ನೆನೆ ನೆನೆ ಆ ದಿನಗಳ
ಮರೆತು ಹೋದ ಪ್ರಾಕೃತಿಕ ಸಮತೋಲನ
ಚಂಸು ಪಾಟೀಲ
ನಮ್ಮೂರಿನ ಮುಂದೆ ಒಂದು ಹಳ್ಳ ಹರಿದಿದೆ. ಸಂತೆಹಳ್ಳ ಅಂತ ಅದರ ಹೆಸರು. ನಮ್ಮೂರಿನ ಜನ ರಾಣೇಬೆನ್ನೂರಿನ ಸಂತೆಗೆ ಹೋಗಬೇಕಾದರೆ ಅದನ್ನು ದಾಟಿಕೊಂಡೇ ಹೋಗಬೇಕಿತ್ತು. ಹೀಗಾಗಿ ಅದಕ್ಕೆ ಈ ಹೆಸರು ಬಂದಿರಬೇಕು ಎನ್ನಿಸುತ್ತದೆ.
ಅಸುಂಡಿ ಕೆರೆಯ ಕೆಳಗಿನ ಪ್ರದೇಶದಲ್ಲಿ ಹುಟ್ಟುವ ಈ ಹಳ್ಳ ದೇವರಗುಡ್ಡ(ಗುಡ್ಡಗುಡ್ಡಾಪುರ)ದ ಕೆಳಗೆ ಹರಿದು ಮೈದೂರು ಕೆರೆ ತುಂಬಿಸಿಕೊಂಡು ಚಿಕ್ಕ ಕುರವತ್ತಿ ಸಮೀಪ ತುಂಗಭದ್ರೆಯನ್ನು ಸೇರುತ್ತದೆ. ನಾವು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಶನಿವಾರ/ರವಿವಾರ ನಮ್ಮದೇ ದನ ಕಾಯುವ ಪಾಳಿ, ಈ ರಜೆ ದಿನಗಳಲ್ಲಿ ನಮಗೆ ದನ ಮೇಯಿಸುವ ಜವಾಬ್ದಾರಿ ಕೊಟ್ಟರೆ, ದಿನಂಪ್ರತಿ ದನ ಮೇಯಿಸುವವರಿಗೆ ಕಮ್ತದ ಕೆಲಸಕ್ಕೆ ಬಡ್ತಿ ಸಿಗುತಿತ್ತು.
ಆಗೆಲ್ಲ ಊರಲ್ಲಿ ಮನೆಗೆ ಕನಿಷ್ಠವೆಂದರೂ ಐದಾರು ದನ ಇದ್ದೇ ಇರುತಿದ್ದವು. ಹೀಗೆ ದನ ಮೇಯಿಸುವ ಹುಡುಗರ ದನಗಳೆಲ್ಲ ಒಟ್ಟಾಗಿಯೆ ಮೇಯುತಿದ್ದವು. ನಮ್ಮೂರಿನ ಪಶ್ಚಿಮಕ್ಕೆ ಕಲ್ಲಮಟ್ಟಿ ಅನ್ನುವ ಗುಡ್ಡವಿತ್ತು. ಅಲ್ಲಿನ ಕಲ್ಲಪ್ಪ ದೇವರಿಗೆ ಪ್ರತಿವರ್ಷ ಶ್ರಾವಣದ ಕಡೇ ಸೋಮಾರ, ಊರಿನ ಪ್ರತಿ ಮನೆಯಿಂದಲೂ ಎಡೆ ಒಯ್ದು, ಭಜನೆಯೊಂದಿಗೆ ಪೂಜೆ ಮಾಡಿಕೊಂಡು, ಅಲ್ಲೇ ಪ್ರಸಾದ ಸೇವಿಸಿ ಬರುತಿದ್ದರು. ಆ ಪರಂಪರೆ ಈಗಲೂ ಇದೆ ಆದರೂ, ಆ ಮೊದಲಿನ ಸಡಗರ, ಸಂಭ್ರಮ ಉಳಿದಿಲ್ಲ.
ಏಕೆಂದರೆ, ಕಲ್ಲಮಟ್ಟಿಯಲ್ಲಿ ಕಳೆದ ಮೂವತ್ತು ವರ್ಷದಿಂದ ನಿರಂತರವಾಗಿ ನಡೆದಿರುವ ಗಣಿಗಾರಿಕೆ ಅದರ ಮೂಲಸ್ವರೂಪವನ್ನೆ ಬದಲಿಸಿಬಿಟ್ಟಿದೆ. ಆಗ ಊರಿನ ದನಕರುಗಳಿಗೆ ಅಲ್ಲಿನ ಬಯಲು ಪ್ರದೇಶವೇ ಗೋಮಾಳವಾಗಿತ್ತು. ಕೆಲ ವರ್ಷಗಳ ಹಿಂದೆ ಆ ಗೋಮಾಳವೂ ಸೇರಿದಂತೆ ಅಕ್ಕಪಕ್ಕದ ಜಮೀನುಗಳನ್ನೂ ಖರೀದಿಸಿದ ರಾಣೇಬೆನ್ನೂರು ಎಪಿಎಂಸಿ ಅಲ್ಲೀಗ ಸುಪರ್ ಮಾರ್ಕೇಟ್ ನಿರ್ಮಿಸ ಹೊರಟಿದೆ. ನಾವು ಆಗ ಒಂದು ದಿನ ಈ ಗೋಮಾಳದ ಕಡೆಗೆ ಹೋದರೆ, ಮಾರನೇ ದಿನ ಹಳ್ಳದಲ್ಲಿ ದನಗಳನ್ನು ಮೇಯಿಸುತಿದ್ದೆವು.
