ಏಕರೂಪ ನಾಗರಿಕ ಸಂಹಿತೆ ಮತ್ತು ಎಚ್‌ಯುಎಫ್‌ ತೆರಿಗೆ ಸೌಲಭ್ಯಗಳು

ಏಕರೂಪ ನಾಗರಿಕ ಸಂಹಿತೆ  ಮತ್ತು  ಎಚ್‌ಯುಎಫ್‌ ತೆರಿಗೆ ಸೌಲಭ್ಯಗಳು

 

ಅನುವಾದ :

ನಾ ದಿವಾಕರ

 

   ಏಕರೂಪ ನಾಗರಿಕ ಸಂಹಿತೆ (ಏನಾಸಂ) ಕುರಿತು ಭಾರತದ ಕಾನೂನು ಆಯೋಗವು ಹೊಸ ಚರ್ಚೆಯನ್ನು ಪ್ರಾರಂಭಿಸಿದೆ, ಇದು ಹಿಂದೂ ಅವಿಭಜಿತ ಕುಟುಂಬ (ಎಚ್‌ಯುಎಫ್) ಸಂಸ್ಥೆ ಮತ್ತು ತೆರಿಗೆ ಕಾನೂನುಗಳ ಅಡಿಯಲ್ಲಿ ಅದಕ್ಕೆ ಸಂಬಂಧಿಸಿದಂತೆ ಪ್ರತ್ಯೇಕವಾದ ಚರ್ಚೆಗಳನ್ನು ಹುಟ್ಟುಹಾಕಿದೆ. ಕಾನೂನುಬದ್ಧ ಘಟಕವಾಗಿ ಎಚ್‌ಯುಎಫ್‌ನ ಅಸ್ತಿತ್ವವು ಭಾರತದಲ್ಲಿನ ಬ್ರಿಟಿಷ್ ಸರ್ಕಾರವು ಸಂಪ್ರದಾಯಗಳನ್ನು ಒಪ್ಪಿಕೊಂಡಿರುವುದರಿಂದ ಜಾರಿಗೆ ಬಂದಿದ್ದು ಇಂದಿಗೂ ಊರ್ಜಿತವಾಗಿದೆ. ಹಿಂದೂ ಕುಟುಂಬಗಳಲ್ಲಿನ ಆಸ್ತಿಯ ಮೇಲೆ ಜಂಟಿಯಾಗಿ ನಿಯಂತ್ರಣ ಸಾಧಿಸಲು ರಕ್ತ ಸಂಬಂಧಗಳು ಮತ್ತು ಬಂಧುತ್ವದ ಬಲವಾದ ಪ್ರಜ್ಞೆಯ ಮೇಲೆ ಕಾರ್ಯನಿರ್ವಹಿಸುವ ಸಂಸ್ಥೆಯಾಗಿ ಇದನ್ನು ನೋಡಲಾಯಿತು ಮತ್ತು ಒಪ್ಪಂದದ ವ್ಯವಸ್ಥೆಗಳಿಗಿಂತ ಹೆಚ್ಚಾಗಿ ಹಿಂದೂ ವೈಯಕ್ತಿಕ ಕಾನೂನುಗಳ ಆಧಾರದ ಮೇಲೆ ವ್ಯವಹಾರ ನಿರ್ವಹಣೆಗಳಿಗೆ ಕಾರಣವಾಯಿತು.

 

ಚಾರಿತ್ರಿಕ ದೃಷ್ಟಿಕೋನ 

 

