“ಹಿಂದೂ ಹಿಂದೂ ನಾವೆಲ್ಲಾ ಒಂದು.!?”

ಓಣಿಯೊಳಗೆ ದಡದಡನೆ ಜನ ಓಡಿದರು. ಹತ್ತಾರು ಸೈರನ್ ಗಳು ಒಂದೇ ಬಾರಿಗೆ ಅರಚಿಕೊಂಡು ದಿಕ್ಕು ದಿಕ್ಕಿಗೂ ನುಗ್ಗತೊಡಗಿದವು. ‘ಗಣಪತಿ ಬಪ್ಪಮೋರಿಯಾ, ಭಾರತ್ ಮಾತಾ ಕೀ ಜೈ…’ ‘ಹಿಂದೂ ಹಿಂದೂ ನಾವೆಲ್ಲಾ ಒಂದು’ ಎಂಬ ಘೋಷಣೆ ಮೊಳಗುತ್ತಿತ್ತು. ಅಲ್ಯಾರೋ ಬಡ ಆಟೋ ಚಾಲಕನನ್ನು ಇರಿದು ಕೊಂದ ವರ್ತಮಾನ ಬಂತು. ನಾಗಣ್ಣ ನರಳುತ್ತಾ ಬಂದ ದಿಕ್ಕಿನ ಕಡೆ ಬಾಗಿಲ ಕಿಂಡಿಯಿಂದ ಇಣುಕಿದ ಬಡ ಬಾಲಣ್ಣನ ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ದಿ ನಿಗಮ ಕೊಟ್ಟ ಚರ್ಮ ಕುಟೀರ ಧಗಧನೆ ಉರಿಯುತ್ತಿತ್ತು. ಉರಿಜ್ವಾಲೆಯ ಬೆಳಕಿನಲ್ಲಿ ದೇವರ ವೈಭವದ ಮರವಣಿಗೆ ಸಾಗಿತ್ತು…..

“ಹಿಂದೂ ಹಿಂದೂ ನಾವೆಲ್ಲಾ ಒಂದು.!?”

ಕತಾ ಸರಿತ್ಸಾಗರ

ಎನ್. ರವಿಕುಮಾರ್

 


    “ಗಂಗವ್ವ… ಗಂಗವ್ವ… ಅ… ಅ… ನಿನ್ ಗಂಡನ್ನಾ ಪೊಲೀಸ್ನೋರು ಹಿಡ್ಕೊಂಡೊದ್ರು….” ಒಂದೇ ಉಸಿರಿಗೆ ದಮ್ಮು ಕಟ್ಟಿಕೊಂಡು ಓಡೋಡಿ ಬಂದ ಫಾರೆಸ್ಟರ್ ಆಂಜನಪ್ಪ ವಿಷಯ ಮುಟ್ಟಿಸಿದವನೇ ಜಗುಲಿಗೊರಗಿ ಕುಸಿದು ಕುಂತುಬಿಟ್ಟ. ಏನಾತೋ? ಎತ್ತಾತೋ..? ಮೂರು ಹೆಜ್ಜೆಗೆ ಮುಗಿದು ಹೋಗುವ ಗುಡಿಸಲಿನಿಂದ ಓಣಿಗೆ ಜಿಗಿದ ಗಂಗವ್ವ ಕಂಗಾಲಾಗಿ “ಏನಣ್ಣ, ನನ್ನ ಗಂಡನ್ನಾ ಯಾಕ್ ಹಿಡ್ಕೊಂಡೊದ್ರು ಸೂಳೆಮಕ್ಳು …, ಅಂತದ್ದೇನು ಮಾಡ್ದ ನನ್ ಗಂಡ? ಬೆಳಗ್ಗೆನೆ ರಂಪಿಗೆ, ಉಳಿ ಕೈಚೀಲ ತಗೊಂಡು ಹೋದೊರು, ಏನಾತು ಹೇಳಣ್ಣ…” ಗಂಗವ್ವ ಗಂಗೆ ಹರಿಸುತ್ತಾ ಕೇರಿ ಕೊಂಪೆಯಲ್ಲಾ ಒಂದು ಮಾಡಿ ಚೀರಾಡತೊಡಗಿದಳು. ನೀರು ಕುಡಿದು ಸುಧಾರಿಸಿಕೊಂಡು ಕುಂತಿದ್ದ ಫಾರೆಸ್ಟರ್ ಆಂಜಿನಪ್ಪನ ಮುಖದಲ್ಲಿ ಭಯ ಹೋಗಿರಲಿಲ್ಲ. ಯಾವ ಹೊತ್ತಿನಲ್ಲಿ ಪೊಲೀಸರು ಬಂದು ತನ್ನ ಹೆಗಲಿಗೆ ಕೈ ಹಾಕಿ ಬಿಟ್ಟಾರೋ, ಅಂತ ಕತ್ತು ಸುತ್ತ ಗಿರಿ ಗಿರಿ ತಿರುಗಿಸುತ್ತಲೇ ಉಗುಳು ನುಂಗುತ್ತಲೆ ಉಬ್ಬರಿಸುತ್ತಿದ್ದ . “ನಾನು ಗಾರ್ಡನ್ ಏರಿಯಾ ಕಡಿಕೋಗಿ ಸಿವನೇ ಅಂತ ಒಂದು ಸೀಸ ಹೆಂಡ ಕುಡ್ಕೊಂಡು ವಿನಾಯಕ ಟಾಕೀಸ್ ತವ ಇರೋ ಬಾಲನ ಚಪ್ಲಿ ಅಂಗಡಿಗೆ ಬಂದು ಕುಂತ್ಕೊಂಡಿದ್ದೇ ಕಣವ್ವ, ನಾಗಣ್ಣ ಚಪ್ಲಿ ಹೊಲೀತಿದ್ದ , ಪಾಪ…!, ‘ಬಾ ನಾಗಣ್ಣ ಹೊತ್ತಾತು ಮನೀಕಡಿಕೆ ಹೋಗಾನ’ ಅಂದೆ. ‘ಇರ್ಲಾ ಆಂಜಿನಿ, ಇನ್ನೊಂದೆರೆಡು ಜೊತೆ ಅವೆ ಹೊಲ್ದಾಕಿ ಬತ್ತಿನಿ’ ಅಂದ ನಾಗಣ್ಣ, ಅಷ್ಟರೊಳಗೆ ಅದೆಲ್ಲಿದ್ರೋ ಕಣವ್ವ, ಈ ಪಾಪ್ರು ನನ್ಮಕ್ಳು ಪೊಲೀಸ್ನೋರು! ಬಂದ್ ಬಂದೋರೆ ಅಂಗಡಿ, ಮುಂಗಟ್ಟನ್ನೆಲ್ಲಾ ಬಾಗ್ಲಾಕ್ಸಿ ಸಿಕ್ಕುಸಿಕ್ಕೊದರ್ ನೆಲ್ಲಾ ಬಡಿದು ಓಡಾಡುಸುದ್ರು . ಕೈಗೆ ಸಿಕ್ಕೊದ್ನೊರೆಲ್ಲಾ ವ್ಯಾನಿಗೆ ತುಂಬ್ಕೋಂಡ್ ಹೋದ್ರು . ನಾಗಣ್ಣನ್ನ ಕೈಯಾಗಿದ್ದ ರಂಪಿಗೆ ಸಮೇತ ಹಿಡ್ಕೊಂಡ್ ಓಗ್ಬುಟ್ರು ಕಣವ್ವ… ಅ… ನಾನು ಖಾಕಿ ಪ್ಯಾಂಟ್ ಹಾಕ್ಕೊಂಡಿದ್ನಲ್ಲ ಅದ್ಕೆ ನನ್ನ ಮುಟ್ಲಿಲ್ಲ. ಹೆಂಗೊ ತಪ್ಪಿಸಿಕೊಂಡು ಓಡಿ ಬಂದೆ. ಲಷ್ಕರ್ ಮೊಹಲ್ಲಾದಾಗೆ ಸಾಬ್ರುಗೂ, ಹಿಂದೂಗಳಿಗೂ ಜಗಳ ಆತಂತೆ. ಅದ್ಕೆಯಾ ಪೊಲೀಸ್ರು ಬಾಗ್ಲಾಕುಸ್ತಾವ್ರೆ” ಫಾರಸ್ಟರ್ ಆಂಜನಪ್ಪ ಪಟ್ಟಣದ ಚಿತ್ರಕಥೆಯನ್ನು ಸವಿಸ್ತಾರವಾಗಿ ಬಿಚ್ಚಿಟ್ಟ.


