ಮೌಲ್ಯದ ನೈತಿಕತೆ ಮಟ್ಟ ಕಾಲಕ್ಕೆ ತಕ್ಕ ಹಾಗೆ ಬದಲಾಗುತ್ತದಾ?!

ಸಿದ್ಧು ಅವರೂ ನಮ್ಮಂತಯೇ ಭ್ರಷ್ಟರು ಎಂಬುದನ್ನು ದಾಖಲಿಸುವುದು ಹಾಗೂ ಆ ಗದ್ದಲದಲ್ಲಿ ಅವರನ್ನು ಮುಖ್ಯಮಂತ್ರಿ ಗಾದಿಯಿಂದ ಕೆಳಗಿಳಿಸುವುದೇ ಎಲ್ಲರ ಪರಮಗುರಿಯಾಗಿದೆ. ಸಿದ್ಧರಾಮಯ್ಯನವರು ನರೇಂದ್ರ ಮೋದಿಯಷ್ಟೇ ಕ್ಲವರ್ ರಾಜಕಾರಣಿ ಅಂತ ದಿನೇಶ್ ಅಮಿನ್ ಮಟ್ಟು ಹೇಳಿರುವುದರಿಂದ, ಅವರು ಅದು ಹೇಗೆ ಈ ಹಗರಣದಿಂದ ಬಚಾವ್ ಆಗುತ್ತಾರೆ ಎಂಬುದನ್ನು ಕಾದು ನೋಡಿ.!?

ಮೌಲ್ಯದ ನೈತಿಕತೆ ಮಟ್ಟ ಕಾಲಕ್ಕೆ ತಕ್ಕ ಹಾಗೆ ಬದಲಾಗುತ್ತದಾ?!

ಒಂದು ಗಳಿಗೆ

ಕುಚ್ಚಂಗಿ ಪ್ರಸನ್ನ

 

        2013-18, ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಮೊದಲ ಅವಧಿ, ಅಡ್ವೊಕೇಟ್ ಜನರಲ್ ಹುದ್ದೆಗೆ ಹೈಕೋರ್ಟ್ ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್ ಅವರನ್ನು ಸಿದ್ದರಾಮಯ್ಯ ಆಯ್ಕೆ ಮಾಡಿದ್ದರು. ಆ ಹುದ್ದೆಯನ್ನು ಬಹು ಸಂಭ್ರಮದಿಂದಲೇ ಸ್ವೀಕರಿಸಿದ ರವಿವರ್ಮ ಹೆಚ್ಚು ದಿನ ಅಲ್ಲಿ ಉಳಿಯಲಿಲ್ಲ. ರವಿವರ್ಮ ತುಮಕೂರಿನವರು ಎಂಬುದು ನಮ್ಮ ಹೆಮ್ಮೆಯಾದರೆ, ಅದೇ ತರ ನಮ್ಮ ಕವಿ ದಿವಂಗತ ಕೆ.ಬಿ.ಸಿದ್ದಯ್ಯ ನವರೂ ಸಿದ್ದರಾಮಯ್ಯನವರಿಗೆ ಬಹಳ ಆಪ್ತರಾಗಿದ್ದರು. ಎಷ್ಟು ಆಪ್ತರು ಎಂದರೆ ವಿಧಾನ ಸೌಧದ ಪ್ರವೇಶ ದ್ವಾರದಲ್ಲೋ ಮೊಗಸಾಲೆಯಲ್ಲೋ ಕೇಬಿ ಕಂಡರೆ ಹತ್ತಾರು ಅಧಿಕಾರಿಗಳು, ಶಾಸಕರು, ಬೆಂಬಲಿಗರ ದಂಡಿನೊಂದಿಗೆ ಸಾಗುತ್ತಿದ್ದ ಸಿದ್ದರಾಮಯ್ಯನವರು, “ ಏನ್ ಸಿದ್ದಯ್ಯ” ಅಂತ ಕೂಗಿ ಕರೆದು ಹೆಗಲ ಮೇಲೆ ಕೈ ಹಾಕಿ ಕರೆದುಕೊಂಡು ನಡೆದು ಸಾಗುತ್ತಿದ್ದರು.

