ಸಾಂವಿಧಾನಿಕ ಮೌಲ್ಯದಿಂದ ಮಾರುಕಟ್ಟೆ ಮೌಲ್ಯದೆಡೆಗೆ !

socio-economic-status

ಸಾಂವಿಧಾನಿಕ ಮೌಲ್ಯದಿಂದ ಮಾರುಕಟ್ಟೆ ಮೌಲ್ಯದೆಡೆಗೆ !

 

ಮೌಲ್ಯಾಧಾರಿತ ರಾಜಕಾರಣಕ್ಕೆ ಹೆಸರಾಗಿದ್ದ ಕರ್ನಾಟಕದ ರಾಜಕಾರಣ  ಇಂದು ಎತ್ತ ಸಾಗುತ್ತಿದೆ ?

           

                                                                                                                     

ನಾ ದಿವಾಕರ

 

1980ರ ದಶಕದಲ್ಲಿ ರಾಷ್ಟ್ರದ ಹಾಗೂ ರಾಜ್ಯಗಳಲ್ಲಿನ ರಾಜಕೀಯ ಸಮೀಕರಣಗಳು ಕ್ಷಿಪ್ರಗತಿಯಲ್ಲಿ ಬದಲಾಗುತ್ತಿದ್ದಾಗ ಕರ್ನಾಟಕದ ರಾಜಕಾರಣವೂ , ಸಾಂವಿಧಾನಿಕ ಮೌಲ್ಯಗಳ ನೆಲೆಯಲ್ಲಿ ತನ್ನದೇ ಆದ ಪ್ರತಿಷ್ಠಿತ ಸ್ಥಾನವನ್ನು ಗಳಿಸಿಕೊಂಡಿತ್ತು. ಮಂಡಲ-ಕಮಂಡಲ ರಾಜಕಾರಣದೊಂದಿಗೆ ಹಿಂದುಳಿದ ವರ್ಗಗಳ ಅಸ್ಮಿತೆಯ ರಾಜಕಾರಣವು ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಮೂರು ದಶಕಗಳಿಗೂ ಹೆಚ್ಚಿನ ರಾಜಕೀಯ ಸಮೀಕರಣಗಳನ್ನು ಬದಲಿಸುತ್ತಿರುವಾಗಲೇ ಕರ್ನಾಟಕದ ಮತದಾರರೂ ತಮ್ಮದೇ ಆದ ಹಾದಿಯನ್ನು ಕಂಡುಕೊಂಡಿದ್ದರು. ಆರಂಭದಿಂದಲೂ ಪ್ರಬಲ ಲಿಂಗಾಯತ ಮತ್ತು ಒಕ್ಕಲಿಗ ಜಾತಿಗಳ ಹಿಡಿತದಲ್ಲೇ ನಡೆದುಬಂದಿದ್ದರೂ ರಾಜ್ಯ ರಾಜಕೀಯ ವಾತಾವರಣದಲ್ಲಿ ಜಾತಿ ರಾಜಕಾರಣ ಉತ್ತರ ಭಾರತದಲ್ಲಿ ಉಂಟುಮಾಡಿದಂತಹ ಪ್ರಕ್ಷುಬ್ಧತೆಯನ್ನಾಗಲೀ, ಪಲ್ಲಟಗಳನ್ನಾಗಲೀ ಸೃಷ್ಟಿಸಲಿಲ್ಲ. ಜಾತಿ ಪ್ರಧಾನವಾದ ಪ್ರಾದೇಶಿಕ ಪಕ್ಷಗಳೂ ಸಹ ಆ ಸಂದರ್ಭದಲ್ಲಿ ಹುಟ್ಟಿಕೊಳ್ಳಲಿಲ್ಲ.

 

