ಬಜೆಟ್ಟನ್ನು ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ -ವೇಣುಗೋಪಾಲ್

ಬಜೆಟ್ಟನ್ನು ಕುರಿತಂತೆ ಒಂದು ಚರ್ಚೆ ಸಾಧ್ಯವಾಗಬಹುದು ಅನ್ನುವ ಕಾರಣಕ್ಕೆ ಈ ಟಿಪ್ಪಣಿಯನ್ನು ಹಂಚಿಕೊಳ್ಳುತ್ತಿದ್ದೇನೆ.

ಬಜೆಟ್ಟನ್ನು ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ -ವೇಣುಗೋಪಾಲ್

ವರ್ತಮಾನ

ಟಿ.ಎಸ್.ವೇಣುಗೋಪಾಲ್


      ಚುನಾವಣೆಯ ವರ್ಷದಲ್ಲಿ ಪೂರ್ಣ ಪ್ರಮಾಣದ ಬಜೆಟ್ಟನ್ನು ಮಂಡಿಸುವುದಿಲ್ಲ. ಮುಂದಿನ ಸರ್ಕಾರ ಅಧಿಕಾರವಹಿಸಿಕೊಳ್ಳುವವರೆಗೆ ಸರ್ಕಾರಕ್ಕೆ ಅವಶ್ಯಕ ಖರ್ಚನ್ನು ಭರಿಸಲು ಅನುಕೂಲವಾಗುವ ಉದ್ದೇಶದಿಂದ ಮಂಡಿಸುವ ಮಧ್ಯಂತರ ಬಜೆಟ್ ಇದು. ಇದರಲ್ಲಿ ಯಾವುದೇ ಪ್ರಮುಖ ನೀತಿಯನ್ನು ಘೋಷಿಸುವುದಕ್ಕೆ ಚುನಾವಣಾ ನೀತಿಯ ಪ್ರಕಾರ ಅವಕಾಶವಿರುವುದಿಲ್ಲ. ಅದು ಚುನಾವಣೆಯ ಫಲಿತಾಂಶವನ್ನು ಪ್ರಭಾವಿಸುತ್ತದೆ ಅನ್ನುವ ಕಾರಣಕ್ಕಾಗಿ ಹಾಗೆ ಮಾಡಲಾಗುತ್ತದೆ. ಹೆಚ್ಚೆಂದರೆ ಸರ್ಕಾರ ಈ ಸಮಯದಲ್ಲಿ ತನ್ನ ಕಳೆದ ವರ್ಷದ ಅಥವಾ ಕಳೆದ ಹತ್ತು ವರ್ಷದ ಸಾಧನೆಯ ಬಗ್ಗೆ ದೊಡ್ಡ ದೊಡ್ಡ ಮಾತುಗಳನ್ನು ಆಡಬಹುದು.


     ಹಾಗೆಯೇ ಸಾಮಾನ್ಯವಾಗಿ ಬಜೆಟ್ಟಿಗೆ ಮೊದಲು ಆರ್ಥಿಕ ಸಮೀಕ್ಷೆಯನ್ನು ಪ್ರಕಟಿಸಲಾಗುತ್ತದೆ. ಈ ವರ್ಷ ಸಮೀಕ್ಷೆಯನ್ನು ಪ್ರಕಟಿಸಿಲ್ಲ. ಹತ್ತು ವರ್ಷದ ವರದಿಯನ್ನು ಪ್ರಕಟಿಸಿದ್ದಾರೆ. ಅದರಲ್ಲಿ ಹತ್ತು ವರ್ಷದ ಆರ್ಥಿಕತೆಯ ವಿವಿಧ ಆಯಾಮವನ್ನು ಕುರಿತಂತೆ ಅಧಿಕೃತ ನಿಲುವನ್ನು ಪ್ರಕಟಿಸಲಾಗಿದೆ. 


