ತತ್ವಹೀನ ರಾಜಕಾರಣ ಸತ್ವಹೀನ ಪ್ರಜಾತಂತ್ರ

   ತತ್ವಹೀನ ರಾಜಕಾರಣ ಸತ್ವಹೀನ ಪ್ರಜಾತಂತ್ರ

 

 

ಬಿಜೆಪಿಯ 301 ಸಂಸದರ ಪೈಕಿ 265 ಮಂದಿ , ಕಾಂಗ್ರೆಸ್‌ ಪಕ್ಷದ 51 ಸಂಸದರ ಪೈಕಿ 43 ಮಂದಿ ಕೋಟ್ಯಧಿಪತಿಗಳಿದ್ದಾರೆ. 17ನೆಯ ಲೋಕಸಭೆಯ ಸಂಸದರ ಸರಾಸರಿ ಆಸ್ತಿ 20.93 ಕೋಟಿ ರೂಗಳಷ್ಟಿದೆ ಎಂದು ಸಮೀಕ್ಷೆ ಹೇಳುತ್ತದೆ. ದೇಶದ 30 ಮುಖ್ಯಮಂತ್ರಿಗಳ ಪೈಕಿ 29 ಮಂದಿ ಕೋಟ್ಯಧಿಪತಿಗಳಿದ್ದಾರೆ. ಇವರ ಸರಾಸರಿ ಆಸ್ತಿ 33.96 ಕೋಟಿ ರೂಗಳಷ್ಟಿದೆ. ಇದರರ್ಥ ಯಾವುದೋ ಒಂದು ಹಳ್ಳಿಗಾಡಿನ ತಳಮಟ್ಟದ ರಾಜಕೀಯ ಕಾರ್ಯಕರ್ತನೊಬ್ಬ ರಾಜಕೀಯ ಮೆಟ್ಟಿಲುಗಳನ್ನೇರುತ್ತಾ ನಾಯಕತ್ವದ ಸ್ಥಾನಕ್ಕೇರುವ ಒಂದು ಕನಸು ಬಹುಶಃ ತಿರುಕನ ಕನಸಾಗಿಯೇ ಉಳಿಯುತ್ತದೆ.

ವರ್ತಮಾನ

ನಾ ದಿವಾಕರ

 

ಕರ್ನಾಟಕದ ವಿಧಾನಸಭಾ ಚುನಾವಣೆಗಳ ಕಾವು ಏರುತ್ತಿರುವಂತೆಯೇ ರಾಜ್ಯ ರಾಜಕಾರಣದ ಗರ್ಭದೊಳಗೆ ಅಡಗಿರುವ ಎಲ್ಲ ರೀತಿಯ ಅವಾಂತರಗಳೂ ಒಂದೊಂದಾಗಿ ಅನಾವರಣವಾಗುತ್ತಿವೆ.  ರಾಜಕೀಯ ಅಧಿಕಾರ ಮತ್ತು ಪ್ರಜಾಸತ್ತಾತ್ಮಕ ರಾಜಕಾರಣ ಇವೆರಡರ ನಡುವೆ ಇರುವ ಸೂಕ್ಷ್ಮ ವ್ಯತ್ಯಾಸದ ಪರಿವೆಯೇ ಇಲ್ಲದ ಒಂದು ರಾಜಕೀಯ ವಲಯ ನಮ್ಮ ನಡುವೆ ಸಕ್ರಿಯವಾಗಿದ್ದು, ಈ ಚೌಕಟ್ಟಿನೊಳಗೇ ಅಧಿಕಾರ ಕೇಂದ್ರಗಳನ್ನು ಸಮೀಪಿಸಲು ಬೇಕಾದ ರಣತಂತ್ರಗಳನ್ನು, ಕಾರ್ಯತಂತ್ರಗಳನ್ನು ಹೆಣೆಯುವ ನಿಟ್ಟಿನಲ್ಲಿ ಎಲ್ಲ ಮುಖ್ಯವಾಹಿನಿ ರಾಜಕೀಯ ಪಕ್ಷಗಳೂ ನಿರತವಾಗಿವೆ. ಶಾಸನಸಭೆಯ ಪ್ರಾತಿನಿಧ್ಯದಿಂದ ಹೊರತಾಗಿ, ಅಧಿಕಾರ ಪೀಠದ ಚೌಕಟ್ಟುಗಳಿಂದ ದೂರ ಉಳಿದುಕೊಂಡೇ, ಜನಸಾಮಾನ್ಯರೊಡನೆ ಬೆರೆತು, ಚುನಾಯಿತರಾಗದೆಯೂ ನೈಜ ಜನಪ್ರತಿನಿಧಿಗಳಂತೆ ಸಮಾಜದ ಒಳಿತಿಗಾಗಿ ಅಹರ್ನಿಶಿ ದುಡಿಯುವ ಔನ್ನತ್ಯದ ಪರಿಕಲ್ಪನೆ ಬಹುಶಃ ಪ್ರಸ್ತುತ ರಾಜಕೀಯ ವಲಯದಲ್ಲಿ ಪಂಚತಂತ್ರ ಕಥೆಗಳಂತೆಯೇ ಕಾಣುತ್ತದೆ.