ಮೂರು ದಶಕಗಳ ನಂತರ ರಾಜ್ಯ ರಾಜಕೀಯ ಚಿತ್ರಣ ಬದಲಾಗಿದೆ. ಇಂದು ಜನತಾದಳದಂತಹ ಜಾತ್ಯತೀತ ಪಕ್ಷಗಳು ನೇರವಾಗಿ ಒಕ್ಕಲಿಗ ಸಮುದಾಯವನ್ನು ಪ್ರತಿನಿಧಿಸುವುದಾಗಿ ಘೋಷಿಸಿಕೊಳ್ಳುತ್ತಿದೆ. ಮತ್ತೊಂದೆಡೆ ಹಿಂದುತ್ವದ ಆಧಾರದ ಮೇಲೆ ರಾಜಕೀಯ ನಡೆಸುವ ಬಿಜೆಪಿ ಆಂತರಿಕವಾಗಿ ಪ್ರಬಲ ಲಿಂಗಾಯತ ಮತ್ತು ಕೆಲವು ಹಿಂದುಳಿದ ಜಾತಿಗಳನ್ನೇ ಅವಲಂಬಿಸಿ ತನ್ನ ರಾಜಕೀಯ ನಡೆಗಳನ್ನು ನಿರ್ಧರಿಸುತ್ತಿದೆ. ಮತ್ತೊಂದು ಪ್ರಧಾನ ಪಕ್ಷ ಕಾಂಗ್ರೆಸ್‌ ಎಲ್ಲರನ್ನೂ ಒಳಗೊಳ್ಳುವುದಕ್ಕಿಂತಲೂ ಹೆಚ್ಚಾಗಿ ಎಲ್ಲರನ್ನೂ ತೃಪ್ತಿಪಡಿಸುವ ರಾಜಕಾರಣವನ್ನು ಅನುಸರಿಸುತ್ತಿದೆ. ಈ ರಾಜಕೀಯ ಮನ್ವಂತರಕ್ಕೂ ಆರ್ಥಿಕವಾಗಿ ಕರ್ನಾಟಕ ನವ ಉದಾರವಾದ ಮತ್ತು ಮಾರುಕಟ್ಟೆ ಆರ್ಥಿಕ ನೀತಿಗಳ ಪ್ರಶಸ್ತ ತಾಣವಾಗುವುದಕ್ಕೂ ಇರುವ ನೇರ ಸಂಬಂಧವನ್ನು ಗಂಭೀರವಾಗಿ ಪರಾಮರ್ಶಿಸಬೇಕಿದೆ. ಸಂಪತ್ತಿನ ಒಡೆತನ, ಭೂಮಿಯ ಮೇಲಿನ ಯಜಮಾನಿಕೆ ಹಾಗೂ ಔದ್ಯಮಿಕ ವಲಯದಲ್ಲಿ ಉತ್ಪಾದನಾ ಮೂಲಗಳ ಮೇಲೆ ಇರುವ ಹಿಡಿತ ಯಾವುದೇ ಪ್ರಧಾನ ರಾಜಕೀಯ ಪಕ್ಷದ ಸ್ಥಿತಿಗತಿಗಳನ್ನು ನಿರ್ಧರಿಸುವಲ್ಲಿ ನಿರ್ಣಾಯಕವಾಗುತ್ತದೆ.

 

ನವ ಉದಾರವಾದ ಮತ್ತು ಔದ್ಯಮಿಕ ಮಾರುಕಟ್ಟೆ

 

ಈ ದೃಷ್ಟಿಯಿಂದಲೇ ರಾಜ್ಯದ ಪ್ರಧಾನ ರಾಜಕೀಯ ಪಕ್ಷಗಳು 1990ರ ದಶಕದ ಜಾಗತೀಕರಣದ ನಂತರದಲ್ಲಿ ಅಂತಾರಾಷ್ಟ್ರೀಯ ಹಣಕಾಸು ಬಂಡವಾಳ ಹಾಗೂ ಮಾರುಕಟ್ಟೆಯ ಮೇಲೆ ಹಿಡಿತ ಸಾಧಿಸಲು ನೆರವಾಗುವಂತಹ ಔದ್ಯಮಿಕ ಹಿತಾಸಕ್ತಿಗಳನ್ನು ಕಾಪಾಡುವತ್ತ ಹೆಚ್ಚು ಗಮನ ಹರಿಸುತ್ತಿವೆ. ಜಾಗತೀಕರಣ ನಂತರದ ಅವಧಿಯನ್ನು ರಾಜಕೀಯವಾಗಿ ಎರಡು ಹಂತಗಳಲ್ಲಿ ಗುರುತಿಸಬಹುದು.

 

 1990-2007ರ ಅವಧಿಯಲ್ಲಿ ಬಂಡವಾಳದ ಹರಿವು ಹಾಗೂ ಸಾಫ್ಟ್‌ವೇರ್‌ ಉದ್ಯಮದ ಬೆಳವಣಿಗೆ ಕರ್ನಾಟಕದಲ್ಲಿ ನಗರೀಕರಣ ಪ್ರಕ್ರಿಯೆಗೆ ಹೊಸ ಆಯಾಮವನ್ನು ನೀಡಿತ್ತು. ಔದ್ಯೋಗಿಕ ಬಂಡವಾಳ ಯುಗದಿಂದ ಹಣಕಾಸು ಬಂಡವಾಳ ಯುಗಕ್ಕೆ ಜಿಗಿದ ಕರ್ನಾಟಕದ ಆರ್ಥಿಕತೆಯಲ್ಲಿ ಸೇವಾ ಕ್ಷೇತ್ರದ ಬಂಡವಾಳ ಹೂಡಿಕೆ ಹೆಚ್ಚಾದಂತೆ, ಜಾಗತಿಕ ಉದ್ಯೋಗ ಮಾರುಕಟ್ಟೆಗೆ ಹಾಗೂ ಸಾಫ್ಟ್‌ವೇರ್‌ ತಂತ್ರಜ್ಞಾನದ ಮಾರುಕಟ್ಟೆಗೆ ಪೂರಕವಾದ ಬೌದ್ಧಿಕ ವಲಯವನ್ನು ಬೆಳೆಸುವುದು ಮಾರುಕಟ್ಟೆ ಮತ್ತು ಬಂಡವಾಳಿಗರ ಮೂಲ ಧ್ಯೇಯವಾಗಿತ್ತು. ಹಾಗಾಗಿಯೇ ಕರ್ನಾಟಕ ಕಂಪ್ಯೂಟರ್‌ ಇಂಜಿನಿಯರಿಂಗ್‌, ಸಾಫ್ಟ್‌ವೇರ್‌ ತಂತ್ರಜ್ಞಾನದ ಅಭಿವೃದ್ಧಿಯೊಂದಿಗೇ ಅಮೆರಿಕದ ಮಾರುಕಟ್ಟೆಗೆ ಸ್ಪಂದಿಸುವ ಹೊರಗುತ್ತಿಗೆ ಉದ್ಯೋಗ ಮಾರುಕಟ್ಟೆಯ ಕೇಂದ್ರವಾಗಿ ಪರಿಣಮಿಸಿತ್ತು. ಈ ಹಂತದಲ್ಲೇ ಉಗಮನಿಸಿದ ಬಿಪಿಒಗಳು (ವಾಣಿಜ್ಯ ಪ್ರಕ್ರಿಯೆಯ ಹೊರಗುತ್ತಿಗೆ ಕೇಂದ್ರಗಳು) ಮುಖ್ಯ ನಗರಗಳಲ್ಲಿ ನಾಯಿಕೊಡೆಗಳಂತೆ ತಲೆಎತ್ತಿದ್ದವು.

