ಮಹಿಳಾ ಮೀಸಲಾತಿ ಮಸೂದೆ ಒಂದು: ಮುನ್ನೋಟ
ಭಾರತೀಯ ಸಂದರ್ಭದಲ್ಲಿನ ಶ್ರೇಣೀಕೃತ ಜಾತಿ ಪದ್ಧತಿಯಲ್ಲಿ ಮೇಲ್ವರ್ಗದ ಹೆಣ್ಣು ಮಕ್ಕಳ ಸಂಕಟ ಪರಂಪರೆಗೂ ಕೆಳವರ್ಗದ ಹೆಣ್ಣುಮಕ್ಕಳ ಸಂಕಟ ಪರಂಪರೆಗೂ ವತ್ಯಾಸವಿದ್ದು ಅವರ ಬಿಡುಗಡೆಯ ದಾರಿಗಳು ಬೇರೆಯಾಗಿವೆ. ಆ ನಿಟ್ಟಿನಲ್ಲಿ ಒಳ ಮೀಸಲಾತಿಯ ಅಗತ್ಯತೆ ಇದ್ದು ಎಲ್ಲಾ ಜಾತಿ ಜನಾಂಗಗಳ ಹೆಣ್ಣುಮಕ್ಕಳನ್ನು ಒಳಗೊಂಡಾಗ ಮಾತ್ರ ಮಹಿಳಾ ಮೀಸಲಾತಿ ಮಸೂದೆ ಅರ್ಥಪೂರ್ಣವಾಗಲು ಸಾಧ್ಯ.
ವಿಶ್ಲೇಷಣೆ
ಡಾ.ಆಶಾ ಬಗ್ಗನಡು
ಭಾರತೀಯ ರಾಜಕೀಯ ಆಡಳಿತದ ಅಧಿಕಾರದ ಸ್ಥಾನಗಳಲ್ಲಿ ಹೆಚ್ಚಿನ ಮಹಿಳೆಯರನ್ನು ಒಳಗೊಳ್ಳುವ ಮಹತ್ವದ ಮಹಿಳಾ ಮೀಸಲಾತಿ ಮಸೂದೆ ಅಂಗೀಕರಿಸಲ್ಪಟ್ಟಿದೆ. ಆ ಮೂಲಕ 33 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮಸೂದೆಯೊಂದು ತಾತ್ವಿಕ ಒಪ್ಪಿಗೆ ಪಡೆಯುವುದರೊಂದಿಗೆ ಪುರುಷ ಹಿತಾಸಕ್ತಿ ಒಳಗೆ ಅಂಚಿಗೆ ಒತ್ತಲ್ಪಟ್ಟಿದ್ದ ಸ್ತ್ರೀ ಚೈತನ್ಯವೊಂದು ಸಂಭ್ರಮಿಸುತ್ತ ತನ್ನ ಸುತ್ತಲಿನ ನಿರ್ಬಂಧದ ಪರದೆ ಹರಿದು ಹೊರಬರಲು ಕಾತುರದಿಂದ ತವಕಿಸಲು ಕಾರಣವಾಗಿದೆ.
