ಐಸೆಕ್ ಬಾಶೆವಿಶ್ ಸಿಂಗರ್ ಕುರಿತು (ಸಾಹಿತ್ಯಕ್ಕಾಗಿ ನೊಬೆಲ್ ಪುರಸ್ಕಾರ: 1978)
ಐಸೆಕ್ ಬಾಶೆವಿಶ್ ಸಿಂಗರ್ ಕುರಿತು (ಸಾಹಿತ್ಯಕ್ಕಾಗಿ ನೊಬೆಲ್ ಪುರಸ್ಕಾರ: 1978), singer-bolevish
ಐಸೆಕ್ ಬಾಶೆವಿಶ್ ಸಿಂಗರ್ ಕುರಿತು
(ಸಾಹಿತ್ಯಕ್ಕಾಗಿ ನೊಬೆಲ್ ಪುರಸ್ಕಾರ: 1978)
ಪೊಲೆಂಡ್‌ನಲ್ಲಿ ಹುಟ್ಟಿ ಬದುಕಿನ ಬಹುಭಾಗ ಅಮೆರಿಕದಲ್ಲಿ ಕಳೆದ ಇದ್ದಿಶ್ ಭಾಷೆಯ ಲೇಖಕ ಸಿಂಗರ್ ಮೊದಲು ಇದ್ದಿಶ್ ಭಾಷೆಯಲ್ಲಿ ಬರೆದು ಅದನ್ನು ತಾವೇ ಇಂಗ್ಲಿಶ್‌ಗೆ ಅನುವಾದಿಸುತ್ತಿದ್ದರು. ಅವರ ಕಥೆಗಳು ಗುಂಗು ಹಿಡಿಸುವಂಥವು; ಕಾದಂಬರಿಗಳು ಹೊಸ ಲೋಕವನ್ನು ಕಣ್ಮುಂದೆ ಕೆತ್ತುವಂಥವು. ಇಲ್ಲಿರುವ ಕಥೆ ದೃಷ್ಟಾಂತದ ಮಾದರಿಯಲ್ಲಿದೆ. ಇಂಥದೇ ಕಥೆಗಳನ್ನು ಕನ್ನಡದಲ್ಲಿ ಬರೆದವರು, ನಾನು ಬಹುವಾಗಿ ಮೆಚ್ಚುವ ಕಥೆಗಾರ ಬಾಗಲೋಡಿ ದೇವರಾಯ.
ಹೊರನೋಟಕ್ಕೆ ಮಕ್ಕಳ ಕಥೆಯಂತೆ ಕಾಣುವ ‘ಮೂರ್ಖನ ಸ್ವರ್ಗ’ ಕಥೆ ದೊಡ್ಡವರು ಅವಶ್ಯವಾಗಿ ಓದಬೇಕಾದಂಥದು. ಸಾಮಾನ್ಯವಾಗಿ ದೃಷ್ಟಾಂತ ಕಥೆಗಳಲ್ಲಿ ನೀತಿಯಿರುತ್ತದೆ. ಈ ಕಥೆಯ ನೀತಿ ಬಹುಶಃ ಸ್ವರ್ಗದ ಭ್ರಮೆಯಲ್ಲಿ ಬದುಕುವವರಿಗೆ ಅವರಿಗೆ ಮನವರಿಕೆಯಾಗುವಂಥ ಪರಿಣಾಮಕಾರಿ ಚಿಕಿತ್ಸೆ ನೀಡದಿದ್ದರೆ ಹುಚ್ಚು ವಾಸಿಯಾಗುವುದಿಲ್ಲ ಎಂದಿರಬೇಕು. ಯಾವುದೇ ಆಗಲಿ ಅತಿಯಾದಾಗ ಬಾಯಿ, ನಾಲಗೆ, ಬದುಕು ರುಚಿಗೆಡುತ್ತವೆ ಎಂದು ಕೂಡ ಈ ಕಥೆಯ ನೀತಿಯಿರಬಹುದು ಎಂಬ ಗುಮಾನಿ ನನಗೆ. ಸ್ವರ್ಗ, ಸಿದ್ಧಾಂತ, ಹಮ್ಮಿನ ಪಿತ್ತ ತಲೆಗೇರಿದರೆ ವಾಸಿ ಮಾಡಲು ಪರಿಣಾಮಕಾರಿಯಾದ ವೈದ್ಯ, ಚಿಕಿತ್ಸಾ ವಿಧಾನಗಳೇ ಬೇಕಾಗಬಹುದು! ಆ ಸ್ಥಿತಿಗೆ ಹೋಗುವುದು ಅಪಾಯಕಾರಿ. ಏಕೆಂದರೆ, ‘ಸಗ್ಗ’ದ ಭ್ರಮೆಗೆ ಒಳಗಾದವರ ಬದುಕು, ಅವರ ಸುತ್ತಮುತ್ತಲಿನವರ ಬದುಕನ್ನು ‘ನರಕ’ವಾಗಿಸುತ್ತದೆ.
