“ಕೆಡಿಪಿ ಸಭೆ ಮಾಡಿ ಎದ್ ಬರೋಕೆ ಮಂತ್ರಿ ಆಗ್ಬೇಕಾ?” ತುಮಕೂರು ಜಿಲ್ಲೆಯ ಉಸ್ತುವಾರಿ ವಂಚಿತ ಸಚಿವ ಜೆಸಿಎಂ
“ಕೆಡಿಪಿ ಸಭೆ ಮಾಡಿ ಎದ್ ಬರೋಕೆ ಮಂತ್ರಿ ಆಗ್ಬೇಕಾ?”
ತುಮಕೂರು ಜಿಲ್ಲೆಯ ಉಸ್ತುವಾರಿ ವಂಚಿತ ಸಚಿವ ಜೆಸಿಎಂ
ತುಮಕೂರು: ``ನನಗೆ ಕತ್ತಲಲ್ಲಿ ಕೆಲಸ ಮಾಡಿ ಅಭ್ಯಾಸವಿಲ್ಲ. ಅದರ ಅಗತ್ಯವೂ ನನಗಿಲ್ಲ. ನನಗೆ ಗೊತ್ತಿಲ್ಲದ ಕಡೆ ಹೋಗಿ ಬರೀ ಕೆಡಿಪಿ ಸಭೆ ನಡೆಸಲು ನಾನು ಮಂತ್ರಿಯಾಗುವುದು ನಂಗೆ ಇಷ್ಟವಿಲ್ಲ. ಕೊಡುವುದಾದರೆ ನಮ್ಮ ಜಿಲ್ಲೇನೇ ಕೊಡಿ. ಇಲ್ಲವಾದರೆ ಬೇಡ. ಆ ಬಗ್ಗೆ ನನಗೇನೂ ಬೇಸರವಿಲ್ಲ ಅಂತ ಹೇಳಿದ್ದೇನೆ.’’
``ಜಿಲ್ಲೆಯ ಉಸ್ತುವಾರಿ ನಡೆಸಲು ಗ್ರೌಂಡ್ ರಿಯಾಲಿಟಿ ಗೊತ್ತಿರಬೇಕು. ಜಿಲ್ಲೆಯ ಸಮಸ್ಯೆಗಳ ಬಗ್ಗೆ ಅರಿವಿರಬೇಕು. ಹೀಗಿಲ್ಲದಾಗ, ಅಧಿಕಾರಿಗಳ ಸಭೆ ನಡೆಸಲಾಗಲಿ ಅಥವಾ ಅವರು ಹೇಳೋ ಮಾತಿನ ಮೇಲೆ ಸಭೆ ಮಾಡೋ ಮಂತ್ರಿ ನಾನಲ್ಲ. ನನಗೆ ತುಮಕೂರು ಜಿಲ್ಲೆ ಬಗ್ಗೆ ನಾಲೆಡ್ಜ್ ಇದೆ. ಅದನ್ನ ಕೊಟ್ರೆ ಮಾಡ್ತೇನೆ. ಇಲ್ಲಾಂದ್ರೆ ಬೇಡ ಬಿಡಿ ಎಂದು ಹೇಳಿದ್ದೇನೆ. ನನಗೇನೂ ಯಾವುದೇ ಫೀಲಿಂಗ್ ಇಲ್ಲ.
ಸರ್ಕಾರ ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ಬಗ್ಗೆ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಜೆ.ಸಿ. ಮಾಧುಸ್ವಾಮಿ ಅವರು ``ಬೆವರ ಹನಿ’’ಗೆ ನೀಡಿದ ಕಟು ಪ್ರತಿಕ್ರಿಯೆ ಇದು.