ಭಾರತೀಯ ರಾಜಕಾರಣದಲ್ಲಿ ಮಹಿಳೆಯರ ಪ್ರಾತಿನಿಧ್ಯವು ಬಹಳ ನಿರಾಶದಾಯಕವಾಗಿದ್ದ ಪರಿಸ್ಥಿತಿಯಲ್ಲಿ ಮುಖ್ಯ ವಾಹಿನಿ ರಾಜಕಾರಣದಲ್ಲಿ ಮಹಿಳೆಯರು ರಾಜ ಮಾರ್ಗದಲ್ಲಿ ನಡೆದು ಬರಲು ತಳಪಾಯ ನಿರ್ಮಿಸಿದ, ದಾರ್ಶನಿಕ ಚೇತನ ಬಾಬಾ ಸಾಹೇಬ್ ಅಂಬೇಡ್ಕರ್‌ರವರು. ಆಗಿನ ಸಂದರ್ಭದಲ್ಲಿನ ಎಲ್ಲಾ ಸಂಕೀರ್ಣತೆಯನ್ನು ಎದುರು ಹಾಕಿಕೊಂಡು ಮಹಿಳಾ ಪರವಾಗಿ ನಿಂತ ಅಂಬೇಡ್ಕರರ ರಾಜಕೀಯ ಬದ್ಧತೆ. ರಾಜಕೀಯ ಮೇಲಾಟಗಳಿಗೆ ಮಹಿಳಾಪರ ವಿಚಾರಗಳನ್ನು ಅಸ್ತ್ರವಾಗಿಸಿಕೊಳ್ಳುವ ಈ ಹೊತ್ತಿನ ಅವಕಾಶವಾದಿ ರಾಜಕಾರಣಕ್ಕಿಂತ ಬಹಳ ಭಿನ್ನವಾಗಿರುವಂಥದ್ದು. ಬಹುಶಃ ಭಾರತೀಯ ಸಂದರ್ಭದಲ್ಲಿ ಮಹಿಳಾ ವಿಚಾರಗಳ ಸಂದರ್ಭ ಬದ್ಧತೆಯನ್ನು ಕಾಯ್ದುಕೊಂಡಿದ್ದರಲ್ಲಿ ಬಾಬಾ ಸಾಹೇಬರು ಅಗ್ರಗಣ್ಯರೆನಿಸುತ್ತಾರೆ. ಮಹಿಳೆಯರನ್ನ ಮಹಿಳಾ ವಿಷಯಗಳನ್ನು ಅಸ್ತ್ರವಾಗಿಸಿಕೊಂಡು ಅಧಿಕಾರ ಪಡೆದವರ ಚರಿತ್ರೆಯೊಳಗೆ ಮಹಿಳೆಯರ ಸಶಕ್ತತೆಗಾಗಿ ತನಗೊದಗಿದ ಅಧಿಕಾರವನ್ನು ನೀಗಿಕೊಂಡ ನಿಜವಾದ ಮಹಿಳಾಪರ ಚಿಂತಕ ಬಾಬಾ ಸಾಹೇಬ್ ಅಂಬೇಡ್ಕರರು ಪ್ರಸ್ತುತ ರಾಜಕೀಯ ಸಂದರ್ಭದಲ್ಲಿ ಬಹಳ ಮುಖ್ಯರಾಗಿ ಕಾಣುತ್ತಾರೆ.
ಪ್ರಸ್ತುತ ಮಹಿಳಾ ಮೀಸಲಾತಿ ಮಸೂದೆಯನ್ನು ಗಮನಿಸುವುದಾದರೆ ಈ ಮಸೂದೆಯು ಮಹಿಳೆಯರಿಗೆ ಮೀಸಲಾತಿ ಸೌಲಭ್ಯ ಕಲ್ಪಿಸಲು ತಾತ್ವಿಕವಾಗಿ ಒಪ್ಪಿಗೆ ನೀಡುತ್ತದೆ ಅಷ್ಟೇ. ತಕ್ಷಣಕ್ಕೆ ಅದು ಅನುಷ್ಠಾನಕ್ಕೆ ಬರುವುದಿಲ್ಲ. ಮುಂದಿನ ಜನಗಣತಿ ಮುಗಿದು ಅದರ ಆಧಾರದ ಮೇಲೆ ಕ್ಷೇತ್ರ ಪುನರ್ ವಿಂಗಡಣೆಯಾದ ಬಳಿಕವಷ್ಟೇ ಮಹಿಳೆಯರಿಗೆ ಮೀಸಲಾತಿ ಸೌಲಭ್ಯ ಸಿಗಲಿದೆ. ಹಾಗಾದರೆ ಆ ಜನಗಣತಿ ಯಾವಾಗ ಅದೆಲ್ಲ ಸುಸೂತ್ರವಾಗಿ ನಡೆದು ಮಹಿಳೆಯರಿಗೆ ಮೀಸಲಾತಿಯ ಅವಕಾಶ ಸಿಗುತ್ತದೆಯೇ ಎಂಬುದು ಮುಂದಿರುವ ಯಕ್ಷಪ್ರಶ್ನೆ. ರಾಜಕೀಯ ಪಕ್ಷಗಳಿಗೆ ನಿಜವಾದ ಮಹಿಳಾಪರ ಕಾಳಜಿ ಇದ್ದದ್ದೇ ಆಗಿದ್ದರೆ ಮಹಿಳಾ ಮೀಸಲಾತಿ ಮಸೂದೆಗಾಗಿ ಅನಿಶ್ಚಿತವಾದ ಜನಗಣತಿಯವರೆಗೆ ಕಾಯಬೇಕಾದ ಅವಶ್ಯಕತೆ ಇರಲಿಲ್ಲವೆನಿಸುತ್ತದೆ.