    ಅಯ್ಯೋ ಅಷ್ಟೊಂದು ದೂರ ಯಾಕೆ, ನಾವೇ ಇಲ್ಲೇ ತುಮಕೂರಿನವರು ʼ ಸಮತಾ ವಿದ್ಯಾರ್ಥಿ ಸಂಘʼ ಅಂತ ಮಾಡಿದಾಗ ಉಪಮುಖ್ಯಮಂತ್ರಿ ಅಗಿದ್ದ ಸಿದ್ದರಾಮಯ್ಯನವರೇ ಬಂದು ಉದ್ಘಾಟಿಸಿ ಭಾಷಣ ಮಾಡಿರಲಿಲ್ವಾ. ತುಮಕೂರಿನಲ್ಲಿ ಎರಡು ಸಲ ಶಾಸಕರಾಗಿ ಚುನಾಯಿತರಾಗಿ ಮಂತ್ರಿಯೂ ಆಗಿದ್ದ ದಿವಂಗತ ಲಕ್ಷ್ಮೀನರಸಿಂಹಯ್ಯನವರೂ, ಶಾಸಕ, ಸಂಸದರೂ ಆಗಿದ್ದ ದಿವಂಗತ ಸಿ.ಎನ್.ಭಾಸ್ಕರಪ್ಪನವರು ಅವಿಭಜಿತ ಜನತಾಪರಿವಾರದಲ್ಲಿ ಹಿಂದುಳಿದ ನಾಯಕರ ವರ್ಗದ ಕಾರಣವಾಗಿ ಸಿದ್ದರಾಮಯ್ಯನವರಿಗೆ ಆಪ್ತರಾಗಿದ್ದರು. ಮೊನ್ನೆ ತಾನೇ ತೀರಿಕೊಂಡ ನಗರಸಭೆಯ ಮಾಜಿ ಅಧ್ಯಕ್ಷ ರೆಡ್ಡಿ ಚಿನ್ನಯಲ್ಲಪ್ಪನವರಿಗೂ ಸಿದ್ದು ಬಹಳ ಕ್ಲೋಸ್ ಇದ್ದರು. ಈಗ ಸಹಕಾರ ಸಚಿವ ಕೆ.ಎನ್.ರಾಜಣ್ಣನವರು ಸಿದ್ದರಾಮಯ್ಯನವರ ಆಪ್ತ ಬಳಗದಲ್ಲಿದ್ದಾರೆ. ಹಿಂಗೆ ಯಾವ ಯಾವುದೋ ಕಾರಣಗಳಿಗೆ ಸಿದ್ದರಾಮಯ್ಯನವರಿಗೆ ತುಮಕೂರು ಬಹಳ ಹತ್ತಿರ. ಮತ್ತು ಆಪ್ತ. ಮತ್ತೆ ತುಮಕೂರಿನಲ್ಲೇ ಒಂದಷ್ಟು ವರ್ಷ ಪತ್ರಕರ್ತರಾಗಿದ್ದ ದಿನೇಶ್ ಅಮಿನ್ ಮಟ್ಟು ಅವರೂ ಸಿದ್ದರಾಮಯ್ಯನವರ ಮಾಧ್ಯಮ ಸಲಹೆಗಾರರಾಗಿ ನೇಮಕಗೊಂಡ ಕಾರಣವಾಗಿಯೂ ತುಮಕೂರಿನವರಿಗೆ ಮುಖ್ಯಮಂತ್ರಿ ಕಾರ್ಯಾಲಯ ಬಹಳ ಹತ್ತಿರವಾಗಿಬಿಟ್ಟಿತು. ಮೈಸೂರಿನ ಸಮಾಜವಾದಿ ಬಳಗದಲ್ಲಿ ಬೆಳೆದ ಸಿದ್ಧರಾಮಯ್ಯನವರ ಜಾತ್ಯತೀತ ಹಾಗೂ ಬಡವರ ಪರ ನಿಲುವಿನಿಂದಾಗಿ ತುಮಕೂರಿನ ಪ್ರಗತಿಪರರಿಗೆ ನೆಚ್ಚಿನ ಮುಖ್ಯಮಂತ್ರಿ ಹಾಗೂ ನಾಯಕರಾಗಿ ಕಂಡರೆ, ಜಾತಿಯ ಕಾರಣಕ್ಕೆ ಇಲ್ಲಿನ ಒಂದಿಬ್ಬರ ಪಾಲಿನ ಕಾಸು ಉದುರಿಸುವ ಕಾಮಧೇನು ಕೂಡಾ ಆಗಿಬಿಟ್ಟಿದ್ದಾರೆ. !

     

      ಮುಖ್ಯಮಂತ್ರಿಯಾದ ಮೊದಲ ಐದು ವರ್ಷ ಸಿದ್ಧರಾಮಯ್ಯನವರ ಮಾಧ್ಯಮ ಸಲಹೆಗಾರರಾಗಿದ್ದ ದಿನೇಶ್ ಅಮಿನ್ ಮಟ್ಟು , ಎರಡನೇ ಅವಧಿಯಲ್ಲಿ ಆ ಹುದ್ದೆಯನ್ನು ಪಡೆಯುವ ಪ್ರಯತ್ನ ಮಾಡಲಿಲ್ಲ, ಮೊದಲ ಸಲವೂ ಅವರೇನು ಆ ಹುದ್ದೆಗೆ ದುಂಬಾಲು ಬಿದ್ದಿರಲಿಲ್ಲವೆನ್ನಿ. ಆದರೂ ಈಗಲೂ ನನಗೆ ಅವರ ಸಂಪರ್ಕ ಇದೆ ಅಂತ ಹೇಳುತ್ತಾ ʼಸಂಪಾದಕʼ ಎಂಬ ಯೂಟ್ಯೂಬ್ ಚಾನೆಲ್ನಲ್ಲಿ ವಿಡಿಯೋ ಒಂದನ್ನು ಸಾರ್ವಜನಿಕ ಪ್ರಸಾರಕ್ಕೆ ಬಿಟ್ಟಿದ್ದಾರೆ. ಶೀರ್ಷಿಕೆ “ ಸಿದ್ದರಾಮಯ್ಯನವರಿಗೆ ದುಡ್ಡಿನ ಬಗ್ಗೆ ಭಯವೇಕೆ? ಅಂತ. ಮುಖ್ಯಾಂಶ ಹೀಗಿದೆ:

