ಜಮಾಲ

ಜಮಾಲನ ಕೋಳಿ ಸತ್ತು ಹೋದುದರ ಬಗ್ಗೆ ಸಂಕಟ ಅನುಭವಿಸುತ್ತ, ಅಜ್ಜಿಯನ್ನು ಬೈಯ್ಯುತ್ತ, ದೊಡ್ಡದಾಗಿ ಮಾತನಾಡಲು ಧೈರ್ಯ ಸಾಲದೆ ಪಿಸುಗುಡುತ್ತ ಕಾಲ ಕಳೆಯುತ್ತಿದ್ದೆವು. ಕೋಳಿ ಹುಚ್ಚುಕಮ್ಲಿಯ ಬಳಿಯೇ ಇದ್ದಿದ್ದರೆ ಖಂಡಿತವಾಗಿ ಜಮಾಲನಿಗೆ ಮೋಸವಾಗುತ್ತಿರಲಿಲ್ಲ ಅನ್ನಿಸತೊಡಗಿತು. ಅಜ್ಜಿಗಿಂತ ಹುಚ್ಚುಕಮ್ಲಿಯೇ ಒಳ್ಳೆಯವಳೆಂಬ ತೀರ್ಮಾನಕ್ಕೆ ಬಂದೆವು.

ಜಮಾಲ

ಕತಾ ಸರಿತ್ಸಾಗರ 

ಡಾ|| ಮಿರ್ಜಾ ಬಷೀರ್ 

 

     “ಬೆಳ್ಳೂಡಿ ಖಾಸಿಂಸಾಬನ ಮಗ ಜಮಾಲ ಆದ ನಾನು ನವಿಲೇಹಾಳಿನಿಂದ ಬೇಡುವ ಆಶೀರ್ವಾದಗಳು. ಇತ್ತಕಡೆ ನಾವೆಲ್ಲರೂ ಆರೋಗ್ಯದಿಂದಿದ್ದು ತಮ್ಮ ಕಡೆಯಿಂದ ಕ್ಷೇಮ ಸಮಾಚಾರಗಳನ್ನು ತಿಳಿಯಲು ನಾವೆಲ್ಲ ಉತ್ಸುಕರಾಗಿದ್ದೇವೆ. ನಿಮಗೆ ತಿಳಿದಿರುವಂತೆ ನನ್ನ ಅಪ್ಪ ಅಮ್ಮ ಇಬ್ಬರೂ ಸ್ವರ್ಗಸ್ಥರಾಗಿ ಮನೆಯಲ್ಲಿ ನಾನು ಮತ್ತು ನನ್ನ ತಂಗಿ ಇಬ್ಬರೇ ಬದುಕುಳಿದಿದ್ದೇವೆ. ನಾನು ಎಷ್ಟೇ ಕಷ್ಟಪಟ್ಟು ಓದಿದರೂ ಎಸ್ಸೆಸ್ಸೆಲ್ಸಿಯಲ್ಲಿ ಈಗ ಐದು ವರ್ಷಗಳಿಂದ ಸತತವಾಗಿ ಫೇಲಾಗಿದ್ದೇನೆ. ಮಿಕ್ಕೆಲ್ಲ ಸಬ್ಜೆಕ್ಟ್ನಲ್ಲಿ ಪಾಸಾಗಿದ್ದರೂ ಇಂಗ್ಲಿಷ್ ಭಾಷೆ ಮಾತ್ರ ನನ್ನ ಪ್ರಾಣ ಹಿಂಡುತ್ತಿದೆ. ಕಳೆದ ಪ್ರಯತ್ನದಲ್ಲಿ ಬರೀ ಮೂರು ಮಾರ್ಕುಗಳಿಂದ ಫೇಲಾದೆ. ಇದೊಂದು ಸಬ್ಜೆಕ್ಟ್ನಲ್ಲಿ ಪಾಸಾದರೆ ನನಗೆ ಯಾವುದಾದರೂ ಸರ್ಕಾರಿ ಕೆಲಸ ಸಿಕ್ಕೇಸಿಗುತ್ತದೆ. ನನ್ನ ತಂಗಿಯ ಮದುವೆ ಮಾಡಿದರೆ ನನ್ನ ತಂದೆ-ತಾಯಿಯರ ಆತ್ಮಗಳಿಗೂ ಶಾಂತಿ ಸಿಗುತ್ತದೆ. ನನ್ನ ಮನೆ ನೆಲೆ ನಿಲ್ಲುತ್ತದೆ. ಸರೀಕರ ಎದುರು ನಾನೂ ತಲೆ ಎತ್ತಿ ಓಡಾಬಹುದು.

    ಮೊನ್ನೆಯದಿನ ಇದನ್ನೆಲ್ಲ ಹಿರಿಯರೂ ಗೌರವಾನ್ವಿತರೂ ಆದ ನಿಮ್ಮ ಅತ್ತೆ ಪಾತಜ್ಜಿಯವರ ಬಳಿ ಹೇಳಿಕೊಂಡಾಗ ಅವರು ಒಂದು ಉಪಾಯ ಹೇಳಿಕೊಟ್ಟಿದ್ದಾರೆ. ಹೇಗಿದ್ದರೂ ನೀವು ಹೈಸ್ಕೂಲು ಮಾಸ್ಟರಾಗಿರುತ್ತೀರಿ. ಈ ಬಾರಿ ಎಸ್ಸೆಸ್ಸೆಲ್ಸಿ ಪೇಪರ್ ಕರೆಕ್ಷನ್‌ಗೆ ಬೆಂಗಳೂರಿಗೆ ಹೋಗುತ್ತಿದ್ದೀರಂತೆ. ಅದರಲ್ಲೂ ನೀವು ಇಂಗ್ಲಿಷ್‌ನ ಉತ್ತರ ಪತ್ರಿಕೆಗಳನ್ನು ಕರೆಕ್ಟ್ ಮಾಡಲು ಹೋಗುತ್ತಿದ್ದೀರೆಂದು ನಿಮ್ಮ ಅತ್ತೆಯವರು ತಿಳಿಸಲಾಗಿ, ನನಗೆ ಭವಿಷ್ಯದ ಬಾಗಿಲೇ ತೆರೆದಂತಾಗಿದೆ. ಈ ಬಾರಿಯೂ ನಾನು ಪರೀಕ್ಷೆ ಬರೆದಿದ್ದೇನೆ. ಅರ್ಥವಾಗದ ಇಂಗ್ಲಿಷ್ ಭಾಷೆಯಾದ್ದರಿಂದ ಏನು ಬರೆದಿದ್ದೇನೆ ಎಂಬುದು ನನಗೇ ಗೊತ್ತಿಲ್ಲ. ನನ್ನ ಉತ್ತರ ಪತ್ರಿಕೆಯು ತಮಗೆ ಸಿಕ್ಕರೆ ದಯಮಾಡಿ ನನ್ನನ್ನು ಪಾಸು ಮಾಡಿ. ನನಗೆ ಹೆಚ್ಚೇನೂ ಮಾರ್ಕು ಬೇಡ. 35 ಮಾರ್ಕು ಕೊಟ್ಟರೆ ಸಾಕು. ಅಕಸ್ಮಾತ್ ಉತ್ತರ ಪತ್ರಿಕೆಯು ತಮಗೆ ಸಿಗದೇ ಹೋದರೆ ನಿಮ್ಮ ಸ್ನೇಹಿತರಲ್ಲಿ ಯಾರಿಗೇ ಬಂದರೂ ಅಥವ ಯಾರಿಗೆ ಸಿಗುತ್ತದೋ ಅವರನ್ನು ಪತ್ತೆಹಚ್ಚಿ ಪಾಸು ಮಾಡಲು ತಿಳಿಸಿ. ದೇವರಂಥ ತಮ್ಮ ಮಾತನ್ನು ಯಾರೂ ತೆಗೆದುಹಾಕುವುದಿಲ್ಲ ಎಂದು ನಿಮ್ಮ ಅತ್ತೆಯವರು ತಿಳಿಸಿರುತ್ತಾರೆ. ದಯವಿಟ್ಟು ಬಡವನಾದ, ನಿಮ್ಮ ಕರುಳುಬಳ್ಳಿಯವನೇ ಆದ ನನಗೆ ಸಹಾಯ ಮಾಡಿ, ಕತ್ತಲೆ ತುಂಬಿರುವ ನನ್ನ ಬಾಳಿsಗೆ ಬೆಳಕಾಗಿ, ನನಗೆ ಗೌರ್ಮೆಂಟು ಕೆಲಸ ಸಿಕ್ಕು, ನನ್ನ ತಂಗಿಯ ಮದುವೆ ಮಾಡುವಂತಾದರೆ, ಆ ಪುಣ್ಯವೆಲ್ಲ ನಿಮಗೇ ಸಿಕ್ಕಂತಾಗುತ್ತದೆ. ನಿಮ್ಮ ಶ್ರೀಮತಿಯವರು ಸಂಬಂಧದಲ್ಲಿ ನನಗೆ ಅತ್ತೆಯವರಾಗಬೇಕು. ಅವರಿಗೆ ನನ್ನ ನಮಸ್ಕಾರಗಳನ್ನು ತಿಳಿಸಿ. ನಿಮ್ಮ ಮಕ್ಕಳಿಗೆ ನನ್ನ ನೆನಪುಗಳನ್ನು ತಿಳಿಸಿರಿ. ಅಪರಿಚಿತನಾದರೂ ಹೀಗೆ ಪತ್ರ ಬರೆಯುತ್ತಿರುವ ನನ್ನನ್ನು ಅಖಂಡ ಕರುಣಾಮಯಿಗಳಾದ ತಾವು ಕ್ಷಮಿಸುವಿರೆಂದು ಭಾವಿಸುತ್ತೇನೆ. ನನ್ನ ರಿಜಿಸ್ಟರ್ ಸಂಖ್ಯೆ .............”

