ಮಹಿಳಾ ಮೀಸಲಾತಿ ಎಂಬುದು ಕನ್ನಡಿಯೊಳಗಿನ ಗಂಟು

ಡಾ.ರಾಮ ಮನೋಹರ ಲೋಹಿಯಾ ಸಮತಾ ವಿದ್ಯಾಲಯ, ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಮತ್ತು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟಗಳು  ಕಳೆದ ಶನಿವಾರ ಬೆಂಗಳೂರಿನ ಗಾಂಧಿಭವನದಲ್ಲಿ ಏರ್ಪಡಿಸಿದ್ದ ಮಹಿಳಾ ಮೀಸಲಾತಿ ಕುರಿತ ವಿಚಾರ ಸಂಕಿರಣದಲ್ಲಿ ಸಂವಿಧಾನ ತಜ್ಞ, ರಾಜ್ಯದ ಹಿಂದಿನ ಅಡ್ವೋಕೇಟ್ ಜನರಲ್ ಹಾಗೂ ಹಿರಿಯ ನ್ಯಾಯವಾದಿ  ಪ್ರೊ. ರವಿವರ್ಮಕುಮಾರ್ ಅವರು ಮಂಡಿಸಿದ ವಿಚಾರ ಇಲ್ಲಿದೆ -ಓದಿ 

ಮಹಿಳಾ ಮೀಸಲಾತಿ ಎಂಬುದು ಕನ್ನಡಿಯೊಳಗಿನ ಗಂಟು


ಇಡೀ ನಾಡಿನಲ್ಲಿ ಯಾರು ಕೂಡ ಮಹಿಳೆಯರಿಗೆ ಮೀಸಲಾತಿ ಕೊಡಬೇಕು ಅಂತ ಕೇಳದೆ ಇದ್ದ ಸಂದರ್ಭದಲ್ಲಿ ಹಿಂದುಳಿದ ವರ್ಗಗಳಿಗೆ ಮತ್ತು ಮಹಿಳೆಯರಿಗೆ 60% ಮೀಸಲಾತಿಯನ್ನು ಕೊಡಬೇಕು ಅಂತ ಒತ್ತಾಯ ಮಾಡಿದವರು ಡಾ|| ರಾಮಮನೋಹರ್ ಲೋಹಿಯಾರವರು. 

2039 ಕ್ಕೆ ಜಾರಿಯಾಗುತ್ತೆ ಎಂದು ಇಟ್ಟುಕೊಳ್ಳೋಣ. ಆದರೆ  ಅಷ್ಟೊತ್ತಿಗೆ ಇನ್ನೊಂದು ವಿಘ್ನ ಕಾದಿದೆ. ಹೊಸ ತಿದ್ದುಪಡಿಯಾದ 334 ನೇ ಪರಿಚ್ಚೇದವು ‘ಈ ಮೀಸಲಾತಿ ಹದಿನೈದು ವರ್ಷಗಳವರೆಗೆ ಮಾತ್ರ’ ಎಂದು ಹೇಳುತ್ತದೆ. ಅಂದರೆ ಈ ಕಾಯ್ದೆ ಜಾರಿಗೆ ಬಂದಾಗಿನಿಂದ ಹದಿನೈದು ವರ್ಷ ಅಂತ ಹೇಳುವುದರಿಂದ ಈ ಕಾಯ್ದೆಯನ್ನು 2023ನೇ ಇಸವಿಯಲ್ಲಿ ಜಾರಿ ಮಾಡಿದರೆ 2038 ಕ್ಕೆ ಕೊನೆಗೊಳ್ಳುತ್ತದೆ. ಅಲ್ಲಿಗೆ ಮಹಿಳಾ ಮೀಸಲಾತಿ ಕತೆ ಮುಗಿಯುತ್ತೆ. 


      ಮಹಿಳಾ ಮೀಸಲಾತಿ ಬಗ್ಗೆ ರಾಜ್ಯಸಭೆ ಮತ್ತು ಲೋಕಸಭೆಗಳಲ್ಲಿ ಮಸೂದೆ ಅಂಗೀಕಾರ ಆಗಿಬಿಟ್ಟಿದೆ. ಚರ್ಚೆ ಮಾಡುವಂತದ್ದು ಏನಿದೆ? ಚರ್ಚೆ ಮಾಡಬೇಕ? ವಿಚಾರ ಸಂಕಿರಣ ನಡೆಸಬೇಕ? ಈ ರೀತಿ ಪ್ರಶ್ನೆಯನ್ನು ಬಹಳಷ್ಟು ಜನ ಕೇಳಿದ್ದಾರೆ. ಒಂದು ಬಹಳ ಮುಖ್ಯವಾದ ಪ್ರಜಾತಂತ್ರದ ಮೂಲತತ್ವ ಏನೆಂದರೆ ಇಡೀ ನಾಡನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚರ್ಚೆ, ಅಧ್ಯಯನ ಆದ ನಂತರ ಅದು ಸೂಕ್ತಕಂಡ ರೀತಿಯಲ್ಲಿ ತೀರ್ಮಾನ ತೆಗೆದುಕೊಳ್ಳುವುದು. ಈಗ ನಾವು ಕಾಣುತ್ತಿರುವ ಹೊಸ ಪ್ರಜಾತಂತ್ರದ ಸ್ವರೂಪ ಏನಂದರೆ ಯಾರಿಗೂ ತಿಳಿಸದೆ ಸೀಕ್ರೇಟ್ ಆಗಿ ಸಂವಿಧಾನದ ತಿದ್ದುಪಡಿಯ ಬಗ್ಗೆಯೂ ಮೊದಲೇ ಯಾರಿಗೂ ಅದರ ಸೂಚನೆಯನ್ನು ಕೊಡದೆ ಏಕಾಏಕಿ ಸಂಸತ್ತಿನಲ್ಲಿ ಮಂಡಿಸಿ ಅದನ್ನು ಸಂವಿಧಾನದ ತಿದ್ದುಪಡಿಯೆಂದು ಘೋಷಣೆ ಮಾಡುತ್ತಿರುವುದು. ಈ ರೀತಿ ಹಲವಾರು ತಿದ್ದುಪಡಿಗಳು ಈಗ ಆಗಿಬಿಟ್ಟಿದ್ದಾವೆ. ಈಗಾಗಲೇ EWS ಮೀಸಲಾತಿ ಸಂವಿಧಾನಕ್ಕೆ ತಂದ ನೂರ ಮೂರನೇ ತಿದ್ದುಪಡಿ ಇದಕ್ಕೆ ಒಂದು ಉದಾಹರಣೆ. ಇಪ್ಪತ್ನಾಲ್ಕು ಗಂಟೆಯಲ್ಲಿ ಅದನ್ನು ಲೋಕಸಭೆಯಲ್ಲಿ ಪಾಸ್ ಮಾಡಲಾಯಿತು. ಮುಂದಿನ ದಿವಸ ರಾಜ್ಯ ಸಭೆಯಲ್ಲಿ ಪಾಸ್ ಮಾಡಲಾಯಿತು. ಅದೇ ಮಾದರಿಯಲ್ಲಿ ಮಹಿಳಾ ಮೀಸಲಾತಿಯ ಮಸೂದೆ ಮಾಡಿದ್ದು, ಇದರಲ್ಲಿ ಸೀಕ್ರೇಟ್ ಆಗಿ ಮಾಡುವಂತದ್ದು ಏನು?. ನನ್ನ ಪ್ರಶ್ನೆ ಯಾಕೆ ಇಷ್ಟು ತರಾತುರಿಯಲ್ಲಿ ಮಾಡಬೇಕು?.ಕೂಡಲೇ ಜಾರಿಗೆ ತರುವ ಪ್ರಮೇಯ ಇದ್ದರೆ ಸುಗ್ರೀವಾಜ್ಞೆಯನ್ನು ಮಾಡಬಹುದಿತು ಮತ್ತು ಯಾಕೆ ಇಷ್ಟು ತರಾತುರಿಯಲ್ಲಿ, ಇಷ್ಟು ಶೀಘ್ರಗತಿಯಲ್ಲಿ ನಾಡಿನಲ್ಲಿ ವಿಚಾರವನ್ನೆ ಯಾರಿಗೂ ತಿಳಿಸದೆ, ಯಾಕೆ ಮಾಡಿದ್ದಾರೆ? ಬಹಳ ಮುಖ್ಯವಾಗಿ ನಾವುಈ ತಿದ್ದುಪಡಿಯ ಮೂಲಕ ಈ ನಾಡಿಗೆ ಕೊಟ್ಟಿರುವಂತಹ ಬಳುವಳಿ ಏನು? ಏನಾಗಿದೆ ಇದರ ಮೂಲಕ?ಎಂಬುದನ್ನು ತಿಳಿದುಕೊಳ್ಳಬೇಕಾಗಿದೆ. 