 

ಶೈಕ್ಷಣಿಕ ವಲಯದಲ್ಲಿ ಈ ಮಾರುಕಟ್ಟೆಗೆ ಪೂರಕವಾದ ಮಾನವ ಸಂಪನ್ಮೂಲಗಳನ್ನು ಒದಗಿಸುವ ಸಲುವಾಗಿಯೇ ಕಂಪ್ಯೂಟರ್‌ ಇಂಜಿನಿಯರಿಂಗ್‌ ಮತ್ತು ಹತ್ತು ಹಲವಾರು ಸಾಫ್ಟ್‌ವೇರ್‌ ತಂತ್ರಜ್ಞಾನದ ಕೋರ್ಸುಗಳು ಖಾಸಗಿ ಉದ್ದಿಮೆಗಳಾಗಿ ನೆಲೆ ಕಂಡುಕೊಂಡವು. ಇದರ ನೇತ್ಯಾತ್ಮಕ ಪರಿಣಾಮವಾಗಿ ವಿಶ್ವವಿದ್ಯಾಲಯಗಳಲ್ಲಿ ಸಾಮಾನ್ಯ ವಿಜ್ಞಾನ, ಅರ್ಥಶಾಸ್ತ್ರ, ಸಮಾಜಶಾಸ್ತ್ರ ಮತ್ತು ಗಣಿತ ಶಾಸ್ತ್ರ ಮತ್ತು ಭಾಷಾ ಸಾಹಿತ್ಯ ಅಧ್ಯಯನ ಮಾಡುವವರ ಸಂಖ್ಯೆಯೂ ಕ್ಷೀಣಿಸತೊಡಗಿತ್ತು. ಈ ಹಂತದಲ್ಲಿ ಕರ್ನಾಟಕದಲ್ಲಿ ಬೆಳೆದ ಬಂಡವಾಳವನ್ನು ಪೋಷಿಸುವ ಸಲುವಾಗಿಯೇ ಇಡೀ ಉನ್ನತ ಶಿಕ್ಷಣದ ಸಾಂಸ್ಥಿಕ ನೆಲೆಯನ್ನು ರಾಜ್ಯದ ಔದ್ಯಮಿಕ ಬಂಡವಾಳದ ವಾರಸುದಾರರಾಗಿ ಲಿಂಗಾಯತ ಹಾಗೂ ಒಕ್ಕಲಿಗ ಶೈಕ್ಷಣಿಕ ಸಂಸ್ಥೆಗಳು, ವೈದ್ಯಕೀಯ ಕಾಲೇಜು  ಮತ್ತು ಆಸ್ಪತ್ರೆಗಳು ಹಾಗೂ ಸಾಫ್ಟ್‌ ವೇರ್‌ ಉದ್ದಿಮೆಗಳು ಹೊರಹೊಮ್ಮಿದ್ದವು.

 

ಈ ಪ್ರಕ್ರಿಯೆಯಲ್ಲಿ ತೀವ್ರಗೊಂಡ ನಗರೀಕರಣ ಪ್ರಕ್ರಿಯೆಗೆ ಪೂರಕವಾದ ವಾತಾವರಣವನ್ನು ಸೃಷ್ಟಿಸುವ ಜವಾಬ್ದಾರಿ ರಾಜ್ಯ ಸರ್ಕಾರಗಳ ಮೇಲೆ ಹೆಚ್ಚಾಗುತ್ತಲೇ ಹೋಗಿತ್ತು. ಸಾಫ್ಟ್‌ ವೇರ್‌ ಉದ್ದಿಮೆ ಸೃಷ್ಟಿಸುವ ಒಂದು ವಿಶಿಷ್ಟ ಮೇಲ್ವರ್ಗದ ಅಗತ್ಯತೆಗಳನ್ನು ಪೂರೈಸುವಂತಹ ಐಷಾರಾಮಿ ಬಡಾವಣೆಗಳು, ರಸ್ತೆ ಉದ್ಯಾನಗಳು, ವಸತಿ ಸಮುಚ್ಚಯಗಳು ಹಾಗೂ ಈ ವರ್ಗದ ಅನುಕೂಲಕ್ಕೆ ತಕ್ಕಂತಹ ರಸ್ತೆ , ಮೇಲ್‌ಸೇತುವೆ, ಅಂಡರ್‌ಪಾಸ್‌, ಮೆಟ್ರೋ ಮತ್ತಿತರ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು ಸರ್ಕಾರಗಳ ಆದ್ಯತೆಯಾಯಿತು. ಅಟಲ್‌ ಬಿಹಾರಿ ವಾಜಪೇಯಿ ಆಳ್ವಿಕೆಯ ನಂತರ ಮನಮೋಹನ್‌ಸಿಂಗ್‌ ಮುಂದಾಳತ್ವದ ಯುಪಿಎ ಸರ್ಕಾರ ಅನುಸರಿಸಿದ ಬಂಡವಾಳ ಸ್ನೇಹಿ ಆರ್ಥಿಕ ನೀತಿಗಳಿಗೆ ಅನುಗುಣವಾಗಿ ಕರ್ನಾಟಕದಲ್ಲೂ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಯಿತು. ಈಗ ಇದೇ ಪ್ರಧಾನ ಮಾರ್ಗವಾಗಿದೆ.

