ಅ.25 ರ ಜೆಡಿಎಸ್ ಸಮಾವೇಶ ವಾಸಣ್ಣನವರನ್ನು ಮತ್ತೆ ರೆಬೆಲ್ ಕ್ಯಾಂಡಿಡೇಟ್ ಮಾಡಲಿದೆಯೇ?! ಸುದ್ದಿ ವಿಶ್ಲೇಷಣೆ -ಕುಚ್ಚಂಗಿ ಪ್ರಸನ್ನ

ಅ.25 ರ ಜೆಡಿಎಸ್ ಸಮಾವೇಶ ವಾಸಣ್ಣನವರನ್ನು ಮತ್ತೆ ರೆಬೆಲ್ ಕ್ಯಾಂಡಿಡೇಟ್ ಮಾಡಲಿದೆಯೇ?!     ಸುದ್ದಿ ವಿಶ್ಲೇಷಣೆ  -ಕುಚ್ಚಂಗಿ ಪ್ರಸನ್ನ

ಅ.25 ರ ಜೆಡಿಎಸ್ ಸಮಾವೇಶ ವಾಸಣ್ಣನವರನ್ನು ಮತ್ತೆ ರೆಬೆಲ್

ಕ್ಯಾಂಡಿಡೇಟ್ ಮಾಡಲಿದೆಯೇ?!


ಸುದ್ದಿ ವಿಶ್ಲೇಷಣೆ
ಕುಚ್ಚಂಗಿ ಪ್ರಸನ್ನ


ಗುಬ್ಬಿಯಲ್ಲಿ ಮಳೆಯಾದರೆ ತುಮಕೂರಿನಲ್ಲಿರುವವರಿಗೆ ಶೀತವಾಗುತ್ತದೆಯೇ, ಹೌದು ಎನ್ನುವಂತಿದೆ ಗುಬ್ಬಿ ವಿಧಾನ ಸಭಾ ಕ್ಷೇತ್ರದ ರಾಜಕೀಯ ಚಟುವಟಿಕೆಗಳು. ವಾಸಣ್ಣ ಎಂದೇ ಖ್ಯಾತರಾಗಿರುವ ಎಸ್.ಆರ್. ಶ್ರೀನಿವಾಸ್ ೨೦೦೪ರಿಂದ ನಾಲ್ಕು ಅವಧಿಗೆ ನಿರಂತರ ಈ ಗುಬ್ಬಿ ಕ್ಷೇತ್ರದ ಶಾಸಕರು ಅರ್ಥಾತ್ ವಿಧಾನಸಭೆಗೆ ಜನರಿಂದ ಚುನಾಯಿತರಾದ ಜನಪ್ರತಿನಿಧಿ. ವಾಸಣ್ಣ ಹಾಲಿ ಜೆಡಿಎಸ್ ಟಿಕೆಟ್‌ನಿಂದ ಗೆದ್ದಿರುವ ಶಾಸಕರು.
೨೦೦೪ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಅಂದರೆ ಪಕ್ಷೇತರರಾಗಿ ಸ್ಪರ್ಧಿಸಿ ಶಾಸಕರಾಗಿ ಚುನಾಯಿತರಾದ ವಾಸಣ್ಣನವರು ೨೦೨೩ರಲ್ಲಿ ಮತ್ತೊಮ್ಮೆ ಅದೇ ರೀತಿ ಸ್ವತಂತ್ರರಾಗಿ ಕಣಕ್ಕಿಳಿಯುವ ಸನ್ನಿವೇಶ ಸೃಷ್ಟಿಯಾಗುತ್ತಿದೆಯೇ? ಇಂಥ ಒಂದು ಸನ್ನಿವೇಶ ಸೃಷ್ಟಿಯಾಗಲು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್‌ನ ಪ್ರಶ್ನಾತೀತ ನಾಯಕ ಹರದನಹಳ್ಳಿ ದೇವೇಗೌಡ ಕುಮಾರಸ್ವಾಮಿ ಕಾರಣರಾಗಲಿದ್ದಾರೆಯೇ?
