ಅಂಬೇಡ್ಕರರನ್ನು ಪ್ರಭಾವಿಸಿದ ವ್ಯಕ್ತಿತ್ವಗಳು  - ಕೇಶವ ಮಳಗಿ

ಅಂಬೇಡ್ಕರರನ್ನು ಪ್ರಭಾವಿಸಿದ ವ್ಯಕ್ತಿತ್ವಗಳು    -  ಕೇಶವ ಮಳಗಿ

ಅಂಬೇಡ್ಕರರನ್ನು ಪ್ರಭಾವಿಸಿದ ವ್ಯಕ್ತಿತ್ವಗಳು

 ಕೇಶವ ಮಳಗಿ

 

 

ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರನ್ನು ಬದುಕಿಡೀ ಪ್ರಭಾವಿಸಿದ ವಿಚಾರ ಅಸಂಖ್ಯ; ವ್ಯಕ್ತಿಗಳು ಅನೇಕ. ಬಾಲ್ಯದಲ್ಲಿ ಕಂಡುಂಡ ಸರಣಿ ಕಹಿ ಅನುಭವ, ಸಮಾಜದಲ್ಲಿ ಅಸ್ಪೃಶ್ಯರಿಗಿದ್ದ ಸ್ಥಾನಮಾನ ಅವರು ನಿಷ್ಠುರವಾದ ನಿಲುವು, ಸಾರ್ಥಕ ಸಿದ್ಧಾಂತ ರೂಪಿಸಿಕೊಳ್ಳುವಂತೆ ಮಾಡಿದವು. ಅನುಭವ ಕಟುವಾಗಿದ್ದರೂ, ಮನಸ್ಸನ್ನು ದ್ವೇಷಾಸೂಯೆಗಳತ್ತ ತಿರುಗಿಸದೆ, ಗಟ್ಟಿಯಾದ ಬೌದ್ಧಿಕ ಚೌಕಟ್ಟಿನಲ್ಲಿ ಸಮಸ್ಯೆಗಳ ಹಿನ್ನೆಲೆಯನ್ನು ಅರಿಯಲು ಪ್ರಯತ್ನಿಸಿದರು. ಅವರ ಪ್ರಮೇಯಗಳ ಹೆಗ್ಗಳಿಕೆ ಇರುವುದು ಅವು ವೈಯಕ್ತಿಕ ನೆಲೆಯಲ್ಲಿ ಮಾತ್ರ ಸಮಸ್ಯೆಯನ್ನು ಇತ್ಯರ್ಥಗೊಳಿಸಲು ನೋಡದೆ, ಅತ್ಯಂತ ಸಂಕೀರ್ಣವಾದ ಸಾಮಾಜಿಕ- ಸಾಮುದಾಯಿಕ ಅಸಮಾನತೆಯನ್ನು ನೀಗಿಸಲು, ವಸ್ತುಸ್ಥಿತಿಯನ್ನು ಬದಲಿಸಲು ನೆರವಾದವು ಎಂಬುದರಲ್ಲಿದೆ.

ಈ ವಿಶಾಲ ಲೋಕದೃಷ್ಟಿ ಅವರಿಗೆ ಒದಗಿದ್ದು ಅವರೊಬ್ಬ ನೈಜ ಪ್ರಜಾಪ್ರಭುತ್ವವಾದಿಯಾಗಿದ್ದರಿಂದ; ಅಪಾರವಾದ ಸಹನೆಯನ್ನು ವ್ಯಕ್ತಿತ್ವ‌ದಲ್ಲಿ ರೂಢಿಸಿಕೊಂಡಿದ್ದರಿಂದ. ತಾಳ್ಮೆ ಬಾಲ್ಯದಿಂದಲೇ ಅವರ ಸ್ವಭಾವದಲ್ಲಿತ್ತು. ಮತ್ತು ಇದೇ ಅವರ ವಿವೇಕ-ವೈಚಾರಿಕತೆ ಬೆಳೆಯಲು ಸಹಕಾರಿಯಾಯಿತು. ಬರುಬರುತ್ತ ಸಹನಶೀಲತೆಯನ್ನವರು ಬೌದ್ಧಿಕ ಬದುಕಿನ ವ್ಯಕ್ತಿತ್ವವನ್ನಾಗಿಸಿಕೊಂಡರು. ಇದರಿಂದ ಅವರು ಅನೇಕ ವಿಚಾರಗಳಿಗೆ ಮುಕ್ತವಾಗಿ ತೆರೆದುಕೊಳ್ಳಲು ಸಾಧ್ಯವಾಯಿತು. ಪ್ರತಿ ವಿಚಾರವನ್ನು ನಿಕಷಕ್ಕೊಡ್ಡಿ, ಸಾಧಕ-ಬಾಧಕವನ್ನು ಪರಿಶೀಲಿಸುವ ಗುಣವನ್ನು ಕಲಿಸಿತು.

ಅಂಬೇಡ್ಕರ್‌ರ ಹದಿ ವಯಸ್ಸಿನಿಂದಲೂ ಅವರ ಮನೋವಿಕಾಸಕ್ಕೆ ಕಾರಣವಾದ ವ್ಯಕ್ತಿ-ವಿಚಾರಗಳನ್ನು ಗುರುತಿಸುವುದು ಈ ಲೇಖನದ ಉದ್ದೇಶ. ಆದರೆ, ಇದೊಂದು ಸಮಗ್ರ ಬರಹವಲ್ಲ.

 

ನಿರಾಕಾರಿ ಸಿದ್ಧಾಂತದ ಕಬೀರ

ಅಂಬೇಡ್ಕರ್‌ರ ತಂದೆ ರಾಮ್‌ಜೀ ಮಾಲೋಜಿ ಸಕ್ಪಾಲ್‌ರು ಕಬೀರಪಂಥಿಯರು. ಇವರ ಕುಟುಂಬದ ಮೂಲ ಸ್ಥಳವಾದ ಮಹಾರಾಷ್ಟ್ರದ ರತ್ನಾಗಿರಿಯ ಪರಿಶಿಷ್ಟ ಸಮುದಾಯಗಳು ಕಬೀರರ ಅನುಯಾಯಿಗಳೇ ಆಗಿದ್ದರು. ಜತೆಗೆ, ರಾಮ್‌ಜೀ ಕೆಲಸ ಮಾಡುತ್ತಿದ್ದ, ಇಂದು ಮಧ್ಯಪ್ರದೇಶದ ಭಾಗವಾಗಿರುವ 'ಮೋಹ್‌’ ಎಂಬ ಸ್ಥಳ ಮತ್ತು ಸುತ್ತಮುತ್ತಲಿನ ಉಜ್ಜಯಿನಿ ಮುಂತಾದೆಡೆ ಅಲೆಮಾರಿ ಕಬೀರ ಪಂಥಿಯರ ಗಾಯನ, ಹಾಡು, ಬೋಧನೆಗಳು ಸದಾ ಕಿವಿಗೆ ಬೀಳುವ ಸಂಗತಿಗಳಾಗಿದ್ದವು. ರಾಮ್‌ಜೀ ತಮ್ಮ ಕೊನೆಯ ಮಗನಿಗೆ ಕಬೀರನ ಪದಗಳನ್ನು ಹೇಳಲು ಪ್ರೇರೇಪಿಸುತ್ತಿದ್ದರು. ನಿರ್ಗುಣಿಯ ಪದಗಳು ವಿಶಾಲವಾಗಿ ಬುದ್ಧ ವಿಚಾರಗಳನ್ನು ಅರಹುತ್ತಿದ್ದವು ಎಂಬುದನ್ನು ಮುಂದಿನ ದಿನಗಳಲ್ಲಿ ಅಂಬೇಡ್ಕರ್‌ ಕಂಡುಕೊಂಡರು. ಕಬೀರ, ಮಾನಸಿಕವಾಗಿ ಅವರ ಎರಡನೆಯ ಗುರುವಾಗಿದ್ದ.