ಇಷ್ಟಕ್ಕೂ, ಭ್ರಮೆ ಬದುಕಿಗಿಂತ ದೊಡ್ಡದಿರಲಾರದು. ಬದುಕು ಸುಖದುಃಖ, ಅವಮಾನ-ಸಮ್ಮಾನ, ಕಾಯಿಲೆ-ಚೇತರಿಕೆ, ಕಳೆದುಕೊಳ್ಳುವುದು-ಪಡೆದುಕೊಳ್ಳುವುದು ಹೀಗೆ ಎಲ್ಲಕ್ಕೂ ಸಮಾನ ಅವಕಾಶವನ್ನು ನೀಡಬಹುದು. ಭ್ರಮೆ, ಕಲ್ಪಿಸಿಕೊಂಡ ಲೋಕವಿಹಾರವನ್ನು ಮಾತ್ರ ಕರುಣಿಸಬಲ್ಲುದು!
‘ಮೂರ್ಖನ ಸ್ವರ್ಗ’
ಐಸೆಕ್ ಬಾಶೆವಿಶ್ ಸಿಂಗರ್
ಕನ್ನಡಕ್ಕೆ: ಕೇಶವ ಮಳಗಿ
*
ಒಂದಾನೊAದು ಕಾಲದಲ್ಲಿ, ಒಂದಾನೊAದು ಊರಿನಲ್ಲಿ ಕಾದಿಶ್ ಎಂಬ ಸಿರಿವಂತನಿದ್ದ. ಆತನ ಒಬ್ಬನೇ ಮಗನ ಹೆಸರು ಅಜ಼ಲ್. ಅವರ ಮನೆಯಲ್ಲಿ ದೂರದ ಬಳಗದ ಅನಾಥ ಹುಡುಗಿ ಆಕ್‌ಶಾ ಕೂಡ ವಾಸಿಸುತ್ತಿದ್ದಳು. ಅಜûಲ್ ಎತ್ತರದ ಕಪ್ಪು ಕೂದಲು, ಕಪ್ಪು ಕಂಗಳ ಹುಡುಗ. ಅಕ್‌ಶಾ ಕಣ್ಣು ನೀಲಿ, ಹೊಂಬಣ್ಣದ ಕೂದಲು. ಇಬ್ಬರಿಗೂ ಒಂದೇ ವಯಸ್ಸು. ಇಬ್ಬರೂ ಒಟ್ಟಿಗೆ ಓದುತ್ತ, ಉಣ್ಣುತ್ತ, ಆಡುತ್ತ ಬೆಳೆದರು. ದೊಡ್ಡವರಾದ ಮೇಲೆ ಇಬ್ಬರಿಗೂ ಮದುವೆ ಖಂಡಿತ ಎಂಬAತ್ತಿತ್ತು ಜೋಡಿ.
ಆದರೆ, ಅವರು ಬೆಳೆದಂತೆ ಅಜûಲ್ ಇದ್ದಕ್ಕಿದ್ದಂತೆ ಕಾಯಿಲೆ ಬಿದ್ದ. ಎಂದೂ ಕೇಳರಿಯದ ಜಾಢ್ಯ. ಅಜ಼ಲ್ ತಾನು ಸತ್ತಿದ್ದೇನೆ ಎಂದು ಭಾವಿಸಿಕೊಂಡಿದ್ದ! ಆತನಿಗೆ ಆ ಭ್ರಮೆ ಹುಟ್ಟಿದ್ದು ಹೇಗೋ? ಬಹುಶಃ ಅವರ ಮನೆಯಲ್ಲಿದ್ದ ಪರಿಚಾರಕ ಮುದುಕಿ ಸದಾ ಸ್ವರ್ಗದ ಕುರಿತು ಹೇಳುತ್ತಿದ್ದ ಕಥೆಗಳೇ ಕಾರಣವಾಗಿರಬೇಕು. ‘ಸ್ವರ್ಗದಲ್ಲಿದ್ದರೆ, ಓದುಬರಹ, ಕೆಲಸ ಏನೂ ಮಾಡೋದು ಬೇಡ’, ಎಂದು ಆ ಮುದುಕಿ ಹೇಳುತ್ತಿದ್ದಳು. ಸ್ವರ್ಗದಲ್ಲಿ ಮೃಷ್ಟಾನ್ನ, ಪಂಚಭಕ್ಷಗಳು, ನ್ಯಾಯವಂತರಿಗೆAದು ಕುಡಿಯಲು ದೇವರು ದಯಪಾಲಿಸಿದ ಜೊನ್ನ ಜೇನಿನ ಮದಿರೆ, ಸುಖ ನಿದ್ರೆ. ಕೆಲಸ ಮಾಡುವ ಅಗತ್ಯವೇ ಇಲ್ಲ!