ವಾಸಣ್ಣ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುತ್ತಾರೆ? ಎಂಬ ಸಂಗತಿಯನ್ನು ಎಲ್ಲರಿಗಿಂತ ಮೊದಲು ತಿಳಿಸಿದ್ದು ಇದೇ ‘ಬೆವರ ಹನಿ’ ದಿನಪತ್ರಿಕೆ. ಆದರೆ ಹಾಗಂತ ವಾಸಣ್ಣ ಎಲ್ಲೂ ಯಾರ ಎದುರೂ ಖಚಿತಪಡಿಸಿಲ್ಲ, ಆದರೆ, ಅವಕಾಶ ಸಿಕ್ಕಾಗಲೆಲ್ಲ ಅಂತಹ ಸುದ್ದಿಗೆ ರೆಕ್ಕೆ ಪುಕ್ಕ ಬಂದು ಹಾರಾಡುವ ರೀತಿಯಲ್ಲಿ ವರ್ತಿಸಿರುವುದಂತೂ ನಿಜ. ಇವರೊಬ್ಬರೇ ಅಲ್ಲ ಜಿಲ್ಲೆಯ ಇನ್ನೂ ಇಬ್ಬರು ಅಥವಾ ಮೂವರು ‘ದಳ’ ಪತಿಗಳು ಕಾಂಗ್ರೆಸ್ ಸೇರುವ ಸುದ್ದಿ ಅಲೆ ಅಲೆಯಾಗಿ ಹರಡುತ್ತಲೇ ಇದೆ.
ಜೆಡಿಎಸ್‌ನಿಂದ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವ ಬೆಮೆಲ್ ಕಾಂತರಾಜು ತುರುವೇಕೆರೆಯನ್ನು ಅವರ ಮುಂದಿನ ವಿಧಾನ ಸಭಾ ಕ್ಷೇತ್ರವನ್ನಾಗಿ ಮಾಡಿಕೊಂಡಿರುವುದು ಗುಟ್ಟಾಗೇನೂ ಉಳಿದಿಲ್ಲ, ಆದರೆ ಅಲ್ಲಿ ಜೆಡಿಎಸ್‌ನಿಂದ ಕಳೆದ ಸಲ ಸೋತಿರುವ ಮಾಜಿ ಶಾಸಕ ಎಂ.ಟಿ. ಕೃಷ್ಣಪ್ಪ ಇನ್ನೂ ಸಕ್ರಿಯವಾಗಿದ್ದು ಮುಂದಿನ ವಿಧಾನ ಸಭಾ ಚುನಾವಣೆಗೂ ಅವರೇ ಅಭ್ಯರ್ಥಿ ಎಂಬAತೆ ಬಿಂಬಿಸಿಕೊAಡಿರುವಾಗ, ಬೆಮೆಲ್ ಕಾಂತರಾಜು ಕಾಂಗ್ರೆಸ್ ಟಿಕೆಟ್ ಬಯಸಿದ್ದಾರೆ ಎಂಬುದನ್ನು ಆ ತಾಲೂಕಿನ ಜನತೆ ಭಾವಿಸಿಕೊಂಡಿದ್ದರೆ ಅದು ತಪ್ಪೇನೂ ಅಲ್ಲ. ಈ ಮಾತಿಗೆ ಇಂಬು ಕೊಟ್ಟಂತೆ ಇತ್ತೀಚೆಗೆ ಹೊಸ ಮನೆ ಭೂರಿಗೆಂದು ತುರುವೇಕೆರೆಗೆ ಬಂದಿದ್ದ ಇದೇ ಕುಮಾರಣ್ಣ “ಬೆಮೆಲ್ ಕಾಂತರಾಜು ಅಂದರೆ ಯಾರು?’’ ಎಂಬ ಪ್ರಶ್ನೆ ಕೇಳಿದ್ದನ್ನೂ ಜನ ಮರೆತಿಲ್ಲ. ಸೋ ಜೆಡಿಎಸ್‌ನ ಈ ಒಂದು ವಿಕೆಟ್ ಔಟ್ ಎನ್ನುವುದು ಗ್ಯಾರಂಟಿ.
ಎರಡನೆಯದು ಚಿಕ್ಕನಾಯಕನಹಳ್ಳಿಯ ಜೆಡಿಎಸ್ ಮಾಜಿ ಶಾಸಕ ಸುರೇಶ್‌ಬಾಬು, ಬಾಬು ಅವರನ್ನು ಕಾಂಗ್ರೆಸ್‌ಗೆ ಎಳೆಯುವ ಮ್ಯಾಗ್ನೆಟ್ ಸಿದ್ದರಾಮಣ್ಣ ಅಂತ ಎಲ್ಲರಿಗೂ ತಿಳಿದ ಸಂಗತಿಯೇ. ಆದರೆ ಇವತ್ತಿನವರೆಗೂ ಅಂಥದ್ದೆಲ್ಲ ಸುದ್ದಿಯಾಗದಂತೆ ನೋಡಿಕೊಂಡಿರುವುದು ಬಾಬು ಕೆಪಾಸಿಟಿ.