       ಅಂಜಿನಪ್ಪ ಫಾರೆಸ್ಟ್ ಇಲಾಖೆಯಲ್ಲಿ ಗಾರ್ಡು. ಆದರೆ ಹಟ್ಟಿಗೆಲ್ಲ ಇವನೆ ಫಾರೆಸ್ಟರ್ ಕಂ ರೇಂಜರ್ ಕಂ ಡಿ ಎಫ್ ಓ. ಹಾಗಾಗಿ ಅವನು ಎಲ್ಲರ ಬಾಯಲ್ಲಿ ‘ಫಾರಸ್ಟರ್ ಆಂಜಿನಪ್ಪ’ ಆಗಿಬಿಟ್ಟಿದ್ದ. ಸೋಕಿ ಮನುಷ್ಯ. ಹಟ್ಟಿಯೊಳಗೆ ಇರೋದೆ ಕಮ್ಮಿ. ಒಂದು ಸಾರಿ ಕಾಡು ಸೇರ್ಕಂಡ್ರೆ ಹಟ್ಟಿ ಕಡೆ ತಲೆ ಹಾಕೋದು ಸಂಬಳ ಆದಾಗಲೆ. ಬಂದ್ರೆ ಕುಡ್ಕೊಂಡು ಎಲ್ಲರನ್ನು ಲೇವಡಿ ಮಾಡಿಕೊಂಡು ಕಾಲ ಕಳೆದು ಹೆಂಡತಿ ಮೇಲೆ ಜಗಳ ಮಾಡ್ಕೊಂಡು ಮತ್ತೆ ಕಾಡು ಸೇರಿಕೊಂಡು ಬಿಡೋನು. ‘ಏನಾಡ್ಮಲಪ್ಪ.., ನನ್ನ ಗಂಡ ಒಬ್ರಿಗೆ ಅಂದೋರಲ್ಲ, ಆಡ್ದೋರಲ್ಲ, ಅವ್ರರನ್ನೆ ಈ ಪೊಲೀಸ್ರು ಮುಂಡೆ ಮಕ್ಳು ಹಿಡ್ಕೊಂಡೊಗವ್ರೆ…, ಹಾಳಾದ್ ಈ ಗಣಪತಿ ಹಬ್ಬ ಯಾಕಾರ ಬತ್ತದೋ, ನಮ್ಗೆ ಬಾಳು ಕೂಳು ಕೊಡೋದಿಲ್ಲ…’ ಗಂಗವ್ವ ಒಂದೇ ಸಮನೆ ಐದು ಮಕ್ಕಳನ್ನು ಎದೆಗವುಚಿಕೊಂಡು ಕಣ್ಣೀರಿಡುತ್ತಿದ್ದಳು. ಸೂರ್ಯ ದಿಕ್ಕು ದಾರಿ ಹಿಡಿದು ಬಹಳ ಹೊತ್ತಾಗಿತ್ತು. ಈ ಪಟ್ಟಣಕ್ಕೆ ಗಣಪತಿ ಹಬ್ಬಎಂದರೆ ಊರಿನ ಶಾಂತಿ, ಸೌಹಾರ್ದತೆಗೆ ಕೊಳ್ಳಿ ಬಿತ್ತೆಂದೆ ಅರ್ಥ. ಹಿಂದೂ ಮಹಾಸಭಾ ಸಮಿತಿಯ ಗಣಪತಿ ಗೆ ‘ಕ್ಯಾತೆ ಗಣಪತಿ’ ಎಂದು ಬಿರುದಾಂಕಿತಗೊಂಡು ಬಹಳ ವರ್ಷಗಳೇ ಆಗಿ ಹೋಗಿದ್ದವು. ಕೊಲೆ, ಲಾಠಿ ಚಾರ್ಜು, ಕರ್ಪ್ಯೂ, ಹಿಂದೊಮ್ಮೆ ಗೋಲಿಬಾರ್ ನ ಇತಿಹಾಸವು ಈ ಗಣಪತಿಗೆ ಖ್ಯಾತಿ ತಂದುಕೊಟ್ಟಿತ್ತು. ಕಲಾವಿದನ ಕುಸುರಿಯಲ್ಲಿ ಮೈದಳೆದು ಮಂದಸ್ಮಿತವಾಗಿ ಕುಳಿತ ಗಣಪತಿಯನ್ನು ಭಕ್ತಗಣ ರೌರವ ಜನ್ಮಾಂತರ ಸೇಡು, ಆಕ್ರೋಶ – ಹಗೆಯ ಮೂರ್ತಿಯನ್ನಾಗಿಸಿ ಹೊತ್ತು ಮೆರೆಯುತ್ತಿತ್ತು. ಊರು ತುಂಬಾ ಪೊಲೀಸ್ ವ್ಯಾನು, ಜೀಪುಗಳು ಓಡಾಡತೊಡಗಿದ್ದವು.


