ಸದ್ಯದಲ್ಲೇ ಬಿಜೆಪಿ ಮುಖಂಡರು ಜೆಡಿಎಸ್‌ಗೆ
ಸದ್ಯದÀಲ್ಲೇ ಬಿಜೆಪಿ ಮುಖಂಡರು ಜೆಡಿಎಸ್‌ಗೆ
ಹಾಲಿ, ಮಾಜಿ ಜಿಪಂ, ತಾಪಂ ಸದಸ್ಯರನ್ನು ಪಕ್ಷಕ್ಕೆ ಸೇರಿಸಿಕೊಂಡ ಶಾಸಕ ಗೌರಿಶಂಕರ್
ತುಮಕೂರು: ಇಲ್ಲಿನ ಗ್ರಾಮಾಂತರ ಕ್ಷೇತವೂ ಸೇರಿದಂತೆ ಜಿಲ್ಲೆಯಲ್ಲಿ ಬಿಜೆಪಿ ಪಕ್ಷದ ಪ್ರಬಲ ಮುಖಂಡರು ನನ್ನ ಜೊತೆ ಸಂಪರ್ಕದಲ್ಲಿದ್ದು, ಅತಿ ಶೀಘ್ರದಲ್ಲಿ ಜೆಡಿಎಸ್ ಪಕ್ಷ ಸೇರಲಿದ್ದಾರೆ ಎಂದು ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಭವಿಷ್ಯ ನುಡಿದರು.
ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಭಾನುವಾರ ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಗೊಂಡ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಮಾಂಜಿನಪ್ಪ, ತಾಲ್ಲೂಕು ಪಂಚಾಯಿತಿ ಹಾಲಿ ಸದಸ್ಯರಾದ ಪಿಎಲ್‌ಆರ್ ರಮೇಶ್, ಶಿವಣ್ಣ, ಕವಿತಾ ರಮೇಶ್, ಹಾಲಿ ಗ್ರಾಪಂ ಸದಸ್ಯರಾದ ಕುಂಭಯ್ಯ, ಹೊನ್ನೇಶ್ ಸೇರಿದಂತೆ ಹಲವರನ್ನು ಜೆಡಿಎಸ್ ಬಾವುಟ ನೀಡುವ ಮೂಲಕ ಪಕ್ಷಕ್ಕೆ ಸ್ವಾಗತಿಸಿ ಮಾತನಾಡಿದ ಅವರು, ತುಮಕೂರು ಗ್ರಾಮಾಂತರದ ಬಿಜೆಪಿಯಲ್ಲಿ ಉಸಿರುಗಟ್ಟುವ ವಾತಾವರಣದಿಂದ ಅನೇಕ ಮಂದಿ ಪಕ್ಷವನ್ನು ತೊರೆದು ಜೆಡಿಎಸ್ ಸೇರ್ಪಡೆಗೊಳ್ಳುತ್ತಿದ್ದಾರೆ ಎಂದರು.
ಹೆಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಕೊಟ್ಟಂತಹ ಜನಪರ ಕಾರ್ಯಯೋಜನೆಗಳು ಮತ್ತು ನಮ್ಮ ಪಕ್ಷದ ಅಜೆಂಡಾ, ತತ್ವ ಸಿದ್ಧಾಂತಗಳನ್ನು ಒಪ್ಪಿ ಇಂದು ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ ಎಂದರು.
ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಸ್ಥಾನಗಳನ್ನು ಹೆಚ್ಚು ಗೆಲ್ಲಲು ಪಣ ತೊಡಲಾಗಿದೆ. ಜೊತೆಗೆ ಮುಂಬರುವ ವಿಧಾನ ಪರಿಷತ್ ಚುನಾವಣೆಯನ್ನು ಟಾರ್ಗೆಟ್ ಇಟ್ಟುಕೊಂಡು ಹೊರಟಿದ್ದೇವೆ. ವಿಪ ಚುನಾವಣೆಯನ್ನು ಗೆಲ್ಲಲೇಬೇಕು ಎಂಬ ಉದ್ದೇಶವನ್ನಿಟ್ಟುಕೊಂಡು ಇಂದು ಅನೇಕ ಮಂದಿ ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ ಎಂದು ಹೇಳಿದರು.