“40 ವರ್ಷದಿಂದ ರಾಜಕಾರಣದಲ್ಲಿರುವ ಎರಡು ಅವಧಿಗೆ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯನವರು ಇವತ್ತಿಗೂ ದುಡ್ಡು ಕಂಡರೆ ಭಯಪಡುತ್ತಾರೆ, , ಇವತ್ತು ಯಾವ ಪಕ್ಷದವರೂ ಕೂಡಾ ಬಿಪಿಎಲ್ ಕಾರ್ಡ್ ಹೋಲ್ಡರ್ ಗಳಲ್ಲ. ಸಿದ್ಧು ದುರಾಶೆಯ ಮನುಷ್ಯ ಅಲ್ಲ, ಅವರಿಗೆ ದುಡ್ಡಿನ ದೊಡ್ಡ ಮೋಹ ಇಲ್ಲ. ಇತ್ತೀಚೆಗೆ ಈ ದೇಶ ಕಂಡಿರುವ ಇಬ್ಬರು ಕ್ಲವರ್ ರಾಜಕಾರಣಿಗಳೆಂದರೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಇಬ್ಬರೂ ಎಲೆಕ್ಷನ್ನಲ್ಲಿ ಸಲ್ಲಿಸಿರುವ ಅಫಿಡವಿಟ್ ನೋಡಿದರೆ ಅರ್ಥವಾಗಿಬಿಡುತ್ತದೆ. ಇಬ್ಬರ ಲೆಕ್ಕದಲ್ಲೂ ಹೆಚ್ಚು ಹಣ ಇಲ್ಲ. ಆದರೆ ಪ್ರಧಾನಿ ಮೋದಿ ಅದಾನಿ, ಅಂಬಾನಿಗಳಿಗೆ ಇಡೀ ಸರ್ಕಾರವನ್ನು ಅಡವಿಟ್ಟುಬಿಟ್ಟಿದ್ದಾರೆ.

ಆದರೆ ಸಿದ್ಧರಾಮಯ್ಯನವರು ಹಾಗಲ್ಲ, ಅವರು ಕಾಂಗ್ರೆಸ್ ಸೇರಿದಾಗ, ದಿಲ್ಲಿಯಲ್ಲಿದ್ದ ನಾನು ಅವರನ್ನು ಪ್ರಾದೇಶಿಕ ಪಕ್ಷವನ್ನೇಕೆ ಕಟ್ಟಲಿಲ್ಲ ಅಂತ ಕೇಳಿದ್ದೆ, ಅವರು “ ಪಕ್ಷ ಕಟ್ಟಲಿಕ್ಕೆ ದುಡ್ಡೆಲ್ಲಿಂದ ತರಲಿ “ ಅಂತ ಕೇಳಿದ್ದರು. ಇವತ್ತಿಗೂ ಸಿದ್ದರಾಮಯ್ಯನವರಿಗೆ ದುಡ್ಡನ್ನು ಕಂಡರೆ ಭಯವಿದೆ. ಉದ್ಯಮಿಗಳಿಗೆ ಪರವಾನಗಿ ಕೊಡುವ ಉನ್ನತ ಸಮಿತಿಯಲ್ಲಿದ್ದಾಗಲೂ ಸಿದ್ದರಾಮಯ್ಯನವರು ಹಣ ಮಾಡಲು ಹೋಗಲಿಲ್ಲ, ಬಜೆಟ್ ತಯಾರಿಯಲ್ಲೂ ಅವರನ್ನು ನೋಡಿದ್ದೇನೆ. ಅವರಿಂದ ಸರ್ಕಾರದ ಹಣವನ್ನೂ ಪಡೆದುಕೊಳ್ಳುವುದು ಕಷ್ಟ ಅಂತ ಅಧಿಕಾರಿಗಳು ಹೇಳುವುದನ್ನೂ ಕೇಳಿದ್ದೇನೆ. ದುಡ್ಡಿನ ಬಗ್ಗೆ ಒಂದು ಭಯ ಇರಬೇಕು, ನಾವು ಸಾರ್ವಜನಿಕ ಹಣದ ಟ್ರಸ್ಟಿಗಳು ಅಂತ ಆಗಾಗ ಹೇಳ್ತಾ ಇರ್ತಾರೆ. ಸಿದ್ದರಾಮಯ್ಯನವರು.

“ಈ ಕಾಲದಲ್ಲಿ ಶಾಂತವೇರಿ ಗೋಪಾಲಗೌಡರ ಇದ್ರೆ ಹೇಗೆ ಮಾಡ್ತಾ ಇದ್ದರು ಅಂತ ಕೆಲವರು ಕೇಳ್ತಾರೆ. ನೀವು ಒಂದು ಮೌಲ್ಯದ ನೈತಿಕತೆ ಸ್ಟಾಂಡರ್ಡ್ ಅನ್ನು ಆಯಾ ಕಾಲಕ್ಕೆ ತಕ್ಕ ಹಾಗೆ ಫಿಕ್ಸ್ ಮಾಡಬೇಕು. ಇವತ್ತು ಸಿದ್ದರಾಮಯ್ಯನವರು ಇವತ್ತು ಗೋಪಾಲಗೌಡರ ಸ್ಟಾಂಡರ್ಡ್ ಮೇಂಟೇನ್ ಮಾಡಲಿಕ್ಕೆ ಹೋದರೆ ಅವರು ಮರ್ಯಾದೆಯಿಂದ ರಾಜಕೀಯದಿಂದ ನಿವೃತ್ತಿ ಆಗಿ ಮನೆಯಲ್ಲಿರಬೇಕು. ರಾಜಕೀಯ ಮಾಡಲಿಕ್ಕೆ ಆಗಲ್ಲ “

“ದೇವರಾಜ ಅರಸು ಅವರ ಮೇಲೂ ಭ್ರಷ್ಟಾಚಾರದ ಆರೋಪ ಇತ್ತು. ಹೌದು ಅದನ್ನು ಅವರು ಒಪ್ಪಿಕೊಂಡಿಯೂ ಇದ್ದರು. ನಾನು ಹಣ ಕೊಡದೇ ಹೋದರೆ ಶಾಸಕರು ನನ್ನ ಜೊತೆ ಉಳೀತಿರಲಿಲ್ಲ ಎಂದಿದ್ದರು. ದೇವರಾಜ ಅರಸು ಅವರಿಗೆ ಆದ ಗತಿಯೇ ಸಿದ್ದರಾಮಯ್ಯನವರಿಗೆ ಬರ್ತಾ ಇತ್ತು.

