ಶಿರಾ ಗೇಟ್ ಶಾಲೆಯ ʼ ಬಾಸ್ʼ ಗೆ ಶರಣಾಗಿದೆಯೇ ಶಿಕ್ಷಣ ಇಲಾಖೆ ಶಿಕ್ಷಕಿಯರನ್ನು ಸಸ್ಪೆಂಡ್ ಮಾಡಿ ಉಪ್ಪುಪ್ಪು ಕಡ್ಡಿ ಆಡುತ್ತಿರುವ ಡಿಡಿಪಿಐ - ಬಿಇಓ
99% ಲೋಕಲ್
ಕುಚ್ಚಂಗಿ ಪ್ರಸನ್ನ
ತುಮಕೂರು: ಕೇವಲ ಒಂದು ವಾರದ ಮಟ್ಟಿಗೆ ದಿನದಲ್ಲಿ ನಾಲ್ಕು ಪಿರಿಯಡ್ ಪಾಠ ಮಾಡಿ, ಇನ್ನು ಎರಡು ಗಂಟೆ ಕಾಲ ತರಗತಿಗಳಿಗೆ ಹೋಗಲಿಲ್ಲ ಎಂಬ ಕಾರಣಕ್ಕೇ ಇಬ್ಬರು ಶಿಕ್ಷಕಿಯರನ್ನು ಸಸ್ಪೆಂಡ್ ಮಾಡಿರುವ ಬಿಇಓ ಹಾಗೂ ಸಸ್ಪೆಂಡ್ ಮಾಡಿ ಎಂದು ಒತ್ತಡ ಹಾಕಿದ ಡಿಡಿಪಿಐಗಳಿಬ್ಬರೂ, ಅದೇ ಸರ್ಕಾರಿ ಶಾಲೆಯಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿರುವ, ಶಾಲೆಯೇ ತನ್ನ ಸ್ವಂತದ್ದೇನೋ ಎಂಬಂತೆ ಕುಟುಂಬ ಸಮೇತ ಮಡಿಯುಟ್ಟು ಕೂತು ಹೋಮ, ಹವನ ಮಾಡಿಕೊಂಡಿರುವ ʼ ಬಾಸ್ʼ ಕುಖ್ಯಾತಿಯ ಹೆಡ್ ಮಾಸ್ಟರ್‌ಗೆ ಒಂದು ಕಾರಣ ಕೇಳುವ ನೋಟೀಸನ್ನೂ ಜಾರಿ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿರುವುದು ನಮ್ಮ ಶಿಕ್ಷಣ ಇಲಾಖೆ ತಲುಪಿರುವ ಅಧೋಗತಿಗೆ ಕನ್ನಡಿ ಹಿಡಿದಂತಿದೆ ಅಂತ ಅನಿಸುವುದಿಲ್ಲವೇ.
ಶಿಕ್ಷಣ ಇಲಾಖೆ ಜಿಲ್ಲಾ ಪಂಚಾಯಿತಿ ಆಡಳಿತ ವ್ಯಾಪ್ತಿಗೆ ಬರುತ್ತದೆ. ತುಮಕೂರು ಜಿಲ್ಲಾ ಪಂಚಾಯಿತಿಯ ಅಂದಿನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಅವರು ದಿನಾಂಕ 03.11.2022ರಂದು ಸುತ್ತೋಲೆಯೊಂದನ್ನು ಹೊರಡಿಸಿ , ಅಧಿಕಾರಿಗಳು ಮತ್ತು ನೌಕರರು ಸರ್ಕಾರಿ ಕಚೇರಿಗಳಲ್ಲಿ ಹಾಗೂ ಕರ್ತವ್ಯದ ಅವಧಿಯಲ್ಲಿ ಹುಟ್ಟು ಹಬ್ಬ ಸೇರಿದಂತೆ ಇತರ ಖಾಸಗಿ ಕಾರ್ಯಕ್ರಮಗಳನ್ನು