“ಮುಗ್ದ ವೈದ್ಯರಿಗೆ ಕಿರುಕುಳ ನೀಡಬೇಡಿ” “ನನ್ನ ಸಾವಿನ ಬಳಿಕ ನನ್ನ ಗಂಡ, ಮಕ್ಕಳಿಗೆ ಹಿಂಸೆ ಕೊಡಬೇಡಿ” -ಡಾ.ಅರ್ಚನಾ ಶರ್ಮಾ,ಎಂಬಿಬಿಎಸ್, ಎಂಡಿ, ಚಿನ್ನದ ಪದಕ ವಿಜೇತೆ

“ಮುಗ್ದ ವೈದ್ಯರಿಗೆ ಕಿರುಕುಳ ನೀಡಬೇಡಿ” “ನನ್ನ ಸಾವಿನ ಬಳಿಕ ನನ್ನ ಗಂಡ, ಮಕ್ಕಳಿಗೆ ಹಿಂಸೆ ಕೊಡಬೇಡಿ” -ಡಾ.ಅರ್ಚನಾ ಶರ್ಮಾ,ಎಂಬಿಬಿಎಸ್, ಎಂಡಿ, ಚಿನ್ನದ ಪದಕ ವಿಜೇತೆ

“ಮುಗ್ದ ವೈದ್ಯರಿಗೆ ಕಿರುಕುಳ ನೀಡಬೇಡಿ”  “ನನ್ನ ಸಾವಿನ ಬಳಿಕ ನನ್ನ ಗಂಡ, ಮಕ್ಕಳಿಗೆ ಹಿಂಸೆ ಕೊಡಬೇಡಿ”  -ಡಾ.ಅರ್ಚನಾ ಶರ್ಮಾ,ಎಂಬಿಬಿಎಸ್, ಎಂಡಿ, ಚಿನ್ನದ ಪದಕ ವಿಜೇತೆ

“ಮುಗ್ದ ವೈದ್ಯರಿಗೆ ಕಿರುಕುಳ ನೀಡಬೇಡಿ”

“ನನ್ನ ಸಾವಿನ ಬಳಿಕ ನನ್ನ ಗಂಡ, ಮಕ್ಕಳಿಗೆ ಹಿಂಸೆ ಕೊಡಬೇಡಿ”

-ಡಾ.ಅರ್ಚನಾ ಶರ್ಮಾ,ಎಂಬಿಬಿಎಸ್, ಎಂಡಿ, ಚಿನ್ನದ ಪದಕ ವಿಜೇತೆ

ತುಮಕೂರು: “ನಾನು ಯಾವ ರೋಗಿಯನ್ನೂ ಉದ್ದೇಶಪೂರ್ವಕವಾಗಿ ಅಥವಾ ಕರ್ತವ್ಯ ನಿರ್ಲಕ್ಷ್ಯದಿಂದಾಗಿ ಕೊಂದಿಲ್ಲ, ದಯಮಾಡಿ ಮುಗ್ದ ವೈದ್ಯರಿಗೆ ಕಿರುಕುಳ ನೀಡಬೇಡಿ” “ನನ್ನ ಸಾವಿನ ಬಳಿಕ ನನ್ನ ಗಂಡ, ಮಕ್ಕಳಿಗೆ ಹಿಂಸೆ ಕೊಡಬೇಡಿ”, ರಾಜಸ್ತಾನ ರಾಜ್ಯದ ದೌಸಾ ಎಂಬಲ್ಲಿ ರೋಗಿಯ ಸಾವಿಗೆ ವೈದ್ಯರೇ ಕಾರಣ ಎಂದು ಪ್ರತಿಭಟಿಸಿದ ಗುಂಪಿನ ಒತ್ತಡಕ್ಕೆ ಮಣಿದ ಪೊಲೀಸರು ತಮ್ಮ ವಿರುದ್ಧ ಕೊಲೆ ಕೇಸು ದಾಖಲಿಸಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಚಿನ್ನದ ಪದಕ ವಿಜೇತ ಹೆರಿಗೆ ತಜ್ಞೆ ಡಾ. ಅರ್ಚನಾ ಶರ್ಮಾ ಅವರ ಡೆತ್ ನೋಟ್‍ನಲ್ಲಿರುವ ಮುಖ್ಯ ಸಾಲುಗಳಿವು.