      1965 ರ ಸುಮಾರಿಗೆ ನಾವೆಲ್ಲ ಸಣ್ಣವರಿದ್ದಾಗ ಅಮ್ಮನ ತವರೂರಿನವನೂ, ದೂರದ ಸಂಬಂಧಿಯೂ ಆದ ಜಮಾಲ್ ಎಂಬ ಹುಡುಗನಿಂದ ಒಂದು ತಿಂಗಳ ಅಂತರದಲ್ಲಿಯೇ ಈ ತರಹದ ಹತ್ತಾರು ಪತ್ರಗಳು ನಮ್ಮ ತಂದೆಯವರಿಗೆ ಬಂದವು. ನಮ್ಮ ತಂದೆಯವರು ಚಳ್ಳಕೆರೆಯಲ್ಲಿ ಹೈಸ್ಕೂಲ್ ಮಾಸ್ಟರಾಗಿದ್ದು ವರ್ಷ ವರ್ಷವೂ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಕರೆಕ್ಟ್ ಮಾಡಲು ಬೆಂಗಳೂರಿಗೆ ಹೋಗುತ್ತಿದ್ದರು. ಸ್ವಭಾವತಃ ಕರುಣಾಮಯಿಯೂ, ಬಡವರ ಪಕ್ಷಪಾತಿಯೂ ಆಗಿದ್ದ ನಮ್ಮ ತಂದೆಯವರು ಜಮಾಲನ ಪತ್ರಗಳನ್ನು ಓದಿ ದೊಡ್ಡದಾಗಿ ನಕ್ಕು ಸುಮ್ಮನಾಗಿದ್ದರು.

     ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಲ್ಲಿ ಓದುತ್ತಿದ್ದ ನಾವು ಐದು ಜನ ಮಕ್ಕಳು ಬಹಳ ಕುತೂಹಲದಿಂದ ತಂದೆಯವರನ್ನು ಗಮನಿಸುತ್ತಿದ್ದೆವು. ಜಮಾಲನ ಉತ್ತರ ಪತ್ರಿಕೆ ತಂದೆಯವರಿಗೆ ಸಿಗಬಹುದೆ? ತಂದೆಯವರ ಸ್ನೇಹಿತರಿಗಾರಿಗಾದರೂ ಸಿಗಬಹುದೆ? ತಂದೆ-ತಾಯಿಯರಿಲ್ಲದ ಜಮಾಲ ಈ ಬಾರಿಯಾದರೂ ಪಾಸಾಗಬಹುದೇ? ಜಮಾಲ ಪಾಸಾಗಲಿ, ಅವನಿಗೆ ಗೌರ್ಮೆಂಟ್ ಕೆಲಸ ಸಿಗಲಿ, ಅವನ ತಂಗಿಯ ಮದುವೆಯಾಗಲಿ, ಅವನ ತಂದೆ-ತಾಯಿಯರ ಆತ್ಮಗಳಿಗೆ ಶಾಂತಿ ಸಿಗಲಿ (ಹಾಗೆಂದರೇನೆಂದು ಅರ್ಥವಾಗದಿದ್ದರೂ!) ಎಂದು ಆಸೆಪಡುತ್ತಿದ್ದೆವು. ನಾವೆಲ್ಲ ನಮ್ಮ ತಾಯಿಗೆ ಕಾಟಕೊಟ್ಟು “ಜಮಾಲ ಪಾಸಾಗಲು ಏನಾದರೂ ಮಾಡಲು ತಂದೆಯವರಿಗೆ ತಿಳಿಸು” ಎಂದು ಒತ್ತಾಯಿಸುತ್ತಿದ್ದೆವು. ಆದರೆ ಅಂಥ ವಿಷಯಗಳಲ್ಲಿ ಬಹಳ ನಿಷ್ಠೂರರೂ, ಸಿಟ್ಟಿನವರೂ ಆದ ತಂದೆ ಯಾರ ಮಾತನ್ನೂ ಕೇಳುತ್ತಿರಲಿಲ್ಲ. ಅಮ್ಮ ಒಂದೆರಡು ಸಲ ಈ ವಿಷಯ ಪ್ರಸ್ತಾಪಿಸಿದಾಗ ತಂದೆಯವರು ಆ ಮಾತುಗಳನ್ನು ಕಿವಿಯ ಮೇಲೆ ಹಾಕಿಕೊಳ್ಳಲಿಲ್ಲ. ಮೌನವಾಗಿದ್ದ ತಂದೆಯವರ ಮನಸ್ಸಿನಲ್ಲೇನಿತ್ತು ಎನ್ನುವುದು ಮಕ್ಕಳಾದ ನಮಗೆ ಒಗಟಾಗಿತ್ತು. ಈ ಹಿಂದೆ ಅಮ್ಮನ ತವರಲ್ಲಿ ಜಮಾಲನನ್ನು ನೋಡಿದ್ದೆವಾದರೂ ಅಷ್ಟಾಗಿ ಗಮನಿಸಿರಲಿಲ್ಲ.

    ಆ ವರ್ಷದ ಬೇಸಿಗೆ ರಜಕ್ಕೆ ಅಮ್ಮನೊಟ್ಟಿಗೆ ಅವಳ ತವರಿಗೆ ಹೋದೆವು. ನಾವೆಲ್ಲ ಜಮಾಲನನ್ನು ಕಂಡು ಮಾತನಾಡಿಸಲು ಉತ್ಸುಕರಾಗಿದ್ದೆವು. ಚಳ್ಳಕೆರೆಯಿಂದ ದಾವಣಗೆರೆಗೆ ಒಂದು ಬಸ್ಸಿನಲ್ಲಿ ಪ್ರಯಾಣಿಸಿ ಅಲ್ಲಿಂದ ಮತ್ತೊಂದು ಬಸ್ಸಿನಲ್ಲಿ ದೊಡ್ಡಘಟ್ಟ ಎಂಬಲ್ಲಿ ಇಳಿದೆವು. ಅಲ್ಲಿಂದ ಅಮ್ಮನ ತವರಾದ ನವಿಲೇಹಾಳಿಗೆ ಎರಡು ಕಿಲೋಮೀಟರ್ ದೂರವಿತ್ತು. ಪ್ರತಿಸಲವೂ ನಮ್ಮನ್ನು ಕರೆದೊಯ್ಯಲು ಅಜ್ಜಿಯ ಮನೆಯಿಂದ ಎತ್ತಿನಗಾಡಿ ಬರುತ್ತಿತ್ತು. ಈ ಸಲದ ವಿಶೇಷ ಏನೆಂದರೆ, ಅಜ್ಜಿಯ ಮನೆಯಲ್ಲಿ ಸಂಬಳಕ್ಕೆ ದುಡಿಯುತ್ತಿದ್ದ ಜಮಾಲನೇ ಗಾಡಿ ಹೊಡೆದುಕೊಂಡು ಬಂದಿದ್ದ. ಕೂಡಲೆ ಜಮಾಲನಿಗೆ ನಮ್ಮ ತಂದೆಯವರು ಪೇಪರ್ ಕರೆಕ್ಷನ್‌ಗೆ ಬೆಂಗಳೂರಿಗೆ ಹೋದ ವಿಷಯ ಪ್ರಕಟಪಡಿಸಿದೆವು. ಜಮಾಲ ಬಹಳ ಉತ್ಸಾಹಿತನಾಗಿ ಗಾಡಿ ಓಡಿಸತೊಡಗಿದ.