 

ರಾಜಕೀಯ ಪಕ್ಷಗಳಿಗೆ ಅತ್ಯವಶ್ಯವಾದ ತಾತ್ವಿಕ ನೆಲೆಗಳು, ಸೈದ್ಧಾಂತಿಕ ಚೌಕಟ್ಟು ಮತ್ತು ಜನಪರ ಕಾಳಜಿಯ ಭೂಮಿಕೆಗಳನ್ನು ವ್ಯವಸ್ಥಿತವಾಗಿ ಶಿಥಿಲಗೊಳಿಸುತ್ತಲೇ ಬಂದಿರುವ ಭಾರತದ ರಾಜಕೀಯ ನಾಯಕತ್ವ ಬಹುಶಃ ಈ ನಿಟ್ಟಿನಲ್ಲಿ ತನ್ನ ಅಂತಿಮ ಘಟ್ಟವನ್ನು ತಲುಪಿದೆ ಎನ್ನಬಹುದು. ಮೌಖಿಕವಾಗಿ ಗಂಗೆ ಯುಮುನೆಯರಂತೆ ದೇಶಾದ್ಯಂತ ಹರಿದಾಡುವ ಸೈದ್ಧಾಂತಿಕ ಪರಿಭಾಷೆ ಮತ್ತು ತಾತ್ವಿಕ ಪರಿಕಲ್ಪನೆಗಳು ತಮ್ಮ ಹರಿವಿನ ಹಾದಿಯಲ್ಲೇ ಕವಲುಗಳನ್ನೊಡೆಯುತ್ತಾ, ಪ್ರಜಾಪ್ರಭುತ್ವ ಎಂಬ ಬೌದ್ಧಿಕ ಕಡಲನ್ನು ಸೇರುವ ವೇಳೆಗೆ ಸಂಪೂರ್ಣ ಕಲುಷಿತವಾಗಿರುವಂತಹ ಒಂದು ಸನ್ನಿವೇಶವನ್ನು ವರ್ತಮಾನದ ಭಾರತ ಎದುರಿಸುತ್ತಿದೆ. ಬಹುಶಃ ಒಂದು ದಶಕದ ನಂತರದಲ್ಲಿ ಯುವ ಪೀಳಿಗೆಗೆ ತತ್ವಾಧಾರಿತ ರಾಜಕಾರಣ, ಮೌಲ್ಯಾಧಾರಿತ ರಾಜಕೀಯ, ತತ್ವನಿಷ್ಠೆಯ ನಾಯಕತ್ವ, ಸಿದ್ಧಾಂತ ಆಧಾರಿತ ಪಕ್ಷ ಇವೆಲ್ಲವೂ ಜಾತಕ ಕತೆಗಳಂತೆ ಕಾಣಬಹುದು. ಆ ಮಟ್ಟಿಗೆ ರಾಜಕೀಯ ವಲಯ ತನ್ನ ಔನ್ನತ್ಯದ ಹೊರಕವಚಗಳನ್ನು ಕಳೆದುಕೊಂಡು ಪೂರ್ಣ ಬೆತ್ತಲಾಗಿರುತ್ತದೆ.

 

ಚುನಾವಣೆಯ ಸುತ್ತಲಿನ ಪ್ರಹಸನಗಳು

 

ಮುಂದಿನ ತಿಂಗಳು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗಳ ಪೂರ್ವಭಾವಿ ಸಿದ್ಧತೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಹೀಗೆನಿಸುವುದು ಸಹಜ. ಪ್ರಾಚೀನ ಭಾರತದಲ್ಲಿ, 19ನೆಯ ಶತಮಾನದವರೆಗೂ ಪ್ರಚಲಿತವಾಗಿದ್ದ , ಇಂದಿಗೂ ಅಸ್ತಿತ್ವ ಉಳಿಸಿಕೊಂಡಿರುವ, ಊಳಿಗಮಾನ್ಯ ವ್ಯವಸ್ಥೆಯಲ್ಲಿ ಸ್ಥಿರಾಸ್ತಿಯ ಒಡೆತನ ಮತ್ತು ಸಾಮಾಜಿಕ ಯಜಮಾನಿಕೆ ಸಾರ್ವತ್ರಿಕವಾಗಿ ಉತ್ತರಾಧಿಕಾರದ ಶ್ರೇಣಿಯಲ್ಲೇ ನೆಲೆ ಕಾಣುತ್ತಿತ್ತು. ಇಡೀ ಸಮಾಜದ ಮೇಲೆ ಹಿಡಿತ ಸಾಧಿಸಲು ಯಜಮಾನಿಕೆಯ ವಾರಸುದಾರರಿಗೆ ಸಂಪತ್ತಿನ ಮೇಲೆ ಹೊಂದಿರುತ್ತಿದ್ದ ಒಡೆತನ ಮತ್ತು ಪಾರಮ್ಯವೇ ಮಾನದಂಡಗಳಾಗಿದ್ದವು. ತನ್ನ 75 ವರ್ಷಗಳ ಸ್ವತಂತ್ರ ನಡಿಗೆಯಲ್ಲಿ ಭಾರತ ಈ ಪರಂಪರೆಯನ್ನು ಕೊಡವಿಕೊಂಡು, ಕನಿಷ್ಠ ಪ್ರಮಾಣದಲ್ಲಾದರೂ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಅಳವಡಿಸಿಕೊಳ್ಳಬಹುದಿತ್ತು. ದುರಾದೃಷ್ಟವಶಾತ್‌ ಇಡೀ ಸಮಾಜವು ಪುನಃಪುನಃ ತನ್ನ ಪ್ರಾಚೀನ ಪಳೆಯುಳಿಕೆಗಳನ್ನೇ ಕಚ್ಚಾವಸ್ತುಗಳಂತೆ ಬಳಸಿಕೊಂಡು, ಪ್ರಾಚೀನ ಸಂಪ್ರದಾಯ ಮತ್ತು ಪರಂಪರೆಗಳಿಗೂ ಮರುಜೀವ ತುಂಬುತ್ತಾ, ನವ ಉದಾರವಾದದ ಮಾರುಕಟ್ಟೆಯೊಂದಿಗೆ, ನವ ಊಳಿಗಮಾನ್ಯ ಮೌಲ್ಯಗಳನ್ನೂ ಪೋಷಿಸಿಕೊಂಡು, ಬಂಡವಾಳಶಾಹಿಯ ನವ ವಸಾಹತುಗಳನ್ನು ನಿರ್ಮಿಸಿಕೊಳ್ಳುತ್ತಿದೆ.