ರಾಜ್ಯದ ಎಲ್ಲ ಜಿಲ್ಲೆಗಳ ಉಸ್ತುವಾರಿ ಹಾಗೂ ಕೋವಿಡ್ ಉಸ್ತುವಾರಿ ಸಚಿವರನ್ನು ಬದಲಿಸಿದ ಸರ್ಕಾರದ ಆದೇಶ ಪ್ರಕಟವಾಗಿದ್ದು, ಅದರಂತೆ ತುಮಕೂರು ಜಿಲ್ಲೆಯ ಉಸ್ತುವಾರಿ ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ಪಾಲಿಗೆ ಬಂದಿದೆ. ಈವರೆಗೆ ಜಿಲ್ಲೆಯ ಉಸ್ತುವಾರಿ ಹೊಣೆ ಹೊತ್ತಿದ್ದ ಜಿಲ್ಲೆಯವರೇ ಆದ ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೆ ಇತರ ಯಾವ ಜಿಲ್ಲೆಯನ್ನೂ ಉಸ್ತುವಾರಿಗಾಗಿ ನೀಡಿಲ್ಲ. ಈ ಹಿನ್ನೆಲೆಯಲ್ಲಿ ‘ಬೆವರ ಹನಿ’ ಅವರನ್ನು ಮಾತನಾಡಿಸಿತು.
ಸೋಮವಾರ ತಡ ಸಂಜೆ ವಾಕಿಂಗ್ ಮಾಡುತ್ತಲೇ ಮಾತನಾಡಿದ ಮಾಧುಸ್ವಾಮಿಯವರು, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದ ನಿಮ್ಮನ್ನು ಜಿಲ್ಲೆಯ ಜವಾಬ್ದಾರಿಯಿಂದ ಮುಕ್ತಗೊಳಿಸಿದ್ದೇಕೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ``ಪಕ್ಷದ ನೀತಿಯಂತೆ ಸ್ವಂತ ಜಿಲ್ಲೆಯವರಿಗೆ ಅದೇ ಜಿಲ್ಲೆಯ ಉಸ್ತುವಾರಿ ನೀಡಬಾರದೆಂಬ ತೀರ್ಮಾನ ಮಾಡಲಾಗಿದೆ. ಅದರಂತೆ ನಿಮ್ಮನ್ನೊಬ್ಬರನ್ನೇ ಮಾಡ್ತಿಲ್ಲ. ಎಲ್ಲರನ್ನೂ ಸ್ವಂತ ಜಿಲ್ಲೆ ಬಿಟ್ಟು ಬೇರೆ ಜಿಲ್ಲೆಗೆ ಉಸ್ತುವಾರಿ ಮಾಡಲಾಗಿದೆ. ಪಕ್ಷದ ದೃಷ್ಟಿಯಿಂದ ತೀರ್ಮಾನ ತೆಗೆದುಕೊಳ್ಳಬೇಕಾಗಿದೆ ಅಂದಾಗ, ನಾನು ಏನು ಹೇಳಲು ಸಾಧ್ಯ. ನನ್ನನ್ನ ಟಾರ್ಗೆಟ್ ಮಾಡಿದ್ದಾರೆ ಅಂತ ನನಗೆ ಅನಿಸ್ತಿಲ್ಲ. ಹಾಗೆ ಏನಾದರೂ ಅನಿಸಿದರೂ ಹೇಳೋದು ಹೇಗೆ? ನಿಯರ್‌ಬೈ ಜಿಲ್ಲೆಯ ಬಗ್ಗೆ ಪ್ರಿಫೆರೆನ್ಸ್ ಬೇಕಾದ್ರೆ ಹೇಳಿ ಅಂತ ಕೇಳಿದ್ರು. ನನ್ನ ಸರ್ವೀಸ್ ಬೇಕೂಂದ್ರೆ ತುಮಕೂರು ಕೊಡೋದಾದ್ರೆ ಕೊಡಿ. ಇಲ್ಲಾಂದ್ರೆ ಇಲಾಖೆ ಕೆಲಸ, ಕ್ಷೇತ್ರದ ಕೆಲಸ ಮಾಡ್ಕೊಂಡಿರ್ತೇನೆ ಅಂತ ಹೇಳಿದೆ” ಎಂದರು.