‘ಯಾರನ್ನೂ ಶ್ರೇಷ್ಠ, ಇಲ್ಲವೆ ಮಹಾತ್ಮ ಎಂದು ಆರಾಧಿಸಬೇಡ. ಸಂತನಾಗಿರುವುದು ಮನುಷ್ಯ ಮಾತ್ರನಿಗೆ ಅಸಾಧ್ಯ’, ಎಂಬ ನಿಜವನ್ನು ಕಬೀರ, ಅಂಬೇಡ್ಕರ್‌ರಿಗೆ ಕಲಿಸಿಕೊಟ್ಟಿದ್ದ. ‘ಮನುಷ್ಯನಾಗುವುದೇ ಕಠಿಣವಿರುವಾಗ, ಸಂತನಾಗುವುದಾದರೂ ಹೇಗೆ?’ ಎಂಬ ಕಬೀರನ ದೋಹೆ ಅವರ ಮನಸ್ಸನ್ನಾಳಕ್ಕೆ ಇಳಿದಿತ್ತು. ಅಂಬೇಡ್ಕರ್‌ರಿಗೆ, ಕಬೀರನ ನಿರ್ಗುಣ, ನಿರಾಕಾರತೆಯ ಕಲ್ಪನೆ ಕೂಡ ಪ್ರಿಯವಾದ ವಿಷಯವಾಗಿತ್ತು.

 

ಭಕ್ತಿಯಿಂದಲೇ ಬಿಡುಗಡೆಯೆಂದ ಸಂತ ತುಕಾರಾಮ

ತಂದೆ ರಾಮ್‌ಜೀ ಸಕ್ಪಾಲ್‌ ಕಬೀರನ ಪದಗಳಂತೆಯೇ ಮರಾಠಿ ಭಕ್ತಿಕವಿ ತುಕಾರಾಮನ ಅಭಂಗಗಳನ್ನೂ ಹಾಡುತ್ತಿದ್ದುದು ಎಳೆಯ ಭೀಮನಲ್ಲಿ ಪರಿಣಾಮ ಬೀರುತ್ತಿತ್ತು. ಈ ಹಾಡುಗಳಿಂದ ಅಪಾರವಾದ ಅಂತಃಶಕ್ತಿಯನ್ನು ಆತ ಪಡೆಯುತ್ತಿದ್ದ. ನಿರಂತರವಾದ ಕಾವ್ಯ-ಪದಗಳ ಪಠಣದಿಂದ ಸಕ್ಪಾಲರ ಮಕ್ಕಳು ಭಾಷೆಯ ಮೇಲೆ, ನುಡಿಗಟ್ಟುಗಳ ಮೇಲೆ ಹಿಡಿತ ಸಾಧಿಸುವಂತಾಯಿತು. ಇದರಿಂದಾಗಿ ಚಿಕ್ಕ ವಯಸ್ಸಿನಲ್ಲಿಯೇ ಮನಸ್ಸು ಪ್ರಬುದ್ಧವೂ, ಪ್ರಶಾಂತವೂ ಆಗಿ ಪರಿವರ್ತಿತವಾಗತೊಡಗಿತು.

 

 

ಶಿಕ್ಷಣವೇ ಸಂಕೋಲೆ ಕಳಚುವುದು: ಫುಲೆ

ದಮನಿತ ವರ್ಗ-ಜಾತಿಗಳಿಗೆ ಶಿಕ್ಷಣ ಮಾತ್ರ ವಿಮೋಚನೆ ಒದಗಿಸಬಲ್ಲುದು ಎಂಬ ವಿಷಯವನ್ನು ಜ್ಯೋತಿಬಾ ಫುಲೆಯವರು ೧೮೪೧ರಲ್ಲಿಯೇ ಕಂಡುಕೊಂಡಿದ್ದರು. ಆ ಅಚಲ ನಂಬಿಕೆಯಿಂದಲೇ ಮಹಿಳಾ ಕಲಿಕಾ ಆಂದೋಲನವನ್ನು ಆರಂಭಿಸಿದ್ದರು. ಬದಲಾಯಿಸಲು ಸಾಧ್ಯವಿಲ್ಲದ ವೇದ-ಬ್ರಾಹ್ಮಣ್ಯ ಮತ್ತು ಮನುಸ್ಮೃತಿಯ ಕಡು ವಿರೋಧಿಯಾಗಿದ್ದ ಫುಲೆ, ಮಹಿಳೆ, ಶೂದ್ರ ಮತ್ತು ಮುಸ್ಲಿಂ ಸಮುದಾಯಗಳು ಅಕ್ಷರವಂತರಾದಾಗ ಏಳಿಗೆಯಾಗಬಲ್ಲರು ಎಂದು ಅರಿತಿದ್ದರು. ಮಾಂಗ್‌ ಮತ್ತು ಮಹಾರ ಸಮುದಾಯಗಳಿಗೆಂದೇ ಕಲಿಕಾಕೇಂದ್ರಗಳನ್ನು ತೆರೆದು, ಶೂದ್ರ ವಿಮೋಚನೆಗೆ ಆಂದೋಲನದ ಸ್ವರೂಪವನ್ನು ನೀಡಿದ್ದರು. ಇವರ ಪ್ರಯತ್ನಕ್ಕೆ ಪತ್ನಿ ಸಾವಿತ್ರಿಬಾಯಿಯವರು ನೈತಿಕ-ಆಧ್ಯಾತ್ಮಿಕ ಬೆಂಬಲದಂತಿದ್ದರು. ಫುಲೆ ದಂಪತಿಗಳು ಸಾಮಾಜಿಕ ಬೆದರಿಕೆಗಳನ್ನು ಧೈರ್ಯದಿಂದ ಎದುರಿಸಿ ತಮ್ಮ ಕನಸನ್ನು ಸಾಕಾರಗೊಳಿಸಲು ಶ್ರಮಿಸುತ್ತಿದ್ದರು. ಫುಲೆಯವರ ಆದರ್ಶ ಹಾಗೂ ಹೊಸ ಉಪಕ್ರಮಗಳಿಂದ ಪ್ರಭಾವಿತರಾದ ಅಂಬೇಡ್ಕರ್‌ ತಮ್ಮ ‘ಹೂ ವರ್‌ ಶೂದ್ರಾಸ್‌’ (Who Were Shudras?) ಎಂಬ ಕೃತಿಯನ್ನು ಫುಲೆಯವರ ಸ್ಮರಣೆಗೆ ಮೀಸಲಿರಿಸಿದ್ದರು. ಅರ್ಪಣೆಯ ಸಾಲುಗಳು ಹೀಗಿದ್ದವು:

"ಮಹಾ ಶೂದ್ರ ಚೇತನವಾಗಿದ್ದ, ಹಿಂದೂ ಸಮಾಜದ ಕೆಳವರ್ಗಗಳು ಉಚ್ಚ ವರ್ಗಕ್ಕೆ ಗುಲಾಮರಾಗಿರುವ ಕುರಿತು ಅರಿವು ಮೂಡಿಸಿದ, ವಿದೇಶಿ ಆಡಳಿತದಿಂದ ಬಿಡುಗಡೆ ಪಡೆಯುವುದಕ್ಕಿಂತ ಸಾಮಾಜಿಕ ಪ್ರಜಾಸತ್ತೆಯು ಅತಿ ಹೆಚ್ಚು ಆದ್ಯತೆಯ ವಿಷಯವಾಗಿದೆ, ಎಂಬ ಬೋಧನೆಯನ್ನು ಮಾಡಿದ ಮಹಾತ್ಮ ಜ್ಯೋತಿಬಾ ಫುಲೆಯವರ -1827:1890- ನೆನಪಿಗಾಗಿ."

 

 

ವಿಚಾರ ಅರಳುವ ಪರಿಸರ ನಿರ್ಮಿಸಿದ ಆರ್ಥಿಕ ತಜ್ಞ

ಹಣಕಾಸಿನ ವಿಚಾರದಲ್ಲಿ ಆಳವಾದ ತಿಳುವಳಿಕೆ ಪಡೆಯಲು ಸಹಕಾರಿಯಾದುದು ಪ್ರೊಫೆಸರ್‌ ಎಡ್ವಿನ್‌ ಸೆಲಿಗ್‌ಮನ್‌ರ ಸಹವಾಸ. 'ಲಂಡನ್‌ ಸ್ಕೂಲ್‌ ಆಫ್‌ ಇಕನಾಮಿಕ್ಸ್‌'ನಲ್ಲಿ ಅಧ್ಯಾಪಕರಾಗಿದ್ದ ಸೆಲಿಗ್‌ಮನ್‌ರಿಂದ ಅಂಬೇಡ್ಕರ್‌ ಶೈಕ್ಷಣಿಕ ಚಿಂತನಾ ವಿಧಾನವನ್ನು ರೂಢಿಸಿಕೊಂಡರು. ಲಾಲಾ ಲಜಪತ್‌ ರಾಯ್‌ರ ಗೆಳೆಯರಾಗಿದ್ದ ಸೆಲಿಗ್‌ಮನ್‌ರನ್ನು ಅಂಬೇಡ್ಕರ್‌ರಿಗೆ ಪರಿಚಯಿಸಿದ್ದು ಸಿಡ್ನಿ ವೆಬ್‌. ಸೆಲಿಗ್‌ಮನ್‌ರಿಂದ ವಿಶೇಷ ಅನುಮತಿ ಪಡೆದಿದ್ದ ಅಂಬೇಡ್ಕರ್‌, 'ನೀರಿಗಿಳಿದ ಸಹಜ ಬಾತುಕೋಳಿ'ಯಂತೆ ಅವರ ಉಪನ್ಯಾಸ ಕೇಳಲು ತರಗತಿಯಿಂದ ತರಗತಿಗೆ ಓಡುತ್ತಿದ್ದರು. ಮಗುಚಿದ ಹಾಳೆಗಳ ಗೊಂಚಲನ್ನು ಕೈಯಲ್ಲಿ ಹಿಡಿದು ಪಾಠ ಮಾಡುತ್ತ, ಪ್ರೀತಿ-ವಿಶ್ವಾಸದಿಂದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದ ಸೆಲಿಗ್‌ಮನ್‌ ಅಂಬೇಡ್ಕರ್‌ರನ್ನು ಅಯಸ್ಕಾಂತದಂತೆ ಸೆಳೆದಿದ್ದರು. ಒಮ್ಮೆ, 'ಸಂಶೋಧನೆಗೆ ಯಾವ ವಿಧಾನವನ್ನು ಅನುಸರಿಬೇಕೆಂದು?' ಅಂಬೇಡ್ಕರ್‌ ಕೇಳಿದ ಪ್ರಶ್ನೆಗೆ, ಸೆಲಿಗ್‌ಮನ್‌ ನೀಡಿದ್ದ ಉತ್ತರ: ‘ನಿಮ್ಮದೇ ಆದ ವಿಶಿಷ್ಟ ಶೈಲಿಯನ್ನು ಕಂಡುಕೊಳ್ಳಿ, ಅದನ್ನೇ ಅನುಸರಿಸಿ’.

1916ರಲ್ಲಿ ಅಂಬೇಡ್ಕರ್‌ ಭಾರತದಲ್ಲಿ ಬ್ರಿಟಿಶರ ಹಣಕಾಸು ವ್ಯವಸ್ಥೆ ಕುರಿತು ತಮ್ಮ ಪ್ರೌಢಪ್ರಬಂಧವನ್ನು ಪ್ರಕಟಿಸಿದರು. "ನನಗೆ ತಿಳಿದಂತೆ, ಈ ವಿಷಯದ ಕುರಿತು ಇಷ್ಟೊಂದು ವಿವರವಾದ, ಆಳವಾದ ಶಿಸ್ತಿನ ಅಧ್ಯಯನವನ್ನು ನಾನು ನೋಡುತ್ತಿರುವುದು ಇದೇ ಮೊದಲು", ಎಂದು ಸೆಲಿಗ್‌ಮನ್‌ ಟಿಪ್ಪಣಿ ಬರೆದರು. ಭಾರತದಲ್ಲಿ ಬ್ರಿಟಿಶರು ನಡೆಸುತ್ತಿದ್ದ ದಬ್ಬಾಳಿಕೆ, ಸಾಮ್ರಾಜ್ಯಶಾಹಿ ಪ್ರತಿಗಾಮಿ ಆಡಳಿತವನ್ನು ಕಟುವಾಗಿ ಟೀಕಿಸಿದ್ದ ಭಾರತದ ಶಿಷ್ಯನನ್ನು ಬ್ರಿಟಿಶ್‌ ಗುರು ಮುಕ್ತಕಂಠದಿಂದ ಶ್ಲಾಘಿಸಿದ್ದರು. ಕಲಿಕಾರ್ಥಿಗೆ ಇದಕ್ಕಿಂತ ಗೌರವ ಸಿಗಲು ಸಾಧ್ಯವೆ?

