ಸಿದ್ದರಾಮಯ್ಯ ಮತ್ತು ಹೈಕೋರ್ಟ್ ತೀರ್ಪು – ಮುಂದೇನು?

ಅಧಿಕಾರವೇ ಅಂತಿಮ ಎಂಬ ಏಕೈಕ ಗುರಿ ಹೊಂದಿರುವ ಕ್ರೂರಿಗಳೇ ತುಂಬಿರುವ ಇವತ್ತಿನ ರಾಜಕಾರಣದಲ್ಲಿ ಮುಂದೇನಾಗಬಹುದು ಎಂಬುದನ್ನು ಊಹಿಸಲು ತೀರಾ ಬುದ್ಧಿವಂತಿಕೆಯಾಗಲೀ ಜಾಣತನವಾಗಲೀ ಬೇಕಿಲ್ಲ. ಇಲ್ಲಿ ಸಿದ್ಧರಾಮಯ್ಯನವರು ಅಪರಾಧ ಮಾಡಿದ್ದಾರೆ, ಅವರಿಗೆ ಶಿಕ್ಷೆಯಾಗುತ್ತದೆ ಎಂಬುದೆಲ್ಲ ಅಲ್ಲ, ಅವರು ಈಗ ಇರುವ ಪದವಿಯಿಂದ ಕೆಳಗೆ ಇಳಿಯುವಂತೆ ಮಾಡುವುದೇ ಈ ಪಿತೂರಿಯ ಹಿಂದಿರುವ ಎಲ್ಲರ ಏಕೈಕ ಕಾರ್ಯಸೂಚಿಯಾಗಿದೆ ಅಷ್ಟೇ.

ಸಿದ್ದರಾಮಯ್ಯ ಮತ್ತು ಹೈಕೋರ್ಟ್ ತೀರ್ಪು – ಮುಂದೇನು?


ಸುದ್ದಿ ವಿಶ್ಲೇಷಣೆ


ಕುಚ್ಚಂಗಿ ಪ್ರಸನ್ನ 


       ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಮೂರೂ ಚಿಲ್ರೆ ಎಕರೆ ಭೂಮಿಗೆ ಬದಲಾಗಿ 16 ನಿವೇಶನಗಳನ್ನು ಸಿದ್ಧರಾಮಯ್ಯನವರ ಪತ್ನಿ ಪಡೆದ ಪ್ರಕರಣದಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯ 17(ಸಿ) ಪ್ರಕಾರ ರಾಜ್ಯಪಾಲರು ಮುಖ್ಯಮಂತ್ರಿಯವರ ವಿರುದ್ಧ ತನಿಖೆ ನಡೆಸಲು ಅನುಮತಿ ನೀಡಿದ್ದರಲ್ಲಿ ತಪ್ಪಿಲ್ಲ ಎಂಬ ತೀರ್ಪನ್ನು ರಾಜ್ಯ ಹೈಕೋರ್ಟ್ ಮಂಗಳವಾರ ನೀಡಿದೆ ಮತ್ತು ಈ ಪ್ರಕರಣದಲ್ಲಿ ರಾಜ್ಯಪಾಲರ ಆದೇಶದವನ್ನು ವಜಾ ಮಾಡಬೇಕೆಂಬ ಅರ್ಜಿದಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೋರಿಕೆಯನ್ನು ನ್ಯಾಯಾಲಯ ತಳ್ಳಿ ಹಾಕಿದೆ.