     ಓಣಿಯ ದಬ್ಬೆ ಗೋಡೆಗೊರಗಿ ಗಂಡ ಬಂದಾನೇನೋ ಎಂದು ಗಂಗವ್ವ ಇಣುಕಿ ದಾರಿ ದಾರಿ ನೋಡುತ್ತಲೆ ಇದ್ದಳು. ಗಂಡಿಗೆ ಗಂಡಾಗಿ, ಹೆಣ್ಣಿಗೆ ಹೆಣ್ಣಾಗಿ ದುಡಿದು ಸಂಸಾರ ಕಟ್ಟಿದವಳು ಗಂಗವ್ವ. ಮೇಗಲಟ್ಟಿಯ ಗಣಪತಿ ಪೆಂಡಾಲಿನಲ್ಲಿ ನಿಶ್ಯಬ್ದ. ಕೋಳಿಗಳನ್ನು ಗೂಡಿಗೆ ಗುಡ್ಡೆ ಹಾಕಿ ಕೌಚಿದಂತೆ ಮಕ್ಕಳನ್ನು ಮಲಗಿಸಿದ್ದಾಗಿದೆ. ಸೊರ ಸೊರ ಅಳುತ್ತಾ, ತನಗೆ ತಾನೆ ಸಮಾಧಾನ ಪಡಿಸಿಕೊಳ್ಳುತ್ತಾ ದಾರಿ ಕಾಯುತ್ತಲೆ ಇದ್ದಳು. ಕಲ್ಲು ಕರಗುವ ಹೊತ್ತು. ದೂರದಲ್ಲಿ ನಿರ್ಜನ ರಸ್ತೆಯಲ್ಲಿ ನೆರಳೊಂದು ಅಲುಗಾಡಿದಂತಾಯಿತು. ಮಸುಕು ಮಸುಕು ಸರಿದಂತೆ ಚಿತ್ರ ಸ್ಪಷ್ಟವಾಗುತ್ತಾ ಹೋಯಿತು, ಗಂಗವ್ವನ ಮುಖದ ಗೆರೆಗಳು ಸಡಿಲಗೊಂಡವು. ನಾಗಣ್ಣ ಓಣಿಯ ತಲೆ ಬಾಗಿಲಿಗೆ ಬಂದು ನಿಂತಿದ್ದ, ಊರಲ್ಲಿ ಗಲಾಟೆ ಕಂಟ್ರೋಲ್ ಗೆ ಬಂದ ನಂತರ ಪೊಲೀಸರು ನಾಗಣ್ಣನನ್ನು ಬಿಟ್ಟು ಕಳುಹಿಸಿದ್ದರು. ‘ನಿನ್ಯಾಕೆ ಹಿಡ್ಕೊಂಡೊಗಿದ್ರು..?’ ನೀನೇನು ಮಾಡ್ದೆ? ಗಂಗವ್ವ ವಿಚಾರಣೆ ಶುರು ಮಾಡಿದಳು ‘ನನ್ನ ಪಾಡಿಗೆ ನಾನು ಮೋರಿ ಕಟ್ಟೆ ಮೇಲೆ ಗಿರಾಕಿದು ಚಪ್ಲಿ ಹೊಲಿತಿದ್ದೆ. ಪೊಲೀಸ್ರು ಬಂದು ಬಂದೋರೆ ಜನನೆಲ್ಲಾ ಓಡಾಡ್ಸೋಕೆ ಶುರು ಮಾಡಿದ್ರು, ಈ ಗಲಾಟೆಯೊಳಗೆ ನಾನು ಮನೆ ಕಡೀಕೆ ಓಡು ಬತ್ತಿದ್ದೆ, ಮೊದ್ಲೆ ಕಾಲಾಗಲ್ಲ ನಂಗೆ, ನನ್ನ ಕೈಯಲ್ಲಿದ್ದ ರಂಪಿಗೆ ನೋಡಿ ನಾನೇ ಗಲಾಟೆ ಮಾಡೊಕೆ ಬಂದೋನು ಅಂತ ಓಡಿಸ್ಕೊಂಡು ಬಂದು ಹಿಡ್ಕೊಂಡು ಹೋದ್ರು. ಆಮೇಲೆ ನಾನು ಗಲಭೆಕೋರನಲ್ಲ, ಈತರಕ್ಕೆ ಈತರ ಅಂತ ಹೇಳಿದ್ಮೇಲೆ ಜೇಬಗಿದ್ದ ಕಾಸು ಕಿತ್ಕೊಂಡು ಬುಟ್ಟು ಕಳ್ಸಿದ್ರು..’ ನಾಗಣ್ಣ ಹೆಂಡತಿಯ ವಿಚಾರಣೆಯನ್ನು ಸವಿಸ್ತಾರವಾಗಿ ಎದುರಿಸಿದ ‘ ಹೊಡುದ್ರಾ..?! ‘ಹೇ ಹಂಗೇನಿಲ್ಲ ಕಣೆ, ಸುಮ್ನೆ ತಳ್ಳಾಡಿದ್ರು…’ ಉಸಿರುಗಟ್ಟಿ ಸಣ್ಣಗೆ ನರಳುತ್ತಾ ಪಕ್ಕೆ ಹಿಡಿದುಕೊಂಡ ನಾಗಣ್ಣ ಒಲೆ ಕಡೆ ನೋಡಿದ. ತಣ್ಣಗೆ ಒಲೆಯೂ ಮಲಗಿತ್ತು. ತನ್ನ ಕಾಲ ಬುಡದಲ್ಲಿದ್ದ ಚೊಂಬನ್ನು ಎತ್ತಿ ಗಟಗಟನೆ ಕುಡಿದು ಗೋಣಿ ಚೀಲ ಮೇಲೆಳೆದುಕೊಂಡು ಹೊಟ್ಟೆಗೆ ಕಾಲು ಕವುಚಿಕೊಂಡು ಮಲಗಿದ್ದ ಮಕ್ಕಳ ಮೈದಡುವುದತ್ತಾ ‘ಪರಮಾತ್ಮಾ…..’ ದೊಡ್ಡ ನಿಟ್ಟುಸಿರು ಉಯ್ಯುತ್ತಾ ಮೂಲೆಗೆ ಒರಗಿದ.


     ಮತ್ತೆ ಪೊಲೀಸರು ಯಾವ ಹೊತ್ತಿನಲ್ಲಿ ಬಂದಾರೋ,ಏನೋ..? ಎಂಬ ಆತಂಕದಲ್ಲೇ ಜಾಕಾಯಿ ಪಟ್ಟಿಗೆಯ ಮೂರು ರೀಪಿಸಿನ ಸೊಂಟ ಮುರಿದ ಬಾಗಿಲನ್ನು ಮುಂದಕ್ಕೆ ತಳ್ಳಿದ ಗಂಗವ್ವ ಮೋಟು ಗೋಡೆಗೆ ಮೈ ಕೊಟ್ಟು ಛಾವಣಿಯ ಕಂಡಿಯಲ್ಲಿ ಸ್ವಚ್ಚಂದವಾಗಿ ಕಾಣುತ್ತಿದ್ದ ಆಗಸಕ್ಕೆ ದಿಟ್ಟಿಸಿ ಕುಳಿತಳು. 