     ಅಲ್ಲಲ್ಲಿ ಹರಿದ ದೊಗಳೇ ಅಂಗಿ ಪೈಜಾಮ ತೊಟ್ಟಿದ್ದ ಜಮಾಲ, ಅವನ ಬಡತನ ಮತ್ತು ತಬ್ಬಲಿತನಗಳು ಅವನ ಹರಿದ ಬಟ್ಟೆ ಮತ್ತು ಸಣಕಲು ಶರೀರದ ಮೂಲಕ ದೃಗ್ಗೋಚರವಾಗಿ ನಮ್ಮನ್ನೆಲ್ಲ ವಿಷಾದದಲ್ಲಿ ಅದ್ದಿದವು. ತೀರ ಸಣ್ಣವನಾದ ನನ್ನ ಗಂಟಲು ಕಟ್ಟಿದಂತಾಯಿತು. ನಮ್ಮ ತಂದೆಯವರು ಯಾವ ಗುಟ್ಟು ಬಿಟ್ಟುಕೊಡದಿದ್ದರೂ ಜಮಾಲನಿಗೆ ಒಳ್ಳೆಯದಾಗುವಂತೆ ಏನಾದರೂ ಮಾಡಬಹುದು ಎಂಬ ಆಸೆ ನನ್ನ ಮನಸ್ಸಿನ ಮೂಲೆಯಲ್ಲಿ ಮಿಂಚಿ ಮಾಯವಾಯಿತು. 

    ಆ ಬಾರಿ ಬೇಸಿಗೆ ರಜೆಯಲ್ಲಿ ನಾವೆಲ್ಲ ಜಮಾಲನ ಮುಂದಾಳತ್ವದಲ್ಲಿ ಹೊಲ ಗದ್ದೆ ತೋಟ ಕಣ ಗರಡಿಮನೆ ಸುತ್ತಮುತ್ತ ಇದ್ದ ಹಲವು ಹಳ್ಳಿಗಳನ್ನು ಅಲೆಯುತ್ತ, ಗೋಲಿ ಬುಗುರಿ ಚಿನ್ನಿದಾಂಡು ಆಟವಾಡುತ್ತ ಕಾಲ ಕಳೆದೆವು. ಚಿನ್ನಿದಾಂಡು ಆಟದಲ್ಲಿ ಜಮಾಲನನ್ನು ಸೋಲಿಸುವವರೇ ಇರದ ಅದ್ಭುತ ಆಟಗಾರನಾಗಿದ್ದ. ‘ಸ್ಕೋರು-ಬ್ಯಾಂಕು’ ಆಟದಲ್ಲಿ ಅವನಿದ್ದ ತಂಡವೇ ಗೆಲ್ಲುವುದು ನಿಶ್ಚಿತವಾಗಿತ್ತು. ಎದುರು ತಂಡದವರು ಹೊಡೆಯುವ ಚಿನ್ನಿಯನ್ನು ಕ್ಯಾಚ್ ಹಿಡಿಯುವುದರಲ್ಲಿ ನಿಸ್ಸೀಮನಾಗಿದ್ದ. ‘ಗಂಜಿ ಬೀಸು’ ಎಂಬ ಆಟದಲ್ಲಿ ಎದುರು ತಂಡದವರು ಸೋತು ಸುಣ್ಣವಾಗುತ್ತಿದ್ದರು. ಎಲ್ಲೋ ಅಲ್ವಸ್ವಲ್ಪ ಹರಿಯುತ್ತಿದ್ದ ಶ್ಯಾಗಲೆ ಹಳ್ಳದಲ್ಲಿ ಮೀನು ಹಿಡಿಯಲು ಸಹ ಒಂದೆರಡು ಬಾರಿ ಸೈಕಲ್ಲಿನಲ್ಲಿ ಹೋಗಿದ್ದೆವು. ಯಾರಿಗೂ ಸಿಗದ ಮೀನುಗಳು ಜಮಾಲ ಹಾಕಿದ ಗಾಳಕ್ಕೆ ಮೋಡಿಮಾಡಿದಂತೆ ಸಿಗುತ್ತಿದ್ದವು. ಈಜುವುದರಲ್ಲಿ ನವಿಲೇಹಾಳಿಗೆ ‘ನಂಬರ್ ಒನ್’ ಇದ್ದ ಜಮಾಲ ಯಾವುದೇ ಕೆರೆ ಕಟ್ಟೆ ಬಾವಿ ಇದ್ದರೂ ನಿರ್ಭಯವಾಗಿ ಈಜುವುದು ಪಟ್ಟಣದ ಹುಡುಗರಾದ ನಮಗೆ ಸೋಜಿಗವೆನಿಸುತ್ತಿತ್ತು.

    ಕದ್ದು ಮಾವಿನಕಾಯಿ ಕೀಳುವುದರಲ್ಲಿ, ಕಲ್ಲು ಹೊಡೆದು ಹುಣಸೇಕಾಯಿ ಕೆಡವುದರಲ್ಲಿ ಎತ್ತಿದ ಕೈ ಆಗಿದ್ದ ಜಮಾಲ ನಮಗೆ ಒಂದು ಆದರ್ಶವೇ ಆಗಿ ಹೋದ. ಇಡೀ ದಿನ ನಮ್ಮ ಮನೆಯಲ್ಲಿಯೇ ಇದ್ದು ದನಗಳಿಗೆ ಮೇವು ನೀರು ಹಾಕುವುದು, ಕೊಟ್ಟಿಗೆ ತೊಳೆಯುವುದು, ಬಾವಿಗೆ ಹೋಗಿ ನೀರು ತರುವುದು, ಕೂಲಿಯಾಳುಗಳಿಗೆ ಬುತ್ತಿ ತೆಗೆದುಕೊಂಡು ಹೊಲಗಳಿಗೆ ಹೋಗಿ ಬರುವುದು, ಮನೆಯ ಪಕ್ಕವೇ ಇದ್ದ ಸೋದರಮಾವನ ಅಂಗಡಿಯಲ್ಲಿ ಸಾಮಾನುಗಳನ್ನು ತೂಗುವುದು, ಅಳೆಯುವುದು ಮುಂತಾದ ಕೆಲಸ ನಿರ್ವಹಿಸುತ್ತ ನಮ್ಮ ಮನೆಯಲ್ಲಿಯೇ ಇದ್ದು ರಾತ್ರಿ ಮಾತ್ರ ತನ್ನ ಮನೆಗೆ ಹೋಗಿ ಮಲಗುತ್ತಿದ್ದ. ಅವನ ತಂಗಿ ನೂರ್‌ಜಹಾನ್‌ಳು ಸಹ ಬೆಳಿಗ್ಗೆ ಬಂದವಳೆ ಅಡಿಗೆಮನೆ, ಬಚ್ಚಲು, ಹಿತ್ತಿಲುಗಳಲ್ಲಿ ಹೇಳಿದ ಕೆಲಸ ಮಾಡುತ್ತ ಊಟ-ತಿಂಡಿಗಳನ್ನು ನಮ್ಮನೆಯಲ್ಲಿಯೇ ಮುಗಿಸಿಕೊಂಡು ರಾತ್ರಿ ಮಾತ್ರ ತನ್ನ ಮನೆಗೆ ಜಮಾಲನ ಜೊತೆ ಹೋಗುತ್ತಿದ್ದಳು. ಅತ್ಯಂತ ವಿಧೇಯಳಾದ ತಬ್ಬಲಿ ನೂರ್‌ಜಹಾನ್‌ಳೆಂದರೆ ನಮ್ಮಮ್ಮನಿಗೆ ಬಹಳ ಅಕ್ಕರೆ. ನಿಗಾ ವಹಿಸುವವರಿಲ್ಲದ ನೂರ್‌ಜಹಾನಳು ಮುಟ್ಟುಚಿಟ್ಟುಗಳನ್ನು ಹೇಗೆ ನಿಭಾಯಿಸುತ್ತಾಳೆ ಎಂದು ಕಳವಳಗೊಳ್ಳುತ್ತಿದ್ದಳು. ಊರಿನ ಪೋಲಿಪೋಕರಿಗಳ ಬಗ್ಗೆ ಎಚ್ಚರದಿಂದಿರಲು ಜಮಾಲನಿಗೆ ತಿಳಿಹೇಳುತ್ತಿದ್ದಳು. ಒಬ್ಬಂಟಿ ಹುಡುಗಿಯ ಕಷ್ಟಗಳ ಬಗ್ಗೆ ಅಮ್ಮ ವ್ಯಸನಗೊಂಡಂತಿತ್ತು. ರಾತ್ರಿಯ ಊಟದ ನಂತರ ನೂರ್‌ಜಹಾನ್ ಮನೆಗೆ ಹೊರಟುನಿಂತರೆ ಜಮಾಲನಿಲ್ಲದಿದ್ದಾಗ ನಾವ್ಯಾರಾದರೂ ಒಂದಿಬ್ಬರು ಜೊತೆಗೆ ಹೋಗಬೇಕೆಂದು ಅಮ್ಮ ಕಡ್ಡಾಯ ಮಾಡಿದ್ದಳು. ಇದಕ್ಕೆ ವ್ಯತಿರಿಕ್ತವಾಗಿ ನಮ್ಮಜ್ಜಿ ಬಹಳ ಜಬರ್ದಸ್ತಿನ ಯಜಮಾನಿಯಾಗಿದ್ದಳು. ಜಮಾಲನಾಗಲೀ ನೂರ್‌ಜಹಾನ್‌ಳಾಗಲೀ ಒಂದು ನಿಮಿಷವೂ ವಿಶ್ರಾಂತಿ ತೆಗೆದುಕೊಳ್ಳದಂತೆ ಕೆಲಸಗಳನ್ನು ಹೇಳುತ್ತಿದ್ದಳು. ಅವರೇನಾದರೂ ಸಣ್ಣಪುಟ್ಟ ಸಾಮಾನುಗಳನ್ನು ಕದಿಯಬಹುದೆಂದು ಅವರ ಮೇಲೊಂದು ಕಣ್ಣಿಟ್ಟಿರಲು ನಮಗೆಲ್ಲ ತಾಕೀತು ಮಾಡುತ್ತಿದ್ದಳು.

