ಒಂದು ಗಳಿಗೆ ಕುಚ್ಚಂಗಿ ಪ್ರಸನ್ನ   ಟೊಮಾಟೋಗ್ಯಾಕೆ ಆಪಾಟಿ ರೇಟು.., !?

ಒಂದು ಗಳಿಗೆ ಕುಚ್ಚಂಗಿ ಪ್ರಸನ್ನ ಟೊಮಾಟೋಗ್ಯಾಕೆ ಆಪಾಟಿ ರೇಟು.., !?

ಒಂದು ಗಳಿಗೆ  ಕುಚ್ಚಂಗಿ ಪ್ರಸನ್ನ     ಟೊಮಾಟೋಗ್ಯಾಕೆ ಆಪಾಟಿ ರೇಟು.., !?

ಒಂದು ಗಳಿಗೆ

ಕುಚ್ಚಂಗಿ ಪ್ರಸನ್ನ

 

ಟೊಮಾಟೋಗ್ಯಾಕೆ ಆಪಾಟಿ ರೇಟು.., !?

ಇವತ್ತು ನಾನು ತಿಂಡಿ ಮಾಡಕ್ಕಾಗಲ್ಲ, ಮಗಳನ್ನು ಕಳಿಸಿ “ಅಯೋಧ್ಯಾ”ದಿಂದ ತಿಂಡಿ ತರಿಸುತ್ತೇನೆ. (ವಸಂತನಗರದಲ್ಲಿರುವ ಹೊಟೆಲ್ ಹೆಸರು)

“ ಯಾಕೆ, ಯಾಕೆ ತಿಂಡಿ ಮಾಡಕ್ಕಾಗಲ್ಲ, ನಂಗಂತೂ ಒಂದು ವರ್ಷದಿಂದ ಹೊರಗಡೆ ಹೋಟೆಲ್, ಮೆಸ್‍ಗಳಲ್ಲಿ ತಿಂದೂ ತಿಂದೂ ನಾಲಗೆ ಎಲ್ಲ ಕಿತ್ತೋದ ಹವಾಯ್ ಚಪ್ಪಲಿ ತರಾ ಆಗಿಬಿಟ್ಟೈತೆ, ಮನೇಲೇ ಏನಾಗುತ್ತೋ ಅದನ್ನೇ ಮಾಡು”

“ ಇಲ್ಲಾರೀ, ತಿಂಡಿ ಮಾಡಕ್ಕೆ ಕೈಲಾಗಲ್ಲ ಅಂತ ಅಲ್ಲ, ಮನೇಲಿ ಟೊಮಾಟೋ ಇಲ್ಲ, ಹಸಿ ಮೆಣಸಿನಕಾಯಿ ಇಲ್ಲ, ಈರುಳ್ಳಿ ಅಂತೂ ಇಲ್ಲವೇ ಇಲ್ಲ, ಏಂತರಲ್ಲಿ ತಿಂಡಿ ಮಾಡಲಿ “

“ ಓ, ಇದಾ ಸಮಾಚಾರ, ನಿಂಗೊತ್ತಾ ಈ ಟೊಮಾಟೋ, ಹಸಿಮೆಣಸಿನಕಾಯಿ ನಮ್ಮ ದೇಶದೋವೇ ಅಲ್ಲ, ಈಗ ಆ ಆರ್ ಎಸ್ ಎಸ್‍ ನೋರು ಹೊರದೇಶದಿಂದ ಇಲ್ಲಿಗೆ ಬಂದೋರನ್ನ ಎಲ್ಲ ವಾಪಸ್ ಓಡಿಸಬೇಕು ಅಂತಾರಲ್ಲ ಹಂಗೆ , ಆಮೇಲೆ ಈ ಈರುಳ್ಳಿ ಏನು ಅನಿವಾರ್ಯ ಅಲ್ಲ, ಬೇಕಿದ್ರೆ ನಮ್ಮ ಫೈನಾನ್ಸ್ ಮಿನಿಸ್ಟರ್‍ನ ಕೇಳಿ ನೋಡು, ಅವರ ಮನೇಲಿ ಈರುಳ್ಳಿ ಬಳಸೋದೇ ಇಲ್ವಂತೆ, ಹೋಗಿ ಈ ಮೂರನ್ನೂ ಬಿಟ್ಟು ತಿಂಡಿ ಮಾಡೋದನ್ನು ರೂಡಿ ಮಾಡಿಕೋ, ಟೊಮಾಟೋ ಅಂತೆ ಟೊಮಾಟೋ, ಪೆಟ್ರೋಲ್‍ಗಿಂತಾ ಬೆಲೆ ಜಾಸ್ತಿ ಗೊತ್ತಾ,ಕೇಜಿಗೆ 120 , ಮೆಣಸಿನಕಾಯೂ ಏನು ಕಮ್ಮಿ ಅಲ್ಲ 150 ರೂಪಾಯಿ, ಇವರೆಡನ್ನೂ ಬಿಟ್ಟು ಈರುಳ್ಳಿ ಒಂದನ್ನೇ ಅದೆಂಗೆ ತರಕ್ಕಾಗತ್ತೆ ಹೇಳು”