ಆಚರಿಸಿಕೊಳ್ಳುತ್ತಿರುವುದು ತಮ್ಮ ಗಮನಕ್ಕೆ ಬಂದಿದ್ದು, ಇದು ಸರ್ಕಾರಿ ನಾಗರಿಕ ಸೇವಾ ನಡತೆ ನಿಯಮಗಳನ್ನು ಉಲ್ಲಂಘಿಸಿದಂತಾಗುತ್ತದೆ ಮತ್ತು ಈ ರೀತಿ ಹುಟ್ಟು ಹಬ್ಬ ಮತ್ತು ಇತರ ಖಾಸಗಿ ಕಾರ್ಯಕ್ರಮಗಳನ್ನು ಆಚರಿಸಕೊಳ್ಳುವವರ ಅಧಿಕಾರಿ/ನೌಕರರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಸರ್ಕಾರದ ಈ ಸುತ್ತೋಲೆಯನ್ನು ʼ ಸತ್ತೋಲೆʼ ಎಂದು ಪರಿಗಣಿಸಿ ಕಾಲ ಕಸ ಮಾಡಿಕೊಂಡಿರುವ ಶಿರಾ ಗೇಟ್ ಸರ್ಕಾರಿ ಶಾಲೆಯ ಮುಖ್ಯೋಪಧ್ಯಾಯ ಡಿ.ಶಿವಸ್ವಾಮಿ 16.12.2022ರಂದೇ 400ಕ್ಕೂ ಹೆಚ್ಚು ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಎದುರಿಗೆ ನೆಲದ ಮೇಲೆ ಕೂರಿಸಿ, ಯಾವ ಮಂತ್ರಿಗಳೂ ಹಾಕಿಸಿಕೊಳ್ಳಲಾರದಷ್ಟು ದೊಡ್ಡ ಆಳುದ್ಧ ಗಾತ್ರದ ಹೂವಿನ ಹಾರ ಹಾಕಿಸಿಕೊಂಡು ಇಂಗ್ಲಿಷ್ ಅಕ್ಷರಗಳಲ್ಲಿ ‘BOSS ‘ ಎಂದು ಬರೆದು ಗುಲಾಬಿಗಳ ಡಿಸೈನ್ ಮಾಡಿರುವ ದೊಡ್ಡದೊಂದು ಕೇಕ್ ಅನ್ನು ಎಲ್ಲ ಮಕ್ಕಳು ಹಾಗೂ ಶಿಕ್ಷಕರ ಬಾಯಲ್ಲಿ ಜೋರು ದನಿಯಲ್ಲಿ ʼ ಹ್ಯಾಪಿ ಬರ್ತ್‌ಡೇ ಟೂ ಯೂʼ ಅಂತ ಹಾಡಿಸಿಕೊಂಡು ಕತ್ತರಿಸುತ್ತಾನೆ ಎಂದರೆ ಎಂಥ ನಾಚಿಕೆಗೇಡು ಅಂತ ನಿಮಗೆ ಅನ್ನಿಸಲ್ವಾ.
ಇದೇ ಮನುಷ್ಯ ವರ್ಷದ ಹಿಂದೆ ರಿನೋವೇಟ್ ಮಾಡಿದ ಶಾಲೆಯ ಮೂರು ಕೊಠಡಿಗಳಿಗೆ ಶಾಂತಿ ಮಾಡುವ ನೆಪದಲ್ಲಿ ಶಿಕ್ಷಕಿಯರು ಹಾಗೂ ಮಕ್ಕಳೆದುರೇ ಪತ್ನಿ, ಮಗು ಸಮೇತ ಮಡಿ ಬಟ್ಟೆಯುಟ್ಟು ಪುರೋಹಿತರನ್ನು ಕರೆಸಿ ಶಾಲೆಯಲ್ಲೇ ಹೋಮ, ಹವನ ಮಾಡಲು ಯಾವ ನಿಯಮಗಳಲ್ಲಿ ಅವಕಾಶ ಕಲ್ಪಿಸಿದೆ ಎಂಬುದನ್ನು ಈತನ ಮೇಲಧಿಕಾರಿಗಳೇ ಸ್ಪಷ್ಟ ಪಡಿಸಬೇಕಿದೆ.