ಅಜ಼ಲ್‌ನೋ ಸ್ವಭಾವತಃ ಆಲಸಿ. ಓದು-ಬರಹ ಬೇಡದವನು. ಒಂದಲ್ಲ ಒಂದು ದಿನ ಅಪ್ಪನ ವ್ಯಾಪಾರ ನಿಭಾಯಿಸಬೇಕಾಗುವುದು ಎಂಬುದೂ ಆತನಿಗೆ ಗೊತ್ತು. ಆದರೆ, ಅದವನಿಗೆ ಬೇಕಿಲ್ಲ!
ಸ್ವರ್ಗಕ್ಕೆ ಹೋಗಲು ಇರುವ ಒಂದೇ ದಾರಿಯೆಂದರೆ ಸಾವನ್ನಪ್ಪುವುದು! ಆತ ಸಾಧ್ಯವಾದಷ್ಟೂ ಬೇಗನೇ ಸಾಯಲು ನಿರ್ಧರಿಸಿದ. ಅಜ಼ಲ್ ಸಾವಿನ ಬಗ್ಗೆ ಎಷ್ಟೊಂದು ಯೋಚಿಸತೊಡಗಿದನೆಂದರೆ ತಾನು ಸತ್ತಿದ್ದೇನೆ, ಎಂದು ಕಲ್ಪಿಸಿಕೊಳ್ಳತೊಡಗಿದ.
ಹೆತ್ತವರಿಗೆ ದುಃಖವಾಗದೇ ಇರುತ್ತದೆಯೆ? ಆಕ್‌ಶಾ ಕೂಡ ಅಜ಼ಲ್‌ನ ಸ್ಥಿತಿಗಾಗಿ ಗುಟ್ಟಾಗಿ, ಮೌನವಾಗಿ ಕಣ್ಣೀರು ಹನಿಸಿದಳು. ಕುಟುಂಬದವರು ‘ನೀನು ಸತ್ತಿಲ್ಲ, ಬದುಕಿದ್ದೀಯ’ ಎಂದು ಎಷ್ಟೇ ಮನವರಿಕೆ ಮಾಡಿಕೊಟ್ಟರೂ ಆತ ಒಪ್ಪಿಕೊಳ್ಳಲಿಲ್ಲ.
"ನೀವೇಕೆ ನನ್ನನ್ನು ಮಣ್ಣು ಮಾಡುತ್ತಿಲ್ಲ? ನಾನು ಸತ್ತಿರುವುದು ನಿಮಗೆ ಅರ್ಥವಾಗುತ್ತಿಲ್ಲವೆ? ನಿಮ್ಮಿಂದಾಗಿ ನನಗೆ ಸ್ವರ್ಗಕ್ಕೆ ಹೋಗಲು ಆಗುತ್ತಿಲ್ಲ!" ಎಂದು ಕುಟುಂಬದವರೊAದಿಗೆ ತಗಾದೆ ಮಾಡಿದ.
ಹುಡುಗನನ್ನು ತಪಾಸಣೆ ಮಾಡಲು ಎಷ್ಟೋ ವೈದ್ಯರು ಬಂದರು. ‘ನೀನು ಬದುಕಿದ್ದೀಯ. ಉಣ್ಣುತ್ತಿದ್ದೀಯ. ಮಾತಾಡುತ್ತೀಯ. ಹೀಗಾಗಿ ಸಾವನ್ನಪ್ಪಿಲ್ಲ’, ಎಂದು ತಿಳಿ ಹೇಳಿದರು. ಆಗಿನಿಂದ ಅಜ಼ಲ್ ತಿನ್ನುವುದನ್ನು, ಮಾತನಾಡುವುದನ್ನು ಕಡಿಮೆ ಮಾಡಿದ. ಆತ ಸತ್ತು ಹೋಗುತ್ತಾನೆಂದು ಕುಟುಂಬದವರು ಗಾಬರಿಯಾದರು.
ಈ ಚಿಂತೆಯಲ್ಲಿಯೇ ಆತನ ತಂದೆ ಕಾದಿಶ್ ತಮ್ಮ ಜ್ಞಾನ, ಪಕ್ವತೆಯಿಂದ ಹೆಸರಾಗಿದ್ದ ಪರಿಣಿತರೊಬ್ಬರನ್ನು ಭೇಟಿಯಾದರು. ಅಜ಼ಲ್ ನರಳುತ್ತಿರುವ ಕಾಯಿಲೆಯ ವಿವರಣೆಯನ್ನು ಆತನ ತಂದೆ ಕಾದಿಶ್‌ರಿಂದ ಕೇಳಿದ ವೈದ್ಯ ಯಾಶೆ, "ನಿಮ್ಮ ಮಗನ ರೋಗವನ್ನು ವಾರವೊಪ್ಪತ್ತಿನಲ್ಲಿ ವಾಸಿ ಮಾಡುವೆ. ಆದರೆ, ಒಂದು ಕರಾರಿದೆ. ನಿಮಗೆ ಎಷ್ಟೇ ವಿಚಿತ್ರವೆನ್ನಿಸಿದರೂ ನಾನು ಹೇಳಿದ್ದನ್ನು ಸ್ವಲ್ಪವೂ ತಪ್ಪದೆ ಅನುಸರಿಸಬೇಕು," ಎಂದರು.