    ನ್ಯಾಯಾಲಯದ ಈ ತೀರ್ಪಿನ ವಿರುದ್ಧ ವಿಭಾಗೀಯ ಪೀಠದ ಮುಂದೆ ಮೇಲ್ಮನವಿ ಸಲ್ಲಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ತೀರ್ಪು ಪ್ರಕಟವಾದ ನಂತರ ಸುದ್ದಿಗೋಷ್ಟಿಯಲ್ಲಿ ಘೋಷಿಸಿದರು. ಸುದೀರ್ಘ ವಿಚಾರಣೆ ಆಲಿಸಿದ ನ್ಯಾಯಾಧೀಶ ನಾಗಪ್ರಸನ್ನ ಅವರೇ ಸಿದ್ದರಾಮಯ್ಯನವರ ಅರ್ಜಿಯನ್ನು ವಜಾ ಮಾಡಿದ ತೀರ್ಪು ಪ್ರಕಟಿಸಿದ ಕೂಡಲೇ ನ್ಯಾಯಾಲಯದಲ್ಲಿದ್ದ ಸಿದ್ದರಾಮಯ್ಯ ಪರ ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿಯವರು ತೀರ್ಪಿನ ಅನುಷ್ಠಾನಕ್ಕೆ ತಾತ್ಕಾಲಿಕ ತಡೆ ನೀಡಲು ನ್ಯಾಯಪೀಠಕ್ಕೆ ಮನವಿ ಮಾಡಿದರು. ಆದರೆ, ಈ ಮನವಿಯನ್ನು ಸಾರಾಸಗಟಾಗಿ ತಿರಸ್ಕರಿಸಿದ ನ್ಯಾಯಮೂರ್ತಿಗಳು, ‘ಮುಖ್ಯಮಂತ್ರಿಗಳ ಕುಟುಂಬದ ಸದಸ್ಯರು ಈ ಪ್ರಕರಣದಲ್ಲಿ ಫಲಾನುಭವಿಗಳಾಗಿದ್ದಾರೆ. ಹೀಗಾಗಿ, ರಾಜ್ಯಪಾಲರ ಕ್ರಮ ಸೂಕ್ತವಾಗಿದೆ’ ಎಂದು ತಿಳಿಸಿದರೆಂದೂ ವರದಿಯಾಗಿದೆ. 


     ಹೈಕೋರ್ಟ್ ತೀರ್ಪು ಪ್ರಕಟವಾದ ಕೆಲವೇ ಗಂಟೆಗಳಲ್ಲಿ ತೀರ್ಪಿನ ಪ್ರತಿ ಸಾರ್ವಜನಿಕ ಜಾಲ ತಾಣಗಳಲ್ಲಿ ಲಭ್ಯವಾಯಿತು. ಇಂಗ್ಲಿಷ್ನಲ್ಲಿ ಬೆರಳಚ್ಚು ಮಾಡಿರುವ 197 ಪುಟಗಳ ತೀರ್ಪಿನ ಪುಟ 194-197ರಲ್ಲಿ ನ್ಯಾಯಾಲಯವು ಈ ಪ್ರಕರಣದಲ್ಲಿ ಅಂತಿಮವಾಗಿ ಕಂಡುಕೊಂಡ ನಿರ್ಧಾರಕ ಅಂಶಗಳಿವೆ. ಹಾಗೂ 196ನೇ ಪುಟದಲ್ಲಿ ಅಂತಿಮ ತೀರ್ಪನ್ನು ಘೋಷಿಸುವ ಮುನ್ನ ನ್ಯಾಯಾಧೀಶರು ಬೆಂಜಮೀನ್ ಡಿಸರೇಲಿಯವರ ಒಂದು ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ. ಆ ಹೇಳಿಕೆ ಹೀಗಿದೆ,

Before I say omega , I deem it appropriate to quote what BENJAMIN DISRAELI had to say:

“ I repeat …, All power is a trust -- that we are accountable for its exercise -- that, from the people, and for the people, all springs, and all must exist."