ಉತ್ತರ ಬಡಾವಣೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯನ್ನು ತುಮಕೂರು ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್ ಸರ್ಕಾರಿ ಶಾಲೆಗಳು ಅಭಿವೃದ್ಧಿಯಾಗಲಿ ಎಂಬ ಸದುದ್ದೇಶದಿಂದ ದತ್ತು ಪಡೆದು ಸುಮಾರು 80 ಲಕ್ಷ ರೂ ಅನುದಾನ ನೀಡಿದ್ದಾರೆ. ತಮ್ಮ ಒಳ್ಳೆಯತನವನ್ನೂ ಇಂಥಾ ದುರುಳ ಹೆಡ್ ಮಾಸ್ಟರ್ ದುರುಪಯೋಗಪಡಿಸಿಕೊಳ್ಳುತ್ತಿದ್ದರೂ ತರಾಟೆಗೆ ತೆಗೆದುಕೊಳ್ಳದ ಶಾಸಕರು ನಿಮ್ಮ ಹಂತದಲ್ಲೇ ಬಗೆ ಹರಿಸಿಕೊಳ್ಳಿ ಎಂದಿರುವುದು ತೂಕಡಿಸುತ್ತಿರುವವರನ್ನ ಎಸಿ ರೂಮಿಗೆ ಕರೆದೊಯ್ದು ಮಲಗಿಸಿದಂತಾಗಿದೆ.
ಈ ಹೆಡ್ ಮಾಸ್ಟರ್ ಹೀಗೆ ಶಾಲೆಯಲ್ಲೇ ಬರ್ತ್ ಡೇ ಆಚರಿಸಿಕೊಳ್ಳುತ್ತಾನೆ, ಹೋಮ, ಹವನ ಮಾಡಿಕೊಳ್ಳುತ್ತಾನೆ ಎಂಬ ವರದಿ ಬಣ್ಣದ ಫೋಟೋಗಳ ಸಹಿತ ʼ ಬೆವರ ಹನಿʼ ಪ್ರಾದೇಶಿಕ ದಿನಪತ್ರಿಕೆಯಲ್ಲಿ ಪ್ರಕಟವಾಗಿ ಎಂಟು ದಿನ ಕಳೆದರೂ ಡಿಡಿಪಿಐ ಆಗಲೀ, ಬಿಇಓ ಆಗಲೀ ಈತನಿಗೆ ಕಾರಣ ಕೇಳಿ ಒಂದು ಮೆಮೋ ಕೊಟ್ಟಂತೆಯೂ ಕಾಣುತ್ತಿಲ್ಲ. ಈ ಕುರಿತು ಈ ಇಬ್ಬರೂ ಅಧಿಕಾರಿಗಳನ್ನು ಎರಡು ಮೂರು ಸಲ ಪ್ರಶ್ನಿಸಿದರೂ, ಎನ್‌ಕ್ವಯಿರಿ ಟೀಮ್ ಕಳಿಸಿದ್ದೇವೆ ಅಂತ ಉಪ್ಪುಪ್ಪು ಕಡ್ಡಿ ಆಡುತ್ತಿದ್ದಾರೆಯೇ ಹೊರತು, ಅಂಗೈ ಹುಣ್ಣಿಗೆ ಮೊಬೈಲ್ ಕ್ಯಾಮೆರಾ ಹಿಡಿಯುವ ಅಗತ್ಯವೇನಿದೆ, “ ಏನ್ರೀ, ನಿಮ್ಮ ಬಗ್ಗೆ ಹೀಗೆ ಫೋಟೋ ಸಹಿತ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿದೆ, ಈ ಕುರಿತ ನಿಮ್ಮ ಸಮಜಾಯಿಷಿ ಏನು, ಏನೂ ಇಲ್ಲವಾದರೆ, ಶಿಸ್ತು ಕ್ರಮ ಜರುಗಿಸಲಾಗುವುದು” ಎಂಬ ಮೂರು ಸಾಲಿನ ಒಕ್ಕಣೆಯ ಒಂದು ಶೋಕಾಸ್ ನೋಟೀಸ್ ಕೊಡಲಾಗದಷ್ಟು ದೊಡ್ಡ ಪ್ರಭಾವಿಯೇ ಈ ಹೆಡ್ ಮಾಸ್ಟರ್ ಅಥವಾ ಈ ಇಬ್ಬರು ಅಧಿಕಾರಿಗಳು ಅಷ್ಟು ದುರ್ಬಲರೇ ಅಥವಾ ಈತನಿಗೆ ಇಡೀ ಶಿಕ್ಷಣ ಇಲಾಖೆ ಶರಣಾಗಿಬಿಟ್ಟಿದ್ದಾರೆಯೇ ಎಂಬ ಪ್ರಶ್ನೆಗೆ ಜಿಲ್ಲೆಗೆ ಇತ್ತೀಚೆಗೆ ಆಗಮಿಸಿರುವ ಅತ್ಯಂತ ದಕ್ಷ ಐಎಎಸ್ ಅಧಿಕಾರಿ ಎಂದು ಹೆಸರಾಗಿರುವ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಜಿ.ಪ್ರಭು ಅವರೇ ಮಾಹಿತಿ ನೀಡಬೇಕಿದೆ.