ಕಾದಿಶ್ ಒಪ್ಪಿದ ಮೇಲೆ ವೈದ್ಯ ಯಾಶೆ ಅಜ಼ಲ್‌ನನ್ನು ಅದೇ ದಿನ ಭೇಟಿಯಾಗುತ್ತಾರೆಂದು ಹೆಂಡತಿ, ಆಕ್‌ಶಾ ಮತ್ತು ಮನೆವಾರ್ತೆಯವರಿಗೆ ಕಾದಿಶ್ ಸೂಚನೆ ಕೊಟ್ಟರು. ವೈದ್ಯರು ಹೇಳಿದ್ದನ್ನು, ಎದುರಾಡದೆ ಪಾಲಿಸಬೇಕೆಂದು ತಾಕೀತು ಮಾಡಿದರು.
ವೈದ್ಯರು ಮನೆಗೆ ಬಂದಿದ್ದೇ ಅಜ಼ಲ್‌ನ ಕೋಣೆಗೆ ಕರೆದೊಯ್ದರು. ಉಪವಾಸದಲ್ಲಿದ್ದ ಆತ ಬಸವಳಿದು ಬಿಳಚಿಕೊಂಡು ಕಡ್ಡಿಯಂತೆ ಕಾಣುತ್ತಿದ್ದ.
ಅಜûಲ್‌ನತ್ತ ನೋಡುತ್ತ ವೈದ್ಯರು ಹೇಳಿದರು: "ಸತ್ತ ದೇಹವನ್ನೇಕೆ ಮನೆಯಲ್ಲಿ ಇಟ್ಟುಕೊಂಡಿದ್ದೀರಿ? ಮಣ್ಣು ಮಾಡಿ ಬರಬಾರದೆ?"
ವೈದ್ಯರ ಮಾತಿಗೆ ಹೆತ್ತವರು ತಲ್ಲಣಿಸಿ ಹೋದರು. ಆದರೆ, ಅಜûಲ್ ಮಾತ್ರ ನಗುತ್ತ, "ನಾನು ಹೇಳಿದ್ದು ಸರಿಯಾಗಿಯೇ ಇದೆಯಂತಾಯಿತು!" ಅಂದ.
ಹೆತ್ತವರಿಗೆ ವೈದ್ಯರ ನುಡಿಗಳು ದಿಕ್ಕೇ ತೋಚದಂತೆ ಮಾಡಿದ್ದರೂ ಅವರ ಕರಾರು ನೆನಪಿಸಿಕೊಂಡರು. ಅಂತೆಯೇ, ಶವಸಂಸ್ಕಾರದ ಸಿದ್ಧತೆ ಮಾಡಿಕೊಳ್ಳತೊಡಗಿದರು.
ಕೋಣೆಯೊಂದನ್ನು ಸ್ವರ್ಗದಂತೆ ಅಲಂಕರಿಸಲು ವೈದ್ಯರು ಸೂಚಿಸಿದರು. ಮೆತ್ತನೆಯ ಮೃದುಮೃದು ರೇಶಿಮೆ ಬಟ್ಟೆಯ ಪರದೆಗಳಿಂದ ಕೋಣೆಯನ್ನು ಸಿಂಗರಿಸಿದರು. ಕಿಟಕಿಗಳನ್ನು ಬಟ್ಟೆ ಮುಚ್ಚಿ ಕಾವಳವಾಗಿಸಿದರು. ಮೇಣದ ಬತ್ತಿಗಳನ್ನು ಹಗಲಿರಳು ಬೆಳಗಿಸಿದರು. ಪರಿಚಾರಕರು ಭುಜಕ್ಕೆ ಬಿಳಿ ರೆಕ್ಕೆಗಳನ್ನು ಅಂಟಿಸಿಕೊAಡು ಕಿನ್ನರಿಯರಾದರು.
ಅಜûಲ್‌ನನ್ನು ತೆರೆದ ಶವಪೆಟ್ಟಿಗೆಯಲ್ಲಿಟ್ಟು ಅಂತಿಮ ವಿಧಿವಿಧಾನ ಮಾಡಲಾಯಿತು. ಅಜûಲ್ ಸಂತೋಷದಿAದ ಎಷ್ಟು ಉಬ್ಬಿ ಹೋಗಿದ್ದನೆಂದರೆ ದಣಿವಾಗಿ ನಿದ್ರೆಗೆ ಜಾರಿದ. ಎಚ್ಚರವಾದಾಗ ತಾನಿರುವ ಕೋಣೆಯನ್ನು ಗುರುತಿಸಲಾಗದೆ "ನಾನೆಲ್ಲಿದ್ದೇನೆ?" ಎಂದು ಕೇಳಿದ.