      ಮಾನ್ಯ ನ್ಯಾಯಾಧೀಶರು ಉಲ್ಲೇಖಿಸಿದ ಹೇಳಿಕೆಯ ಅರ್ಥವೇನೆಂದು ಅರ್ಥ ಮಾಡಿಕೊಳ್ಳುವ ಮೊದಲು ಈ ಹೇಳಿಕೆ ನೀಡಿದ ಬೆಂಜಮಿನ್ ಡಿಸರೇಲಿ ಯಾರು ಅಂತಲೂ ಗೊತ್ತು ಮಾಡಿಕೊಳ್ಳಬೇಕಿದೆ. ಈತ 19ನೇ ಶತಮಾನದ ಬ್ರಿಟಿಷ್ ಮುತ್ಸದ್ದಿ ಹಾಗೂ ಕಾದಂಬರಿಕಾರ, (1804-1881) ಕೇವಲ ಲೇಖಕನಾಗಿ ಮಾತ್ರವಲ್ಲ ಯುನೈಟೆಡ್ ಕಿಂಗ್ಡಂನ ಎರಡು ಅವಧಿಗೆ ಪ್ರಧಾನ ಮಂತ್ರಿಯೂ ಆಗಿದ್ದ ಈತನ ರಾಜಕೀಯ ಹಾಗೂ ಅಧಿಕಾರ ಕುರಿತ ಮಹತ್ವದ ಹೇಳಿಕೆಗಳಿಗಾಗಿ ಜಗತ್ತಿನ ಎಲ್ಲರೂ ಅದರಲ್ಲೂ ವಿಶೇಷವಾಗಿ ನ್ಯಾಯಾಧೀಶರು ಈತನನ್ನು ಉಲ್ಲೇಖಿಸುತ್ತಲೇ ಬಂದಿದ್ದಾರೆ. 


     ಬೆಂಜಮೀನ್ ಡಿಸರೇಲಿ ಎರಡನೇ ಅವಧಿಗೆ ಬ್ರಿಟನ್ನಿನ ಪ್ರಧಾನಿ ಅಗುವ ಮೊದಲು 1826-27ರಲ್ಲಿ ನಾಲ್ಕು ಸಂಪುಟಗಳ ʼ ವಿವಿಯನ್ʼ ಗ್ರೇ ಎಂಬ ಕಾದಂಬರಿಯನ್ನು ಬರೆಯುತ್ತಾನೆ ಮತ್ತು ಈ ಕಾದಂಬರಿ ಆ ದೇಶದ ಸಾಮಾಜಿಕ ವಲಯದಲ್ಲಿ ಬಹಳ ತಲ್ಲಣವನ್ನು ಉಂಟು ಮಾಡುತ್ತದೆ. ಆದರೆ ಬೆಂಜಮೀನ್ ಈ ಕಾದಂಬರಿಯಲ್ಲಿ ತನ್ನ ಹೆಸರು ಹಾಕಿಕೊಳ್ಳುವುದಿಲ್ಲ ಬದಲಿಗೆ ಮ್ಯಾನ್ ಆಫ್ ಫ್ಯಾಶನ್ ಎಂಬ ಅನಾಮಿಕ ಕಾವ್ಯನಾಮವನ್ನು ಕೊಟ್ಟಿರುತ್ತಾನೆ. ಕಾದಂಬರಿಯ ಪಾತ್ರ ವಿವಿಯನ್ ಗ್ರೇ ಎಂಬ ದಿಕ್ಕುತಪ್ಪಿದ, ಉದ್ಧಟ ಹಾಗು ನಿರ್ದಯಿ ಯುವಕ ರಾಜಕಾರಣದಲ್ಲಿ ಮೇಲೇರುವ ಸಲುವಾಗಿ ಏನೆಲ್ಲ ಅವಾಂತರಗಳನ್ನು ಮಾಡುತ್ತಾನೆ ಎಂಬ ಚಿತ್ರಣವನ್ನು ಬೆಂಜಮೀನ್ ನೀಡುತ್ತಾನೆ. ಬೆಂಜಮೀನ್ ವಿವಿಯನ್ ಗ್ರೇ ಹೆಸರಲ್ಲಿ ಹೇಳುವ ಎಲ್ಲವೂ ಅವತ್ತಿನ ಸಮಕಾಲೀನ ರಾಜಕಾರಣದ ಕೈಗನ್ನಡಿಯೇ ಆಗಿರುತ್ತದೆ. ಮತ್ತು ಇವತ್ತಿಗೂ ರಾಜಕಾರಣದ ಮೂಲಭೂತ ಅಂಶಗಳಲ್ಲಿ ಅಂಥ ಮಹತ್ವದ ಬದಲಾವಣೆಗಳೇನೂ ಆಗಿಲ್ಲ ಎನ್ನುವುದೂ ಸತ್ಯದ ಮತ್ತೊಂದು ಮುಖವೇ ಆಗಿದೆ.