ಈ ಹೆಡ್ ಮಾಸ್ಟರ್ ಇತಿಹಾಸವೇ ಅತ್ಯಂತ ವಿವಾದಾಸ್ಪದವಾಗಿದೆ. ಈತ ತುಮಕೂರು ನಗರದ ಎನ್.ಆರ್.ಕಾಲೋನಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕನಾಗಿ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದಾಗ, ನಿಯಮಿತವಾಗಿ ಶಾಲೆಗೆ ಹಾಜರಾಗುತ್ತಿರಲಿಲ್ಲ, ಜೊತೆಗೆ ಮಕ್ಕಳಿಗೆ ಪಾಠವನ್ನೂ ಮಾಡುತ್ತಿರಲಿಲ್ಲ, ಈತನ ಬದಲಿಗೆ ಖಾಸಗಿಯಾಗಿ ವ್ಯಕ್ತಿಯೊಬ್ಬರನ್ನು ಪಾಠ ಮಾಡಲು ನೇಮಿಸಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ಪತ್ನಿಯ ಪರವಾಗಿ ʼರಾಜಕೀಯʼಮಾಡುತ್ತ ಅಡ್ಡಾಡುತ್ತಿದ್ದ ದೂರುಗಳಿವೆ. ಜೊತೆಗೆ ಅದೇ ಕಾಲದಲ್ಲಿ ಹಗರಣವೊಂದರಲ್ಲಿ ಸಿಲುಕಿಕೊಂಡು ನ್ಯಾಯಾಲಯದ ಕೈಗೆ ಸಿಕ್ಕದಂತೆ ತಿಂಗಳುಗಟ್ಟಲೆ ನಾಪತ್ತೆಯಾಗಿದ್ದ ಮಾಹಿತಿಯೂ ಇದೆ. ನಂತರ ವರ್ಗಾವಣೆಯಾಗಿದ್ದ ನಾಗವಲ್ಲಿ, ಚೋಳಾಪುರ ಶಾಲೆಗಳಲ್ಲೂ ಪಾಠ ಮಾಡಿದ ನಿದರ್ಶನಗಳಿಲ್ಲ ಎಂದು ಅಲ್ಲಿನ ಪೋಷಕರು ಹೇಳುತ್ತಾರೆ.