    ಸಾಮಾನ್ಯವಾಗಿ ಬಜೆಟ್ ಪ್ರಕಟವಾದ ಕೂಡಲೇ ಎರಡು ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತದೆ. ಸರ್ಕಾರದ ಬೆಂಬಲಿಗರೆಲ್ಲಾ ಸರ್ಕಾರ ಅದ್ಭುತವಾದದ್ದನ್ನು ಏನೋ ಸಾಧಿಸಲಾಗಿದೆ ಎಂದು ಹೇಳಿಕೊಳ್ಳುವುದು, ವಿರೋಧ ಪಕ್ಷದವರು ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಹೇಳುವುದು ಮಾಮೂಲಿ. ಅದರಲ್ಲಿ ಸ್ವಲ್ಪ ಸತ್ಯವೂ ಇರಬಹುದು. ಆದರೆ ಗಂಭೀರವಾದ ಚರ್ಚೆ ತುಂಬಾ ಕಡಿಮೆ. ನಮ್ಮ ದೇಶದ ಮುಂದಿರುವ ಪ್ರಮುಖ ಸವಾಲುಗಳೇನು, ಅದನ್ನು ಪರಿಹರಿಸಲು ಸರ್ಕಾರ ಏನು ಕ್ರಮ ತೆಗೆದುಕೊಳ್ಳುತ್ತಿದೆ. ಅದಕ್ಕಾಗಿ ಯಾವ ರೀತಿಯಲ್ಲಿ ಹಣ ಹೂಡುತ್ತಿದೆ. ಎಲ್ಲಿಂದ ಹಣ ಕ್ರೋಡೀಕರಿಡುತ್ತಿದೆ, ಸರ್ಕಾರದ ಕ್ರಮಗಳು ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿದೆ ಇತ್ಯಾದಿ ಅಂಶಗಳ ಬಗ್ಗೆ ಚರ್ಚೆ ನಡೆಯುವುದೇ ಇಲ್ಲ. ಎಷ್ಟೋ ಬಾರಿ ಬಜೆಟ್ಟಿನಲ್ಲೂ ಆ ಬಗ್ಗೆ ಪ್ರಸ್ತಾಪವೂ ಇರುವುದಿಲ್ಲ. ಎಷ್ಟೋ ಬಾರಿ ಸರ್ಕಾರ ಪ್ರಕಟಿಸುವ ಆರ್ಥಿಕ ಸಮೀಕ್ಷೆಗಳಿಗೂ ಸರ್ಕಾರದ ಬಜೆಟ್ಟಿಗೂ ಸಂಬಂಧವೇ ಇರುವುದಿಲ್ಲ.


    ಬಜೆಟ್ಟನ್ನು ಅರ್ಥಮಾಡಿಕೊಳ್ಳುವುದು, ಅದಕ್ಕೆ ಸಕ್ರಿಯವಾಗಿ ಪ್ರತಿಕ್ರಿಯಿಸುವುದು ನಮ್ಮ ಜಬಾಬ್ದಾರಿಯೂ ಹೌದು. ಆರ್ಥಿಕ ವಿಷಯಗಳನ್ನು ಕುರಿತಂತೆ ನಿರ್ಧಾರ ತೆಗೆದುಕೊಳ್ಳುವ ಜವಾಬ್ದಾರಿಯನ್ನು ಯಾರಿಗೋ ಬಿಟ್ಟು ನಾವು ಪ್ರೇಕ್ಷಕರಾಗಿರುವುದು ಸೂಕ್ತವಲ್ಲ. ಆ ಉದ್ದೇಶದಿಂದ ಬಜೆಟ್ಟಿನಲ್ಲಿ ಚರ್ಚೆಯಾಗುವ ಕೆಲವು ಅಂಶಗಳನ್ನು ಇಲ್ಲಿ ಸುಮ್ಮನೆ ಉಲ್ಲೇಖಿಸಿದ್ದೇನೆ.