ಆಧುನಿಕ ಭಾರತೀಯ ಸಂದರ್ಭದಲ್ಲಿ ಮಹಿಳಾ ಸಮಸ್ಯೆಗಳ ನಿವಾರಣೆ ಸಬಲೀಕರಣ ಪ್ರಯತ್ನಗಳು ಆರಂಭವಾದದ್ದು ಪುರುಷರಿಂದಲೇ. ಈ ಹೊತ್ತಿಗೂ ಮಹಿಳಾ ಬದುಕಿನ ಬದಲಾವಣೆಯು ಪಿತೃ ವ್ಯವಸ್ಥೆ ನಿರ್ದೇಶನ ರೀತಿಯಲ್ಲೇ ನಡೆಯುವಂತದು. ಇಲ್ಲೆಲ್ಲಾ ಅಗೋಚರವಾಗಿ ಪಿತೃ ವ್ಯವಸ್ಥೆಯ ಹಿತಾಸಕ್ತಿಗಳು ಅಡಕಗೊಂಡಿರುತ್ತವೆ. ಪ್ರಸ್ತುತ ಮಹಿಳಾ ಮೀಸಲಾತಿ ಮಸೂದೆಯು ಇದಕ್ಕೆ ಹೊರತಾಗಿಲ್ಲ. ಹೆಣ್ಣು ಮಕ್ಕಳು ನಡು ಹಾದಿಯಲ್ಲಿ ನಿಂತು ನ್ಯಾಯಕ್ಕಾಗಿ ಹಕ್ಕೊತ್ತಾಯ ಮಾಡಿದರೂ ಸೌಜನ್ಯಕ್ಕಾದರೂ ಅವರ ದನಿ ಕೇಳಿಸಿಕೊಳ್ಳದೆ ತಣ್ಣಗೆ ಕುಳಿತಿದ್ದ ರಾಜಕಾರಣವೊಂದು. ಇದ್ದಕ್ಕಿದ್ದಂತೆ ಮಹಿಳಾ ಮೀಸಲಾತಿ ಮಸೂದೆಯನ್ನು ಹಿಡಿದು ಮಹಿಳಾ ಪರವಾಗಿ ಸಿಡಿದೆದ್ದದ್ದು ಅದೆಂತಹ ಮಹಿಳಾ ಪರ ಕಾಳಜಿಯನ್ನು ದಾಟಿಸುತ್ತಿದೆ? ಇಂತಹ ಅವಕಾಶವಾದಿ ರಾಜಕಾರಣದ ಆವರಣದೊಳಗೆ ನಿಂತು ಮಹಿಳಾ ಮೀಸಲಾತಿಯ ಕುರಿತು ಕೆಲವು ಪ್ರಶ್ನೆಗಳನ್ನು ಕೇಳಿಕೊಳ್ಳಲೇಬೇಕಿರುವುದು ಈ ಹೊತ್ತಿನ ತುರ್ತು. ತಡೆಯಲಾಗದ ರಾಜಕೀಯ ಒತ್ತಡದ ಒಳಗಡೆ ಒಡಮೂಡುವ, ಆಂತರ್ಯದ ಒತ್ತಡವಾಗದ ಇಂತಹ ಮಹಿಳಾ ವಿಚಾರಗಳು ಮಹಿಳೆಯರ ಬದುಕಿನಲ್ಲಿ ಬಹುದೊಡ್ಡ ಬದಲಾವಣೆಗಳನ್ನು ತರವಲ್ಲಿ ವಿಫಲಗೊಳ್ಳುವುದನ್ನು ಈಗಾಗಲೇ ಕಂಡಿದ್ದೇವೆ ಮಹಿಳಾ ಮೀಸಲಾತಿ ಮಸೂದೆಯು ಆ ಸಾಲಿಗೆ ಸೇರಬಾರದಷ್ಟೇ. ಆ ನಿಟ್ಟಿನಲ್ಲಿ ಮಹಿಳಾಪರ ಮನಸುಗಳ ಎಚ್ಚರ ಅಗತ್ಯವೆನಿಸುತ್ತದೆ.
