ಕೃಷಿ ಕಥನ ಬಿಳಿಗೆರೆ ಕೃಷ್ಣಮೂರ್ತಿ ನೀರಿನ ಅನ್ಯಾಯದ ಹಾದಿಗಳು
ಕೃಷಿ ಕಥನ ಬಿಳಿಗೆರೆ ಕೃಷ್ಣಮೂರ್ತಿ ನೀರಿನ ಅನ್ಯಾಯದ ಹಾದಿಗಳು
ಮಕ್ಕಳ ಪದ್ಯವನ್ನು ಎಷ್ಟು ಅಕ್ಕರೆಯಿಂದ ಬರೆಯುತ್ತಾರೋ ಅಷ್ಟೇ ಆಸ್ಥೆಯಿಂದ ದೊಡ್ಡವರ ನೋವು, ಸಂಕಟಕ್ಕೆ ಕಾರಣವಾದ ಅಂಶಗಳನ್ನು ಮಾನವಶಾಸ್ತçಜ್ಞನ ತೆರದಲ್ಲಿ ಶೋಧಿಸಿದ ದಾಖಲಿಸುವ ನಮ್ಮ ಜಿಲ್ಲೆಯವರೇ ಆದ ಹೆಸರಾಂತ ಲೇಖಕ ಬಿಳಿಗೆರೆ ಕೃಷ್ಣಮೂರ್ತಿಯವರ ‘ಕೃಷಿ ಕಥನ’ ಈ ವಾರದಿಂದ ನಿಮ್ಮ ಅಚ್ಚುಮೆಚ್ಚಿನ ‘ ಬೆವರ ಹನಿ’ ದಿನಪತ್ರಿಕೆಯ ಭಾನುವಾರದ ಪುರವಣಿ ‘ಕಿನ್ನರಿ’ಯಲ್ಲಿ ಪ್ರಕಟವಾಗುತ್ತಿದೆ. ದಯಮಾಡಿ ಓದಿ, ಅನುಭಾವಿಸಿ- ಸಂಪಾದಕ
ಕೃಷಿ ಕಥನ
ಬಿಳಿಗೆರೆ ಕೃಷ್ಣಮೂರ್ತಿ
ನೀರಿನ ಅನ್ಯಾಯದ ಹಾದಿಗಳು
'ನೀರಿನಿಂದ ಮಾಡಿದ ನೀರು' ಸಿಗುತ್ತದೆ, ನೀರಿನಿಂದ ಮಾಡಿದ ನೂರಾರು ಬಗೆಯ ತಂಪು ಪಾನೀಯಗಳು ಸಿಗುತ್ತವೆ, ನೀರಿನಿಂದಲೇ ಮಾಡಿದ ಆದರೆ ನೀರಲ್ಲದ ಮದ್ಯ ಎಲ್ಲೆಂದರಲ್ಲಿ ಸಿಗುತ್ತದೆ, ಆದರೆ ಬಹುಜನಕ್ಕೆ ಕುಡಿಯಲು ಶುದ್ಧ ನೀರು ಸಿಗುತ್ತಿಲ್ಲ. ಶುದ್ಧಗಾಳಿ, ನೀರು ಮತ್ತು ಆಹಾರ ಈ ಭೂಮಿಯ ಮೇಲಿನ ಎಲ್ಲ ಜೀವಿಗಳಿಗೂ ಸಿಗಬೇಕಾದದ್ದು ನ್ಯಾಯ ಎಂಬ ವಿಚಾರ ಪಕ್ಕಕ್ಕೆ ಸರಿದಿದೆ, ಗಾಳಿಯೊಂದನ್ನು ಹೊರತುಪಡಿಸಿ ಮಿಕ್ಕೆಲ್ಲಾ ಪ್ರಾಕೃತಿಕ ಸಂಪತ್ತನ್ನು ಬಚ್ಚಿಟ್ಟು, ಬಳಸಲಾಗುತ್ತಿದೆ. ಹಿಂದಿನ ಕಾಲಕ್ಕೂ ಈಗಿನ ಕಾಲಕ್ಕೂ ರೂಪ ಮತ್ತು ತಂತ್ರಗಳಲ್ಲಿ ಬದಲಾವಣೆಗಳಾಗಿರಬಹುದು ಅಷ್ಟೆ.
