆ ದೇಹಸಹಿತವಾದ ಜೀವಿ ಎಂಬ ಗ್ರಹಿಕೆಯನ್ನು, ಕನ್ನಡದ ಮಟ್ಟಿಗಾದರೂ, ಮೊದಲು ತೋರಿಸಿದ್ದು ‘ಲಂಕೇಶ್ ಪತ್ರಿಕೆ’ಯೇ. ವಿಚಿತ್ರ ಎನಿಸಬಹುದಾದ ಈ ಹೇಳಿಕೆಯನ್ನು ಉದಾಹರಣೆಗಳೊಂದಿಗೆ ಸರಳಗೊಳಿಸಿ ನೋಡಬಹುದು. ಕನ್ನಡ ಅದುವರೆಗೆ ಕಂಡಿದ್ದ ಪತ್ರಿಕೋದ್ಯಮ- “ಹೇಳಿದರು, ತಿಳಿಸಿದರು, ಖಂಡಿಸಿದರು” ಎಂಬ ‘ವಸ್ತುನಿಷ್ಟ’ ನಿರ್ಭಾವುಕ, (ಕೆಲವೊಮ್ಮೆ ನಿರ್ಜೀವ) ಬಗೆಯದು. ಇಂಥ ವಾತಾವರಣದಲ್ಲಿ ಮೊದಲ ಬಾರಿ ಕವಿ ಹೃದಯ ಮತ್ತು ಜನಸಾಮಾನ್ಯನ ನಿರ್ಭಿಡೆಯ ವಿವೇಕಗಳನ್ನು ಒಗ್ಗೂಡಿಸಿ ಮಾತಾಡಿದ್ದು ‘ಲಂಕೇಶ್ ಪತ್ರಿಕೆ’ಯೇ.
ಲಂಕೇಶ್ ನೆನಪು-25
ಎನ್.ಎಸ್.ಶಂಕರ್
ಎಂಬತ್ತರ ದಶಕದಲ್ಲಿ ಸಾಹಿತ್ಯ, ಸಂಸ್ಕೃತಿ, ರಾಜಕೀಯ ರಂಗದಲ್ಲಿ ವಿಜೃಂಭಿಸತೊಡಗಿದ್ದ ಮೀಡಿಯೋಕ್ರಿಟಿಯನ್ನು ಎದುರಿಸುವ ಸಲುವಾಗಿ ಲಂಕೇಶ ಅವರು ಪತ್ರಿಕೆಯನ್ನು ಹುಟ್ಟುಹಾಕಿದರು. ಲಂಕೇಶರ ಅಗಾಧ ಕರ್ತೃತ್ವ ಶಕ್ತಿಗೆ, ಚಿಲುಮೆಯಂಥ ಬರಹಕ್ಕೆ ಬೆರಗಾದ ಕನ್ನಡನಾಡು, ಅವರಿಲ್ಲದ ಈ ಇಪ್ಪತ್ನಾಲ್ಕು ವರ್ಷಗಳ ನಂತರವೂ ನೆನೆಯುತ್ತಿದೆ. ಅದಕ್ಕೆ ಕಾರಣ ಅವರ ನಿಷ್ಠುರತೆ ಮತ್ತು ನಿರ್ಭಿಡೆ.
ಲಂಕೇಶ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದ್ದನ್ನೇ ನಿಮಿತ್ತ ಮಾಡಿಕೊಂಡು ಪತ್ರಕರ್ತರ ಸಂಘ ಅವರನ್ನು ‘ಸಂವಾದ’ಕ್ಕೆ ಕರೆದಾಗ, ಕೆಲವೇ ದಿನಗಳ ಹಿಂದೆ ಆಸ್ಪತ್ರೆಯಿಂದ ಹೊರಬಂದಿದ್ದ ಮೇಷ್ಟ್ರು ಹಣ್ಣಾಗಿದ್ದರು. ಆಗ ತಾನೇ ನಡಿಗೆ ಕಲಿತ ಮಗುವಿನಂತೆ ಅಸ್ಥಿರ ಹೆಜ್ಜೆಗಳನ್ನಿಡುತ್ತ ಸಂಘದ ಮೆಟ್ಟಿಲೇರಿ ಮೇಲೆ ಬಂದ ಮೇಷ್ಟ್ರು ಪಿಸುಮಾತಿನಂಥ ಸ್ವರದಲ್ಲಿ ಸಾಹಿತ್ಯ, ಪತ್ರಿಕಾವೃತ್ತಿ ಮತ್ತು ಮೂಲದ ಬದುಕುಗಳ ಬಗ್ಗೆ ತಮಗೆ ತಾವೇ ಎಂಬಂತೆ ಹೇಳತೊಡಗಿದರು.