       2014ರಲ್ಲಿ ರಾಮಕೃಷ್ಣ ಹೆಗಡೆ ಸ್ಮಾರಕ ಫೌಂಡೇಶನ್ ಸಮಾರಂಭದಲ್ಲಿ ಹಾಗೂ ಬೇರೆ ಕಡೆಗಳಲ್ಲೂ ಸಿದ್ದರಾಮಯ್ಯನವರು, “ ನಾನು ಪರಮ ಪ್ರಾಮಾಣಿಕ ಅಂತ ಹೇಳೋದಿಲ್ಲ” ಅಂತ ಹೇಳಿದ್ದಾರೆ. ಅದಕ್ಕೆ ಅವರು ವಿವರಣೆ ಕೊಡ್ತಾರೆ. ನೀವು ರಾಜಕಾರಣದಲ್ಲಿದ್ದಾಗ ವೈಯಕ್ತಿಕವಾಗಿ ಭ್ರಷ್ಟ ಆಗದೇ ಹೋದರೂ ಒಂದಷ್ಟು ರಾಜಕೀಯವಾಗಿ ಭ್ರಷ್ಟಾಚಾರ ನೀವು ಪಾಲ್ಗೊಳ್ಳುತ್ತೀರಿ. ಚುನಾವಣೆಗೆ ಹಣ ಬೇಕು, ಹಣ ಯಾರು ಕೊಡ್ತಾರೆ, ಜನ ಕೊಡೋದಿಲ್ಲ, ಉದ್ಯಮಿಗಳು, ರಿಯಲ್ ಎಸ್ಟೇಟ್ ನವರು, ಅಬಕಾರಿ ಲಾಬಿಯವರು, ಎಜುಕೇಶನ್ ಲಾಬಿಯವರು ಹಣ ಕೊಡ್ತಾರೆ, ನೀವು ಅಧಿಕಾರಕ್ಕೆ ಬಂದಾಗ ಅವರು ಮುಂದೆ ಇಡೋ ಕಡತಗಳಿಗೆಲ್ಲ ಸಹಿ ಹಾಕಬೇಕಾಗುತ್ತದೆ ಎಂದು ಹೇಳುತ್ತಾರೆ. ಈ ದೃಷ್ಟಿಕೋನದಲ್ಲಿ ನೀವು ಸಿದ್ಧರಾಮಯ್ಯನವರನ್ನು ನೋಡಬೇಕಾಗುತ್ತದೆ” ಎಂದು ಅಮಿನ್ ಮಟ್ಟು ಹೇಳುತ್ತಾರೆ.

       ದಿನೇಶ್ ಅಮಿನ್ ಮಟ್ಟು ಅವರ ಮಾತುಗಳನ್ನು ನಾನು ಒಪ್ಪುತ್ತೇನೆ, ಮತ್ತು ಸಾರ್ವಜನಿಕ ಜೀವನವನ್ನು ಹತ್ತಿರದಿಂದ ನೋಡುವ ಎಲ್ಲರೂ ಒಪ್ಪುತ್ತಾರೆ. ನಮ್ಮ ಜನ ಇನ್ನೂ ಮುಂದುವರೆದು “ ಜೇನು ಕಿತ್ತವನು ಕೈ ನೆಕ್ಕಿಕೊಳ್ಳುದಿಲ್ಲವಾ?: ಆಂತಾನೂ ಕೇಳ್ತಾರೆ. ಆದರೆ ಈ ಪ್ರಶ್ನೆ ಸಿದ್ಧರಾಮಯ್ಯನವರಿಗೆ ಅನ್ವಯವಾಗುವುದಿಲ್ಲ.

    ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರ ಹೆಸರಿಗೆ 14 ನಿವೇಶನಗಳು ಬಂದಿವೆ ಎಂಬುದನ್ನು ಅವರು 2023ರ ಎಲೆಕ್ಷನ್ ಅಫಿಡವಿಟ್‌ ನಲ್ಲೇ  ಹೇಳಿಕೊಂಡಿದ್ದಾರೆ. ಅದು ವಿವಾದವೇ ಆಗಿರಲಿಲ್ಲ. ಇದೊಂದು ಹಗರಣವಾಗಿ ರೂಪುಗೊಳ್ಳಲು ಸಿದ್ದರಾಮಯ್ಯನವರ ಪರಮಾಪ್ತ ಮುಡಾ ಅಧ್ಯಕ್ಷ ಕೆ.ಮರಿಗೌಡರೇ ಕಾರಣ, ಈತನೇ ವಿಲನ್ ಅಂತ ಅವರದೇ ಪಕ್ಷದ ಮಾವಿನಹಳ್ಳಿ ಸಿದ್ದೇಗೌಡರು ಮೊನ್ನೆ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ. ಹೇಗೆ ಅಂತ ಅರ್ಥ ಮಾಡಿಕೊಳ್ಳಲು ಬಾಕ್ಸ್ ನೋಡಿ.

     ಸಿದ್ಧು ಅವರೂ ನಮ್ಮಂತಯೇ ಭ್ರಷ್ಟರು ಎಂಬುದನ್ನು ದಾಖಲಿಸುವುದು ಹಾಗೂ ಆ ಗದ್ದಲದಲ್ಲಿ ಅವರನ್ನು ಮುಖ್ಯಮಂತ್ರಿ ಗಾದಿಯಿಂದ ಕೆಳಗಿಳಿಸುವುದೇ ಎಲ್ಲರ ಪರಮಗುರಿಯಾಗಿದೆ. ಸಿದ್ಧರಾಮಯ್ಯನವರು ನರೇಂದ್ರ ಮೋದಿಯಷ್ಟೇ ಕ್ಲವರ್ ರಾಜಕಾರಣಿ ಅಂತ ದಿನೇಶ್ ಅಮಿನ್ ಮಟ್ಟು ಹೇಳಿರುವುದರಿಂದ, ಅವರು ಅದು ಹೇಗೆ ಈ ಹಗರಣದಿಂದ ಬಚಾವ್ ಆಗುತ್ತಾರೆ ಎಂಬುದನ್ನು ಕಾದು ನೋಡಿ.!?