ಕಾನೂನುಬದ್ಧ ಘಟಕವಾಗಿ ಎಚ್‌ಯುಎಫ್‌ ಒಂದೆಡೆ ಕುಟುಂಬ-ಬೆಂಬಲಿತ ಸಂಸ್ಥೆಯಾಗಿ ಕಂಡುಬಂದರೆ ಮತ್ತೊಂದೆಡೆ ಕುಟುಂಬದ ನಿರ್ವಹಣೆಯ ಉದ್ದೇಶದಿಂದ ವರಮಾನವನ್ನು ಉತ್ಪಾದಿಸುವ ಘಟಕದಂತೆ ಕಂಡುಬರುತ್ತದೆ. ಇಂತಹ ಒಂದು ವ್ಯವಸ್ಥೆ ಬಹುಶಃ ಭಾರತೀಯ ಕಾನೂನಿನಲ್ಲಿ ಸೇರಿಸಲಾದ ತೆರಿಗೆ ನಿರ್ವಹಣೆಯಲ್ಲಿ ಒಂದು ಮಹತ್ತರ ಪಾತ್ರವನ್ನು ವಹಿಸಿದೆ. ವರಮಾನ ತೆರಿಗೆ ಉದ್ದೇಶಗಳಿಗಾಗಿ ಎಚ್‌ಯುಎಫ್ ಸಾಮಾನ್ಯ ಪೂರ್ವಜರಿಂದ ಅನುವಂಶಿಕವಾಗಿ ಬರುವ ಎಲ್ಲಾ ವ್ಯಕ್ತಿಗಳನ್ನು ಒಳಗೊಂಡಿರುತ್ತದೆ ಮತ್ತು ಅವರ ಹೆಂಡತಿಯರು ಮತ್ತು ಅವಿವಾಹಿತ ಹೆಣ್ಣುಮಕ್ಕಳನ್ನು ಒಳಗೊಂಡಿರುತ್ತದೆ. ಎಚ್‌ಯುಎಫ್ ತನ್ನದೇ ಆದ ಶಾಶ್ವತ ಖಾತೆ ಸಂಖ್ಯೆಯನ್ನು (ಪ್ಯಾನ್) ಹೊಂದಿರುವುದಲ್ಲದೆ ಅದರ ಸದಸ್ಯರಿಂದ ಸ್ವತಂತ್ರವಾಗಿ ತೆರಿಗೆ ರಿಟರ್ನ್ಸ್ ಸಲ್ಲಿಸುತ್ತದೆ. ಒಂದು ಎಚ್‌ಯುಎಫ್ ಒಬ್ಬ ಕರ್ತಾವನ್ನು ಹೊಂದಿರುತ್ತದೆ, ಆತನು ಸಾಮಾನ್ಯವಾಗಿ ಕುಟುಂಬದ ಹಿರಿಯ ಪುರುಷ ವ್ಯಕ್ತಿಯಾಗಿರುತ್ತಾನೆ. ಅದರ ದೈನಂದಿನ ವ್ಯವಹಾರಗಳನ್ನು ನಿರ್ವಹಿಸುತ್ತಾನೆ. ಇತರ ಸದಸ್ಯರು ಸಹಭಾಗಿಗಳಾಗಿರುತ್ತಾರೆ.  ಮಕ್ಕಳು ತಮ್ಮ ತಂದೆಯ ಎಚ್‌ಯುಎಫ್ನ ಸಹವರ್ತಿಗಳಾಗಿರುತ್ತಾರೆ.

 

1886 ರ ಭಾರತೀಯ ವರಮಾನ ತೆರಿಗೆ ಕಾಯ್ದೆಯು ಎಚ್‌ಯುಎಫ್ ಅನ್ನು ವ್ಯಕ್ತಿಯ ರೂಪದಲ್ಲೇ ಗುರುತಿಸಿತ್ತು.  ಮೊದಲನೆಯ ಮಹಾಯುದ್ಧಕ್ಕೆ ಹಣಕಾಸು ಸಂಗ್ರಹಿಸುವ ಪ್ರಯತ್ನದಲ್ಲಿ, ಬ್ರಿಟಿಷರು ಸೂಪರ್ ಟ್ಯಾಕ್ಸ್ ಆಕ್ಟ್ 1917 ಪರಿಚಯಿಸಿದರು. ಇದು ಎಚ್‌ಯುಎಫ್ ಅನ್ನು ಮೊದಲ ಬಾರಿಗೆ ತೆರಿಗೆ ಉದ್ದೇಶಗಳಿಗಾಗಿ ಪ್ರತ್ಯೇಕ ಘಟಕವಾಗಿ ಗುರುತಿಸಲು ಕಾರಣವಾಯಿತು. ವರಮಾನ ತೆರಿಗೆಯ ಜೊತೆಗೆ ಸೂಪರ್ ತೆರಿಗೆಯನ್ನು ವಿಧಿಸಲಾಯಿತು. 1922 ರ ವರಮಾನ ತೆರಿಗೆ ಕಾಯ್ದೆಯಲ್ಲಿ ಎಚ್‌ಯುಎಫ್ ಅನ್ನು ತೆರಿಗೆದಾರರ ವಿಶಿಷ್ಟ ವರ್ಗವಾಗಿ ಸಂಯೋಜಿಸಲಾಯಿತು ಇದು ಸ್ವಾತಂತ್ರ್ಯಾನಂತರದ 1961ರ ವರಮಾನ ತೆರಿಗೆ ಕಾಯ್ದೆಗೆ ಆಧಾರವಾಗಿತ್ತು.  ಪ್ರಸ್ತುತ ಜಾರಿಯಲ್ಲಿರುವ ಕಾನೂನು ಸೆಕ್ಷನ್ 2 (31) (ii) ಅಡಿಯಲ್ಲಿ ಎಚ್‌ಯುಎಫ್ ಅನ್ನು ವ್ಯಕ್ತಿಯಾಗಿ ಗುರುತಿಸುತ್ತದೆ.

