ಜೆಡಿಎಸ್ ಬಿಜೆಪಿಯ ಬಿ ಟೀಮ್: ಮಯೂರ ಜಯಕುಮಾರ್ ಮಧುಗಿರಿಯಲ್ಲಿ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳ ಸಭೆ
ತಳ ಮಟ್ಟದಿಂದ ಸಂಘಟನೆ ಮಾಡಿ ಚುನಾವಣೆ ಎದುರಿಸಿದಲ್ಲಿ ಮಾತ್ರ ಯಶಸ್ಸು ಗಳಿಸಲು ಸಾಧ್ಯ.
ಜೆಡಿಎಸ್ ಬಿಜೆಪಿಯ ಬಿ ಟೀಮ್: ಮಯೂರ ಜಯಕುಮಾರ್
ಮಧುಗಿರಿಯಲ್ಲಿ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳ ಸಭೆ
ಮಧುಗಿರಿ : ಜೆಡಿಎಸ್ ಹಣ ಪಡೆದು ರಾಜ್ಯದಲ್ಲಿ ಬಿಜೆಪಿ ಪರ ಆ ಪಕ್ಷದ ಬಿ ಟೀಮ್ ನಂತೆ ಕೆಲಸ ಮಾಡುತ್ತಿದೆ, ರಾಜ್ಯದಲ್ಲಿ ಈಗ ಆಳ್ವಿಕೆ ನಡೆಸುತ್ತಿರುವ ಬಿಜೆಪಿ ಸರ್ಕಾರ ಶೇಕಡ 40% ಸರ್ಕಾರ ಎಂದು ದೇಶದುದ್ದ ಕುಖ್ಯಾತಿಗಳಿಸಿದೆ ಎಂದು ಎಐಸಿಸಿ ಕಾರ್ಯದರ್ಶಿ ಮಯೂರ ಜಯಕುಮಾರ್ ಟೀಕಿಸಿದರು.
ಪಟ್ಟಣದ ಎಂ.ಕೆ ಸಮುದಾಯ ಭವನದಲ್ಲಿ ಮಧುಗಿರಿ ತಾಲೂಕು ಕಾಂಗ್ರೆಸ್ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ್ದು, ಜೆಡಿಎಸ್ ಪಕ್ಷವು ಕಾರ್ಪೊರೇಟ್ ರೀತಿ ಕೌಟುಂಬಿಕ ರಾಜಕಾರಣ ಮಾಡುತ್ತಿದೆ. ಈ ಎರಡೂ ಪಕ್ಷಗಳನ್ನು ಬೇರು ಸಮೇತ ಕಿತ್ತೊಗೆಯಬೇಕು ಎಂದು ಕರೆ ನೀಡಿದರು.
ಮುಂಬರುವ ಮೂರು ತಿಂಗಳೊಳಗೆ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಎದುರಾಗಲಿದ್ದು, ತಳ ಮಟ್ಟದಿಂದ ಸಂಘಟನೆ ಮಾಡಿ ಚುನಾವಣೆ ಎದುರಿಸಿದಲ್ಲಿ ಮಾತ್ರ ಯಶಸ್ಸು ಗಳಿಸಲು ಸಾಧ್ಯ. ಕಾರ್ಯಕರ್ತರು ಈಗಿನಿಂದಲೇ ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.
ಕೆ.ಎನ್. ರಾಜಣ್ಣನವರು ಅವರ ಅವಧಿಯಲ್ಲಿ ಮಧುಗಿರಿ ಕ್ಷೇತ್ರದಲ್ಲಿ ಏನೆಲ್ಲ ಕೊಡುಗೆಗಳನ್ನು ನೀಡಿದ್ದಾರೋ ಅವುಗಳನ್ನು ಜನರಿಗೆ ಮುಟ್ಟುವ ರೀತಿಯಲ್ಲಿ ಪ್ರಚಾರ ನಡೆಸಿ ಅವರ ಗೆಲುವಿಗೆ ಸಹಕರಿಸುವ ಮೂಲಕ ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ನಾವೆಲ್ಲರೂ ಪಣತೊಡಬೇಕು ಎಂದರು.