ಈ ಮೇಲಿನ ಡಯಲಾಗ್‍ ನಡೆದದ್ದು ನಮ್ಮ ಮನೆಯಲ್ಲೇ, ಇಷ್ಟಾದ ಮೇಲೂ ಭೂಕಂಪನದ ಎಪಿಸೆಂಟರ್ ಆಗಿರುವ ಅಡಿಗೆಮನೆಯಲ್ಲಿ ಯಾವ ಪಾತ್ರೆಯೂ ಬಿದ್ಧ ಸದ್ದು, ಲೋಟ ಕುಕ್ಕಿದ ಸದ್ದೇನೂ ಕೇಳಿಸಲಿಲ್ಲ, ತುಸು ಹೊತ್ತಿನ ಬಳಿಕ ತಟ್ಟೆ ತುಂಬ ಬಿಸಿ ಬಿಸಿ ಹಬೆಯಾಡುವ ನವಣೆ ನುಚ್ಚಿನ ಉಪ್ಪಿಟ್ಟು ರೆಡಿಯಾಗಿ ಬಂತು, ಉಪ್ಪಿಟ್ಟಿನೊಳಗೆ ಒಣ ಮೆಣಸಿನಕಾಯಿ ಚೂರು, ಒಂಚೂರು ಟೊಮಾಟೋ ತುಣುಕು ಕಾಣಿಸಿದವು.

ಈ ಟೊಮಾಟೋ ಯಾಕಿಂಗೆ ಒಂದರೆಡು ತಿಂಗಳ ಹಿಂದೆ ಹತ್ತು ರೂಪಾಯಿಗೆ ಕೇಜಿ ಇದ್ದದ್ದು ಇದ್ದಕ್ಕಿದ್ದಂತೆ ನೂರಿಪ್ಪತ್ತಕ್ಕೆ ಏರಿ ಬಿಡುತ್ತದೆ. ಇದಕ್ಕೆಲ್ಲ ಆ ನೆಹರೂನೇ ಕಾರಣ ಅಥವಾ ಪಾಕಿಸ್ತಾನ ಕಾರಣ ಅಂತಾನೋ ಹೇಳಿ ಕೈ ತೊಳೆದುಕೊಂಡು ಬಿಡುವಂತಿಲ್ಲ. ಮಾರುಕಟ್ಟೆಲಿ ಸಪ್ಲೈ ಕಡಿಮೆ ಆದಾಗ ತಂತಾನೇ ಧಾರಣೆ ಏರಿ ಬಿಡುತ್ತೆ ಅಂತ ಹೇಳುತ್ತೀರಾ ಅಲ್ವಾ, ಟೊಮಾಟೋಗೇನೂ ಹಂಗೆ ಹೇಳಿಬಿಡಬಹುದು. ಆದರೆ ಪೆಟ್ರೋಲ್ ಡೀಸೆಲ್ ಕತೆ ಹೇಳಿ, ಅವುಕ್ಕೇನೂ ಕೊರತೆ ಇಲ್ವಲ್ಲ, ಪೆಟ್ರೋಲ್ ಬಂಕ್‍ಗಳ ಸಂಖ್ಯೆ ದಿನೇ ದಿನೇ ಹೆಚ್ತಾ ಇರೋದು ಕಾಣ್ತಾ ಇಲ್ವ, ಆ ಉಕ್ರೇನ್ ಮೇಲೆ ಮುಗಿಬಿದ್ದ ಪುಟಿನ್ ತೀರಾ ಸಸ್ತಾ ರೇಟಲ್ಲಿ ಬೇರೆ ಮಾರುತ್ತಾ ಇರೋವಾಗಲೂ ಅದ್ಯಾಕೆ ಪೆಟ್ರೋಲ್,ಡೀಸೆಲ್ ಆ ಪಾಟಿ ರೇಟಿಗೆ ಮಾರುತ್ತಾ ಅವರೆ ಅಂತ ಕೇಳಿ.

