ನಗಿಸುವುದು ಅಷ್ಟು ಸುಲಭದ ಕೆಲಸವಲ್ಲ, ಯಾಕೆಂದರೆ...!!

ಮನುಷ್ಯನ ಪ್ರವೃತ್ತಿಯಲ್ಲಿಯೆ ಹಾಸ್ಯ,ವಿನೋದಗಳ ಅಂಶ ಯಾವಾಗಲೂ ಜಾಗೃತವಾಗಿರುತ್ತದೆ.ವಿನೋದ ಎಲ್ಲರಿಗೂ ಬೇಕು. ನಗೆ ಆರೋಗ್ಯವಂತಿಗೆಯ ಲಕ್ಷಣ. ನಕ್ಕಾಗ‌ ಹೃದಯದ ನಿರ್ಮಲ ಭಾವ ಮುಖದಲ್ಲಿ ಹೂವು ಅರಳಿದಷ್ಟು ಸಹಜವಾಗಿ ಹೊರಹೊಮ್ಮುತ್ತದೆ. ದೇಹ ಮತ್ತು ಮನಸ್ಸಿನ ಆರೋಗ್ಯಕ್ಕೆ ನಗುವಿನಂತಹ ಟಾನಿಕ್ಕು ಇನ್ನೊಂದಿಲ್ಲ. ಹಾಸ್ಯ ಲೇಖಕನಿಗೆ ಏನೆಲ್ಲಾ ಬರೆಯುವ ಸ್ವಾತಂತ್ರ್ಯವಿದ್ದರೂ ಭಾಷೆ, ಸಮಯಸಂದರ್ಭ ಮತ್ತು ಔಚಿತ್ಯಗಳ ಬಗ್ಗೆ ಎಚ್ಚರವಿರಬೇಕು.ಮನರಂಜನೆ ಎಂದರೆ ಅಶ್ಲೀಲ ಹಾಸ್ಯ ಎಂದರ್ಥವಲ್ಲ. ಸಮಾಜದ ಒಳಿತಿನ ಉದ್ದೇಶದ ಅರಿವಿಲ್ಲದ ಹಾಸ್ಯಕಲಾವಿದರು ಜಾತೀಯತೆ, ಮತೀಯತೆ, ವರ್ಣ ವ್ಯವಸ್ಥೆ, ಊಳಿಗಮಾನ್ಯ ವ್ಯವಸ್ಥೆ, ಅಸಮಾನತೆ ಮತ್ತು ಸ್ತ್ರೀ ಶೋಷಣೆಗಳನ್ನು ಸಮರ್ಥಿಸಿ ಹಾಸ್ಯ ಮಾಡಿಬಿಡುತ್ತಾರೆ.

ನಗಿಸುವುದು ಅಷ್ಟು ಸುಲಭದ ಕೆಲಸವಲ್ಲ, ಯಾಕೆಂದರೆ...!!

 

ದಯಾ ಗಂಗನಗಟ್ಟ

 

      ಹಾಸ್ಯವನ್ನು‌ ಕುರಿತು ಬರೆದ ಲೇಖನಕ್ಕೆ ಸಂಬಂಧಿಸಿದಂತೆ ಹಲವಾರು ಪ್ರಶ್ನೆಗಳನ್ನು ಸ್ನೇಹಿತರು‌ ಕೇಳಿದ್ದರು. ಅದರಲ್ಲಿ ಮುಖ್ಯವಾಗಿ ' ಹಾಸ್ಯ ಸ್ವಭಾವ ಒಳ್ಳೆಯದಲ್ಲವೆ? ಹಾಸ್ಯ ಸಾಹಿತ್ಯದಲ್ಲಿ ಎಷ್ಟು ಮುಖ್ಯ? ಹಾಸ್ಯ ಎಂದರೆ ಹೀಗೇ ಇರಬೇಕೆಂಬ ನಿಯಮವಿದೆಯೆ? ಹೇಗಿದ್ದರೆ ಚೆನ್ನ? ಕನ್ನಡ ಸಾಹಿತ್ಯದಲ್ಲಿ ಅದರಲ್ಲೂ ಹಳಗನ್ನಡದಲ್ಲಿ ಹಾಸ್ಯ ಇದೆಯಾ ಇತ್ಯಾದಿ ಕೆಲ ಪ್ರಶ್ನೆಗಳಿದ್ದವು. ಈ ಲೇಖನದಲ್ಲಿ ಕೆಲವಕ್ಕೆ ಉತ್ತರಿಸುವ ಪ್ರಯತ್ನ ಮಾಡಿದ್ದೇನೆ.