 

ನಗರೀಕರಣ ಮತ್ತು ಔದ್ಯಮಿಕ ಪ್ರಗತಿ

 

ಜಾಗತೀಕರಣ ನಂತರದ ಎರಡನೆ ಅವಧಿಯನ್ನು 2007ರ ನಂತರದ ಕಾಲಘಟ್ಟದಲ್ಲಿ ಸ್ಪಷ್ಟವಾಗಿ ಗುರುತಿಸಬಹುದು. ನಿರಂತರವಾಗಿ ವಿಸ್ತರಿಸುತ್ತಿದ್ದ ನಗರಗಳು ಮತ್ತು ನಗರೀಕರಣಕ್ಕೆ ಅತ್ಯವಶ್ಯವಾಗಿ ಬೇಕಾಗಿದ್ದ ಭೂ ಸ್ವಾಧೀನ ಪ್ರಕ್ರಿಯೆಗಳನ್ನು ಸುಗಮಗೊಳಿಸುವ ಹಲವು ನೀತಿಗಳನ್ನು ಈ ಅವಧಿಯಲ್ಲೇ ಜಾರಿಗೊಳಿಸಿದ್ದನ್ನು ಪಕ್ಷಾತೀತವಾಗಿ ಎಲ್ಲ ಸರ್ಕಾರಗಳಲ್ಲೂ ಗುರುತಿಸಬಹುದು. ಸುತ್ತಲಿನ ಗ್ರಾಮಗಳನ್ನು ತನ್ನೊಳಗೆ ಸೇರಿಸಿಕೊಳ್ಳುತ್ತಾ ಬೆಳೆಯುವ ನಗರೀಕರಣದ ವಿಕೃತ ಪ್ರಕ್ರಿಯೆಗೆ ಅನುಕೂಲವಾಗಲೆಂದೇ ರಾಜ್ಯ ಸರ್ಕಾರಗಳು ಎಲ್ಲ ಪ್ರಮುಖ ನಗರಗಳಲ್ಲೂ ನಗರಾಭಿವೃದ್ಧಿ ಪ್ರಾಧಿಕಾರಗಳನ್ನು ಚುರುಕುಗೊಳಿಸಿ, ಭೂ ಸ್ವಾಧೀನ ಪ್ರಕ್ರಿಯೆಯನ್ನು ಮತ್ತಷ್ಟು ಕ್ಷಿಪ್ರಗೊಳಿಸಲಾರಂಭಿಸಿದ್ದವು. ಈ ಹಂತದಲ್ಲಿ ರಾಜ್ಯದ ಔದ್ಯಮಿಕ-ಆರ್ಥಿಕ ಬೆಳವಣಿಗೆಗೆ ಪೂರಕವಾಗಿ ಪರಿಣಮಿಸಿದ್ದು ರಿಯಲ್‌ ಎಸ್ಟೇಟ್‌ ವಹಿವಾಟು ಮತ್ತು ಕಟ್ಟಡ ನಿರ್ಮಾಣ ಕಾಮಗಾರಿಗಳು. ನಗರ ಪ್ರದೇಶಗಳಿಗೆ ಹೊಂದಿಕೊಂಡಂತಿದ್ದ ಹಾಗೂ ಸಮೀಪದಲ್ಲಿದ್ದ ಗ್ರಾಮೀಣ ಭೂಹೀನ ರೈತರು, ಸಣ್ಣ-ಅತಿಸಣ್ಣ ರೈತರು ಹಾಗೂ ಕೃಷಿ ಕಾರ್ಮಿಕರು ತಮ್ಮ ಭೂಮಿ ಮತ್ತು ಗ್ರಾಮೀಣ ಕಸುಬುಗಳನ್ನು ನಗರೀಕರಣಕ್ಕಾಗಿ ಕಳೆದುಕೊಂಡು, ಇದೇ ನಗರಗಳಲ್ಲಿ ಕಟ್ಟಡ ಕಾರ್ಮಿಕರಾಗಿ, ವಲಸೆ ಕಾರ್ಮಿಕರಾಗಿ ದುಡಿಯಬೇಕಾಗಿದ್ದು ಚರಿತ್ರೆಯ ಒಂದು ದುರಂತ.