 

ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ಕಾನೂನುಗಳ ನಡುವೆ, ಸರ್ಕಾರ ಸ್ಥಾಪಿಸಿದ ಸಮಿತಿಗಳು ಎಚ್‌ಯುಎಫ್ಗಳಿಗೆ ಆದ್ಯತೆಯ ತೆರಿಗೆ ಸೌಲಭ್ಯವನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸಿವೆ. 1936ರ ವರಮಾನ ತೆರಿಗೆ ವಿಚಾರಣಾ ವರದಿಯು ಎಚ್‌ಯುಎಫ್‌ಗಳಿಗೆ ವಿಶೇಷ ವಿನಾಯಿತಿಗಳಿಂದಾಗಿ ಗಣನೀಯ ವರಮಾನ ನಷ್ಟವಾಗುತ್ತಿದ್ದುದನ್ನು ಉಲೇಖಿಸಿದೆ. 1953-54ರ ತೆರಿಗೆ ವಿಚಾರಣಾ ಆಯೋಗವು ಎಚ್‌ಯುಎಫ್ಗಳಿಗೆ ಆದ್ಯತಾ ತೆರಿಗೆ ಸೌಲಭ್ಯದಿಂದ ಉಂಟಾದ ಅಸಂಗತತೆಗಳನ್ನು ಒಪ್ಪಿಕೊಂಡಿತ್ತು. ಆದರೆ ತೆರಿಗೆ ಕಾನೂನಿನಡಿಯಲ್ಲಿ ಎಚ್‌ಯುಎಫ್ ಅನ್ನು ಪರಿಗಣಿಸುವ ಸಂದರ್ಭದಲ್ಲಿ ಹಿಂದೂ ವೈಯಕ್ತಿಕ ಕಾನೂನಿನ ಅಡಿಯಲ್ಲಿ ಎಚ್‌ಯುಎಫ್‌ ಕಾನೂನುಬದ್ಧ ಸ್ಥಾನವನ್ನು ನಿರ್ಧರಿಸಬೇಕಾಯಿತು. ಇದೇ ಸಂದರ್ಭಲ್ಲಿ ಹಿಂದೂ ಸಂಹಿತೆ ಮಸೂದೆಯ ಬಾಕಿ ಇದ್ದ ಕಾರಣ ಆಯೋಗವು ತೆರಿಗೆಗೆ ಸಂಬಂಧಿಸಿದಂತೆ ಎಚ್‌ಯುಎಫ್‌ನ ಸ್ಥಾನವನ್ನು ಬದಲಾಯಿಸದಿರಲು ನಿರ್ಧರಿಸಿತು.

1971 ರ ನ್ಯಾಯಮೂರ್ತಿ ವಾಂಚೂ ಸಮಿತಿಯ ವರದಿಯು ಎಚ್‌ಯುಎಫ್‌ ಸಂಸ್ಥೆಯನ್ನು ತೆರಿಗೆ ತಪ್ಪಿಸಲು ಬಳಸಲಾಗುತ್ತಿದೆ ಎಂದು ಸ್ಪಷ್ಟವಾಗಿ ಹೇಳಿದೆ. 2018 ರಲ್ಲಿ ಕಾನೂನು ಆಯೋಗದ ಸಮಾಲೋಚನಾ ಪತ್ರವು "ದೇಶದ ವರಮಾನದ ವೆಚ್ಚದಲ್ಲಿ ಆಳವಾಗಿ ಬೇರೂರಿರುವ ಭಾವನೆಗಳ ಆಧಾರದ ಮೇಲೆ ಈ ಸಂಸ್ಥೆಯನ್ನು ಸಮರ್ಥಿಸುವುದು ನ್ಯಾಯಯುತವಲ್ಲ ಎಂದು ಅರ್ಥಮಾಡಿಕೊಳ್ಳಲು ಇದು ಸೂಕ್ತ ಸಮಯ" ಎಂದು ಘೋಷಿಸಿದೆ.