ಈ ಇಬ್ಬರನ್ನು ಬಿಟ್ಟರೆ ಪಕ್ಷ ತೊರೆಯುವ ವಿಚಾರವಾಗಿ ಹೆಚ್ಚು ಸುದ್ದಿ ಮಾಡುತ್ತಿರುವುದು ಗುಬ್ಬಿಯ ವಾಸಣ್ಣ. ವಾಸಣ್ಣ ಅವರನ್ನು ‘ಆಪರೇಶನ್ ಕಮಲ’ ಸ್ಕೀಮ್‌ನಲ್ಲಿ ಸುರೇಶ್‌ಗೌಡರು ಎಳೆಯಲು ಹಣದ ಆಮಿಷ ಒಡ್ಡಿದ ಸುದ್ದಿ ವೈರಲ್ ಆಗುವ ಮೂಲಕ ವಾಸಣ್ಣ ಜೆಡಿಎಸ್‌ನ ಮಾಡೆಲ್ ರೋಲ್ ಶಾಸಕರಾಗಿ ಹೊರಹೊಮ್ಮಿದ್ದು ತೀರಾ ಹಳೆಯ ಸಂಗತಿ. ವಾಸಣ್ಣ ಕಾಂಗ್ರೆಸ್‌ಗೆ ಹೋಗುತ್ತಾರೆ ಎನ್ನುವ ಸುದ್ದಿಯನ್ನು ಬಿಟ್ಟರೆ ಅವರು ಎಲ್ಲೂ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಕ್ಕೆ ದಾಖಲೆಗಳೇನೂ ದೊರಕಿಲ್ಲವಾದರೂ, ದೊಡ್ಡ ಗೌಡರೆನಿಸಿದ ಹರದನಹಳ್ಳಿ ದೊಡ್ಡೇಗೌಡ ದೇವೇಗೌಡರನ್ನು ತುಮಕೂರು ಕ್ಷೇತ್ರದಿಂದ ಲೋಕಸಭೆಗೆ ಗೆಲ್ಲಿಸಲು ಅಷ್ಟೇನೂ ಮನಸ್ಸುಕೊಟ್ಟು ಕೆಲಸ ಮಾಡಲಿಲ್ಲ ಎನ್ನುವುದು ಕುಮಾರಣ್ಣ ಇದುವರೆಗೂ ಎಲ್ಲೂ ಬಾಯಿ ಬಿಟ್ಟು ಹೇಳಿರದೇ ಇರುವ ‘ಆಪಾದನೆ’. ಕುಮಾರಣ್ಣ ಈ ಮಾತನ್ನು ಪಬ್ಲಿಕ್ಕಾಗಿ ಎಲ್ಲಾದರೂ ಹೇಳಿಬಿಟ್ಟರೆ, ಪಕ್ಕದ ಗ್ರಾಮಾಂತರ ಕ್ಷೇತ್ರದಲ್ಲಿರುವ ಅವರ ಅತ್ಯಾಪ್ತ ದಳಪತಿಯ ಮೇಲೂ ಅದೇ ಗೂಬೆಯನ್ನು ಕೂರಿಸಬೇಕಾಗಿ ಬಿಡುತ್ತದೆ. ದೇವೇಗೌಡರನ್ನು ಗೆಲ್ಲಿಸಲು ಮನಸ್ಸು ಮಾಡದೇ ನಿಷ್ಕಿçಯರಾಗುವಲ್ಲಿ ಜಿಲ್ಲೆಯ ಎಲ್ಲ ದಳಪತಿಗಳ ಪಾಲೂ ಸಮಾನವಾಗಿ ಇದೆ ಎಂದು ಎಲ್ಲರೂ ಪರಿಗಣಿಸಿರುವುದರಿಂದ ಇದು ವಾಸಣ್ಣನವರ ಅಷ್ಟೇನೂ ದೊಡ್ಡ ಮಿಸ್ಟೇಕ್ ಅಂತ ಅನಿಸುವುದಿಲ್ಲ.