     ಮನುಷ್ಯನ ಪ್ರವೃತ್ತಿಯಲ್ಲಿಯೆ ಹಾಸ್ಯ,ವಿನೋದಗಳ ಅಂಶ ಯಾವಾಗಲೂ ಜಾಗೃತವಾಗಿರುತ್ತದೆ.ವಿನೋದ ಎಲ್ಲರಿಗೂ ಬೇಕು. ನಗೆ ಆರೋಗ್ಯವಂತಿಗೆಯ ಲಕ್ಷಣ. ನಕ್ಕಾಗ‌ ಹೃದಯದ ನಿರ್ಮಲ ಭಾವ ಮುಖದಲ್ಲಿ ಹೂವು ಅರಳಿದಷ್ಟು ಸಹಜವಾಗಿ ಹೊರಹೊಮ್ಮುತ್ತದೆ. ಮನುಷ್ಯ ಯಾವ ಪರಿಸ್ಥಿತಿಯಲ್ಲಿ, ಯಾವ ಮೂಡಿನಲ್ಲಿದ್ದರೂ ಅವನ ಹೃದಯವನ್ನು ಹಗುರಗೊಳಿಸಬಲ್ಲ ಯಾವುದೇ ತುಣುಕು ಹಾಸ್ಯವೆನಿಸುತ್ತದೆ.ದೇಹ ಮತ್ತು ಮನಸ್ಸಿನ ಆರೋಗ್ಯಕ್ಕೆ ನಗುವಿನಂತಹ ಟಾನಿಕ್ಕು ಇನ್ನೊಂದಿಲ್ಲ.

    ಮಾತಿನ ಶಬ್ದ ಜಾಲದ ಮೂಲಕ ಹಾಸ್ಯವನ್ನು ಸೃಷ್ಟಿಸುವುದು ಒಂದು ಚಾತುರ್ಯವಾದರೆ,ಭಾಷೆಯ ಮಾಧ್ಯಮದಿಂದ ಅದನ್ನು ಓದುಗರಿಗೆ ಮುಟ್ಟಿಸಿ ಅವರ ಮನಸ್ಸನ್ನು ನಗೆಯ ತುಂತುರಿನಿಂದ ತುಂಬುವುದು ಒಂದು ಕಲೆ. ಸಂಭಾಷಣೆಯಲ್ಲಿನ ಹಾಸ್ಯ ಒಂದು ತರದ್ದಾದರೆ, ಅಭಿನಯದ ಹಾಸ್ಯ ಮತ್ತೊಂದು ತರದ್ದು. ಸನ್ನಿವೇಶಕ್ಕೆ ತಕ್ಕಂತೆ ಮೂಡುವ ಹಾಸ್ಯಕ್ಕೆ ಅದರದ್ದೇ ಆದ ಎಸೆನ್ಸ್ ಇರುತ್ತದೆ‌. ಇದಕ್ಕೆ ವ್ಯಕ್ತಿಯ ಸ್ಥಿತ ಭಾವವನ್ನು ಬದಿಗೆ ಸರಿಸಿ ನಗೆ ಬುಗ್ಗೆಯನ್ನು ಎಬ್ಬಿಸುವ ಸಾಮರ್ಥ್ಯವಿರುತ್ತದೆ. ಆಡುಭಾಷೆಯ ಮಾತುಕತೆಯಲ್ಲಿ ಈ ಶಕ್ತಿ ಹೆಚ್ಚಿರುತ್ತದೆ. ಹಾಸ್ಯದಲ್ಲಿ ವಿಡಂಬನೆ, ವ್ಯಂಗ್ಯ, ಚುಚ್ಚುಮಾತು, ಕಾರ್ನೀವಲ್ ನಗು, ಜೋಕ್, ಅಣಕು, ಶ್ಲೇಷೆ. ನಿಬಂಧನೆಗಳ ಹಾಸ್ಯ, ಕಾಮಿಡಿ ಆಫ್ ಕಾಮಿಡಿ, ಕಾಮಿಡಿ ಸೆಂಟಿಮೆಂಟ್, ಕಾಮಿಡಿ ಬಫರ್ ಹೀಗೆ ಹಲವು ವಿಧಗಳಿವೆ.

     ಪ್ರಪಂಚದ ಎಲ್ಲಾ ಸಾಹಿತ್ಯದಲ್ಲಿಯೂ ಹಾಸ್ಯ ಮಹತ್ವದ ಸ್ಥಾನ ಪಡೆದಿದೆ.ಒಂದು ವಿಶ್ಲೇಷಣೆಯ ಪ್ರಕಾರ ಭಾರತೀಯ ಸಾಹಿತ್ಯದ ಹಾಸ್ಯಕ್ಕೆ ಮೂಲ ಪ್ರೇರಣೆ ಪಾಶ್ಚಾತ್ಯ ಸಾಹಿತ್ಯದ್ದು. ಪಾಶ್ಯಾತ್ಯ ಸಾಹಿತ್ಯದಲ್ಲಿ ಹಾಸ್ಯ ಪ್ರಕಾರ ಬೇರೆ ರೀತಿಯದೇ ಇದೆ. ಇಲ್ಲಿ ಸಾಹಿತ್ಯ ಮತ್ತು ರಂಗಭೂಮಿ ಬೇರೆಬೇರೆ ಅಲ್ಲ. ಹಾಸ್ಯವೂ ಹಾಗೇ ಇವೆರಡರ ಜೊತೆಯೇ ಬೆರೆತು ಬೆಳೆದಿದೆ. ಮೋಲಿಯೇರ್, ಡೇರಿಯೋ ಫೋ, ಲಾಂಸ್ಲೆಟ್‌ಗೋಬೊ, ಶೇಕ್ಸ್‌ ಪಿಯರನ ಕಾಮಿಡಿಗಳು, ಲಾರೆಲ್‌ ಅಂಡ್‌ ಹಾರ್ಡಿ, ಚಾರ್ಲಿ ಚಾಪ್ಲಿನ್ ಪ್ರಯೋಗಗಳು ಹೀಗೆ ದಂಡಿಯಾಗಿ ಅಲ್ಲಿ ನಮಗೆ ಹಾಸ್ಯದ ಆಕರಗಳು ದೊರಕುತ್ತವೆ.