ದೌಸಾ ಪಟ್ಟಣದಲ್ಲಿರುವ ಡಾ.ಅರ್ಚನಾ ಶರ್ಮಾ ಹಾಗೂ ಆಕೆಯ ಪತಿ ಡಾ.ಸುನಿಲ್ ಉಪಾಧ್ಯಾಯ ನಡೆಸುತ್ತಿರುವ ಖಾಸಗಿ ಆಸ್ಪತ್ರೆಗೆ  ಹೆರಿಗೆಗೆಂದು ದಾಖಲಾಗಿದ್ದ ಗರ್ಭಿಣಿಯೊಬ್ಬರು ಮಗುವಿಗೆ ಜನ್ಮವಿತ್ತ ಬಳಿಕ ಮಾರ್ಚಿ 29ರಂದು ಅತಿರಕ್ತಸ್ರಾವದಿಂದ ಮರಣಹೊಂದುತ್ತಾರೆ. ಅಪರೂಪಕ್ಕೆ ಎಲ್ಲೋ ಒಂದು ಪ್ರಕರಣದಲ್ಲಿ ಹೀಗೆ ಹೆರಿಗೆ ಬಳಿಕ ಅತಿ ರಕ್ತಸ್ರಾವದಿಂದ ರೋಗಿ ಸಾವನ್ನಪ್ಪುವುದೂ ಉಂಟು ಎಂದು ವೈದ್ಯಶಾಸ್ತ್ರ ಹೇಳುತ್ತದೆ.

ಮಹಿಳೆ ಸಾವಿಗೆ ಸದರಿ ಖಾಸಗಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಆಸ್ಪತ್ರೆ ಮುಂದೆ ಜನರು ಗುಂಪುಗೂಡಿ ಪ್ರತಿಭಟನೆ ನಡೆಸುತ್ತಾರೆ, ಕಾಂಗ್ರೆಸ್ ಆಡಳಿತದಲ್ಲಿರುವ ರಾಜಸ್ತಾನ ರಾಜ್ಯವದು, ವಿರೋಧ ಪಕ್ಷವಾಗಿರುವ ಬಿಜೆಪಿಯ ಕೆಲವು ಸ್ಥಳೀಯ ರಾಜಕೀಯ ಮುಖಂಡರು ಈ ಪ್ರತಿಭಟನೆಗೆ ಕುಮ್ಮಕ್ಕು ನೀಡುವುದಲ್ಲದೇ ಖುದ್ದು ಗದ್ದಲದ ನೇತೃತ್ವವನ್ನೂ ವಹಿಸಿಕೊಂಡಿರುತ್ತಾರೆ. ಸದರಿ ವೈದ್ಯರ ವಿರುದ್ಧ ಕೊಲೆ ಪ್ರಕರಣ ದಾಖಲಿಸುವಂತೆ ಪಟ್ಟು ಹಿಡಿಯತ್ತದೆ ಪ್ರತಿಭಟನಾ ನಿರತ ಗುಂಪು. ಪೊಲೀಸರು ಗುಂಪಿನ ಒತ್ತಡಕ್ಕೆಮಣಿದು ಡಾ.ಅರ್ಚನಾ ಶರ್ಮಾ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಬಿಡುತ್ತಾರೆ.

ಇಡೀ ಪ್ರಕರಣದಲ್ಲಿ ಯಾವುದೇ ಕರ್ತವ್ಯ ನಿರ್ಲಕ್ಷ್ಯ ತೋರಿಲ್ಲ, ಕೆಲವು ಅಪರೂಪದ ಪ್ರಕರಣಗಳಲ್ಲಿ ಆಗುವಂತೆ ಹೆರಿಗೆ ಬಳಿಕದ ರಕ್ತಸ್ರಾವ (ಪಿಪಿಹೆಚ್- ಪೋಸ್ಟ್ ಪಾರ್ಟಮ್ ಹೆಮರೇಜ್) ದಿಂದಾಗಿ ಆ ಮಹಿಳೆ ಸಾವನ್ನಪ್ಪಿದ್ದಾರೆ. ಇಂಥ ಕಾರಣಗಳಿಗಾಗಿ ಮುಗ್ದ ವೈದ್ಯರಿಗೆ ಕಿರುಕುಳ ಕೊಡಬೇಡಿ ಎಂದು ಹಿಂದಿಯಲ್ಲಿ ತಮ್ಮ ಕೈ ಬರಹದಲ್ಲಿ ಡೆತ್ ನೋಟ್ ಬರೆದಿಟ್ಟು ಆಸ್ಪತ್ರೆಯ ತಮ್ಮ ಕೋಣೆಯಲ್ಲೇ ಡಾ.ಅರ್ಚನಾ ಶರ್ಮಾ ನೇಣಿಗೆ ಶರಣಾಗಿದ್ದಾರೆ.