   ಮೇಲೆ ನ್ಯಾಯಾಧೀಶರು ಉಲ್ಲೇಖಿಸಿದ ಇಲ್ಲಿ ವಿವಿಯನ್ ಗ್ರೇ ಕಾದಂಬರಿಯಲ್ಲಿನ ಒಂದು ಸಾಲಿನ ಹಿಂದಿನ ಇಡೀ ಕಂಡಿಕೆಯನ್ನು ಕನ್ನಡದಲ್ಲಿ ಹೀಗೆ ಓದಬಹುದು. 


      “ ರಾಜ್ಯಾಂಗವು ಯಾರಿಗೆ ಅಧಿಕಾರ ಹಾಗೂ ಪ್ರಭಾವವನ್ನು ಹೊಣೆಯನ್ನು ವಹಿಸಿದೆಯೋ ಅವರು ದುರ್ಬಲ ಸಹ ಜೀವಿಗಳ ಪೋಷಕರಂತೆ ಇರಬೇಕೆನ್ನುವುದನ್ನು ಮರೆಯಬಾರದು, ಅಧಿಕಾರವು ಒಂದು ನಂಬುಗೆಯಾಗಿದ್ದು ಜನರಿಂದ ಮತ್ತು ಜನರಿಗಾಗಿ ಎಲ್ಲವನ್ನು ಉಳಿಸುವ ಸಲುವಾಗಿ ಚಲಾಯಿಸುವ ನಾವು ಉತ್ತರದಾಯಿಗಳೂ ಆಗಿರಬೇಕು, ಅಗತ್ಯ ಬುದ್ದಿ, ವಿವೇಕ ಹಾಗೂ ಔಚಿತ್ಯದಿಂದ ನಮ್ಮನ್ನು ನಾವು ನಡೆಸಿಕೊಳ್ಳದೇ ಹೋದಲ್ಲಿ ಸಮಾಜದ ಇಡೀ ವ್ಯವಸ್ಥೆ ಅಸ್ತವ್ಯಸ್ತಗೊಳ್ಳುತ್ತದೆ ಹಾಗೂ ನಿರ್ದಿಷ್ಟವಾಗಿ ಭ್ರಷ್ಟಾಚಾರ ಮತ್ತು ದುರಾಡಳಿತಕ್ಕೆ ಬಲಿಯಾಗುತ್ತದೆ. ಬೈಬಲ್ನಲ್ಲಿ ಉಲ್ಲೇಖಿಸಿರುವಂತೆ ಗ್ರೀಸ್, ರೋಮ್, ಕಾರ್ತೇಜ್ ಗಳಲ್ಲದೇ ಈಗಾಗಲೇ ಪತನಗೊಂಡಿರುವ ಹಲವು ಮಹಾ ಸಾಮ್ರಾಜ್ಯಗಳ ಸಾಲಿಗೆ ಸೇರಿಬಿಡುತ್ತದೆ.”