 

ಸುತ್ತಲಿನ ವ್ಯವಸಾಯ ಭೂಮಿ, ಕೃಷಿಯೇತರ ಭೂಮಿ ಮತ್ತು ಸಾಮಾಜಿಕ ಅರಣ್ಯ ಪ್ರದೇಶಗಳನ್ನು ಆಕ್ರಮಿಸುತ್ತಲೇ ಬೆಳೆದ ನಗರಗಳನ್ನು ಪೋಷಿಸುವ ಸಲುವಾಗಿಯೇ ಸರ್ಕಾರಗಳು ಬಂಡವಾಳ ಹೂಡಿಕೆಗೆ ಹೆಚ್ಚಿನ ಅವಕಾಶವನ್ನು ಕಲ್ಪಿಸಿದವು. ವಿದೇಶಿ ನೇರ ಬಂಡವಾಳದೊಂದಿಗೇ ಸ್ಥಳೀಯವಾಗಿ ಈ ಬಂಡವಾಳ ಮಾರುಕಟ್ಟೆಯಲ್ಲಿ ಪ್ರಶಸ್ತ ನೆಲೆ ಪಡೆದಿದ್ದು ಮತ್ತದೇ ಪ್ರಬಲ ಜಾತಿಗಳ ಔದ್ಯಮಿಕ ಬಂಡವಾಳಗಾರರ ಸಮೂಹ. ತಮ್ಮ ಶೈಕ್ಷಣಿಕ/ವೈದ್ಯಕೀಯ/ಸೇವಾ ಕ್ಷೇತ್ರವನ್ನು ವಿಸ್ತರಿಸಿಕೊಳ್ಳುತ್ತಲೇ ಕರ್ನಾಟಕದ ಬಹುಪಾಲು ಪ್ರಬಲ ಜಾತಿ ಕೆಂದ್ರಿತ ಮಠಮಾನ್ಯಗಳು ತಮ್ಮದೇ ಆದ ಬಡಾವಣೆಗಳನ್ನೂ ಸಹ ನಿರ್ಮಿಸಲಾರಂಭಿಸಿದ್ದನ್ನು 2010ರ ನಂತರದ ಮಾರುಕಟ್ಟೆ ಬೆಳವಣಿಗೆಗಳಲ್ಲಿ ಸ್ಪಷ್ಟವಾಗಿ ಗುರುತಿಸಬಹುದು. ಒಂದು ಶೈಕ್ಷಣಿಕ ಸಂಸ್ಥೆ ಮತ್ತು ಪೂರಕವಾದ ವಿದ್ಯಾರ್ಥಿಗಳ ಹಾಸ್ಟೆಲ್‌ , ಒಂದು ಅತ್ಯಾಧುನಿಕ ಸುಸಜ್ಜಿತ ಆಸ್ಪತ್ರೆ ಮತ್ತು ಪೂರಕವಾದ ವೈದ್ಯಕೀಯ-ನರ್ಸಿಂಗ್‌ ಕಾಲೇಜು  ಪ್ರತಿಯೊಂದು ಜಾತಿ ಕೇಂದ್ರಿತ ಮಠವನ್ನು ಪೋಷಿಸುವ ವಾಣಿಜ್ಯ ಕೇಂದ್ರಗಳಾಗಿ ಪರಿವರ್ತಿತವಾದದ್ದು ಈ ಹಂತದಲ್ಲೇ.

 

ಈ ಮಾರುಕಟ್ಟೆ ಮತ್ತು ಬಂಡವಾಳ ಬೆಳವಣಿಗೆಗೆ ಸ್ಪಂದಿಸುವ ಸಲುವಾಗಿಯೇ ರಾಜ್ಯ ಸರ್ಕಾರಗಳು ಸಹ ಮಠಮಾನ್ಯಗಳಿಗೆ ಅಪಾರ ಪ್ರಮಾಣದ ಭೂಮಿಯನ್ನು ಒದಗಿಸುವುದಷ್ಟೇ ಅಲ್ಲದೆ ವಾರ್ಷಿಕ ಬಜೆಟ್‌ಗಳಲ್ಲಿ ಅನುದಾನವನ್ನೂ ಒದಗಿಸಲಾರಂಭಿಸಿದವು. ಕೆಲವು ಕ್ರೈಸ್ತ ಹಾಗೂ ಮುಸ್ಲಿಂ ಸಮುದಾಯದ ಶೈಕ್ಷಣಿಕ-ಧಾರ್ಮಿಕ ಸಂಸ್ಥೆಗಳೂ ಸಹ ಈ ಬೆಳವಣಿಗೆಯ ಫಲಾನುಭವಿಗಳಾಗಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಔದ್ಯಮಿಕ ಬೆಳವಣಿಗೆಯೊಂದಿಗೇ ವದ್ಧಿಯಾಗತೊಡಗಿದ ರಿಯಲ್‌ ಎಸ್ಟೇಟ್‌ ಮಾರುಕಟ್ಟೆ ಮತ್ತು ತತ್ಸಂಬಂಧಿತ ಭೂ ಸ್ವಾಧೀನ ಪ್ರಕ್ರಿಯೆಯಿಂದಲೇ ಕರ್ನಾಟಕದಲ್ಲಿ ರಿಯಲ್‌ ಎಸ್ಟೇಟ್‌ ಉದ್ಯಮವು ಬೃಹದಾಕಾರದಲ್ಲಿ ಬೆಳೆಯಲು ಸಾಧ್ಯವಾಯಿತು. 2008ರ ಮುನ್ನ ಹಾಗೂ ಆನಂತರದ ಭೂ ನಿವೇಶನಗಳ ಬೆಲೆಗಳನ್ನು ಗಮನಿಸಿದರೆ, ಕೇವಲ ಎರಡು ಮೂರು ವರ್ಷಗಳ ಅವಧಿಯಲ್ಲೇ ಕೋಲಾರದ ಚಿನ್ನದ ಗಣಿ ಖಾಲಿಯಾದರೂ, ಭೂಮಿಯೇ ರಿಯಲ್‌ ಎಸ್ಟೇಟ್‌ ಉದ್ಯಮಿಗಳ ಪಾಲಿಗೆ ಚಿನ್ನದಂತಾಯಿತು. ಹೊರವರ್ತುಲ ರಸ್ತೆಗಳು, ಹೆದ್ದಾರಿಗಳು ಮತ್ತು ಕಾರಿಡಾರ್‌ ರಸ್ತೆಗಳ ನಿರ್ಮಾಣಕ್ಕೆ ಚಾಲನೆ ದೊರೆತದ್ದೂ ಇದೇ ಕಾಲಘಟ್ಟದಲ್ಲೇ ಎನ್ನುವುದು ಗಮನಾರ್ಹ. ಹಾಗೆಯೇ ಕೆಳ ಮಧ್ಯಮ ವರ್ಗಗಳಿಗೆ, ಬಡಜನತೆಗೆ ನಿವೇಶನ ಮತ್ತು ವಸತಿ ಗಗನಕುಸುಮದಂತಾಗಿದ್ದೂ ಅವಧಿಯಿಂದಲೇ ಎನ್ನುವುದನ್ನೂ ಗಮನಿಸಬೇಕು.