ಈ ಹೆಡ್ ಮಾಸ್ಟರ್ ಬಗ್ಗೆ ಇಷ್ಟೊಂದು ಸಾಫ್ಟ್ ಕಾರ್ನರ್ ತೋರುವ ಡಿಡಿಪಿಐ ಮತ್ತು ಬಿಇಓಗಳು ಜುಲೈ ಹತ್ತರಂದು ಸವಿತ ಹಾಗೂ ವತ್ಸಲ ಎಂಬ ಇಬ್ಬರು ಶಿಕ್ಷಕಿಯರನ್ನು ಸಸ್ಪೆಂಡ್ ಮಾಡಿದ ನಂತರ, “ ಇಲ್ಲ ಹೋಗ್ರೀ ಕಾನೂನು ಪ್ರಕಾರ ನೀವು ಕ್ಷಮಿಸಲಾಗದ ಭಾರೀ ದೊಡ್ಡ ಅಪರಾಧ ಎಸಗಿದ್ದೀರಿ , ಅದಕ್ಕೇ ನಿಮ್ಮನ್ನು ಸಸ್ಪೆಂಡ್ ಮಾಡಿದ್ದೀವಿ ಅಂತ ಹೇಳಿ “ ದೃಢವಾಗಿ ಸುಮ್ಮನಿರಬಹುದಿತ್ತು. ಕೂಡಲೇ ಸಸ್ಪೆಂಡ್ ಮಾಡಿ ಎಂದು ಸೂಚನೆ ನೀಡಿದ ಅದೇ ಡಿಡಿಪಿಐ ನಂಜಯ್ಯನವರು ಮತ್ತೆ ಬಿಇಓ ತಮ್ಮ ಅಮಾನತು ಆದೇಶಕ್ಕೆ ಅನುಸಮರ್ಥನೆ ಕೋರಿದಾಗ, ಮರು ಪರಿಶೀಲನೆ ಮಾಡ್ರೀ” ಅಂತ ಲಿಖಿತ ಆದೇಶ ನೀಡಿದ್ದಾರೆ. ಹೀಗೆ ಸರ್ಕಾರದ ಅಧಿಕಾರಿಗಳು ವಿವೇಚನೆಯನ್ನೇ ಬಳಸದೇ ಸಸ್ಪೆಂಡ್ ಆದೇಶ ಹೊರಡಿಸುವುದು, ನಂತರ ಮರು ದಿನವೇ ಮರುಪರಿಶೀಲಿಸಿ ಅಂತ ಸೂಚನೆ ಕೊಡುವುದು ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ತುಮಕೂರು ಜಿಲ್ಲೆಯನ್ನು ಇಡೀ ರಾಜ್ಯಕ್ಕೆ 24ನೇ ಸ್ಥಾನದಷ್ಟು ಕೆಳ ಹಂತಕ್ಕೆ ತಂದಿರುವ ಅಧಿಕಾರಿಗಳಿರುವ ಈ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಮಾತ್ರವೇ ಕಾಣಬಹುದೇನೋ.
7ನೇ ತರಗತಿ ವಿದ್ಯಾರ್ಥಿನಿಯ ಕಣ್ಣು ಕಳೆದ ಪ್ರಕರಣವನ್ನು ಮುಚ್ಚಿ ಹಾಕಿದ್ದು ಯಾರು ? ಇದೇ ಶಿರಾ ಗೇಟ್ ಶಾಲೆಯಲ್ಲಿ ಕಳೆದೆರೆಡು ವರ್ಷದ ಹಿಂದೆ ನಾಗೇಶ್ ಎಂಬ ಶಿಕ್ಷಕ ಯಾರಿಗೋ ಬೀಸಿದ ಕಡ್ಡಿ ಏಳನೇ ತರಗತಿ ಇಂಗ್ಲಿಷ್ ಮೀಡಿಯಂ ವಿದ್ಯಾರ್ಥಿನಿ ಹೇಮಶ್ರೀ ಎಂಬಾಕೆಯ ಕಣ್ಣಿಗೆ ನಾಟಿ, ಆಕೆಯ ಒಂದು ಕಣ್ಣು 90% ಕಾಣದಂತಾಗಿಬಿಟ್ಟಿತು. ಇಡೀ ಪ್ರಕರಣವನ್ನು ಶಾಲೆಯ ಹಂತದಲ್ಲೇ ಮುಚ್ಚಿ ಹಾಕಲಾಗಿದೆ. ಸಂತ್ರಸ್ತ ವಿದ್ಯಾರ್ಥಿನಿಯನ್ನು ನೊಂದ ಆಕೆಯ ಪೋಷಕರು ಎಂಟನೇ ತರಗತಿಯನ್ನು ಇದೇ ಶಾಲೆಯಲ್ಲಿ ಮುಂದುವರೆಸಬೇಕಿದ್ದರೂ ಒಪ್ಪದೇ ಟಿಸಿ ತೆಗೆದುಕೊಂಡು ಬೇರೊಂದು ಶಾಲೆಗೆ ಸೇರಿಸಿದ್ದಾರೆ. ಮತ್ತು ಆಕೆ ಈಗ ಒಂಬತ್ತನೇ ತರಗತಿಯಲ್ಲಿ ವ್ಯಾಸಂಗ ಮುಂದುವರೆಸಿದ್ದಾಳೆ. ಮತ್ತು ವಿದ್ಯಾರ್ಥಿನಿಯ ಕಣ್ಣು ಕಳೆದು ಆಕೆಯ ಜೀವನವನ್ನು ಕತ್ತಲೆಗೆ ದೂಡಿದ ಆಪಾದಿತ ಶಿಕ್ಷಕ ನಾಗೇಶ್ ಯಮುನಾ ಎಂಬ ಶಿಕ್ಷಕಿಯವರೊಂದಿಗೆ ಪರಸ್ಪರ ವರ್ಗಾವಣೆ ಪಡೆದು ನಾಗವಲ್ಲಿ ಸಮೀಪದ ಲಕ್ಕೇನಹಳ್ಳಿ ಪ್ರಾಥಮಿಕ ಶಾಲೆಗೆ ಹೋಗಿ, ಮತ್ತೆ ಅಲ್ಲಿಂದ ಮುಂಬಡ್ತಿ ಪಡೆದು ಹೆಚ್‌ಎಂ ಆಗಿ ಹರಳೂರು ಶಾಲೆಗೆ ನೇಮಕಗೊಂಡಿದ್ದೂ ಆಗಿದೆ. ವಿದ್ಯಾರ್ಥಿನಿಯ ಕಣ್ಣು ಕಳೆದ ಪ್ರಕರಣದಲ್ಲಿ ಈ ಶಿಕ್ಷಕನ ವಿರುದ್ಧ ಶಿಸ್ತು ಕ್ರಮ ಜರುಗಿಸಿದ್ದೇ ಆಗಿದ್ದಲ್ಲಿ ಈತ ಮುಂಬಡ್ತಿ ಪಡೆಯಲು ಸಾಧ್ಯವೇ ಆಗುತ್ತಿರಲಿಲ್ಲ. ನೋಡಿ, ಶಾಲೆಗಳಲ್ಲಿ ಕಡ್ಡಿ ಹಿಡಿಯಲು ನಿಯಮಗಳಲ್ಲಿ ಅವಕಾಶವೇ ಇಲ್ಲ, ಆದಾಗ್ಯೂ ಕಡ್ಡಿ ಎಸೆದು ವಿದ್ಯಾರ್ಥಿನಿಯ ಕಣ್ಣು ಕಳೆದ ಶಿಕ್ಷಕನ ವಿರುದ್ಧ ಯಾರೂ ಶಿಸ್ತು ಕ್ರಮ ಜರುಗಿಸಲೇ ಇಲ್ಲ, ಮತ್ತು ಇಡೀ ಪ್ರಕರಣವನ್ನು ಮುಚ್ಚಿಹಾಕುವಲ್ಲಿ ಹೆಡ್ ಮಾಸ್ಟರ್, ಅಂದಿನ ಬಿಇಓ ಹನುಮಾನಾಯ್ಕ್ ಮತ್ತು ಡಿಡಿಪಿಐ ಒಗ್ಗಟ್ಟು ತೋರಿದ್ದಾರೆ. ಆದರೆ ಪಾಪ ಕೇವಲ ಒಂದು ವಾರದ ಮಟ್ಟಿಗೆ ಆರನೇ ತರಗತಿಗೆ ಎರಡು ಪಿರಿಯಡ್ ಪಾಠ ಮಾಡಲಿಲ್ಲ ಎಂಬ ಕಾರಣಕ್ಕೆ ಮೆಮೋ ಕೊಟ್ಟು, ಎಚ್ಚರಿಕೆ ಕೊಟ್ಟು ಕೈ ಬಿಡಬಹುದಾದ ಪ್ರಕರಣದಲ್ಲಿ ಇಬ್ಬರು ಶಿಕ್ಷಕಿಯರನ್ನು ಸಸ್ಪೆಂಡ್ ಮಾಡುವಂತ ದೊಡ್ಡ ಗಂಭೀರ ಕ್ರಮ ತೆಗೆದುಕೊಳ್ಳುವ ಬಿಇಓ ಮತ್ತು ಡಿಡಿಪಿಐಗಳು ವಿದ್ಯಾರ್ಥಿನಿಯ ಕಣ್ಣು ಕಳೆದ ಪ್ರಕರಣದಲ್ಲೇಕೆ ಸುಮ್ಮನಿದ್ದರು ಎಂದು ಪ್ರಶ್ನಿಸುವವರು ಯಾರೂ ಇಲ್ಲವೇ?