  ನಾನು ಬಹಳ ಹೆಮ್ಮೆಯಿಂದ ಹೇಳ್ತೇನೆ ಮಹಿಳಾ ಮೀಸಲಾತಿಯನ್ನು ಎಲ್ಲಾ ಕಾಲಕ್ಕೂ ಸ್ವಾಗತಿಸಿದಂತಹ ಮತ್ತು ಇಡೀ ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಮಹಿಳೆಯರಿಗೆ ಮೀಸಲಾತಿ ಇರಬೇಕು ಎಂದ ಹೇಳಿದ ವ್ಯಕ್ತಿ ಡಾ|| ರಾಮಮನೋಹರಲೋಹಿಯಾ. ಇವತ್ತು ಅವರ (ಲೋಹಿಯಾ) ಗೌರವದಲ್ಲಿ ಸ್ಥಾಪನೆಯಾಗಿರುವ ಸಮತಾ ವಿದ್ಯಾಲಯದ ಆಶ್ರಯದಲ್ಲಿ ಈ ಒಂದು ಚರ್ಚೆ ನಡೀತಾಯಿರೋದು ಬಹಳ ಹೆಮ್ಮೆಯ ವಿಚಾರ. ಇಡೀ ನಾಡಿನಲ್ಲಿ ಯಾರು ಕೂಡ ಮಹಿಳೆಯರಿಗೆ ಮೀಸಲಾತಿ ಕೊಡಬೇಕು ಅಂತ ಕೇಳದೆ ಇದ್ದ ಸಂದರ್ಭದಲ್ಲಿ ಹಿಂದುಳಿದ ವರ್ಗಗಳಿಗೆ ಮತ್ತು ಮಹಿಳೆಯರಿಗೆ 60% ಮೀಸಲಾತಿಯನ್ನು ಕೊಡಬೇಕು ಅಂತ ಒತ್ತಾಯ ಮಾಡಿದವರು ಡಾ|| ರಾಮಮನೋಹರ್ ಲೋಹಿಯಾರವರು. 