ಹಾಗಾದರೆ, ವಾಸಣ್ಣನವರನ್ನು ಕಂಡರೆ ಕುಮಾರಣ್ಣನವರೇಕೆ ಕೆಂಡ ಕಾರುತ್ತಾರೆ? ಈ ಪ್ರಶ್ನೆಗೆ ಸೀದಾ ಸಾದಾ ಉತ್ತರವನ್ನು ಈ ಇಬ್ಬರೇ ನೀಡಬೇಕು. ಒಂದು ಕುಮಾರಣ್ಣನಿಗೆ ಕಳೆದ ಚುನಾವಣೆ ಮುಗಿದ ಕೂಡಲೇ ಕಾಂಗ್ರೆಸ್ ‘ಸಿಎಂ ಭಾಗ್ಯ’ ಕರುಣಿಸಿದ ಸಂದರ್ಭದಲ್ಲಿ ಅವರು ವಾಸಣ್ಣನವರಿಗೆ ಮೊದಲಿಗೆ ಅಷ್ಟೇನೂ ಮಹತ್ವದ ಖಾತೆಯನ್ನು ನೀಡಲಿಲ್ಲ, ಶಿಕ್ಷಣ ಖಾತೆ ಕೊಡುವ ಹೊತ್ತಿಗೆ ಮೈತ್ರಿಯೇ ಮುರಿದು ಬಿದ್ದು ಬಿಟ್ಟಿತು. ಈ ಅವಧಿಯಲ್ಲೇ ಎಲ್ಲೋ ಮಿಸ್ ಅಂಡರ್‌ಸ್ಟಾAಡಿAಗ್ ಆಗಿರಬೇಕು ಅನ್ಸುತ್ತೆ. ದೊರಕಿದ ಪುಟ್ಟ ಅವಕಾಶದಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಕುಮಾರಣ್ಣ ಅವಕಾಶ ನೀಡಲಿಲ್ಲ ಎಂಬುದು ವಾಸಣ್ಣನವರ ಕೊರಗಾಗಿರಬಹುದು.
ಆದರೆ ಈಗ ಅದೆಲ್ಲ ತೂಬು ದಾಟಿ ಗದ್ದೆ ಬಯಲಿಗೆ ಹರಿದ ನೀರಿನಂತೆ, ಪಕ್ಷಕ್ಕೆ ವ್ಯಕ್ತಿ ಮುಖ್ಯವಲ್ಲ, ಪಕ್ಷ ಅಂತಾ ಒಂದಿದ್ದರೆ ಅಂತಹ ಎಷ್ಟೋ ವಾಸಣ್ಣನನ್ನು ಸೃಷ್ಟಿಸುತ್ತೇನೆ ಎಂಬರ್ಥ ಬರುವ ಮಾತುಗಳನ್ನು ಆಡುತ್ತಾರೆ ಕುಮಾರಣ್ಣ. ಆದರೆ ವಾಸ್ತವದಲ್ಲಿ ನಾನು ಕುಮಾರಣ್ಣ ಸೃಷ್ಟಿಸಿದ ನಾಯಕ ಅಥವಾ ಶಾಸಕನಲ್ಲ ಎಂಬುದು ವಾಸಣ್ಣನವರ ಸವ್ವಾಸೇರಿನ ಮಾತು.
ವಾಸಣ್ಣ ಇವತ್ತು ಅವರ ಗೃಹ ಕಚೇರಿಯಲ್ಲಿ ಸುದ್ದಿಗಾರರಿಗೆ ವಿವರಿಸಿದ ಅವರ ರಾಜಕೀಯ ಇತಿಹಾಸದ ಪ್ರಕಾರವೇ, ಒಂದು) ವಾಸಣ್ಣನವರ ತಂದೆ ಗುಬ್ಬಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ೨೬ ವರ್ಷಗಳಷ್ಟು ಸುದೀರ್ಘ ಅವಧಿಗೆ ಕಾರ್ಯನಿರ್ವಹಿಸಿದವರು. ಎರಡು) ವಾಸಣ್ಣ ೨೦೦೪ರಲ್ಲಿ ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸುವ ಮೊದಲು ಅವರು ಜಿಲ್ಲಾ ಪಂಚಾಯಿತಿಗೆ ಚುನಾಯಿತರಾಗಿದ್ದುದು ಕಾಂಗ್ರೆಸ್‌ನಿAದ. ಮೂರು) ೨೦೦೪ರ ವಿಧಾನ ಸಭಾ ಚುನಾವಣೆಯಲ್ಲಿ ವಾಸಣ್ಣನವರಿಗೆ ಜೆಡಿಎಸ್ ಟಿಕೆಟ್ ನೀಡಲಿಲ್ಲ ಮತ್ತು ಅವರು ಸ್ವತಂತ್ರರಾಗಿ ಅಂದರೆ ಪಕ್ಷೇತರರಾಗಿ ನಿಂತು ಗೆದ್ದವರು, ಆನಂತರ ಅವರು ಜೆಡಿಎಸ್ ಸೇರಿದರು. ಹಾಗಾಗಿ ಅವರನ್ನು ಶಾಸಕರನ್ನಾಗಿ ಅಥವಾ ನಾಯಕರನ್ನಾಗಿ ರೂಪಿಸುವಲ್ಲಿ ಕುಮಾರಣ್ಣ ಅಥವಾ ಜೆಡಿಎಸ್ ಪಾತ್ರ ಆಟಕ್ಕುಂಟು ಲೆಕ್ಕಕ್ಕಿಲ್ಲ. ಹಾಗಾಗಿ ವಾಸಣ್ಣ ಇವತ್ತು ಅವರ ಮನೆಯಲ್ಲಿ “ಪಕ್ಷ ಮುಖ್ಯವಲ್ಲ ಜನರ ಆಶೀರ್ವಾದ ಮುಖ್ಯ” ಅಂತ ಎಂದಿದ್ದಾರೆ.