    ‘ರಾಜಾಧಿರಾಜ, ರಾಜಾ ಗಂಭೀರ, ವೀರಾಧಿ ವೀರ, ವಿರಾಟ ಕುಲತಿಲಕ ವಿರಾಟನಗರ ಮಹಾರಾಜ ವಿಜಯೀ ಭವಃ..ವಿಜಯೀ ಭವಃ……’ ವಿರಾಟನಗರ ಸಾಮ್ರಾಜ್ಯವೊಂದು ವೈಭೋಗದ ದರ್ಬಾರು ಆರಂಭಗೊಂಡಿತು. ‘ಮಂತ್ರಿಗಳೆ.., ನಮ್ಮ ರಾಜ್ಯದ ಕ್ಷೇಮ ಸಮಚಾರವನ್ನು ಹೇಳುವಂತಾವರಾಗಿ..’ ‘ಅಪ್ಪಣೆ ಪ್ರಭು’ ‘ಪ್ರಭುಗಳೇ, ಕಾಲ ಕಾಲಕ್ಕೆ ಮಳೆ, ಬೆಳೆಯಾಗಿ ಪ್ರಜೆಗಳು ತಿಂದುಂಡು ಸುಖವಾಗಿದ್ದಾರೆ. ಹಾಲು ಹಳ್ಳವಾಗಿ ಹರಿದು, ತುಪ್ಪ ಕೊಪ್ಪರಿಗೆಯಲ್ಲಿ ಸೋರುತ್ತಿದೆ. ಕಳ್ಳ-ಕಾಕರು ಅಡವಿ ಸೇರಿ ಜನ ನೆಮ್ಮದಿಯಿಂದ ನಿಮ್ಮ ಸ್ಮರಣೆಯಲ್ಲಿದ್ದಾರೆ. ಕಷ್ಟಗಳೆಂಬುದು ಅಷ್ಟ ದಿಕ್ಕುಗಳ ಪಾಲಾಗಿ ಸುಖ, ಸಮೃದ್ದಿ ರಾಜ್ಯದಲ್ಲಿ ಕಾಲು ಮುರಿದುಕೊಂಡು ಬಿದ್ದಿದೆ. ಹಸಿದು ನೊಂದವರಿಲ್ಲ, ಬಸವಳಿದು ಬೆಂದವರಿಲ್ಲ, ನಿಮ್ಮ ಆಡಳಿತದ ಸಕಲವೂ ರಾಜ್ಯವನ್ನು ಸುಭಿಕ್ಷವಾಗಿರಿಸಿದೆ. ’ಬೇಷ್..! ‘ಯಾರಲ್ಲಿ?’ ‘ಅಪ್ಪಣೆ ಪ್ರಭು’ ‘ರಾಜನರ್ತಕಿಯನ್ನು ಕರೆ ತನ್ನಿ…’ ದರ್ಬಾರಿನಲ್ಲಿ ನೃತ್ಯ ಮುಗಿಯಿತು. ವೈಭವೋಪೋಷಿತ ರಾಜ ದರ್ಬಾರಿನಲ್ಲಿ ವಜ್ರ ವೈಢರ್ಯ, ನವರತ್ನ ಕೀರೀಟತೊಟ್ಟ ರಾಜ ವಿರಾಟರಾಯ ಪಟ್ಟದ ರಾಣಿಯನ್ನು ಪಕ್ಕದಲ್ಲಿ ನಿಲ್ಲಿಸಿಕೊಂಡು ಸಾಲುಗಟ್ಟಿ ನಿಂತ ಪುರದ ಜನರಿಗೆ ಸೇರಿನಲ್ಲಿ ಚಿನ್ನ, ಮುತ್ತು, ರತ್ನಗಳು, ದವಸ-ಧಾನ್ಯಗಳ ಅಳೆದಳೆದು ದಾನಂಗೈಯುತ್ತಿದ್ದರು.


ಮಗ್ಗಲು ಮನೆ ಕೆಂಪವ್ವನ ಕೋಳಿಗಳು ರೆಕ್ಕೆ ಬಡಿದು ಮೈಮುರಿದವು. ಕೂಗಳತೆಯಲ್ಲಿನ ಮಿನಾರಿನ ಮೇಲೆ ನಮಾಜು ಕೂಗಿತು. ವಿರಾಟರಾಯನ ಪಕ್ಕದಲ್ಲಿ ಪಟ್ಟದ ರಾಣಿಯಂತೆ ನಿಂತಿದ್ದ ಗಂಗವ್ವನಿಗೆ ಬೆಚ್ಚು ನೀರು ಬಡಿದಂತಾಯಿತು. ಪ್ರತಿ ಮರ್ನಾಮಿ ಹಬ್ಬಕ್ಕೆ ತಪ್ಪದೆ ನಡೆಯುವ ಕುರುಕ್ಷೇತ್ರ ಪೌರಾಣಿಕ ನಾಟಕದಲ್ಲಿ ನಾಗಣ್ಣನಿಗೆ ವಿರಾಟರಾಯನ ಪಾತ್ರ ಖಾಯಂ. ಮಟ್ಟುಗಳ ಮೇಲೆ ಮಟ್ಟು ಹಾಕುತ್ತಾ ಹಾರ್ಮೋನಿಯಂ ಮನೆಗಳನ್ನಿಡಿದರೆ ನಾಗಣ್ಣನಿಗೆ ನಾಗಣ್ಣನೇ ಸಾಟಿ. ಎಲ್ಲಿಯ ನಾಗಣ್ಣ? ಎಲ್ಲಿಯ ವಿರಾಟರಾಯ? ಕಣ್ಣು ಉಜ್ಜಿಕೊಂಡ ಗಂಗವ್ವ ಮೂಲೆ ಕಡೆ ನೋಡಿದಳು ಪಟ್ಟ. ಪಲ್ಲಂಗ, ಕಿರೀಟ, ಕವಚ, ಕಂಠಿಹಾರ, ಬಹುಪರಾಕುಗಳಿಲ್ಲದ ವಿರಾಟರಾಯ ಗೋಣಿಚೀಲದೊಳಗೆ ಕೈ –ಕಾಲು ತೂರಿಕೊಂಡು ಕೆಮ್ಮುತ್ತಿದ್ದ.


**
     ಮೂರು ದಿನದೊತ್ತಾತು, ನಡೆದದ್ದೆಲ್ಲಾ ತಣ್ಣಗಾದಂತೆ ಕಾಣುತ್ತಿತ್ತು. “ಏನಯ್ಯ ವರ್ಷಕ್ಕೊಂದು ಹಬ್ಬ, ಮಕ್ಳಿಗೆ ಬಟ್ಟೆಬರೆಯಂತೂ ತರಕಾಗಿಲ್ಲ, ಇವತ್ತಾದ್ರೂ ಹೊಟ್ಟಿಗೆ ಏನಾದ್ರೂ ಹೊಂಚ್ಕೊಂಡ್ ಬಾ.., ಮೂರು ದಿನದ್ ಹೊತ್ತಾತು ಅಗ್ಳು ಅನ್ನ ಕಾಣ್ದೆ….” ಗಂಗವ್ವ ಗಂಡನಿಗೆ ಸೋತ ಸ್ವರದಲ್ಲಿ ಹೇಳಿದಳು. ಈಚಲ ಚಾಪೆ ಸರಿದಾಡಿತು. ಸಣ್ಣಗೆ ಕೊರಗುತ್ತ ಮಗ್ಗಲು ಹೊರಳಿಸಿದ ಕೂಸ ಕಂಡೊಡನೆ ದಿಗಿಲು ಬಿದ್ದವಳಂತೆ ಎದೆಗವುಚಿಕೊಂಡು ತಟ್ಟಿ ಮತ್ತೆ ಮತ್ತೆ ನಿದ್ದೆಗೆ ದೂಡಿದಳು. ಸಾಲು ಮಲಗಿದ್ದ ಮಕ್ಕಳಲ್ಲಿ ಕೊನೆಯ ಕೂಸು ಇದು. ಎದ್ದರೆ ‘ಅವ್ವ, ಅನ್ನ…’ ಎನ್ನುತ್ತದೆ. ಎಂದೋ ತೊಳೆದಿಟ್ಟ ಮಡಿಕೆ ಸಾಲಿನಲ್ಲಿ ಇಲಿಗಳ ಸದ್ದು ಕೇಳಿತ್ತು. ಒಲೆ ಬೂದಿಯೊಳಗೆ ಬೆಕ್ಕು ಮುದುಡಿ ಮಲಗಿತ್ತು. ತೂತುಕಂಡಿಯ ತಗಡು ಸೀಳಿ ಒಳಗಿಳಿದ ಸೂರ್ಯನ ಕೋಲು ಬೆಳಕಿನಲ್ಲಿ ಗುದ್ದಲಿ, ಮಂಕರಿಗೆ ಜೋಡಿಸಿಕೊಂಡು ಹೊರಟ ನಾಗಣ್ಣ ‘ಸಂಜೆಗೆ ಬೇಗ ಬತ್ತಿನಿ’ ಎಂದು ಗಂಗವ್ವನಿಗೆ ಮಾತು ಕೊಟ್ಟ. ಅಷ್ಟರಲ್ಲಾಗಲೆ ಬಾಮೈದ ಚಿಕ್ಕಾಂಜಿನಿ ಗೊಬ್ಬರದ ಹನುಮಣ್ಣ ಲಾರಿ ಜೊತೆ ಕಾದಿದ್ದ. ನಾಗಣ್ಣ ಸಗಣಿಗೊಬ್ಬರದ ಲೋಡಿಗೆ ಲಾರಿ ಹತ್ತಿ ಹೋಗಿದ್ದಾಯ್ತು. ಲಾರಿ ಬರ್ರೆನೆ ಬೂದಿ ಹಾರಿಸಿಕೊಂಡು ಹೋದ ಸದ್ದು ಓಣಿಮನೆಯ ಗಂಗವ್ವನ ಕಿವಿಗೆ ಸಣ್ಣದಾಗುವವರೆಗೂ ಕೇಳುತ್ತಲೆ ಹೋಯಿತು. ‘ಇವತ್ತು ನಿಮ್ಮಪ್ಪ ಲಾರಿಗೊಗವ್ರೆ, ಬೈಗಾನುಕ್ಕೆ ಹೊಸಬಟ್ಟೆ ತಕ್ಕೊಂಡು ಬತ್ತಾರೆ. ಗೊತ್ತಾ? ಕರಗಡುಬು ಮಾಡಿ ಗಣಪತಿ ನೋಡಾಕ್ ಹೋಗಾಣ….” ಸೆರಗ ಜುಂಗ ಹಿಡಿದು ಜಗ್ಗಿದ ಕುಡಿಗಳಿಗೆ ಗಂಗವ್ವ ಮತ್ತದೆ ಕಥೆ ಹೇಳುತ್ತಿದ್ದಳು. ಮುಂಬಾಗಿಲಿಗೆ ಸಗಣಿ ಸಾರಿಸಿ, ರಂಗೋಲಿ ಹಾಕಿ ಜೋತಾಡುತ್ತಿದ್ದ ತಲೆಬಾಗಿಲ ಗಳಕ್ಕೆ ಎರಡೆಲೆ ಮಾವಿನಸೊಪ್ಪ ಸಿಕ್ಕಿಸಿದ್ದಾಯಿತು. ‘ಓಬವ್ವ ಮಕ್ಳು ನೋಡ್ಕಳೆ, ಈಗ ಬಂದ್ ಬುಡ್ತಿನಿ….’ ಮಂಕರಿ ಕಂಕಳಿಗಿರಿಸಿಕೊಂಡು ಸಾಹುಕಾರರು ಮನೆ ಕೊಟ್ಟಿಗೆ ದಾರಿ ಹಿಡಿದಳು ಗಂಗವ್ವ. ಓಬವ್ವ ನಾಗಣ್ಣನ ಅಣ್ಣನ ಮಗಳು ಊರಿಂದ ಬಂದವಳು ಐವರಲ್ಲಿ ಆರನೆಯವಳಾಗಿ ದೊಡ್ಡಮಗಳಾಗಿಯೇ ಇಲ್ಲಿಯೇ ಉಳಿದು ಬಿಟ್ಟಿದ್ದಳು.