ಇನ್ನೂ ಅನೇಕ ಮಂದಿ ಬಿಜೆಪಿಯ ಪ್ರಭಾವಿ ಮುಖಂಡರುಗಳು ನನ್ನ ಸಂಪರ್ಕದಲ್ಲಿದ್ದು, ಈ ತಿಂಗಳ ಕೊನೆಯಲ್ಲಿ ಜೆಡಿಎಸ್ ಸೇರ್ಪಡೆಗೊಳ್ಳಲಿದ್ದಾರೆ, ಮುಂದಿನ ತಿಂಗಳಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರನ್ನು ಕರೆಯಿಸಿ ಬೃಹತ್ ಸೇರ್ಪಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ತುಮಕೂರು ಗ್ರಾಮಾಂತರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳು ಮತ್ತು ಕೊರೋನ ಸಂದರ್ಭದಲ್ಲಿ ಇಡೀ ಗ್ರಾಮಾಂತರ ಕ್ಷೇತ್ರದ ಜನರ ಪರವಾಗಿ ಕೆಲಸ ಮಾಡಿರುವುದನ್ನು ಮನಗಂಡ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಜೆಡಿಎಸ್ ಸೇರ್ಪಡೆಗೊಂಡಿರುವುದು ಸ್ವಾಗತಾರ್ಹ ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಆಂಜಿನಪ್ಪ ಮಾತನಾಡಿ, ತುಮಕೂರು ಗ್ರಾಮಾಂತರ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಮತ್ತು ನಮ್ಮ ಶಾಸಕರಾದ ಡಿ.ಸಿ.ಗೌರಿಶಂಕರ್ ಅವರ ನಡೆ, ನುಡಿಯನ್ನು ಮೆಚ್ಚಿ ಇಂದು ಹಲವಾರು ಮಂದಿ ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಗೊಂಡಿದ್ದು, ಇದು ನಮ್ಮ ಪಕ್ಷಕ್ಕೆ ಬಲ ಬಂದAತಾಗಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ೧೧ ಕ್ಷೇತ್ರಗಳ ಪೈಕಿ ೧೧ ಕ್ಷೇತ್ರಗಳನ್ನೂ ಜೆಡಿಎಸ್ ಪಕ್ಷ ಗೆಲ್ಲಿಸಲು ಶ್ರಮಿಸುವುದಾಗಿ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಎಷ್ಟು ಮುತುವರ್ಜಿ ತೋರಿಸುತ್ತೇವೆಯೋ ಶತಾಯಗತಾಯ ವಿಧಾನ ಪರಿಷತ್ ಚುನಾವಣೆಗೂ ಸಹ ನಮ್ಮ ಜೆಡಿಎಸ್ ಪಕ್ಷದ ಶಕ್ತಿ ಏನೆಂಬುದನ್ನು ತೋರಿಸಿ, ಮೂರು ತಿಂಗಳು ಮನೆ ಬಿಟ್ಟಾದರೂ ಸಹ ಮುಂಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸುವ ಪ್ರತಿಷ್ಠೆಯನ್ನಾಗಿ ಚಾಲೆಂಜ್ ಆಗಿ ತೆಗೆದುಕೊಂಡಿದ್ದೇನೆ ಎಂದು ತಿಳಿಸಿದರು.
ಹಾಜರಿದ್ದ ಪ್ರಮುಖರು
ಸರಳ ಸಮಾರಂಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಆಂಜಿನಪ್ಪ, ರಾಜ್ಯ ಹಿರಿಯ ಉಪಾಧ್ಯಕ್ಷ ಗಂಗಣ್ಣ, ಜಿಲ್ಲಾ ಕಾರ್ಯಾಧ್ಯಕ್ಷರಾದ ಹಾಲನೂರು ಅನಂತಕುಮಾರ್, ಟಿ.ಆರ್.ನಾಗರಾಜ್, ತಾಲ್ಲೂಕು ಅಧ್ಯಕ್ಷ ರಾಮಚಂದ್ರಪ್ಪ, ಪ್ರಚಾರ ಸಮಿತಿ ಅಧ್ಯಕ್ಷ ಚಲುವರಾಜ್, ಹಿರೇಹಳ್ಳಿ ಮಹೇಶ್, ವಿಜಯ್‌ಕುಮಾರ್, ಸೋಲಾರ್ ಕೃಷ್ಣಮೂರ್ತಿ, ಕೆಂಪಹನುಮಯ್ಯ, ತನ್ವೀರ್, ಆಜಂ, ಬಸವರಾಜು, ಬೈರೇಗೌಡ್ರು ಸೇರಿದಂತೆ ಅನೇಕ ಮಂದಿ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಇದ್ದರು.
ಕುಮಾರಣ್ಣಂಗೇ ಕೈಕೊಟ್ಟ ಪುಣ್ಯಾತ್ಮ !?
ವಿಧಾನ ಪರಿಷತ್ ಚುನಾವಣೆಗೆ ನಾವೇ ಒಬ್ಬ ಅಭ್ಯರ್ಥಿಯನ್ನು ಕರೆದುಕೊಂಡು ಬಂದು ಆ ಪುಣ್ಯಾತ್ಮನನ್ನು ನಾವು ಆರು ಮಂದಿ ಎಂಎಲ್‌ಎಗಳು ಸೇರಿ ಗೆಲ್ಲಿಸಿದೆವು, ನಾನು ಹಿಂದೆಯೇ ಕುಮಾರಣ್ಣ ಅವರಿಗೆ ಹೇಳಿದ್ದೆ ಅವನಿಗೆ ಟಿಕೆಟ್ ಕೊಡಬೇಡಿ ಎಂದು. ನಾನು ವಿರೋಧ ಮಾಡಿದ್ದೆ. ಕೊನೆಗೆ ದೇವೇಗೌಡರು ಕೂರಿಸಿಕೊಂಡು ಯಾವುದೇ ಕಾರಣಕ್ಕೂ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲೇಬೇಕು ಎಂದು ಆದೇಶ ಕೊಟ್ಟ ಹಿನ್ನಲೆಯಲ್ಲಿ ಮನೆ ಮನೆಗೆ ತೆರಳಿ ಓಟು ಹಾಕಿಸಿದೆವು. ಅದರ ಫಲವಾಗಿ ಇಂದು ಕುಮಾರಣ್ಣ ಅವರಿಗೇ ಕೈ ಕೊಟ್ಟರು.
ಡಿ.ಸಿ.ಗೌರಿಶಂಕರ್
ಕ್ಷೇತ್ರದ ಶಾಸಕ
( ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜು ಕುರಿತು)