    ಅವಳ ಬಾಯಿಂದ ಹೊರಡುತ್ತಿದ್ದ ವಾಕ್ಯದ ನಾಮಪದ ಸರ್ವನಾಮ ಕರ್ತೃಪದ ಕ್ರಿಯಾಪದಗಳೆಲ್ಲ ಪೋಲಿಪದಗಳಾಗಿ ರೂಪಾಂತರ ಹೊಂದಿ ಅತ್ಯಂತ ಅಶ್ಲೀಲ ಅರ್ಥವನ್ನು ಹೊತ್ತುಕೊಂಡು ದೊಡ್ಡ ಬಾಂಬಿನAತೆ ಎದುರಿದ್ದವರ ಮೇಲೆ ಎರಗುತ್ತಿದ್ದವು. ಬೆಳಿಗ್ಗೆಯಿಂದ ರಾತ್ರಿ ಊಟ ಮಾಡಿ ತಮ್ಮ ಮನೆಗೆ ಹೊರಡುವ ತನಕ ಬೈಗುಳದ ಸುರಿಮಳೆಯಲ್ಲಿ ತೊಯ್ದುತಪ್ಪಡೆಯಾಗುತ್ತಿದ್ದ ಜಮಾಲ ಮತ್ತು ನೂರ್‌ಜಹಾನರು ಮಕ್ಕಳಾದ ನಮ್ಮೆಲ್ಲರ ದಯಾಮಯ ಅವಗಾಹನೆಗೊಳಪಡುತ್ತಿದ್ದರು. ಇಂಥ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿಯೂ ಜಮಾಲ ನಮ್ಮೆಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಆಟ, ಸಂಚಾರ ಮುಂತಾದ ಕ್ರಿಯೆಗಳಲ್ಲಿ ತೊಡಗುತ್ತಿದ್ದ. ಅಜ್ಜಿ ಮಧ್ಯಾಹ್ನ ಊಟ ಮಾಡಿ ಮಲಗಿದ ಕೂಡಲೆ ನಾವೆಲ್ಲರೂ ಹಿತ್ತಲು ಬಾಗಿಲಿನಿಂದ ನಾಪತ್ತೆಯಾಗಿಬಿಡುತ್ತಿದ್ದೆವು. ನಾವೆಲ್ಲ ಜಮಾಲನ ಬಾಲಂಗೋಚಿಗಳಾಗಿ ಅಲೆಯದ ಸ್ಥಳಗಳೇ ಇರಲಿಲ್ಲ.

     ಜಮಾಲ ತನ್ನ ಒಂದೇ ಒಂದು ಕೋಳಿಯನ್ನು ‘ಹುಚ್ಚುಕಮ್ಲಿ’ ಎಂಬುವವಳ ಬಳಿ ಸರಪಾಲಿಗೆ ಬಿಟ್ಟಿದ್ದ. ಆ ಯಾಟೆಯು ಇನ್ನು ಕೆಲವು ದಿನಗಳಲ್ಲಿ ಮೊಟ್ಟೆ ಇಡುತ್ತದೆಂದು ಕಾವು ಕೂರಿಸಿ ಮರಿಗಳನ್ನು ಪಡೆದು, ಒಟ್ಟು ಮರಿಗಳಲ್ಲಿ ಅರ್ಧ ಮರಿಗಳನ್ನು ಕಮ್ಲಿಗೆ ಕೊಟ್ಟು ಮಿಕ್ಕ ಮರಿಗಳನ್ನು ಹಾಗೂ ಯಾಟೆಯನ್ನು ತಾನು ಮನೆಗೆ ವಾಪಸು ತರುತ್ತೇನೆಂದು ಜಮಾಲ ನಮಗೆ ತಿಳಿಸಿದ್ದ. ಆ ಯಾಟೆಯನ್ನು ನೋಡಲು ಒಮ್ಮೆ ನಾವೆಲ್ಲರೂ ಹುಚ್ಚುಕಮ್ಲಿಯ ಮನೆಗೆ ಹೋದೆವು. ಅವಳ ಮನೆಯೆಂಬುದು ಒಂದು ಸಣ್ಣ ಗುಡಿಸಲಾಗಿದ್ದು ಜೋರಾಗಿ ಗಾಳಿ ಬೀಸಿದರೂ ಉರುಳಿ ಹೋಗುವಂತಿತ್ತು. ಗುಡಿಸಲಲ್ಲಿ ಅವಳೊಬ್ಬಳೇ ಇದ್ದು ಅಲ್ಲಿ ಬಡತನದ ತಾಂಡವ ಬಿಟ್ಟರೆ ಮತ್ತೇನೂ ನಮಗೆ ಕಾಣಿಸಲಿಲ್ಲ. ಚೆನ್ನಾಗಿ ಮೈತುಂಬಿಕೊಂಡಿದ್ದ ಜಮಾಲನ ಕೋಳಿ ಅಲ್ಲೆಲ್ಲ ಹೇರಳವಾಗಿ ಹಬ್ಬಿಕೊಂಡಿದ್ದ ತಿಪ್ಪೆರಾಶಿಯಲ್ಲಿ ಸ್ವತಂತ್ರವಾಗಿ ಮೇಯುತ್ತ ಆಡುತ್ತಿತ್ತು. ಜಮಾಲನ ಕೋಳಿಯನ್ನು ಮಾರಿಕೊಂಡು ಕಮ್ಲಿ ಎಲ್ಲಿಗಾದರೂ ಓಡಿಹೋದರೆ? ಎಂಬ ಅನುಮಾನ ನಮ್ಮನ್ನು ಕಾಡಿಸತೊಡಗಿತು. ಆದರೆ ಮುಗ್ಧನಾದ ಜಮಾಲನಿಗೆ ಕಮ್ಲಿಯಲ್ಲಿ ಅತ್ಯಂತ ಭರವಸೆ ಇದ್ದಂತಿತ್ತು. “ಕಮ್ಲಕ್ಕ......, ಹೋದ ಸಲ ಪಾಪಣ್ಣನ ಹೆಂಡತಿಯ ಬಳಿ ಇದೇ ಕೋಳಿಯನ್ನು ಸರಪಾಲಿಗೆ ಬಿಟ್ಟಿದ್ದೆ. ಅವಳು ಎಲ್ಲ ಮರಿಗಳನ್ನು ನಾಯಿ ಹದ್ದು ಹಿಡಿದು ತಿಂದವೆಂದು ಸುಳ್ಳು ಹೇಳಿ ಒಂದೇ ಒಂದು ಮರಿಯನ್ನು ಸಹ ನನಗೆ ಕೊಡಲಿಲ್ಲ. ನೀನೂ ಹಂಗೆ ಮಾಡಬ್ಯಾಡ ನೋಡವ್ವ” ಎಂದು ಜಮಾಲ ಹೇಳುತ್ತಿದ್ದರೆ ನಾವೆಲ್ಲ ಜಮಾಲನಿಗೆ ಮುಂದೆ ಮೋಸವಾಗಬಹುದೋ ಏನೋ ಎಂದು ಕಳವಳಗೊಂಡೆವು.