"ಸ್ವರ್ಗದಲ್ಲಿ" ಭುಜ ರೆಕ್ಕೆಯ ಸೇವಕ ಉತ್ತರಿಸಿದ.
"ನನಗೆ ತುಂಬ ಹಸಿವಾಗಿದೆ. ನನಗೆ ಮೃಷ್ಟಾನ್ನ, ಪಂಚಭಕ್ಷಗಳು ಬೇಕು!" ಅಜûಲ್ ಕೇಳಿದ.
ಮುಖ್ಯ ಬಾಣಸಿಗ ಚಪ್ಪಾಳೆ ತಟ್ಟಿದ್ದೆ, ತುಂಬಿದ ತಟ್ಟೆಗಳಲ್ಲಿ ಭಕ್ಷ್ಯಗಳೊಂದಿಗೆ ರೆಕ್ಕೆ ಸಹಿತ ಕಿನ್ನರಿಯರು ಪ್ರತ್ಯಕ್ಷರಾದರು. ಬಾನಿ ತುಂಬ ಜೊನ್ನ ಜೇನಿನ ಪಾನಕ ನೀಡಿದರು. ಅಜ಼ಲ್ ಹೊಟ್ಟೆಬಾಕನಂತೆ ಭಕ್ಕಿಸಿದ. ಊಟ ಮುಗಿಸಿದ್ದೇ, ನನಗೀಗ ವಿಶ್ರಾಂತಿ ಬೇಕು, ಎಂದು ಘೋಷಿಸಿದ. ಇಬ್ಬರು ಕಿನ್ನರಿಯರು ಆತನನ್ನು ನಗ್ನಗೊಳಿಸಿ ಸ್ನಾನ ಮಾಡಿಸಿದರು. ಮುಗಿದದ್ದೇ ಹಂಸತೂಲಿಕಾತಲ್ಪದ ಮೇಲೆ ಮಲಗಿಸಿದರು. ತಕ್ಷಣವೇ ಅಜ಼ಲ್ ಗಾಢನಿದ್ರೆಗೆ ಜಾರಿದ.
ಆತ ಎಚ್ಚರಗೊಂಡಾಗ ಬೆಳಗು. ಅಥವ ರಾತ್ರಿಯೂ ಆಗಿದ್ದಿರಬಹುದು. ಕಿಟಕಿ ಮುಚ್ಚಿದ್ದವು. ಮೇಣಬತ್ತಿ ಉರಿಯುತ್ತಿದ್ದವು. ಆತ ಎಚ್ಚರಗೊಂಡಿರುವುದನ್ನು ಗಮನಿಸಿದ ಪರಿಚಾರಕ ಕಿನ್ನರಿಯರು ನಿನ್ನೆ ಬಡಸಿದಂಥ ಭಕ್ಷ್ಯಭೋಜನವನ್ನೇ ತಂದರು.
"ನಿಮ್ಮಲ್ಲಿ ತಾಜಾ ಹಾಲು, ಕಾಫಿ, ಬೆಣ್ಣೆ-ರೊಟ್ಟಿ ಇಂಥವು ಸಿಗುವುದಿಲ್ಲವೆ?" ಅಜ಼ಲ್ ಕೇಳಿದ.
"ಇಲ್ಲ, ದೇವರೂ! ಸ್ವರ್ಗದಲ್ಲಿ ಯಾವಾಗಲೂ ಒಂದೇ ಬಗೆಯ ಭೋಜನವನ್ನೇ ಮಾಡುವರು!" ಪರಿಚಾರಕ ಕಿನ್ನರ ಉತ್ತರಿಸಿದ.
"ಈಗೇನು ಬೆಳಗಾಗಿದೆಯೋ, ಅಥವ ರಾತ್ರಿಯೋ?" ಎಂದು ಅಜ಼ಲ್ ಕೇಳಿದ ಪ್ರಶ್ನೆಗೆ, ಕಿನ್ನರ ಉತ್ತರಿಸಿದ:
"ಸ್ವರ್ಗದಲ್ಲಿ ಎಂಥಾ ಹಗಲು-ರಾತ್ರಿ ದೇವರೂ? ಇಲ್ಲಿ ಅಂಥವಿಲ್ಲ".