    ಸಾಹಿತ್ಯ ರಚನೆಯಲ್ಲಿ ಓದುಗನಿಗೆ ಸಿಗುವ ಹಾಸ್ಯ ಹಾಗೂ ರಂಗ ಕೃತಿಯಲ್ಲಿ ಪ್ರೇಕ್ಷಕನಿಗೆ ದೊರಕುವ ಅಭಿನಯ- ಧ್ವನಿಪೂರ್ಣದ ಹಾಸ್ಯವೇ ಬೇರೆ ಬೇರೆ ತರದ್ದು. ಸಾಹಿತ್ಯದಲ್ಲಿ ಬರೆದವರು ಕಟ್ಟಿಕೊಟ್ಟದ್ದನ್ನ ಓದುವವರು ದಕ್ಕಿಸಿಕೊಳ್ಳುವ ಸಾಮರ್ಥ್ಯದ ಮೇಲೆ ಹಾಸ್ಯ ಅವಲಂಬಿಸುತ್ತದೆ. ರಂಗದಲ್ಲಿ ವೇಷ-ಭೂಷಣ, ಪ್ರಸಾಧನ, ಮಾತಿನ ಏರಿಳಿತಗಳು, ಅಂಗಚೇಷ್ಟೆಗಳು, ಅಭಿನಯ, ಬೆಳಕು, ರಂಗಸಜ್ಜಿಕೆ, ಹಿನ್ನಲೆ ಧ್ವನಿ, ಹಾಡು ಈ ಎಲ್ಲ ರೀತಿಯ ಹಾವಭಾವಗಳ ಪರಿಪೂರ್ಣ ಪ್ರದರ್ಶನದಿಂದ ‘ಹಾಸ್ಯ’ರಸದ ಕಳೆ ಏರುತ್ತದೆ. ಇಲ್ಲಿ ಹಾಸ್ಯ ಸ್ವಲ್ಪ ಬೇಗ ಸಹೃದಯ ಪ್ರೇಕ್ಷಕನಿಗೆ ತಲುಪುತ್ತದೆ.ಜೀವಂತಿಕೆಯನ್ನು ನೀಡುತ್ತದೆ. ಸಂಸ್ಕೃತದಲ್ಲಿ ನನ್ನ ನಿಲುಕಿಗೆ ದಕ್ಕಿದಂತೆ ಕಾಳಿದಾಸನ ನಾಟಕದ ವಿದೂಶಕನ ಚಿತ್ರಣ ಹಾಸ್ಯಕ್ಕೆ ಹೆಸರುವಾಸಿ.

   ಕನ್ನಡಕ್ಕೆ ಬಂದರೆ ಹಾಸ್ಯವು ಸಾಹಿತ್ಯದ ಒಂದು ಪ್ರಕಾರವಾಗಿ ಎಂದೂ ಅರಳಿ ಬರಲಿಲ್ಲ. ಸಾಹಿತ್ಯದಲ್ಲಿ ಸ್ಥಾನ ಪಡೆಯಲು ಹಾಸ್ಯಕ್ಕೆ ಸುಮಾರು ಏಳೆಂಟು ದಶಕಗಳೇ ಬೇಕಾದವು.ಇಲ್ಲಿ ಹಾಸ್ಯ ತುಂಬ ನಿಧಾನಗತಿಯಿಂದ ಬೆಳೆಯಿತು.

    ಹಾಸ್ಯದ ಲೇಪನದಿಂದ ಕಾವ್ಯದಲ್ಲಿ ಸಂದರ್ಭಕ್ಕೆ ತಕ್ಕಂತೆ ವಿಡಂಬನೆಯ ಅಭಿವ್ಯಕ್ತಿ ನೀಡುವ, ಹಾಸ್ಯವನ್ನು ಕಾವ್ಯದ ನವರಸಗಳಲ್ಲಿ ಒಂದನ್ನಾಗಿ ಉಪಯೋಗಿಸುವ ಮನಸ್ಸು ಹಳೆಗನ್ನಡದಲ್ಲಿ ಒಂದಷ್ಟು ಸಿಗುತ್ತದೆ. ಪಂಪಭಾರತ, ಪಂಚತಂತ್ರ, ಭರತೇಶ ವೈಭವ ಮುಂತಾದ ಕಾವ್ಯಗಳಲ್ಲಿ ಹಾಸ್ಯ ಪ್ರಸಂಗದ ವರ್ಣನೆಗಳಿವೆ. ನಯಸೇನನು,

‘ಕಲಿತನದಿಂ ಲೋಗರ್ ಪೆರ್ಬುಲಿಯಂ ಪಿಡಿದೊಡೇಂ

ಬಿಡೆಂಬರ್, ತಾವೊಂದಿಲಿಯಂ ಪಿಡಿದೊಡಮದು

ಪೆರ್ಬುಲಿಯೆಂಬರ್, ದುರ್ಜನರ್ಗೆತಾನಿದು ಸಹಜಂ’

ಎಂದು ದುರ್ಜನರ ಸ್ವಭಾವವನ್ನು ನಿಂದಿಸುವಲ್ಲಿ ವ್ಯಂಗ್ಯದ ತಿಳಿಹಾಸ್ಯವಿದೆ.