    ಊರ ತುಂಬಾ ಗಣಪತಿ ಪೆಂಡಾಲುಗಳು ಝಗಮಗಿಸುತ್ತಿದ್ದವು. ಈ ಗಣಪತಿ ಕಾಲದಲೇ ಹಟ್ಟಿ ಎರಡು ಓಳಾಗಿತ್ತು. ಕೆಳಗಲಟ್ಟಿಯಲ್ಲಿ ರಾಮದಾಸಣ್ಣನ ಗಣಪತಿ ಇದ್ದರೆ. ಮೇಗಲಟ್ಟಿಯಲ್ಲಿ ಕೌನ್ಸಿಲರ್ ಚಂದ್ರಣ್ಣನ ನೇತೃತ್ವದಲ್ಲಿ ಗಣಪತಿ ಬಂದು ಕುಂತಿದ್ದ. ಅಂಬೇಡ್ಕರ್ ಯುವಕ ಸಂಘದ್ದೇ ಗಣಪತಿ ಉಸ್ತುವಾರಿ! ಅಡಿಕೆ ಮರಕ್ಕೆ ಕಟ್ಟಿದ್ದ ಮೈಕ್ ನಲ್ಲಿ ‘ಸಂಪತಿಗೆ ಸವಾಲು’ ಸಿನಿಮಾದ ಸ್ಟೋರಿ ಹಾಕಲಾಗಿತ್ತು. ಕೇರಿಗೆ ಕೇರಿನೇ ಅಣ್ಣಾವ್ರ ಅಭಿಮಾನಿಗಳು. ಜಗುಲಿ ಮೇಲೆ ಕುತ್ಕೊಂಡು ಸ್ಟೋರಿ ಕೇಳ್ತಿದ್ರು. ಭದ್ರನ ಪಾತ್ರದ ರಾಜಕುಮಾರ್ ಅವರ ಒಂದೊಂದು ಡೈಲಾಗಿಗೂ ಕೇಕೆ, ಸಿಳ್ಳೆ ಬೀಳುತ್ತಿದ್ದವು. ರಾಮದಾಸಣ್ಣ –ಚಂದ್ರಣ್ಣ ನಡುವೆ ಗಣಪತಿ ಮೆರವಣಿಗೆಯೂ ಪೈಪೋಟಿ ಮೇಲೆ ನಡೆಯುತ್ತಿದ್ದ ಕಾಲವದು. ಹಿಂದೊಂದು ದಿನ ಗಾಡಿ ಕಣಿಗೆ ಕಿತ್ತುಕೊಂಡು ಹೊಡೆದಾಟವೂ ನಡೆದಿತ್ತು. ಅವತ್ತಿನಿಂದ ಹಟ್ಟಿ ಎರಡು ಹೋಳಾಗಿದ್ದೋ. ಪಟ್ಟಣದ ಈ ‘ಕ್ಯಾತೆ ಗಣಪತಿ’ ಧಾರ್ಮಿಕ, ಸಾಂಸ್ಕೃತಿಕ, ರಾಜಕೀಯ ಎಲ್ಲವನ್ನೂ ನಿರ್ವಹಿಸುತ್ತದೆ. ದೊಂಬಿಯಾದ ಕಾರಣಕ್ಕಾಗಿ ರಾಜಬೀದಿಯಲ್ಲೇ ಕೈ, ಕಾಲು ಮುರಿದು ಕೊಂಡ ಗಣಪತಿಯನ್ನು ಪೊಲೀಸರೆ ಎಷ್ಟೋ ಬಾರಿ ತುಂಗಾ ನದಿಗೆ ತಳ್ಳಿ ಬಂದ ಇತಿಹಾಸಗಳಿವೆ. ಅವತ್ತೂ ಕೂಡ ಪಟ್ಟಣದ ನಡು ಸರ್ಕಲ್ ನಲ್ಲಿ ಕ್ಯಾತೆ ಗಣಪತಿ ಮರವಣಿಗೆಯಲ್ಲಿ ಚಪ್ಪಲಿಯೊಂದು ತೂರಿ ಬಂತು ಎಂಬ ಕಾರಣಕ್ಕೆ ಗಲಭೆ ಭುಗಿಲೆದ್ದಿತು. ಗುಡಿಸಲುಗಳಿಗೆ, ಪೆಟ್ಟಿಗೆ ಅಂಗಡಿಗಳಿಗೆ, ಹಣ್ಣು-ಹಂಪಲು ಮಾರುವ ತಳ್ಳುಗಾಡಿಗಳಿಗೆಲ್ಲಾ ಬೆಂಕಿ ಹಚ್ಚಲಾಯಿತು, ಸಿಕ್ಕ ಸಿಕ್ಕ ಕಡೆ ಕಲ್ಲು ತೂರಲಾಯಿತು. ಇತ್ತ ಮೇಗಲಟ್ಟಿಯಲ್ಲಿ ಅಂಬೇಡ್ಕರ್ ಯುವಕರ ಸಂಘದ ಕಟ್ಟಾಳುಗಳು ದೊಣ್ಣೆ, ಕಲ್ಲುಗಳೊಂದಿಗೆ ಪೆಂಡಾಲು ಕಾಯಲು ನಿಂತುಬಿಟ್ಟರು. ಗಂಗವ್ವ ಸಾಹುಕರ್ರ ಕೊಟ್ಟಿಗೆ ಕ್ಲೀನ್ ಮಾಡಿ ದಡಬಡನೇ ಮನೆ ಸೇರಿಕೊಂಡು ಮಕ್ಕಳನ್ನು ಜೋಪಾನ ಮಾಡಿದಳು. ಆದರೂ ಅವಳ ದುಗಡ ಹೆಚ್ಚಾಗುತ್ತಲೆ ಇತ್ತು.