ಡಾ.ಬಿಜಿಎಲ್ ಸ್ವಾಮಿ ಅವರ “ ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕಾ” ಎಂಬ ಸರಳ ಕನ್ನಡದ ಪುಸ್ತಕ ಓದಿದ ಯಾರಿಗೇ ಆದರೂ ಇವತ್ತು ನಾವು ದಿನವೂ ಬಳಸುತ್ತಿರುವ ಬಹಳಷ್ಟು ತರಕಾರಿಗಳು ದಕ್ಷಿಣ ಅಮೆರಿಕೆಯಿಂದ ಪೋರ್ಚುಗೀಸರು, ಡಚ್ಚರು, ಬ್ರಿಟಿಷರ ಮುಖಾಂತರ ನಮ್ಮ ನೆಲಕ್ಕೆ ಬಂದು ನೆಲೆ ಕಂಡಿರುವ ಸಸ್ಯಗಳು ಅಂತ ಗೊತ್ತಾಗುತ್ತದೆ. ಟೊಮಾಟೋ ಕೂಡಾ ದಕ್ಷಿಣ, ಮಧ್ಯಅಮೆರಿಕಾದ ಮೆಕ್ಸಿಕೋ ಮೂಲದ ತಳಿ. ಮೆಕ್ಸಿಕೊದಲ್ಲಿ ಏಳನೇ ಶತಮಾನದಲ್ಲಿದ್ದ ನಹುತಿ ಎಂಬ ಭಾಷಿಕರ ಬಾಯಲ್ಲಿ ಟಮಾಟಿ ಆಗಿದ್ದ  ಹಣ್ಣು ಎನಿಸಿಕೊಂಡರೂ ಹಣ್ಣಿನಂತೆ ಬಳಕೆಯಾಗದ ತರಕಾರಿಯ ಸ್ಥಾನ ಪಡೆದುಕೊಂಡ ಇದು ಸ್ಪಾನಿಷ್ ಆಕ್ರಮಣಕಾರರ ಬಾಯಲ್ಲಿ ಟೊಮಾಟೇ ಆಯಿತು, ನಮ್ಮಲ್ಲಿಇಂಗ್ಲಿಷ್ ಪ್ರಭಾವದಲ್ಲಿ ಟೊಮಾಟೋ ಆಗಿ ಉಳಿದುಕೊಂಡಿತು. ತಮಿಳರೇ ಹೆಚ್ಚಾಗಿ ಇರುವ ವಸಂತನಗರದಲ್ಲಿ ಮನೆ ಮುಂದೆ ಬಂದು ಮಾರುವವರು “ತಕ್ಕಾಳಿ ತಕ್ಕಾಳಿ” ಅಂತಾನೇ ಕೂಗುವುದು. ನಾನು “ ಹೌದು ತಕಾಳಿ ತಕಳಿ ಅಂತ ಪನ್ ಮಾಡಬೇಕು ಅಂತ ಅಂದುಕೊಳ್ಳುತ್ತೇನೆ. ಹೋದ ತಿಂಗಳು ತಳ್ಳುವ ಗಾಡಿಯಲ್ಲಿ ಹೀಗೆ ತಕ್ಕಾಳಿ ಅಂತ ಕೂಗುತ್ತಿದ್ದವರು ಈಗ ನಾಪತ್ತೆಯಾಗಿದ್ದಾರೆ. ಮೇನ್ ರೋಡಿನ ತರಕಾರಿ ಮಳಿಗೆಯಲ್ಲೂ ಆ ಸಾಬರ ಹುಡುಗ ಸೇಬನ್ನು ಪದೇ ಪದೇ ಬಿಳಿ ಬಟ್ಟೆಯಲ್ಲಿ ಒರೆಸಿ ಒರೆಸಿ ಜೋಡಿಸುವಂತೆ ಟೊಮಾಟೊ ಹಣ್ಣನ್ನೂ ಒರೆಸಿ ಜೋಡಿಸುತ್ತಿರುವುದನ್ನು ನೋಡಬಹುದು.

1498ರಲ್ಲಿ ಕೇರಳದ ಕೊಚ್ಚಿಯ ಕಪ್ಪಡ್ ಎಂಬಲ್ಲಿ ಈ ಭೂಖಂಡದ ನೆಲ ಸ್ಪರ್ಶಿಸಿದ ವಾಸ್ಕೊ-ಡ-ಗಾಮ ಎಂಬ ಪೋರ್ಚುಗೀಸ್ನ  ಅನ್ವೇಷಕ ಈ ಟೊಮಾಟೋ ಮತ್ತು ಅಂಥ ಹಲವಾರು ತರಕಾರಿ, ಹಣ್ಣು ಮತ್ತಿತರ ಗಿಡಗಳ ಬೀಜ ಮತ್ತು ಸಸಿಗಳನ್ನು ತಂದು ಇಲ್ಲಿ ಪರಿಚಯಿಸಿದನಂತೆ. ಕರಿಮೆಣಸಿನ ಕಾಳು ಸೇರಿದಂತೆ ನಮ್ಮಲ್ಲಿನ ಮಸಾಲೆ ಪದಾರ್ಥಗಳಿಗಾಗೇ ಹತ್ತು ಸಾವಿರ ಮೈಲಿ ಪ್ರಯಾಣಿಸಿದ ಈ ಯೂರೋಪಿಯನ್ನರು ಮೆಣಸಿಗೆ ಬದಲಿಯಾಗಿ ಕೊಟ್ಟ ಖಾರವಾದ ತರಕಾರಿಗೆ ನಾವು ಕಾಳು ಮೆಣಸಿನ ನೆನಪಲ್ಲೇ ಹಸಿ ಮೆಣಸಿನಕಾಯಿ ಅಂತ ಹೆಸರುಕೊಟ್ಟಿದ್ದೇವೆ. ಮೂಗಿಗೇ ಘಾಟೇರಿಸುವ, ತಿಂದ ಮೇಲೆ ಎಲ್ಲ ಕಡೆ ಉರಿ ಕಿತ್ತುಕೊಳ್ಳುವ ಈ ಹಸಿ ಮೆಣಸಿನಕಾಯಿ ಎಲ್ಲಿ, ತಿನ್ನುವಾಗಲೂ ತಿಂದ ಮೇಲೂ ಮಧುರ ಎನಿಸುವ ಕಾಣು ಮೆಣಸು ಎಲ್ಲಿ!