ವಿಲನ್ ಕೆ.ಮರಿಗೌಡ ಯಾರು?

      ಮೈಸೂರಿನಲ್ಲಿ ಹೆಚ್ಚೂಕಮ್ಮಿ ದಶಕಗಳಿಂದಲೂ ಸಿದ್ದು ಅವರ ಪರಮಾಪ್ತನಾಗಿರುವ ಕೆ.ಮರೀಗೌಡ ಅಲ್ಲಿನ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೂಡಾ. ಈತ 2016ರ ಜುಲೈನಲ್ಲಿ ಸರ್ಕಾರಿ ಗೆಸ್ಟ್ ಹೌಸ್ ಆವರಣದಲ್ಲಿ ಇಫ್ತಾರ್ ಕೂಟ ಮುಗಿಸಿ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಎದುರೇ ಮೈಸೂರಿನ ಡಿಸಿ ಐಎಎಸ್ ಅಧಿಕಾರಿ ಸಿ.ಶಿಖಾ ಅವರಿಗೆ ಧಮಕಿ ಹಾಕಿ ಜಾಮೀನೂ ಸಿಗದೇ ನಾಪತ್ತೆಯಾಗಿದ್ದ ಪುಡಾರಿ. ಶಿಖಾ ಅವರ ಪತಿ ಮತ್ತೊಬ್ಬ ಐಎಎಸ್ ಆಧಿಕಾರಿ ಅಜಯ ನಾಗಭೂಷಣ್. ಇವರಿಬ್ಬರೂ ಮುಖ್ಯಮಂತ್ರಿ ಪರಿವಾರದ ಒತ್ತಡಕ್ಕೆ ಮಣಿಯಲೂ ಇಲ್ಲ, ರಾಜಿ ಆಗಲೂ ಇಲ್ಲ. ಕಡೆಗೆ ಅವತ್ತು ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಡಾ.ಜಿ.ಪರಮೇಶ್ವರ ಇದೇ ಮರಿಗೌಡರನ್ನು ಪಕ್ಷದಿಂದ ಸಸ್ಪೆಂಡ್ ಕೂಡಾ ಮಾಡಿದ್ದರು. ಇಂತಾ ಮರಿಗೌಡನನ್ನು ಸಿದ್ದರಾಮಯ್ಯನವರು ಮತ್ತೆ ಮುಡಾದಂತೆ ಮಹತ್ವದ ಸಂಸ್ಥೆಗೆ ಅಧ್ಯಕ್ಷರನ್ನಾಗಿ ಮಾಡಿದರೋ ಆ ಸಿದ್ಧರಾಮನ ಹುಂಡಿಯ ಸಿದ್ಧರಾಮೇಶ್ವರನೇ ಬಲ್ಲ.

    ಫೆಬ್ರವರಿ 29ರಂದು ಮುಡಾ ಅಧ್ಯಕ್ಷ ಹುದ್ದೆಗೆ ನೇಮಕಗೊಂಡು ಮಾರ್ಚ್ ಒಂದರಂದು ಅಧಿಕಾರ ಸ್ವೀಕರಿಸಿದ ಮರಿಗೌಡರು, ತಿಂಗಳಲ್ಲೇ ಮುಡಾ ಕಮೀಶನರ್ ನೇರಾನೇರಾ ನಗರಾಭಿವೃದ್ಧಿ ಸಚಿವರ ಜೊತೆ ವ್ಯವಹಾರ ಮಾಡುತ್ತಿದ್ದಾರೆಂದೂ ಅದರಿಂತ ತಮೇಗೇನೂ ಗಿಟ್ಟುತ್ತಿಲ್ಲವೆಂದೂ ಪರಿಭಾವಿಸಿ ಆಯುಕ್ತರ ವಿರುದ್ಧ ಕಾಲುಕರೆದು ಖ್ಯಾತೆ ತೆಗೆಯುತ್ತಾರೆ. ನಿವೇಶನ ಹಂಚಿಕೆಯಲ್ಲಿ ಅಕ್ರಮವಾಗಿದೆ ಎಂದು ನೋಟೀಸ್ ನೀಡುತ್ತಾರೆ. ಸ್ಥಳೀಯ ಪತ್ರಿಕೆಗಳಿಗೆ ಇವರೇ ಈ ಸುದ್ದಿಯನ್ನೂ ಮುಟ್ಟಿಸುತ್ತಾರೆ. ಅದು ಅಲ್ಲಿಂದ ಹಳ್ಳಿ ಹಕ್ಕಿ ಕಿವಿಗೆ ಬಿದ್ಧು, ರಾಜಧಾನಿ ತಲುಪಿ, ದಿಲ್ಲಿಯನ್ನೂ ಮುಟ್ಟಿ ರಾದ್ಧಾಂತವಾಗಿಬಿಡುತ್ತದೆ.