    ಹರಿಹರನ ನಂಬಿಯಣ್ಣನ ರಗಳೆಯ ವೃದ್ಧ ಬ್ರಾಹ್ಮಣ ಸಾಕಷ್ಟು ನಗಿಸುತ್ತಾನೆ.ವಚನ ಸಾಹಿತ್ಯದಲ್ಲಿ ಗಂಭೀರ ಧಾರ್ಮಿಕ ವಿಚಾರವು ತಲೆದೋರಿತು. ದಾಸ ಸಾಹಿತ್ಯ ಪರಂಪರೆಯಲ್ಲಿ ಆಧ್ಯಾತ್ಮದ ನಡುವೆ ಹಾಸ್ಯಕ್ಕೆ ಪ್ರವೇಶವೇ ಸಿಗಲಿಲ್ಲ. ರತ್ನಾಕರ ವರ್ಣಿಯ ‘ಭರತೇಶ ವೈಭವ’ದಲ್ಲಿ ಹಾಸ್ಯ ಮಿಂಚುತ್ತದೆ. ಭರತೇಶ ಯೋಗ-ಭೋಗಗಳನ್ನು ಸಮನ್ವಯಗೊಳಿಸುತ್ತಲೇ ಹಾಸ್ಯಕ್ಕೆ ಮೊರೆಹೋಗುವ ಅನೇಕ ಸಂದರ್ಭಗಳು ಬರುತ್ತವೆ. ರಾಣಿಯರೊಡನೆ ಸರಸ – ಸಲ್ಲಾಪ, ಪ್ರಣಯ, ಕಲಹದಲ್ಲಿನ ಮಾತುಗಳು ಕೆಲವು ಒಳ್ಳೆಯ ಉದಾಹರಣೆಗಳು. ಹಳಗನ್ನಡ ಕಾವ್ಯದಲ್ಲಿ ಹಾಸ್ಯ ಬಂದರೂ ಪ್ರಾಸಂಗಿಕವಾಗಿ ವಿಡಂಬನೆ ಅಥವಾ ನಿಂದನೆಯನ್ನು ನಿರೂಪಿಸಲೆಂದೇ ಬಂದಿರುತ್ತದೆ.

     ಕುಮಾರವ್ಯಾಸ ಭಾರತದಲ್ಲಿ ಉತ್ತರನ ಪೌರುಷದ ವರ್ಣನೆ ತಿಳಿಹಾಸ್ಯದ ನವುರನ್ನು ಓದುಗರಲ್ಲಿ ಎಬ್ಬಿಸುವ ರೀತಿ ಬಹಳ ಮೋಜಿನದು. ತನ್ನ ಪ್ರತಾಪವನ್ನು ಹೆಂಗಸರ ಮುಂದೆ ಕೊಚ್ಚಿಕೊಳ್ಳುವ ಉತ್ತರನ ಮಾತುಗಳು ನಗೆಯುಕ್ಕಿಸುತ್ತವೆ‌. ನನ್ನಂತ ವೀರ ಯುದ್ಧ ಮಾಡುವಂತ ವ್ಯಕ್ತಿಗಳು ಕೌರವರಲ್ಲಿ ಯಾರಿದ್ದಾರೆ ಎನ್ನುವ ಉತ್ತರಕುಮಾರ

"ಆರೊಡನೆ ಕಾದುವೆನು ಕೆಲಬರು

ಹಾರುವರು ಕೆಲರಂತಕನ ನೆರೆ

ಯೂವರವರು ಕೆಲರಧಮಕುಲದಲಿ ಸಂದು ಬಂದವರು

ವೀರರೆಂಬವರಿವರಿವರು ಮೇಲಿ

ನ್ನಾರ ಹೆಸರುಂಟವರೊಳೆಂದು"

ನೆಣಗೊಬ್ಬಿನಲಿ ನುಡಿಯುತ್ತಾನೆ.

ಹೀಗೆ ಹೇಳುವ ಅವನು ಹೇಡಿಯೂ, ಅಂಜುಕುಳಿಯೂ ಆಗಿದ್ದನೆಂದು ಕೌರವರ ವಿಶಾಲ ಸೈನ್ಯದ ದೃಶ್ಯವನ್ನು ನೋಡಿಯೇ ನಡುಗಿದಾಗ ತಿಳಿಯುತ್ತದೆ. ಅಷ್ಟಕ್ಕೆ ನಿಲ್ಲದೇ ಅವನು

"ಹಸಿದ ಮಾರಿಯ ಮಂದೆಯಲಿ ಕುರಿ

ನುಸುಳಿದಂತಾದೆನು" ‘ಕೊಂದನೀ ಸಾರಥಿ' ಎಂದು

ಮೆಲ್ಲನೆ ರಥದ ಹಿಂದಿನಿಂದ ದುಮುಕಿ ಓಟಕೀಳುತ್ತಾನೆ.