ಅದ್ಯಾವುದೋ ಮಸೀದಿಯ ಬಾವಿಯೊಳಗೆ ಶಿವಲಿಂಗ ಸಿಕ್ತು ಇದೆ ಅಂತ,ನಂತರ ಸಿಕ್ತು ಅಂತ ಟಿವಿಗಳಲ್ಲಿ ನೋಡಿರಬೇಕು ಅಲ್ವಾ ನೀವು, ಇಡೀ ಇಂಡಿಯಾದ ಎಲ್ಲ ಮಸೀದಿಗಳನ್ನೂ ಹಿಂದೂ ದೇವಸ್ಥಾನಗಳನ್ನೇ ಕೆಡವಿ ಕಟ್ಟಿರೋದು ಅಂತ ಶಂಖ ಊದೋರಿಗೆ ತಕ್ಕನಾಗಿ ನಮ್ಮ ಟಿವಿ ಚಾನೆಲ್‍ ಗಳು ಜಾಗಟೆ ಬಡಿಯೋಕೆ ಶುರು ಮಾಡಿವೆ. ಅಯ್ಯೋ, ಇಂಡಿಯಾದ ಮಸೀದಿಗಳೇ ಅಲ್ಲ ಆ ಮೆಕ್ಕಾದ ಕಾಬಾದೊಳಗೂ ಇರೋದೆ ಶಿವಲಿಂಗಾನೇ ಅನ್ನೋರ ಸಂಖ್ಯೆ ಏನೂ ಕಡಿಮೆ ಇಲ್ಲ.

ಮನುಷ್ಯನೇ ಸೃಷ್ಟಿಸಿದ ಈ ದೇವರ ವಿಗ್ರಹ, ಪ್ರತಿಮೆಗಳನ್ನು ಬಳಸಿಕೊಂಡು ಈ ದೇಶದ ಸಾಮಾನ್ಯ ಜನರ ನೆಮ್ಮದಿಯ ಬದುಕನ್ನು ಕಿತ್ತುಕೊಳ್ಳಲು ನಿಮಗೇನು ಹಕ್ಕಿದೆ ಎಂದು ಈ ಸಂಘಪರಿವಾರದ ನೂರೆಂಟು ಸಂಘಟನೆಗಳ, ವೇದಿಕೆಗಳ ಹೆಸರಲ್ಲಿ ಟಿವಿಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ತಲೆಕೆಡಿಸುವವರನ್ನು ಯಾರೂ ಕೇಳುತ್ತಿಲ್ಲವೇಕೆ. ತಮ್ಮ ಟಿವಿಗಳ ಟಿಆರ್ ಪಿ ಹೆಚ್ಚಿದರೆ ಹೆಚ್ಚು ಜಾಹಿರಾತು ಬರುತ್ತದೆ ಎಂಬ ಕಾರಣಕ್ಕೆ, ಸದಾ ತಮ್ಮ ಟಿವಿಗಳನ್ನೇ ಜನ ನೋಡಲಿ ಎಂಬ ಕಾರಣಕ್ಕೆ ದೊಡ್ಡ ಗಂಟಲಲ್ಲಿ ಅರಚುವ ಟಿವಿ ಆಂಕರ್ ಗಳನ್ನು ಮೆಲುದನಿಯಲ್ಲಿ ಒಳ್ಳೆಯ ಮಾತಾಡಿ ಅಂತಲೂ ಕೇಳಬಾರದೇಕೆ.