 

ಈ  ನವ ವಸಾಹತುಗಳ ಮೇಲೆ ತಮ್ಮ ಆಧಿಪತ್ಯವನ್ನು ಸಾಧಿಸುವ ಸಲುವಾಗಿಯೇ ಕುಟುಂಬ ರಾಜಕಾರಣದ ನೆಲೆಗಳನ್ನೂ ವಿಸ್ತರಿಸಲಾಗುತ್ತಿದೆ. ಹಾಗಾಗಿಯೇ ರಾಜಕೀಯ ಪರಿಭಾಷೆಯಲ್ಲಿ ಕುಟುಂಬ ಅಥವಾ ವಂಶಾಡಳಿತ ಎನ್ನುವುದು ನವೀನ ರೂಪಗಳಲ್ಲಿ ವ್ಯಾಖ್ಯಾನಕ್ಕೊಳಪಡುತ್ತಿದೆ. ವಂಶಾಡಳಿತವನ್ನು ಕೊನೆಗೊಳಿಸಲೆಂದೇ ಪಣತೊಟ್ಟಿರುವ ಬಿಜೆಪಿ ರಾಷ್ಟ್ರಮಟ್ಟದಲ್ಲೂ ಸಹ ಕುಟುಂಬ ರಾಜಕಾರಣವನ್ನು ತಾತ್ವಿಕ ನೆಲೆಯಲ್ಲಿ ವಿರೋಧಿಸುತ್ತಲೇ ಇದೆ. ಆದರೆ ಕಳೆದ ಒಂದು ದಶಕದ ಅಧಿಕಾರ ರಾಜಕಾರಣವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ರಾಜಕೀಯದಲ್ಲಿ ಈಗಾಗಲೇ ಸುಭದ್ರ ನೆಲೆ ಗಳಿಸಿರುವ ಕುಟುಂಬಗಳಿಂದ ಹೊರತಾದ ಒಂದು ರಾಜಕೀಯ ನಾಯಕತ್ವ ಅಧಿಕಾರ ರಾಜಕಾರಣದ ಮೇಲೆ ಆಧಿಪತ್ಯ ಸಾಧಿಸುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ರಾಜಕೀಯ ಮುಖ್ಯವಾಹಿನಿಯ ಚರ್ಚೆಯಲ್ಲಿ ವಂಶಾಡಳಿತಕ್ಕೆ ಚಾರಿತ್ರಿಕ ಉದಾಹರಣೆಯಾಗಿ ನೆಹರೂ ಕುಟುಂಬವನ್ನು ಸಹಜವಾಗಿಯೇ ಉಲ್ಲೇಖಿಸಲಾಗುತ್ತಿದ್ದರೂ, ಎಡಪಕ್ಷಗಳನ್ನು ಹೊರತುಪಡಿಸಿ ಯಾವುದೇ ರಾಷ್ಟ್ರೀಯ ಮುಖ್ಯವಾಹಿನಿಯ ಪಕ್ಷಗಳೂ ಸಹ ಕುಟುಂಬ ರಾಜಕಾರಣದಿಂದ ಮುಕ್ತವಾಗಿಲ್ಲ ಎನ್ನುವುದನ್ನೂ ಗಮನಿಸಬೇಕಿದೆ.  ಆದರೆ  ಸಂದರ್ಭಕ್ಕೆ ತಕ್ಕಂತೆ ಕುಟುಂಬ ಎಂಬ ಚೌಕಟ್ಟಿನಿಂದ ಸೋದರ/ಸೋದರಿಯರನ್ನು, ಸೋದರ ಸಂಬಂಧಿಗಳನ್ನು, ನಿಕಟ ಸಂಬಂಧಿಗಳನ್ನು ಹೊರಗಿಟ್ಟು ವ್ಯಾಖ್ಯಾನ ಮಾಡಲಾಗುತ್ತಿದೆ. ಈ ವ್ಯಾಖ್ಯಾನಗಳೇನೇ ಇದ್ದರೂ, ಭಾರತದ ರಾಜಕಾರಣ ಪ್ರಬಲ ಕೌಟುಂಬಿಕ ಉತ್ತರಾಧಿಕಾರ ಮತ್ತು ವಾರಸುದಾರಿಕೆಯ ಒಂದು ವಿಸ್ತರಣೆಯಾಗಿಯೇ ಕಾಣುತ್ತಿದೆ. ಬಹುಶಃ ಕುಟುಂಬ, ವಂಶಾಡಳಿತ, ಉತ್ತರಾಧಿಕಾರ ಮುಂತಾದ ಪದಗಳಿಗೆ ಹೊಸ ರಾಜಕೀಯ ಅರ್ಥಗಳನ್ನು ಜನಸಾಮಾನ್ಯರೇ ಕಲ್ಪಿಸಿಕೊಳ್ಳಬೇಕಿದೆ.