     ಅರ್ಜುನ ಅವನ ಹಿಂದೆ ರಥ ಓಡಿಸುತ್ತಾನೆ, ಇದೆಲ್ಲವನ್ನು ನೋಡಿ ಇಡೀ ಕೌರವ ಸೇನೆ ನಗೆಯ ಕಡಲಿನಲ್ಲಿ ಮುಳುಗುತ್ತದೆ.ಕುಮಾರವ್ಯಾಸ ಚಿತ್ರಿಸಿದ ಈ ಭಾಗ ಹಾಸ್ಯ ಸಾಹಿತ್ಯಕ್ಕೆ ಜೀವ ತುಂಬಲು ಎಷ್ಟು ಸಮರ್ಥವಾಗಿದೆ ನೋಡಿ.ಕುಮಾರವ್ಯಾಸ ಕಟಕಿ, ಬಿರುನುಡಿ, ಕಿರಿನುಡಿ, ವ್ಯಂಗ್ಯ , ಹಾಸ್ಯ , ಸರಸ, ವಕ್ರೋಕ್ತಿ, ಜಾಣ್ಣುಡಿ, ಪರಿಹಾಸ ಎಲ್ಲ ರೀತಿಯ ಹಾಸ್ಯ ಪ್ರಕಾರಗಳನ್ನೂ ಕಟ್ಟಿಕೊಡುತ್ತಾನೆ. ಇನ್ನು ಮುದ್ದಣ-ಮನೋರಮೆಯರ ಸರಸ ಸಲ್ಲಾಪ ಹಾಸ್ಯ ಸಾಹಿತ್ಯದ ದಿಕ್ಕಿಯಲ್ಲಿ ಒಂದು ಪ್ರಯೋಗವಾದರೂ ಪರಿಶುದ್ಧವಾದ ರೋಚಕ ಹಾಸ್ಯವು ಮುಂದೆ ಸಾಹಿತ್ಯ ಪ್ರಕಾರವಾಗಿ ಬೆಳೆಯಬಹುದು ಎಂಬುದರ ಸೂಚನೆ ಎನಿಸುತ್ತದೆ.

     ಹೊಸಗನ್ನಡ ಕಾಲದ ಸಾಹಿತ್ಯದಲ್ಲಿ ಕಲಾತ್ಮಕ ಹಾಸ್ಯವನ್ನು ರಚಿಸುವ ಪ್ರಯತ್ನ ಹಲವರಿಂದ ನಡೆಯುತ್ತದೆ. ಪಡುಕೋಣೆ ರಮಾನಂದರಾಯರ ಹಾಸ್ಯಕತೆಗಳು. ಇಗ್ಗಪ್ಪ ಹೆಗ್ಗಡೆಯ ವಿವಾಹ ಪ್ರಹಸನ ಸಾಹಿತ್ಯಕ ಮೌಲ್ಯವುಳ್ಳದ್ದಾಗಿವೆ. ಒಡೆಯರ ಕಾಲದ ಸಾಹಿತ್ಯದಲ್ಲಿ ರಾಜಾಶ್ರಯದ ಪರಂಪರೆಯ ಕಾರಣದಿಂದಾಗಿ ಹಾಸ್ಯಕ್ಕೆ ಯಾವುದೇ ರೀತಿಯ ಬ್ರೇಕ್ ಸಿಗಲಿಲ್ಲ. ಶಿವರಾಮ ಕಾರಂತರ ಬರವಣಿಗೆಯಲ್ಲಿ ಅವರಲ್ಲಿರುವ ವಿನೋದ ಪ್ರವೃತ್ತಿ ಪ್ರಾದೇಶಿಕ ಸೊಗಸನ್ನು ಪಡೆದು ಸಾಹಿತ್ಯದಲ್ಲಿ ಮೂಡಿರುವ ಗುರುತಿದೆ.1940 ರ ಈಚೆಗೆ ಟಿ.ಪಿ.ಕೈಲಾಸಂ ತಮ್ಮ ನಾಟಕಗಳಲ್ಲಿ ಸಮಕಾಲೀನ ಸಾಮಾಜಿಕ ಸಮಸ್ಯೆಗಳನ್ನು ವ್ಯಕ್ತಪಡಿಸಲು ಹಾಸ್ಯವನ್ನು ಬಳಸಿದರು. ಇಂಗ್ಲೀಷ್ ಸಾಹಿತ್ಯದ ಪ್ರಭಾವ ಕೈಲಾಸಂ ನಾಟಕಗಳಲ್ಲಿ ಕಂಡು ಬಂದರೂ ಹಾಸ್ಯ ಲೋಕಲ್ ಅಭಿರುಚಿಯಂತಿರುವುದು ಚಂದ. ಮಾಸ್ಟರ್ ಹಿರಣ್ಣಯ್ಯ ಅವರ ನಾಟಕಗಳ ಸಂವಾದ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ಮುಳುಗಿಸುತ್ತದೆ. ಆದರೆ ಅದು ನಾಟಕ ಸಂದರ್ಭದಲ್ಲಿ ಮಾಡುವ ವಿಡಂಬನೆ, ಅಣಕಗಳೇ ಹೊರತು ಸಾಹಿತ್ಯವಲ್ಲ.ಶ್ರೀರಂಗರ ನಾಟಕಗಳಲ್ಲಿ ಉತ್ತರ ಕರ್ನಾಟಕದ ಕನ್ನಡಭಾಷೆ ಮುಖ್ಯವಾಗಿ ವಿನೋದಕ್ಕೆ ಎಡೆಮಾಡಿಕೊಡುತ್ತದೆ. ಪರ್ವತವಾಣಿ, ದಾಶರಥಿ ದೀಕ್ಷಿತ, ನಾಡಿಗೇರ್ ತಮ್ಮ ನಗೆನಾಟಕಗಳಲ್ಲಿ ಹಾಸ್ಯವನ್ನು ತರುತ್ತಾರೆ. ಎನ್ಕೆಯವರದೂ ಮುಖ್ಯವಾಗಿ ಹಾಸ್ಯ ಪ್ರಧಾನವಾದ ಸಾಹಿತ್ಯ.