 

ತೆರಿಗೆ ವಿನಾಯಿತಿಗಳು

 

1922ರಿಂದ ವ್ಯಕ್ತಿಗಳು ಸೇರಿದಂತೆ ಇತರ ತೆರಿಗೆದಾರರಿಗೆ ಹೋಲಿಸಿದರೆ ಎಚ್‌ಯುಎಫ್ಗಳಿಗೆ ಹೆಚ್ಚುವರಿ ವಿನಾಯಿತಿ ಮಿತಿಯನ್ನು ಅನುಮತಿಸಲಾಯಿತು, ಇದು ಎಚ್‌ಯುಎಫ್‌ಗಳಿಗೆ ಒಂದೇ ರೀತಿಯಲ್ಲಿ ವರಮಾನವನ್ನು ಗಳಿಸಿದರೂ ಇತರ ಸಮಾನ ತೆರಿಗೆದಾರರಿಗಿಂತ ಕಡಿಮೆ ತೆರಿಗೆ ಪಾವತಿಸಲು ಅನುವು ಮಾಡಿಕೊಟ್ಟಿತು. ವರಮಾನ ತೆರಿಗೆ ಕಾಯ್ದೆ 1961 ರ ಅಡಿಯಲ್ಲಿ ಈ ಆದ್ಯತೆಯ ವಿನಾಯಿತಿ ಸೌಲಭ್ಯವನ್ನು ರದ್ದುಪಡಿಸಲಾಯಿತು.

 

ಆದಾಗ್ಯೂ, ಎಚ್‌ಯುಎಫ್ ಪ್ರತ್ಯೇಕ ತೆರಿಗೆ ಘಟಕವಾಗಿ ಹಿಂದೂ ಕುಟುಂಬಗಳಿಗೆ ತಮ್ಮ ತೆರಿಗೆ ಹೊರೆಯನ್ನು ಕಡಿಮೆ ಮಾಡಲು ಮತ್ತೊಂದು ಮಾರ್ಗವನ್ನು ಒದಗಿಸುತ್ತದೆ.  ಒಬ್ಬ ವ್ಯಕ್ತಿ ವರ್ಷಕ್ಕೆ 5,00,000 ರೂ.ಗಳ ಸಂಬಳದ ವರಮಾನವನ್ನು ಗಳಿಸುವುದೇ ಅಲ್ಲದೆ ಆತನ ಪೂರ್ವಜರ ಆಸ್ತಿಯಿಂದ ವರ್ಷಕ್ಕೆ 2,50,000 ರೂ.ಗಳ ಬಾಡಿಗೆ ವರಮಾನವನ್ನು ಗಳಿಸುತ್ತಾರೆ ಎಂದಿಟ್ಟುಕೊಂಡರೆ, ವೈಯಕ್ತಿಕ ತೆರಿಗೆ ಪಾವತಿದಾರರಿಗೆ ಲಭ್ಯವಿರುವ 2,50,000 ರೂ.ಗಳ ಮೂಲ ವಿನಾಯಿತಿ ಎಚ್‌ಯುಎಫ್‌ಗೆ ಸಹ ಲಭ್ಯವಿರುತ್ತದೆ. ಆ ವ್ಯಕ್ತಿಯು ತಮ್ಮ ಒಟ್ಟು ವರಮಾನವಾಗಿ 7,50,000 ರೂ.ಗಳನ್ನು ತೆರಿಗೆಗೆ ಅನ್ವಯಿಸುವಂತೆ ನೀಡಬಹುದು. ಇದು ಮೂಲ ವಿನಾಯಿತಿಯ ನಂತರ 5,00,000 ರೂ.ಗಳ ನಿವ್ವಳ ತೆರಿಗೆಗೆ ಒಳಪಡುವ ವರಮಾನವಾಗಿರುತ್ತದೆ. .