 

ಬೆಂಗಳೂರನ್ನು ಸಿಂಗಾಪೂರ್‌ ಮಾಡುವ ರಾಜಕೀಯ ಮಹತ್ವಾಕಾಂಕ್ಷೆಯೊಂದಿಗೇ ಬೆಂಗಳೂರು ಹಾಗೂ ಮೈಸೂರು, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಶಿವಮೊಗ್ಗ , ಬೆಳಗಾವಿ ಮುಂತಾದ ನಗರಗಳೂ ಸಹ ತಮ್ಮ ಸುತ್ತಲಿನ ಹಳ್ಳಿಗಳನ್ನು, ಕೃಷಿ ಭೂಮಿಯನ್ನು ಆವಾಹಿಸಿಕೊಳ್ಳುತ್ತಲೇ ಮಹಾನಗರಗಳಾಗಿ ಬೆಳೆದಿದ್ದನ್ನು ಈ ಅವಧಿಯಲ್ಲಿ ಗುರುತಿಸಬಹುದು. 2008ರ ಜಾಗತಿಕ ಆರ್ಥಿಕ ಹಿಂಜರಿತದ ನಡುವೆಯೇ ಭಾರತದಲ್ಲಿ ಸರ್ಕಾರಗಳು ಉತ್ಪಾದಕೀಯ ಆರ್ಥಿಕತೆಗಿಂತಗಲೂ ಹೆಚ್ಚಿನ ಪ್ರಾಮುಖ್ಯತೆಯನ್ನು ಮೂಲ ಸೌಕರ್ಯಗಳ ಅಭಿವೃದ್ಧಿಗೆ ನೀಡುತ್ತಾ ಬಂದಿರುವುದನ್ನೂ ಸೂಕ್ಷ್ಮವಾಗಿ ಗಮನಿಸಬೇಕಿದೆ. ಹಾಗಾಗಿಯೇ ಔದ್ಯಮಿಕ ಬಂಡವಾಳಗಾರರು ಮೂಲ ಸೌಕರ್ಯಗಳೆಡೆಗೆ ತಮ್ಮ ಪಯಣ ಆರಂಭಿಸಿದ್ದರು. ಗೌತಮ್‌ ಅದಾನಿ ಸಾಮ್ರಾಜ್ಯವು ಬೆಳೆದದ್ದೂ ಇದೇ ಅವಧಿಯಲ್ಲೇ. ಹೆಚ್ಚಿನ ಉದ್ಯೋಗ ಸೃಷ್ಟಿಸುವ ಉತ್ಪಾದಕ ಆರ್ಥಿಕತೆಯ ಸ್ಥಾನವನ್ನು ಬಂಡವಾಳಗಾರರಿಗೆ ಹೆಚ್ಚಿನ ಸಂಪತ್ತನ್ನು ಸೃಷ್ಟಿಸುವ ಅನುತ್ಪಾದಕ ಆರ್ಥಿಕತೆ ಆವರಿಸಿಕೊಂಡಿತ್ತು.