     ಬೇಸಿಗೆಯ ರಜಾದಿನಗಳು ಒಂದೊಂದಾಗಿ ಉರುಳುತ್ತಿದ್ದವು. ತಂದೆಯವರು ಬೆಂಗಳೂರಿನಿಂದ ವಾಪಸ್ಸಾಗಿ ಚಳ್ಳಕೆರೆಯಲ್ಲಿಯೇ ಇದ್ದರು. ರಜೆ ಮುಗಿಯುವ ವೇಳೆಗೆ ನವಿಲೇಹಾಳಿಗೆ ಬಂದು ನಮ್ಮನ್ನೆಲ್ಲ ಚಳ್ಳಕೆರೆಗೆ ವಾಪಸು ಕರೆದುಕೊಂಡು ಹೋಗುವುದಾಗಿ ಪತ್ರ ಬರೆದಿದ್ದರು. ಜಮಾಲನ ಉತ್ತರಪತ್ರಿಕೆಯ ಬಗ್ಗೆ ಏನು ಮಾಡಿದರೆಂಬ ಯಾವ ಮಾಹಿತಿಯೂ ಪತ್ರದಲ್ಲಿರದ ಕಾರಣ ನಮಗೆ ಬೇಸರವಾಯಿತು. ಜಮಾಲನು ಬೇಸರವಾದರೂ ತೋರಿಸಿಕೊಳ್ಳದೆ ‘ಮಾವನವರು ಏನಾದರೂ ಒಳ್ಳೇದು ಮಾಡಿಯೇ ಮಾಡಿರುತ್ತಾರೆ’ ಎಂದು ತನ್ನ ಕೆಲಸಗಳಲ್ಲಿ ಮಗ್ನನಾದ. ಅಷ್ಟರಲ್ಲಿ ‘ಮೊಹರಮ್’ ಹಬ್ಬದ ಸಂಭ್ರಮ ಶುರುವಾಯಿತು. ಹಬ್ಬಕ್ಕೆಂದು ಅಜ್ಜಿಯೊಡನೆ ಹೋರಾಡಿ ರಜ ಪಡೆದ ಜಮಾಲ ಊರೊಟ್ಟಿನ ಕೆಲಸಗಳಲ್ಲಿ ಮುಳುಗಿದ. ಮೊದಲ ದಿನ ಮಸೂತಿಯ ಮುಂದೆ ಹಾರೆ ಹಾಕುವ ಕಾರ್ಯದಿಂದ ಆರಂಭಿಸಿ ಮಸೂತಿಯ ಒಳಹೊರ ಆವರಣವನ್ನು ಸ್ವಚ್ಛಗೊಳಿಸಿದ. ಪೀರಲು ದೇವರ ಸಿಂಗಾರಕ್ಕೆ ಬಣ್ಣ ಬಣ್ಣದ ಕಾಗದಗಳನ್ನು ಕತ್ತರಿಸಿ ಅಂಟಿಸಿದ. ಮಸೂತಿಯ ಮುಂದೆ ಕೆಂಡ ತುಳಿಯುವ ಗುಂಡಿ ಮಾಡಿದ. ಬೆಂಕಿ ಕೆಂಡ ಮಾಡಲು ದೂರದೂರದ ಮನೆಗಳಿಂದ ಕಟ್ಟಿಗೆ ತುಂಡುಗಳನ್ನು ತಂದು ಒಟ್ಟಿದ. ಅವರಿವರ ಮನೆಗಳನ್ನು ಅಂಗಡಿಗಳನ್ನು ಅಲೆದು ಗ್ಯಾಸ್‌ಲೈಟ್‌ಗಳನ್ನು ತಂದು ಮಸೂತಿಯಲ್ಲಿಟ್ಟ. ಹೀಗೆ ಬಗೆಬಗೆಯ ಕೆಲಸ ಕಾರ್ಯಗಳಲ್ಲಿ ಪುಕ್ಕಟೆಯಾಗಿ ದುಡಿದ ಜಮಾಲ ಮೊಹರಮ್ಮಿನ ಒಂಬತ್ತು ಮತ್ತು ಹತ್ತನೆಯ ದಿನಗಳಲ್ಲಿ ವಿವಿಧ ವೇಷಗಳನ್ನು ಹಾಕಿ ಕುಣಿದ. “ಹಳ್ಳಳ್ಳಿ ಬುಕ್ಕ” ವೇಷ ಧರಿಸಿ ಮೈಗೆಲ್ಲ ಬೂದಿ ಬಳಿದುಕೊಂಡು, ಉದ್ದನೆಯ ಟೋಪಿ ಧರಿಸಿ, ಕೈಯ್ಯಲ್ಲಿ ಅಡಿಕೆ ಪಟ್ಟಿಯನ್ನು ಹಿಡಿದು ಎದುರು ಸಿಕ್ಕವರನ್ನು ಹೊಡೆಯುತ್ತ ಊರವರನ್ನೆಲ್ಲ ನಗಿಸಿದ; ಬುಡುಬುಡಿಕೆ ವೇಷ ಧರಿಸಿ ಮನೆ ಮನೆ ಮುಂದೆ ನಿಂತು ಭವಿಷ್ಯ ನುಡಿದ; ತನ್ನ ಸ್ನೇಹಿತನೊಬ್ಬನಿಗೆ ಸೀರೆ ಉಡಿಸಿ ಗಾಡಿಯಲ್ಲಿ ಮಲಗಿಸಿಕೊಂಡು ‘ಅಯ್ಯಯ್ಯೋ... ನನ್ನ ಹೆಂಡತಿ ಸತ್ತೋದ್ಲಪ್ಪೋ’ ಎಂದು ಬಾಯಿ ಬಡಿದುಕೊಂಡು ಬೀದಿಬೀದಿಯಲ್ಲಿ ‘ಹೆಣ’ದ ಮುಂದೆ ಅಳುತ್ತ ಸಾಗಿದ. ವಿಷಯ ಗೊತ್ತಿಲ್ಲದವರು ಕಕ್ಕಾಬಿಕ್ಕಿಯಾದರೆ, ಗೊತ್ತಿದ್ದವರು ಹೊಟ್ಟೆ ಹಿಡಿದುಕೊಂಡು ನಕ್ಕರು.