ಸುಧಾಕರ್ ಅಥವಾ ಸೋಮಣ್ಣ ಅವರಿಗೆ ಕೊಟ್ಟಿದ್ದರೆ ಪಕ್ಕದ ಜಿಲ್ಲೆಯವರಾಗಿರ್ತಿದ್ರು. ಸ್ವಲ್ಪವಾದರೂ ಮಾಹಿತಿ ಇರ್ತಿತ್ತು ಅಲ್ವಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, “ಸೋಮಣ್ಣನವರಿಗೆ ಚಾಮರಾಜನಗರಕ್ಕೆ ಹೋಗಲು ಇಷ್ಟ ಇತ್ತು. ಹಾಗಾಗಿ ಅವರು ಕೇಳಿರಬಹುದು. ಅಲ್ಲದೆ, ನನ್ನನ್ನು ಡಿಸ್ಟರ್ಬ್ ಮಾಡಲು ಸೋಮಣ್ಣ ಅವರಿಗೆ ಇಷ್ಟ ಇರಲಿಲ್ಲ. ಹಿಂದೆ ಯಡಿಯೂರಪ್ಪ ಅವರು ಸೋಮಣ್ಣ ಅವರನ್ನ ಇಲ್ಲಿಗೆ ಹೋಗಿ ಅಂತ ಹೇಳಿದಾಗ, ಅವರು ಒಪ್ಪದೆ, ಯಡಿಯೂರಪ್ಪ ಅವರಿಗೇ ನೇರವಾಗಿ “ ನನ್ನನ್ನ ಯಾಕ್ರೀ ಅಲ್ಲಿ ಹಾಕ್ತೀರಾ.. ಮಾಧುಸ್ವಾಮಿ ಒಳ್ಳೇ ಕೆಲಸ ಮಾಡ್ತಿದಾರೆ. ಅಲ್ಲಿ ನಾನು ಹೋಗಿ ಕೂಡೋಕಾಗ್ತದಾ ಅಂತ ನೇರವಾಗಿ ಹೇಳಿದ್ದರು” ಎಂದರು.
ಜಿಲ್ಲೆಯ ಸಮಸ್ಯೆಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲದವರನ್ನು ಉಸ್ತುವಾರಿ ಸಚಿವರನ್ನಾಗಿ ಮಾಡಿದ್ರೆ ಹೇಗೆ ಸರ್ ಎಂಬ ಪ್ರಶ್ನೆಗೆ ಉತ್ತರಿಸಿದ ಮಾಧುಸ್ವಾಮಿಯವರು, ``ಎಲ್ಲಾದ್ರೂ ಉಂಟಾ ಸರ್? ಏನು ಪ್ರಯೋಜನ ಆಗ್ತದೆ ಇದ್ರಿಂದ? ಬರೀ ಡಿಸಿ ಅಫಿಷಿಯಲ್ ಮೀಟಿಂಗ್ ಮಾಡ್ಕೊಂಡು ಎದ್ ಹೋಗೋದು ಬಿಟ್ರೆ ಏನು ಮಾಡೋಕಾಗ್ತದೆ? ನೋಡೀ.. ಆಡಳಿತ ಮಾಡಲು ನಮಗೆ ಎರಡು ಮೂರು ಸೋರ್ಸ್ ಆಫ್ ಇನ್‌ಫರ್ಮೇಶನ್ ಬೇಕಾಗ್ತದೆ. ಒಂದೂ ಪ್ರೆಸ್. ಇನ್ನೊಂದು ಅಧಿಕಾರಿಗಳು. ಮತ್ತೊಂದು ಕಾರ್ಯಕರ್ತರು, ಪಬ್ಲಿಕ್ ಇರಬೇಕು. ಅಧಿಕಾರಿಗಳು ನಿಜ ಹೇಳ್ತಿದಾರಾ? ಸುಳ್ಳು ಹೇಳ್ತಿದಾರಾ ಅಂತ ಕೌಂಟರ್ ಮಾಡೋಕೆ ದೇರ್ ಶುಡ್ ಬಿ ಸೋರ್ಸ್ ಆಫ್ ಇನ್‌ಫರ್ಮೇಶನ್. ವರ್ಕ್ ಆಗಿದೆಯಾ ಇಲ್ಲವಾ ಅಂತ ಕೇಳೋಕೆ. ಹಾಗಾದಾಗ ಒಳ್ಳೇ ಆಡಳಿತ ನಡೆಸಬಹುದು. ಕುಳಿತ ಕಡೆಯಲ್ಲೇ ಆಗಬೇಕಾದ ಕೆಲಸಗಳನ್ನು ಮಾಡಬೇಕಿತ್ತು. ಆ ಕೆಲಸವನ್ನು ಚೆನ್ನಾಗೇ ಮಾಡ್ತಿದ್ದೆ. ಅದು ಬೇಡಾ ಅಂದ್ರೆ ಏನು ಮಾಡೋಕಾಗ್ತದೆ. ಅವರು(ಸಿಎಂ) ಲೀಡರ್ ಆಫ್ ದಿ ಹೌಸ್. ನಂಬರ್ ಒನ್ ಆಫ್ ದಿ ಕ್ಯಾಬಿನೆಟ್. ಅವರೇ ಹೇಳಿದಾಗ ಏನು ಹೇಳೋಕಾಗ್ತದೆ?’’ ಎಂದು ಅಸಮಾಧಾನವನ್ನು ಸೂಕ್ಷö್ಮವಾಗಿ ಹೊರಹಾಕಿದರು.
