POETRY

ದಯಾಗಂಗನಘಟ್ಟ

POETRY

ಕಾವ್ಯ

ದಯಾ ಗಂಗನಘಟ್ಟ

1

ಸಾಕು

 

ಆಣೆ ಪ್ರಮಾಣಗಳು

ಯಾಕೆ ಬೇಕು

ನಾಳೆಯೂ

ಇವತ್ತಿನಂತೇ

ಇದ್ದರಷ್ಟೇ ಸಾಕು

 

2

ಅರಳುವುದು ಇರುಳಿನಲ್ಲೇ....

 

ಬಹುತೇಕ ಅವಳ ಅನುವಾದಗಳೆಲ್ಲಾ

ಅರಳುವುದು ಇರುಳಿನಲ್ಲೇ....

ಅಳುವ ನಗುವಾಗಿ

ವಿರಹವ ಒಲವಾಗಿ

ಹಸಿವ ಹಬ್ಬವಾಗಿ

ನೋವ ನಲಿವಾಗಿ

ಸಿಟ್ಟನ್ನು ಶೋಕವಾಗಿ,

ಅನುವಾದಿಸುವುದರಲ್ಲಿ

ಅವಳದೆಷ್ಟು ಚತುರಳೆಂದರೆ

ಅವಳೆದೆಯ

ನಿಜ ಕವಿತೆಯ ಇದುವರೆಗೆ

ಓದಿದವರೇ ಇಲ್ಲ....

 3

ಕರಿಜೇಡ ಹೆಣೆದ ಹುನ್ನಾರ

 

ಅವನೆಂದೂ ಆಡದ ಮಾತುಗಳನ್ನು

ಅವನ ತುಟಿಗಳಿಂದ ಹೀರಿಕೊಳ್ಳುವ ಅವಳು

ಉಸಿರಾಡುತ್ತಾಳೆ ಅವನ ಕಂಗಳ ಕಾವಿನಲ್ಲಿ

ಹತ್ತಿಗೂ ಹಗುರಾಗಿದ್ದ ಅವಳೀಗ

ಅವನೆದೆಯ ನಟ್ಟ ನಡುವೆ ನೆಟ್ಟ ದ್ವೀಪ

ಕಣ್ಣರೆಪ್ಪೆಯ ತುದಿಗೆ ಬೆಳೆದ ಸೂಜಿಗಳು

ಕರಿಜೇಡ ಹೆಣೆದ ಹುನ್ನಾರ

ಮೇಲು ಮೇಲಿನ ಸಪ್ಪೆ ಮಾತುಗಳು

ಬಣ್ಣ ಕಳೆದ ಸಮರ್ಥನೆಗಳು

ಮೈಲುದ್ದ ಬೆನ್ನೇರುವ ಮೌನ

ಮತ್ತು

ಶತಮಾನಗಳ ಕಿವುಡಾಗಿಸಿದ

ನಾಮೇಲು ನೀಮೇಲು

ಇಬ್ಬರ ನಡುವೆ ಗುನುಗುವ ಹಾಡಿಗೆ

ಪ್ರಾಸವೊಂದು ತ್ರಾಸದಿಂದ ಬೆಸೆದು

ಅಡ್ಡಾದಿಡ್ಡಿ ಕುಣಿವ ಕಾಲ್ಗಳಿಗೆ

ಧೀಂತಕ ತಕಧೀಂ

ಇವಳದೆಷ್ಟೇ ಒತ್ತರಿಸಿ ನುಸುಳಿದರೂ

ಅವನೆದೆಗೂಡಿನ ರಂದ್ರದ ಖಾಲಿ ಜಾಗ

ತುಂಬುವುದೇ ಇಲ್ಲ

ಅವನದೆಷ್ಟೇ ಅನುನಯಿಸಿದರೂ

ಇವಳ ಮೆದುಳ ಮಸೆಯುತ್ತದೆ

ಎರಡಂಚಿನಲಿ ಚೂಪಾದ ಚೂರಿ

 ****

 

3

 

ನನ್ನನ್ನು ಹೆದರಿಸುವುದಿಲ್ಲ

 