 

ಸಂಪತ್ತು-ಬಂಡವಾಳ-ರಾಜಕಾರಣ

 

ಈ ಉತ್ತರಾಧಿಕಾರ ಮತ್ತು ವಾರಸುದಾರಿಕೆಯ ಅಧಿಕಾರ ರಾಜಕಾರಣವನ್ನು ಶ್ರೀಸಾಮಾನ್ಯನ ದೃಷ್ಟಿಯಲ್ಲಿ ನೋಡಿದಾಗ ನಮಗೆ ಕಾಣಬೇಕಿರುವುದು ರಾಜಕಾರಣವನ್ನು ಸಂಪೂರ್ಣವಾಗಿ ಆವರಿಸಿರುವ ಬಂಡವಾಳ, ಸಂಪತ್ತು ಮತ್ತು ಸಂಪನ್ಮೂಲಗಳ ಮೇಲಿನ ಒಡೆತನ. ಇದರಿಂದ ಉದ್ಭವಿಸಿ ವಿಸ್ತರಿಸುವಂತಹ ಅಧಿಕಾರ ಕೇಂದ್ರಗಳ ನಿರ್ವಹಣೆ ಹಾಗೂ ನಿಯಂತ್ರಣ. 2019ರಲ್ಲಿ ಆಯ್ಕೆಯಾದ 17ನೆಯ ಲೋಕಸಭೆಯ 542 ಸಂಸದರ ಪೈಕಿ 475 ಸಂಸದರು ಕೋಟ್ಯಧಿಪತಿಗಳಾಗಿದ್ದಾರೆ ಎಂದು ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ ಎಂಬ ಸಂಸ್ಥೆಯ ಸಮೀಕ್ಷೆಯೊಂದರಲ್ಲಿ ಹೇಳಲಾಗಿದೆ. ಬಿಜೆಪಿಯ 301 ಸಂಸದರ ಪೈಕಿ 265 ಮಂದಿ , ಕಾಂಗ್ರೆಸ್‌ ಪಕ್ಷದ 51 ಸಂಸದರ ಪೈಕಿ 43 ಮಂದಿ ಕೋಟ್ಯಧಿಪತಿಗಳಿದ್ದಾರೆ. 17ನೆಯ ಲೋಕಸಭೆಯ ಸಂಸದರ ಸರಾಸರಿ ಆಸ್ತಿ 20.93 ಕೋಟಿ ರೂಗಳಷ್ಟಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ. ಇದೇ ಸಂಸ್ಥೆಯ ಇತ್ತೀಚಿನ ಸಮೀಕ್ಷೆಯೊಂದರ ಅನುಸಾರ ದೇಶದ 30 ಮುಖ್ಯಮಂತ್ರಿಗಳ ಪೈಕಿ 29 ಮಂದಿ ಕೋಟ್ಯಧಿಪತಿಗಳಿದ್ದಾರೆ. ಇವರ ಸರಾಸರಿ ಆಸ್ತಿ 33.96 ಕೋಟಿ ರೂಗಳಷ್ಟಿದೆ. ಇದರರ್ಥ ಯಾವುದೋ ಒಂದು ಹಳ್ಳಿಗಾಡಿನ ತಳಮಟ್ಟದ ರಾಜಕೀಯ ಕಾರ್ಯಕರ್ತನೊಬ್ಬ ರಾಜಕೀಯ ಮೆಟ್ಟಿಲುಗಳನ್ನೇರುತ್ತಾ ನಾಯಕತ್ವದ ಸ್ಥಾನಕ್ಕೇರುವ ಒಂದು ಕನಸು ಬಹುಶಃ ತಿರುಕನ ಕನಸಾಗಿಯೇ ಉಳಿಯುತ್ತದೆ.

 

ಈ ಅಂಕಿ ಅಂಶಗಳ ವಾಸ್ತವತೆ, ಸತ್ಯಾಸತ್ಯತೆಗಳನ್ನು ನಿಷ್ಕರ್ಷೆಗೊಳಪಡಿಸುವ ಗೋಜೆಗೇ ಹೋಗದೆ, ನಮ್ಮ ಸುತ್ತಲಿನ ಅಧಿಕಾರ ರಾಜಕಾರಣದ ಆಟಾಟೋಪಗಳತ್ತ ಕಣ್ಣು ಹಾಯಿಸಿದರೂ ನಮಗೆ ಕಾಣುವುದು ಬಂಡವಾಳ ಮತ್ತು ಸಂಪತ್ತಿನ ಬಲ ಇಲ್ಲದೆ ಭಾರತದ ರಾಜಕಾರಣದಲ್ಲಿ ನೆಲೆಯೂರುವುದು ಅಸಾಧ್ಯ ಎಂಬ ಕಟು ಸತ್ಯ.  ಇದು ಪ್ರಜಾತಂತ್ರಕ್ಕೆ ಮಾರಕವೋ ಅಥವಾ ಅನುಕೂಲಕರವೋ ಎಂಬ ಜಿಜ್ಞಾಸೆಯನ್ನೂ ಬದಿಗಿಟ್ಟು ನೋಡಿದಾಗ, ವಿಸ್ತರಿಸುತ್ತಿರುವ ಕುಟುಂಬ ರಾಜಕಾರಣದ ನೆಲೆಗಳಿಗೂ, ಬಂಡವಾಳ ಶೇಖರಣೆಯ ಮೂಲಗಳಿಗೂ ಮತ್ತು ಸಂಪತ್ತು ಸಂಪನ್ಮೂಲಗಳ ಮೇಲೆ ಸಾಧಿಸಲಾಗುವ ನಿಯಂತ್ರಣಗಳಿಗೂ ನೇರಾನೇರ ಸಂಬಂಧ ಇರುವುದನ್ನು ಸ್ಪಷ್ಟವಾಗಿ ಗುರುತಿಸಬಹುದು. ವ್ಯಕ್ತಿಗತವಾಗಿ ಭ್ರಷ್ಟಾಚಾರದ ಕಳಂಕ ಇಲ್ಲದಿರುವ ಅನೇಕ ನಾಯಕರೂ ನಮ್ಮ ನಡುವೆ ಇದ್ದಾರೆ ಎನ್ನುವುದು ಸಮಾಧಾನಕರ ಅಂಶವಾದರೂ, ಅಂಥವರ ಸಂಖ್ಯೆ ಕ್ರಮೇಣ ಕ್ಷೀಣಿಸುತ್ತಿದೆ ಅಥವಾ ಅಂಥವರನ್ನು ಮೂಲೆಗುಂಪುಮಾಡಲಾಗುತ್ತಿದೆ ಎನ್ನುವ ವಾಸ್ತವವೇ ಪ್ರಜಾಪ್ರಭುತ್ವದ ಆಶಯಗಳಿಗೆ ಆತಂಕ ಸೃಷ್ಟಿಸುತ್ತದೆ.