    ಸಿದ್ದರಾಮಯ್ಯನವರ ಪ್ರಕರಣದಲ್ಲಿ ನಡೆದಿರುವ ಅಕ್ರಮ ಏನಿರಬಹುದು ಅಂದರೆ ಅವರ ಪತ್ನಿಗೆ ದಾನವಾಗಿ ಬಂದಿದ್ದ ಜಮೀನು ಇದ್ದ ಸ್ಥಳವು ಕೆಸರೆ ಎಂಬ ಗ್ರಾಮಕ್ಕೆ ಸೇರಿದ್ದು ಅಲ್ಲಿ ನಗರ ಅಷ್ಟೇನೂ ಬೆಳೆದಿರಲಿಲ್ಲ ಮತ್ತು ಧಾರಣೆಯೂ ಇರಲಿಲ್ಲ, ಆದರೆ ಅದರ ಬದಲಿಗೆ 14 ಸೈಟುಗಳನ್ನು ಬಹಳ ಧಾರಣೆ ಇರುವ ವಿಜಯನಗರದಲ್ಲಿ ಕೊಟ್ಟಿರುವುದೇ ಹಗರಣ ಎನ್ನಬಹುದೇ. ಆದರೆ ಸಿದ್ದು ಪ್ರಕಾರ ಅದರಲ್ಲೂ ಹಗರಣ ಆಗಿಲ್ಲ, ಏಕೆಂದರೆ ಅವರ 3.16 ಎಕರೆಯ 50% ವಿಸ್ತೀರ್ಣದ ನಿವೇಶನಗಳನ್ನೇನೂ ಪ್ರಾಧಿಕಾರ ಕೊಟ್ಟಿಲ್ಲ.

 

ಮುಡಾ ಪ್ರಕರಣ-ಕಾಲಾನುಕ್ರಮ

      ಮುಖ್ಯಮಂತ್ರಿ ಸಿದ್ದರಾಮಯ್ಯನವರು 2023ರ ವಿಧಾನ ಸಭಾ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುವಾಗ ಅಫಿಡವಿಟ್ ಜೊತೆ ಸಲ್ಲಿಸಿದ ಆಸ್ತಿ ಪಟ್ಟಿಯಲ್ಲಿ ಅವರ ಪತ್ನಿಯ ಹೆಸರಿನಲ್ಲಿ ಮೈಸೂರಿನ ವಿಜಯನಗರದಲ್ಲಿ ಒಟ್ಟು 370190.99 ಚದರಡಿ ವಿಸ್ತೀರ್ಣದ 14 ನಿವೇಶನಗಳಿವೆ (ನಿವೇಶನ ಸಂಖ್ಯೆ 5, 25, 331, 332, 213, 214, 215, 216, 10855, 11189, 5085, 12065, 12068 ಹಾಗೂ 5108 ) ಎಂದು ದಾಖಲಿಸಿದ್ದಾರೆ.

    2018ರ ಚುನಾವಣೆಯಲ್ಲಿ ಸಲ್ಲಿಸಿದ ಅಫಿಡವಿಟ್‌ನಲ್ಲಿ ಇದೇ ಸಿದ್ದರಾಮಯ್ಯನವರು ತಮ್ಮ ಪತ್ನಿಯ ಹೆಸರಿನಲ್ಲಿ ಆಕೆಯ ಸೋದರ ಡಿ.ಎಂ.ಮಲ್ಲಿಕಾರ್ಜುನಸ್ವಾಮಿ ಉಡುಗೊರೆಯಾಗಿ ನೀಡಿರುವ ಮೈಸೂರಿನ ಸರ್ವೆ ನಂ 464ರಲ್ಲಿ 3 ಎಕರೆ 16 ಗುಂಟೆ ಜಮೀನು ಇದೆ ಎಂದು ದಾಖಲಿಸಿದ್ದರು.

    2010ರ ಅಕ್ಟೋಬರ್‌ನಲ್ಲಿ ಮಲ್ಲಿಕಾರ್ಜುನ ಸ್ವಾಮಿ ತಮ್ಮ ಸೋದರಿ ಸಿದ್ದರಾಮಯ್ಯನವರ ಪತ್ನಿಗೆ ಈ ಭೂಮಿಯನ್ನು ದಾನವಾಗಿ (ಉಡುಗೊರೆ) ನೀಡಿದ್ದಾರೆ, ಆದರೆ ಈ ಮಾಹಿತಿಯನ್ನು 2013ರ ಚುನಾವಣೆಯಲ್ಲಿ ಸಿದ್ದರಾಮಯ್ಯನವರು ಬಹಿರಂಗಪಡಿಸಿಲ್ಲ. ಸಿದ್ದರಾಮಯ್ಯನವರಿಗೆ ಭಾರೀ ತಲೆನೋವಾಗಿ ಪರಿಣಮಿಸಿರುವ ಮೈಸೂರಿನ ಈ ಸರ್ವೆ ನಂಬರ್ 464ಕ್ಕೆ ಸಂಬಂಧಿಸಿದಂತೆ ಘಟಿಸಿದ ಸಂಗತಿಗಳು ಕಾಲಾನುಕ್ರಮದಲ್ಲಿ ಹೀಗಿವೆ.

1) ಸೆಪ್ಟೆಂಬರ್ 1992ರಲ್ಲಿ ಅಂದರೆ 22 ವರ್ಷಗಳ ಹಿಂದೆ ಸರ್ವೆ ನಂ 464ರಲ್ಲಿ ನಿಂಗ ಬಿನ್ ಜವರ ಎಂಬುವವರಿಗೆ ಸೇರಿದ 3.16 ಎಕೆರೆ ಜಮೀನನ್ನು ದೇವನೂರು 3ನೇ ಹಂತದ ಲೇಔಟ್ ನಿರ್ಮಿಸಲು ಭೂಸ್ವಾಧೀನ ಪಡಿಸಿಕೊಳ್ಳಲು ಪ್ರಾಥಮಿಕ ಹಂತದ ಅಧಿಸೂಚನೆಯನ್ನು ಹೊರಡಿಸಲಾಗುತ್ತದೆ.