  ಇದು ಪ್ರಪ್ರಥಮವಾಗಿ ಸಂಸತ್ತಿನ ಮುಂದೆ ಬಂದಿರುವಂತಹ ವಿಚಾರವಲ್ಲ. 1989ರಲ್ಲಿ ರಾಜೀವ್ ಗಾಂಧಿಯವರು  ಪ್ರಧಾನಮಂತ್ರಿಯಾಗಿದ್ದಾಗ ಒಂದು ಪ್ರಯತ್ನ ನಡೆಯಿತು.1996ರಲ್ಲಿ ದೇವೇಗೌಡರು ಪ್ರಧಾನಮಂತ್ರಿಯಾಗಿದ್ದಾಗಲೂ ಒಂದು ಪ್ರಯತ್ನ ನಡೆಯಿತು. ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಮಂತ್ರಿಯಾಗಿದ್ದಾಗ ಎರಡು ಮಸೂದೆಗಳನ್ನು ಮಂಡಿಸುವ ಪ್ರಯತ್ನ ನಡೆಯಿತು. ಕೊನೆಗೆ ಮನಮೋಹನ್‌ಸಿಂಗ್‌ರವರು ಪ್ರಧಾನ ಮಂತ್ರಿಗಳಾಗಿದ್ದಾಗ ಅವರು ಮಂಡಿಸಿದ ಮಸೂದೆ ರಾಜ್ಯ ಸಭೆಯಲ್ಲಿ ಪಾಸ್ ಆಗಿ ಲೋಕಸಬೆಗೆ ಹೋಗಬೇಕಾದ ಸನ್ನಿವೇಶದಲ್ಲಿ ಲೋಕಸಭೆ ಅದನ್ನು ಚರ್ಚೆಗೂ ಕೈಗೆ ಎತ್ತಿಕೊಳ್ಳದೆ ಅದರ ಅವಧಿ ಮುಗಿದ ಕಾರಣ ಆ ಮಸೂದೆ ಮುಂದುವರಿದಿದೆ. ಇವತ್ತು ಆ ಮಸೂದೆ ಜೀವಂತವಾಗಿದೆಯೇ? ಇಲ್ಲವೇ? ಅನ್ನುವ ವಿಚಾರ ಬಹಳ ದೊಡ್ಡದಾಗಿ ನಮ್ಮ ನಾಡಿನ ಪ್ರಜ್ಞಾವಂತರಲ್ಲಿ ಚರ್ಚೆಯಾಗ್ತ ಇದೆ. ನನ್ನ ಅಭಿಪ್ರಾಯದಲ್ಲಿ ಒಂದು ಸಲ ರಾಜ್ಯಸಭೆ ಅದಕ್ಕೆ ಅನುಮೋದನೆ ಕೊಟ್ಟಿದೆಯೆಂದರೆ ಲೋಕಸಭೆ ಅದನ್ನು ಕೈಗೆ ತೆಗೆದುಕೊಂಡು ತಿರಸ್ಕರಿಸುವವರೆಗೂ ಆ ಮಸೂದೆ ಜೀವಂತವಾಗಿರುತ್ತದೆ. ಅಂದರೆ ಮನಮೋಹನ್‌ಸಿಂಗ್‌ರವರು ಮಂಡಿಸಿದ ಮಸೂದೆ ಇನ್ನು ಜೀವಂತವಾಗಿದೆ. ಇರಲಿ, ಇದರಿಂದ ಪಾರ್ಲಿಮೆಂಟ್‌ಗೆ ಯಾವುದೇ ಬಾಧಕವಿಲ್ಲ. ಇನ್ನೊಂದು ಹೊಸ ಮಸೂದೆಯನ್ನು ಮಂಡಿಸಬಹುದು ಮತ್ತು ಪಾಸ್ ಮಾಡಬಹುದು. ಆ ಪ್ರಕಾರ ಈಗ ಹೊಸ ಮಸೂದೆಯನ್ನು ಮಂಡಿಸಿ ಪಾಸ್ ಮಾಡಿ ಕಾಯ್ದೆ ಮಾಡುವ ಹಂತಕ್ಕೆ ಸಂವಿಧಾನದ ತಿದ್ದುಪಡಿಯನ್ನು ಘೋಷಣೆ ಮಾಡಲಾಗಿದೆ. 


ನನ್ನ ಪುಟ್ಟ ವಿಶ್ಲೇಷಣೆ ಏನೆಂದರೆ ತರಾತುರಿಯಲ್ಲಿ ಮಾಡಿದ ಸಂವಿಧಾನದ ತಿದ್ದುಪಡಿ ಮಹಿಳೆಯರಿಗೆ ಏನು ಕೊಟ್ಟಿದೆ?.ಸದ್ಯದಲ್ಲೇ ಐದು ರಾಜ್ಯಗಳಲ್ಲಿ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಆ ಚುನಾವಣೆಗಳಿಗೂ ಮತ್ತು ಈ ಮಹಿಳಾ ಮೀಸಲಾತಿ ಮಸೂದೆಗೂ ಏನೂ ಸಂಬಂಧವಿಲ್ಲ. ಹಾಗೇನೇ 2024ನೇ ಇಸವಿಯಲ್ಲಿ ನಡೆಯಲಿರುವ ಸಂಸತ್ತಿನ ಚುನಾವಣೆಗೂ ಕೂಡ ಈ ಮಸೂದೆ ಅನ್ವಯಿಸುವುದಿಲ್ಲ. ಬದಲಾಗಿ ವಿಶೇಷ ಸಂಸತ್ತನ್ನು ಕರೆದು ತರಲಾಗಿರುವ ಮಸೂದೆ ಜಾರಿಗೆ ಬಂದಿದೆಯಾ ಎಂದರೆ ಉತ್ತರ ‘ಇಲ್ಲ’. ಯಾಕಪ್ಪ ಅಂತಂದ್ರೆ? ಮಸೂದೆಯ ಸೆಕ್ಷನ್ 1 ಅನ್ನು ಓದಿದರೆ  ಕೇಂದ್ರ ಸರ್ಕಾರ ನಿರ್ಧರಿಸಿ ಪ್ರಕಟಿಸಿ ಈ ಮಸೂದೆ ಜಾರಿಗೆ ಬರಬೇಕು ಅಂತ ಹೇಳಿದ ದಿನಾಂಕದಂದು ಮಸೂದೆ ಜಾರಿಗೆ ಬರುತ್ತೆ ಅಂತ ಮಸೂದೇನೆ ಹೇಳುತ್ತೆ.  ಒಂದು ಮಾತನ್ನು ಇಲ್ಲಿ ನೆನಪಿಸುತ್ತೇನೆ. ಸಂವಿಧಾನದ ಪರಿಚ್ಛೇದ 368ರಲ್ಲಿ ಈ ತರದ ಒಂದು ತಿದ್ದುಪಡಿಗೆ  ಅವಕಾಶವಿದೆ. ಇದು ಸಂಸತ್ತಿನ ಸದಸ್ಯತ್ವದ ತಿದ್ದುಪಡಿ ಆಗಿರುವುದರಿಂದ ಇದನ್ನು ಉಭಯ ಸದನಗಳು ಅನುಮೋದಿಸುವುದಲ್ಲದೆ, ರಾಷ್ಟ್ರದ ಶೇಕಡ ಅರ್ಧದಷ್ಟು ರಾಜ್ಯಗಳು ಇದನ್ನು ವಿಧಾನಮಂಡಲಗಳಲ್ಲಿ ಅನುಮೋದಿಸಬೇಕು. ಅದರ ಬಗ್ಗೆ ಏನು ತರ್ಕವಿಲ್ಲ.ಆ ರೀತಿ ಬರುವಂತಹ ತಿದ್ದುಪಡಿ ಯಾವಾಗ ಜಾರಿಗೆ ಬರುತ್ತೆ ಅನ್ನೋದನ್ನು ಕೂಡ ಸಂವಿಧಾನ ಹೇಳಿಬಿಟ್ಟಿದೆ. ಸಂವಿಧಾನದ ಅನುಚ್ಚೇದ 368(2) ಈ ರೀತಿ ಹೇಳುತ್ತದೆ. 