ಅಜ಼ಲ್ ಮತ್ತೆ ಭಕ್ಷ್ಯವನ್ನು ಉಂಡ. ಜೇನ ಪಾನಕ ಕುಡಿದ. ಆದರೆ, ಈ ಹಿಂದೆ ಇದ್ದಂತೆ ಯಾಕೋ ನನ್ನ ಹೊಟ್ಟೆ ಸರಿಯಿಲ್ಲವೆನ್ನಿಸಿತು.
"ಸರಿ, ಈಗ ಗಂಟೆ ಎಷ್ಟು?"
"ಸ್ವರ್ಗದಲ್ಲಿ ಸಮಯ ಅನ್ನೋದಿಲ್ಲ ದೇವರೂ! ಪರಿಚಾರಕ ಹೇಳಿದ.
"ನಾನು ಮಾಡುವಂಥದ್ದೇನಾದರೂ ಇದೆಯೆ?"
"ಸ್ವರ್ಗದಲ್ಲಿ ಮಾಡುವಂಥದ್ದೇನೂ ಇರುವುದಿಲ್ಲ ದೇವರೂ!"
"ಸ್ವರ್ಗದ ಉಳಿದ ಪುಣ್ಯವಂತರು ಎಲ್ಲಿ? ಅಜ಼ಲ್‌ನ ಕುತೂಹಲದ ಪ್ರಶ್ನೆ.
ಸ್ವರ್ಗದಲ್ಲಿ ಎಲ್ಲ ಕುಟುಂಬದವರೂ ಸರ್ವ ಸ್ವತಂತ್ರರು. ಒಬ್ಬರು ಇನ್ನೊಬ್ಬರನ್ನು ಭೇಟಿಯಾಗಲಾರರು! ಅಲ್ಲದೆ ದೂರವೂ ಬಲು ದೂರ. ಇನ್ನೊಬ್ಬರನ್ನು ಕಾಣಬೇಕೆಂದರೆ ಸಾವಿರ ವರ್ಷ ಪಯಣಿಸಬೇಕಾಗುತ್ತದೆ".
"ನನ್ನ ಕುಟುಂಬ ಇಲ್ಲಿಗೆ ಯಾವಾಗ ಬರುತ್ತದೆ?"
"ನಿಮ್ಮ ತಂದೆಯ ಆಯುಷ್ಯ ಇನ್ನೂ ಇಪ್ಪತ್ತು ವರ್ಷವಿದೆ. ನಿಮ್ಮ ತಾಯಿಯದು ಮೂವತ್ತು. ಅವರು ಬದುಕಿರುವವರೆಗೂ ಇಲ್ಲಿಗೆ ಬರಲಾರರು."
"ಆಕ್‌ಶಾಳ ಕಥೆಯೇನು?"
"ಆಕೆಯ ಆಯುಷ್ಯ ಇನ್ನೂ ಐವತ್ತು ವರ್ಷ ಗಟ್ಟಿಯಿದೆ."
"ಹಾಗಿದ್ದರೆ, ಅಲ್ಲಿಯವರೆಗೂ ನಾನೊಬ್ಬನೇ ಇಲ್ಲಿರಬೇಕಾಗುತ್ತದೆಯೆ?"
"ಹೌದು! ದೊರೆಯೇ!"
"ಆಕ್‌ಶಾ ಈಗೇನು ಮಾಡುತ್ತಿರಬಹುದು?’
"ಸದ್ಯ ಆಕೆ ನಿಮಗಾಗಿ ಮರುಗುತ್ತಿದ್ದಾಳೆ. ಆದರೆ, ಬಲುಬೇಗ ನಿಮ್ಮನ್ನು ಮರೆತುಬಿಡಬಹುದು. ಇನ್ನೊಬ್ಬ ತರುಣನನ್ನು ಭೇಟಿಯಾಗಿ ಮದುವೆಯಾಗಬಹುದು. ಬದುಕು ಅಂದರೆ ಹಾಗೇನೇ."
ಅಜ಼ಲ್ ಎದ್ದು ನಿಂತವನೇ ಅತ್ತಿಂದಿತ್ತ ನಡೆದಾಡತೊಡಗಿದ. ಎಷ್ಟೋ ವರ್ಷಗಳ ನಂತರ ಮೊದಲಬಾರಿಗೆ ಏನಾದರೂ ಮಾಡಬೇಕು ಎಂದು ಆತನಿಗೆ ಅನ್ನಿಸುತ್ತಿತ್ತು. ಆದರೆ, ಸ್ವರ್ಗದಲ್ಲಿ ಮಾಡುವಂಥದ್ದೇನೂ ಇರಲಿಲ್ಲ. ಆತನಿಗೆ ಅಪ್ಪ-ಅಮ್ಮರ ನೆನಪು ಒತ್ತಿಬಂತು. ಆಕ್‌ಶಾಳತ್ತ ಮನಸ್ಸು ತುಡಿಯಿತು. ಓದಲು ಏನಾದರು ಇದ್ದರೆ ಎಷ್ಟು ಚೆನ್ನಾಗಿತ್ತು ಅನಿಸತೊಡಗಿತು. ಎಲ್ಲಿಗಾದರೂ ಪ್ರವಾಸ ಹೋದರೆ ಎಷ್ಟು ಸುಂದರವಾಗಿರುತ್ತದೆ. ಕುದುರೆ ಸವಾರಿ ಮಾಡಿದರೆ ಮನಸ್ಸು ಉಲ್ಲಾಸಗೊಳ್ಳಬಹುದು. ಗೆಳೆಯರೊಂದಿಗೆ ಹರಟಿದರೆ ಎಷ್ಟು ಸುಖವಾಗಿರುತ್ತದೆ . . . ಎಂದೆಲ್ಲ ಯೋಚಿಸಿದ.