    ಬಜೆಟ್ಟಿನಲ್ಲಿ ಮೊದಲಿಗೆ ಚರ್ಚೆಯಾಗುವುದು ವರಮಾನ ಹಾಗೂ ಖರ್ಚು: ಅದಕ್ಕೆ ಸಂಬಂಧಿಸಿದಂತೆ ಸಾಮಾನ್ಯವಾಗಿ ಬಜೆಟ್ಟಿನಲ್ಲಿ ಎರಡು ಪೈ ನಕ್ಷೆಗಳು ಮೊದಲಿಗೆ ಕಾಣಿಸಿಕೊಳ್ಳುತ್ತದೆ. ಪತ್ರಕೆಯ ಮೊದಲ ಪುಟಗಳಲ್ಲಿ ಕಾಣಿಸುವುದೆ ಇದು. ಒಂದರಲ್ಲಿ ಸರ್ಕಾರಕ್ಕೆ ಯಾವ ಯಾವ ಮೂಲಗಳಿಂದ ಹಣ ಬರುತ್ತದೆ ಎಂಬುದರ ವಿವರ ಇರುತ್ತದೆ. ಇನ್ನೊಂದು ಈ ಹಣವನ್ನು ಯಾವುದಕ್ಕೆ ಖರ್ಚು ಮಾಡಲಾಗುತ್ತದೆ ಎಂಬ ಸೂಚನೆ ಇರುತ್ತದೆ. ಹಲವು ವರ್ಷಗಳ ಇಂತಹ ನಕ್ಷೆಯನ್ನು ಗಮನಿಸಿದರೆ ಸರ್ಕಾರ ಯಾವ ಹಾದಿಯಲ್ಲಿ ಸಾಗುತ್ತಿದೆ ಅನ್ನುವುದು ತಿಳಿಯುತ್ತದೆ. ಉದಾಹರಣೆಗೆ 2023-24ರಲ್ಲಿ ಶೇಕಡ 34ರಷ್ಟು ಆದಾಯ ಸಾಲದ ರೂಪದಲ್ಲಿ ಬರುತ್ತಿತ್ತು. 2015-16ರ ನಕ್ಷೆಯನ್ನು ನೋಡಿದರೆ ಅದರ ಪ್ರಮಾಣ ಶೇಕಡ 21ರಷ್ಟಿತ್ತು. ಅಂದರೆ ಈ ಸರ್ಕಾರ ಹೆಚ್ಚೆಚ್ಚು ಸಾಲ ಮಾಡಿಕೊಳ್ಳುತ್ತಿದೆ ಅನಿಸುತ್ತದೆ. ಹಾಗೆಯೇ ಆಗ ಕಂಪೆನಿಗಳ ಮೇಲಿನ ತೆರಿಗೆಗಳಿಂದ ಬರುತ್ತಿದ್ದ ವರಮಾನ ಶೇಕಡ 19ರಷ್ಟಿತ್ತು. ಈಗ ಅದು ಶೇಕಡ 15ಕ್ಕೆ ಇಳಿದಿದೆ. ಹಾಗೆಯೇ ಸರ್ಕಾರದ ಖರ್ಚನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡಬಹುದು. ಅಗ ಸಬ್ಸಿಡಿಗೆ ಅಡಿಯಲ್ಲಿ ಶೇಕಡ 10ರಷ್ಟು ಖರ್ಚಾಗುತ್ತಿತ್ತು. ಈಗ ಅದು ಶೇಕಡ 7ರಷ್ಟಾಗಿದೆ. ಅಂದರೆ ಈಗ ಅದು ಸಬ್ಸಿಡಿಯ ಮೇಲಿನ ಖರ್ಚನ್ನು ಕಡಿಮೆ ಮಾಡಿದೆ. ಅಂದರೆ ಸಬ್ಸಿಡಿ ಅದರ ಆದ್ಯತೆಯ ವಿಷಯವಲ್ಲ. ಕೇವಲ ಉದಾಹರಣೆಗಾಗಿ ಇದನ್ನು ಉಲ್ಲೇಖಿಸಿದ್ದೇನೆ.