ಅನುಚ್ಚೇದ 368(2) : ಈ ಸಂವಿಧಾನದ ಒಂದು ತಿದ್ದುಪಡಿಯನ್ನು ಆ ಉದ್ದೇಶಕ್ಕಾಗಿ ಒಂದು ವಿಧೇಯಕವನ್ನು ಸಂಸತ್ತಿನ ಯಾವುದಾದರೊಂದು ಸದನದಲ್ಲಿ ಮಂಡಿಸುವ ಮೂಲಕ ಮಾತ್ರ ಪ್ರಾರಂಭಿಸಬಹುದು ಮತ್ತು ಪ್ರತಿಯೊಂದು ಸದನದಲ್ಲಿ ಆ ಸದನದ ಒಟ್ಟು ಸದಸ್ಯರ ಬಹುಮತದಿಂದ ಮತ್ತು ಆ ಸದನದ ಸದಸ್ಯರ ಪೈಕಿ ಹಾಜರಿದ್ದು ಮತಕೊಡುವ ಸದಸ್ಯರಲ್ಲಿ ಮೂರನೆ ಎರಡು ಭಾಗಕ್ಕೆ ಕಡಿಮೆ ಇಲ್ಲದಷ್ಟು ಸದಸ್ಯರ ಬಹುಮತದಿಂದ ಈ ವಿಧೇಯಕವು ಅಂಗೀಕೃತವಾದ ಬಳಿಕ (ಅದನ್ನು ರಾಷ್ಟಪತಿಗೆ ಒಪ್ಪಿಸತಕ್ಕದ್ದು, ಅದಕ್ಕೆ ಅವರು ಅನುಮತಿ ನೀಡತಕ್ಕದ್ದು ಮತ್ತು ಆ ತರುವಾಯ)  ಸಂವಿಧಾನವು ಆ ವಿಧೇಯಕದ ನಿಬಂಧನೆಗಳಿಗನುಸಾರ ತಿದ್ದುಪಡಿಯಾಗಿದೆ ಎಂದು ಭಾವಿಸತಕ್ಕದು.


ಅದರಂತೆ ಮಹಿಳಾ ಮೀಸಲಾತಿ ಮಸೂದೆ ಸದನದಲ್ಲಿ ಅಂಗೀಕೃತವಾಗಿದ್ದು ಆದರೆ ರಾಷ್ಟ್ರಪತಿಗೆ ಇನ್ನೂ ಹೋಗಿಲ್ಲ. ( ಸೆ.29ರ ಶುಕ್ರವಾರ ಈ ಮಸೂದೆಗೆ ರಾಷ್ಟ್ರಪತಿಯವರ ಅಂಕಿತವಾಗಿದೆ) ಒಂದು ಸಲ ರಾಷ್ಟ್ರಪತಿಯವರು ಅಂಕಿತ ಹಾಕಿದರೆ ಸಂವಿಧಾನದ ತಿದ್ದುಪಡಿಯಾದಂತೆ ಆಗುತ್ತದೆ. ಇದಕ್ಕೆ ಯಾರ ಅಪ್ಪಣೆಯೂ ಬೇಕಾಗಿಲ್ಲ, ಕೇಂದ್ರ ಸರ್ಕಾರದ ಅಪ್ಪಣೆನೂ ಬೇಕಾಗಿಲ್ಲ. ಸಂಸತ್ತು ತಂದ ತಿದ್ದುಪಡಿಗೆ ಕೇಂದ್ರ ಸರ್ಕಾರದ ಅಂಕಿತ ಬೀಳಬೇಕಾಗಿಯೂ ಇಲ್ಲ.ಆದರೆ, ಕೇಂದ್ರ ಸರ್ಕಾರದ ಇರಾದೆ ಏನು ಅಂದರೆ ಇದನ್ನು ಜಾರಿಗೆ ಮಾಡುವ ಉದ್ದೇಶವಾಗಲೀ, ಮನಸ್ಸಾಗಲೀ ಇಲ. 2024 ರ ಚುನಾವಣೆಗೂ ಕೊಡೋದಿಲ್ಲ, 2029ನೇ ಚುನಾವಣೆಗೂ ಕೊಡೋದಿಲ್ಲ.  ಯಾಕೆ ಎಂದರೆ ಯಾವತ್ತು ಜಾರಿಗೊಳಿಸಬೇಕು ಎಂಬುದು ಅವರ ಕೈಯಲ್ಲಿದೆ. ಜಾರಿಗೊಳಿಸಬೇಕೆ? ಬೇಡ್ವೆ? ಎಂಬುದು ಕೇಂದ್ರ ಸರ್ಕಾರದ ಆಜ್ಞೆಗೆ ಒಳಪಟ್ಟಿದೆ. ಇದು ಸಂವಿಧಾನಕ್ಕೆ ಮಾಡಿದ ಅಪಚಾರ. ಇದು ಇರದಿದ್ದರೆ ರಾಷ್ಟ್ರಪತಿಗಳ ಅಂಕಿತ ಆದ ಕೂಡಲೇ ಜಾರಿಗೆ ಬಂದು 2024 ರ ಸಂಸತ್ತಿನ ಚುನಾವಣೆಯಲ್ಲಿ ನಾವು ಮಹಿಳಾ ಮೀಸಲಾತಿಯನ್ನು ನೋಡ್ತ ಇದ್ದೆವು. ಆದರೆ ಮಹಿಳಾ ಮೀಸಲಾತಿ ಕೊಡಲಿಕ್ಕೆ ಡಿಲಿಮಿಟೇಶನ್ ಮಾಡಬೇಕಾ? ಡಿಲಿಮಿಟೇಶನ್ ಇಲ್ಲದೆಯೂ ಎಸ್ಸಿ, ಎಸ್ಟಿ ಮಹಿಳೆಯರಿಗೆ ಕೊಡಬಹುದಿತ್ತು. ಎಸ್ಸಿ,ಎಸ್ಟಿ ಅಂತ ಬಂದಾಗ ಜನಸಂಖ್ಯೆಗನುಗುಣವಾಗಿ ಕೊಡಬೇಕು ಅಂತಿದೆ. ಮಹಿಳೆಯರಿಗೆ ಅದೂ ಇಲ್ಲ. ಕೊಟ್ಟಿರೋದು ಒನ್ ಥರ್ಢ್. ಅದನ್ನು ಯಾವ ರೀತಿ ಕೊಟ್ಟರೇನು?. ಆಲ್ಫಾಬೆಟಿಕಲ್  ಆರ್ಡರ್‌ನಲ್ಲಿ ಕ್ಷೇತ್ರಗಳನ್ನು ಜೋಡಿಸಿದರೂ ಕೊಡಬಹುದು, ಈಗ ಇರುವಂತೆ 1,2,3 ಅಂತ ಇಟ್ಟುಕೊಂಡರೂ ರೋಸ್ಟರ್ ಅನುಸರಿಸಿ ಕೊಡಬಹುದಿತ್ತು. 