ಆತ ತನ್ನ ದುಃಖವನ್ನು ಮುಚ್ಚಿಡಲಾಗದ ಸ್ಥಿತಿ ತಲುಪಿದ. "ಬದುಕುವುದು ಅಂದರೆ ನಾನು ಕಲ್ಪಿಸಿಕೊಂಡಷ್ಟು ಕೆಟ್ಟದಾಗಿಯೇನೂ ಇರಲಿಲ್ಲ!" ಎಂದು ಕಿನ್ನರನೊಬ್ಬನ ಬಳಿ ಅಲವತ್ತುಕೊಂಡ.
"ದೊರೆಯೇ, ಬದುಕುವುದೇ ಬಲು ಕಷ್ಟ. ಅದಕ್ಕಾಗಿ ಓದು, ಕೆಲಸ, ಶ್ರಮ ಪಡಬೇಕು. ಇಲ್ಲಿ ಪ್ರತಿಯೊಂದೂ ಸುಲಭವಿದೆಯಲ್ಲ?"
"ಇಲ್ಲಿ ಸುಖಾಸುಮ್ಮನೆ ಇರುವುದಕ್ಕಿಂತ ಕಟ್ಟಿಗೆಯ ಕೊರಡನ್ನಾದರೂ ಕಡಿದು ಹಾಕಿಯೇನು. ಇನ್ನೆಷ್ಟು ಕಾಲ ಹೀಗೇ ಇರಬೇಕು?"
"ಶಾಶ್ವತವಾಗಿ."
"ಶಾಶ್ವತವಾಗಿ ಇಲ್ಲಿರುವುದೇ? ಅದರ ಬದಲು ಆತ್ಮಹತ್ಯೆ ಮಾಡಿಕೊಳ್ಳುವೆ," ಅಜ಼ಲ್ ದುಃಖ-ನೋವಿನಲ್ಲಿ ತಲೆಗೂದಲು ಕಿತ್ತಿಕೊಳ್ಳತೊಡಗಿದ.
"ಸತ್ತಿರುವ ಮನುಷ್ಯ ಆತ್ಮಹತ್ಯೆ ಮಾಡಿಕೊಳ್ಳಲಾರ!"
ವಾರವೊಪ್ಪತ್ತಿನಲ್ಲಿ ಅಜ಼ಲ್ ಹತಾಶೆಯ ಅಂಚನ್ನು ತಲುಪಿದ್ದ. ಅದೇ ವೇಳೆಗೆ, ಮೊದಲೇ ನಿರ್ಧರಿಸಿದಂತೆ ಕಿನ್ನರ ಪರಿಚಾರಕನೊಬ್ಬ ಪ್ರತ್ಯಕ್ಷನಾದ.
"ದೊರೆಯೇ! ಇಲ್ಲೊಂದು ಸಣ್ಣ ತಪ್ಪು ತಿಳುವಳಿಕೆಯಾಗಿದೆ. ನೀವು ಸತ್ತಿಲ್ಲ. ಇನ್ನೀಗ ಸ್ವರ್ಗವನು ತೊರೆಯಬೇಕು."
"ನಾನು ಬದುಕಿರುವೆನೆ?"
"ಹೌದು. ನೀವು ಬದುಕಿರುವಿರಿ. ನಿಮ್ಮನ್ನು ಮತ್ತೆ ಭೂಮಿಗೆ ತಲುಪಿಸುವೆ."
ಅಜ಼ಲ್ ಸಂತೋಷದಿAದ ಉಬ್ಬಿ ಹೋದ. ಪರಿಚಾರಕ ಆತನ ಕಣ್ಣಿಗೆ ಕಪ್ಪುಪಟ್ಟಿ ಕಟ್ಟಿದ. ಮನೆಯ ಅಂಗಳ, ಮೊಗಸಾಲೆ ಹೀಗೆ ನಾಲ್ಕಾರು ಜಾಗಗಳಲ್ಲಿ ಸುತ್ತಿಸಿದ. ಆತನ ಕುಟುಂಬದ ಸದಸ್ಯರು ಕುತೂಹಲದಿಂದ ಕಾದಿದ್ದ ಅಜ಼ಲ್‌ನ ಕೋಣೆಗೆ ಕರೆದು ತಂದ. ಕಣ್ಣಪಟ್ಟಿಯನ್ನು ಬಿಚ್ಚಿದ.