    ಗೊಬ್ಬರಲೋಡಿನ ಹಮಾಲಿಗೋದ ಗಂಡ ನಾಗಣ್ಣನ ಚಿಂತೆ ಅವಳನ್ನು ತಳಮಳಗೊಳಿಸಿತ್ತು. ಪೊಲೀಸ್ ಜೀಪುಗಳು ಬರಬರನೆ ಓಡಾಡತೊಡಗಿದ್ದವು. ಪೈರ್ ಇಂಜಿನ್ ವಾಹನಗಳ ಸೈರನ್ ಒಂದೇ ಸಮನೆ ಅರಚುತ್ತಿತ್ತು. ನಡುಮಧ್ಯಾಹ್ನ ಪಟ್ಟಣದಲ್ಲಿ 24 ಗಂಟೆಗಳ ಕಾಲ ಕರ್ಪ್ಯೂ ಜಾರಿಗೊಳಿಸಲಾಗಿದೆ ಎಂಬ ಮೈಕ್ ಅನೌನ್ಸೆಮೆಂಟ್ ಮಾಡಿಕೊಂಡು ಜೀಪೊಂದು ಹಾದು ಹೋಯಿತು. ರಸ್ತೆಯಲ್ಲಿ ಕಂಡ ಕಂಡವರನ್ನು ಚಚ್ಚಿ ಬಡಿಯುತ್ತಿದ್ದರು. ಪೊಲೀಸರ ಮೇಲೆ ಕಲ್ಲು ಎಸೆದು ದಡಕ್ಕನೆ ಓಣಿಯೊಳಗೆ ತೂರಿಕೊಳ್ಳುವ ಗುಂಪೆ ಹಟ್ಟಿಯೊಳಗಿತ್ತು. ಊರು ಈಗ ನಿರ್ಜನ, ಓಣಿ ಅಂಚಿನಿಂದ ಮೈನ್ ರೋಡ್ ಕಡೆಗೆ ನೋಡಿದರೆ ಸ್ಮಶಾನಮೌನ. ಎಲ್ಲಲ್ಲೂ ಖಾಕಿಗಳದ್ದೇ ಸದ್ದು. ಗಂಗವ್ವ ಇಣುಕಿ ಇಣುಕಿ ನೋಡುತ್ತಲೆ ಇದ್ದಾಳೆ… ಒಳಗೆ-ಹೊರಗೆ ಶತಪಥಗುಟ್ಟುತ್ತಾ.. ಜಯಣ್ಣ ಮಹಾನ್ ಪಂಟ, ಜಯಣ್ಣ ಮತ್ತು ಭೂತಯ್ಯ ಇಬ್ರು ಸೇರಿಕೊಂಡು ಪೊಲೀಸರ ವಿರುದ್ದ ಯುದ್ಧಕ್ಕೆ ನಿಂತವರಂತೆ ಕಲ್ಲು ಎಸೆಯತೊಡಗಿದರು. ಪೊಲೀಸರು ಬೆನ್ನಟ್ಟಿ ಬಂದ ತಕ್ಷಣ ಓಣಿಯೊಳಗೆ ತೂರಿ ತಲೆ ಮರೆಸಿಕೊಂಡು ಬಿಡುತ್ತಿದ್ದರು. ಬಹಳ ಹೊತ್ತು ಹೀಗೆ ಕಾಡಿದ ಜಯಣ್ಣ ಮತ್ತು ಭೂತಯ್ಯನ ಹಾವಳಿಗೆ ಪೊಲೀಸರು ರೋಸಿಹೋಗಿ ಬೆನ್ನತ್ತಿದರು. ಗರ್ನಮೆಂಟ್ ಹಾಸ್ಟೆಲ್ ಗೋಡೆ ಹತ್ತಿ ನಿಂತ ಇಬ್ಬರೂ ದೊಡ್ಡ ಪೊಲೀಸ್ ಅಧಿಕಾರಿಯೊಬ್ಬನಿಗೆ ಮೀಸೆ ತಿರುವಿ ‘ಏರಿ ಮೇಲೆ ಏರಿ, ಹ್ಹಾ ಏರಿ ಕೆಳಗೆ ಹಾರಿ ಹಕ್ಕಿ ಬಂದು ಕುಂತ್ಯತಲ್ಲೋ ಮಾವ…’ ಲೇವಡಿ ಮಾಡಿ ದಪ್ಪ ಮೀಸೆಯ ಪೊಲೀಸಪ್ಪನಿಗೆ ಸವಾಲು ಹಾಕಿ ರೊಚ್ಚಿಗೆಬ್ಬಿಸಿಬಿಟ್ಟರು. ನಸೀಬು ಕೆಟ್ಟಿತ್ತು. ನಾಲ್ಕು ದಿಕ್ಕಿನಿಂದ ಅಮರಿಕೊಂಡ ಪೊಲೀಸರಿಗೆ ಜಯಣ್ಣ, ಭೂತಯ್ಯ ಗರ್ನಮೆಂಟ್, ಹಾಸ್ಟೆಲ್ ನ ಬಾಗಿಲಿಲ್ಲದ ಬಾತ್ ರೂಂನಲ್ಲಿ ಸಿಕ್ಕಿ ಹಾಕಿಕೊಂಡು ಬಿಟ್ಟರು. ಅವರ ಸ್ಥಿತಿ ದೇವರೇ ಬಲ್ಲ. ಹಟ್ಟಿವರೆಗೂ ಜಯಣ್ಣ, ಭೂತಯ್ಯನ ಕರುಣಾಜನಕ ಹಾಡು ಕೇಳಿಸುತ್ತಿತ್ತು.