ಎಲ್ಲ ಜೀವನಾವಶ್ಯಕ ಪದಾರ್ಥಗಳನ್ನು ವಿಪರೀತ ಎನಿಸುವಷ್ಟು ಹೆಚ್ಚಿನ ಧಾರಣೆಗೆ ಮಾರುತ್ತಿದ್ದಾರೆ. ನಾವೂ ಅಷ್ಟೆ ಯಾಕೆ ಇಷ್ಟೊಂದು ರೇಟು ಎಂದು ಕೇಳದೆ ಸುಮ್ಮನೇ ಹಣ ತೆತ್ತು ತರುತ್ತೇವೆ. ರೈತರನ್ನು ಹೊರತುಪಡಿಸಿ ಉಳಿದ ಉತ್ಪನ್ನಗಳ ತಯಾರಕರು ವಾಸ್ತವಿಕ ಉತ್ಪಾದನಾ ವೆಚ್ಚ, ಸಾಗಾಣಿಕೆ, ತೆರಿಗೆ, ಇತ್ಯಾದಿಗಳ ಜೊತೆಗೆ ಸಾಕಷ್ಟು ಲಾಭವನ್ನೂ ಇಟ್ಟುಕೊಂಡು ಗರಿಷ್ಟ ಮಾರಾಟ ದರ (ಎಂಆರ್ ಪಿ) ನಿಗದಿ ಪಡಿಸಿರುತ್ತಾರೆ. ಹಾಗಾಗಿ ಕೆಲವು ಮಾರ್ಟ್ ಗಳಲ್ಲಿ ಎಂಆರ್ ಪಿಗಿಂತ ಕಡಿಮೆ ದರದಲ್ಲಿ ಮಾರಲು ಸಾಧ್ಯವಾಗುತ್ತದೆ.  ರೈತರ ಬೆಳೆಗಳಿಗೆ ಇಂಥಾ ಸೌಲಭ್ಯವಿಲ್ಲ, ತಮ್ಮ ಉತ್ಪನ್ನಗಳನ್ನು ಕೆಡದಂತೆ ಹೆಚ್ಚು ದಿನ ಸಂಗ್ರಹಿಸಿ ಇರಿಸಿಕೊಳ್ಳುವ ಹಾಗೂ ಅಲ್ಲಿವರೆಗೂ ದೈನಂದಿನ ಜೀವನ ನಡೆಸುವಷ್ಟು ಹಣಕಾಸಿನ ವ್ಯವಸ್ಥೆ ಇರುವಂತಾಗಬೇಕು, ರೈತರ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು ಅಂತಾನೇ ಎಂಬತ್ತರ ದಶಕದಲ್ಲಿ ರೈತ ಚಳವಳಿ ಈ ನಾಡಿನಲ್ಲಿ ಹಬ್ಬಿ ಬೆಳೆಯಿತು. ಕ್ರಮೇಣ ದುರ್ಬಲಗೊಂಡಿತು. ಎನ್.ಡಿ.ಸುಂದರೇಶ್ ಅವರ ಅಕಾಲಿಕ ಮರಣ ರೈತ ಚಳವಳಿಗೆ ಬಿದ್ದ ದೊಡ್ಡಏಟು. ಉಳಿದ ಎರಡು ಮೂರನೇ ಹಂತದ ನಾಯಕರೆಲ್ಲ ಎಂ.ಡಿ.ನಂಜುಂಡಸ್ವಾಮಿಯವರ ಮಾತಿನ ಮೊನಚು ಮತ್ತು ವೈಚಾರಿಕ ಪ್ರಖರತೆ ತಡೆಯಲಾಗದೇ ಚಳವಳಿಯಿಂದಲೇ ಅರುಗಾಗಿ ಬಿಟ್ಟರು. ಈಗಲೂ ರೈತ ಸಂಘದ ಹೆಸರಲ್ಲಿ ಹಸಿರು ವಲ್ಲಿ ಹಾಕಿಕೊಂಡು ಎರಡು ಮೂರು ಬಣಗಳನ್ನು ಮಾಡಿಕೊಂಡು ಹೋರಾಟದ ಹೆಸರಿನಲ್ಲಿ ಕಾರ್ಯಕ್ರಮಗಳನ್ನು ಮಾಡುತ್ತಿರುವವರು  ಹುಸಿ ಸಿದ್ಧಾಂತಿಗಳಾಗಿದ್ದಾರೆ. ಇತ್ತೀಚೆಗೆ ತನ್ನಬಣದ ಸಂಘ ಮತ್ತು ಸೇನೆ ಎರಡನ್ನೂ ಬಿಜೆಪಿ ಬಿ ಟೀಮ್ ಆಮ್ ಆದ್ಮಿ ಪಾರ್ಟಿಗೆ ಅಡಮಾನ ಮಾಡಿದ ಭೂಪ ಸಾರಿಗೆ ನೌಕರರ ಮುಷ್ಕರದಲ್ಲಿ 35 ಕೋಟಿ ಮೊತ್ತಕ್ಕೆ ಡೀಲ್ ಆಗಿದ್ದಾನೆ ಎಂದು ಟಿವಿಯೊಂದು ಸ್ಟಿಂಗ್ ಆಪರೇಶನ್ ದೃಶ್ಯಗಳನ್ನು ಪ್ರಸಾರ ಮಾಡಿತು. ಈತ ಈ ಆರೋಪ ಸುಳ್ಳು ಎಂದು ನಿರಾಕರಿಸುವ ಸ್ಥಿತಿಯಲ್ಲೂ ಇಲ್ಲ.