2) ಫೆಬ್ರವರಿ 1998ರಲ್ಲಿ ಈ 3.16 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಅಂತಿಮ ಅಧಿಸೂಚನೆ ಹೊರಡಿಸಲಾಗುತ್ತದೆ.

3) ಆದರೆ ಮೇ 1998ರಲ್ಲಿ ಈ ಜಮೀನನ್ನು ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವ (ಡೀನೋಟಿ ಫೈ) ಆದೇಶ ಹೊರಡಿಸಲಾಗಿದೆ. ಆದರೆ ಮುಡಾ ಇದೇ ಡಿನೋಟಿಫೈ ಮಾಡಲಾಗಿದ್ದ 3.16 ಎಕರೆ ಜಮೀನಿನಲ್ಲೇ ದೇವನೂರು 3ನೇ ಹಂತ ಎಂಬುದಾಗಿ ಸೈಟುಗಳನ್ನು ಅಭಿವೃದ್ಧಿಪಡಿಸಿ ಹಂಚಿಕೆ ಮಾಡುತ್ತದೆ.

4) ನವೆಂಬರ್ 2003ರಲ್ಲಿ ಈ ಭೂಮಿಯ ಮಾಲಿಕತ್ವವನ್ನು ಮೂಲ ಮಾಲಿಕರ ಹೆಸರಿಗೆ ದಾಖಲಿಸಲಾಗುತ್ತದೆ.

5) ಸಿದ್ದರಾಮಯ್ಯನವರ ಪತ್ನಿಯ ಸೋದರ ಡಿ.ಎಂ.ಮಲ್ಲಿಕಾರ್ಜುನಯ್ಯ ಈ 3.16 ಎಕರೆ (ಕೃಷಿ !) ಭೂಮಿಯನ್ನು ತಮ್ಮ ಹೆಸರಿನಲ್ಲೇ ಖರೀದಿ ಮಾಡುತ್ತಾರೆ.

6) ಜುಲೈ 2005ರಲ್ಲಿ ಮಲ್ಲಿಕಾರ್ಜುನಯ್ಯ ಈ ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಪರಿವರ್ತನೆ ಮಾಡಿಸಿಕೊಳ್ಳುತ್ತಾರೆ.

7) ಅಕ್ಟೋಬರ್ 2010ರಲ್ಲಿ ಮಲ್ಲಿಕಾರ್ಜುನಯ್ಯನವರ ಈ 3.16 ಎಕರೆ ಪರಿವರ್ತಿತ ಭೂಮಿಯನ್ನು ತಮ್ಮ ಸೋದರಿ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರಿಗೆ ದಾನವಾಗಿ ನೀಡುತ್ತಾರೆ. ( ಅರಿಸಿನ ಕುಂಕುಮಕ್ಕೆAದು ಕೊಟ್ಟರು ಅಂತ ಸಿದ್ದರಾಮಯ್ಯನವರು ಹೇಳಿಕೆ ನೀಡಿದ್ದಾರೆ.)

8) ಈ ಭೂಮಿಯನ್ನು ಮುಡಾ ಉಪಯೋಗಿಸಿಕೊಂಡು ಬಿಟ್ಟಿದೆ ಎಂದು ತಿಳಿಸುವ ಪಾರ್ವತಿ ಅವರು ಮನವಿ ಸಲ್ಲಿಸಿ ತಮಗೆ ಪರಿಹಾರ ನೀಡಬೇಕೆಂದು ಜೂನ್ 2014ರಲ್ಲಿ ಪ್ರಾಧಿಕಾರವನ್ನು ಕೋರುತ್ತಾರೆ.

9) ಡಿಸೆಂಬರ್ 2017ರಲ್ಲಿ ಮುಡಾ ತಾನು ಡಿನೋಟಿಫೈ ಮಾಡಿರುವ ಜಮೀನನ್ನು ಬಳಸಿ ಲೇಔಟ್ ಮಾಡಿ ತಪ್ಪು ಮಾಡಿರುವುದಾಗಿ ಒಪ್ಪಿ, ಪಾರ್ವತಿ ಅವರಿಗೆ 3.16 ಎಕರೆ ಭೂಮಿ ಬದಲಿಗೆ ಪರ್ಯಾಯ ನಿವೇಶನಗಳನ್ನು ಕೊಡಲು ನಿರ್ಧರಿಸುತ್ತದೆ.

10) ನವೆಂಬರ್ 2020ರಲ್ಲಿ ಮುಡಾ ಪಾರ್ವತಿ ಅವರ ಭೂಮಿ ಬದಲಿಗೆ ಅಭಿವೃದ್ಧಿ ಪಡಿಸಿದ ನಿವೇಶನಗಳನ್ನು 50:50 ಆಧಾರದ ಮೇಲೆ ನೀಡಲು ನಿರ್ಧರಿಸುತ್ತದೆ.

11) ಅಕ್ಟೋಬರ್ 2021ರಲ್ಲಿ ಪಾರ್ವತಿ ಅವರು ಮತ್ತೆ ಮನವಿ ಸಲ್ಲಿಸಿ ಪರಿಹಾರದ ಬದಲು ನಿವೇಶನಗಳನ್ನು ನೀಡುವಂತೆ ಕೋರುತ್ತಾರೆ.