 

ಆದರೆ ಇದೇ ವ್ಯಕ್ತಿಯು ತಮ್ಮ ಮಗ ಮತ್ತು ಹೆಂಡತಿಯೊಂದಿಗೆ ಎಚ್‌ಯುಎಫ್ ರಚಿಸುವ ಆಯ್ಕೆಯನ್ನು ಹೊಂದಿರುತ್ತಾರೆ. ಪಿತ್ರಾರ್ಜಿತ ಆಸ್ತಿಯನ್ನು ಎಚ್‌ಯುಎಫ್ ಆಸ್ತಿ ಎಂದು ಪರಿಗಣಿಸಲಾಗುತ್ತದೆ, ಮತ್ತು ಅದರಿಂದ ಪಡೆದ ಯಾವುದೇ ವರಮಾನಕ್ಕೆ ಎಚ್‌ಯುಎಫ್ ಚೌಕಟ್ಟಿನಲ್ಲಿ ಪ್ರತ್ಯೇಕವಾಗಿ ತೆರಿಗೆ ವಿಧಿಸಲಾಗುತ್ತದೆ. ತೆರಿಗೆದಾರ ವ್ಯಕ್ತಿಯ ವ್ಯಕ್ತಿಗತ ತೆರಿಗೆಯಾಗಿ ಪರಿಗಣಿಸಲಾಗುವುದಿಲ್ಲ.  ಇದರರ್ಥ ರಾಮ್ ಕುಮಾರ್ ಈಗ ತನ್ನ ಸಂಬಳದ ವರಮಾನವಾದ 5,00,000 ರೂ.ಗಳನ್ನು ಮಾತ್ರ ತೆರಿಗೆಗೆ ನೀಡುತ್ತಾರೆ ಮತ್ತು 2,50,000 ರೂ.ಗಳ ಮೂಲ ವಿನಾಯಿತಿಯ ನಂತರ ಅವರ ನಿವ್ವಳ ತೆರಿಗೆ ವರಮಾನವನ್ನು ಹಿಂದಿನ ಆಯ್ಕೆಯಲ್ಲಿದ್ದ 5,00,000 ರೂ.ಗಳಿಂದ 2,50,000 ರೂ.ಗೆ ಇಳಿಸುತ್ತಾರೆ.. ಇದಲ್ಲದೆ, ಎಚ್‌ಯುಎಫ್ ಅದೇ ಮೊತ್ತದ ಬಾಡಿಗೆ ವರಮಾನದ ಮೇಲೆ 2,50,000 ರೂ.ಗಳ ಮೂಲ ವಿನಾಯಿತಿಯನ್ನು ಪಡೆಯುತ್ತದೆ, ಇದರಿಂದಾಗಿ ನಿವ್ವಳ ತೆರಿಗೆ ವಿಧಿಸಬಹುದಾದ ವರಮಾನವನ್ನು ಶೂನ್ಯಕ್ಕೆ ಇಳಿಸುತ್ತದೆ.

 