 

 

ಪ್ರಜಾಸತ್ತೆಯ ಚಿಂತನಾ ವಿಧಾನ ಹೇಳಿಕೊಟ್ಟ ಸಿದ್ಧಾಂತಿ

ಭಾರತದ ಸಂವಿಧಾನದ ರಚನೆಯಲ್ಲಿ ಬಿ.ಆರ್‌. ಅಂಬೇಡ್ಕರ್‌ ಅವರು ವಹಿಸಿದ ಮುಖ್ಯ ಪಾತ್ರವನ್ನು ಗುರುತಿಸಿ ನ್ಯೂ ಯಾರ್ಕ್‌ ನಗರದ ಕೊಲಂಬಿಯ ವಿಶ್ವವಿದ್ಯಾಲಯವು ಅವರಿಗೆ 1952ರಲ್ಲಿ ಗೌರವ ಪದವಿ ನೀಡಲು ನಿರ್ಧರಿಸಿತು. ಅಂಬೇಡ್ಕರ್‌ ತಮ್ಮ ವೈಚಾರಿಕ ತಳಹದಿಯನ್ನು ಗಟ್ಟಿಗೊಳಿಸಿದ ತಾರುಣ್ಯದ ಕಾಲವನ್ನು ಆ ವಿಶ್ವವಿದ್ಯಾಲಯದಲ್ಲಿ ಕಳೆದಿದ್ದರು. 1913ರಿಂದ 1916ರವರೆಗೆ ಆ ಕಾಲದ ಅತ್ತ್ಯುತ್ತಮ ವಿದ್ವಾಂಸರೆಂದು ಪ್ರಸಿದ್ಧರಾಗಿದ್ದ ಬೋಧಕರ ಜತೆಗಿನ ಒಡನಾಟದಲ್ಲಿ ತಮ್ಮ ಚಿಂತನಾ ತಳಹದಿಯನ್ನು ಕಟ್ಟಿಕೊಂಡಿದ್ದರು. ಈ ಕಾಲಘಟ್ಟದಲ್ಲಿ ‘ಪರಿಣಾಮಸಿದ್ಧ’ ತತ್ತ್ವಶಾಸ್ತ್ರಜ್ಞ ಹಾಗೂ ಅಂಬೇಡ್ಕರ್‌ರ ಗುರುವೂ ಆಗಿದ್ದ ಜಾನ್‌ ಡೂಯಿ ಅಂಬೇಡ್ಕರ್‌ರನ್ನು ಪ್ರಭಾವಿಸಿದವರಲ್ಲಿ ಪ್ರಮುಖರಾಗಿದ್ದರು.

ಗೌರವ ಪದವಿಯನ್ನು ಸ್ವೀಕರಿಸಲು ಹೊರಟಿದ್ದ ಅಂಬೇಡ್ಕರ್‌ರಿಗೆ ತಮ್ಮ ಬೌದ್ಧಿಕತೆಯನ್ನು ಬೆಳೆಸಿದ ಬೋಧಕರನ್ನು ಭೇಟಿಯಾಗಿ ಮಾತುಕತೆ ನಡೆಸುವ ಉತ್ಸುಕತೆ. ಆದರೆ, ಅವರಿಗೆ ತಮ್ಮ ಮಹಾ ಗುರುವನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ವಯೋಸಹಜತೆಯಿಂದ ಜೀರ್ಣದೇಹಿಯಾಗಿದ್ದ ಜಾನ್‌ ಡೂಯಿ ಜೂನ್ 2, 1952ರಂದು ತೀರಿಕೊಂಡಿದ್ದರು. ನ್ಯೂ ಯಾರ್ಕ್‌‌ ಅನ್ನು ತಲುಪುವ ಹಾದಿಯಲ್ಲಿದ್ದ ಅಂಬೇಡ್ಕರ್‌ ಈ ಆಘಾತಕಾರಿ ಸುದ್ದಿ ತಿಳಿದು ಪತ್ನಿ ಸವಿತಾರಿಗೆ,

"ಪ್ರೊಫೆಸರ್‌ ಡೂಯಿ ಅವರನ್ನು ಭೇಟಿಯಾಗಲು ಕಾತರನಾಗಿದ್ದೆ. ಆದರೆ, ನಮ್ಮ ವಿಮಾನ ರೋಮ್‌ನಲ್ಲಿದ್ದಾಗ ಅವರು ಅಸು ನೀಗಿದ ಸುದ್ದಿ ತಿಳಿಯಿತು. ನನಗೆ ತುಂಬ ದುಃಖವಾಗುತ್ತಿದೆ. ನನ್ನ ಒಟ್ಟಾರೆ ಬೌದ್ಧಿಕ ಬದುಕಿಗೆ ನಾನವರಿಗೆ ಋಣಿಯಾಗಿರುವೆ. ಅವರೊಬ್ಬ ಅದ್ಭುತ ವ್ಯಕ್ತಿಯಾಗಿದ್ದರು" - ಎಂದು ಪತ್ರ ಬರೆದು ವಿಷಾದ ತೋಡಿಕೊಂಡರು. ಈ ಮಾತುಗಳು ಪ್ರೊಫೆಸರ್‌ ಡೂಯಿ ಅಂಬೇಡ್ಕರ್‌ರ ಮೇಲೆ ಬೀರಿದ ಪ್ರಭಾವ ಹಾಗೂ ಅಂಬೇಡ್ಕರ್‌ ಅವರು ಡೂಯಿಯವರಿಗೆ ನೀಡಿದ್ದ ಸ್ಥಾನವನ್ನು ತೋರಿಸುತ್ತದೆ.

ಇನ್ನೊಂದೆಡೆ, "ಕೊಲಂಬಿಯ ವಿಶ್ವವಿದ್ಯಾಲಯದಲ್ಲಿ ನನ್ನ ಸಹಪಾಠಿಗಳಾಗಿದ್ದವರು ನನ್ನ ಬದುಕಿನ ದೊರಕಿದ ಅತ್ತ್ಯುತ್ತಮ ಗೆಳೆಯರಾಗಿದ್ದರು. ಜತೆಗೆ, ಜಾನ್‌ ಡೂಯಿ, ಜೇಮ್ಸ್‌ ಶಾಟ್‌ವೆಲ್‌, ಎಡ್ವಿನ್‌ ಸೆಲಿಗ್‌ಮನ್‌ ಹಾಗೂ ಹಾರ್ವೆ ರಾಬಿನ್‌ಸನ್‌ ಶ್ರೇಷ್ಠ ಪ್ರಾಧ್ಯಾಪಕರಾಗಿದ್ದರು", ಎಂದು ಬರೆದುಕೊಂಡಿದ್ದರು. ಅಂಬೇಡ್ಕರ್‌ರ ವ್ಯಾಸಂಗದ ಕುರಿತು ಅಧ್ಯಯನ ನಡೆಸಿದ ಎಲೆನರ್‌ ಜೆ಼ಲಿಯಟ್‌ರು, "ಅಂಬೇಡ್ಕರ್‌ ಮೇಲೆ ಅತಿ ಹೆಚ್ಚು ಪ್ರಭಾವ ಬೀರಿದವರು ಜಾನ್‌ ಡೂಯಿಯವರೇ ಇರಬೇಕು. ಉಪನ್ಯಾಸಗಳಲ್ಲಿ ತಮ್ಮ ಪ್ರೊಫೆಸರ್‌ ಹೇಳಿದ ಪ್ರತಿ ಪದವನ್ನೂ ಅಂಬೇಡ್ಕರ್‌ ಮನನ ಮಾಡಿಕೊಂಡಿದ್ದರು. ‘ಒಂದೊಮ್ಮೆ, ದುರದೃಷ್ಟವಶಾತ್‌ ಡೂಯಿಯವರು ತೀರಿಕೊಂಡರೆ ಅವರು ನುಡಿದ ಪ್ರತಿ ಅಕ್ಷರವನ್ನೂ ನಾನು ಮತ್ತೊಮ್ಮೆ ಪುನಾ ನಿರೂಪಿಸಬಲ್ಲೆ’, ಎಂದು ಗೆಳೆಯರ ಬಳಿ ಅಂಬೇಡ್ಕರ್‌ ಹೇಳಿಕೊಂಡಿದ್ದರೆಂದು" ದಾಖಲಿಸಿದ್ದಾರೆ.