     ಮೊಹರಮ್ಮಿನ ಕೊನೆಯ ದಿನ ಪೀರಲು ದೇವರು ಗ್ರಾಮದಲ್ಲಿ ಪ್ರದಕ್ಷಿಣೆ ಹೊರಟಾಗ ಜಮಾಲ ಹುಲಿವೇಷ ಹಾಕಿ ಬಂದಿದ್ದ. ನವಿಲೇಹಾಳಿನ ಪೀರಲು ಹಬ್ಬ ಅಥವಾ ಮೊಹರಮ್ ಎಂದರೆ ಸುತ್ತು ಹತ್ತು ಊರುಗಳ ಜನ ನೆರೆಯುತ್ತಿದ್ದರು. ದೇವರ ದರ್ಶನ ಪಡೆಯಲು ಹಿಂದು ಮುಸ್ಲಿಂ ಎಂಬ ಭೇದಭಾವವಿಲ್ಲದೆ ನೆರೆತ ಸಾವಿರಾರು ಜನ ಗಂಡಸರು ಹೆಂಗಸರು ಮಕ್ಕಳು ಮರಿಗಳು. ಸೂಜಿ ಬೀಳಲೂ ಜಾಗವಿರದಷ್ಟು ಜನದಟ್ಟಣೆಯ ನಡುವೆ ಜನರೆಲ್ಲ ನಿಬ್ಬೆರಗಾಗುವಂತೆ ಜಮಾಲನ ಹುಲಿವೇಷದ ಕುಣಿತ ಪ್ರಾರಂಭವಾಯಿತು. ಮೈಮೇಲೆಲ್ಲ ಪಟ್ಟೆಪಟ್ಟೆ ಬಣ್ಣ ಹಾಕಿಕೊಂಡು ಹುಲಿಯ ಮುಖವಾಡ ಧರಿಸಿದ್ದ ಜಮಾಲ ತಮಟೆಯ ಶಬ್ಧಕ್ಕೆ ಸರಿಯಾಗಿ ಕಾಲು ಹಾಕುತ್ತ ಅದ್ಭುತವಾಗಿ ಕುಣಿಯತೊಡಗಿದ. ಊರಿನ ಹಿರಿಯರು, ಸಾಹುಕಾರ ಮನೆತನದ ನಜೀರಣ್ಣ, ಗೌಸಣ್ಣ, ಸಾಹುಕಾರಜ್ಜ, ಅನ್ವರಣ್ಣ ಮುಂತಾದವರು ಮಂತ್ರಮುಗ್ಧರಾದAತೆ ಜಮಾಲನನ್ನು ನೋಡತೊಡಗಿದರು. ತಮಟೆ ಬಾರಿಸುವವರಿಗೂ ಜಮಾಲನಿಗೂ ಸ್ಪರ್ಧೆ ಏರ್ಪಟ್ಟಂತಾಗಲು ಇಡೀ ಜನಸಮೂಹದ ಗಮನ ದೇವರ ಕಡೆಯಿಂದ ಜಮಾಲನ ಕಡೆ ತಿರುಗಿತು. ಜಮಾಲ ಮೈಮರೆತು ಕುಣಿಯತೊಡಗಿದ. ಮೆಚ್ಚಿ ಭಕ್ಷೀಸು ಕೊಡಲು ಮುಂದಾದ ಸಾಹುಕಾರರುಗಳು ಜಮಾಲನ ಗಮನಕ್ಕೆ ಬರಲಿಲ್ಲ. ಇದ್ದಕ್ಕಿದ್ದಂತೆ ಎಸ್ಸೆಸ್ಸೆಲ್ಸಿ ಫಲಿತಾಂಶ, ಇಂಗ್ಲಿಷ್ ಭಾಷೆ, ತಂಗಿ, ತಬ್ಬಲಿತನ, ಬಡತನ ಮುಂತಾದವುಗಳೆಲ್ಲ ಕರಗಿ ಹೋಗಿ ಈ ಲೋಕದ ಎಲ್ಲ ಬಂಧನಗಳನ್ನು ಕಳಚಿ ಎಸೆದವನಂತೆ ಕುಣಿಯತೊಡಗಿದ. ಬದುಕಿನ ಎಲ್ಲ ವ್ಯವಹಾರಗಳಿಗೆ ಅತೀತನಂತೆ, ಅವಧೂತನಂತೆ ಕಾಣತೊಡಗಿದ. ಅವನನ್ನು ದಿನವೂ ನೋಡುತ್ತಿದ್ದ ಗ್ರಾಮಸ್ಥರೇ ‘ಯಾರೀ ವೇಷಧಾರಿ’ ಎಂದು ಪರಸ್ಪರ ಪ್ರಶ್ನಿಸಿಕೊಂಡರು. ನಮ್ಮ ಒಡನಾಟದಲ್ಲಿದ್ದ ಜಮಾಲ ಅಂತರ್ದಾನವಾಗಿ ಹೊಸ ವ್ಯಕ್ತಿಯೊಬ್ಬ ಉದ್ಭವಿಸಿದಂತೆ ನಮಗೆ ದಿಗಿಲಾಗತೊಡಗಿತು.

    ಹಬ್ಬದ ಮಜ ಮತ್ತು ಸುಸ್ತುಗಳು ಕಡಿಮೆಯಾದಂತೆ ಜಮಾಲ ತ್ಯಾವಣಗಿಯಲ್ಲಿದ್ದ ಹೈಸ್ಕೂಲಿಗೆ ಹೋಗಿ ವಿಚಾರಿಸಿಕೊಂಡು ಬಂದು ಎಸ್ಸೆಸ್ಸೆಲ್ಸಿ ಫಲಿತಾಂಶ ಇಷ್ಟರಲ್ಲಿಯೇ ಬರುತ್ತದೆಂದು ತಿಳಿಸಿದ. ತನ್ನ ತಂಗಿಯನ್ನು ನೋಡಲು ಯಾರೋ ಬರುವವರಿದ್ದಾರೆಂದೂ, ಅವರು ಮದುವೆಗೆ ಒಪ್ಪಿದರೆ ತನ್ನ ಬಳಿ ಕಿಲುಬು ಕಾಸು ಸಹ ಇಲ್ಲವೆಂದು ನನ್ನಮ್ಮನ ಬಳಿ ಕಣ್ಣೀರಿಟ್ಟಿದ್ದ. ಅಮ್ಮನೂ ಸಹ ಅಸಹಾಯಕಳಾಗಿ ನಿಟ್ಟುಸಿರಿಟ್ಟಿದ್ದಳು. ಜಮಾಲ ನಮ್ಮ ಬಳಿ ಬಂದು ತನ್ನ ಯಾಟೆಯು ಮೊಟ್ಟೆ ಇಡಲು ಪ್ರಾರಂಭಿಸಿ ನಾಲ್ಕೆöÊದು ದಿನವಾಯಿತು, ಮೊಟ್ಟೆ ಪೂರ್ಣ ಇಟ್ಟ ಮೇಲೆ ಹುಚ್ಚು ಕಮ್ಲಿಯ ಮನೆಯಲ್ಲಿಯೇ ಕಾವಿಗೆ ಕೂರಿಸುವುದಾಗಿ ತಿಳಿಸಿದ. ಒಂದು ಬುಟ್ಟಿ ತೆಗೆದುಕೊಂಡು ಟಂಗಟೆ ಸೊಪ್ಪನ್ನು ಹಾಕಿ ಇವತ್ತೇ ಸಿದ್ಧಪಡಿಸುತ್ತೇನೆ ಎಂದ. ಮುಂದಿನ ವರ್ಷದೊಳಗೆ ನೂರಾರು ಕೋಳಿಗಳ ಒಡೆಯನಾಗುತ್ತೇನೆ ಎಂದು ಎದೆಯುಬ್ಬಿಸಿ ನುಡಿದ.

     ಅದರ ಮುಂದಿನ ಭಾನುವಾರ ನಮ್ಮನ್ನೆಲ್ಲ ಕರೆದುಕೊಂಡು ಹೋಗಲು ತಂದೆಯವರು ನವಿಲೇಹಾಳಿಗೆ ಬಂದರು. ಮರುದಿನ ಸೋಮವಾರವೇ ನಾವೆಲ್ಲ ಚಳ್ಳಕೆರೆಗೆ ಹೋಗುವುದೆಂದು ತೀರ್ಮಾನವಾಗಿತ್ತು.

     ಸೋಮವಾರ ಬೆಳಗಿನ ಏಳು ಗಂಟೆಗೆಲ್ಲ ಜಮಾಲ ಓಡೋಡಿ ಬಂದವನೆ ಎಲ್ಲರಿಗೂ ಕೇಳಿಸುವ ಹಾಗೆ ‘ಕೇಳ್ರಪ್ಪೋ ಕೇಳ್ರಿ... ನನ್ನದು ಪರೀಕ್ಷೆಯಲ್ಲಿ ಪಾಸಾಗಿದೆ. ಈಗ ತಾನೆ ನನ್ನ ಸ್ನೇಹಿತ ಕ್ಯಾತಪ್ಳರ ಕರಿಯ ತ್ಯಾವಣಗಿಗೆ ಹೋಗಿ ಬಂದ. ನನ್ನದು ಪಾಸಾಗಿದೆಯಂತೆ’ ಎಂದು ಡಂಗುರ ಹೊಡೆಯುವವರಂತೆ ಕೂಗಿ ಹೇಳಿದ. ಇನ್ನೂ ಹಾಸಿಗೆಯಲ್ಲೇ ಉರುಳಾಡುತ್ತಿದ್ದ ನಾವೆಲ್ಲ ಜಮಾಲನ ಕಡೆಗೆ ದೌಡಾಯಿಸಿದೆವು. ‘ಪಾಸು’ ‘ಪಾಸು’ ಎಂದು ಜಮಾಲ ಕಣ್ಣಿನಲ್ಲಿ ನೀರು ತುಂಬಿಕೊಂಡು ಕುಣಿಯುತ್ತಿದ್ದ.