ಗೋಡೆ ಮೇಲಿನ ನೆರಳಾಗಲಿ

ಕೆಳ ಕೋಣೆಯ ಅಬ್ಬರವಾಗಲಿ

ಬದುಕು ನನ್ನನ್ನು ಹೆದರಿಸುವುದಿಲ್ಲ

ಹಲ್ಕಿರಿದು ಬೊಗಳುವ ನಾಯಾಗಲಿ

ಮೋಡದಲ್ಲಿ ಮೂಡಿದ ದೆವ್ವವಾಗಲಿ

ಬದುಕು ನನ್ನನ್ನು ಹೆದರಿಸುವುದಿಲ್ಲ

ಅಜ್ಜಿ ಕತೆಯ ಗುಮ್ಮವಾಗಲಿ

ಕೆರಳಿದ ಸಿಂಹವಾಗಲಿ

ಬದುಕು ನನ್ನನ್ನು ಹೆದರಿಸುವುದಿಲ್ಲ

ಡ್ರ್ಯಾಗನ್‌ ಉಗುಳಿದ ಬೆಂಕಿಯ ಮಳೆಯಾಗಲಿ

ನನ್ನದೇ ಕರಿನೆರಳ ಬಿಂಬವಾಗಲಿ

ನನ್ನನ್ನು ಹೆದರಿಸುವುದಿಲ್ಲ.

ಬದುಕ ಬಾಚಿ ತಬ್ಬುವೆ

ಕೆಡುಕ ಕತ್ತಿಡಿದು ದಬ್ಬುವೆ

ಓಡುವವರ ಕಂಡು ನಗುವೆ

ಹಾರಾಡುವವರ ಕಂಡು ಹಾಯಾಗಿರುವೆ

ಹಳಿಯ ಬಂದವರ ಕಂಡು ನಗುವುದಷ್ಟೇ ಗೊತ್ತು

ಬದುಕು ನನ್ನನ್ನು ಹೆದರಿಸುವುದಿಲ್ಲ.

ಇರುಳೆಲ್ಲಾ ಒಂಟಿ ಬಂಡೆಗಲ್ಲಾಗಿ ಕಾದಾಡುವುದು

ಕರುಳು ಖಾಲಿಯಾದವರಿಗೆ ಮಾತ್ರ ಗೊತ್ತು,

ಬದುಕು ನನ್ನನ್ನು ಹೆದರಿಸುವುದಿಲ್ಲ.

ಕ್ರೂರ ಮೃಗಗಳ ಕಾಡಾಗಲಿ

ಅಪರಿಚಿತರ ನಾಡಾಗಲಿ

ಇಲ್ಲ, ಅವು ನನ್ನನ್ನು ಹೆದರಿಸುವುದಿಲ್ಲ.

ಶಾಲೆಯಲಿ ಚಂದದ ಗುಂಗುರು ಕೂದಲನ್ನು

ಎಳೆದೆಳೆದು ಕಿಚಾಯಿಸುತ್ತಿದ್ದ ಹುಡುಗರು

ಉಹು,ಇನ್ನೆಂದೂ ಅವರು ನನ್ನನ್ನು ಹೆದರಿಸುವುದಿಲ್ಲ.

ಬಿಡುಬೀಸಾಗಿ ತೋಳ ಬೀಸುತ್ತಾ

ಕಡಲ ತಡಿಯಲಿ ಸದ್ದಿಲ್ಲದೇ ಅಲೆಯುವ

ಜಾದೂ ಒಂದನ್ನು ಕಲಿತುಬಿಟ್ಟಿದ್ದೇನೆ!

ಹಾವು,ಕಪ್ಪೆಗಳ ಮೆಲೆಸೆದು ಕಿರುಚುವುದ

ಕೇಳಲು ಕಾದಿದ್ದರೆ ಬಿಟ್ಟುಬಿಡಿ ಆ ಆಸೆಯ,

ಹಾಗೊಮ್ಮೆ ಹೆದರಿದರೆ

ಅದು ನನ್ನ ಕನಸಿನಲ್ಲಷ್ಟೆ!

ಈ ಬದುಕು ನನ್ನನಿನ್ನು ಹೆದರಿಸಲಾರದು

ಇಲ್ಲವೇ ಇಲ್ಲ

ಇನ್ನೆಂದೂ ಇಲ್ಲ.

ಬದುಕು ನನ್ನನ್ನು ಹೆದರಿಸುವುದಿಲ್ಲ.

****

(ಮಾಯಾ ಏಂಜಲೋ- 4.4.1928- 28.05.2014)

ಪಂಜರದ ಹಕ್ಕಿಗೇಳೇಕೆ ಹಾಡುತ್ತವೆ ಅಂತ ನನಗೆ ಗೊತ್ತು ಎಂದು 1969ರಲ್ಲಿ ಮೊದಲ ಪದ್ಯ ಬರೆದ ಅಮೆರಿಕಾದ ಕವಿ, ನಾಗರಿಕ ಹಕ್ಕುಗಳ ಹೋರಾಟಗಾರರಾದ ಮಾಯಾ ಏಂಜೆಲೋ ಅವರ ಒಂದು ಕವಿತೆ)