ಅಂಬೇಡ್ಕರ್‌, ಜಾನ್‌ ಡೂಯಿಯವರ ವಿದ್ಯಾರ್ಥಿಯಾಗುವ ಕಾಲಕ್ಕೆ ಡೂಯಿ ಅದಾಗಲೇ ಪ್ರಜಾಸತ್ತೆ, ಶಿಕ್ಷಣ, ಜನಜೀವನ ಸಿದ್ಧಾಂತ, ಉದಾರವಾದ, ಸಮಾನತೆ, ಸೋದರತೆ, ನೈತಿಕತೆ ಮತ್ತು ರಾಜಕೀಯ ಸಿದ್ಧಾಂತಗಳಲ್ಲಿ ಮೇರು ವಿಚಾರಗಳನ್ನು ಮಂಡಿಸಿದ್ದರು. ವ್ಯಾವಹಾರಿಕ ಅಥವ ಪರಿಣಾಮಸಿದ್ಧ ಸಿದ್ಧಾಂತದ (ಪ್ರಾಗ್ಮಾಟಿಕ್‌ ಫಿಲಾಸಫಿ) ರೂವಾರಿಯಾಗಿದ್ದರು. ಡೂಯಿಯವರ ಪ್ರಮೇಯಗಳನ್ನು ಅಂಬೇಡ್ಕರ್‌ ಮುಂದೆ ತಮ್ಮ ಸಾಮಾಜಿಕ ಪರಿವರ್ತನೆಯನ್ನು ಮುಖ್ಯಗುರಿ ಯಾಗಿಸಿಕೊಂಡ 'ರಾಜಕೀಯ ಸಿದ್ಧಾಂತ' ಮಂಡಿಸುವಾಗ ನೇರ್ಪುಗೊಳಿಸಿ ಅಳವಡಿಸಿಕೊಂಡರು.

ಉದಾಹರಣೆಗೆ, ವೈಯಕ್ತಿಕ ನೆಲೆಯ ಸ್ವಾತಂತ್ರ್ಯ ಅಥವ ಕ್ರಿಯೆಯ ಸ್ವಾತಂತ್ರ್ಯದ ಪರಿಕಲ್ಪನೆ. ಬಿಡುಗಡೆ ಮತ್ತು ಕ್ರಿಯೆಗಳು ವೈಯಕ್ತಿಕ ನೆಲೆಗಿಂತ ಸಾಮುದಾಯಿಕ ನೆಲೆಯಲ್ಲಿ ಅಭಿವ್ಯಕ್ತಿಗೊಳ್ಳಬೇಕು ಹಾಗೂ ಸಾಮುದಾಯಿಕ ನೆಲೆಯಲ್ಲಿಯೇ ಇದನ್ನು ಗ್ರಹಿಸಬೇಕೆಂಬುದು ಡೂಯಿಯವರ ಅಭಿಮತವಾಗಿತ್ತು. ಅಂದರೆ, ಸಮಾನತೆಯ ಮೌಲ್ಯ ಮತ್ತು ಸೋದರತೆಯ ಭಾವವನ್ನು ಹುಟ್ಟು ಹಾಕುವುದು ಬಹಳ ಮುಖ್ಯ. ಈ ಪ್ರಮೇಯವು ಸಾಮಾಜಿಕ ನ್ಯಾಯ ಗೈರುಹಾಜರಾಗಿರುವ ಭಾರತೀಯ ಸನ್ನಿವೇಶದಲ್ಲಿ ದಲಿತಬಹುಜನ ಸಮುದಾಯಗಳು ಸೋದರತೆಯನ್ನು ಬಿಟ್ಟುಕೊಡದೆ ಸಮಾನಹಕ್ಕು ಸಾಧಿಸುವ ಬಗೆ ಹೇಗೆ? ಎಂಬ ಪ್ರಶ್ನೆಯನ್ನು ಅಂಬೇಡ್ಕರ್‌ ಅವರಲ್ಲಿ ಹುಟ್ಟು ಹಾಕಿತು.

ಮೇಲ್ನೋಟಕ್ಕೆ ಲೌಕಿಕ ಸಮಾನತೆಯನ್ನು ಸಾಧಿಸುವ ಕಮ್ಯೂನಿಸ್ಟ್‌ ಸಿದ್ಧಾಂತವು ಆಳದಲ್ಲಿ ಈ ಸೋದರತ್ವದ ಭಾವ ಕಳೆದುಕೊಂಡಿರುತ್ತದೆ, ಎಂಬ ನಿಲುವಿಗೆ ಹಾಗೂ ಪರಿಶಿಷ್ಟ ಸಮುದಾಯಗಳು ಬಿಡುಗಡೆ ಮತ್ತು ಸಮಾನತೆಯನ್ನು ಪಡೆಯುವುದರೊಂದಿಗೆ ಯಾವುದೇ ಸಂದರ್ಭದಲ್ಲಿಯೂ ಸೋದರತೆಯನ್ನು ಉಳಿಸಿಕೊಳ್ಳಬೇಕು ಎಂಬ ದೃಢ ಸಂಕಲ್ಪಕ್ಕೆ ಅಂಬೇಡ್ಕರ್‌ ಬರುವಂತಾಯಿತು. ಸಮಾಜದಲ್ಲಿ ಸಮಗ್ರ ಬದಲಾವಣೆ ತರಬೇಕಾದರೆ 'ಒಂದನ್ನು ಬಲಿ ಕೊಟ್ಟು ಇನ್ನೊಂದನ್ನು ಸಾಧಿಸಿದೆವು', ಎಂಬಂತಿರದೇ ಸೋದರತೆ ಎಂಬ ಒಳಗೊಳ್ಳುವಿಕೆಯ ಸಹಜ ಪ್ರಕ್ರಿಯೆ ನಡೆದಿರಬೇಕು ಎಂಬುದು ಈ ನಿಲುವಿನ ಯಥಾರ್ಥ.