ನೋಡನೋಡುತ್ತ ಮಾತಿನ ಕಸುವಿನ ಜತೆ ಸ್ವರವೂ ಗಟ್ಟಿಯಾಯಿತು. ಮಧ್ಯೆ ಹೇಳಿದರು, “ನನ್ನ ದೈಹಿಕ ಸ್ಥಿತಿಯ ಕಾರಣ ಮಧ್ಯೆ ಮಧ್ಯೆ ಕಂಬನಿ ಬರುತ್ತೆ. ಯಾರೂ ಅದನ್ನು ನನ್ನ ಭಾವಸ್ಥಿತಿ ಎಂದು ತಿಳಿಯಬಾರದು. ಸಾರ್ವಜನಿಕ ವೇದಿಕೆ ಮೇಲೆ ಅಳಬಾರದು ಎಂದು ಲೋಹಿಯಾ ಎಂದೋ ಹೇಳಿದ್ದಾರೆ…”
ಈ ಅಳುವಲ್ಲದ ಕಣ್ಣೀರು.
ನನ್ನ ಕಣ್ಣು ತೇವವಾದದ್ದು ಯಾಕೆಂದು ನನಗಿನ್ನೂ ಅರ್ಥವಾಗಿಲ್ಲ. ಹಾಗೆ ಅಳುವಲ್ಲದ ಕಣ್ಣೀರು ಬರಿಸಿದ ಮೇಷ್ಟ್ರ ದೈಹಿಕ ಸ್ಥಿತಿಯೂ ಅಷ್ಟೇ ನಿಗೂಢವಾದದ್ದಿರಬಹುದು. ವೈದ್ಯರು ನಾನಾ ತಜ್ಞ ಅಭಿಪ್ರಾಯ ನೀಡಬಲ್ಲರು. ಹಾಗೇ ತತ್ವಜ್ಞಾನಿಗಳು, ಕವಿಗಳು ಮನಸ್ಸಿನ ನಾನಾ ಪ್ರೇರಣೆಗಳನ್ನು ವಿವರಿಸಬಹುದು.
ಆದರೆ ಈ ವಿವರಣೆ, ಅಭಿಪ್ರಾಯಗಳು ದೇಹದ ಪಂಜರದೊಳಗೆ ಬಂದಿಯಾದ ಚೈತನ್ಯದ ಎಲ್ಲೆ ಕಟ್ಟುಗಳನ್ನು ನಿರ್ಣಯಿಸಿಯಾವೇ?
**
ಮನುಷ್ಯ ಹೀಗೆ ದೇಹಸಹಿತವಾದ ಜೀವಿ ಎಂಬ ಗ್ರಹಿಕೆಯನ್ನು, ಕನ್ನಡದ ಮಟ್ಟಿಗಾದರೂ, ಮೊದಲು ತೋರಿಸಿದ್ದು ‘ಲಂಕೇಶ್ ಪತ್ರಿಕೆ’ಯೇ. ವಿಚಿತ್ರ ಎನಿಸಬಹುದಾದ ಈ ಹೇಳಿಕೆಯನ್ನು ಉದಾಹರಣೆಗಳೊಂದಿಗೆ ಸರಳಗೊಳಿಸಿ ನೋಡಬಹುದು.