ಅಷ್ಟೇ ಮುಖ್ಯವಾಗಿ ಯಾವುದೇ ಚುನಾವಣೆಯಲ್ಲಿ ಮಹಿಳೆಯರಿಗೆ ಮೀಸಲಾತಿ ಕೊಡಬೇಕಾಗಿಲ್ಲ ಎನ್ನುವ ದೃಷ್ಠಿಯಲ್ಲಿ ಇನ್ನೊಂದು ಕಂಡೀಷನ್ ಅನ್ನು ಸೇರಿಸಲಾಗಿದೆ. ಅದು ಏನೆಂದರೆ ಹೊಸದಾಗಿ ಸೇರ್ಪಡೆಯಾದಂತಹ 334(ಎ)ಪರಿಚ್ಛೇದವು ಈ ಕಾಯ್ದೆ ಜಾರಿಯಾದ ನಂತರ ನಡೆಯುವ ಮೊದಲನೆಯ ಜನಗಣತಿಯ ಆಧಾರದ ಮೇಲೆ ನಡೆಯುವ ಡಿಲಿಮಿಟೇಶನ್ ಪ್ರಕ್ರಿಯೆ ಮೂಲಕ ಈ ಮೀಸಲಾತಿ ಜಾರಿಗೊಳಿಸಬೇಕು ಎಂದು ಹೇಳುತ್ತದೆ. ಆದರೆ,2021ನೇ ಇಸವಿಯಲ್ಲಿ ನಡೆಯಬೇಕಾದ ಜನಗಣತಿ ಇದುವರೆಗೂ ನಡೆದೇ ಇಲ್ಲ. ಪ್ರತಿ ಸಲ ಜನಗಣತಿ ನಡೆದಾಗ, ತಾಲ್ಲೂಕಿನ, ಜಿಲ್ಲೆಯ ಮತ್ತು ರಾಜ್ಯದ ಜನಸಂಖ್ಯೆ ಮತ್ತು ಕೆಲವು ವೇಳೆ ಗಡಿಗಳನ್ನು ಬದಲಾವಣೆ ಮಾಡಬೇಕಾದ ಸನ್ನಿವೇಶ ಬರುತ್ತದೆ. ಈ ಕಾರ‍್ಯವನ್ನು ಭಾರತದ ರಿಜಿಸ್ಟ್ರಾರ್ ಜನರಲ್ ಹಾಗೂ ಜನಗಣತಿ ಆಯುಕ್ತರು ಇದುವರೆಗೆ ಎಂಟುಬಾರಿ ಮುಂದೂಡಿದ್ದಾರೆ. ನಾವು ಬಹಳ ದೊಡ್ಡದಾಗಿ ಜಿ-20 ಕುಟುಂಬದ ಅಧ್ಯಕ್ಷರು ಅಂತ ಮೆರೆದಿದ್ದನ್ನು ನಾವೆಲ್ಲ ನೋಡಿದ್ದೇವೆ. ಈ ಜಿ-20ಯ ಇಪ್ಪತ್ತು ರಾಷ್ಟ್ರಗಳಲ್ಲಿ ಯಾವುದಾದರೂ ರಾಷ್ಟ್ರ  ಇದುವರೆಗೂ ಜನಗಣತಿ ಮಾಡದೆ ಇನ್ನೂ ರಾಜ್ಯಭಾರ ಮಾಡ್ತಾ ಇದೆ ಅಂದರೆ ಅದು ಭಾರತ ಮಾತ್ರ.(ಹಾಗಾಗಿ ಮುಂದಿನ ಜನಗಣತಿ ಆದ ಬಳಿಕ ಆ ಗಣತಿಯಲ್ಲಿ ಒದಗಿಬರುವ ದತ್ತಾಂಶ ಆಧರಿಸಿ ಮೀಸಲಾತಿ ನೀಡಬೇಕೆಂಬುದು ಇದರ ಅರ್ಥ)