ಡೂಯಿಯವರ ವ್ಯಾವಹಾರಿಕ ಚತುರತೆಯ ವಿಚಾರಗಳಿಗೆ ತಮ್ಮ ಅನುಭವ, ತಾವು ಪ್ರತಿನಿಧಿಸುವ ಸಮುದಾಯಗಳು ಹಾಗೂ ಒಟ್ಟಾರೆ ಭಾರತೀಯ ಸನ್ನಿವೇಶಕ್ಕೆ ತಕ್ಕಂತೆ ಅಂಬೇಡ್ಕರ್‌ ಹೊಸ ವಿಚಾರಗಳನ್ನು ಸೇರಿಸುತ್ತ ಹೋದರು. ಅವರ ಚಿಂತನೆಗಳು ಮುಪ್ಪರಿಯಲು ಜಾನ್‌ ಡೂಯಿಯವರ ಉಪನ್ಯಾಸಗಳ ಜತೆಗೆ ಡೂಯಿಯವರ ಪುಸ್ತಕಗಳ ತಲಸ್ಪರ್ಶಿ ಅಧ್ಯಯನವೂ ಕಾರಣವೆಂದು ಅಧ್ಯಯನಕಾರರು ಗುರುತಿಸುತ್ತಾರೆ. ಡೂಯಿಯವರ ‘ಡೆಮಾಕ್ರಸಿ ಆಂಡ್‌ ಎಜುಕೇಶನ್‌’ ಪುಸ್ತಕವನ್ನು ಅಂಬೇಡ್ಕರ್‌ ೧೯೧೭ರ ಸುಮಾರಿಗೆ ಓದಿದ್ದರೆಂದು ಟಿಪ್ಪಣಿಯನ್ನು ಆಧರಿಸಿ ಗುರುತಿಸಲಾಗಿದೆ.

ಪ್ರಜಾಸತ್ತಾತ್ಮಕ ಮೌಲ್ಯಗಳು ಪ್ರತಿನಿತ್ಯದ ಬದುಕಿನ ಭಾಗವಾಗಿರಬೇಕು. ಆದರೆ, ಜಾತಿ ಮತ್ತು ವರ್ಗಗಳಲ್ಲಿ ಒಡೆದಿರುವ ಭಾರತೀಯ ಸಮಾಜವು ಮನುಷ್ಯರ ಸಹಜ ಬದುಕಿನ ಆಶಯಕ್ಕೆ ಅನುವು ಮಾಡಿಕೊಡುವುದಿಲ್ಲ. ಹುಟ್ಟಿದ ಜಾತಿಯಿಂದಲೇ ಎಲ್ಲವನ್ನೂ ನಿರ್ಧರಿಸುವುದರಿಂದ ಬದುಕಿನ ಸಹಜ ಆಯ್ಕೆಗಳು ಕೈಗೆಟುವುದಿಲ್ಲ, ಎಂದು ಅಂಬೇಡ್ಕರ್‌ ಕಂಡುಕೊಂಡರು. ಮತ ಚಲಾವಣೆ ಹಕ್ಕಿನ ಕುರಿತು ಬ್ರಿಟಿಶ್‌ ಸರ್ಕಾರ ೧೯೧೯ರಲ್ಲಿ ರಚಿಸಿದ್ದ ‘ಸೌತ್‌ಬರೋ ಸಮಿತಿ’ಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಅವರ ಅಭಿಪ್ರಾಯವನ್ನು ಗಮನಿಸಿ:

"ಮನುಷ್ಯರು ತಮಗೆ ಒದಗಿ ಬಂದ ಸಾಮಾನ್ಯ ಸಂಗತಿಗಳಿಂದಾಗಿ ಒಟ್ಟಾಗಿ ಬದುಕುತ್ತಾರೆ. ಅವರೊಂದು ಸಮುದಾಯವಾಗಿ ರೂಪುಗೊಳ್ಳಲು ಗುರಿ, ನಂಬಿಕೆ, ಆಶೋತ್ತರ, ಜ್ಞಾನ, ಸಾಮಾನ್ಯ ನೆಲೆಯ ಅರ್ಥೈಸಿಕೊಳ್ಳುವಿಕೆ ಹೊಂದಿರಲೇಬೇಕಾದ ಸಂಗತಿಗಳಾಗಿವೆ. ಇದನ್ನೇ ಸಮಾಜಶಾಸ್ತ್ರಜ್ಞರ ನುಡಿಗಟ್ಟಿನಲ್ಲಿ ಹೇಳುವುದಾದರೆ, ‘ಸಮಾನ ಮನಸ್ಕತೆ’ ಸಾಧಿಸಬೇಕಾಗುತ್ತದೆ.

ಈ ಸಮಾನ ಮನಸ್ಕತೆಯನ್ನು ಅವರು ಬೆಳೆಸಿಕೊಳ್ಳುವುದು ಹೇಗೆ? ಖಂಡಿತವಾಗಿಯೂ ತಮ್ಮಲ್ಲಿರುವುದನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವ ಮೂಲಕವಲ್ಲ. ಕಡುಬಿನ ತುಣುಕೊಂದನ್ನು ಎಲ್ಲರೂ ಹಂಚಿಕೊಳ್ಳಬಲ್ಲರು. ಇತರರ ಬಳಿ ದತ್ತವಾಗಿರುವ ಮನೋಭಾವವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ಉಳಿದವರ ಮನಸ್ಥಿತಿಯನ್ನು ತಮ್ಮದಾಗಿಸಿಕೊಳ್ಳಲು ಸಂವಹನ ನಡೆಸಬೇಕು. ಅಥವ ಅವರ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು. ಹತ್ತಿರದಲ್ಲಿ ವಾಸಿಸುವುದರಿಂದ ನಾವು ಸಮಾನ ಮನಸ್ಕರಾಗುವುದಿಲ್ಲ. ದೂರ-ಸನಿಹದ ಅಂತರವು ಸಮಾನ ಮನಸ್ಕತೆಯನ್ನು ರೂಪಿಸುವುದಿಲ್ಲ."

‘ಮತ ಚಲಾಯಿಸುವುದು ಪ್ರಜಾಸತ್ತೆಯ ಆರಂಭವೂ ಅಲ್ಲ, ಅಂತ್ಯವೂ ಅಲ್ಲ. ಪ್ರಜಾಸತ್ತೆಯ ಪರಿಕಲ್ಪನೆಯು ಸರ್ಕಾರದ ಸ್ವರೂಪದ ಆಚೆಗೂ ಬೆಳೆಯುವಂಥದು. ಅದರ ಪ್ರಾಥಮಿಕ ವಿಧಾನವು ಸಹಬಾಳ್ವೆ ಹಾಗೂ ಸಹಬಾಳ್ವೆಯ ಅನುಭವವನ್ನು ಹಂಚಿಕೊಳ್ಳುವುದಾಗಿದೆ’, ಎಂಬ ಜಾನ್‌ ಡೂಯಿಯವರ ಸಿದ್ಧಾಂತಕ್ಕೆ ಅಂಬೇಡ್ಕರ್‌ ಮಾರು ಹೋಗಿದ್ದರು. ಆದರೆ, ಭಾರತೀಯ ಸನ್ನಿವೇಶದಲ್ಲಿ ಈ ಮಾನವ ಸಹಜ ಸಹಬಾಳ್ವೆಯ ವಿಧಾನವನ್ನು ಜಾತಿಪದ್ಧತಿಯು ನಾಶ ಮಾಡಿದೆ. ಈ ವಿಭಜನೆಗೆ ಧರ್ಮವನ್ನು ಬಳಸಲಾಗುತ್ತದೆ, ಎಂಬ ಚಿಂತನೆ ಅವರಲ್ಲಿ ಹರಳುಗಟ್ಟಿತು. ನನ್ನ ಗುರುಗಳಾದ ಜಾನ್‌ ‘ಡೂಯಿಯವರಿಗೆ ನಾನೆಷ್ಟೊಂದು ಋಣಿಯಾಗಿದ್ದೇನೆ’ ಎಂದು ಬರೆದುಕೊಂಡಿದ್ದ ಅಂಬೇಡ್ಕರ್‌ ಪ್ರಜಾಸತ್ತಾತ್ಮಕ ನಡವಳಿಕೆಯ ಸಹಜ ವಿಕಾಸಕ್ಕೆ ಅಡೆತಡೆಯಾಗಿರುವ ಜಾತಿ-ಮತಗಳನ್ನು ತಮ್ಮ ‘ಅನಿಹಿಲೇಶನ್‌ ಆಫ್‌ ಕಾಸ್ಟ್‌’ ಪ್ರಮೇಯದಲ್ಲಿ ವಿಸ್ತೃತಗೊಳಿಸಿದರು.