ವಾಸಣ್ಣನವರ ಗಮನಕ್ಕೆ ಬರದಂತೆಯೇ ಕುಮಾರಣ್ಣ ಗುಬ್ಬಿಯಲ್ಲಿ ಅ.೨೫ರ ಸೋಮವಾರ ಜೆಡಿಎಸ್ ಸಮಾವೇಶ ಏರ್ಪಡಿಸಿದ್ದಾರೆ. ಇದು ನನ್ನ ಗಮನಕ್ಕೆ ಬಂದಿಲ್ಲ ಎಂದು ಹೇಳಿದ ನಂತರ ವಾಸಣ್ಣನವರಿಗೆ ಈ ದಿನ ಸಿಎಸ್‌ಪುರದ ನಾಗರಾಜು ಕರೆಯೋಲೆಯನ್ನು ತಲುಪಿಸಿ ನಿಷ್ಟುರದಿಂದ ಪಾರಾಗುವ ಪ್ರಯತ್ನ ಮಾಡಿದ್ದಾರೆ. ಹೀಗಾಗಿ ಕುಮಾರಣ್ಣನವರ ಪ್ರತಿಷ್ಟೆಯಾಟದಲ್ಲಿ ವಾಸಣ್ಣ ಮತ್ತೊಮ್ಮೆ ೨೦೦೪ರಲ್ಲಿ ಮಾಡಿದಂತೆ ರೆಬೆಲ್ ಆಗಿ ಕಣಕ್ಕಿಳಿಯುವ ಸನ್ನಿವೇಶ ಸೃಷ್ಟಿಯಾದರೆ ಯಾರೇನೂ ಮಾಡಲಾಗದು. 
ಇವೆಲ್ಲದರ ಜೊತೆಗೆ ಶತ್ರುವಿನ ಶತ್ರು ಮಿತ್ರ ಎಂಬ ಗಾದೆಯನ್ನು ನೆನಪಿಸುವ ರೀತಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಮ್ಮ ನೆಂಟರು, ಅವರು ಹಿಂದಿನ ಚುನಾವಣೆಗಳಲ್ಲಿ ನನಗೆ ಹೆಲ್ಪ್ ಮಾಡಿದ್ದಾರೆ ಎಂದು ಹೇಳುವ ಮೂಲಕ ಕುಮಾರಣ್ಣನವರ ಉರಿಯುವ ಗಾಯಕ್ಕೆ ಉಪ್ಪು ಸವರಿದಂತೆ ಮಾಡಿದರು ಮತ್ತು “ಮೊನ್ನೆ ಸಿದ್ದರಾಮಯ್ಯ ಸಿಕ್ಕಿದ್ದರು, ಎಲ್ಲೋ ಕಾಣ್ತಾ ಇಲ್ಲ ಅಂತ ಕೇಳಿದರು” ಅಂತ ಹೇಳುವ ಮೂಲಕ ಆ ಗಾಯದ ಮೇಲೆ ತೊಟ್ಟು ನಿಂಬೆ ಹುಳಿಯನ್ನೂ ಹಿಂಡಿದರೂ ಅಂತ ನಿಮಗೆ ಅನ್ನಿಸುತ್ತಿಲ್ಲವೇ. 
ಒಟ್ಟಾರೆ ಗುಬ್ಬಿ ರಂಗೇರುತ್ತಿದೆ.