ಜನಗಣತಿಯ ಬಗ್ಗೆ ಕೆಲವು ಸಮುದಾಯಗಳಿಗೆ, ಕೆಲವು ಆಡಳಿತಗಾರರಿಗೆ ಅಪನಂಬಿಕೆ ಅವಿಶ್ವಾಸ ಇದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಮಾಹಿತಿಯನ್ನು ಕೊಡದೆ ಇರುವುದರ ಬಗ್ಗೆ ಬಹಳ ಬಲವಾದ ನಂಬಿಕೆ ಇದೆ. ಏಕೆಂದರೆ ಮೊದಲು ಜನಗಣತಿ ನಡೆದದ್ದು 1872 ನೇ  ಇಸವಿಯಲ್ಲಿ. ಅಲ್ಲಿಯವರೆಗೂ ಮೀಸಲಾತಿ ಅನ್ನುವುದು ಗೊತ್ತಿರಲಿಲ್ಲ. ಯಾವ ಜಾತಿ ಎಷ್ಟು ಜನಸಂಖ್ಯೆ ಇದೆ, ಅವರ ಬಲ ಎಷ್ಟು? ಎಂಬುದು ಯಾರಿಗೂ ಗೊತ್ತಿರಲಿಲ್ಲ. ಸೈನ್ಯ ನೋಡಿದರೆ ಬರೀ ರಜಪೂತರು, ಯಾವ ದೇವಸ್ಥಾನ, ಮದುವೆ ನೋಡಿದರೆ ಬರೀ ಪುರೋಹಿತರು ಕಾಣುತ್ತಿದ್ದರು. ಹಾಗಾಗಿ ಇವರೇ ಜನಸಂಖ್ಯೆಯಲ್ಲಿ ಜಾಸ್ತಿ ಇದ್ದಾರೆ ಎಂದು ನಂಬಲಾಗಿತ್ತು.ಈ ಪುರೋಹಿತರ ಮತ್ತು ಅಧಿಕಾರದ ಚುಕ್ಕಾಣಿ ಹಿಡಿದಿರುವವರ ಜನಸಂಖ್ಯೆ ಕೇವಲ ಶೇ 3 ರಷ್ಟು ಎಂಬುದನ್ನು 1872 ರ ಜನಗಣತಿ ಹೇಳಿತು. ತಕ್ಷಣ ಅಂದಿನ ಆಡಳಿತ ಯಾವುದೇ ಒಂದು ಜಾತಿ ಇಡೀ ರಾಜ್ಯದ ಚುಕ್ಕಾಣಿಯನ್ನು ಹಿಡಿಯುವುದು ತಪ್ಪು, ಸಮತೋಲನ ಕಾಯ್ದುಕೊಳ್ಳಬೇಕು ಎಂದರೆ ಬೇರೆ ಜಾತಿಗಳಿಗೂ ಅವಕಾಶ ಕೊಡಬೇಕು ಎಂದು ಯೋಚನೆ ಮಾಡಿತು. ಹಾಗಾಗಿ 1874 ನೇ ಇಸವಿಯಲ್ಲಿ ಮೈಸೂರು ಸಂಸ್ಥಾನದಲ್ಲಿ ಮೊಟ್ಟ ಮೊದಲ ಬಾರಿಗೆ ಮೀಸಲಾತಿ ಜಾರಿಗೊಂಡಿತು. ಈ ಮೀಸಲಾತಿ ನೀತಿ ಇಡೀ ಪ್ರಪಂಚಕ್ಕೆ ಮಾದರಿಯಾಗಿದೆ. ಬಹು ಸಮುದಾಯಗಳಿರುವ ಬಹುತ್ವದ ಸಮಾಜದಲ್ಲಿ ಒಳಗೊಳ್ಳುವ ಆಡಳಿತ ಕೊಡಬೇಕು ಎಂದರೆ ಇರುವ ಏಕೈಕ ಮಾರ್ಗ ಮೀಸಲಾತಿ. ಆ ಮೂಲಕ ಜಾತಿ ಜಾತಿಗಳ ನಡುವೆ ಸಮತೋಲನ ಕಾಪಾಡಬೇಕು ಮತ್ತು ಎಲ್ಲ ಜಾತಿಗಳಿಗೂ ಸಮಾನ ಅವಕಾಶ ಕೊಡಬೇಕು. ಎಲ್ಲ ಜಾತಿಗಳ ಪ್ರತಿಭಾವಂತರಿಗೆ ಆಡಳಿತದಲ್ಲಿ, ಶಿಕ್ಷಣದಲ್ಲಿ, ರಾಜಕೀಯದಲ್ಲಿ ಸಮಪಾಲು ಸಿಗುವಂತೆ ನೋಡಿಕೊಳ್ಳಬೇಕು ಎನ್ನುವ ದೃಷ್ಟಿಯಿಂದ ಮೀಸಲಾತಿಯ ಪರಿಕಲ್ಪನೆಯನ್ನು ತರಲಾಯಿತು. ಇದು 1872 ರಲ್ಲಿ ಮಾಡಿದ ಜನಗಣತಿಯಿಂದ ಸಾಧ್ಯವಾಯಿತು. ಬ್ರಿಟೀ಼ಷರು ಈ ದೇಶದಲ್ಲಿ ಇರುವವರೆಗೆ ಜಾತಿಯನ್ನು ಸೇರಿಸಿಕೊಂಡು ಜನಗಣತಿಯನ್ನು ಮಾಡುತ್ತಿದ್ದರು. ನಿರ್ದಿಷ್ಟವಾಗಿ ಪ್ರತಿ ಜಾತಿಯ ಜನಸಂಖ್ಯೆ, ವಿದ್ಯಾವಂತರ ಸಂಖ್ಯೆ, ಉದ್ಯೋಗಸ್ಥರ ಸಂಖ್ಯೆ, ಅವರ ಶಿಕ್ಷಣಮಟ್ಟ ಮತ್ತು ಆಸ್ತಿಯ ವಿವರಗಳನ್ನೊಳಗೊಂಡ ಮಾಹಿತಿಯನ್ನು ಜನಗಣತಿಯ ಮೂಲಕ ಕೊಡಲಾಗುತ್ತಿತ್ತು. ಭಾರತ ಸ್ವತಂತ್ರವಾದ ನಂತರ ನಡೆದ  ಮೊದಲ ಮೊದಲನೆ ಜನಗಣತಿಯಿಂದ ಈ ರೀತಿಯ ವಿವರಗಳನ್ನೊಳಗೊಂಡ ಜನಗಣತಿಯನ್ನು ನಿಲ್ಲಿಸಿ ಕುರಿಮಂದೆಯನ್ನೋ, ದನಗಳನ್ನೋ ಎಣಿಸುವಂತೆ ಬರೀ ತಲೆ ಎಣಿಸುವ ಜನಗಣತಿಯನ್ನು ನಡೆಸಿಕೊಂಡು ಬರುವ ಪರಿಪಾಠವನ್ನು ಆರಂಭಿಸಲಾಯಿತು. ಜಾತಿಗಳ ಯಾವುದೇ ಮಾಹಿತಿ ಸಂಗ್ರಹವನ್ನು ಮಾಡುತ್ತಿಲ್ಲ. ಈ ರೀತಿಯ ಮಾಹಿತಿ ಸಂಗ್ರಹಣೆಗೆ ಬಹಳ ಪ್ರಬಲವಾದ ವಿರೋಧವಿದೆ. ಅದೇ ಕಾರಣಕ್ಕೆ ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು ಅಧ್ಯಕ್ಷರಾದ ಎಚ್.ಕಾಂತರಾಜು ನೇತೃತ್ವದಲ್ಲಿ ನಡೆಸಿದಂತಹ ಅತ್ಯಂತ ಪ್ರಜ್ಞಾವಂತ ವೈಜ್ಞಾನಿಕವಾದ ಜಾತಿ ಸಮೀಕ್ಷಾ ವರದಿ ಸರ್ಕಾರಕ್ಕೆ ತಲುಪಿಯೇ ಇಲ್ಲ ಹಾಗೂ 2021 ರ ಜನಗಣತಿ ಇದುವರೆಗೂ ನಡೆದಿಲ್ಲ.


ಮಹಿಳೆಯರಿಗೆ ಮೀಸಲಾತಿ ಕೊಡಬೇಕು ಅನ್ನುವುದು ಇನ್ನೂ ಸೇರ್ಪಡೆಯಾಗಿರದಿದ್ದರೂ ಜನಗಣತಿಯನ್ನು ಮುಂದೂಡುತ್ತ ಬಂದಿದ್ದಾರೆ. ಇನ್ನು ಸೇರ್ಪಡೆಯಾದರೆ ಸದ್ಯದ ಪರಿಸ್ಥಿತಿಯಲ್ಲಿ ಜನಗಣತಿಯಾಗುವ ಸೂಚನೆಗಳು ಕಾಣುತ್ತಿಲ್ಲ. 2026ರಲ್ಲಿ ನಡೆಯುವ ಜನಗಣತಿ ಆಧಾರದ ಮೇಲೆ ಕ್ಷೇತ್ರ ವ್ಯಾಪ್ತಿ ಪರಿಷ್ಕರಣೆ (ಡಿಲಿಮಿಟೇಶನ್) ಆಗಬೇಕು ಎಂದು ಹೇಳಲಾಗಿದೆ. 2026 ರಲ್ಲಿ ಜನಗಣತಿ ಶುರು ಮಾಡಿದರೆ 2027 ರಿಂದ 28 ರ ತನಕ ಆ ಕೆಲಸ ನಡೆದು ಅದರ ದತ್ತಾಂಶಗಳನ್ನು ಕೋಷ್ಟಕ ಮಾಡಿ ವರದಿ ಪ್ರಕಟಿಸಲು 2029 ಆಗುತ್ತದೆ. ಅಂದರೆ 2029 ರ ಚುನಾವಣೆಯ ವೇಳೆಗೆ ಮಹಿಳಾ ಮೀಸಲಾತಿ  ಸಾಧ್ಯವೇ ಇಲ್ಲ. ಅಷ್ಟೊತ್ತಿಗೆ 2031 ರ ಜನಗಣತಿ ಬರುತ್ತದೆ. ಯಾವುದೇ ತೊಂದರೆ ಇಲ್ಲದೆ 2031 ರ ಜನಗಣತಿ ನಡೆದರೆ 2033 ಕ್ಕೆ ವರದಿ ಪ್ರಕಟವಾದರೆ 2034 ರಷ್ಟೊತ್ತಿಗೆ ಆ ಜನಗಣತಿ ಆಧಾರದ ಮೇಲೆ ಕ್ಷೇತ್ರ ವ್ಯಾಪ್ತಿ ಪರಿಷ್ಕರಣೆ (ಡಿಲಿಮಿಟೇಶನ್) ಆಗಿರದ ಕಾರಣ 2034 ರ ಲೋಕಸಭಾ ಚುನಾವಣೆಗೂ ಇದು ಜಾರಿಗೆ ಬರೋದು ಕಷ್ಟ. ಹಾಗಾಗಿ 2034 ರ ತನಕ ಮಹಿಳೆಯರು ಮೀಸಲಾತಿಯನ್ನು ನಿರೀಕ್ಷಿಸುವುದು ಬೇಡ. 2039 ಕ್ಕೆ ಜಾರಿಯಾಗುತ್ತೆ ಎಂದು ಇಟ್ಟುಕೊಳ್ಳೋಣ. ಆದರೆ  ಅಷ್ಟೊತ್ತಿಗೆ ಇನ್ನೊಂದು ವಿಘ್ನ ಕಾದಿದೆ. ಹೊಸ ತಿದ್ದುಪಡಿಯಾದ 334 ನೇ ಪರಿಚ್ಚೇದವು ‘ಈ ಮೀಸಲಾತಿ ಹದಿನೈದು ವರ್ಷಗಳವರೆಗೆ ಮಾತ್ರ’ ಎಂದು ಹೇಳುತ್ತದೆ. ಅಂದರೆ ಈ ಕಾಯ್ದೆ ಜಾರಿಗೆ ಬಂದಾಗಿನಿಂದ ಹದಿನೈದು ವರ್ಷ ಅಂತ ಹೇಳುವುದರಿಂದ ಈ ಕಾಯ್ದೆಯನ್ನು 2023ನೇ ಇಸವಿಯಲ್ಲಿ ಜಾರಿ ಮಾಡಿದರೆ 2038 ಕ್ಕೆ ಕೊನೆಗೊಳ್ಳುತ್ತದೆ. ಅಲ್ಲಿಗೆ ಮಹಿಳಾ ಮೀಸಲಾತಿ ಕತೆ ಮುಗಿಯುತ್ತೆ. 