 

ಪಕ್ಷಾಂತರದ ರೂಪಾಂತರಿ ಸ್ವರೂಪ

 

ಇದರ ನಡುವೆಯೇ ಕರ್ನಾಟಕದ ಚುನಾವಣೆಗಳ ಸಂದರ್ಭದಲ್ಲಿ ನಡೆಯುತ್ತಿರುವ ರಾಜಕೀಯ ವಲಸೆಯನ್ನು ಗಮನಿಸಿದಾಗ ಭಾರತದ ರಾಜಕಾರಣವು ಕುಟುಂಬ-ಆಸ್ತಿ ಒಡೆತನ-ಸಂಪತ್ತು-ಯಜಮಾನಿಕೆ-ಉತ್ತರಾಧಿಕಾರ ಮತ್ತು ವಾರಸುದಾರಿಕೆಯನ್ನು ದಾಟಿ ಹೋಗಿಲ್ಲ ಎನ್ನುವುದು ಸ್ಪಷ್ಟವಾಗಿ ಕಾಣುತ್ತದೆ. ನೆನ್ನೆ ಮೊನ್ನೆಯವರೆಗೂ ವಂಶಾಡಳಿತದ ವಿರುದ್ಧ ಮಾತನಾಡುತ್ತಿದ್ದವರು, ಕುಟುಂಬ ರಾಜಕಾರಣವನ್ನು ವಿರೋಧಿಸುತ್ತಿದ್ದವರು, ಹಿಂದುತ್ವದ ಪರ ವಕಾಲತ್ತು ವಹಿಸುತ್ತಿದ್ದವರು, ಕಾಂಗ್ರೆಸ್‌ ಪಕ್ಷವನ್ನು ಓಲೈಕೆಯ ಕೇಂದ್ರ ಎಂದು ಬಣ್ಣಿಸುತ್ತಿದ್ದವರು, ಹಿಂದುತ್ವ ರಾಜಕಾರಣವನ್ನು ಸಂವಿಧಾನ ವಿರೋಧಿ ಎಂದು ಬಣ್ಣಿಸುತ್ತಿದ್ದವರು, ಇಂದು ತದ್ವಿರುದ್ಧ ದಿಕ್ಕಿನಲ್ಲಿ ಸಾಗುತ್ತಾ,  ಹಸಿರು ಹುಲ್ಲುಗಾವಲುಗಳನ್ನು ಅರಸುತ್ತಾ ತಾವು ತಾತ್ವಿಕವಾಗಿ ಹೊರಗಿಟ್ಟಿದ್ದ ರಾಜಕೀಯ ನೆಲೆಗಳನ್ನೇ ಪುನರಾಶ್ರಯಿಸುತ್ತಿರುವುದನ್ನು ಪ್ರತಿನಿತ್ಯ ಕಾಣುತ್ತಿದ್ದೇವೆ. ಈ ರಾಜಕೀಯ ವಲಸೆಯನ್ನು                                             ʼ ಪುನರಾಗಮನ ʼ, ʼ ಮರಳಿ ತವರಿಗೆ ʼ , ʼ ಮರಳಿಗೂಡಿಗೆ ʼ ಮುಂತಾದ ಸುಂದರ ಪದಪುಂಜಗಳಲ್ಲಿ ಬಂಧಿಸಲಾಗುತ್ತಿದೆ. ರಾಜಕಾರಣದಲ್ಲಿ ಶಾಶ್ವತ ಮಿತ್ರರೂ ಇಲ್ಲ, ಶತ್ರುಗಳೂ ಇಲ್ಲ ಎನ್ನುವ ನಾಣ್ಣುಡಿ ಸಾರ್ವಕಾಲಿಕ ಸತ್ಯವೇ ಆದರೂ, ಈ ರೂಪಾಂತರದ ಹಿಂದೆ ಅಡಗಿರುವ ಬಂಡವಾಳ, ಮಾರುಕಟ್ಟೆ ಮತ್ತು ಸಂಪತ್ತಿನ ಮೂಲ ತಳಹದಿಯನ್ನು ಗಮನಿಸದೆ ಹೋದರೆ ಬಹುಶಃ ಜನಸಾಮಾನ್ಯರಾದ ನಾವು ಮತ್ತಷ್ಟು ಭ್ರಮಾಧೀನತೆಗೆ ಒಳಗಾಗುತ್ತೇವೆ.