     ಚಂದ್ರಶೇಖರ ಕಂಬಾರರ ಜೋಕುಮಾರಸ್ವಾಮಿ, ಸಿರಿಸಂಪಿಗೆಯಂತಹ ನಾಟಕಗಳಲ್ಲಿ ಹಾಸ್ಯ ಅತ್ಯಂತ ಕಲಾತ್ಮಕವಾಗಿ ವ್ಯಕ್ತವಾಗಿದೆ. ಲಂಕೇಶ, ಗಿರೀಶ ಕಾರ್ನಾಡರ ಸಂಕ್ರಾಂತಿ, ಹಯವದನ, ನಾಗಮಂಡಲ, ತಲೆದಂಡದಂತಹ ಜನಪದೀಯ ನಾಟಕಗಳಲ್ಲಿ ಹಾಸ್ಯವು ಸಾಂದರ್ಭಿಕ ನೆಲೆಯಲ್ಲಿ ಮಾತ್ರ ಬರುತ್ತದೆ.

     ಬೀಚಿಯವರ ಖಾದಿ ಸೀರೆ, ಭಯೋಗ್ರಫಿ, ತಿಂಮನ ತಲೆಯ ಹಾಸ್ಯ ಬರಹಗಳು ಅಲ್ಲಿನ 'ಟೈಮಿಂಗ್' ನಿಂದಾಗಿ ಓದುಗರನ್ನು ನಗಿಸುತ್ತವೆ. ಇನ್ನು ಗೊರೂರರ ಕತೆಗಳು ಶುದ್ಧ ಹಾಸ್ಯದ ಕೊರತೆಯನ್ನು ನೀಗಿಸುತ್ತವೆಂದು ಪ್ರಸಿದ್ಧವಾಗಿವೆ.

     ಜೊತೆಗೆ ವಿಕಟವಿನೋದಿನಿ, ಕೊರವಂಜಿ, ನಗುವನಂದ, ಇತ್ಯಾದಿ ವಿನೋದ ಹಾಸ್ಯ ಬರಹಗಳಿಗಾಗಿಯೆ ಮೀಸಲಾದ ಹಳೆಯ ನಿಯತಕಾಲಿಕ ಪತ್ರಿಕೆಗಳೂ ಸಹ ಹಾಸ್ಯಕ್ಕೆ ಕೊಡುಗೆ ನೀಡಿವೆ.ರಾಜರತ್ನಂರವರ ರತ್ನನ ಪದಗಳ ಪುಟ್ನಂಜಿರೂಪ , ನಲ್ಲೀತಾವ ನಂಮಲ್ಲಿ, ಕನ್ನಡ ಪದಗೊಳ್, ಗಳಲ್ಲಿ ಹಾಸ್ಯ ಪುಟಿಯುವ ತಿಳಿಭಾವನೆಗಳನ್ನು ಮೈಸೂರಿನ ಸಾಮಾನ್ಯರ ಭಾಷೆಯ ಮೂಲಕ ಕಾವ್ಯರೂಪದಲ್ಲಿ ಹೊಮ್ಮಿಸಿದ ಬಗೆ ಭಿನ್ನವಾಗಿದೆ. ‘ಎಲಲೆ ರಸ್ತೆ, ಏನ್ ಅವ್ಯವಸ್ಥೆ' ಎಂದು ಕುಡುಕ ರತ್ನ ರಸ್ತೆಯನ್ನು ಚಂದ್ರನನ್ನು ಕುಡುಕನೆಂದು ತಿಳಿಯುವುದು ಇಲ್ಲೆಲ್ಲಾ ಹಾಸ್ಯವಿದೆ.