ನಾವು : “ಯಾರು ಹೇಳಿದ್ರೊ?”
ಜಮಾಲ : “ಕ್ಯಾತಪ್ಳರ ಕರಿಯ”
ನಾವು : “ಕ್ಯಾತಪ್ಳರ ಕರಿಯ ಬರೀ ಸುಳ್ಳು ಹೇಳ್ತಾನಂತೆ. ಅವನ ಹೆಸರೆ ‘ಬೂಸಿ ಕರಿಯ’. 
ನೀನೇ ತ್ಯಾವಣಿಗಿಗೆ ಹೋಗಿ ಬಾ.”
ಜಮಾಲ : “ಇಲ್ಲ, ಕರಿಯ ಸುಳ್ಳು ಹೇಳಲ್ಲ. ನಾನೀಗ್ಲೆ ಸ್ಕೂಲಿಗೆ ಹೋಗಿ ಮಾರ್ಕ್ಸ್ ಕಾರ್ಡ್ 
ರ‍್ತೀನಿ. ಇಗೋ ಹೊರಟೆ.”

     ಹೀಗೆ ಹೇಳಿದ ಜಮಾಲ ಮನೆಯ ಮೆಟ್ಟಿಲಿಳಿಯತೊಡಗಿದ. ಎಲ್ಲೊ ಇದ್ದ ನಮ್ಮಜ್ಜಿ ಇದ್ದಕ್ಕಿದ್ದಂತೆ ಜಮಾಲನೆದುರು ಪ್ರತ್ಯಕ್ಷಳಾಗಿ ‘ಏಯ್... ಜಮಾಲ... ನಿಲ್ಲೋ... ನನ್ನಳಿಯ ಕಷ್ಟಪಟ್ಟು ನಿನ್ನ ಪೇಪರ‍್ನ ಹುಡುಕ್ಸಿ ಪಾಸು ಮಾಡ್ಸಿದಾರೆ... ಅವರಿಲ್ದಿದ್ರೆ ನೀನು ನಿನ್ನ ಜನ್ಮದಲ್ಲಿ ಪಾಸಾಗ್ತಿರಲಿಲ್ಲ... ಕೂಡ್ಲೆ ಹೋಗಿ ನಿನ್ನ ಮೊಟ್ಟೆ ಇಡುವ ಕೋಳಿ ತಗಂಡು ಬಾ... ಅಳಿಯರಿಗೆ ಕೋಳಿ ಸಾರು ಮಾಡ್ಬೇಕು... ಊರಲ್ಲೆಲ್ಲ ಹುಡುಕಿಸಿದರೂ ಒಂದೇ ಒಂದು ಕೋಳಿ ಸಿಗ್ಲಿಲ್ಲ ಇವತ್ತು... ಎಲ್ಲ ಕೋಳಿಗಳ್ನೂ ಪರ‍್ಲಬ್ಬದಲ್ಲಿ ತಿಂದು ಹಾಕಿದ್ದಾರೆ...” ಎಂದು ಜಬರಿಸಿದಳು. ವಾಸ್ತವವಾಗಿ ಕೋಳಿ ತರಲು ಯಾರೂ ಹೋಗಿರಲಿಲ್ಲ ಮತ್ತು ಅಜ್ಜಿ ಮನೆಯಲ್ಲಿಯೇ ಬಹಳ ಕೋಳಿಗಳಿದ್ದವು. ಪಾಸಾದ ಬಗ್ಗೆ ಬಲೂನಿನಂತೆ ಉಬ್ಬಿಹೋಗಿದ್ದ ಜಮಾಲ ರ‍್ರಂತ ಇಳಿದುಹೋದ. “ಇನ್ನು ನಾಲ್ಕು ದಿನದಲ್ಲಿ ಯಾಟೆಯನ್ನು ಕಾವಿಗೆ ಕೂರಿಸುತ್ತೇನೆ ಅಜ್ಜಿ... ನನ್ನ ಹತ್ರ ಇರೋದೊಂದೇ ಕೋಳಿ... ಮರಿ ಮಾಡಿಸಬೇಕೆಂದು ಹುಚ್ಚು ಕಮ್ಲಿಯಲ್ಲಿ ಸರಪಾಲಿಗೆ ಬಿಟ್ಟಿದ್ದೇನೆ ಕಣಜ್ಜಿ... ನಿಮ್ಮನೇಲೆ ಬೇಕಾದಷ್ಟು ಕೋಳಿ ಇದಾವಲ್ಲಜ್ಜಿ...” ಎಂದು ಜಮಾಲ ಹೇಳಿದ ಕೂಡಲೆ ಸಿಡಿದೆದ್ದ ಅಜ್ಜಿ “ಓಗಲೇ ಐವಾನ... ನಮ್ಮನೇಲಿ ಮೊಟ್ಟೆ ಕೋಳಿ ಒಂದೂ ಇಲ್ಲ... ನಿನ್ನ ಕೋಳಿ ತಂದುಕೊಟ್ಟ ಮೇಲೇ ನೀನು ಸ್ಕೂಲಿಗೆ ಹೋಗಬೇಕು... ನೀನೂ ನಿನ್ನ ತಂಗಿಯೂ ದಿನಾ ಇಲ್ಲಿ ರಾಶಿ ಕೂಳು ಕತ್ತರಿಸಲ್ವೇನೊ... ಕೋಳಿ ತಗಂಬಾ ಹೋಗು ಕುಲಗೇಡಿ...” ಎಂದು ನಮಗಾರಿಗೂ ಮಾತಾಡಲು ಆಸ್ಪದ ಕೊಡದೆ ಅಬ್ಬರಿಸಿದಳು. ಮುಂದಿನ ಹತ್ತೇ ನಿಮಿಷದಲ್ಲಿ ದುಃಖಭರಿತ ಜಮಾಲ ವಾಪಸು ಬಂದ. ಅವನ ಕೈಯ್ಯಲ್ಲಿ ನಾವೆಲ್ಲ ನೋಡಿ ಬಂದಿದ್ದ ‘ಮೊಟ್ಟೆ ಇಡುವ ಕೋಳಿ’ ಕೊರಗುಡುತ್ತಿತ್ತು. ಕೂಡಲೆ ಮಸೀದಿಯ ಮುಲ್ಲ ಮಿಯಾಸಾಹೇಬರನ್ನು ಕರೆಸಲಾಯಿತು. ಅವರು ಅಲ್ಲಾಹುವನ್ನು ಪ್ರಾರ್ಥಿಸುತ್ತ ಕೋಳಿಯ ಬಾಯಲ್ಲಿ ಒಂದು ಗುಟುಕು ನೀರು ಹಾಕಿ ಹಲಾಲ್ ಮಾಡಿದರು. ರಕ್ತ ಸುರಿಸುತ್ತ ರೆಕ್ಕೆಬಡಿಯುತ್ತ ಪ್ರಾಣ ಬಿಡುವ ಸಂಕಟದಲ್ಲಿ ಕೋಳಿ ಒದ್ದಾಡತೊಡಗಿತು. ನಮ್ಮೆಲ್ಲರ ಪ್ರೀತಿಯ ಕೋಳಿಯು ಒದ್ದಾಡುತ್ತ ಪ್ರಾಣ ಬಿಡುವುದನ್ನು ನೋಡಲಾಗದೆ ನಾವೆಲ್ಲ ಕಣ್ಣುಮುಚ್ಚಿಕೊಂಡೆವು.

     ಜಮಾಲನ ಮೊಟ್ಟೆ ಇಡುವ ಕೋಳಿಯನ್ನು ನೋಡಿ ಬಂದ ದಿನ ಖುಷಿ ತಡೆಯಲಾರದೆ ಅಜ್ಜಿಗೆ ತಿಳಿಸಿದ್ದ ನಾವು ಪರೋಕ್ಷವಾಗಿ ಜಮಾಲನಿಗೆ ಅನ್ಯಾಯವೆಸಗಿದೆವೋ ಏನೋ ಎಂಬ ಪಾಪ ಪ್ರಜ್ಞೆಯಲ್ಲಿ ಪರಿತಪಿಸಿದೆವು. ತನ್ನ ಸರ್ವಸ್ವವೂ ಆಗಿದ್ದ ಯಾಟೆಯ ಅಂತ್ಯವನ್ನು ನೋಡಲಾರದೆ ಜಮಾಲ ನಿರ್ಗಮಿಸಿದ. ಬೆಳಿಗ್ಗೆಯಿಂದ ನಡೆದ ಘಟನೆಗಳಾವುವೂ ತಂದೆಯವರ ಗಮನಕ್ಕೇ ಬಂದಿರಲಿಲ್ಲ. ಅವರು ಅಟ್ಟದ ಮೇಲೆ ಮಲಗಿದ್ದರು. ಜಮಾಲನ ಪತ್ರಗಳನ್ನು ಮಾತ್ರ ಓದಿದ್ದ ತಂದೆಯವರು ಪ್ರತ್ಯಕ್ಷವಾಗಿ ಅವನನ್ನು ನೋಡಿಯೇ ಇರಲಿಲ್ಲ. ಬಹುಶಃ ಜಮಾಲನ ವಿಷಯವನ್ನು ಅವರು ಸಂಪೂರ್ಣವಾಗಿ ಮರೆತುಬಿಟ್ಟಿದ್ದರೋ ಏನೋ?

      ಮಧ್ಯಾಹ್ನ ಊಟಕ್ಕೆ ಕರೆಬಂದಾಗ ನಾವೆಲ್ಲ ದುಗುಡದಿಂದ ಜಮಾಲನ ಬರುವಿಕೆಗಾಗಿ ಕಾಯುತ್ತ ಮನೆಯ ಮುಂದಿನ ಕಟ್ಟೆಯ ಮೇಲೆ ಕುಳಿತಿದ್ದೆವು. ಜಮಾಲ ಪಾಸಾಗಿದ್ದಾನೋ ಇಲ್ಲವೋ ಎಂಬ ತಳಮಳ ಎಲ್ಲರ ಮನಸ್ಸಿನಲ್ಲಿ ತುಂಬಿ ಹೋಗಿತ್ತು. ಜಮಾಲನನ್ನು ಬಿಟ್ಟು ಚಳ್ಳಕೆರೆಗೆ ಹೋಗಬೇಕಾಗಿರುವ ಬಗ್ಗೆ, ರಜೆ ಮುಗಿದು ಶಾಲೆ ಪುನರಾರಂಭವಾಗುತ್ತಿರುವ ಬಗ್ಗೆ, ಜಮಾಲನ ಕೋಳಿ ಸತ್ತು ಹೋದುದರ ಬಗ್ಗೆ ಸಂಕಟ ಅನುಭವಿಸುತ್ತ, ಅಜ್ಜಿಯನ್ನು ಬೈಯ್ಯುತ್ತ, ದೊಡ್ಡದಾಗಿ ಮಾತನಾಡಲು ಧೈರ್ಯ ಸಾಲದೆ ಪಿಸುಗುಡುತ್ತ ಕಾಲ ಕಳೆಯುತ್ತಿದ್ದೆವು. ಕೋಳಿ ಹುಚ್ಚುಕಮ್ಲಿಯ ಬಳಿಯೇ ಇದ್ದಿದ್ದರೆ ಖಂಡಿತವಾಗಿ ಜಮಾಲನಿಗೆ ಮೋಸವಾಗುತ್ತಿರಲಿಲ್ಲ ಅನ್ನಿಸತೊಡಗಿತು. ಅಜ್ಜಿಗಿಂತ ಹುಚ್ಚುಕಮ್ಲಿಯೇ ಒಳ್ಳೆಯವಳೆಂಬ ತೀರ್ಮಾನಕ್ಕೆ ಬಂದೆವು.

      ತ್ಯಾವಣಗಿ ಶಾಲೆಯಿಂದ ಇಷ್ಟು ಹೊತ್ತಾದರೂ ವಾಪಸಾಗದ ಜಮಾಲನ ಬಗ್ಗೆ ಅಜ್ಜಿ ಮನಬಂದಂತೆ ಬೈಯ್ಯತೊಡಗಿದ್ದಳು. ನೂರ್‌ಜಹಾನ್ ತುಟಿಪಿಟಕ್ಕೆನ್ನದೆ ಅಡಿಗೆ ಮನೆಯಲ್ಲಿ ಹಿತ್ತಲಿನಲ್ಲಿ ಬಚ್ಚಲಿನಲ್ಲಿ ಓಡಾಡಿಕೊಂಡು ಒಪ್ಪಿಸಿದ ಕೆಲಸ ಮಾಡುತ್ತಿದ್ದಳು. ನಮ್ಮನ್ನೆಲ್ಲ ಬೈದು ಊಟಕ್ಕೆ ಕೂರಿಸಿದರು. ಕೋಳಿ ಅಡುಗೆಯ ಘಮ ಘಮ ನಮಗೆ ಕಿರಿಕಿರಿಯಾಗತೊಡಗಿತು. ಕೋಳಿ ಸಾರಿನ ಜೊತೆ ಇದ್ದ ರಾಗಿ ಮುದ್ದೆಗಳನ್ನು ಮುರಿಯಲು ಕೈಗಳೆ ಬರದಂತೆ ಜಡವಾಗಿಬಿಟ್ಟಿದ್ದವು. ಸಾರಿನಲ್ಲಿದ್ದ ತುಂಡುಗಳೆಲ್ಲ ಸೇರಿಕೊಂಡು ಜೀವಂತ ಕೋಳಿಯಾಗಿ ಹುಚ್ಚುಕಮ್ಲಿಯ ಮನೆಗೆ ಓಡಿ ಹೋಗುವುದನ್ನು ನನ್ನ ಪುಟ್ಟ ಮನಸ್ಸು ಕಲ್ಪಿಸಿಕೊಳ್ಳತೊಡಗಿತು. ಆಗ ಹೊರಗೆ ಜಮಾಲ ಜೋರಾಗಿ ಅಳುವ ಶಬ್ಧ ಕೇಳಿ ಊಟ ಬಿಟ್ಟು ಎದ್ದು ಹೊರಗೆ ಓಡಿಬಂದೆವು. ಬಿಕ್ಕಳಿಸಿ ಅಳುತ್ತಿದ್ದ ಜಮಾಲ ತನ್ನದು ಈ ಬಾರಿಯೂ ಫೇಲಾಗಿದೆಯೆಂದು ತಿಳಿಸಿದ. ಯಾರು ಎಷ್ಟು ಜುಲುಮೆ ಮಾಡಿದರೂ ಜಮಾಲ ಊಟ ಮಾಡದೆ ಹಾಗೇ ಹೊರಟುಹೋದ. ನಾವೆಲ್ಲ ಊಟದ ಶಾಸ್ತç ಮಾಡಿ ಬಚ್ಚಲಲ್ಲಿ ಕೈತೊಳೆಯುತ್ತಿದ್ದಾಗ, ನೂರ್‌ಜಹಾನ್ ಮುಸುರೆ ಪಾತ್ರೆಗಳ ರಾಶಿ ಹಾಕಿಕೊಂಡು ಬಿಕ್ಕುತ್ತ ಕುಳಿತಿದ್ದಳು. ನಮ್ಮ ತಟ್ಟೆಗಳನ್ನು ತೊಳೆಯಲು ನೂರ್‌ಜಹಾನ್‌ಳಿಗೆ ಕೊಡದೆ ನಾವೆ ತೊಳೆದೆವು.

     ಬಸ್ಸಿನಲ್ಲಿ ಕುಳಿತಾಗ “ಜಮಾಲನ ರಿಜಿಸ್ಟರ್ ನಂಬರನ್ನು ಸಹ ‘ಇವರು’ ಬೆಂಗಳೂರಿಗೆ ತೆಗೆದುಕೊಂಡು ಹೋಗಿರಲಿಲ್ಲವಂತೆ” ಎಂದು ಅಮ್ಮ ತಂದೆಯವರ ಬಗ್ಗೆ ಹೇಳಿದಳು. “ನಮ್ಮವರಿಗೆ ತಮ್ಮವರಿಗೆ ಅನೈತಿಕವಾಗಿ ಸಹಾಯ ಮಾಡುವುದು ದೇವರ ಮಾರ್ಗವಲ್ಲ” ಎಂದು ಯಾವುದಕ್ಕೂ ವಿಚಲಿತರಾಗದ ತಂದೆಯವರು ದೂರ ದಿಗಂತದ ಕಡೆ ದೃಷ್ಟಿ ನೆಟ್ಟು ನುಡಿದರು.

********

 
 ಮೊಬೈಲ್ : 9448104973
Email : [email protected]