ಕನ್ನಡ ಅದುವರೆಗೆ ಕಂಡಿದ್ದ ಪತ್ರಿಕೋದ್ಯಮ- “ಹೇಳಿದರು, ತಿಳಿಸಿದರು, ಖಂಡಿಸಿದರು” ಎಂಬ ‘ವಸ್ತುನಿಷ್ಟ’ ನಿರ್ಭಾವುಕ, (ಕೆಲವೊಮ್ಮೆ ನಿರ್ಜೀವ) ಬಗೆಯದು. ಇಂಥ ವಾತಾವರಣದಲ್ಲಿ ಮೊದಲ ಬಾರಿ ಕವಿ ಹೃದಯ ಮತ್ತು ಜನಸಾಮಾನ್ಯನ ನಿರ್ಭಿಡೆಯ ವಿವೇಕಗಳನ್ನು ಒಗ್ಗೂಡಿಸಿ ಮಾತಾಡಿದ್ದು ‘ಲಂಕೇಶ್ ಪತ್ರಿಕೆ’ಯೇ.
ಕವಿ ಹೃದಯ ಹೇಗೆ ಎಂದು ಕೇಳಿದರೆ ಸಾಹಿತ್ಯ, ಸಿನಿಮಾ ಅಥವಾ ಇನ್ನಾವುದೇ ಸೃಷ್ಟಿಕ್ಷೇತ್ರದಂತೆ ಸಫಲ ಪತ್ರಿಕಾವೃತ್ತಿಗೂ “ಯಾವುದು ಮುಖ್ಯ ಮತ್ತು ಯಾವುದು ಕುತೂಹಲಕರ” ಎಂಬ ಅರಿವಿರಬೇಕು. ಮತ್ತು ಈ ಅರಿವು- ಅಂದರೆ ಕಣ್ಣಿಗೆ ಕಾಣುವ ಸಾವಿರ ವಿಷಯಗಳ ಪೈಕಿ ಯಾವುದು ಮುಖ್ಯ ಹಾಗೂ ಆಸಕ್ತಿದಾಯಕ ಎಂದು ಆರಿಸುವ- “ಸಂಪಾದಿಸುವ”- ಅರಿವು ಕವಿ ಹೃದಯಕ್ಕೆ ಮಾತ್ರ ಸಾಧ್ಯ.
ಲಂಕೇಶರ ಪತ್ರಿಕೋದ್ಯಮಕ್ಕೆ ಹಾಗೂ ಸಾಹಿತ್ಯಗಳೆರಡಕ್ಕೂ ಅನ್ವಯಿಸಿ, ಹೇಳುವುದಾದರೆ ಈ ಕವಿಹೃದಯವೇ ಅವರ ಮುಖ್ಯ ಜೀವಸೆಲೆಯಾಗಿ ಉದ್ದಕ್ಕೂ ಕೆಲಸ ಮಾಡಿದೆ; ಅದಕ್ಕೇ ಪತ್ರಿಕೆಗೆ ಈ ಮಟ್ಟಿನ ಯಶಸ್ಸು ಸಾಧ್ಯವಾಗಿದೆ.
ಅದಕ್ಕೂ ಮುಖ್ಯವಾಗಿ ಮನುಷ್ಯನನ್ನು ಆದರ್ಶಸ್ಥಿತಿಯಲ್ಲಿ ಕಲ್ಪಿಸಿಕೊಂಡು (ಇನ್ನೊಂದು ಅರ್ಥದಲ್ಲಿ ನಿರ್ಜೀವ ವಿಚಾರಜೀವಿಯೆಂಬಂತೆ ಊಹಿಸಿಕೊಂಡು) ಬರೆದ ಉಳಿದೆಲ್ಲರಿಗಿಂತ ಭಿನ್ನವಾಗಿ ಲಂಕೇಶರು ಮೊದಲ ಬಾರಿ ಪಂಚೇಂದ್ರಿಯಗಳ ಕಟ್ಟುಪಾಡುಗಳೊಂದಿಗೆ ತುಡಿಯುವ ಜೀವದ ದೌರ್ಬಲ್ಯ, ಹತಾಶೆ, ಸಾಧ್ಯತೆ, ಆಕಾಂಕ್ಷೆಗಳನ್ನು ಪತ್ರಿಕೆಗೆ ತಂದರು. ಈ ಸಂಸಾರದ ಜಂಜಾಟಗಳಲ್ಲೇ ಸಿಲುಕಿ ದಾರಿ ಹುಡುಕುವ ಭವಯೋಗಿಯಂತೆ ಹೆಣಗಿದರು.