ಬಹಳ ಹೆಮ್ಮೆಯ ವಿಚಾರವೆಂದರೆ ಭಾರತದ ಮಹಿಳೆಯರಿಗೆ ಪ್ರಪಂಚದ ಯಾವುದೇ ರಾಷ್ಟ್ರಕ್ಕಿಂತಲೂ ಅತ್ಯಂತ ಸುಲಭವಾಗಿ ಮತದಾನದ ಹಕ್ಕು ದೊರೆತಿದೆ. 20 ನೇ ಶತಮಾನ ಮುಗಿಯುವ ಹಂತದಲ್ಲಿ ಮೊಟ್ಟಮೊದಲ ಬಾರಿಗೆ ಮಹಿಳೆಯರಿಗೆ ಮತದಾನದ ಹಕ್ಕು ನೀಡಿದ ರಾಷ್ಟ್ರವೆಂದರೆ ನ್ಯೂಜಿಲ್ಯಾಂಡ್. ಆಮೇಲೆ ಆಸ್ಟೇಲಿಯಾ, ಫಿನ್‌ಲ್ಯಾಂಡ್... ಈ ರೀತಿ ನೀಡಲಾಯಿತು. ಅದರಲ್ಲೂ ಇಂಗ್ಲೇಡಿನಲ್ಲಿ  ಇದಕ್ಕೆ ಪ್ರಬಲ ವಿರೋಧವಿತ್ತು. 1918 ರಲ್ಲಿ ಜನ ಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತಂದು ಮಹಿಳೆಯರಿಗೆ ಮತದಾನ ಹಕ್ಕನ್ನು ಅಲ್ಲಿ ನೀಡಿದರೂ  ಮಹಿಳೆಯರಿಗೆ ಮುವ್ವತ್ತು ವರ್ಷ ತುಂಬಿರಬೇಕು, ಆಸ್ತಿ ಹೊಂದಿದ್ದು ಇಂತಿಷ್ಟು ತೆರಿಗೆ ಕಟ್ಟುತ್ತಿರಬೇಕು ಎಂಬ ಷರತ್ತುಗಳನ್ನು ವಿಧಿಸಲಾಗಿತ್ತು. ಕೊನೆಗೆ ಇದು ಕೂಡ ಬದಲಾಗಿ 1928 ರಲ್ಲಿ ಸಮಾನ ಮತದಾನದ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಮಹಿಳೆಯರಿಗೆ ಸಮಾನ ಮತದಾನದ ಸ್ವಾತಂತ್ರ್ಯ ಮತ್ತು ಚುನಾವಣೆಗೆ ನಿಲ್ಲುವ ಸ್ವಾತಂತ್ರ್ಯ ಇಂಗ್ಲೆಂಡಿನಲ್ಲಿ ಲಭಿಸುತ್ತೆ. ಮೊದಲ ಮಹಾಯುದ್ದದ ನಂತರ ಮಹಿಳೆಯರ ಸಹಕಾರ ಮತ್ತು ಬೆಂಬಲವಿಲ್ಲದೆ ಯುದ್ದವನ್ನೂ ಮಾಡೋದು ಕಷ್ಟ ಎಂಬುದು ಅರಿವಾಗಿ ಮತ್ತಷ್ಟು ರಾಷ್ಟ್ರಗಳು ಉದಾರವಾಗಿ ಮಹಿಳೆಯರಿಗೆ ಮತದಾನದ ಹಕ್ಕನ್ನು ಕೊಟ್ಟವು. ಹಾಗಾಗಿ ಇಂದು ಬಹುತೇಕ ಎಲ್ಲ ರಾಷ್ಟ್ರಗಳಲ್ಲೂ ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಲಾಗಿದೆ. ಆದರೆ ಭಾರತದ ನಾರಿಯರು ಯಾವುದೇ ಹೋರಾಟವಿಲ್ಲದೆ 1949 ರ ಸಂವಿಧಾನದ ಮೂಲಕ ಸಮಾನ ಮತದಾನದ ಹಕ್ಕನ್ನು ಪಡೆದಿದ್ದಾರೆ. ಇದು ಬಹಳ ದೊಡ್ಡ ಸಾಧನೆ. ಆದರೆ ಅದರಿಂದ ಮುಂದಕ್ಕೆ ಹೋರಾಟ ಮಾಡಿ ಸಮಾನವಾದ ಪ್ರಾತಿನಿಧ್ಯ ಕೊಡಿ ಅಂತ ಕೇಳಲಿಲ್ಲ. ಈಗಲೂ ಕೂಡ ಶೇ 33 ರಷ್ಟು ಕೊಟ್ಟಿರೋದು ಸರಿಯೇ?ತಪ್ಪೇ? ಅಂತ ಚರ್ಚೆ ಮಾಡ್ತ ಇದ್ದೇವೆ. ಮಹಿಳೆಯರು ಇನ್ನು ಮೇಲಾದರೂ ಹೋರಾಟ ಮಾಡಿ ನಾವು ಶೇ 50 ರಷ್ಟು ಇದ್ದೇವೆ, ಹಾಗಾಗಿ ನಮಗೆ ಶೇ 50 ರಷ್ಟು ಮೀಸಲಾತಿ ಕೊಡಿ ಅಂತ ಕೇಳಬೇಕು. ಇದು ನಮ್ಮ ಮುಂದಿನ ಹೋರಾಟ ಮತ್ತು ಬೇಡಿಕೆಯಾಗಬೇಕು. ಅದಕ್ಕಿಂತಲೂ ಮುಖ್ಯವಾಗಿ ಕೂಡಲೇ ಜಾರಿ ಮಾಡಿ ಅಂತ ಹೋರಾಟ ಮಾಡಬೇಕು. 


ಇನ್ನು ಮುಖ್ಯವಾಗಿ ಮೀಸಲಾತಿಯೊಳಗೆ ಒಳ ಮೀಸಲಾತಿ ಕಲ್ಪಿಸಿ ಹಿಂದುಳಿದ ಮಹಿಳೆಯರಿಗೆ ಮೀಸಲಾತಿಯನ್ನು ನೀಡಬೇಕು. ಇಲ್ಲವಾದರೆ ಇದು ಕೇವಲ ಮೇಲ್ಜಾತಿ ಮಹಿಳೆಯರ ಪಾಲಾಗುತ್ತದೆ. ಅಲ್ಲದೆ ಕಳೆದ ಇಪ್ಪತ್ತು ವರ್ಷಗಳ ರಾಜಕೀಯವನ್ನು ನೋಡಿದಾಗ ಅತ್ಯಂತ ಶೋಷಣೆಗೆ ಒಳಗಾದವರು ಧಾರ್ಮಿಕ ಅಲ್ಪಸಂಖ್ಯಾತರು ಎಂಬುದು ತಿಳಿಯುತ್ತೆ. ಒಂದೂ ಸೀಟನ್ನು ಅವರಿಗೆ ನೀಡದೆ ರಾಜಕೀಯ ಮಾಡಬಹುದು ಎಂಬುದನ್ನು ಬಿಜೆಪಿ ತೋರಿಸಿದ್ದು ಅದಕ್ಕೆ ಸಾಂಸ್ಥಿಕ ರೂಪ ಕೊಟ್ಟು ಧಾರ್ಮಿಕ ಅಲ್ಪಸಂಖ್ಯಾತರಿಗೆ ರಾಜಕೀಯ ಆಧಿಕಾರದ ನಿರಾಕರಣೆ ಮಾಡುವ ಸಾಧ್ಯತೆ ಇದೆ. ಆದ್ದರಿಂದ ಬರೀ ಹಿಂದುಳಿದ ಜಾತಿಗಳಿಗೆ ಮಾತ್ರವಲ್ಲ ಧಾರ್ಮಿಕ ಅಲ್ಪಸಂಖ್ಯಾತ ಮಹಿಳೆಯರಿಗೂ ಮೀಸಲಾತಿ ಕೊಡಬೇಕು. ಇದಕ್ಕಾಗಿ ಹೋರಾಟ ಮಾಡಬೇಕು. ಈ ರೀತಿ ಹೋರಾಟಕ್ಕೆೆ  ಮಹಿಳೆಯರ ಜೊತೆಗೆ ನಾವು ಇದ್ದೇವೆ. 


ಈ ಮಹಿಳಾ ಮೀಸಲಾತಿ ಎಂಬುದು ಮಂಕುಬೂದಿ ಎರಚುವ ಪ್ರಯತ್ನ. ಯಾಕೆಂದರೆ ಇದು ಜಾರಿಯಾಗುವ ಮೊದಲೇ ಹೊಟ್ಟೆಯಲ್ಲಿ ಸಾಯುತೆ. ಹಾಗಾಗಿ ಇಂತಹ ಮಸೂದೆಗೆ ತಿಲಾಂಜಲಿ ಇಟ್ಟು ಒಳ್ಳೆಯ ಮಸೂದೆ ಜಾರಿಗೆ ಬರುವಂತೆ ಹೋರಾಟ ಮಾಡೋಣ.
( ಅಕ್ಷರ ರೂಪ : ಹೆಚ್.ವಿ.ಮಂಜುನಾಥ)