ನೀರಿನ ಧರ್ಮದ ಪ್ರಕಾರ ಅದು ತನ್ನ ಮಟ್ಟವನ್ನು ಕಾಯ್ದುಕೊಳ್ಳುತ್ತದೆ. ಎಲ್ಲಾ ಜೀವಿಗಳಿಗೂ ಸಿಗುವಂತೆ ದ್ರವ, ಘನ, ಆವಿಯ ರೂಪದಲ್ಲಿರುತ್ತದೆ. ಭೂಮಿಯ ಮೇಲೂ ಭೂಮಿಯ ಒಳಗೂ ನೀರು ಇರುತ್ತದೆ, ಆಕಾಶದಿಂದ ಸುರಿಯುತ್ತದೆ. ವಾತಾವರಣದಲ್ಲೂ ಸಂಚರಿಸುತ್ತಿರುತ್ತದೆ. ಇದು ನೀರಿನ ಪ್ರಕೃತಿ ಧರ್ಮ.
ರಾಜನೆಂಬ ರಾಕ್ಷಸ
ನೀರು ಭೂಮಿಯಂತೆಯೇ ರಾಜಪ್ರಭುತ್ವದ ಏಕಸ್ವಾಮ್ಯಕ್ಕೊಳಪಟ್ಟ ಸಂಪತ್ತಾಗಿತ್ತು. 'ನದಿ ನೀರಿಗೆ ದೊಣ್ಣೆ ನಾಯಕನ ಅಪ್ಪಣೆ' ಪಡೆಯಲೇಬೇಕಾಗಿತ್ತು. ರಾಜ್ಯ ರಾಜ್ಯಗಳ ನಡುವೆ ನದಿ ನೀರಿಗಾಗಿ ನಿರಂತರ ಕಲಹ ನಡೆಯುತ್ತಿದ್ದವು. ಬುದ್ಧನ ಕಾಲದಲ್ಲಿ ಹಿಮಾಲಯದ ತಪ್ಪಲಿನಲ್ಲಿನ ಶಾಖ್ಯ ಮತ್ತು ಕೋಲಿ ರಾಜ್ಯಗಳ ನಡುವೆ ಹರಿಯುತ್ತಿದ್ದ ನದಿಯ ನೀರಿನ ಜಗಳ, ನಿರಂತರ ರಕ್ತಪಾತಕ್ಕೆ ಕಾರಣವಾಗಿತ್ತು. ಚೋಳ ಮತ್ತು ಚಾಲುಕ್ಯರ ಮೂನ್ನೂರು ವರ್ಷಗಳ ಸುದೀರ್ಘ ಯುದ್ಧ ಸರಣಿಗೆ ಕಾವೇರಿ ನೀರಿನ ಹಕ್ಕುದಾರಿಕೆಯ ಪ್ರಶ್ನೆಯೇ ಮುಖ್ಯ ಕಾರಣವಾಗಿತ್ತು. ವಿಜಯನಗರ ಮತ್ತು ಬಹುಮನಿ ರಾಜ್ಯಗಳ ನಡುವಿನ ಬಹುತೇಕ ಯುದ್ಧಗಳು, ತುಂಗಭದ್ರಾ ನೀರ ಹರಿವಿನ ಫಲವತ್ತಾದ ರಾಯಚೂರು ದೋಅಬ್ ಪ್ರದೇಶದ ಒತ್ತುವರಿಗಾಗಿಯೇ ನಡೆದದ್ದು. ಇದೆಲ್ಲಾ ತಮ್ಮ ಜನರ ಹಿತಾಸಕ್ತಿಯನ್ನು ಕಾಪಾಡಲೇನೂ ಆಗಿರಲಿಲ್ಲ. ಸಾವಿರಾರು ಸಂಖ್ಯೆಯ ತಮ್ಮ ಸೈನ್ಯ ಮತ್ತು ರಾಜ ಪರಿವಾರಕ್ಕೆ ಬೇಕಾದ ಆಹಾರ ಧಾನ್ಯ, ಅಧಿಕ ಸಂಖ್ಯೆಯಲ್ಲಿದ್ದ ಕುದುರೆ, ಆನೆ ಮತ್ತು ಎತ್ತುಗಳಿಗೆ ಮೇವು ನೀರುಗಳಿಲ್ಲದೆ ರಾಜ್ಯ ಸಾಮ್ರಾಜ್ಯ, ಪಾಳೇಪಟ್ಟುಗಳ ಉಳಿವು ಸಾದ್ಯವೇ ಇರಲಿಲ್ಲ. ಕೃಷಿ ಉತ್ಪನ್ನಗಳೇ ರಾಜತ್ವದ ಸುಖ ಮೂಲವಾಗಿದ್ದವು. ಸೈನ್ಯಕ್ಕೆ ಅಥವಾ ಪರಿವಾರಕ್ಕೆ ಆಹಾರದ ಕೊರತೆಯುಂಟಾದಾಗ ಯಾವ ಮುಲಾಜು ಇಲ್ಲದೆ ತಮ್ಮದೇ ರಾಜ್ಯದ ಅಮಾಯಕ ಜನರ ಮನೆಗಳ ಮೇಲೆ ದಾಳಿ ಮಾಡುತ್ತಿದ್ದರು. ನಗನಾಣ್ಯ, ದವಸಧಾನ್ಯ ಲೂಟಿ ಮಾಡುತ್ತಿದ್ದರು. ಹಾಗಲ್ಲದಿದ್ದರೆ ಹೊಲ, ಕಣಗಳು ಮತ್ತು ಹಾದಿ ಬೀದಿಗಳಲ್ಲಿ "ಹಗೇವು" ಎಂಬ ಗುಪ್ತ ನೆಲಕಣಜಗಳು ಹುಟ್ಟುತ್ತಿರಲಿಲ್ಲ. ಈ ಹಗೇವುಗಳಿಗೆ ಹಾಕಿದರೆ ಅರ್ಧಕ್ಕರ್ಧ ದವಸ ಹಾಳಾಗುವುದು ಗೊತ್ತಿದ್ದರೂ ರಾಜನ ಕಡೆಯ ಜನರ ಕಣ್ಣು ತಪ್ಪಿಸಲು ಹೀಗೆ ಮಾಡಲೇಬೇಕಾಗಿತ್ತು. ನಗ ನಾಣ್ಯಗಳನ್ನು ಕುಡಿಕೆಯಲ್ಲಿ ಹಾಕಿ ಎಲ್ಲೆಂದರಲ್ಲಿ ಹೂಳುತ್ತಿದ್ದುದಕ್ಕೂ ಬಹುತೇಕ ಇದೇ ಕಾರಣವಾಗಿತ್ತು. ಸದಾ ಕಾಲವು ತನ್ನ ಪ್ರಭುತ್ವದ ಅಧಿಕಾರ ಮತ್ತು ಸಂಪತ್ತನ್ನು ರಕ್ಷಿಸುತ್ತಿದ್ದ ಸೈನ್ಯ ಮತ್ತು ಪುರೋಹಿತರ ಹಿತಾಸಕ್ತಿ ಮುಖ್ಯವಾಗಿತ್ತು. ರಾಜಾ ಪ್ರತ್ಯಕ್ಷ ದೇವತಾ ಎಂಬುದು ಪುರೋಹಿತ, ವಂದಿಮಾಗದರ ಉವಾಚವಾಗಿತ್ತೇ ಹೊರತು ಜನರ ಮಾತಾಗಿರಲಿಲ್ಲ. “ಅರಸು ರಾಕ್ಷಸ ಮಂತ್ರಿ ಮೊರೆವ ಹುಲಿ” ಎಂಬುದು ರಾಜಪ್ರಭುತ್ವದ ಬಗೆಗಿನ ಜನರ ನಿಜವಾದ ನಿಲುವು. ರಾಜನ ಕಣ್ಣಿಗೆ ಬೀಳಬಾರದು ಎಂಬುದು ಜನಪದ ನಿಷ್ಠುರ ನಿಲುವಾಗಿತ್ತು.