     ಸಾಮಾನ್ಯವಾಗಿ ಗಮನಿಸುವ ಇನ್ನೊಂದು ಅಂಶಗ ಅಂದರೆ ಸರ್ಕಾರಕ್ಕೆ ತನ್ನ ಖರ್ಚನ್ನು ಭರಿಸುವ ಸಾಮರ್ಥ್ಯ ಇದೆಯಾ ಎಂಬುದು. ಇದಕ್ಕೆ ವಿತ್ತೀಯ ಕೊರತೆ ಮತ್ತೊಂದು ಬಜೆಟ್ ಕೊರತೆಯನ್ನು ಗಮನಿಸಲಾಗುತ್ತದೆ. ವಿತ್ತೀಯ ಕೊರತೆ ಸರ್ಕಾರದ ಒಟ್ಟು ಖರ್ಚು ಹಾಗೂ ವರಮಾನದ ನಡುವಿನ ಅಂತರ. ಸರಳವಾಗಿ ಹೇಳುವುದಾದರೆ ಅದು ಖರ್ಚನ್ನು ಭರಿಸಲಾಗದೆ ಮಾಡಿಕೊಂಡ ಸಾಲದ ಪ್ರಮಾಣ. ಪ್ರತಿ ವರ್ಷದ ವಿತ್ತೀಯ ಕೊರತೆ ಹೆಚ್ಚಿದಂತೆ ಸಾಲದ ಪ್ರಮಾಣ ಏರುತ್ತಾ ಹೋಗುತ್ತದೆ. ವಿತ್ತೀಯ ಶಿಸ್ತನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ವಿತ್ತೀಯ ಕೊರತೆ ಜಿಡಿಪಿಯ ಶೇಕಡ 3ರಷ್ಟನ್ನು ಮೀರಬಾರದು ಎಂದು ಮಿತಿಯನ್ನು ಹಾಕಿಕೊಳ್ಳಲಾಗಿದೆ. 


     ಹಾಗೆಯೇ ಅದಾಯದ ಕೊರತೆ ಅಂದರೆ ಸರ್ಕಾರದ ದಿನನಿತ್ಯದ ಖರ್ಚು (ಸಂಬಳ ಪಿಂಚಣಿ ಇತ್ಯಾದಿ) ಹಾಗೂ ಪ್ರತಿದಿನ ವರಮಾನ (ತೆರಿಗೆ, ಸೆಸ್ ಇತ್ಯಾದಿ) ನಡುವೆ ಅಂತರ ಸೊನ್ನೆ ಇರಬೇಕು ಅನ್ನುವ ಕಟ್ಟುಪಾಡೂ ಇತ್ತು. ಆದರೆ 2018ರಲ್ಲಿ ಆದಾಯದ ಕೊರತೆಗೆ ಸಂಬಂಧಿಸಿದ ಮಿತಿಯನ್ನು ತೆಗೆದು ಹಾಕಲಾಯಿತು. ಅಷ್ಟೇ ಅಲ್ಲ ವಿತ್ತೀಯ ಕೊರತೆಯ ಮಿತಿಯನ್ನು ಹಲವು ವರ್ಷಗಳಿಂದ ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇವೆರಡನ್ನು ಒಟ್ಟಿಗೆ ನೋಡಿದಾಗ ದೇಶದ ಆರ್ಥಿಕತೆಯ ವಾಸ್ತವ ಸ್ಥಿತಿ ಅರ್ಥವಾಗುತ್ತದೆ. ಆದಾಯದ ಕೊರತೆ ಶೂನ್ಯವಾಗಿದ್ದು, ವಿತ್ತೀಯ ಕೊರತೆ ಹೆಚ್ಚಿದ್ದರೆ ಸರ್ಕಾರ ಮೂಲಭೂತ ಸೌಕರ್ಯ ಇತ್ಯಾದಿಗಳಲ್ಲಿ ಬಂಡವಾಳ ಹೂಡುತ್ತದೆ ಅಂತ ಗ್ರಹಿಸಿಕೊಳ್ಳಬಹುದು. ಅದರಿಂದ ದೀರ್ಘಕಾಲಿನ ಅನುಕೂಲವಾಗುತ್ತದೆ. ಆದರೆ ಆದಾಯದಲ್ಲಿ ಕೊರತೆ ಹೆಚ್ಚಿದರೆ ಸರ್ಕಾರಕ್ಕೆ ದಿನನಿತ್ಯದ ಖರ್ಚನ್ನು ನಿಭಾಯಿಸಲು ಬೇಕಾದ ಹಣವನ್ನು ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ ಅಂತ ಅರ್ಥ.