|
ನಮ್ಮನ್ನು ಸಸ್ಪೆಂಡ್ ಮಾಡಿ
ಎನ್ನುವ ಶಿಕ್ಷಕರೂ ಇದ್ದಾರೆ
ಶಿಕ್ಷಣ ಇಲಾಖೆಯಲ್ಲಿ ವರ್ಗಾವಣೆಗೆ ಕೌನ್ಸೆಲಿಂಗ್ ಪದ್ದತಿ ಅನುಷ್ಟಾನಕ್ಕೆ ಬಂದ ನಂತರ ಟ್ರಾನ್ಸ್‌ಫರ್ ಮಾಡಿಸಿಕೊಳ್ಳುವುದು ಮತ್ತು ಮಾಡುವುದು ಸುಲಭದ ಕೆಲಸವಲ್ಲ, ಮತ್ತು ಶಿಕ್ಷಕರಲ್ಲಿ ಬಹುಪಾಲು ಮಂದಿಗೆ ಪಾಠ ಮಾಡುವುದು ಪಾರ್ಟ್ ಟೈಮ್ ಇತರ ರಿಯಲ್ ಎಸ್ಟೇಟ್,ಚೀಟಿ-ಬಡ್ಡಿ ವ್ಯವಹಾರಗಳು ಫುಲ್ ಟೈಮ್ ಎಂಬಂತ ಪರಿಸ್ಥಿತಿ ಇದೆ. ತಂತಮ್ಮ ಬಿಸಿನೆಸ್ ಗಳನ್ನು ಉಳಿಸಿಕೊಳ್ಳಲು ತಾಲೂಕು ಅಥವಾ ಜಿಲ್ಲಾ ಕೇಂದ್ರಗಳಲ್ಲೇ ಇರಬೇಕಾದ ಅನಿವಾರ್ಯತೆ ಇರುವ ಶಿಕ್ಷಕರು ತಾವೇ ಮುಂದೆ ಬಂದು ಲಕ್ಷಾಂತರ ರೂ ಹಣ ನೀಡಿ, ತಮ್ಮನ್ನು ಸಸ್ಪೆಂಡ್ ಮಾಡಿ ಪ್ಲೀಸ್ ಎಂದು ಡಿಡಿಪಿಐ ಅಥವಾ ಬಿಇಓಗಳಿಗೆ ದುಂಬಾಲು ಬೀಳುತ್ತಾರಂತೆ. ಇದು ಚಿಕ್ಕನಾಯಕಹಳ್ಳಿ ತಾಲೂಕಿನಲ್ಲಿ ಇಂಥಾ ಪ್ರಕರಣಗಳು ಹೆಚ್ಚು ಎನ್ನುತ್ತಾರೆ ಹೆಸರು ಬಹಿರಂಗ ಪಡಿಸಲು ಇಚ್ಚಿಸಿದ ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು.
ಶಿರಾ ಗೇಟ್ ಶಾಲೆಯಲ್ಲಿ ಈ ಇಬ್ಬರು ಶಿಕ್ಷಕಿಯರನ್ನು ಹೀಗೇ ಕ್ಷುಲ್ಲಕ ಕಾರಣಕ್ಕೆ ಸಸ್ಪೆಂಡ್ ಮಾಡಿಸಿ, ಆ ಮೂಲಕ ಅವರನ್ನು ಬೇರೆಡೆಗೆ ಎತ್ತಂಗಡಿ ಮಾಡಿ, ಅವರ ಸ್ಥಾನಗಳಿಗೆ ತಮಗೆ ಬೇಕಾದವರನ್ನುತಂದು ಹಾಕಿಸಿಕೊಳ್ಳುವ ಕು-ತಂತ್ರದಲ್ಲಿ ಇಲಾಖೆಯ ಯಾವ್ಯಾವ ಅಧಿಕಾರಿಗಳ ಕೈವಾಡವಿದೆಯೋ ಯಾರಿಗೆ ಗೊತ್ತು.