ಡಾ. ಬೂವನಹಳ್ಳಿ ನಾಗರಾಜ್ ಕೇಳುತ್ತಾರೆ “ನೈತಿಕ ಹೊಣೆ ಎಂದರೆ ಹೀಗಿರಬಹುದೇ”- ಕುಚ್ಚಂಗಿ ಪ್ರಸನ್ನ

Dr-Boovanahalli-nagraj

ಡಾ. ಬೂವನಹಳ್ಳಿ ನಾಗರಾಜ್

 

ತುಮಕೂರು: ಸರಕಾರದ ಕರ್ತವ್ಯವನ್ನು ನೆರವೇರಿಸುವಾಗ ನಿಯಮಗಳನ್ನು ಅನುಸರಿಸಿದರೆ ಸಾಕೇ , ನೈತಿಕ ನೆಲೆಗಟ್ಟಿನಲ್ಲಿ ಚಿಂತನೆ ನಡೆಸಿ ಎದೆಯ ದನಿಯನ್ನೂ ಆಲಿಸಿ ಅದರಂತೆ ನಡೆದುಕೊಳ್ಳಬೇಕೇ. ಇಂಥ ಒಂದು ಸಂದಿಗ್ದ ಬಹುಪಾಲು ಎಲ್ಲ ಸರಕಾರಿ ಅಧಿಕಾರಿಗಳನ್ನು ಕಾಡಿರಲಾರದು. ಅದಕ್ಕೊಂದು ಅಪವಾದ ಇಲ್ಲಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ವಯೋನಿವೃತ್ತಿ ಹೊಂದಿದ ಬಳಿಕ ಅದೇ ಇಲಾಖೆಯಲ್ಲಿ ಸಾರ್ವಜನಿಕ ದೂರು ಪ್ರಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ  ಡಾ. ಬೂವನಹಳ್ಳಿ ನಾಗರಾಜ್ ಅವರು ಅವರ ಅಧೀನದಲ್ಲಿ ಬರುವ ಒಂಬತ್ತು ಜಿಲ್ಲೆಗಳ ಜಿಲ್ಲಾ ಪಂಚಾಯಿತಿ ಅಧಿಕಾರ ವ್ಯಾಪ್ತಿಯಲ್ಲಿನ ಕಚೇರಿಗಳಲ್ಲಿ ಅಧಿಕಾರಿಗಳು, ನೌಕರರು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ವಿರುದ್ಧ ಬರಬಹುದಾದ ದೂರುಗಳನ್ನು ಪರಿಶೀಲಿಸಿ, ಅವರಿಗೆ ಇರುವ ಅರೆ ನ್ಯಾಯಾಧಿಕರಣದ ಅಧಿಕಾರ ಬಳಸಿ ವಿಚಾರಣೆ ನಡೆಸಿ, ಸಾಕ್ಷ್ಯಾಧಾರಗಳ ಆಧಾರದ ಮೇಲೆ ತಪ್ಪಿತಸ್ಥರನ್ನು ಗುರುತಿಸಿ, ತೀರ್ಪು ನೀಡುತ್ತಾರೆ, ಜೊತಗೆ ದಂಡನೆಯನ್ನೂ ವಿಧಿಸುತ್ತಾರೆ.ಅವರು ಈಗಾಗಲೇ ಇಂಥ ಪ್ರಕರಣಗಳಲ್ಲಿ ವಿಚಾರಣೆ ನಡೆಸಿ ತೀರ್ಪು ನೀಡಿ ದಂಡನೆ ವಿಧಿಸಿದ್ದಾರೆ.

ಆದರೆ, ಈ ದಿನ ಅಂದರೆ ಸೆಪ್ಟೆಂಬರ್ ಎಂಟರಂದು ಡಾ. ಬೂವನಹಳ್ಳಿ ನಾಗರಾಜ್ ಅವರು ತುಮಕೂರು ತಾಲೂಕಿನ ಊರುಕೆರೆ ಗ್ರಾಮ ಪಂಚಾಯಿತಿ, ಮಧುಗಿರಿ ತಾಲೂಕಿನ ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ಹಾಗೂ ಚಿಕ್ಕನಾಯಕನಹಳ್ಳಿ ತಾಲೂಕಿನ ಕೋರಗೆರೆ ಪಂಚಾಯಿತಿಗಳಿಗೆ ಸಂಬಂಧಿಸಿದ ಮೂರು ಪ್ರತ್ಯೇಕ ದೂರುಗಳ ವಿಚಾರಣೆಯನ್ನು ನಡೆಸಿದರಾದರೂ ಈ ಪ್ರಕರಣಗಳ ತೀರ್ಪನ್ನು ಪ್ರಕಟಿಸದೇ ಹಾಗೇ ಉಳಿಸಿಬಿಟ್ಟರು, ಹೀಗೆ ತೀರ್ಪು ನೀಡದೇ ಇರಲು ಕಾರಣ ಬಹಳ ಸರಳ ಎನಿಸಿದರೂ, ಆಳದಲ್ಲಿ ಸೂಕ್ಷ್ಮ ಮತಿಗಳನ್ನು ಚಿಂತನೆಗೆ ಹಚ್ಚುವಂತಿದೆ.