      ಒಂದು ಅವಧಿಗಾಗಲೇ ಬ್ರಿಟನ್ ದೇಶವನ್ನು ಪ್ರಧಾನಿಯಾಗಿ ಆಳ್ವಿಕೆ ಮಾಡಿದ್ದ ಬೆಂಜಮಿನ್ ಡಿಸ್ರೇಲಿಗೆ ಸೂಕ್ಷ್ಮ ಮನದ ಲೇಖಕನೂ ಆಗಿ, ಅರಮನೆಯ ಸಿಂಹಾಸನ ಹಿಡಿಯಲು ನಡೆಯುತ್ತಿದ್ದ ಪಿತೂರಿ, ಷಡ್ಯಂತ್ರಗಳ ಅರಿವು ಸಾಕಷ್ಟು ಚೆನ್ನಾಗಿಯೇ ಆಗಿರುತ್ತದೆ. ಜೊತೆಗೆ ಆತ ಕೂಡಾ ಸಂಸದನಾಗಲು ಸಾಧ್ಯವಾಗಿದ್ದು ಬಹಳಷ್ಟು ವಿಫಲ ಯತ್ನಗಳನ್ನು ನಡೆಸಿದ ಮೇಲೆಯೇ. ಹಾಗಾಗಿ ತನ್ನ ಹೆಸರನ್ನು ನಮೂದಿಸದೇ ಅನಾಮಿಕನಾಗಿ ಬರೆದ ಕಾದಂಬರಿಯಲ್ಲಿ ಆಡಳಿತಗಾರ ಹೇಗಿರಬೇಕು ಎನ್ನುವುದನ್ನು ವಿವರಿಸುತ್ತಾನೆ.


    ಬೆಂಜಮಿನ್ ಡಿಸರೇಲಿಯ ಈ ಹೆಸರಾಂತ ಹೇಳಿಕೆಯನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ವಿ.ಆರ್.ಕೃಷ್ಣಯ್ಯರ್ ಸೇರಿದಂತೆ ಹಲವಾರು ನ್ಯಾಯಾಧೀಶರು ಹಲವಾರು ಕೇಸ್ಗಳ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.


     ಆದರೆ ಇಲ್ಲಿ ಇವತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಕರಣದಲ್ಲಿ ನ್ಯಾಯಾಧೀಶ ಎಂ.ನಾಗಪ್ರಸನ್ನ ಅವರು ಯಾರನ್ನು ಕುರಿತು ಉಲ್ಲೇಖಿಸಿದ್ದಾರೆ ಎಂಬುದನ್ನು ಅವರವರೇ ಆರ್ಥ ಮಾಡಿಕೊಳ್ಳಬೇಕಿದೆ.


    ನಾಲ್ಕು ದಶಕಗಳ ರಾಜಕೀಯ ಜೀವನದಲ್ಲಿ ಸಾರ್ವಜನಿಕವಾಗಿಯಾಗಲೀ ಖಾಸಗಿಯಾಗಿ ಆಗಲೀ ಯಾವುದೇ ತಪ್ಪು ನಡೆಗಳನ್ನು ಇಡದೇ ಬಹು ಜಾಗರೂಕತೆಯಿಂದ ರಾಜಕಾರಣ ಮಾಡಿಕೊಂಡು ವಿಧಾನ ಸಭಾ ಸದಸ್ಯನಿಂದ ಎರಡು ಸಲ ಮುಖ್ಯಮಂತ್ರಿಯಾಗುವ ತನಕ ಸಾಗಿ ಬಂದ ಸಿದ್ದರಾಮಯ್ಯನವರು , ʼಜುಜುಬಿʼ ನಿವೇಶನಗಳಿಗಾಗಿ (ಈ ಪದ ನನ್ನದಲ್ಲ, ಈ ಪ್ರಕರಣದ ವಿಚಾರಣೆಯಲ್ಲಿ ಅವರ ವಕೀಲರು ಹಾಗೂ ಹೊರಗೆ ಅವರ ಮಗ ಶಾಸಕ ಯತೀಂದ್ರ ಬಳಸಿದ್ದು) ಆಸೆಪಟ್ಟವರಲ್ಲ ಎಂಬುದು ಈ ನಾಡಿನ ಎಲ್ಲರಿಗೂ ಗೊತ್ತು. ಸಾರ್ವಜನಿಕ ಜೀವನದಲ್ಲಿ ನುಡಿದಂತೆ ನಡೆಯುತ್ತ ಬಂದ ಸಿದ್ಧರಾಮಯ್ಯನವರ ಹುಟ್ಟುಹಬ್ಬಕ್ಕೆ ದಾವಣಗೆರೆಯಲ್ಲಿ 15 ಲಕ್ಷದಷ್ಟು ಅಭಿಮಾನಿ ಜನರು ಸ್ವಪ್ರೇರಿತರಾಗಿ ಬಂದು ಸೇರಿದಾಗಲೇ ಸಿದ್ದರಾಮಯ್ಯನವರು ಒಂದು ವಿದ್ಯಮಾನವಾಗಿ ರೂಪುಗೊಂಡಿದ್ದಾರೆ ಎಂಬುದು ಅರಿವಾದದ್ದು.