    ಹೊತ್ತು ಮುಳುಗುತ್ತಾ ಬಂತು ಮೋಟು ಗೋಡೆಯ ಮೇಲಿನ ಚಿಮಣಿಬುಡ್ಡಿ ಹೊತ್ತಿಕೊಂಡಿತು. ಗಂಗವ್ವಳ ಕಳವಳ ಹೆಚ್ಚಾಗುತ್ತಲೆ ಹೋಯಿತು. ಅಲ್ಯಾರನ್ನೋ ಚಾಕು ಹಾಕಿದರಂತೆ, ಇಲ್ಲಿ ಯಾರದೋ ತಲೆ ಒಡೆದರಂತೆ, ಲಾರಿಗೆ ಬೆಂಕಿ ಹಚ್ಚಿದರಂತೆ… ಕಂಡವರಂತೆ ಹೇಳುತ್ತಿದ್ದವರು ಒಬ್ಬರೇ ಇಬ್ಬರೆ.., ಗಂಗವ್ವ ನ ಕಳವಳ ಇಮ್ಮಡಿಯಾಯಿತು. ತಮ್ಮ ಚಿಕ್ಕಾಂಜಿನಿ ಇನ್ನೂ ಚಿಕ್ಕವನು ಎರಡು ಸಣ್ಣ ಕೂಸುಗಳಿವೆ ಅವನಿಗೆ, ಅವನೇನಾದ್ನೋ..?, ಬೆಳಗ್ಗೆ ನಾಗಣ್ಣ, ಚಿಕ್ಕಾಂಜನಿಯನ್ನು ಕರೆದೊಯ್ಯದ ಲಾರಿನೆ ಉರಿತಿರೋದಾ? ನಾಗಣ್ಣ ನ ತಲೆ ಯಾರಾದರೂ ಹೊಡೆದು ಬಿಟ್ಟರಾ? ಹೀಗೆ. ಹತ್ತಾರು ಆತಂಕಗಳು ಗಂಗವ್ವನ ತಲೆಯನ್ನು ಗರ್ರೆನಿಸುತ್ತಿತ್ತು. ಕಣ್ಣ ದಡದಲ್ಲಿ ಜಿನುಗುವ ನೀರನ್ನು ಸೆರಗ ತುದಿಗೆ ಕುಡಿಸಿ ಮಕ್ಕಳನ್ನು ಬಾಚಿ ತಬ್ಬುತ್ತಾ ತನಗೆ ತಾನೇ ಧೈರ್ಯ ತುಂಬಿಕೊಳ್ಳುತ್ತಿದ್ದಳು. ‘ಅಪ್ಪ ಬತ್ತಾನೆ. ಕರಗಡುಬು ಮಾಡಾನ..’ ಗಂಗವ್ವನ ಹಿಂದಿಂದೆನೆ ಓಡಾಡುತ್ತಿದ್ದ ಮಕ್ಕಳಿಗೆಲ್ಲಾ ಸಬೂಬು ಹೇಳುತ್ತಲೆ ಇದ್ದಳು. ಕಣ್ಣಳತೆಯಲ್ಲೇ ಕಾಣುವ ಮುಖ್ಯರಸ್ತೆಯಲ್ಲಿ ಪೆಟ್ರೋಲ್ ಬಂಕ್ ವೊಂದು ದಗ ಧಗ ಹೊತ್ತಿ ಉರಿಯುತ್ತಿರುವ ಜ್ವಾಲೆ ನೇರವಾಗಿ ಕಣ್ಣಿಗೆ ಕಾಣುತ್ತಿತ್ತು. ಕತ್ತಲು ಮುತ್ತಿಕೊಂಡೆ ಬಿಟ್ಟಿತ್ತು. ನಾಗಣ್ಣ, ಚಿಕ್ಕಾಂಜನಿಯನ್ನು ಹೊತ್ತು ಹೋದ ಲಾರಿ ಇಳಿಸಂಜೆಗೆ ವಿದ್ಯಮಾನ ಗೊತ್ತಿಲ್ಲದೆ ಪಟ್ಟಣದೊಳಗೆ ಬಂದು ನಡು ದಾರಿಯಲ್ಲೇ ನಾಗಣ್ಣ, ಚಿಕ್ಕಾಂಜಿನಿಯನ್ನು ಕೆಳಗಿಳಿಸಿ ತಲೆಮರೆಸಿಕೊಂಡಿತು. ಊರಿಗೆ ಊರೇ ಕರ್ಪ್ಯೂಗೆ ತುತ್ತಾಗಿ ಎಲ್ಲೆಲ್ಲೂ ಪೊಲೀಸರ ಲಾಠಿ. ಬೂಟುಗಳದ್ದೇ ಕಾರುಬಾರು. ಹೆಗಲ ಮೇಲೆ ಗುದ್ದಲಿ, ಮಂಕರಿ, ಗಂಟೊಂದು ಇಟ್ಟುಕೊಂಡು ಸಂದಿ-ಮೂಲೆ ಹಾದು ಹಟ್ಟಿ ಕಾಣುವ ದೂರಕ್ಕೆ ಬಂದ ನಾಗಣ್ಣ, ಚಿಕ್ಕಾಂಜನಿಯನ್ನು ಹತ್ತಾರು ಪೊಲೀಸರು ಬೋರೆಗೌಡರ ಬಾಳೆ ಹಣ್ಣು ಮಂಡಿ ಮುಂದೆ ಮುತ್ತಿಕೊಂಡು ಬಿಟ್ಟರು, ಎಲ್ಲಿಗೆ ಹೋಗಿದ್ರಿ ಎಂದು ಕೇಳುವ ಗೋಜಿಗಾಗಲಿ. ಅಥವಾ ನಾವು ಹಮಾಲಿ ಕೆಲಸಕ್ಕೆ ಹೋಗಿದ್ದೆವು ಸ್ವಾಮಿ ಎನ್ನುತ್ತಿದ್ದ ನಾಗಣ್ಣ, ಚಿಕ್ಕಾಂಜನಿಯ ದೀನ ದನಿಯನ್ನಾಗಲಿ ಪೊಲೀಸರು ಕೇಳುವ ಸ್ಥಿತಿಯಲ್ಲಿರಲಿಲ್ಲ.