ಅವರ ಮಾತುಗಳಲ್ಲೇ ಹೇಳುವುದಾದರೆ, ಈ ನೆಲದ ಕಾನೂನುಗಳನ್ನು ಅಗಾಧವಾಗಿ ಗೌರವಿಸುವ ಡಾ.ಬೂವನಹಳ್ಳಿ ನಾಗರಾಜು ಅವರಿಗೆ ಸಾರ್ವಜನಿಕ ದೂರು ಪ್ರಾಧಿಕಾರಿಯಾಗಿ ವಿಚಾರಣೆ ನಡೆಸಿ ತೀರ್ಪು ನೀಡದೇ ಇರದಂತೆ ತಡೆಯುತ್ತಿರುವ ಮಹತ್ವದ ಅಂಶವೆಂದರೆ, ಇತ್ತೀಚೆಗೆ ಅವರ ನಿವಾಸದ ಮೇಲೆ ನಡೆದ ಲೋಕಾಯುಕ್ತ ದಾಳಿ. ಹೌದು, ಅವರು ಸರಕಾರಿ ಸೇವೆಯಲ್ಲಿದ್ದಾಗ ಘೋಷಿತ ವರಮಾನ ಮೀರಿದ ಆಸ್ತಿ ಹೊಂದಿದ್ದಾರೆಂದು ಲೋಕಾಯುಕ್ತ ದಾಳಿ ನಡೆಯಿತು. ಆದರೆ, ಈ ದಾಳಿಯ ನಂತರ ಲೋಕಾಯುಕ್ತ ಇವರ ವಿರುದ್ಧ ಇನ್ನೂ ಯಾವುದೇ ಕಾನೂನು ಕ್ರಮ ಜರುಗಿಸಿಲ್ಲ, ಅಲ್ಲದೇ ಇವರನ್ನು ಹಾಲಿ ಇರುವ ಅರೆ ನ್ಯಾಯಾಧಿಕರಣದ ಹುದ್ದೆಯಲ್ಲಿ ಅಮಾನತುಗೊಳಿಸಲು  ಬರುವುದಿಲ್ಲ ಮತ್ತು ಖುದ್ದು ಈ ಹುದ್ದೆಗೆ ನೈತಿಕ ಹೊಣೆ ಹೊತ್ತು ರಾಜಿನಾಮೆ ಕೊಡೋಣ ಎಂದರೆ ಇವರ ಮೇಲಿನ ಯಾವ ದೂರೂ ಸಾಬೀತಾಗಿಲ್ಲ. ಇಂಥ ಒಂದು ಸಂದಿಗ್ದ ಸನ್ನಿವೇಶದಲ್ಲಿ ನೈತಿಕತೆಯಿಂದ ವರ್ತಿಸುವುದು ಹೇಗೆ ಎಂಬುದನ್ನು ತಮ್ಮಷ್ಟಕ್ಕೆ ತಾವೇ ನಿರ್ಧರಿಸಿದ   ಡಾ.ಬೂವನಹಳ್ಳಿ ನಾಗರಾಜು ಅವರು ಪಂಚಾಯಿತಿಗಳ ಮೂರು ದೂರು ಪ್ರಕರಣಗಳನ್ನು ವಿಚಾರಣೆಗಳನ್ನೇನೋ ಮಾಡಿದರು, ಆದರೆ ತೀರ್ಪನ್ನು ಬಾಕಿ ಇರಿಸಿದರು.

ಮುಂದೆ ಕೂಡಾ ಅವರ ನಿಲುವು ನೈತಿಕವಾದದ್ದೇ ಆಗಿರುತ್ತದೆ ಎನ್ನುತ್ತಾರೆ ಬೂವನಹಳ್ಳಿ ಅವರು. ನೋಡಿ ಈಗ ನಿಮಗೆ ಇಡೀ ಸನ್ನಿವೇಶ ಅರ್ಥವಾಗಿರಬಹುದು ಅಂತ ಭಾವಿಸುವೆ.