ವಿಶ್ರಾಂತ ಐಎಎಸ್ ಅಧಿಕಾರಿ ಚಿಕ್ಕಣ್ಣನವರ ಸ್ವಚರಿತೆಯನ್ನು ‘ ಬೆವರ ಹನಿ’ ಯ ಭಾನುವಾರದ ಪುರವಣಿ ‘ಕಿನ್ನರಿ’ಯಲ್ಲಿ ಮೂರು ವಾರದಿಂದ ಪ್ರಕಟಿಸುತ್ತಿದ್ದೇವೆ. ಅವರ ಮುಕ್ಕಾಲು ಶತಮಾನದ ಹಿಂದಿನ ಬಾಲ್ಯದ ನೆನಪುಗಳೊಂದಿಗೆ ಆರಂಭವಾಗುವ ಅಧ್ಯಾಯಗಳಲ್ಲಿ ಅವರು ಬಾಲಕನಾಗಿದ್ದಾಗ “ಬತ್ತದ ಮೂಟೆಗಳ ಮೇಲೆ ಸುಮ್ಮನೆ ಮಲಗಿದ್ದ “ ಉಲ್ಲೇಖ ಬರುತ್ತದೆ.

ಅವರು ಮತ್ತು ನಿಮ್ಮಲ್ಲಿ ಹಳ್ಳಿಗಳಲ್ಲಿ ಬೆಳೆದು ಬಂದ ಯಾರಿಗೇ ಆದರೂ ಒಂದೆರಡು ಎಕರೆ ಹೊಲ, ಗದ್ದೆಗಳಿದ್ದವರ ಮನೆಗಳಲ್ಲಿ ಸುಗ್ಗಿಯ ನಂತರ ರಾಗಿ, ಜೋಳ, ಬತ್ತದ ಚೀಲಗಳನ್ನು ಒಟ್ಟಿರುತ್ತಿದ್ದುದು ನೆನಪಿಗೆ ಬರುವುದು ಖಂಡಿತಾ. ಭೂರಹಿತ ಕೃಷಿ ಕಾರ್ಮಿಕರು ಅಥವಾ ಇನ್ನಾವುದೇ ಕಸುಬುಗಳಲ್ಲಿ ತೊಡಗಿಸಿಕೊಂಡಿದ್ದು, ಊರಿನ ಜನರಿಂದ ಆಯದ ರೂಪದಲ್ಲಿ ಧಾನ್ಯ, ಕಾಳು ಪಡೆಯುತ್ತಿದ್ದವರ ಮನೆಗಳಲ್ಲೂ ತಕ್ಕ ಮಟ್ಟಿಗೆ ಆಹಾರ ಭದ್ರತೆ ಇರುತ್ತಿತ್ತು. ಈಗ ಸೂಪರ್ ಮಾರ್ಟ್ ಗಳ ಕಾಲದಲ್ಲಿ ಹಾಗಲ್ಲ, ವಾರಕ್ಕಾಗುವ ಹೆಚ್ಚೆಂದರೆ ಮುಕ್ಕಾಲು ತಿಂಗಳಿಗೆ ಸಾಕಾಗುವಷ್ಟು ದಿನಸಿ ತಂದರೆ ಅದೇ ಹೆಚ್ಚು. ಹಾಗಾಗಿಯೇ ಕೋವಿಡ್ ಬಿಕ್ಕಟ್ಟಿನಲ್ಲಿ ಲಾಕ್ ಡೌನ್ ಘೋಷಿಸಿದಾಗ ಕೊರೊನಾ ಸೋಂಕಿಗಿಂತ ಆಹಾರದ ಕೊರತೆ ಮತ್ತು ಆತಂಕದಿಂದ ಬಳಲಿದವರೇ ಸಂಖ್ಯೆಯೇ ಜಾಸ್ತಿ ಇತ್ತು. ಇಲ್ಲದೇ ಹೋಗಿದ್ದರೆ, ಅವರಿವರು ಕೊಡುತ್ತಿದ್ದ ಫುಡ್ ಕಿಟ್‍ಗಳಿಗೆ ಅದ್ಯಾಕೆ ಅಷ್ಟೊಂದು ಉದ್ದನೆ ಕ್ಯೂಗಳು,ನೂಕು ನುಗ್ಗಲು ಇರುತ್ತಿತ್ತು ಹೇಳಿ.