ರೋಗಿಯ ಕಡೆಯವರು ಕೇವಲ ಪ್ರತಿಭಟನೆ ಮಾಡುತ್ತಿದ್ದಾರೆ ಎಂಬ ಕಾರಣಕ್ಕೇ ಪೊಲೀಸರು ವೈದ್ಯರ ವಿರುದ್ಧ ಕ್ರಿಮಿನಲ್ ಹಾಗೂ ಕೊಲೆ ಪ್ರಕರಣ ದಾಖಲಿಸಿಕೊಳ್ಳುವಂತಿಲ್ಲ, ಬದಲಿಗೆ ಮತ್ತೊಬ್ಬ ತಜ್ಞ ವೈದ್ಯರಿಂದ ಇಡೀ ಪ್ರಕರಣದ ಕುರಿತು ಅಭಿಪ್ರಾಯ ಪಡೆಯಬೇಕು, ರೋಗಿಯ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂಬುದು ಮೇಲ್ನೋಟಕ್ಕಾದರೂ ಸಾಬೀತಾಗದ ಹೊರತು ಅಪರಾಧ ಪ್ರಕರಣ ದಾಖಲಿಸಿಕೊಳ್ಳುವಂತಿಲ್ಲ, ಯಾವುದೇ ಸ್ಥಳೀಯ ಅಥವಾ ರಾಜಕೀಯ ಒತ್ತಡಗಳಿಗೆ ಪೊಲೀಸರು ಮಣಿಯಬಾರದು ಎಂದ ಅಲ್ಲಿನ ವೈದ್ಯ ಸಮುದಾಯ ಪ್ರತಿಭಟನೆಗೆ ಮುಂದಾಗುತ್ತದೆ. ಡಾ.ಅರ್ಚನಾ ಶರ್ಮಾ ಆತ್ಮಹತ್ಯೆ ಇಡೀ ರಾಜಸ್ತಾನ ಮಾತ್ರವಲ್ಲಿ ದೇಶದ ಎಲ್ಲೆಡೆಯಿಂದಲೂ ಪ್ರತಿಧ್ವನಿಸಿ ವೈದ್ಯ ಸಮುದಾಯ ಪ್ರತಿಭಟನೆಗೆ ಇಳಿಯುತ್ತದೆ.

ರಾಜಸ್ತಾನ ಮುಖ್ಯಂಮಂತ್ರಿ ಅಶೋಕ್ ಗೆಹ್ಲೋಟ್ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ, ಪರಿಣಾಮ ಡಾ.ಅರ್ಚನಾ ಶರ್ಮಾ ವಿರುದ್ಧ ಪ್ರತಿಭಟನೆಗೆ ಕುಮ್ಮಕ್ಕು ನೀಡಿದ ಬಿಜೆಪಿ ಮುಖಂಡ ಜಿತೇಂದ್ರ ಗೋತ್ವಾಲ್ ಸೇರಿ ಐವರನ್ನು ಬಂಧಿಸಲಾಗಿದೆ, ಜೊತೆಗೆ ಆಕೆಯ ಮೇಲೆ ಐಪಿಸಿ 302ರ ಪ್ರಕಾರ  ಕೊಲೆ ಮೊಕದ್ದಮೆ ದಾಖಲಿಸಿದ ಸ್ಥಳೀಯ ಠಾಣೆಯ ತನಿಖಾಧಿಕಾರಿ ಅಂಕಿತ್ ಚೌಧರಿ ಹಾಗೂ ಡಿವೈಎಸ್‍ಪಿ ಶಂಕರ್ ಲಾಲ್ ಮೀನಾ ಎಂಬಿಬ್ಬರನ್ನು ಅಮಾನತುಪಡಿಸಲಾಗಿದೆ. ಎಸ್‍ ಪಿಯನ್ನು ವರ್ಗಾವಣೆ ಮಾಡಲಾಗಿದೆ.

ಆದರೆ ಇವೆಲ್ಲ ಕ್ರಮಗಳು ಇಬ್ಬರು ಮಕ್ಕಳ ತಾಯಿ, ದಿನವೂ ಹತ್ತಾರು ರೋಗಿಗಳ ಜೀವ ಕಾಪಾಡುತ್ತಿದ್ದ ವೈದ್ಯೆ ತಮ್ಮ ಪತ್ನಿ ಅರ್ಚನಾಳ ಜೀವವನ್ನು ವಾಪಸ್ ತಂದುಕೊಡುವುದಿಲ್ಲ ಎಂದು ಆಕೆಯ ವೈದ್ಯ ಪತಿ ದುಃಖಿಸುತ್ತಾರೆ.