     ಜನಪದ ಸಾಹಿತ್ಯದಲ್ಲಿ ನಮಗೆ ಮುಗ್ಧ ಮನಸ್ಸಿನಿಂದ ಹೊರಬಂದ ನೈಜ ಹಾಸ್ಯ ದೊರೆಯುತ್ತದೆ. ಜನಪದ ಹಾಡುಗಳಲ್ಲಿ ಮನುಷ್ಯರನ್ನು ಬಿಟ್ಟು ತಾವು ನಂಬಿದ ದೈವದೇವತೆಗಳನ್ನೆ ತಂದ ಬದುಕಿನ ಸಹಜ ‘ಟಿಟ್‍ಬಿಟ್ಸ್’ಗಳು ಕಂಡುಬರುತ್ತವೆ. ನಂಜನಗೂಡಿನ ನಂಜಯ್ಯ, ಚಾಮುಂಡಿಯರ ಪ್ರಣಯ ಕತೆಯ ತಿಳಿಹಾಸ್ಯ ಸಾಹಿತ್ಯ ಸೊಗಸಾಗಿದೆ. ಲಾವಣಿ, ದೊಡ್ಡಾಟ, ಪಾರಿಜಾತ, ಯಕ್ಷಗಾನ, ಕೋಲಾಟದ ಪದ್ಯ, ಮದುವೆಯ ಹಾಡು, ವೀರಗಾಥೆಗಳಲ್ಲಿಯೂ ಬರುವ ತಿಳಿಹಾಸ್ಯ ಜಾನಪದ ಬದುಕಿನ ಸುಂದರ ಸಹಜ ಮುಖವನ್ನು ತೋರಿಸುತ್ತದೆ.

      ಇವತ್ತಿನ ಕಾಲಕ್ಕೆ ಹಾಸ್ಯವು ಸಾಹಿತ್ಯ ವಲಯವನ್ನು ದಾಟಿ ಸಿನಿಮಾ,ಟಿವಿ ಅಲ್ಲದೆ ಎಲೆಕ್ಟ್ರಾನಿಕ್ ಮೀಡಿಯಾಗಳವರೆಗೆ ಹಬ್ಬಿದೆ. ಅಲ್ಲಿನ ಕೆಲವು ಹಾಸ್ಯ ಕಾರ್ಯಕ್ರಮಗಳ ಸಂಭಾಷಣೆ ಕೇಳಿದರೆ! ರಾಮಾ! ಒಂದು ಕ್ಷಣಕ್ಕೆ ನಗು ಬಂದರೂ, ಇದು ಫ್ಯಾಮಿಲಿ ಹಾಸ್ಯ ಮಾತ್ರ ಅಲ್ಲವೇ ಅಲ್ಲ ಅಂತ ಅನ್ನಿಸುತ್ತದೆ.ನಾವು ಏನೋ ನೋಡುತ್ತಿರುವಾಗ ಮಕ್ಕಳೋ ಅಥವಾ ವಯಸ್ಸಾದವರೋ ಬಂದರೆ ನಾವು ಚಾನೆಲ್ ಬದಲಿಸುತ್ತೇವೆ ಎಂದಾದರೆ ಅದು ಆರೋಗ್ಯಕರ ಹಾಸ್ಯವಲ್ಲವೆಂದೇ ಅರ್ಥ. ಹಾಸ್ಯರಸ ನಿರ್ಮಾಣವು ಕೌಶಲವೂ ಹೌದು, ಪ್ರತಿಭೆಯೂ ಹೌದು. ಕುಶಲರಾದ ಹಾಸ್ಯಗಾರರ ಹಾಸ್ಯ ತಾತ್ಕಾಲಿಕ ಮನರಂಜನೆ ನೀಡುತ್ತದೆ. ಪ್ರತಿಭಾನ್ವಿತ ಹಾಸ್ಯಗಾರರು ಹಾಸ್ಯವನ್ನು ವೈಚಾರಿಕತೆಯ ಮಟ್ಟಕ್ಕೆ ಏರಿಸಬಲ್ಲರು.

     ಹಾಸ್ಯವನ್ನು ಭಾವದ ಮಟ್ಟದಿಂದ ಬುದ್ಧಿಯ ಮಟ್ಟಕ್ಕೇರಿಸಿ ರಸನಿರ್ಮಾಣ ಮಾಡುವುದು ಅಸಾಧಾರಣ ಪ್ರತಿಭೆ. ಅದು ಹಾಸ್ಯಗಾರನಿಗೆ ಇರುವ ದೊಡ್ಡ ಸವಾಲು. ಹಾಸ್ಯ ಲೇಖಕನಿಗೆ ಏನೆಲ್ಲಾ ಬರೆಯುವ ಸ್ವಾತಂತ್ರ್ಯವಿದ್ದರೂ ಭಾಷೆ, ಸಮಯಸಂದರ್ಭ ಮತ್ತು ಔಚಿತ್ಯಗಳ ಬಗ್ಗೆ ಎಚ್ಚರವಿರಬೇಕು.ಮನರಂಜನೆ ಎಂದರೆ ಅಶ್ಲೀಲ ಹಾಸ್ಯ ಎಂದರ್ಥವಲ್ಲ. ಸಮಾಜದ ಒಳಿತಿನ ಉದ್ದೇಶದ ಅರಿವಿಲ್ಲದ ಹಾಸ್ಯಕಲಾವಿದರು ಜಾತೀಯತೆ, ಮತೀಯತೆ, ವರ್ಣ ವ್ಯವಸ್ಥೆ, ಊಳಿಗಮಾನ್ಯ ವ್ಯವಸ್ಥೆ, ಅಸಮಾನತೆ ಮತ್ತು ಸ್ತ್ರೀ ಶೋಷಣೆಗಳನ್ನು ಸಮರ್ಥಿಸಿ ಹಾಸ್ಯ ಮಾಡಿಬಿಡುತ್ತಾರೆ. ಸಂಸ್ಕಾರವಂತ ಹಾಸ್ಯಗಾರ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಯ ನಿವಾರಣೆಗೆ ತನ್ನ ಮಿತಿಯಲ್ಲಿ ಪ್ರಯತ್ನ ಪಡುತ್ತಾನೆ, ಪಡಬೇಕು.