ಅದಕ್ಕೇ ನೀಲು, ತುಂಟಾಟಗಳ ಜೊತೆಜೊತೆಯಲ್ಲೇ ಬೋರ್ ಹೊಡೆಯದ ಗಂಭೀರ ಚಿಂತನೆಯೂ ಒಂದೇ ಕಡೆ- ಒಂದೇ ವಿನ್ಯಾಸದಲ್ಲಿ ಒಟ್ಟುಗೂಡುವುದು ಸಾಧ್ಯವಾಯಿತು. ಪತ್ರಿಕೆಯ ಯಾವ ಚಿಂತನೆಯೂ ದೇಹವನ್ನು ಮರೆಯದೆ ನಡೆದ ಆತ್ಮದ ತಡಕಾಟದಂತೆ; ರಾಕ್ಷಸನೂ, ಸಂತನೂ, ಹುಚ್ಚನೂ ಒಟ್ಟಾಗಿ ಬದುಕುವ ಮನುಷ್ಯನ ಒಳಪ್ರಪಂಚದ ಸಾಧ್ಯತೆಯಂತೆಯೇ ಬೆಳೆದಿದೆ.
ನಾನೂ ಪತ್ರಿಕೋದ್ಯಮಕ್ಕೆ ಹದಿನೈದು ವರ್ಷ ಮಣ್ಣು ಹಾಕಿದ್ದೇನೆ. ಆದರೆ “ಯಾವುದು ಮುಖ್ಯ ಹಾಗೂ ಕುತೂಹಲಕರ” ಎಂಬ ಜೋಡುಮೀಟಿನ ಶೃತಿ ನನಗೆ ಮನದಟ್ಟಾಗಿದ್ದೇ ಪತ್ರಿಕೆಯ ಮೂಲಕ. ಅದೂ ಇತ್ತೀಚೆಗೆ ಅಂದ ಮೇಲೆ ನನ್ನ ಹುಂಬತನವನ್ನು ಊಹಿಸಿ!
**
ಇಂಥ ಹುಂಬತನಕ್ಕೆ ಒಮ್ಮೆ ಮೇಷ್ಟ್ರು ನನ್ನನ್ನು ಉಗಿದೋಡಿಸಿದ್ದರು. ಅಂದರೆ ನಾನು ಟೀವಿ ಸೀರಿಯಲ್ ಮಾಡಲೆಂದು ಒಂದು ತಿಂಗಳ ರಜಾ ಕೇಳಿ, ಅದರ ಮೇಲೆ ಮತ್ತೂ ಹತ್ತು ದಿನ ಕೇಳದೆ ತಪ್ಪಿಸಿಕೊಂಡಾಗ- “ಸಮಯದ ಶಿಸ್ತನ್ನೇ” ಉಸಿರಾಡುವ ಲಂಕೇಶರು ”ಇನ್ನು ನೀವು ಬೇಡ” ಅಂದರು.
ಅದಾಗಿ ಎರಡು ವರ್ಷವಾದ ಮೇಲೆ ಮತ್ತೆ ‘ಬರೆಯಿರಿ’ ಅಂದರು. -ಮೇಷ್ಟ್ರು ಹೀಗೇನೇ; ಯಾರ ಮೇಲೂ ಶಾಶ್ವತ ದ್ವೇಷ ಸಾಧಿಸಲಾರರು, ಯಾರನ್ನೂ ದೀರ್ಘಕಾಲ ಕ್ಷಮಿಸದೆ ಇರಲಾರರು.