     ಬಜೆಟ್ಟಿಗೆ ಸಂಬಂಧಿಸಿದಂತೆ ಇನ್ನೆರಡು ಪದಗಳು ಬಳಕೆಯಾಗುತ್ತಿರುತ್ತವೆ. ಬಜೆಟ್ ಅಂದಾಜು ಮತ್ತು ಪರಿಷ್ಕೃತ ಅಂದಾಜು. ಉದಾಹರಣೆಗೆ ಬಜೆಟ್ ಸಮಯದಲ್ಲಿ ಸರ್ಕಾರ ಜಿಎಸ್‌ಟಿ ಮೂಲಕ ಒಂದು ನಿರ್ದಿಷ್ಟ ಪ್ರಮಾಣದ ಹಣ ಸಂಗ್ರಹವಾಗುತ್ತದೆ ಅಂತ ಅಂದಾಜು ಮಾಡಿರುತ್ತದೆ. ಅದು ಬಜೆಟ್ ಅಂದಾಜು. ಆದರೆ ದಿನ ಕಳೆದಂತೆ ನಿಜವಾಗಿ ಆಗಿರುವ ಸಂಗ್ರಹಣೆಯ ಬಗ್ಗೆ ಮಾಹಿತಿ ಸಿಗುತ್ತಾ ಹೋಗುತ್ತದೆ. ಲಭ್ಯವಿರುವ ಈ ಮಾಹಿತಿಯನ್ನು ಬಳಸಿಕೊಂಡು ಪರಿಷ್ಕೃತ ಅಂದಾಜನ್ನು ಪ್ರಕಟಿಸುತ್ತದೆ. ಇದು ಖರ್ಚಿನ ವಿಷಯದಲ್ಲೂ ಆಗಬಹುದು. ಎರಡರ ನಡುವೆ ತುಂಬಾ ವ್ಯತ್ಯಾಸವಾದಾಗ ಹೋಲಿಕೆಯ ಪ್ರಶ್ನೆ ಬರುತ್ತದೆ. ಉದಾಹರಣೆಗೆ 2022-23ರ ಬಜೆಟ್ಟಿನಲ್ಲಿ ಅಲ್ಪಸಂಖ್ಯಾತರ ಅಭಿವೃದ್ದಿಗೆ ಅಂತ 1810 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿತ್ತು. ಆದರೆ ಖರ್ಚುಮಾಡಿದ್ದು ಕೇವಲ 530 ಕೋಟಿ. 2023-24ರಲ್ಲಿ ಬಜೆಟ್ಟಿನ ಅಂದಾಜಿನಲ್ಲಿ ಆ ಬಾಬ್ತಿಗೆ 610 ಕೋಟಿ ರೂಪಾಯಿಯನ್ನು ಮೀಸಲಿಡಲಾಗಿತ್ತು. ಇದು 2022-23ರ ಪರಿಷ್ಕೃತ ಅಂದಾಜಿಗೆ ಹೋಲಿಸಿದರೆ 80 ಕೋಟಿ ಹೆಚ್ಚು. ಆದರೆ ಬಜಿಟ್ ಅಂದಾಜಿಗೆ ಹೋಲಿಸಿದರೆ 1200 ಕೋಟಿ ಕಡಿಮೆ. ಯಾವುದನ್ನು ಹೋಲಿಕೆಯಾಗಿ ತೆಗೆದುಕೊಳ್ಳಬೇಕು. ಸರ್ಕಾರ ತನ್ನ ಅನುಕೂಲಕ್ಕೆ ತಕ್ಕಂತೆ ಪರಿಷ್ಕೃತ ಅಂದಾಜನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ವಿರೋದಪಕ್ಷದವರು ಬಜೆಟ್ ಅಂದಾಜಿನೊಂದಿಗೆ ಹೋಲಿಸಿ ಟೀಕಿಸುತ್ತಾರೆ. ಈಗ ನಿರ್ಧಾರವಾಗಬೇಕಾದದ್ದು ಯಾವುದು ಸರಿ ಅನ್ನುವುದು ಅಷ್ಟೆ.