 

ಭಾರತದ ಪ್ರಜಾತಂತ್ರವು ಎದುರಿಸುತ್ತಿರುವ ವಂಶಾಡಳಿತ-ಕುಟುಂಬ ರಾಜಕಾರಣದ ಮೂಲ ಇರುವುದೇ ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ. ಜಾತಿ ಶ್ರೇಣಿಯನ್ನು ಪೋಷಿಸಲು ನೆರವಾಗುವ ಪಿತೃಪ್ರಧಾನತೆ ಮತ್ತು ಇದನ್ನು ಸಲಹಲು ನೆರವಾಗುವ ಸಂಪತ್ತಿನ ಒಡೆತನ, ಈ ಒಡೆತನದಿಂದ ಸೃಷ್ಟಿಯಾಗುವ ಊಳಿಗಮಾನ್ಯ ಧೋರಣೆ ಇವೆಲ್ಲವೂ ಪ್ರಸಕ್ತ ರಾಜಕಾರಣದಲ್ಲಿ ಮಠಮಾನ್ಯಗಳ ರೂಪದಲ್ಲಿ, ಖಾಪ್‌ ಪಂಚಾಯತ್‌ಗಳ ರೂಪದಲ್ಲಿ ಹಾಗೂ ಮಾರುಕಟ್ಟೆ ಔದ್ಯಮಿಕ ಜಗತ್ತಿನಲ್ಲಿ ತಮ್ಮ ಸುಭದ್ರ ನೆಲೆಯನ್ನು ಕಂಡುಕೊಂಡಿವೆ. ಹಾಗಾಗಿಯೇ ಚುನಾವಣೆಯ ಟಿಕೆಟ್‌ ಹಂಚಿಕೆಯಿಂದ ಸಚಿವ ಸಂಪುಟ ರಚನೆಯವರೆಗೂ ಕರ್ನಾಟಕದ ಮಠಮಾನ್ಯಗಳು, ಔದ್ಯಮಿಕ ಸಮೂಹಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಉತ್ತರ ಭಾರತದಲ್ಲಿ ಖಾಪ್‌ ಪಂಚಾಯತ್‌ಗಳು ಈ ಜವಾಬ್ದಾರಿಯನ್ನು ಹೊರುತ್ತವೆ. ಚುನಾವಣಾ ರಾಜಕಾರಣದಲ್ಲಿ ಮಹಿಳಾ ಪ್ರಾತಿನಿಧ್ಯದ ಕೊರತೆಗೂ ಇದೇ ಕಾರಣ ಎನ್ನುವುದನ್ನು ಅಲ್ಲಗಳೆಯಲಾಗುವುದಿಲ್ಲ. ರತೀಯ ಸಮಾಜದಲ್ಲಿ ಸಂಪತ್ತಿನ ಒಡೆತನಕ್ಕೂ, ಜಾತಿ ಶ್ರೇಣಿಯ ವರ್ಗೀಕರಣಕ್ಕೂ ಮತ್ತು ಲಿಂಗ-ಸಾಮಾಜಿಕ ಸಮಾನತೆಗೂ ಇರುವ ಸೂಕ್ಷ್ಮ ಸಂಬಂಧಗಳನ್ನು ಡಾ. ಬಿ.ಆರ್.‌ ಅಂಬೇಡ್ಕರ್‌ 1930ರ ದಶಕದಲ್ಲೇ ಗುರುತಿಸಿದ್ದರಲ್ಲವೇ ? ಇಂದಿಗೂ ಭಾರತದ ಅಂತಃಸತ್ವ ಬದಲಾಗಿಲ್ಲ ಎನ್ನುವುದನ್ನು ಪ್ರಸಕ್ತ ರಾಜಕಾರಣವೇ ನಿರೂಪಿಸುತ್ತಿದೆ.

 