ಸಾಮಾಜಿಕ ಅಸಮಾನತೆಗೆ ಮತವೇ ಮೂಲ ಕಾರಣವಾಗಿದೆ, ಎಂಬುದು ಅವರಿಗೆ ಖಚಿತವಾಗಿತ್ತು. ತಮ್ಮ ಬದುಕಿನ ಒಟ್ಟಾರೆ ಅನುಭವದ ಹಿನ್ನೆಲೆಯಲ್ಲಿ ಜೀವನದ ಕೊನೆಯ ಪಾದದಲ್ಲಿ ಬುದ್ಧ ಮತ ವಿಚಾರಗಳು ಮಾತ್ರ ಸಮಾನತೆ, ಸೋದರತೆ, ಬಿಡುಗಡೆಯ ಅಂಶವನ್ನು ಹೊಂದಿರುವ ಮಹಾ ಮಾನವತಾ ಧಮ್ಮವಾಗಿದೆ ಎಂಬ ತೀರ್ಮಾನಕ್ಕೆ ಅಂಬೇಡ್ಕರ್ ಬರಬೇಕಾಯಿತು. ತಮ್ಮ ‘ಬುದ್ಧ ಆಂಡ್‌ ಹಿಸ್‌ ಧಮ್ಮ’ ಕೃತಿಯಲ್ಲಿ ಉಳಿದವರನ್ನು ಪ್ರೀತಿಸುವ ಗುಣವನ್ನು ಹೊಂದಿರುವ ಮಾತಿನ ಹಕ್ಕನ್ನು ವಿಶದಿಕರಿಸಿದ್ದು ಹೀಗೆ:

"ನಾವು ಸತ್ಯವನ್ನು ಮಾತ್ರ ಆಡಬೇಕು. ಸುಳ್ಳನ್ನು ಯಾವತ್ತೂ ಆಡಬಾರದು. ಉಳಿದವರ ಕುರಿತು ಕೆಟ್ಟದನ್ನು ಮಾತನಾಡಬಾರದು. ಮಿಥ್ಯಾಪವಾದ ಮಾಡುವುದರಿಂದ ದೂರವಿರಬೇಕು. ತನ್ನ ಸಹಜೀವಿಯ ಕುರಿತು ನಿಂದನೆಯ ಭಾಷೆಯನ್ನು ಬಳಸಬಾರದು. ಎದುರು ವ್ಯಕ್ತಿಯ ಬಳಿ ಮಾತನಾಡುವಾಗ ಕರುಣೆ ಮತ್ತು ಸೌಜನ್ಯವನ್ನು ಹೊಂದಿರಬೇಕು. ಸುಳ್ಳು ತುಂಬಿದ, ನಿರರ್ಥಕ ಮಾತನ್ನು ಆಡಬಾರದು. ನಾವು ಆಡುವ ಮಾತು ಸೂಕ್ಷ್ಮತೆಯನ್ನು ಪಡೆದಿದ್ದು ಉದ್ದೇಶವನ್ನು ಹೊಂದಿರಬೇಕು."

ಈ ಎಲ್ಲ ಅಂಶವನ್ನೂ ಒಳಗೊಂಡಿರುವ ಭಾರತೀಯ ಬುದ್ಧ ಧಮ್ಮವು ಬಹುಲೋಕಸಮುದಾಯಗಳನ್ನು ವಿಮೋಚನೆಗೊಳಿಸಬಲ್ಲುದು, ಎಂಬುದು ಅವರ ನಂಬಿಕೆಯಾಗಿತ್ತು. ಪ್ರಜಾಸತ್ತೆ, ರಾಜಕಾರಣ, ನೈತಿಕತೆ, ಸಾಮುದಾಯಿಕ ಉನ್ನತಿಗಳ ಬಗೆಗೆ ಚಿಂತಿಸಿದ ಮಹಾ ಮಾನವತಾವಾದಿಯಾಗಿದ್ದ, ಅಂಬೇಡ್ಕರ್‌ರ ವಿದ್ಯಾಗುರುಗಳಾಗಿದ್ದ ಜಾನ್‌ ಡೂಯಿಯವರನ್ನು ಇನಿತೂ ಬಿಡದಂತೆ ಅನುಸರಿಸಿದ ಏಕೈಕ ಶಿಷ್ಯ ಬಹುಶಃ ಬಿ.ಆರ್‌. ಅಂಬೇಡ್ಕರ್‌ ಅವರೇ ಇರಬೇಕು. ಒಬ್ಬ ಮೇಧಾವಿ ಹಾಗೂ ಧೀಮಂತ ವ್ಯಕ್ತಿಗೆ ಇನ್ನೊಬ್ಬ ಶ್ರೇಷ್ಠಗುಣಗಳ ವ್ಯಕ್ತಿ ಗೌರವ ಸೂಚಿಸುವ ವಿಧಾನ ಅವರ ಉನ್ನತ ವಿಚಾರಗಳನ್ನು ಅನುಷ್ಠಾನಕ್ಕೆ ತರುವುದೇ ಆಗಿರಬೇಕು.

 

 

ಆಧ್ಯಾತ್ಮಿಕ ಉನ್ನತಿ- ಮುಕ್ತಿಯ ಬುದ್ಧ ಧಮ್ಮ

ಮೊದಲು ಹೇಳಿದಂತೆ ಅಂಬೇಡ್ಕರ್‌, ತಮ್ಮ ಬಾಲ್ಯ ಮತ್ತು ಪ್ರೌಢಾವಸ್ಥೆಯಲ್ಲಿ ಕಬೀರನ ವಚನಗಳಿಂದ ಪ್ರಭಾವಿತರಾದರು. ಮಾತ್ರವಲ್ಲ, ವಿಶಾಲ ನೆಲೆಯಲ್ಲಿ ಕಬೀರ ನುಡಿಯುತ್ತಿರುವ ‘ಪದ’ಗಳು ಬುದ್ಧಧಮ್ಮದಲ್ಲಿ ತಮ್ಮ ಬೇರುಗಳನ್ನು ಬಿಟ್ಟಿದ್ದವು ಎಂದೂ ಕಂಡುಕೊಂಡಿದ್ದರು. ತಮ್ಮ ಮರಾಠಿ ಬರಹಗಳಲ್ಲಿ ಅಂಬೇಡ್ಕರ್‌ ‘ಮಾಣೂಸ್ಕಿ’ ಎಂಬ ಶಬ್ದವು ಬುದ್ಧ ಹೇಳುವ ಕರುಣೆ-ದಯೆ ತುಂಬಿದ ಮಾನವೀಯತೆಯನ್ನು ಚೆನ್ನಾಗಿ ವಿಶದಪಡಿಸುತ್ತದೆ ಅಂದುಕೊಂಡಿದ್ದರು.