“ನೋಡಿ, ಇಡೀ ದೇಶದ ಎಲ್ಲ ಪ್ರಜೆಗಳಿಗೆ ಉಚಿತವಾಗಿ ವ್ಯಾಕ್ಸೀನ್ ಕೊಡುತ್ತಿದ್ದೇವೆ, ಇದು ನಮ್ಮ ಸರ್ಕಾರದ ಸಾಧನೆ” ಎಂದು ಫೋಟೋ ಸಹಿತ ಲಸಿಕೆ ಪ್ರಮಾಣಪತ್ರವನ್ನು ಕೊಟ್ಟಾಗಲೂ ಅದನ್ನೇ ಗ್ರೇಟ್ ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುವ ಮತದಾರರು,  ಇವತ್ತಿಗೂ ಸರಕಾರವೆಂದರೆ ಏನು , ಅದು ಏಕೆ ಉಚಿತವಾಗಿ ಲಸಿಕೆ ಕೊಡುತ್ತದೆ, ಆ ಹಣವನ್ನು ಆ ಸರಕಾರವೆಂಬುದು ಎಲ್ಲಿಂದ ತರುತ್ತದೆ. ಆ ಸರಕಾರದಲ್ಲಿರುವ ಪ್ರಧಾನಿಯಾದಿಯಾಗಿ ಎಲ್ಲ ಮಂತ್ರಿಗಳು ಹಗಲಿರುಳೂ ಎಲ್ಲೋ ಕೂಲಿಮಾಡಿ ಗಳಿಸಿದ ಹಣದಲ್ಲಿ ಹೀಗೆ ಲಸಿಕೆ ಉಚಿತವಾಗಿ ಕೊಡುತ್ತಿದ್ದಾರಾ” ಎಂದೆಲ್ಲ ಪ್ರಶ್ನಿಸುವ ಗೋಜಿಗೇ ಹೋಗುವುದಿಲ್ಲ. ಆತ ಲಸಿಕೆ  ಪಡೆದದ್ದು ನಮ್ಮ ತೆರಿಗೆ ಹಣದಲ್ಲಿ  ಎಂದು ಅರಿವಾದಾಗ ಆತನ ಲಸಿಕೆ ಪ್ರಮಾಣ ಪತ್ರದಲ್ಲಿ ಯಾರ ಫೋಟೋ ಇರಬೇಕು ಎನ್ನುವುದನ್ನು ನೀವು ತೀರ್ಮಾನ ಮಾಡಬಲ್ಲಿರಿ.

ಐದು ವರ್ಷಕ್ಕೊಮ್ಮೆ ಅಥವಾ ಚುನಾವಣೆ ಘೋಷಣೆ ಆದಾಗಲೆಲ್ಲ, 18 ವರುಷ ತುಂಬಿದ ಈ ದೇಶದ ವಯಸ್ಕರು ಹಾಕುವ ಕೇವಲ ಒಂದು ಓಟು ನಮ್ಮನ್ನಾಳುವವರಿಗೆ ಅದು ಹೇಗೆ ಇಷ್ಟೊಂದು ಶಕ್ತಿ ಕೊಡುತ್ತದೆ, ಈ ದೇಶದ ಜನರು ನೇರವಾಗಿ ಮತ್ತು ಪರೋಕ್ಷವಾಗಿ ಪಾವತಿಸುವ ತೆರಿಗೆ ಹಣದಿಂದಲೇ ರಸ್ತೆ, ಕಟ್ಟಡ, ಸಾರ್ವಜನಿಕ ಸೌಲಭ್ಯಗಳನ್ನು ಕಲ್ಪಿಸುವ ಈ ಸರಕಾರಿ ಮಂದಿ ಅದೇ ಹಣದಲ್ಲಿ 40-50% ಲಂಚದ ರೂಪದಲ್ಲಿ ಕಮೀಶನ್ ರೂಪದಲ್ಲಿ ತಿಂದು ಹಾಕುತ್ತಾರಲ್ಲ, ಹಾಗಂತ ಗುತ್ತಿಗೆದಾರರ ಸಂಘವೇ ಸಾರ್ವಜನಿಕವಾಗಿ ಲಿಖಿತ ಆಪಾದನೆ ಮಾಡಿದಾಗಲೂ ಈ ಇಂಡಿಯಾದ ಪ್ರಜೆಗಳು ಕೇಳುವುದಿಲ್ಲವಲ್ಲ ಯಾಕೆ ಅಂತ ತುಸು ಬಿಡುವು ಮಾಡಿಕೊಂಡು ಆಲೋಚನೆ ಮಾಡಿದ್ದೀರಾ.

ಹೀಗೆ ಪ್ರಶ‍್ನೆ ಮಾಡುವ ಶಕ್ತಿಯೇ ಇಲ್ಲದಂತಾಗಲು, ಅಕಸ್ಮಾತ್ ಇದೆಲ್ಲಅನ್ಯಾಯ ಅಂತ ಅನ್ನಿಸಿದರೂ ಇಬ್ಬರೋ ಮೂವರೋ ಇದ್ದಾಗ ಗೊಣಗಿಕೊಳ್ಳುವಷ್ಟಕ್ಕೇ ಸೀಮಿತವಾಗುವಂಥ ಪರಿಸ್ಥಿತಿ ಸೃಷ್ಟಿ ಮಾಡಿದ್ದು ಯಾರು, ನಮ್ಮ ಶಿಕ್ಷಣ ವ್ಯವಸ್ಥೆಯೇ, ನಮ್ಮ ಶ್ರೇಣೀಕೃತ ಜಾತಿ ಪದ್ಧತಿಯೇ, ಸಾವಿರಾರು ವರ್ಷಗಳ ಪರಂಪರೆಯಿರುವ ಸನಾತನ ಧರ್ಮವೇ ಏನು, ನಿಮ್ಮೊಳಗೆ ಕೇಳಿಕೊಂಡು ನೋಡಿ.