     ಅಧಿಕಾರವೇ ಅಂತಿಮ ಎಂಬ ಏಕೈಕ ಗುರಿ ಹೊಂದಿರುವ ಕ್ರೂರಿಗಳೇ ತುಂಬಿರುವ ಇವತ್ತಿನ ರಾಜಕಾರಣದಲ್ಲಿ ಮುಂದೇನಾಗಬಹುದು ಎಂಬುದನ್ನು ಊಹಿಸಲು ತೀರಾ ಬುದ್ಧಿವಂತಿಕೆಯಾಗಲೀ ಜಾಣತನವಾಗಲೀ ಬೇಕಿಲ್ಲ. ಇಲ್ಲಿ ಸಿದ್ಧರಾಮಯ್ಯನವರು ಅಪರಾಧ ಮಾಡಿದ್ದಾರೆ, ಅವರಿಗೆ ಶಿಕ್ಷೆಯಾಗುತ್ತದೆ ಎಂಬುದೆಲ್ಲ ಅಲ್ಲ, ಅವರು ಈಗ ಇರುವ ಪದವಿಯಿಂದ ಕೆಳಗೆ ಇಳಿಯುವಂತೆ ಮಾಡುವುದೇ ಈ ಪಿತೂರಿಯ ಹಿಂದಿರುವ ಎಲ್ಲರ ಏಕೈಕ ಕಾರ್ಯಸೂಚಿಯಾಗಿದೆ ಅಷ್ಟೇ.


    ಕರ್ನಾಟಕದ ಮತದಾರರು ರಾಜ್ಯದ ಮೂರು ಪ್ರಮುಖ ರಾಜಕೀಯ ಪಕ್ಷಗಳ ಪೈಕಿ ಬಿಜೆಪಿ ಹಾಗೂ ಜೆಡಿಎಸ್ ಗಳಿಗೆ ಯಾವತ್ತೂ ಸರಳ ಬಹುಮತದಷ್ಟು ಶಾಸಕರನ್ನು ಗೆಲ್ಲಿಸಿಕೊಟ್ಟೇ ಇಲ್ಲ ಎನ್ನುವುದು ಸತ್ಯ. ಆದರೂ, ಈ ಎರಡೂ ಪಕ್ಷಗಳು ಪರೋಕ್ಷ ದಾರಿಗಳಲ್ಲಿ ಅಧಿಕಾರ ಅನುಭವಿಸುತ್ತಾ ಬಂದಿವೆ ಎನ್ನುವುದೂ ಮತ್ತೊಂದು ಸತ್ಯ.ಕಳೆದ ಕಾಲು ಶತಮಾನದಲ್ಲಿ ಕಾಂಗ್ರೆಸ್ ಮಾತ್ರವೇ ಮೂರು ಅವಧಿಗೆ ಅತ್ಯಧಿಕ ಸಂಖ್ಯೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಗೆದ್ದು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದಿದೆ ಹಾಗೂ ಆಡಳಿತ ನಡೆಸಿದೆ. ಈ ಸಲದ ಲೋಕಸಭಾ ಚುನಾವಣೆಯಲ್ಲೂ ಹಿಂದಿನ ಎರಡು ಅವಧಿಗೆ ಸ್ವಂತ ಬಲದ ಮೇಲೆ ಅದಿಕಾರಕ್ಕೆ ಬಂದಿದ್ದ ಬಿಜೆಪಿಯನ್ನು ದೇಶದ ಮತದಾರರು ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ. ಸರಳ ಬಹುಮತ ಪಡೆಯಲಾಗದ ಬಿಜೆಪಿ ಆಂಧ್ರದ ತೆಲುಗು ದೇಶಂ ಹಾಗೂ ಬಿಹಾರದ ಜೆಡಿಯು ಬೆಂಬಲದೊಂದಿಗೆ ಇತರ ಸಣ್ಣಪುಟ್ಟ ಪಕ್ಷಗಳ ನೆರವಿನೊಂದಿಗೆ ಅಧಿಕಾರ ಉಳಿಸಿಕೊಂಡಿದೆ.