ಅದೊಂದು ಆಹ್ಲಾದಕರ ದಿನವಾಗಿತ್ತು. ತೆರೆದ ಕಿಟಕಿಯಲ್ಲಿ ಬೆಳಕು ಚಿಮ್ಮುತ್ತಿತ್ತು. ಹೊರಗೆ ತೋಟದಲ್ಲಿ ಹಕ್ಕಿಗಳು ಚಿಲಿಪಿಲಿಗುಟ್ಟುತ್ತಿದ್ದವು. ದುಂಬಿಗಳ ಗುಂಜಾರವ ಕೇಳಿಸುತ್ತಿತ್ತು. ಖುಷಿಯಲ್ಲಿ ಅಜ಼ಲ್, ಹೆತ್ತವರನ್ನು, ಆಕ್‌ಶಾಳನ್ನು ತಬ್ಬಿ ಚುಂಬಿಸಿದ.
"ನೀನಿನ್ನು ನನ್ನನ್ನು ಇಷ್ಟಪಡುತ್ತೀಯ?" ಎಂದು ಆಕ್‌ಶಾಳತ್ತ ನೋಡುತ್ತ ಕೇಳಿದ.
"ಹೌದು ಅಜ಼ಲ್. ನಿನ್ನನ್ನು ಮರೆಯಲು ಸಾಧ್ಯವಿಲ್ಲ."
"ಹಾಗಿದ್ದರೆ, ನಾವು ಮದುವೆಯಾಗಲು ಸರಿಯಾದ ಸಮಯವಿದು."
ಬಹಳವೇನೂ ಕಾಯಬೇಕಾಗಲಿಲ್ಲ. ಮದುವೆಗೆ ವೈದ್ಯ ಯಾಶೆ ಕೂಡ ಅತಿಥಿಯಾಗಿ ಬಂದಿದ್ದರು. ದೂರದೂರಿಂದ ಬಂದಿದ್ದ ಬಂಧುಬಳಗ ಸಂಗೀತಗೋಷ್ಠಿಯಲ್ಲಿ ಹಾಡಿಕುಣಿದರು. ಅಜ಼ಲ್ ಮತ್ತು ಆಕ್‌ಶಾ ಬಹಳ ಖುಷಿಯಲ್ಲಿದ್ದರು. ಅಜ಼ಲ್ ಮುಂದೆAದೂ ಸೋಮಾರಿಯಾಗಲಿಲ್ಲ. ಆತ ಆ ಊರಿನ ಬುದ್ಧಿವಂತ ವ್ಯಾಪಾರಿಯೆಂದೇ ಪರಿಚಿತನಾದ. ದಂಪತಿಗಳು ಬಹುಕಾಲ ಬದುಕಿದರು.
ಮದುವೆಯಾದ ಮೇಲಷ್ಟೇ ವೈದ್ಯ ಯಾಶೆ ತನ್ನ ಕಾಯಿಲೆಯನ್ನು ಯಾವ ರೀತಿ ದೂರ ಮಾಡಿದರು ಎಂಬುದನ್ನು ಅಜ಼ಲ್ ಅರಿತ. ತಾನೊಂದು ಮೂರ್ಖನ ಸ್ವರ್ಗದಲ್ಲಿ ಬದುಕಿದ್ದೆ ಎಂದು ತಿಳಿದ. ಮುಂದೆ ಅಜ಼ಲ್ ಮತ್ತು ಆಕ್‌ಶಾ ತಮ್ಮ ಮಕ್ಕಳು-ಮೊಮ್ಮಕ್ಕಳಿಗೆ ವೈದ್ಯ ಯಾಶೆಯವರ ಚಿಕಿತ್ಸಾ ವಿಧಾನದ ಕಥೆಯನ್ನು ಹೇಳುವರು.
"ಆದರೆ, ನಿಜ ಹೇಳಬೇಕೂಂದ್ರೆ ಸ್ವರ್ಗ ಹೇಗಿರುತ್ತೆ ಅಂತ ಯಾರೂ ಹೇಳಲಾರರು." ಎನ್ನುತ್ತ ಕಥೆಗೆ ಮಂಗಳ ಹಾಡುತ್ತಿದ್ದರು.
(ಈooಟs ಠಿಚಿಡಿಚಿಜise)
(ಸಿಂಗರ್ ಭಾವಚಿತ್ರ: ಯೂಸುಫ್ ಕಾರ್ಶ್: ಹಕ್ಕುಗಳಿಗೆ ಒಳಪಟ್ಟಿದೆ)