 

ಕೋವಿದ್‌ ಸಾಂಕ್ರಾಮಿಕದ ಹೊರತಾಗಿಯೂ ಭಾರತದಲ್ಲಿ ಶಾಶ್ವತ  ಉದ್ಯೋಗಗಳ ಸೃಷ್ಟಿ ಕ್ಷೀಣಿಸತೊಡಗಿದ್ದು ಹಾಗೂ ವಲಸೆ ಕಾರ್ಮಿಕರ ಸಂಖ್ಯೆ ಹೆಚ್ಚಾಗತೊಡಗಿದ್ದು ಮತ್ತು ತಕ್ಷಣದ ಅವಶ್ಯಕತೆಗಳನ್ನಷ್ಟೇ ಪೂರೈಸುವಂತಹ ತಾತ್ಕಾಲಿಕ ಉದ್ಯೋಗಾವಕಾಶಗಳ ಪ್ರಮಾಣ ಹೆಚ್ಚಾಗಿದ್ದನ್ನೂ ಸಹ ಕಳೆದ ಹತ್ತು ವರ್ಷಗಳ ಆರ್ಥಿಕ ಬೆಳವಣಿಗೆಯ ನಡುವೆ ಗುರುತಿಸಬಹುದು. ಇದೇ ಸಮಯದಲ್ಲೇ ಸರ್ಕಾರದ ಹೊಸ ಆಡಳಿತ/ಆರ್ಥಿಕ ನೀತಿಗಳು ಹಾಗೂ ಶಿಕ್ಷಣ ನೀತಿಗಳು ಬದಲಾಗಿದ್ದರ ಪರಿಣಾಮ, ಶೈಕ್ಷಣಿಕ ವಲಯದ ಖಾಸಗೀಕರಣ-ವಾಣಿಜ್ಯೀಕರಣ-ಕಾರ್ಪೋರೇಟೀಕರಣ ಪ್ರಕ್ರಿಯೆ ಉಚ್ಛ್ರಾಯ ಮಟ್ಟ ತಲುಪಿದ್ದನ್ನೂ ಪರಾಮರ್ಶಿಸಬೇಕಿದೆ. ಈ ಹೊಸ ವಾತಾವರಣದಲ್ಲಿ ಸೃಷ್ಟಿಯಾದ ರಾಜಕೀಯ ಸನ್ನಿವೇಶಗಳೇ 2008 ಆಪರೇಷನ್‌ ಕಮಲದ ಕಾರ್ಯಾಚರಣೆಗೂ ನೆರವಾಗಿದ್ದು ವಾಸ್ತವ.

 

ಬದಲಾದ ರಾಜಕೀಯ ವಾತಾವರಣ

 

ಈ ಹಂತದಿಂದಲೇ ಕರ್ನಾಟಕದಲ್ಲಿ ರಾಜಕೀಯ ಅಧಿಕಾರ ಮತ್ತು ಅಧಿಕಾರ ರಾಜಕಾರಣ ಎರಡೂ ಸಹ ಔದ್ಯಮಿಕ ಪ್ರಭಾವಕ್ಕೊಳಗಾಗಲು ಆರಂಭಿಸಿದವು. ಚುನಾವಣೆ ಎನ್ನುವುದು ಸಿರಿವಂತರ ಮೈದಾನವಾಗತೊಡಗಿತ್ತು. ಕೋಟ್ಯಂತರ ರೂ ಬಂಡವಾಳ ಹೂಡುವ ಒಂದು ಉದ್ದಿಮೆಯಾಗಿ ಜನಪ್ರತಿನಿಧಿಗಳು ತಮ್ಮ ಭವಿಷ್ಯವನ್ನು ನಿರ್ಧರಿಸಿಕೊಳ್ಳಲು ಮುಂದಾದರು. ಹಾಗಾಗಿಯೇ ಬಹುಮಟ್ಟಿಗೆ ಉದ್ಯಮಿಗಳು, ಬಂಡವಾಳಿಗರು ಮಾತ್ರವೇ ಅಧಿಕಾರ ರಾಜಕಾರಣವನ್ನು ಪ್ರವೇಶಿಸಿ ಆಕ್ರಮಿಸಲು ಸಾಧ್ಯವಾಗುವ ಒಂದು ಸನ್ನಿವೇಶವೂ ಸೃಷ್ಟಿಯಾಯಿತು. ಜಾತಿ ಕೇಂದ್ರಿತ ರಾಜಕಾರಣ ಮತ್ತು ರಾಜಕೀಯದ ಔದ್ಯಮಿಕ ಹಿತಾಸಕ್ತಿಗಳ ಸಮೀಕರಣದಲ್ಲಿ ಪ್ರಬಲ ಜಾತಿಗಳ ಮಠಗಳು ತಮ್ಮ ರಾಜಕೀಯ ಪ್ರಾಬಲ್ಯವನ್ನೂ ವಿಸ್ತರಿಸಿಕೊಂಡವು. ಮುಖ್ಯಮಂತ್ರಿಯ ಆಯ್ಕೆಯನ್ನೂ ಪ್ರಭಾವಿಸುವ ಮಟ್ಟಿಗೆ ಜಾತಿ ಕೇಂದ್ರಿತ ಮಠಗಳು ರಾಜಕೀಯ ಪ್ರಭಾವವನ್ನು ವಿಸ್ತರಿಸಿಕೊಂಡಿದ್ದನ್ನು 2013ರ ನಂತರದ ರಾಜಕಾರಣದಲ್ಲಿ ಸ್ಪಷ್ಟವಾಗಿ ಗುರುತಿಸುತ್ತಲೇ ಬಂದಿದ್ದೇವೆ.