ಮುಂದುವರಿದು ಮಹಿಳಾ ಮೀಸಲಾತಿ ಮಸೂದೆ ಜಾರಿಯಾದರೂ ಮಹಿಳೆಯರ ಬದುಕು ತತಕ್ಷಣಕ್ಕೆ ಬಹಳಷ್ಟು ಬದಲಾಗಿಬಿಡುತ್ತದೆ ಎಂಬ ಭ್ರಮೆಯ ಆಚೆ ನಿಂತೇ ಮಹಿಳಾ ಮೀಸಲಾತಿಯನ್ನು ಅರಗಿಸಿಕೊಳ್ಳಬೇಕಾಗುತ್ತದೆನಿಸುತ್ತದೆ. ರಾಜಕೀಯ ಕ್ಷೇತ್ರ ಲಿಂಗೀಯತೆ ಮತ್ತು ಪುರುಷಾತಿರೇಕಗಳೇ ತುಂಬಿರುವ ಪ್ರಬಲವಾದ ಪುರುಷಾಧಿಪತ್ಯವುಳ್ಳ ಕ್ಷೇತ್ರ. ಈ ಹೊತ್ತಿನ ವಿಧಾನಸಭೆ ಲೋಕಸಭೆಯಲ್ಲಿರುವ ಮಹಿಳಾ ಶಾಸಕಿಯರ ಮತ್ತು ಮಹಿಳಾ ಮಂತ್ರಿಗಳ ಸಂಖ್ಯೆಯನ್ನುನೊಮ್ಮೆ ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. ಪ್ರಸ್ತುತ ರಾಜಕಾರಣದಲ್ಲಿ ಸಕ್ರಿಯ ರಾಗಿರುವ ಮಹಿಳಾ ಶಾಸಕಿಯರು ಪುರುಷ ಮನಸ್ಥಿತಿಯ ಸ್ತ್ರೀ ರೂಪಗಳಾಗಿಯೇ ಗೋಚರಿಸುತ್ತಿದ್ದಾರೆ ಅಷ್ಟೇ. ಹಾಗಾಗಿ ಅವರೆಲ್ಲ ಪಕ್ಷದ ನಿಷ್ಠಾವಂತ ಕಾರ್ಯಕರ್ತೆಯರಾಗಿ ಕಾಣುತ್ತಾರೆ ಹೊರತು ಮಹಿಳಾ ಸಮುದಾಯದ, ಜೀವ ಜಗತ್ತಿನ ಹಿತಚಿಂತಕರಾಗಿ ಅಲ್ಲ. ಹಾಗಾಗಿ ಇಂತಹದ್ದೇ ಸಾಮಾಜಿಕ ಸಂದರ್ಭದಲ್ಲಿ ಜಾರಿಗೊಳ್ಳುವ ಮಹಿಳಾ ಮಸೂದೆ ಸಂಖ್ಯಾತ್ಮಕವಾಗಿ ಮಹಿಳೆಯರ ಸಂಖ್ಯೆಯನ್ನು ಹೆಚ್ಚಿಸಬಹುದೇ ಹೊರತು ಗುಣಾತ್ಮಕವಾದ ಪ್ರಾತಿನಿಧ್ಯವನ್ನೇ?