ಆದ್ದರಿಂದಲೇ ರಾಜಕಾರಣಿಗಳಲ್ಲಿ ಹಾಗೂ ಪಕ್ಷಗಳಲ್ಲಿ ವ್ಯಕ್ತಿಗತವಾಗಿ ಕಾಣುವ ಚುನಾವಣಾ ಪೂರ್ವ ತಾತ್ವಿಕತೆಗೂ ಆನಂತರದ ಅಧಿಕಾರ ಹಂಚಿಕೆಯಲ್ಲಿ ಕಂಡುಬರುವ ತಾತ್ವಿಕ ನೆಲೆಗಳಿಗೂ ಅಪಾರ ಅಂತರ ಕಂಡುಬರುತ್ತದೆ. ತತ್ವ ಮತ್ತು ಸಿದ್ಧಾಂತ ಎನ್ನುವುದೂ ಸಹ ಮಾರುಕಟ್ಟೆಯ ಸರಕಿನಂತೆ ವಿನಿಮಯವಾಗುವ ಒಂದು ವಿಕೃತ ಪ್ರಕ್ರಿಯೆಗೆ ಮಾರ್ಕ್ಸ್‌ವಾದಿ ಪಕ್ಷಗಳೂ ಒಳಗಾಗಿರುವುದನ್ನು ಪಶ್ಚಿಮ ಬಂಗಾಲ, ತ್ರಿಪುರಾ ರಾಜ್ಯಗಳಲ್ಲಿ ಕಂಡಿದ್ದೇವೆ. ಇಲ್ಲಿ ನಿರ್ಣಾಯಕವಾಗುವುದು ಅಧಿಕಾರ ರಾಜಕಾರಣ ಸೃಷ್ಟಿಸುವಂತಹ ಸಂಪನ್ಮೂಲಗಳ ತಳಪಾಯ ಮತ್ತು ಅದರ ಮೇಲೆ ತಮ್ಮ ಸಾಮ್ರಾಜ್ಯವನ್ನು ಸ್ಥಾಪಿಸಲು ಬಳಸಿಕೊಳ್ಳಬಹುದಾದ ಸಾಂವಿಧಾನಿಕ ಪರಿಕರಗಳು. ಇಂತಹ ಪರಿಕರಗಳಲ್ಲಿ ಮತದಾನ ಅಥವಾ ಚುನಾವಣೆಯೂ ಒಂದು. ಸಾಮಾಜಿಕ ಶ್ರೇಣೀಕರಣದಲ್ಲಿ ಜಾತಿ ಮೂಲಗಳು ನಿರ್ವಹಿಸುವ ಪಾತ್ರವನ್ನೇ ಆರ್ಥಿಕ ಶ್ರೇಣೀಕರಣದಲ್ಲಿ ಬಂಡವಾಳದ ಮೂಲಗಳು ನಿರ್ವಹಿಸುತ್ತವೆ. ಹಾಗಾಗಿಯೇ ರಾಜಕಾರಣದಲ್ಲಿ ಗುರುತಿಸಲಾಗದ ಜಾತ್ಯಾತೀತತೆಯನ್ನು ಅಧಿಕಾರ ರಾಜಕಾರಣದ ನೆಲೆಗಳಲ್ಲಿ ಮತ್ತು ಸಂಪತ್ತಿನ ಕ್ರೋಢೀಕರಣದಲ್ಲಿ ಕಾಣಲು ಸಾಧ್ಯವಾಗುತ್ತದೆ.

 

ಕರ್ನಾಟಕದಲ್ಲಿ ಚುನಾವಣಾ ಪೂರ್ವದಲ್ಲಿ ಕಾಣಲಾಗುತ್ತಿರುವ ವಲಸೆ ರಾಜಕಾರಣವನ್ನು ಬಂಡಾಯ ಮತ್ತು ತಾತ್ವಿಕ ಭಿನ್ನಾಭಿಪ್ರಾಯ ಎಂಬ ಶಬ್ದಾಡಂಬರನ್ನು ಹೊರತುಪಡಿಸಿ ನೋಡಿದಾಗ, ಇಡೀ ಚುನಾವಣಾ ಪ್ರಕ್ರಿಯೆಯನ್ನೇ ನಿಯಂತ್ರಿಸುತ್ತಿರುವುದು ಮಾರುಕಟ್ಟೆ, ಬಂಡವಾಳ ಮತ್ತು ಇವೆರಡಕ್ಕೂ ಸುಭದ್ರ ತಳಪಾಯ ಒದಗಿಸುವ ಔದ್ಯಮಿಕ-ಸಾಂಸ್ಥಿಕ ನೆಲೆಗಳು ಎನ್ನುವುದು ಸುಲಭವಾಗಿ ಅರ್ಥವಾಗುತ್ತದೆ. ಸುರಕ್ಷಿತ ವಲಯಗಳಲ್ಲಿ ಪ್ರಶಸ್ತ ಸ್ಥಳಗಳನ್ನು ಆಕ್ರಮಿಸಿಕೊಂಡು, ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳುವ ಸಲುವಾಗಿಯೇ ರಾಜಕೀಯ ಪಕ್ಷಗಳು ಕುಟುಂಬ ರಾಜಕಾರಣವನ್ನೂ ಪೋಷಿಸುತ್ತವೆ. ಉತ್ತರದಾಯಿತ್ವವಿಲ್ಲದ ಆಸ್ತಿ ಸಂಗ್ರಹಣೆ ಮತ್ತು ಬಂಡವಾಳ ಕ್ರೋಢೀಕರಣಕ್ಕೆ ಅವಕಾಶ ಮಾಡಿಕೊಡುವ ಸಲುವಾಗಿಯೇ ಆಡಳಿತ ವ್ಯವಸ್ಥೆಯ ಸಾಂಸ್ಥಿಕ ಚೌಕಟ್ಟುಗಳನ್ನೂ ಸಂದರ್ಭೋಚಿತವಾಗಿ ಬಳಸಿಕೊಳ್ಳಲಾಗುತ್ತದೆ. ಹಾಗಾಗಿಯೇ ರಾಜಕಾರಣಿಗಳು ತಮ್ಮ ಭವಿಷ್ಯದ ದೃಷ್ಟಿಯಿಂದ ಪ್ರಶಸ್ತವಾದ ಹಸಿರು ಹುಲ್ಲುಗಾವಲುಗಳನ್ನು ಅರಸುತ್ತಾ ಪಕ್ಷಾಂತರದಲ್ಲಿ ತೊಡಗುತ್ತಾರೆ. ‌

 

ಶ್ರೀಸಾಮಾನ್ಯನ ಜವಾಬ್ದಾರಿ

 