ಒಂಥರಾ ಖುಷಿ ಆಯ್ತು…,
``ಇದರಿಂದ ನನಗೇನೂ ಬೇಸರವಿಲ್ಲ. ನಾನು ನನ್ನ ಕ್ಷೇತ್ರದಲ್ಲಿ ಒಂದು ವರ್ಷ ಅಡ್ಡಾಡ್ಕೊಂಡು ಕೆಲಸ ಮಾಡ್ಕೊಂಡು ಇರೋಕೆ ಅವಕಾಶ ಆಯ್ತು. ಒಂಥರಾ ಖುಷಿ ಆಯ್ತು. ಅಲ್ಲದೆ, ಬರೀ ಚಿಕ್ಕನಾಯಕನಹಳ್ಳಿಗೆ ಮಾತ್ರ ಕೆಲಸ ಮಾಡ್ಕೊತಾರೆ ಅಂತ ಆಡ್ಕೊಳ್ಳೋದು ತಪ್ಪಿತು. ಖಂಡಿತಾ ನಾನು ಹಾಗಿರಲಿಲ್ಲ. ಬಸವರಾಜು ಅಂಥವರು ಯಾರೋ ಕೆಲವರು ಹಾಗೆ ಮಾತಾಡಬಹುದು. ಬೇರೆ ಪಕ್ಷದ ಯಾವ ಎಮ್ಮೆಲ್ಲೆಗಳೂ ನನ್ನ ಬಗ್ಗೆ ಒಂದು ಮಾತಾಡಿರಲಿಲ್ಲ. ಇರೋ ಸಮಸ್ಯೆಗಳನ್ನ ಸರಿಮಾಡೋದು ಬಿಟ್ಟು ಸುಮ್ಸುಮ್ನೆ ಡಿಸ್ಟರ್ಬ್ ಮಾಡಿದ್ರೆ ಹೇಗೆ?’’ ಎಂಎಲ್ಸಿ ಎಲೆಕ್ಷನ್‌ನಲ್ಲಿ ನಮ್ಮಿಂದ ಕೆಲಸ ತೆಗೆದುಕೊಂಡಿದ್ದಾರೆ. ಆ ಸಮಯದಲ್ಲಿ ನಾವು ಕಾರ್ಯಕರ್ತರಿಗೆ ಭರವಸೆಗಳನ್ನ ನೀಡಿರ್ತೇವೆ. ಈಗ ಏಕ್ದಮ್ ನಮ್ಮನ್ನ ತೆಗೆದು ನಂಬಿಕೆಗೆ ಅನರ್ಹ ಮಾಡೋ ಸ್ಥಿತಿಗೆ ತಂದ್ಬಿಟ್ರೆ ಹೇಗೆ?
- ಜೆ.ಸಿ. ಮಾಧುಸ್ವಾಮಿ, ಸಚಿವರು
ಉಸ್ತುವಾರಿ ಬದಲಾವಣೆ: ಪಕ್ಷದ ಏಳಿಗೆಗಾಗಿಯೇ?
ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಅವರನ್ನು ಸೇರಿದಂತೆ ಎಲ್ಲ ಸಚಿವರನ್ನೂ ಅವರ ಸ್ವಂತ ಜಿಲ್ಲೆಗಳ ಉಸ್ತುವಾರಿಯಿಂದ ತೆಗೆದು ಬೇರೆ ಜಿಲ್ಲೆಗಳ ಉಸ್ತುವಾರಿ ವಹಿಸಿರುವುದರ ಹಿಂದೆ ಪಕ್ಷ ಸಂಘಟನೆಯ ದೃಷ್ಟಿ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಬಿಜೆಪಿಯಲ್ಲಿ ವ್ಯಾಪಕವಾಗಿರುವ ಒಳಗಿನವರು ಮತ್ತು ಹೊರಗಿನವರು ಎಂಬ ಬೇಧಭಾವನೆಯಿಂದ ಪಕ್ಷ ಸಂಘಟನೆಗೆ ತೊಂದರೆಯಾಗುತ್ತಿದೆ. ಪಕ್ಷದ ಮೂಲದವರು ತಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬ ಭಾವನೆಯಿಂದ ಪಕ್ಷ ಬಿಡುವ ಬಗ್ಗೆ ಯೋಚಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷದ ಮೂಲ ನಾಯಕರು, ಕಾರ್ಯಕರ್ತರಲ್ಲಿ ಭರವಸೆ ಮೂಡಿಸಲು ಇಂಥ ಕೆಲಸಕ್ಕೆ ಕೈ ಹಾಕಲಾಗಿದೆ ಎಂದೇ ಹೇಳಲಾಗುತ್ತಿದೆ.
ತುಮಕೂರು ಜಿಲ್ಲೆಗೆ ಸಂಬಂಧಿಸಿದಂತೆ ಬಸವರಾಜು ಅವರ ಬಗ್ಗೆ ಪಕ್ಷದ ವಲಯದಲ್ಲೇ ಅಸಮಾಧಾನ ವ್ಯಾಪಕವಾಗಿದೆ. ಪಕ್ಷಕ್ಕೆ ಮುಜುಗರ ತರುವ ಹಲವಾರು ಘಟನೆಗೆಳಿಗೆ ಬಸವರಾಜು ಕಾರಣರಾಗಿದ್ದಾರೆ. ಇದರಿಂದ ಸಹಜವಾಗಿ ಮೂಲ ಬಿಜೆಪಿಗರಿಗೆ ಅಸಮಾಧಾನವಿದೆ. ಸುರೇಶ್‌ಗೌಡ ಅವರು ಕೂಡಾ ಪಕ್ಷದಿಂದ ದೂರ ಸರಿಯುವ ಸೂಚನೆಗಳು ಹೈಕಮಾಂಡ್‌ಗೆ ತಲುಪಿವೆ.
ಇದೆಲ್ಲವನ್ನೂ ಸರಿಮಾಡುವ ದೃಷ್ಟಿಯಿಂದ ಒಳಗಿನವರು, ಹೊರಗಿನವರು ಎಂಬ ಭಾವನೆಯಿಂದ ಪಕ್ಷಕ್ಕೆ ಹೊಡೆತ ಬೀಳುವ ಸೂಚನೆಗಳಿರುವ ಜಿಲ್ಲೆಗಳಿಗೆ ಆರ್‌ಎಸ್‌ಎಸ್ ಸಂಘಟನೆಯ ಮೂಲದವರನ್ನು ಉಸ್ತುವಾರಿಗಳನ್ನಾಗಿ ಮಾಡುವ ಮೂಲಕ ಪಕ್ಷದ ಮೂಲ ನಾಯಕರು, ಕಾರ್ಯಕರ್ತರಲ್ಲಿ ಭರವಸೆ ಮೂಡಿಸುವ ದೃಷ್ಟಿಯಿಂದ ಈ ಕೆಲಸ ಮಾಡಲಾಗುತ್ತಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.