     ಬಿಜೆಪಿ ಸೋಲಿಗೆ ಕರ್ನಾಟಕದ ರಾಜಕಾರಣದ ನೈತಿಕ ಹಾಗೂ ರಾಜಕೀಯ ಕೊಡುಗೆಯೂ ಸಾಕಷ್ಟಿದೆ ಎಂಬುದನ್ನು ಅರ್ಥ ಮಾಡಿಕೊಂಡಿರುವ ದಿಲ್ಲಿ ದೊರೆಗಳಿಗೆ ಮುಂದಿನ ಚುನಾವಣೆಯ ಹೊತ್ತಿಗೆ ಕುರುಹೂ ಇಲ್ಲದೇ ಆವಿಯಾಗಿಬಿಡುವ ಮುನ್ಸೂಚನೆಯೂ ಸಿಕ್ಕಿದೆ. ಹೀಗಾಗಿ ಕರ್ನಾಟಕದಲ್ಲಿ ಸಿದ್ದರಾಮಯ್ಯನವರಂಥ ಬೇರು ಗಟ್ಟಿಯಾಗಿರುವ ಮುಖ್ಯಮಂತ್ರಿ ಇರುವ ತನಕ ಅಲ್ಲಿ ದಿಲ್ಲಿಯಲ್ಲಿ ಮತ್ತು ಇಲ್ಲಿ ಕರ್ನಾಟಕದಲ್ಲೂ ಭವಿಷ್ಯವಿಲ್ಲ ಎಂದರಿತ ಜನರು ಹಾಗೂ ಕಾಂಗ್ರೆಸ್ ನೊಳಗೇ ಅಧಿಕಾರಕ್ಕಾಗಿ ಹಾತೊರೆಯುತ್ತಿರುವವರು ಸಿದ್ಧರಾಮಯ್ಯ ನವರ ರಾಜಕೀಯ ಅವನತಿಯನ್ನು ಬಯಸಿದ್ದಾರೆ. ಅದಕ್ಕಾಗಿ ಶ್ರಮಿಸುತ್ತಿದ್ದಾರೆ. 