ಶಿಥಿಲವಾಗುತ್ತಿರುವ ಪ್ರಜಾಪ್ರಭುತ್ವದ ನೆಲೆಗಳನ್ನು ಮತ್ತಷ್ಟು ದುರ್ಬಲಗೊಳಿಸುವ ರೀತಿಯಲ್ಲಿ ಅಧಿಕಾರ ರಾಜಕಾರಣವು ವಂಶಾಡಳಿತವನ್ನು, ಕುಟುಂಬ ರಾಜಕಾರಣವನ್ನು ಮತ್ತು ರಾಜಕೀಯದ ಔದ್ಯಮೀಕರಣವನ್ನು ವ್ಯವಸ್ಥಿತವಾಗಿ ಪೋಷಿಸಿಕೊಂಡುಬಂದಿದೆ. ಕುಟುಂಬ-ಉತ್ತರದಾಯಿತ್ವ-ವಾರಸುದಾರಿಕೆಯ ಸರಪಳಿಗೆ ತಾತ್ವಿಕ ಬುನಾದಿಯನ್ನು ಒದಗಿಸುವ ರೀತಿಯಲ್ಲಿ ತತ್ವ ಸಿದ್ಧಾಂತಗಳನ್ನು ಸಹ ಬಳಸಿಕೊಳ್ಳಲಾಗುತ್ತಿದೆ. ಆದರೆ ಇದು ಅಂತಿಮವಾಗಿ ಕಾಪಾಡುವುದು ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು, ಪಿತೃಪ್ರಧಾನತೆಯನ್ನು ಮತ್ತು ಇವೆರಡರ ಪೋಷಣೆಯಲ್ಲೇ ಬೆಳೆಯುವ ಊಳಿಗಮಾನ್ಯ ಸಾಂಸ್ಥಿಕ ನೆಲೆಗಳನ್ನು. ಸ್ವಾತಂತ್ರ್ಯ ಗಳಿಸಿ ಏಳು ದಶಕಗಳಾದರೂ, ಮಸೂದೆಯನ್ನು ಮಂಡಿಸಿ ಮೂರು ದಶಕಗಳಾದರೂ ಶಾಸನ ಸಭೆಗಳಲ್ಲಿ ಮಹಿಳಾ ಮೀಸಲಾತಿಯ ಬಗ್ಗೆ ಎಡಪಕ್ಷಗಳನ್ನು ಹೊರತುಪಡಿಸಿ, ಯಾವುದೇ ರಾಜಕೀಯ ಪಕ್ಷಗಳೂ ಸೊಲ್ಲೆತ್ತದೆ ಇರುವುದನ್ನು ಈ ಹಿನ್ನೆಲೆಯಲ್ಲೇ ವಿಶ್ಲೇಷಿಸಬೇಕಿದೆ. ಎಡಪಕ್ಷಗಳೂ ಇದನ್ನು ರಾಜಕೀಯ ಆದೋಲನವಾಗಿ ಮುಂದುವರೆಸಿಲ್ಲ ಎನ್ನುವುದೂ ವಾಸ್ತವ.  ಕುಟುಂಬ ಮತ್ತು ಪುರುಷಾಧಿಪತ್ಯದ ನಡುವೆ ಇರುವ ಪವಿತ್ರ ಸಂಬಂಧಗಳ ಮತ್ತೊಂದು ಆಯಾಮವನ್ನು ಕುಟುಂಬ ರಾಜಕಾರಣ ಮತ್ತು ಪಿತೃಪ್ರಧಾನತೆಯ ಆಧಿಪತ್ಯ ರಾಜಕಾರಣದಲ್ಲಿ ಕಾಣಬಹುದು.

 

ಪ್ರಜಾಪ್ರಭುತ್ವವನ್ನು ಸಂರಕ್ಷಿಸಲು ಬಯಸುವ ಹಾಗೂ ಸಂವಿಧಾನವನ್ನು ಕಾಪಾಡಲು ಅಪೇಕ್ಷಿಸುವ ಪ್ರತಿಯೊಬ್ಬ ನಾಗರಿಕನಲ್ಲೂ ಮೌಲ್ಯಾಧಾರಿತ-ತತ್ವಾಧಾರಿತ-ಸತ್ವಾಧಾರಿತ ರಾಜಕಾರಣದ  ಮೌಲ್ಯಗಳ ಬಗ್ಗೆ ಜಾಗೃತಿ ಮೂಡಿಸುವುದೇ ಆದರೆ, ಪ್ರಜ್ಞಾವಂತ ಎನಿಸಿಕೊಂಡಿರುವ ಒಂದು ಸಮಾಜ ತನ್ನ ನಿದ್ರಾವಸ್ಥೆಯಿಂದ ಎದ್ದು ಭಾರತದ ಅಧಿಕಾರ ರಾಜಕಾರಣದ ಈ ಸಿಕ್ಕುಗಳನ್ನು ಬಿಡಿಸಲು ಮುಂದಾಗಬೇಕಿದೆ. ಭಾರತದ ಪ್ರಜಾಪ್ರಭುತ್ವ ಸಂಪೂರ್ಣ ಸತ್ವಹೀನವಾಗುವ ಮುನ್ನ ಅಧಿಕಾರ ರಾಜಕಾರಣದ ತತ್ವಹೀನತೆಯನ್ನು ಹೋಗಲಾಡಿಸಬೇಕಿದೆ. ಈ ಹಾದಿಯಲ್ಲಿ ಗಾಂಧಿವಾದ, ಅಂಬೇಡ್ಕರ್‌ವಾದ, ಮಾರ್ಕ್ಸ್‌ವಾದದ ತಾತ್ವಿಕ-ಸೈದ್ಧಾಂತಿಕ ನೆಲೆಗಳ ನಡುವೆ ಇರುವ ತೆಳು ಪರದೆಗಳನ್ನು ಬದಿಗೆ ಸರಿಸುವುದು ನಮ್ಮ ಪ್ರಥಮ ಆದ್ಯತೆಯಾಗಬೇಕಿದೆ.

-೦-೦-೦-೦-