ಆದರೆ, ಹಿಂದೂ ಧರ್ಮವು ಮನುಷ್ಯನ ಈ ಪ್ರಾಥಮಿಕ ಅಗತ್ಯವನ್ನು ಪೂರೈಸಲಾರದು. ಹಿಂದೂಧರ್ಮದ ಶ್ರೇಣಿಕೃತ ವ್ಯವಸ್ಥೆಯಿಂದಾಗಿ ಸಮಾನ ನೆಲೆಯಲ್ಲಿ ವ್ಯಕ್ತಿಗತ ಆಧ್ಯಾತ್ಮಿಕ ಏಳಿಗೆ ಸಾಧ್ಯವಿಲ್ಲ. ಅಲ್ಲಿ ಉನ್ನತ ಸಾಧನೆ ಸಾಧ್ಯವಾಗುವುದು ಉಚ್ಚವರ್ಗ ಮತ್ತು ಜಾತಿಗಳಿಗೆ ಮಾತ್ರ. ವ್ಯಕ್ತಿಗತ ನೆಲೆಯ ಆಧ್ಯಾತ್ಮಿಕ ಉನ್ನತಿಯನ್ನು ಬುದ್ಧಧಮ್ಮದಲ್ಲಿ ಮಾತ್ರ ಸಾಧಿಸಬಹುದೆಂದು ಅವರ ನಂಬಿಕೆಯಾಗಿತ್ತು.

"ಸಣ್ಣಪುಟ್ಟ ತೊರೆ, ಕಾಡಿನ ಸಹಜ ಬುಗ್ಗೆ, ನದಿ, ಮಹಾನದಿಗಳು ಹರಿಯುತ್ತ ಸಮುದ್ರವನ್ನು ಸೇರಿದ್ದೇ ಎಲ್ಲವೂ ಒಂದೇ ಆಗಿಬಿಡುತ್ತವೆ. (ಬುದ್ಧಧಮ್ಮದ) ಸಂಘಗಳು ಸಾಗರವಿದ್ದಂತೆ. ಸಂಘದಲ್ಲಿ ಎಲ್ಲರೂ ಸಮಾನರು,"

- ಎಂಬ ಬುದ್ಧನ ಆಶಯ ನುಡಿಗಳು ಅವರಿಗೆ ಮನವರಿಕೆಯಾಗಿತ್ತು. ತಮ್ಮ ವಿಚಾರಗಳು ಹರಳುಗಟ್ಟಿದಂತೆ-

"ಮಾನವರ ಮಾನಸಿಕ ವಿಕಾಸಕ್ಕೆ ಧರ್ಮವು ಅಗತ್ಯ. ಬುದ್ಧ ಬೋಧಿಸುವ ಧಮ್ಮವು ನಮಗೆ ಸ್ವತಂತ್ರ ವಿಚಾರಶಕ್ತಿ, ಸ್ವಾತಂತ್ರ್ಯ ಮತ್ತು ವೈಯಕ್ತಿಕ ನೆಲೆಯ ಉನ್ನತಿ ಸಾಧಿಸಲು ಅವಕಾಶ ಒದಗಿಸುತ್ತದೆ. ಭಾರತದಲ್ಲಿ ಬುದ್ಧ ಸಿದ್ಧಾಂತದ ವಿಕಾಸವು ಆಧುನಿಕ ಫ್ರೆಂಚ್‌ಕ್ರಾಂತಿಯಷ್ಟೇ ಮಹತ್ವಪೂರ್ಣ ವಿಷಯವಾಗಿದೆ. ನನ್ನ ಸಾಮಾಜಿಕ ಸಿದ್ಧಾಂತವನ್ನು ಮೂರು ಪದಗಳಲ್ಲಿ ವರ್ಣಿಸಬಹುದಾದರೆ ‘ಸ್ವಾತಂತ್ರ್ಯ, ಸಮಾನತೆ ಮತ್ತು ಸೋದರತೆ’ ಎಂಬುವೇ ಆ ಶಬ್ದಗಳಾಗಿವೆ. ಆದಾಗ್ಯೂ, ಈ ಪರಿಕಲ್ಪನೆಯನ್ನು ನಾನು ಫ್ರೆಂಚ್‌ಕ್ರಾಂತಿಯಿಂದ ಎರವಲು ಪಡೆದಿದ್ದೇನೆಂದು ಯಾರೂ ತಿಳಿಯಬಾರದು. ನಾನಿವನ್ನು ಅಲ್ಲಿಂದ ಪಡೆದಿಲ್ಲ.

'ನನ್ನ ಸಿದ್ಧಾಂತವು ಧರ್ಮದಲ್ಲಿ ಆಳವಾಗಿ ಬೇರೂರಿರುವಂಥದ್ದೇ ಹೊರತು ರಾಜ್ಯಶಾಸ್ತ್ರದಲ್ಲಿ ಅಲ್ಲ. ನನ್ನ ಗುರುವಾದ ಬುದ್ಧನ ಬೋಧನೆಗಳಿಂದ ನಾನು ಇವೆಲ್ಲವನ್ನೂ ಪಡೆದಿರುವೆ. ಆತನ ಬೋಧೆಯಲ್ಲಿ ಸ್ವಾತಂತ್ರ್ಯ ಮತ್ತು ಸಮಾನತೆಗಳುಂಟು. ಆದರೆ, ಇವೆರಡರ ಜತೆಗೆ 'ಸೋದರತಗೆ' ಬುದ್ಧ ಅತ್ಯಂತ ಮಹತ್ತರ ಸ್ಥಾನವನ್ನು ನೀಡಿದ್ದ. ಸೋದರತೆಯನ್ನು ನಿರಾಕರಿಸುವುದೆಂದರೆ ಮಾನವೀಯತೆಯನ್ನೇ (ಇಲ್ಲಿ ‘ಮಾಣೂಸ್ಕಿ’ ಎಂಬ ಅರ್ಥದಲ್ಲಿ) ನಿರಾಕರಿಸಿದಂತೆ. ಕರುಣೆ-ದಯೆ-ಆರ್ದ್ರತೆ ತುಂಬಿದ ಮಾನವೀಯತೆಯೇ ನಿಜವಾದ ಧರ್ಮವಾಗಿದೆ", ಎಂದು ಅಂಬೇಡ್ಕರ್‌ ಘೋಷಿಸಿದ್ದರು.

ಆಕರ:

  • ‘ಡಾಕ್ಟರ್‌ ಅಂಬೇಡ್ಕರ್‌ ಆಂಡ್‌ ಡೆಮಾಕ್ರಸಿ’ ಕೃತಿ.
  • ಸ್ಕಾಟ್‌. ಆರ್‌. ಸ್ಟ್ರೌಡ್‌

ಮತ್ತು

  • ಇಶಿತಾ ಆದಿತ್ಯ ರಾಯ್‌ ಪ್ರಬಂಧ

ಚಿತ್ರ: ಕೊಲಂಬಿಯ ವಿಶ್ವವಿದ್ಯಾಲಯದ ಸಂಗ್ರಹ.