ಸಮಯಕ್ಕೆ ಗೌರವ ಕೊಡಲಾರದ ವ್ಯಕ್ತಿ ಮತ್ತು ದೇಶ ಉದ್ಧಾರವಾಗಲು ಸಾಧ್ಯವೇ ಇಲ್ಲ. ಈಗ ಉದಾಹರಣೆಗೆ ದೇಶದ ಉದ್ಧಾರಕ್ಕೆ ಹತ್ತು ವರ್ಷದ ಯೋಜನೆ ಹಾಕಿಕೊಳ್ಳುತ್ತೇವೆ ಅನ್ನಿ. ಎಲ್ಲರೂ ಈ ಕೆಲಸ ಒಂದೈದು ನಿಮಿಷ ತಡವಾದರೂ ಚಿಂತೆಯಿಲ್ಲ ಎಂದು ಹೊರಟರೆ ಅಲ್ಲಿಗೆ 85 ಕೋಟಿ ಘಿ ಐದು ನಿಮಿಷ! ಉದ್ಧಾರ ಎಷ್ಟು ಶತಮಾನ ಮುಂದೆ ಹೋಯಿತು?…
ಸಮಯಪ್ರಜ್ಞೆ ಎಷ್ಟು ಮೂಲಭೂತವಾದದ್ದು ಅನ್ನುವ ನನ್ನ ಈ ಕಲಿಕೆ ಕೂಡ ಮೇಷ್ಟರಿಂದಲೇ ಬಂದಿದ್ದು.
**
ತೀವ್ರ ಅನಾರೋಗ್ಯಕ್ಕೆ ತುತ್ತಾಗುವ ಮುನ್ನವೇ ಲಂಕೇಶರು ಆಗಾಗ ಯಾಕೋ ಸಾವಿನ ಮಾತೇ ಆಡುತ್ತಿದ್ದರು.
ಈಗೆರಡು ವರ್ಷಗಳ ಹಿಂದೆ, ಘೋರ ಅಸ್ತಮಾದಿಂದ ಸಾವಿನ ಹೊಸ್ತಿಲವರೆಗೆ ಹೋಗಿದ್ದ ನಾನು “ಇನ್ನು ಹೆಚ್ಚು ದಿನ ಉಳಿದಿಲ್ಲ” ಎಂಬ ಹಂತ ತಲುಪಿದೆ. ಅಲ್ಲಿಂದಾಚೆಗೆ ಸೂಕ್ತ ಚಿಕಿತ್ಸೆ ಶಿಸ್ತುಗಳೊಂದಿಗೆ ಆ ರೋಗದ ಜತೆ ಬಾಳಲು ಅಂದರೆ ಸಾವು ಅನ್ನುವುದು ನನ್ನ ಜೀವಕೋಶಗಳಲ್ಲೇ ಹುದುಗಿದೆ ಎಂಬ ಅರಿವಿದ್ದೂ ಅದಕ್ಕೆ ಹೊಂದಿಕೊಂಡಿರಲು ಕಲಿತಿದ್ದೇನೆ.
ಆದರೆ ಮೇಷ್ಟ್ರು ಸಾವನ್ನು ಎದುರಿಸಿದ ಬಗೆ ಕಂಡಾಗ ದಿಗ್ಭ್ರಮೆಯಾಗುತ್ತದೆ. ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಾಡಿದ ವೈದ್ಯರು ”ಆ ಸ್ಕ್ಯಾನಿಂಗ್ ಸರಿಹೋಗಲಿಲ್ಲ. ಇನ್ನೊಮ್ಮೆ ಮಾಡಬೇಕು” ಅಂದರು. ಆದರೆ ಅಡ್ಡಕಸಬಿತನವನ್ನು ದ್ವೇಷಿಸುವ ಲಂಕೇಶರು ಇನ್ನೊಮ್ಮೆ ಸ್ಕಾö್ಯನಿಂಗಿಗೆ ಒಳಗಾಗಲೊಪ್ಪದೆ ತಮ್ಮ ದೇಹಕ್ಕೆ ಮತ್ತು ಈ ದೇಹ ಅವಿತಿಟ್ಟುಕೊಂಡ ಸಾವಿಗೇ ಸವಾಲೆಸೆದರು. ಸಾವಿಗೂ “ತಾಳಯ್ಯ, ನಾನು ಟೈಂ ಕೊಟ್ಟಾಗ ಬಾ” ಎನ್ನುವ ಈ ಭಂಡತನ ಲಂಕೇಶರ ಹಾಗೂ ಪತ್ರಿಕೆಯ ಮುಖ್ಯ ಶಕ್ತಿಗಳಲ್ಲೊಂದಲ್ಲವೇ?