ಎಚ್‌ಯುಎಫ್ನ ರಚನೆಯು ಕಾನೂನುಬದ್ಧವಾಗಿ ತೆರಿಗೆ ಮುಕ್ತ ವರಮಾನ 2,50,000 ರೂ.ಗಳಿಗೆ ಕಾರಣವಾಗುತ್ತದೆ ಮತ್ತು ರಾಮ್ ಕುಮಾರ್ ಅವರ ನಿವ್ವಳ ತೆರಿಗೆ ವಿಧಿಸಬಹುದಾದ ವರಮಾನವು ಈಗ ಕಡಿಮೆ ತೆರಿಗೆ ವ್ಯಾಪ್ತಿಯಲ್ಲಿರುವುದರಿಂದ ಅವರಿಗೆ ಅನ್ವಯಿಸಲಾಗುವ ತೆರಿಗೆ ದರವು ಕಡಿಮೆಯಾಗಿ ಪರಿಣಮಿಸುತ್ತದೆ. ಅಂತಿಮವಾಗಿ ವರಮಾನ ತೆರಿಗೆ ಕಾಯ್ದೆ 1961 ರ ಸೆಕ್ಷನ್ 10 (2)ರ ಅನ್ವಯ ಒಬ್ಬ ವ್ಯಕ್ತಿಯು ಎಚ್‌ಯುಎಫ್ ವರಮಾನದಿಂದ ಎಚ್‌ಯುಎಫ್ ಸದಸ್ಯರಾಗಿ ಪಡೆದ ಯಾವುದೇ ಮೊತ್ತವನ್ನು ಅವರ ಒಟ್ಟು ವರಮಾನದಲ್ಲಿ ಸೇರಿಸಬಾರದು ಎಂದು ಹೇಳಲಾಗಿದೆ. ಇದರರ್ಥ ರಾಮ್ ಕುಮಾರ್ ತನ್ನ ಎಚ್‌ಯುಎಫ್ ಗಳಿಸಿದ ಬಾಡಿಗೆ ವರಮಾನದ ಪಾಲನ್ನು ಪಡೆಯಬಹುದು ಆದರೆ ಅದರ ಮೇಲೆ ತೆರಿಗೆ ಪಾವತಿಸುವುದಿಲ್ಲ. ರಾಮ್ ಕುಮಾರ್ ತನ್ನ ಸ್ವಂತ ಹೆಸರಿನಲ್ಲಿ ಬಾಡಿಗೆ ವರಮಾನವನ್ನು ಪಡೆಯುವ ತೆರಿಗೆ ಹೊರೆಯನ್ನು ಹೊರುವ ಮೊದಲ ಆಯ್ಕೆಗೆ ಇದು ವ್ಯತಿರಿಕ್ತವಾಗಿದೆ. ಆದ್ದರಿಂದ, ಪ್ರಯೋಜನವು ಎಚ್‌ಯುಎಫ್ ಮಟ್ಟದಲ್ಲಿ ಮಾತ್ರವಲ್ಲದೆ ವೈಯಕ್ತಿಕ ಮಟ್ಟದಲ್ಲಿಯೂ ಇರುತ್ತದೆ.‌ ಹೆಚ್ಚುವರಿಯಾಗಿ, ಎಚ್‌ಯುಎಫ್ನ ತೆರಿಗೆ ವಿಧಿಸಬಹುದಾದ ವರಮಾನದಿಂದ ವೆಚ್ಚಗಳು, ವಿನಾಯಿತಿಗಳು ಮತ್ತು ಹಲವಾರು ಕಡಿತಗಳನ್ನು ಪಡೆಯಲು ಅರ್ಹವಾಗಿರುತ್ತದೆ. ಇದು ಹಿಂದೂ ಕುಟುಂಬದ ತೆರಿಗೆ ಹೊರೆಯನ್ನು ಮತ್ತಷ್ಟು ಕಡಿಮೆ ಮಾಡುತ್ತದೆ.

 

ಎಲ್ಲರಿಗೂ ಲಭ್ಯವಾಗದ ಸೌಲಭ್ಯ

 

ಎಚ್‌ಯುಎಫ್ನ ಪರಿಕಲ್ಪನೆಯು ಅವಿಭಕ್ತ ಕುಟುಂಬ ಮತ್ತು ಸಹಸಂಬಂಧದ ಪರಿಕಲ್ಪನೆಗಳೊಂದಿಗೆ ನಿಕಟ ಸಂಬಂಧ ಹೊಂದಿದೆ. ಇದು ಹಿಂದೂ ವೈಯಕ್ತಿಕ ಕಾನೂನಿಗೆ ವಿಶಿಷ್ಟವಾಗಿದೆಯಲ್ಲದೆ ಜೈನರು, ಬೌದ್ಧರು ಮತ್ತು ಸಿಖ್ಖರನ್ನು ಒಳಗೊಂಡಿರುತ್ತದೆ. ಕುತೂಹಲಕಾರಿ ಸಂಗತಿಯೆಂದರೆ, ಕೇರಳ ಹಿಂದೂ ಅವಿಭಕ್ತ ಕುಟುಂಬ (ನಿರ್ಮೂಲನೆ) ಕಾಯ್ದೆ, 1975 ಜಾರಿಗೆ ತರುವ ಮೂಲಕ ಕೇರಳ ಸರ್ಕಾರವು 1975 ರಲ್ಲಿ ಅವಿಭಕ್ತ ಕುಟುಂಬ ವ್ಯವಸ್ಥೆಯನ್ನು ರದ್ದುಗೊಳಿಸಿತು. ಸಿಐಟಿ vs ಎನ್ ರಾಮನಾಥ ರೆಡ್ಡಿಯರ್ (ಎಚ್ ಯುಎಫ್) (1996) ಪ್ರಕರಣದಲ್ಲಿ ವರಮಾನ ತೆರಿಗೆ ಕಾಯ್ದೆ 1961 ಯೊಂದಿಗಿನ ಈ ರದ್ದತಿಯ ಸಂಬಂಧದ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಅವಿಭಕ್ತ ಕುಟುಂಬ ಮತ್ತು ಎಚ್‌ಯುಎಫ್ನ ಘಟಕವನ್ನು ಶಾಸಕಾಂಗವು ರದ್ದುಪಡಿಸಿದ ನಂತರ, ತೆರಿಗೆ ಇಲಾಖೆ ಇನ್ನು ಮುಂದೆ ಎಚ್‌ಯುಎಫ್ ಆಧರಿಸಿ ಮೌಲ್ಯಮಾಪನ ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ. ಇದರ ಪರಿಣಾಮವಾಗಿ, ವೈಯಕ್ತಿಕ ತೆರಿಗೆದಾರರು ಎಚ್‌ಯುಎಫ್ ರಚಿಸುವ ಮೂಲಕ ತೆರಿಗೆ ಪ್ರಯೋಜನಗಳನ್ನು ಪಡೆಯಲು ಸಾಧ್ಯವಿಲ್ಲದಾಗಿದೆ.