    ಇಡೀ ಮೈಯ್ಯೆಲ್ಲ ಭ್ರಷ್ಟಾಚಾರದ ಕೆಸರು ಮೆತ್ತಿಕೊಂಡಿರುವವರು ಸಿದ್ಧರಾಮಯ್ಯನವರ ನಿವೇಶನ ಹಂಚಿಕೆಯಂತ ಪುಟ್ಟ ಪ್ರಕರಣವನ್ನು ಶತಮಾನದ ಅತಿ ದೊಡ್ಡ ಹಗರಣ ಎಂಬಂತೆ ಬಿಂಬಿಸುತ್ತಿದ್ದಾರೆ. ನಗರಾಭಿವೃದ್ಧಿ ಪ್ರಾಧಿಕಾರ ನಿಯಮಗಳನ್ನು ಉಲ್ಲಂಘಿಸಿ ತಪ್ಪಾಗಿ ಬದಲಿ ನಿವೇಶನ ಹಂಚಿಕೆ ಮಾಡಿದ್ದರೆ ಆ ಪ್ರಾಧಿಕಾರದ ಅಧಿಕಾರಿಗಳನ್ನು ಹೊಣೆ ಮಾಡಬೇಕಾಗಿದೆಯೇ ಹೊರತು, ಇಡೀ ಪ್ರಕರಣದಲ್ಲಿ ಯಾವುದೇ ಮೌಖಿಕ ಅಥವಾ ಲಿಖಿತ ಶಿಫಾರಸು ಮಾಡದ ಸಿದ್ದರಾಮಯ್ಯನವರನ್ನಲ್ಲ ಎಂಬ ಸತ್ಯ ಎಲ್ಲರಿಗೂ ಗೊತ್ತಿದೆ. ಆದರೆ ನ್ಯಾಯಾಲಯ ತನ್ನ ಮುಂದೆ ಬಂದ ಪ್ರಕರಣದ ಕೋರಿಕೆಗೆ ಸೀಮಿತವಾಗಿ ತೀರ್ಪು ನೀಡಿದೆಯಷ್ಟೇ. ಈ ಪ್ರಕರಣ ಸೆ.17ಎ ಅಡಿ ಅನುಮತಿ ನೀಡುವ ಕುರಿತಾಗಿದೆಯಲ್ಲದೇ ಬಿಎನ್‌ಎಸ್‌ಎಸ್ 218ರಡಿ ಆದೇಶ ನೀಡುವಲ್ಲಿ ಅಲ್ಲ ಎಂದು ಸ್ಪಷ್ಟಪಡಿಸುವ ಮೂಲಕ ತನ್ನ ವಿವೇಚನೆಯನ್ನೂ ನ್ಯಾಯಾಲಯ ತೋರಿದೆ. 


    ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾಗಿ ಎರಡನೇ ಅವಧಿಯನ್ನು ಪೂರೈಸಿ ಅತ್ಯಂತ ಗೌರವಯುತವಾಗಿ ನಿರ್ಗಮಿಸಿದರೆ ರಾಜ್ಯದ ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯದೇ ಹೋದಲ್ಲಿ ಅದಕ್ಕೆ ಅವರ ಕುಟುಂಬದ ಸದಸ್ಯರ ಹೊರತು ಮತ್ಯಾರೂ ಕಾರಣರಾಗುವುದಿಲ್ಲ. ನಿಜ ಹೇಳಬೇಕೆಂದರೆ, ಈ ಭೂಮಿ ಖರೀದಿಯಾಗಲೀ, ಬದಲಿ ನಿವೇಶನ ಪಡೆದದ್ದಾಗಲೀ ಸಿದ್ಧರಾಮಯ್ಯನವರಿಗೆ ಗೊತ್ತೇ ಇರಲಿಲ್ಲವಂತೆ, ಮತಿ ಇಲ್ಲದ ಸುತ, ಮಿತಿ ಇಲ್ಲದ ಭಟ್ಟಂಗಿಯ ಎಡವಟ್ಟು ಕಟಕಟೆ ಹತ್ತುವಂತೆ ಮಾಡಿದೆ ಎಂದು ಆಪ್ತ ವಲಯ ಗೊಣಗುತ್ತಿದೆ. ಆದರೆ ಇಡೀ ನಾಡಿನ ಜನ ಸಾಮಾನ್ಯರು ಸಿದ್ಧರಾಮಯ್ಯನವರ ಪರ ಇದ್ದ ತಕ್ಷಣ ನ್ಯಾಯಾಲಯ ಕಾನೂನು ಪುಸ್ತಕದಾಚೆ ಇಣುಕಿ ನೋಡುವುದಿಲ್ಲವಲ್ಲ .