ಇತರರ ಭಂಡತನ ಇನ್ನೊಂದು ಮಗ್ಗುಲಿಗೆ ಹುಂಬತನವಾಗಿ ಕಾಣಬಹುದು. ಆದರೆ ಲಂಕೇಶರಲ್ಲಿ ಅದು ಕಾಮದಷ್ಟು ಅಥವಾ ನಿಜ ದೇಶ ಪ್ರೇಮದಷ್ಟು ಉಗ್ರವಾದ ಕೆಚ್ಚಾಗಿ ವ್ಯಕ್ತವಾಗುತ್ತದೆ. ಅವರು ಜೀವನಕ್ಕೆ ಕಷ್ಟಪಡುವ ದಿನಗಳಿಂದ ಶುರುಮಾಡಿ ಈಗ ಅನುಕೂಲಕರ ಪರಿಸ್ಥಿತಿ ತಲುಪಿದ್ದರೂ ಈ ಭಂಡತನ ಅವರ ಜೀವದ ಕಾವು ಆರದಂತೆ ಕಾಯುವ ರಕ್ಷಾಕವಚದಂತೆ ಉಳಿದುಬಂದಿದೆ.
“ನೀವು ಎದ್ದು ಹೋಗಿ” ಎಂದು ಮುಲಾಜಿಲ್ಲದೆ ಹೇಳಬಲ್ಲ ಲಂಕೇಶರು ನಿಷ್ಠುರವಾದಿಯಾಗಿ, ಭಂಡನಾಗಿ ಕಂಡರೂ, ಆಳದಲ್ಲಿ ಅವರು ಪ್ರಜಾಪ್ರಭುತ್ವವಾದಿ ಎಂಬುದನ್ನು ಕಂಡಿದ್ದೇನೆ. ತಮ್ಮ ಪ್ರಜಾತಾಂತ್ರಿಕ ನಿಲುವಿಗೆ ಅವರು ಮಸಾಲೆ ತುಂಬಿ ಆಕರ್ಷಕಗೊಳಿಸಲಾರರು ಎಂಬುದೂ ಅಷ್ಟೇ ನಿಜ.
ಈ ಸಂಕೀರ್ಣ ಮನುಷ್ಯ ಎಷ್ಟೋ ಬಾರಿ ಕೆಲವರಿಗೆ ತಮ್ಮ ಬರಹದಲ್ಲಿ ಕೃತ್ಯಗಳಲ್ಲಿ ಅನ್ಯಾಯ ಮಾಡಿದ್ದಿದೆ. ಆದರೆ ಈ ಅನ್ಯಾಯವನ್ನು ಅನ್ಯಾಯ ಎಂದು ಅವರೇ ಹೇಳಿ ಮರುಗಿದ್ದನ್ನೂ ಕಂಡಿದ್ದೇನೆ…
ಅವರ ಅಗಾಧ ಕರ್ತೃತ್ವಶಕ್ತಿಗೆ, ಚಿಲುಮೆಯಂಥ ಬರಹಕ್ಕೆ ಮಾರುಹೋದ ನಾನು ಅವರನ್ನು ಮೆಚ್ಚುತ್ತ, ಕೆಲವೊಮ್ಮೆ ಬೈದುಕೊಳ್ಳುತ್ತ ಬಂದು ಈ ಸಂದರ್ಭದಲ್ಲಿ ‘ಪತ್ರಿಕೆಯ ಬಗ್ಗೆ ಬೇರೆಯವರೆಲ್ಲ ಬರೆಯುತ್ತಾರೆ, ನಾನು ಲಂಕೇಶರ ಬಗ್ಗೆಯೇ ಬರೆಯಬೇಕು’ ಅಂದುಕೊಂಡೆ.
ಆದರೀಗ ಪತ್ರಿಕೆಯ ಬಗ್ಗೆಯೇ ಬರೆದೆನೇನೋ ಅನಿಸುತ್ತದೆ.
(1997ರಲ್ಲಿ ಬರೆದದ್ದು)