ಕೆರೆಯಂ ಕಟ್ಟಿಸು ಬಾವಿಯಂ ಸವೆಸು..... ಹಾಗೇ ಕೆರೆ ಕಟ್ಟಿಸುವುದು ಬಾವಿ ತೋಡಿಸುವುದು ಪುಣ್ಯ ಕಾರ್ಯವೆಂದು ತಿಳಿಯಲಾಗಿದ್ದುದು ನಿಜವೇ. ಯಾಕೆಂದರೆ ಇವುಗಳನ್ನು ಬಳಸುತ್ತಿದ್ದವರು ಭೂಸುರರು, ಪ್ರತ್ಯಕ್ಷದೇವರು, ಪುಣ್ಯವಂತ ಪ್ರವಾಸಿಗರು, ಶ್ರೀಮಂತ ವ್ಯಾಪಾರಿಗಳು ಅದಕ್ಕೆ ಅದು ಪುಣ್ಯಕಾರ್ಯ: ಸದರಿ ಕೆರೆಬಾವಿಗಳನ್ನು ರೈತಾಪಿ, ದಲಿತರು ಬಳಸುತ್ತಿದ್ದರೆ ಅದೇಗೆ ಪುಣ್ಯ ಕಾರ್ಯವಾಗಿ ಬಿಡುತ್ತಿತ್ತು. ನೀರು ಮುಟ್ಟಲು ಇವರೆಲ್ಲಾ ಪಾಪಿಗಳು, ನಿತ್ಯ ನರಕಿಗಳು ತಾನೇ?
ಚೋಳಾದಿ ರಾಜರಿಂದ ಕಟ್ಟಲ್ಪಟ್ಟ ಕೆರೆಗಳು ಹೆದಾರಿಗಳಿಗೆ ಹೊಂದಿಕೊAಡೇ ಇದ್ದವು. ಈ ಹೆದ್ದಾರಿಗಳಲಿದ್ದ ಕೆರೆಗಳು ಮೊದಲಿಗೆ ತೂಬುಗಳನ್ನು ಹೊಂದಿದ್ದಂತೆ ಕಾಣುವುದಿಲ್ಲ. ಈ ಬಗೆಯ ಕೆರೆಗಳು ಮಾತ್ರ ಬೃಹತ್ ಸೈನ್ಯದ ನೀರಿನ ಅಗತ್ಯತೆಯನ್ನು ಪೂರೈಸಲು ಶಕ್ತವಾಗಿದ್ದವು. ಸೈನ್ಯದ ಬಹು ಮುಖ್ಯಭಾಗವಾಗಿದ್ದ ಪ್ರಾಣಿಗಳಿಗೂ ಈ ನೀರು ಬಳಕೆಯಾಗುತ್ತಿತ್ತು. ಎರಡು ಮೂರು ವರ್ಷ ಮಳೆ ಕೈಕೊಟ್ಟರೂ, ಈ ಬಗೆಯ ಕೆರೆಗಳಲ್ಲಿ ನೀರಿಗೇನು ದುಸ್ತರವಾಗುತ್ತಿರಲಿಲ್ಲ. ನಾಡು ಬರ ಅನುಭವಿಸುತ್ತಿದ್ದರೂ ಲೂಟಿಗಾಗಿ ರಾಜ್ಯ ಒತ್ತುವರಿಗಾಗಿ, ಕ್ರೀಡೆಗಾಗಿ ಯುದ್ದಗಳು ಮುಂದುವರಿಯುತ್ತಿದ್ದವು. ದೆಹಲಿ ಸುಲ್ತಾನರು ಮತ್ತು ಮೊಗಲ್ ರಾಜರ ಪ್ರವೇಶದಿಂದ ಭಾರತ ಪ್ರದೇಶಗಳ "ಪ್ರಭುತ್ವಕ್ಕಾಗಿ ಸ್ಪರ್ಧೆ ತೀವ್ರಗೊಂಡು ರೈತ ಬಂಡಾಯಗಳು ಚಿಗುರೊಡೆಯ ತೊಡಗಿ ಮೇಲೆ 'ಉದಾರ ಪ್ರಭುತ್ವ' 'ಜನಪರ ಕಲ್ಪನೆ' ಅಲ್ಪಮಟ್ಟಿಗಾಗರೂ ಸ್ಥಾಪಿತವಾಗತೊಡಗಿತು. ಇದರ ಒಂದು ಪರಿಣಾಮವೇ ಕೆರೆ ನೀರಿನ ಮೇಲೆ ರೈತರ ತುಸುಮಟ್ಟಿನ ಹಕ್ಕು ಪ್ರಾಪ್ತವಾದದ್ದು. ಇದಕ್ಕೆ ಮುನ್ನ ಕೆರೆ ಹಿಂಭಾಗದ ಭೂಮಿ ಎಂದೂ ರೈತಾಪಿ ಜನರ ಒಡೆತನದಲ್ಲಿರದೆ ರಾಜಪರಿವಾರ, ದೇವಾಲಯಗಳು ಮತ್ತು ಪುರೋಹಿತರ ದತ್ತಿ ಭೂಮಿಯಾಗಿರುತ್ತಿತ್ತು. ಇದೇ ಪರಿಸ್ಥಿತಿ ಅಲ್ಪ ಸ್ವಲ್ಪ ಬದಲಾವಣೆಯೊಂದಿಗೆ ಇಂದಿಗೂ ಮುಂದುವರಿದು, ನದಿ ನೀರು, ಮತ್ತು ಅಂತರ್ಜಲದ ಒಡೆತನ ಮೇಲಾ಼ತಿಗಳಿಗಷ್ಟೆ ವಿಸ್ತಾರಗೊಂಡಿರುವುದು, ಯಾವಾಗಲೂ ಪ್ರಭುತ್ವಗಳು ಯಾರ ಪರ ಎಂಬುದನ್ನು ಸಾಬೀತುಪಡಿಸುವಂತಿದೆ,
ರಾಜ್ಯಗಳ ಬಾಯಾರಿಕೆಗೆ ಮಿತಿ ಇರಲಿಲ್ಲ. ಜನರಿಗೆ ಕುಡಿಯುವ ನೀರಿಗೂ ಗತಿ ಇರಲಿಲ್ಲ.
ಅತಿ ನಾಗರಿಕತೆಯ ಈ ಕಾಲವು, ಸಿಂಧೂ ನಾಗರಿಕತೆಯ ಕಾಲದ ಹರಪ್ಪ, ಮೊಹೆಂಜೊದಾರೊ ಕಾಲಿಬಂಗನ್‌ಗಳ ಒಳಚರಂಡಿ ವ್ಯವಸ್ಥೆ ಮತ್ತು ಬಹು ಅಂತಸ್ತಿನ ಕಟ್ಟಡಗಳ ಅವಶೇಷಗಳನ್ನು ವೈಭವಿಕರಿಸಿ ವಿವರಿಸಿಕೊಳ್ಳುವುದನ್ನು ರೂಢಿ ಮಾಡಿಕೊಂಡಿದೆ. ಚರಿತ್ರೆಯೊಡನೆ ಆ ಮೂಲಕವೇ ಮಾತುಕತೆಗೆ ತೊಡಗುವುದರಲ್ಲಿ ಅದು ಹೆಚ್ಚು ಸಂತಸ ಅನುಭವಿಸುತ್ತಿರುವಂತೆ ಕಾಣುತ್ತದೆ.
5000 ವರ್ಷಗಳ ಸಿಂಧೂ ನಾಗರಿಕತೆಯ ನೀರಿನ ಊನವೊಂದರ ಉ
ದಾಹರಣೆಯಿಂದ ಈ ನೀರಿನ ಊನದ ಚರಿತ್ರೆಯನ್ನು ಆರಂಭಿಸಬಹುದು. ಮೇಲೆ ಹೆಸರಿಸಿದ ಮತ್ತು ಈ ಕಾಲದ ಎಲ್ಲ ನಗರಗಳಲ್ಲಿ ಎರಡು ಬಗೆಯ ವಾಸದ ಕಟ್ಟಡಗಳಿದ್ದವು. ಕೋಟೆಯೊಳಗಿನ ಕಟ್ಟಡಗಳು, ಇನ್ನೊಂದು ಕೋಟೆಯ ಹೊರಗಿನ ಕಟ್ಟಡಗಳು. ಕೋಟೆಯೊಳಗೆ ಸುರಕ್ಷಿತವಾಗಿದ್ದ ರಾಜಕುಟುಂಬ, ಸೈನ್ಯಾಧಿಕಾರಿಗಳು, ಶ್ರೀಮಂತ ವ್ಯಾಪಾರಿಗಳು ಮತ್ತು