ಆಗ ಹಳ್ಳದ ತುಂಬ ಕರಿಕೆ, ಜಬ್ಬಲು ಹುಲ್ಲು ಮತ್ತು ಅಲ್ಲಲ್ಲಿ ನಡುಗಡ್ಡೆಗಳಲ್ಲಿ ಈಚಲು ಗಿಡ ಬೆಳೆದಿರುತಿದ್ದವು. ಬೆಳಿಗ್ಗೆ ಊರಮುಂದೆ ಹಳ್ಳಕ್ಕೆ ದನ ಹೊಡೆದರೆ ಹಳ್ಳದಗುಂಟ ಕೆಳಗೆ ಎರಡ್ಮೂರು ಕಿ.ಮೀ. ದೂರ ಮೇಯಿಸುತ್ತ ಹೋಗುತಿದ್ದೆವು. ಅಲ್ಲಿ ಒಂದು ದೊಡ್ಡ ಗುಂಡಿ ಇತ್ತು.ಅದಕ್ಕೆ ಬಂಡರ(ಭಂಡಾರ) ಗುಂಡಿ ಎನ್ನುತಿದ್ದರು. ಬೇಸಗೆಯಲ್ಲು ಕೂಡ ಅಲ್ಲಿ ಎರಡಾಳು ನೀರು ನಿಂತಿರುತಿತ್ತು. ಮಧ್ಯಾಹ್ನ ಒಳ್ಳೆ ಏರುಬಿಸಿಲಿನ ಹೊತ್ತಿಗೆ ಎಮ್ಮೆ, ಆಕಳುಗಳೆಲ್ಲ ಸಂಪಾಗಿ ಮೇಯ್ದು ಆ ಗುಂಡಿಗೆ ಬಿದ್ದರೆ ಒಂದು ತಾಸು ಮೇಲಕ್ಕೆ ಬರುತ್ತಿರಲಿಲ್ಲ. ನಾವೂ ಆ ಗುಂಡಿಯಲ್ಲಿಯೆ ದಣಿವಾಗುವವರೆಗೂ ಈಜಾಡಿ ಊಟಕ್ಕೆ ಕೂರುತಿದ್ದೆವು. ಕೇದಿಗೆ, ಈಚಲು ಹಣ್ಣು, ಕೊಬ್ಬರಿ ಎಲ್ಲಾ ಹಳ್ಳದಲ್ಲಿಯೆ ಸಿಗುತಿದ್ದವು. ಈಚಲು ಹಾಲನ್ನು ಮಡಿಕೆಯಲ್ಲಿ ಹಾಕಿ, ಮಣ್ಣಿನಲ್ಲಿ ಹುಗಿದು ಮರುದಿನಕ್ಕೆ ಕೆನೆ ಸವಿಯುವುದೂ ಇತ್ತು.
ಅಂಥ ಹಳ್ಳ ಈಗ ಪೂರ್ತಿ ಪೀಕಜಾಲಿಯಿಂದ ತುಂಬಿ ಹೋಗಿದೆ. ಹೂಳು ತುಂಬಿ, ಒತ್ತುವರಿಯಾಗಿ, ಸಣ್ಣ ಕಾಲುವೆಯಂತಾಗಿದೆ ಅದು. ಹಳ್ಳ ಹರಿದ ಮಾರನೆ ದಿನವೆ ಹಳ್ಳದಲ್ಲಿ ನೀರು ಇರುವುದಿಲ್ಲ.! ಅಲ್ಲೀಗ ಹುಲ್ಲೂ ಇಲ್ಲ; ಕಳ್ಳಿಯೂ ಇಲ್ಲ ! ಇರುವುದೆಲ್ಲ ಜಾಲಿಮುಳ್ಳುಗಳಷ್ಟೇ! ಬೇಸಗೆಯಲ್ಲೂ ಕೂಡ ನೀರನ್ನು ಜಿನುಗಿಸುತಿದ್ದ ಹಳ್ಳದಲ್ಲಿ ಈಗ ಮಳೆಗಾಲದಲ್ಲೇ ನೀರಿರುವುದಿಲ್ಲ! ಇನ್ನು ಅಂತರ್ಜಲ ಎಲ್ಲಿಂದ, ಹೇಗೆ ಬರಬೇಕು?
ಕೆರೆಹಳ್ಳಗಳು ಸುಸ್ಥಿತಿಯಲ್ಲಿದ್ದಾಗ ಆಗಿನ ಕಾಲದ ದನಕರುಗಳೂ ಸುಖವಾಗಿದ್ದವು, ಮನುಷ್ಯರೂ ಸುಖ, ನೆಮ್ಮದಿಯಿಂದಿದ್ದರು. ಅಭಿವೃದ್ಧಿಯ ಕಲ್ಪನೆಗೆ ಕೋಡು ಮೂಡಿ ಅದಕ್ಕೆ ರಸ್ತೆ , ನಗರ, ವಾಹನ, ಬೃಹತ್ ಕಾರ್ಖಾನೆ ನಿರ್ಮಾಣ ಅನಿವಾರ್ಯ ಆದವು. ನಮ್ಮ ದೈನಂದಿನ ಬದುಕಿಗೆ ಎಲ್ಲ ರೀತಿಯಿಂದಲೂ ಆಸರೆಯಾಗಿದ್ದ ಕೆರೆ, ಹಳ್ಳ, ಹೊಳೆಗಳೆಲ್ಲ ಹೂಳು ತುಂಬಿ, ಮಲಿನಗೊಂಡು ಹವಾಮಾನ, ಬೆಳೆ ಮತ್ತು ಆರೋಗ್ಯದ ವೈಪರೀತ್ಯಗಳಿಗೆ ಕಾರಣವಾಗುತ್ತಿರುವುದು ಈ ಮಧ್ಯೆ ನಮಗೆ ಮರೆತು ಹೋಗಿದೆ! ಒಂದು ದೇಶದ ಅಭಿವೃದ್ಧಿಗೆ ರಸ್ತೆಗಳು, ನಗರಗಳು, ಅಣೆಕಟ್ಟುಗಳು ಮತ್ತು ಕೈಗಾರಿಕೆಗಳು ಎಷ್ಟು ಮುಖ್ಯವೋ, ಆ ದೇಶದ ಆರೋಗ್ಯ, ಸೌಭಾಗ್ಯಗಳಿಗೆ ಅಲ್ಲಿನ ಕೆರೆ ಹಳ್ಳ ತೊರೆಗಳೂ ಅಷ್ಟೆ ಮುಖ್ಯ ಎಂಬ ಮೂಲಭೂತ ಸತ್ಯ ನಮಗಿಂದಿಗೂ ಅರ್ಥವಾಗದೇ ಇರುವುದು ದುರಂತವೆ ಸರಿ.
ಮನೆ ಕಟ್ಟುವವರಿಗೆ ಆಗ ಈ ಹಳ್ಳಗಳಲ್ಲೆ ಉಚಿತವಾಗಿ ಮರಳು ಸಿಕ್ಕುತಿತ್ತು. ಹೊಲಕ್ಕೆ ಹೇರಲು ಫಲವತ್ತಾದ ಮಣ್ಣು ಸಿಕ್ಕುತಿತ್ತು. ಈಗ ಅದೆಲ್ಲಿದೆ? ಹಳ್ಳ ಹೋಗಲಿ ಹೊಳೆಗಳಲ್ಲೆ ಮರಳು ಸಿಕ್ಕುತ್ತಿಲ್ಲ. ಮರಳು ಇಲ್ಲದ ಹೊಳೆಗಳೆಲ್ಲ ನಿಶ್ಚೇತನವಾಗಿ, ಬಂದ ನೀರೆಲ್ಲ ಹರಿದು ಹೋಗಿ, ಬೇಸಿಗೆಯಲ್ಲಿ ಅವೆಲ್ಲ ಬಯಲು ಮೈದಾನಗಳಾಗಿ ಬರಡಾಗಿಬಿಡುತ್ತವೆ.
ಜನಸಂಖ್ಯಾ ನಿಯಂತ್ರಣದ ಬದಲಾಗಿ ಜನತಾ ಮನೆ ಹಂಚುವ, ಕಟ್ಟುವ ಸೌಲಭ್ಯದ ಹಾಗೇ, ಅಭಿವೃದ್ಧಿಯ ಹೆಸರಲ್ಲಿ ರಸ್ತೆ, ಗಟಾರು, ಒಳಚರಂಡಿ ನಿರ್ಮಾಣದ ಸೌಕರ್ಯಗಳು ಮೂಲಭೂತ ಸಮಸ್ಯೆಗಳಾಗಿ ಬದಲಾಗಿರುವ ಕಾಲಘಟ್ಟದಲ್ಲಿ ಪ್ರಾಕೃತಿಕ ಸಮತೋಲನಕ್ಕೆ ಅಗತ್ಯವಾಗಿರುವ ಮೂಲಭೂತ ಅಂಶಗಳನ್ನೇ ಮರೆತಿರುವ ಆಧುನಿಕತೆಯನ್ನು ಕಂಡಾಗ ನನಗೆ ಯಾಕೋ, ಕೈಲಾಸಂ ಅವರ ಟೊಳ್ಳುಗಟ್ಟಿ ನಾಟಕ ಮತ್ತೆ ಮತ್ತೆ ನೆನಪಾಗುತ್ತದೆ.