ಜಗತ್ತಿನ ಎಲ್ಲ ದೇಶಗಳಲ್ಲೂ ಇಂಡಿಯಾದಂಥ ಮೇಲೆ ಹೇಳಿದ ಪರಿಸ್ಥಿತಿ ಇಲ್ಲ ಅಂತ ಭಾವಿಸುತ್ತೇನೆ. ಹಾಗೆ ಇದ್ದಿದ್ದರೆ, ನಮ್ಮಲ್ಲಿ ಇಂಜಿನಿಯರಿಂಗ್ ಮತ್ತು ಇತರ ವೃತ್ತಿಶಿಕ್ಷಣ ಮುಗಿಸಿದ ಕೂಡಲೇ ಅಪಾರ ಸಂಖ್ಯೆಯ ತರುಣ,ತರುಣಿಯರು ಹೆಚ್ಚಿನ ಓದಿನ ನೆಪದಲ್ಲಿ ಯೂರೋಪ್ ಹಾಗೂ ಅಮೆರಿಕಾ ಖಂಡದ ದೇಶಗಳಿಗೆ ಯಾಕೆ ಹೋಗಿ, ಅಲ್ಲಿ ಪಾರ್ಟ್ ಟೈಮ್ ಉದ್ಯೋಗ ಮಾಡುತ್ತ, ಓದು ಮುಗಿದ ಕೂಡಲೇ ಅಲ್ಲೇ ಕೆಲಸಗಳನ್ನು ಹುಡುಕಿಕೊಂಡು, ಇಲ್ಲಿರುವ ಅಮ್ಮಂದಿರಿಗೆ ವಿಡಿಯೋ ಕಾಲ್ ಮಾಡುತ್ತ, ಅಪ್ಪಂದಿರಿಗೆ ವಾಟ್ಸಪ್ ಮೆಸೇಜುಗಳನ್ನು ಹಾಕುತ್ತ, ಇನ್ಸ್ಟಾಗ್ರಾಂಗಳಲ್ಲಿ ಸೆಲೆಕ್ಟೆಡ್ ಫೋಟೋಗಳನ್ನು ಶೇರ್ ಮಾಡುತ್ತ ಅಲ್ಲೇ ಉಳಿದುಬಿಡುತ್ತಿದ್ದರು ಹೇಳಿ.

ನಗರಗಳಲ್ಲಿ ವಾಸಿಸುತ್ತಿರುವ ನಾವು ನಿಜ ಅರ್ಥದಲ್ಲಿ ನಾಗರಿಕರಾಗಬೇಕು, ಇಲ್ಲವಾದಲ್ಲಿ ನಾವು ಬೆವರು ಸುರಿಸಿ ದುಡಿದು ಪಾವತಿಸಿದ ತೆರಿಗೆ ಮೊತ್ತದಲ್ಲಿ ಸ್ಮಾರ್ಟ್ ಸಿಟಿ ಹೆಸರಲ್ಲಿ ಒಂದು ಸಾವಿರ ಕೋಟಿ ಚರಂಡಿ ಪಾಲಾದರೂ ನಾವು ಪ್ರಶ್ನಿಸುವುದಿಲ್ಲ. ಇಡೀ ನಗರದಲ್ಲಿ ಪಾದಚಾರಿಗಳು  ಎಲ್ಲೂ ಕನಿಷ್ಟ ನೂರು ಗಜದಷ್ಟು ದೂರ ಸರಾಗವಾಗಿ ನಡೆದುಹೋಗುವಂಥ ಫುಟ್ ಪಾತ್ ಗಳನ್ನು ನಿರ್ಮಿಸಲಾಗದೇ ಸೋತು ಸುಣ್ಣವಾಗಿರುವ ಇಂಜಿನಿಯರ್ ಗಳು, ಮಹಾನಗರಪಾಲಿಕೆಯ ಚುನಾಯಿತ ಸದಸ್ಯರು, ಸಂಬಳ ಪಡೆವ ಸಿಬ್ಬಂದಿ, ಓಟು ಪಡೆದು ನಮ್ಮನ್ನಾಳುವ ಜನಪ್ರತಿನಿಧಿಗಳು ಇವರನ್ನು ನೀವು ಪ್ರಶ್ನಿಸಲೇ ಬೇಕು, ಇಲ್ಲವಾದರೇ ಹೀಗೆ ಹೀಗೇ ರೇಷ್ಮೆ ಹುಳಗಳಂತೆ ನಿರಂತರ ಮೇದು ನಮ್ಮೊಳಗೇ ಗೂಡು ಸುತ್ತಿಕೊಂಡು, ಒಂದು ದಿನ ಯಾರೋ ಕುದಿವ ನೀರಿಗೆ ಹಾಕಿ ನೂಲು ಸುತ್ತುವ ಹೊತ್ತಿಗೆ ಯಾರಿಗೂ ಗೊತ್ತಾಗದ ರೀತಿಯಲ್ಲಿ ಒಳಗೇ ಸತ್ತು ಹೋಗಿರುತ್ತೇವೆ.