ಮಾಜಿ ಸಚಿವ ಟಿ.ಬಿ. ಜಯಚಂದ್ರ ಮಾತನಾಡಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 5 ವರ್ಷದಲ್ಲಿ ಕಾಂಗ್ರೆಸ್ ನೀಡಿದ ಕಾರ್ಯಕ್ರಮಗಳನ್ನು ಯಾವುದೇ ಸರ್ಕಾರ ನೀಡಿಲ್ಲ. ಆದರೆ ರಾಜ್ಯದಲ್ಲಿ ಈಗ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು, ಇಂತಹ ಭ್ರಷ್ಟ ಬಿಜೆಪಿ ಸರ್ಕಾರವನ್ನು ನನ್ನ ರಾಜಕೀಯ ಜೀವನದಲ್ಲಿ ಎಂದೂ ನೋಡಿರಲಿಲ್ಲ. ಇಂತಹ ಸರ್ಕಾರವನ್ನು ಕಿತ್ತೊಗೆಯಿರಿ. ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಅನ್ನ ಭಾಗ್ಯ ಯೋಜನೆಯ ಅಕ್ಕಿಯನ್ನು 10 ಕೆ.ಜಿ ಗೆ ಏರಿಸಲಾಗುವುದು ಎಂದ ಅವರು ಜಿಲ್ಲೆಯ 11 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲ್ಲುವಂತೆ ಪ್ರತಿಯೊಬ್ಬ ಕಾರ್ಯಕರ್ತನೂ ಪಣ ತೊಡಬೇಕು ಎಂದರು. ಮಧುಗಿರಿಯಲ್ಲಿ ಕಾರ್ಯಕರ್ತರು ಕೆ.ಎನ್. ರಾಜಣ್ಣನವರಿಗೆ ಬೆಳಗ್ಗೆಯಿಂದ ಕಾದು ಕುಳಿತಿದ್ದು, ಕಾರ್ಯಕರ್ತರು ಅವರ ಮೇಲೆ ಇಟ್ಟಿರುವ ಪ್ರೀತಿಯನ್ನು ತೋರಿಸುತ್ತದೆ ಎಂದರು.
ಮಾಜಿ ಶಾಸಕ, ಡಿಸಿಸಿ ಬ್ಯಾಂಕ್ ಅದ್ಯಕ್ಷ ಕೆ.ಎನ್. ರಾಜಣ್ಣ ಮಾತನಾಡಿ ಬಡವರ, ರೈತರ ಪರ ಕಾರ್ಯಕ್ರಮ ನೀಡಿದ ಪಕ್ಷ ಕಾಂಗ್ರೆಸ್ ಪಕ್ಷವು ಎಲ್ಲಾ ಜಾತಿಯ ಮುಖಂಡರನ್ನು ಸಿಎಂ ಮಾಡಿದೆ. ಅಂತಹ ಪಕ್ಷದಲ್ಲಿ ಸದಸ್ಯರಾಗಿರುವುದೇ ಹೆಮ್ಮ. ಅನ್ನಭಾಗ್ಯ ಸಿದ್ದರಾಮಯ್ಯ ಅವಧಿಯ ಮಹತ್ತರ ಯೋಜನೆ. ಅನ್ನಭಾಗ್ಯ ಯೋಜನೆಯಿಂದ ಬಿಕ್ಷುಕರ ಸಂಖ್ಯೆಯೇ ಕಡಿಮೆಯಾಗಿದೆ ಎಂದ ಅವರು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಗೌರವ ತರುವ ಮೂಲಕ ಕಾಂಗ್ರೆಸ್ ಇಂದಿಗೂ ಸುಭದ್ರವಾಗಿದೆ ಎಂಬುದನ್ನು ತೋರಿಸಬೇಕು ಎಂದರು.