 

ಮಾರುಕಟ್ಟೆ-ಬಂಡವಾಳ ಹಾಗೂ ಔದ್ಯಮಿಕ ಕೇಂದ್ರಗಳಿಂದಲೇ ನಿಯಂತ್ರಿಸಲ್ಪಟ್ಟ ಕರ್ನಾಟಕದ ರಾಜಕಾರಣದಲ್ಲಿ ಜನಪ್ರತಿನಿಧಿಗಳ ಪ್ರಾತಿನಿಧ್ಯವನ್ನೂ ಸಹ ಈ ಮೂರು ಕೇಂದ್ರಗಳಿಂದಲೇ ಗುರುತಿಸುವಂತಾಗಿರುವುದು ವಾಸ್ತವ. ಹಾಗಾಗಿಯೇ ಪ್ರಸ್ತುತ ಚುನಾವಣೆಗಳಲ್ಲಿ ಕೋಟ್ಯಧಿಪತಿಗಳ ಸಂಖ್ಯೆ ಹೆಚ್ಚಾಗಿದೆ. ಹಾಗೆಯೇ ಅಪರಾಧದ ಹಿನ್ನೆಲೆ ಇರುವ ರಾಜಕಾರಣಿಗಳ ಸಂಖ್ಯೆಯೂ ಹೆಚ್ಚಾಗಿದೆ. ಔದ್ಯಮಿಕ ಬೆಳವಣಿಗೆಗೂ, ಬಂಡವಾಳಶಾಹಿ ಮಾರುಕಟ್ಟೆ ಆರ್ಥಿಕತೆಯ ಚಟುವಟಿಕೆಗಳಿಗೂ ಸಮಾಜದಲ್ಲಿ ಅಪರಾಧೀಕರಣದ ಪ್ರಮಾಣ ಹೆಚ್ಚಾಗುತ್ತಿರುವುದಕ್ಕೂ ನೇರ ಸಂಬಂಧ ಸಹಜವಾಗಿಯೇ ಇರುವುದರಿಂದ ರಾಜಕೀಯ ವಲಯದಲ್ಲೂ ಸಹ ಅಪರಾಧದ ಹಿನ್ನೆಲೆ ಇರುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಬಂಡವಾಳಶಾಹಿ ಆರ್ಥಿಕತೆಯಲ್ಲಿ ಸಂಪತ್ತಿನ ಶೇಖರಣೆಗೂ, ಸಾಮಾಜಿಕ-ರಾಜಕೀಯ ಅಪರಾಧೀಕರಣದ ಹೆಚ್ಚಳಕ್ಕೂ ಹಾಗೂ ಆಡಳಿತ ವ್ಯವಸ್ಥೆಯೊಳಗಿನ ಭ್ರಷ್ಟಾಚಾರಕ್ಕೂ ನೇರವಾದ ಸಂಬಂಧ ಇರುವುದನ್ನು ಗಮನಿಸಿದಾಗ ಕರ್ನಾಟಕದ ರಾಜಕೀಯ ಭೂಪಟದಲ್ಲಿ ಉಂಟಾಗಿರುವ ಅಪಾರ ವ್ಯತ್ಯಯವನ್ನು ಅರ್ಥಮಾಡಿಕೊಳ್ಳಲು ಸಾಧ್ಯ.

 

ರಾಜಕೀಯವನ್ನು ಅಪರಾಧೀಕರಣದಿಂದ ಮುಕ್ತಗೊಳಿಸಬೇಕು ಎಂಬ ಕೂಗು 1990ರ ದಶಕದಲ್ಲಿ ಕೇಳಿಬರುತ್ತಿತ್ತು. ಇಂದು ಈ ಕೂಗು ಇಲ್ಲವಾಗಿದೆ. ಅಪರಾಧದ ಹಿನ್ನೆಲೆಯಿರುವ ಅಭ್ಯರ್ಥಿಗಳ ಸಂಖ್ಯೆ  2018ರಲ್ಲಿ  316 ಇದ್ದುದು ಈ ಚುನಾವಣೆಗಳಲ್ಲಿ 458ಕ್ಕೆ ಏರಿದೆ. ಹಾಗೆಯೇ ಮೂರು ಪ್ರಧಾನ ಪಕ್ಷಗಳಿಂದ ಚುನಾವಣಾ ಕಣದಲ್ಲಿದ್ದ ಕೋಟ್ಯಧಿಪತಿಗಳ ಸಂಖ್ಯೆ  569 ರಿಂದ 601ಕ್ಕೆ ಏರಿದೆ. ಈ ವಿದ್ಯಮಾನದ ಕಾರಣಗಳನ್ನು, ಆಳ ಅಗಲವನ್ನು ಗಂಭೀರವಾಗಿ ಶೋಧಿಸಬೇಕಿದೆ. ಹಾಗೆಯೇ ಭ್ರಷ್ಟಾಚಾರ ಮುಕ್ತ-ಅಪರಾಧ ಮುಕ್ತ- ಲಂಚ ಮುಕ್ತ ರಾಜಕಾರಣಕ್ಕಾಗಿ ಮತದಾರರೇ ಮುಂದಾಳತ್ವ ವಹಿಸುವ ಕಾಲ ಸನ್ನಿಹಿತವಾಗಿದೆ.

( ಅಪರಾಧೀಕರಣ ಹೆಚ್ಚಳಕ್ಕೆ ಕಾರಣಗಳೇನು ? ಮುಂದಿನ ಲೇಖನದಲ್ಲಿ )

-೦-೦-೦-