ಈ ಪ್ರಕರಣ ಎಲ್ಲೋ ದೂರದ ರಾಜಸ್ತಾನದ ಪಟ್ಟಣವೊಂದರಲ್ಲಿ ನಡೆದದ್ದು ಎಂದು ಓದಿ ಸುಮ್ಮನಾಗುವಂತಿಲ್ಲ. ದೇಶದ ಯಾವುದೇ ಮೂಲೆಯಲ್ಲಿ ಇಂಥಾ ಘಟನೆ ನಡೆದರೂ, ಕೇವಲ ಮೃತ ರೋಗಿಯ ಸಂಬಂಧಿಕರು ಗದ್ದಲ ಮಾಡುತ್ತಾರೆ, ಪ್ರತಿಭಟಿಸುತ್ತಿದ್ದಾರೆ ಎಂಬುದನ್ನಷ್ಟೇ ಪರಿಗಣನೆಗೆ ತೆಗೆದುಕೊಂಡು ಸಂಬಂಧಿಸಿದ ವೈದ್ಯರ ವಿರುದ್ಧ ಮೊಕದ್ದಮೆಗಳನ್ನು ದಾಖಲಿಸುವಂತಿಲ್ಲ ಎನ್ನುತ್ತಾರೆ ನ

ಗರದ ಭಾರತೀಯ ವೈದ್ಯಕೀಯ ಸಂಘದ ಪದಾಧಿಕಾರಿ ಡಾ.ರಚನಾ ಲಕ್ಷ್ಮೀಕಾಂತ್.

ಈ ಪ್ರಕರಣದ ಕುರಿತು ‘ ಬೆವರ ಹನಿ’ ದಿನಪತ್ರಿಕೆಗೆ ಪ್ರತಿಕ್ರಿಯಿಸಿದ ಅವರು, ಸಾವಿರಕ್ಕೊಂದು ಅಥವಾ ಇನ್ನೂ ಅಪರೂಪದ ಪ್ರಕರಣದಲ್ಲಿ ಹೆರಿಗೆ ಬಳಿಕ ಅತಿರಕ್ತ ಸ್ರಾವದಿಂದ ಗರ್ಭಿಣಿ ಮಹಿಳೆ ಮರಣ ಹೊಂದುವ ಸಾಧ‍್ಯತೆಗಳಿರುತ್ತದೆ. ಈ ಸಾವಿಗೆ ಆಕೆಗೆ ಹೆರಿಗೆ ಮಾಡಿಸಿದ ವೈದ್ಯರೇ ನೇರ ಕಾರಣ ಎಂದು ಮೃತಳ ಸಂಬಂಧಿಕರು ಆಪಾದಿಸಿ ಗದ್ದಲ ಮಾಡುವುದೂ ಸಹಜ ಪ್ರಕ್ರಿಯೆಯಾಗಿರುತ್ತದೆ. ಆದರೆ ವಾಸ್ತವದಲ್ಲಿ ನಡೆದಿರುವುದೇನು ಎಂಬುದನ್ನು ಮತ್ತೊಬ್ಬ ತಜ್ಞ ವೈದ್ಯರಿಂದ ಪರಿಶೀಲನೆ ಮಾಡಿಸುವುದು ಮತ್ತು ಹಾಗೆ ಖಚಿತ ಪಟ್ಟ ನಂತರ ಕ್ರಮ ಜರುಗಿಸುವುದು ಪೊಲೀಸರ ಪ್ರಾಥಮಿಕ ಕರ್ತವ್ಯವಾಗಿರುತ್ತದೆ ಎನ್ನುತ್ತಾರೆ ಸ್ವತಃ ಹಿರಿಯ ಹೆರಿಗೆ ತಜ್ಞರಾಗಿರುವ ಡಾ. ರಚನಾ ಲಕ್ಷ್ಮೀಕಾಂತ್.

ಆಸ್ಪತ್ರೆ ಎದುರು ನೂರಾರು ಜನರನ್ನು ಗುಂಪು ಸೇರಿಸಿ ಪ್ರತಿಭಟನೆ ನಡೆಸಿದ ಸ್ಥಳೀಯ ರಾಜಕೀಯ ಮುಖಂಡನ ಚಿತಾವಣೆಗೆ ಎಂಬಿಬಿಎಸ್ , ಎಂಡಿ ಮಾಡಿ ದಿನವೂ ನೂರಾರು ರೋಗಿಗಳ ಜೀವ ಉಳಿಸುತ್ತಿದ್ದ ತಜ್ಞ ವೈದ್ಯೆ ಅರ್ಚನಾ ಶರ್ಮಾ ನೊಂದು ಜೀವ ಕಳೆದುಕೊಂಡದ್ದು ಮಾತ್ರ ನಿಜಕ್ಕೂ ಶೋಚನೀಯ ಸಂಗತಿ. “ಯಾವ ಮುಗ್ದ ವೈದ್ಯರಿಗೂ ಕಿರುಕುಳ ಕೊಡಬೇಡಿ” ಎಂಬುದು ಮೃತ ಡಾ.ಅರ್ಚನಾ ಶರ್ಮಾ ಅವರ ಡೆತ್ ನೋಟ್‍ನಲ್ಲಿ ಹೈ ಲೈಟ್ ಮಾಡಿರುವ ಸಾಲು. ಛೇ. ಹೀಗಾಗಬಾರದಿತ್ತು, ಮುಂದೆಯೂ ಹೀಗಾಗಬಾರದು.