 

ಆದಾಗ್ಯೂ ಶಾಸನಬದ್ಧ ತೆರಿಗೆ ಯೋಜನೆಯ ಈ ಪ್ರಯೋಜನವು ಮುಸ್ಲಿಮರು, ಕ್ರಿಶ್ಚಿಯನ್ನರು, ಪಾರ್ಸಿಗಳು ಮುಂತಾದ ಇತರ ಧರ್ಮಗಳಿಗೆ ತೆರಿಗೆದಾರರಿಗೆ ಲಭ್ಯವಿಲ್ಲ, ಇದು ತೆರಿಗೆ ಕಾನೂನುಗಳ ಏಕರೂಪದ ಅನ್ವಯದಲ್ಲಿ ಕಾಣಬಹುದಾದ  ಕೊರತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಏಕರೂಪ ನಾಗರಿಕ ಸಂಹಿತೆಯ ಕುರಿತು ಹೇಳುವುದಾದರೆ ಧರ್ಮದ ಆಧಾರದ ಮೇಲೆ ಮಾತ್ರ ತೆರಿಗೆ ಹೊರೆಯನ್ನು ಕಡಿಮೆ ಮಾಡುವ ಹೆಚ್ಚುವರಿ ವಿನಾಯಿತಿ ಅಥವಾ ಸೌಲಭ್ಯವನ್ನು ನೀಡುವುದು ನಿರಂಕುಶವಾಗಿರುತ್ತದೆ ಹಾಗೂ ಇದು ಸಂವಿಧಾನದ 14 ನೇ ವಿಧಿಯನ್ನು ಉಲ್ಲಂಘಿಸುತ್ತದೆ ಎಂದು ವಾದಿಸಬಹುದು. ಮೇಲಿನ ಚರ್ಚೆಯನ್ನು ಗಮನಿಸಿದರೆ, ಏನಾಸಂ ವಿಷಯವನ್ನು ಚರ್ಚೆಗೆ ತೆಗೆದುಕೊಂಡರೆ, ಎಚ್‌ಯುಎಫ್ನ ಲಾಭದಾಯಕ ತೆರಿಗೆ ಸೌಲಭ್ಯವು ತೆರಿಗೆ ಕಾನೂನಿನ ಮುಂದೆ ಮತ್ತು ಸಮಾನತೆಯ ದೃಷ್ಟಿಕೋನದಡಿಯಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತದೆ. ಜೊತೆಗೆ ತೆರಿಗೆ ಕಾನೂನುಗಳ ಅನ್ವಯದಲ್ಲಿ ಎಲ್ಲ ಧರ್ಮಗಳ ನಡುವೆ ಏಕರೂಪತೆಯ ಪ್ರಶ್ನೆ ಎದುರಾಗುತ್ತದೆ.

 

ಮೂಲ : ದೀಪಕ್‌ ಜೋಷಿ

Uniform Civil Code :Why it can impact Hindu Undivided Family’s tax benefits -

ಇಂಡಿಯನ್‌ ಎಕ್ಸ್‌ಪ್ರೆಸ್‌ 11 ಜುಲೈ 2023