ಕಾರ್ಯಕ್ರಮ ದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಇತ್ತೀಚೆಗೆ ನೇಮಕಗೊಂಡ ಚಂದ್ರಶೇಖರ್ ಗೌಡ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಜಿಪಂ ಮಾಜಿ ಅಧ್ಯಕ್ಷ ಜಿ.ಜೆ. ರಾಜಣ್ಣ, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಗೀತಾ ರಾಜಣ್ಣ, ಓಬಿಸಿ ಘಟಕದ ಜಿಲ್ಲಾಧ್ಯಕ್ಷ ಪುಟ್ಟರಾಜು, ಕೆಪಿಸಿಸಿ ವಕ್ತಾರ ಶ್ರೀನಿವಾಸ್, ತಾ.ಪಂ ಮಾಜಿ ಅಧ್ಯಕ್ಷೆ ಇಂದಿರಾ ದೇನಾ ನಾಯ್ಕ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಶಿ ಹುಲಿಕುಂಟೆಮಠ, ಪುರಸಭೆ ಮಾಜಿ ಅಧ್ಯಕ್ಷ ಎಂ.ಕೆ. ನಂಜುಂಡಯ್ಯ, ಎನ್. ಗಂಗಣ್ಣ, ಬಿ. ನಾಗೇಶ್ ಬಾಬು, ಎಂ.ಎಸ್. ಮಲ್ಲಿಕಾರ್ಜುನಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಆದಿನಾರಾಯಣ ರೆಡ್ಡಿ, ಗೋಪಾಲಯ್ಯ, ಎಂಜಿ. ಶ್ರೀನಿವಾಸ ಮೂರ್ತಿ, ಲಾಲಾಪೇಟೆ ಮಂಜುನಾಥ್, ಮಂಜುನಾಥ್ ಆಚಾರ್, ಉಮೇಶ್, ಪಿ.ಟಿ. ಗೋವಿಂದಯ್ಯ, ಎಂ.ಎಸ್. ಚಂದ್ರಶೇಖರ್, ಎಸ್.ಬಿ.ಟಿ ರಾಮು, ಎಂ.ಬಿ. ಮರಿಯಣ್ಣ. ಸಾದಿಕ್ ಇತರರಿದ್ದರು.
'ನಮ್ಮಿಬ್ಬರದು ಕಡೇ ಚುನಾವಣೆ' ನನ್ನದು ಜಯಣ್ಣ(ಜಯಚಂದ್ರ) ನವರದ್ದು, ಕಡೆಯ ಚುನಾವಣೆ : ನನ್ನ ಅವಧಿಯಲ್ಲಿ ತಾಲೂಕಿನ ರೈತರ ಸಾಲ ಮನ್ನಾ ಮಾಡಲಾಗಿದೆ, 16 ಸಾವಿರಕ್ಕೂ ಹೆಚ್ಚು ಮನೆಗಳನ್ನು ಮಂಜೂರು ಮಾಡಲಾಗಿದ್ದು, ಆದರೆ ಕಳೆದ 5 ವರ್ಷದಲ್ಲಿ ಕ್ಷೇತ್ರದಲ್ಲಿ ಒಂದೇ ಒಂದು ಮನೆ ಮಂಜೂರಾಗಿಲ್ಲ. ನಾನು ಶಾಸಕನಾಗಿ ಆಯ್ಕೆಯಾದರೆ ತಾಲೂಕಿಗೆ ಎತ್ತಿನಹೊಳೆ, ಜಿಲ್ಲಾ ಕೇಂದ್ರ ರೋಪ್ ವೇ, ರಾಯದುರ್ಗ ರೈಲ್ವೆ ಯೋಜನೆ ಕಾಮಗಾರಿಗಳನ್ನು ಜಾರಿಗೆ ತರುತ್ತೇನೆ. - ಕೆ.ಎನ್. ರಾಜಣ್ಣ. ಮಾಜಿ ಶಾಸಕ. |
ʼ