     ಸುತ್ತುವರೆದವರೆ ಲಾಠಿ, ಬೂಟುಗಳಿಗೆ ಕೆಲಸ ಕೊಟ್ಟುಬಿಟ್ಟರು. ಹೆಗಲ ಮೇಲಿದ್ದ ಗುದ್ದಲಿ ಪೊಲೀಸರ ಕಣ್ಣಿಗೆ ದೊಡ್ಡದ್ದೊಂದು ಅನಾಹುತಕಾರಿ ಅಸ್ತ್ರದಂತೆ ಕಾಣುತ್ತಿತ್ತೇನೋ! ಹೊಡೆತ ತಪ್ಪಿಸಿಕೊಳ್ಳಲು ಗುದ್ದಲಿಗಳನ್ನು ಅಡ್ಡವಿಡುತ್ತಿದ್ದಾಗ ಟಣ್ ಟಣ್ ಎಂಬ ಶಬ್ದ ಕೂಗಳೆತೆಯಲ್ಲಿದ್ದ ಹಟ್ಟಿಯ ಗಂಗವ್ವನ ಕರುಳ ತಟ್ಟುತ್ತಿತ್ತು. ಸಂಕಟ ಹೊಟ್ಟೆ ಕಿವುಚುತ್ತಿತ್ತು. ಚಿಕ್ಕಾಂಜಿನಿ ಇನ್ನೂ ಪ್ರಾಯದ ಹುಡುಗ ಹೇಗೊ ಕಸರತ್ತು ಮಾಡಿ ಸೀಳುನಾಯಿಗಳಂತೆ ಸುತ್ತುವರೆದಿದ್ದ ಪೊಲೀಸರ ಕೋಟೆಯನ್ನು ಬೇಧಿಸಿ ಓಡಿ ಬಿಟ್ಟ. ನಾಗಣ್ಣ ಐದು ಮಕ್ಕಳ ತಂದೆ. ಸೋತು ಸೊರಗಿದ ಚಕ್ಕಳದಂತ ಮೈ. ಶಕ್ತಿಯಲ್ಲಾ ಅನ್ನದ ಹೋರಾಟಕ್ಕೆ ಕಳೆದುಕೊಂಡವನು, ಪಾದಗಳಲ್ಲಿ ಆಣೆಗಾಯ ಬೇರೆ, ಓಡಲು ಸಾಧ್ಯವೇ ಇಲ್ಲ. ಪೊಲೀಸರ ಲಾಠಿ ಏಟುಗಳಿಗೆ ಗುರಾಣಿಯಂತೆ ಅಡ್ಡ ನಿಲ್ಲುತ್ತಿದ್ದ ಗುದ್ದಲಿ ಕಾವು ಮುರಿದುಕೊಂಡು ಆತನನ್ನು ರಕ್ಷಿಸಲು ಹೆಣಗಾಡಿ ಕೊನೆಗೂ ಸೋತು ನೆಲಕ್ಕೊರಗಿತು. ಬಿದರ ಮಂಕರಿ ಪೊಲೀಸರ ಹೊಡೆತಕ್ಕೆ ಚೂರು ಚೂರಾಗಿ ಹೋಗಿತ್ತು. ನಾಗಣ್ಣನ ರಕ್ಷಣೆಗೆ ಇನ್ನಾರು ಇರಲಿಲ್ಲ. ಸಂಜೆಗೆ ಕರಗಡುಬು ಮಾಡಬೇಕು, ಗಂಗವ್ವ ಕಾಯುತ್ತಿದ್ದಾಳೆ. ಮಕ್ಕಳು ನನ್ನ ದಾರಿ ನೋಡುತ್ತಿದ್ದಾರೆ. ಬೇಗ ಹೋಗಲೇ ಬೇಕು. ನಾಗಣ್ಣ ಪರದಾಡುತ್ತಿದ್ದ. ಪೊಲೀಸರ ಪೌರುಷಕ್ಕೆ ನಾಗಣ್ಣನ ಪುಡುಪಂಚೆಯ ಗಂಟು ಹರಿದು ಹಾರಿತ್ತು. ರಸ್ತೆಯ ತಂಬೆಲ್ಲಾ ಚಿಮ್ಮಿ ಚೆಲ್ಲಾಡಿದ್ದ ಉಪ್ಪು,ಮೆಣಸು, ನುಚ್ಚಕ್ಕಿ, ಕಾಳು, ಬೇಳೆ-ಬೆಲ್ಲವನ್ನೆಲ್ಲಾ ಕಣ್ಣೀರ ಕುಡಿಯುತ್ತಾ ಆಯುತ್ತಿದ್ದ ನಾಗಣ್ಣನಿಗೆ ಬೆನ್ನ ಮೇಲೆ ಮೆರೆಯುತ್ತಿದ್ದ ಲಾಠಿ, ಬೂಟುಗಳ ಮೆರವಣಿಗೆಯ ಪರಿವೆ ಇರಲಿಲ್ಲ. ಹಣುಗಾಯಿ -ನೀರುಗಾಯಿಯಾದ ನಾಗಣ್ಣ ಹೇಗೋ ಪೊಲೀಸರಿಂದ ಪಾರಾಗಿ ತಟ್ಟಾಡಿಕೊಂಡು ಮನೆ ಸೇರಿಕೊಂಡ. 


    ಕತ್ತಲು, ಕತ್ತಲು….. ಮಕ್ಕಳು ಎಂದಿನಂತೆ ಕಾಲುಗಳನ್ನು ಕಿಬ್ಬೊಟ್ಟೆಗೆ ಊಡು ಮಾಡಿಕೊಂಡು ನಿದ್ದೆಗೆ ಜಾರಿದ್ದವು. ಬುಡ್ಡಿದೀಪ ಎಣ್ಣೆ ಇಲ್ಲದೆ ಅಸುನೀಗುವ ಅವಸರದಲ್ಲಿತ್ತು. ಗಂಡನ ಮುಖ ನೋಡುತ್ತಲೆ ಗಂಗವ್ವ ನಿಟ್ಟುಸಿರು ಬಿಟ್ಟು ದಡದಡನೆ ನೀರು ಕೊಟ್ಟಳು. ಹೆಗಲು ಖಾಲಿ ಇತ್ತು, ಬರ್ರನೆ ಬಾಚಿ ತಬ್ಬಿಕೊಂಡು ತಡಕಾಡಿದಳು. ಅವಳ ಕೈಗೆ ಬಾಸುಂಡೆಗಳೆ ಸಿಕ್ಕವು, ಕರುಳ ಕೋಣೆಯಿಂದ, ಕಣ್ಣ ತಡಿಯಿಂದ ಧುಮ್ಮಿಕ್ಕಿದ ದುಃಖ ದಿಕ್ಕು ದಿಕ್ಕಿಗೂ ಮೋಡವಾಗಿ ಚದುರಿ ಮಳೆ ಸುರಿದಿತ್ತು. ಸುಕ್ಕು ಚರ್ಮದ ಮೇಲೆ ಸೊಕ್ಕಿದ ಹಾವಂತೆ ಮಲಗಿದ್ದ ಬಾಸುಂಡೆಗಳಿಗೆ ಕಾವು ಕೊಡಲು ಒಂದರಳು ಕಲ್ಲು ಉಪ್ಪಿಗಾಗಿ ಕುಡಿಕೆಯ ಗಬರಾಡುತ್ತಲೆ ಇದ್ದಳು.. ಗಂಗವ್ವ. ಒಣಬತ್ತಿಯ ದೀಪ ಕೊನೆಯುಸಿರೆಳೆಯಿತು.


**
     ಓಣಿಯೊಳಗೆ ದಡದಡನೆ ಜನ ಓಡಿದರು. ಹತ್ತಾರು ಸೈರನ್ ಗಳು ಒಂದೇ ಬಾರಿಗೆ ಅರಚಿಕೊಂಡು ದಿಕ್ಕು ದಿಕ್ಕಿಗೂ ನುಗ್ಗತೊಡಗಿದವು. ‘ಗಣಪತಿ ಬಪ್ಪಮೋರಿಯಾ, ಭಾರತ್ ಮಾತಾ ಕೀ ಜೈ…’ ‘ಹಿಂದೂ ಹಿಂದೂ ನಾವೆಲ್ಲಾ ಒಂದು’ ಎಂಬ ಘೋಷಣೆ ಮೊಳಗುತ್ತಿತ್ತು. ಅಲ್ಯಾರೋ ಬಡ ಆಟೋ ಚಾಲಕನನ್ನು ಇರಿದು ಕೊಂದ ವರ್ತಮಾನ ಬಂತು. ನಾಗಣ್ಣ ನರಳುತ್ತಾ ಬಂದ ದಿಕ್ಕಿನ ಕಡೆ ಬಾಗಿಲ ಕಿಂಡಿಯಿಂದ ಇಣುಕಿದ ಬಡ ಬಾಲಣ್ಣನ ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ದಿ ನಿಗಮ ಕೊಟ್ಟ ಚರ್ಮ ಕುಟೀರ ಧಗಧನೆ ಉರಿಯುತ್ತಿತ್ತು. ಉರಿಜ್ವಾಲೆಯ ಬೆಳಕಿನಲ್ಲಿ ದೇವರ ವೈಭವದ ಮರವಣಿಗೆ ಸಾಗಿತ್ತು…..