ಈ ಹಿಂದೆ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಯಾದಾಗ ರಾಜಕೀಯ ಜ್ಞಾನ ಮತ್ತು ಅನುಭವವಿಲ್ಲದ ಮಹಿಳೆಯರನ್ನ ಆಡಳಿತದ ಚುಕ್ಕಾಣಿ ಹಿಡಿಸಿ ಅವರು ರಬ್ಬರ್ ಸ್ಟ್ಯಾಂಪ್‌ಗಳಾದರು ಎಂದು ದೂರಿದ್ದಾಯಿತು. ಈಗ ಮತ್ತೊಮ್ಮೆ ಇಂತಹ ರಬ್ಬರ್ ಸ್ಟ್ಯಾಂಪ್‌ಗಳು ಉದಯಿಸಬಾರದಾದರೆ ರಾಜಕೀಯ ಕ್ಷೇತ್ರ ಪ್ರವೇಶಿಸುವ ಹೆಣ್ಣುಮಕ್ಕಳಿಗೆ ಸ್ವ ಅರಿವು, ಶಿಕ್ಷಣ ಮತ್ತು ರಾಜಕೀಯ ಪ್ರಜ್ಞೆ ಅತ್ಯಗತ್ಯವಾಗಿದೆ. ಭಾರತದ ರಾಜಕಾರಣದ ಸಂದರ್ಭದಲ್ಲಿ ಮಹಿಳಾ ರಾಜಕಾರಣಿಗಳಿಗೆ ರಾಜಕೀಯ ಪ್ರಜ್ಞೆಯ ಅಗತ್ಯದ ಕುರಿತು ಗಂಭೀರವಾದ ಚಿಂತನೆಗಳ ಅಗತ್ಯತೆ ಇದ್ದು ಆ ನಿಟ್ಟಿನಲ್ಲಿ ಹಲವು ಮಿತಿಗಳನ್ನು ನೀಗಿಕ್ಕೊಳ್ಳುವ ಅಗತ್ಯವಿದೆ.
ರಾಜಕೀಯ ಕ್ಷೇತ್ರ ಹೆಣ್ಣು ನಿರ್ಭಯವಾಗಿ ಒಡನಾಡುವ ಕ್ಷೇತ್ರವಾಗಿ ಉಳಿದಿಲ್ಲ ಇದಕ್ಕೆ ಕಾರಣ ಹಲವು, ಹಾಗಾಗಿ ಇಲ್ಲಿ ಹೆಣ್ಣು ಮಕ್ಕಳ ಪ್ರವೇಶ ಬಹಳ ಕಡಿಮೆ. ದೊರೆತ ಅವಕಾಶದಿಂದ ಕೆಲವು ಹೆಣ್ಣುಮಕ್ಕಳು ಆ ಕ್ಷೇತ್ರವನ್ನು ಪ್ರವೇಶಿಸಿದಾಗಿಯೂ ಅಲ್ಲಿನ ರಾಜಕೀಯ ಪಟ್ಟುಗಳು ತಿಳಿಯದೆ ಮರೆಯಾಗುವ ಸಾಧ್ಯತೆಗಳೇ ಹೆಚ್ಚು. ಹಾಗಾಗಿ ಮುಂದಿನ ದಿನಗಳಲ್ಲಿ ರಾಜಕೀಯ ಕ್ಷೇತ್ರ ಹೆಣ್ಣು ಮಕ್ಕಳ ಆಯ್ಕೆಯ ಕ್ಷೇತ್ರವಾಗಬೇಕು, ಆ ನಿಟ್ಟಿನಲ್ಲಿ ಆಕೆಯ ಕೌಟುಂಬಿಕ ಸಾಮಾಜಿಕ ವಾತಾವರಣ ಬದಲಾಗಬೇಕು. ಮುಂದುವರಿದು ಆಕೆ ಸಾಮೂಹಿಕ ಹೋರಾಟಗಳಲ್ಲಿ ಭಾಗವಹಿಸುವ ಮೂಲಕ ಸುತ್ತಮುತ್ತಲಿನ ಜಗತ್ತಿನಲ್ಲಿ ಕ್ರಿಯಾಶೀಲರಾಗುವ ಮನೋಭಾವ ರೂಢಿಸಿಕೊಳ್ಳಬೇಕು. ರಾಜಕೀಯ ಪಕ್ಷಗಳು ಕೂಡ ಚುನಾವಣೆಯ ಸಂದರ್ಭ ಯಾವುದೋ ಒಬ್ಬ ಹೆಣ್ಣು ಮಗಳನ್ನು ಹುಡುಕಿ ತಂದು ನಿಲ್ಲಿಸಿ. ದಿಡೀರ್ ನಾಯಕಿಯರನ್ನು ಸೃಷ್ಟಿಸುವುದಕ್ಕಿಂತ ರಾಜಕೀಯ ಪ್ರಾತಿನಿಧ್ಯವನ್ನು ನೀಡುವ ಮೂಲಕ ತಳಮಟ್ಟದಿಂದ ನಾಯಕಿಯರನ್ನು ರೂಪಿಸಿಕ್ಕೊಳ್ಳಬೇಕಿದೆ. ಇದರ ಜೊತೆ ಜೊತೆಗೆ ಹೆಣ್ಣು ಮಕ್ಕಳು ಸ್ವತಂತ್ರ ವ್ಯಕ್ತಿತ್ವ ಆಲೋಚನಾ ಗುಣಗಳನ್ನು ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಕ್ರಿಯಾಶೀಲರಾಗಬೇಕಿದೆ ಇಲ್ಲದೆ ಹೋದರೆ ಸಿಗಬಹುದಾದ 33% ಅಧಿಕಾರ ಅಗೋಚರವಾಗಿ ಪುರುಷ ಪಾಲೇ ಆಗುವುದರಲ್ಲಿ ಅನುಮಾನವೇ ಇಲ್ಲ.
ಅಧಿಕಾರ ಎನ್ನುವುದೇ ಪುರುಷ ನಿರ್ಮಿತ ಮೌಲ್ಯವಾದುದರಿಂದ ಅದು ಪುರುಷ ಸಂಸ್ಕೃತಿಯ ಎಲ್ಲಾ ಮೌಲ್ಯಗಳನ್ನು ತನ್ನೊಡಲಲ್ಲಿ ಅಡಗಿಸಿಕೊಂಡಿದೆ. ಮಹಿಳೆ ಹೆಚ್ಚು ಅಧಿಕಾರ ವಲಯ ಪ್ರವೇಶಿಸುತ್ತಿರುವ ಸಂದರ್ಭ ಮಹಿಳಾ ಅಧಿಕಾರ ಚರ್ಚೆಯ ಅಗತ್ಯವಿದೆ. ಈಗಿರುವ ಸಾಮಾಜಿಕ ರಚನೆಯಲ್ಲಿ ಅವಳಿಗೆ 33/ ಮೀಸಲಾತಿಯಡಿಯಲ್ಲಿ ಅಧಿಕಾರ ಸಿಕ್ಕರೂ ಆಕೆ ಪುರುಷನ ತದ್ರೂಪವೇ ಆಗಿಬಿಡುವ ಸಾಧ್ಯತೆಗಳೇ ಹೆಚ್ಚು ಇದರಿಂದ ಮಹಿಳಾ ಸಮುದಾಯಕಷ್ಟೆಯಲ್ಲ ಸುತ್ತಲಿನ ಸಮಾಜಕ್ಕೆ ಯಾವುದೇ ಅನುಕೂಲತೆಗಳು ಸಾಧ್ಯವಿಲ್ಲ. ಮಹಿಳಾ ಮೀಸಲಾತಿ ಅರ್ಥಪೂರ್ಣವಾಗಬೇಕಾದರೆ. ‘ಮಹಿಳೆಯರು ಅವರದ್ದೇ ಆದ ಒಂದು ಭಿನ್ನ ಮೌಲ್ಯ ವ್ಯವಸ್ಥೆಯನ್ನು ಕಟ್ಟಿಕೊಳ್ಳಲು ಸಾಧ್ಯವಾಗಬೇಕು.’ ಅಧಿಕಾರ ಮಾನವೀಕರಣಗೊಳ್ಳಬೇಕು. ಆಗ ಮಾತ್ರ ಮಹಿಳಾ ಅಧಿಕಾರಕ್ಕೆ ಅರ್ಥ ಪ್ರಾಪ್ತಿಯಾಗುತ್ತದೆ.
ಮಾನವೀಕರಣದ ಚರ್ಚೆಯ ಸಂದರ್ಭ ದನಿ ಇರುವ ಹೆಣ್ಣು ಮಕ್ಕಳ ಸಂಕಟದಷ್ಟೇ ಕೇಳದ ದನಿಗಳನ್ನು ಕೇಳಿಸಿಕೊಳ್ಳುವ ಸೂಕ್ಷ್ಮತೆ ದಕ್ಕಿಸಿಕೊಳ್ಳುವ ಅವಶ್ಯಕತೆ ಇದೆ. ಭಾರತೀಯ ಸಂದರ್ಭದಲ್ಲಿನ ಶ್ರೇಣೀಕೃತ ಜಾತಿ ಪದ್ಧತಿಯಲ್ಲಿ ಮೇಲ್ವರ್ಗದ ಹೆಣ್ಣು ಮಕ್ಕಳ ಸಂಕಟ ಪರಂಪರೆಗೂ ಕೆಳವರ್ಗದ ಹೆಣ್ಣುಮಕ್ಕಳ ಸಂಕಟ ಪರಂಪರೆಗೂ ವತ್ಯಾಸವಿದ್ದು ಅವರ ಬಿಡುಗಡೆಯ ದಾರಿಗಳು ಬೇರೆಯಾಗಿವೆ. ಆ ನಿಟ್ಟಿನಲ್ಲಿ ಒಳ ಮೀಸಲಾತಿಯ ಅಗತ್ಯತೆ ಇದ್ದು ಎಲ್ಲಾ ಜಾತಿ ಜನಾಂಗಗಳ ಹೆಣ್ಣುಮಕ್ಕಳನ್ನು ಒಳಗೊಂಡಾಗ ಮಾತ್ರ ಮಹಿಳಾ ಮೀಸಲಾತಿ ಮಸೂದೆ ಅರ್ಥಪೂರ್ಣವಾಗಲು ಸಾಧ್ಯ. ಇದಾವುದು ದಿಡೀರ್ ಸಂಭವಿಸಲಾರದೆಂಬ ಅರಿವಿನೊಳಗೆಯೇ ತಡವಾಗಿಯಾದರೂ ಮಹಿಳಾ ಮೀಸಲಾತಿ ಮಸೂದೆ ಮಹಿಳೆಯರ ಬದುಕನಷ್ಟೇ ಅಲ್ಲ ಜೀವ ಜಗತ್ತಿನ ಸಕಲ ಬದುಕುಗಳನ್ನು ಹಸನಾಗಿಸುತ್ತದೆಂಬ ಆಶಾವಾದಿಗಳಾಗಿರೋಣ.