     ಸಾಹಿತ್ಯದಲ್ಲಿ ‘ಹಾಸ್ಯ’ ಒಂದು ಅವಶ್ಯಕ ರಸ. ಅದರ ಮಹತ್ತ್ವದ ಹೊರತಾಗಿಯೂ ಹಾಸ್ಯದ ಮೌಲ್ಯ ಕುಸಿಯುತ್ತಿದೆ. ಹಾಸ್ಯ ಅಸಂಬದ್ಧ ಮತ್ತು ಅಶ್ಲೀಲವಾದರೆ ಅಪಹಾಸ್ಯವಾಗುತ್ತದೆ. ರಸ ನಿರ್ಮಾಣ ಮಾಡಬೇಕಾದ ಹಾಸ್ಯವು ರಸಾಭಾಸಕ್ಕೆ ಕಾರಣವಾಗುತ್ತಿರುವುದು ಅಭಾಸ. ಈಗೀಗ ಕಾಡುಹರಟೆಗಳಲ್ಲಿ ಅಲ್ಪಮತಿಗಳನ್ನು ನಗಿಸಬಲ್ಲವರು ‘ಹಾಸ್ಯಗಾರ’ ಎನಿಸಿಕೊಳ್ಳುತ್ತಿದ್ದಾರೆ. ಇವರಿಗೆ ಯಾವ ಸಂದರ್ಭದಲ್ಲಿ ಹೇಗೆ ಮಾತಾಡಬೇಕೆಂಬ ಔಚಿತ್ಯಪ್ರಜ್ಞೆ ಇರುವುದಿಲ್ಲ.ಅಗ್ಗದ ಜನಪ್ರಿಯತೆಯ ಹಂಬಲಕ್ಕೆ ಬಿದ್ದು ಹಂದಿ, ಎಮ್ಮೆ, ನಾಯಿ, ಆಡುಗಳನ್ನು ಕುಂಟರನ್ನು, ಕುರುಡರನ್ನು, ಮೂಗರನ್ನು ಅಣಕಿಸುವ ಹಾಸ್ಯಗಾರರನ್ನು ಕಂಡಾಗ ಇವರಿಗೆ ಮಾನವೀಯತೆ ಎನ್ನುವುದೂ ಇಲ್ಲವೇ ಎಂದು ಬೇಸರವಾಗುತ್ತದೆ.

    ತಾವು ಕೊಟ್ಟದ್ದನೆನಲ್ಲಾ ಪ್ರೇಕ್ಷಕರು ಸ್ವೀಕರಿಸುತ್ತಾರೆ ಎಂಬ ಮೂಢನಂಬಿಕೆಯ ಹಾಸ್ಯ ಕಲಾವಿದರು ತಮ್ಮ ಬುದ್ಧಿಮಟ್ಟ ಪ್ರೇಕ್ಷಕರದಕ್ಕಿಂತ ಮೇಲಿನದು ಎಂದು ತಿಳಿದುಕೊಳ್ಳುತ್ತಾರೆ.ಬಹುತೇಕ ಕಲಾವಿದರ ಬಹುದೊಡ್ಡ ಕೊರತೆ ಓದು, ಚಿಂತನಾಕ್ರಮದ್ದು. ಜ್ಞಾನಾಧರಿತ ಹಾಸ್ಯಕ್ಕೆ ಘನತೆ ಮತ್ತು ತೂಕವಿರುತ್ತದೆ.

ಹಾಸ್ಯಗಾರರಿಗೆ ಹಾಸ್ಯವೆಂದರೆ ನಗು ಮಾತ್ರವಲ್ಲದ ಅದೊಂದು ರಸಾವಿಷ್ಕಾರವೆಂಬ ಅರಿವು ಇದ್ದಾಗ ಮಾತ್ರ ಸಾಹಿತ್ಯದಲ್ಲಿ, ರಂಗದಲ್ಲಿ, ಕಾಮಿಡಿ ಶೋಗಳಲ್ಲಿ ಹಾಸ್ಯವು ಗೆಲ್ಲಬಲ್ಲದು.