ಪುರೋಹಿತರಿಗೆ ಸೇರಿದ್ದು ಇವು ಸಕಲ ಸೌಲಭ್ಯ ಹೊಂದಿದ್ದವು. ಪ್ರತಿ ಮನೆಯ ಒಂದು ಕಲ್ಲು ಕಟ್ಟಡದ ಬಾವಿ ಹೊಂದಿತ್ತು. ನೀರಿನ ಕೊರೆತೆ ಎಂಬುದೇ ಇವರಿಗಿರಲಿಲ್ಲ. ಆದರೆ ಕೋಟೆಯಾಚೆಯಲ್ಲಿ, ಯಾವ ರಕ್ಷಣೆಯು ಇಲ್ಲದ ಕಾಡು ಪ್ರಾಣಿಗಳ ಭಯದಿಂದ ಸದಾ ತತ್ತರಿಸುತ್ತಿದ್ದ ಕೃಷಿಕರ, ಕರಕುಶಲ ಕೆಲಸಗಾರರ, ಪಶುಪಾಲಕರ ಹಟ್ಟಿಗಳಿದ್ದವು. ಇವುಗಳಿಗೆ ಒಳಚರಂಡಿ, ರಸ್ತೆ, ಬೀದಿದೀಪ, ಮತ್ಯಾವ ಅಲಂಕಾರಗಳು ಇರಲಿಲ್ಲ ಅಲಂಕಾರದ ಮಾತು ಒತ್ತಟ್ಟಿಗಿರಿಲಿ ಕುಡಿಯುವ ನೀರಿನ ವ್ಯವಸ್ಥೆಯೆ ಅಲ್ಲಿ ಗೈರುಹಾಜರು, ಇಡೀ ಹಟ್ಟಿಗೇ ಒಂದು ಬಾವಿಯ ಗತಿ ಇರಲಿಲ್ಲ ಒಂದೇ ಕಾಲ, ಆದರೆ ಸ್ಥಳ ಬೇರೆಬೇರೆಯಾದ ಕಾರಣ ಸವಲತ್ತು ಮತ್ತು ಅವಕಾಶಗಳ ಲಭ್ಯತೆಯು ಬೇರೆಬೇರೆಯಾಯಿತು. ಇದೇ ನೀರಿನ ಸವಲತ್ತು ಮತ್ತು ಅವಕಾಶಗಳ ಲಭ್ಯತೆಯು ಬೇರೆಬೇರೆಯಾಯಿತು. ಇದೇ ನೀರಿನ ಊನ ಒಂಚೂರು ಮುಕ್ಕಾಗದೆ ಆಧುನಿಕ ಕಾಲದವರೆಗೂ ದೇಕಿಕೊಂಡು ಬಂದಿರುವುದು ಅಚ್ಚರಿಯ ಸಂಗತಿ.
ಕದಂಬ, ಚಾಲುಕ್ಯ ಗಂಗ ಇತ್ಯಾದಿ ನೂರಾರು ವಂಶಗಳ ರಾಜಾಧಿರಾಜರು ತಾವೇ ಉತ್ತರ ಭಾರತದಿಂದ ಬರಮಾಡಿಕೊಂಡ ಬ್ರಾಹ್ಮಣರಿಗಾಗಿ ಅಗ್ರಹಾರಗಳೆಂಬ ಪವಿತ್ರ ಕಾಲನಿಗಳನ್ನು ಕಟ್ಟಿಕೊಡುವುದು ತಮ್ಮ ಪುಣ್ಯವೆಂದು ತಿಳಿದಿದ್ದರು. ಅತ್ಯುತ್ತಮ ಪರಿಸರದಲ್ಲಿ ಸದರಿ ಅಗ್ರಹಾರಗಳನ್ನು ನಿರ್ಮಿಸಿ, ಕೋಟೆಯ ರಕ್ಷಣೆ ಒದಗಿಸುವುದರ ಜೊತೆಗೆ ಎಲ್ಲಾ ಸುಖ ಸವಲತ್ತುಗಳ ಅಲ್ಲಿಗೇ ಸರಬರಾಜಾಗುವಂತೆ ನೋಡಿ ರಕ್ಷಣಾತ್ಮಕ ಕಲ್ಲು ಕಟ್ಟಡವುಳ್ಳ ನೀರಿನ ಬಾವಿಯಿಂದ ಅಗ್ರ‍್ರಹಾರ ವ್ಯವಸ್ಥೆಗೊಂಡಿತ್ತು. ಇದೆಲ್ಲಾ ಸರಿಯೇ, ಅತಿಥಿ ಸತ್ಕಾರದ ಅತ್ಯುತ್ತಮ ಪರಿಯೇ. ಆದರೆ ತನ್ನ ಅರಮನೆ, ಚಿನ್ನದ ಕಿರೀಟ, ಸುಖಲೋಲಿಗೆ ಮೂಲವಾದ ತನ್ನದೆ ರಾಜ್ಯದ ಬಹು ಜನರ ಬಾಯಾರಿಕೆ ಈ ರಾಜರುಗಳಿಗೆ ಅರ್ಥವಾಗಲಿಲ್ಲವಲ್ಲ ಅದು ದುರಂತ. ಅಪಾರ ಸವಲತ್ತುಗಳು ಬೇಡ, ಊರಿಗೊಂದು ನೀರಿನ ಬಾವಿಯ ಅಗತ್ಯ ಎಷ್ಟೋ ಶತಮಾನಗಳವರೆಗೆ ಇವರಿಗೆ ಹೊಳೆಯಲಿಲ್ಲ. ವ್ಯಾಪಾರಿಗಳಿಗೆ ಪ್ರವಾಸಿಗರಿಗೆ, ಸೈನ್ಯಾಧಿಕಾರಿಗಳಿಗೆ ಅರವಟ್ಟಿಗೆ ನಿರ್ಮಿಸಲು ಉತ್ಸುಕವಾದ ಮನಸ್ಸು ತನ್ನ ಪ್ರಜೆಗಳ ಜಲ ನಿರೀಕ್ಷೆಯನ್ನು ಉಪೇಕ್ಷಿಸಿದ್ದು ರಾಜತ್ವದ ಹುಟ್ಟು ಕಿವುಡಿಗೆ ಸಾಕ್ಷಿಯಾಗಿದೆ. ದೇವಾಲಯವೊಂದನ್ನು ನಿರ್ಮಿಸುತ್ತಲೇ ಅಲ್ಲೊಂದು ಕಲ್ಯಾಣಿ ಕಟ್ಟಿಸಿದ ಮತ್ತು ಬಾವಿ ತೊಡಿಸಿದ ಮನಸ್ಸಿಗೆ, ಜನರ ನೀರಿಗೆ ಅಗತ್ಯತೆ ಕಾಣಲಿಲ್ಲವಲ್ಲ ಇದು ರಾಜ ಪ್ರಭುತ್ವದ ಹುಟ್ಟು ಕುರುಡಿಗೆ ಸಾಕ್ಷಿಯಾಗಿದೆ.
ಅರಮನೆ, ಗುರುಮನೆ, ಸೆರೆಮನೆ, ಕೋಟೆ ಕಟ್ಟಿದವರಿಗೆ ಒಂದು 'ಕನಿಷ್ಟಗೂಡು ಇರಲಿಲ್ಲ'ವೆಂಬುದು ಮತ್ತು ಬಾವಿ, ಕಲ್ಯಾಣಿ, ಕಟ್ಟೆ, ಅರವಟ್ಟಿಗೆ, ಕಟ್ಟಿಕೊಟ್ಟವರಿಗೆ ನೀರಿನ ಹಕ್ಕು ಇರಲಿಲ್ಲವೆಂಬುದು ಒಂದು ಫಲಿತಾಂಶ. ವಿಜಯನಗರದ ರಾಜಧಾನಿ ಹಂಪಿಯ ಅರಮನೆಯ ಪಕ್ಕದ ಕಲ್ಯಾಣಿಗೆ, ಅದರಾಚೆಯ ಸ್ವಲ್ಪದೂರದ ರಾಣಿಯರ ಸ್ನಾನಗೃಹದೊಳಕ್ಕೇ ತುಂಗಭದ್ರ ನದಿ ನೀರನ್ನು ನೇರವಾಗಿ ಹರಿಯುವಂತೆ ಮಾಡಿದ ಆ ಕಾಲದ ಚಾಣಕ್ಯ ಇಂಜಿನಿಯರುಗಳಿಗೆ ರಾಜಧಾನಿಯಾಚೆಯ ರೈತಾಪಿ ಜರ‍್ಯಾಕೆ ನೆನಪಾಗಲಿಲ್ಲವೆಂಬುದು ರಾಜತ್ವದ ಕೇಡಿನ ರಾಜಕಾರಣಕ್ಕೆ ಸಾಕ್ಷಿ.
( ಮುಂದಿನ ‘ಕಿನ್ನರಿ’ಗೆ)