12) ಜನವರಿ 2022ರಲ್ಲಿ ಮುಡಾ ಪಾರ್ವತಿ ಅವರಿಗೆ ಮೈಸೂರಿನ ವಿಜಯನಗರ ಬಡಾವಣೆಯಲ್ಲಿ ನಿವೇಶನ ಸಂಖ್ಯೆ 5, 25, 331, 332, 213, 214, 215, 216, 10855, 11189, 5085, 12065, 12068 ಹಾಗೂ 5108 ಗಳನ್ನು ಹಂಚಿಕೆ ಮಾಡುತ್ತದೆ.

13) ಅಕ್ಟೋಬರ್ 2023ರಲ್ಲಿ ರಾಜ್ಯ ಸರ್ಕಾರ ಪ್ರಾಧಿಕಾರಗಳು ಹೀಗೆ ಬಳಸಿಕೊಂಡ ಭೂಮಿಗೆ ಪರಿಹಾರವಾಗಿ 50:50 ಅನುಪಾತದಲ್ಲಿ ಅಭಿವೃದ್ಧಿ ಪಡಿಸಿದ ನಿವೇಶನಗಳನ್ನು ಹಂಚಿಕೆ ಮಾಡುವುದನ್ನು ರದ್ದುಪಡಿಸುತ್ತದೆ.

ಆನಂತರದ ಬೆಳವಣಿಗೆಗಳನ್ನೂ ಕಾಲಾನುಕ್ರಮದಲ್ಲಿ ಗಮನಿಸಿ

1) 2023ರ ಅಕ್ಟೋಬರ್‌ನಲ್ಲಿ 50:50 ನಿವೇಶನ ಹಂಚಿಕೆ ಪದ್ಧತಿ ರದ್ದುಪಡಿಸಿದ ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆ ಅದೇ ಡಿಸೆಂಬರ್ ತಿಂಗಳಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ಕ್ಕೆ ಲಿಖಿತ ಸೂಚನೆ ನೀಡಿ ಹೀಗೆ ನಿವೇಶನ ಹಂಚಿಕೆಯನ್ನು ನಿಲ್ಲಿಸುವಂತೆ ಸೂಚಿಸುತ್ತದೆ.

2) 2024ರ ಮಾರ್ಚಿ, ಏಪ್ರಿಲ್ ತಿಂಗಳವರೆಗೂ ಈ 50:50 ಪದ್ಧತಿಯಲ್ಲಿ ನಿವೇಶನ ಹಂಚಿಕೆ ಮುಂದುವರೆಸುವ ಮುಡಾ ಲೋಕಸಭಾ ಚುನಾವಣಾ ನೀತಿ ಸಂಹಿತೆಯ ನೆಪದಲ್ಲಿ ಸರ್ಕಾರಕ್ಕೆ ಉತ್ತರವನ್ನೇ ನೀಡುವುದಿಲ್ಲ.

3) ಮೇ ತಿಂಗಳಲ್ಲಿ ಮುಡಾ ಅಧ್ಯಕ್ಷ ಕೆ.ಮರಿಗೌಡರು 50:50 ಅನುಪಾತದಲ್ಲಿ ನಿವೇಶನ ಹಂಚಿಕೆ ಮಾಡಿರುವುದರಲ್ಲಿ ಅಕ್ರಮಗಳಾಗಿವೆ ಎಂದು ಆಪಾದಿಸಿ ತನಿಖೆ ಮಾಡುವಂತೆ ಪತ್ರ ಬರೆಯುತ್ತಾರೆ. ಆಯುಕ್ತ ಜಿ.ಟಿ. ದಿನೇಶ್‌ಕುಮಾರ್‌ಗೆ ನೋಟೀಸ್ ನೀಡುತ್ತಾರೆ.

4) ಜೂನ್ ತಿಂಗಳಲ್ಲಿ ಸ್ಥಳೀಯ ಪತ್ರಿಕೆಗಳಲ್ಲಿ ಮುಡಾ ಹಗರಣ ಪ್ರಕಟವಾಗುತ್ತದೆ, ಆರ್‌ಟಿಐ ಕಾರ್ಯಕರ್ತರ ಹೇಳಿಕೆ ಪ್ರಕಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಅವರಿಗೂ ಇಂಥ ನಿವೇಶನ ಹಂಚಿಕೆ ಆಗಿರುತ್ತದೆ. ಈ ಕುರಿತು ತನಿಖೆ ಮಾಡಿ ವರದಿ ಸಲ್ಲಿಸುವಂತೆ ಸರ್ಕಾರ ನಾಲ್ವರು ಸದಸ್ಯರ ಸಮಿತಿ ನೇಮಿಸುತ್ತದೆ.

5) ಜುಲೈ ತಿಂಗಳಲ್ಲಿ ಬಿಜೆಪಿ ವಿಧಾನ ಪರಿಷತ್ ಸದಸ್ಯ ಎ.ಹೆಚ್. ವಿಶ್ವನಾಥ್ ಸುದ್ದಿಗೋಷ್ಟಿ ಕರೆದು ಮುಖ್ಯಮಂತ್ರಿ ಪತ್ನಿ ಅವರಿಗೂ ಅಕ್ರಮವಾಗಿ ನಿವೇಶನ ಹಂಚಿಕೆಯಾಗಿವೆ ಎಂದು ಬಹಿರಂಗ ಪಡಿಸುತ್ತಾರೆ.

6) ಮುಖ್ಯಮಂತ್ರಿ ಸಿದ್ದರಾಮಯ್ಯ ಈ ನಿವೇಶನಗಳನ್ನು ವಾಪಸ್ ಕೊಡುವುದಾಗಿಯೂ, ತಮ್ಮ ಪತ್ನಿಗೆ ಸೇರಿದ ಭೂಮಿಯ ಪರಿಹಾರ ರೂ.62 ಕೋಟಿ ಆಗುವುದಾಗಿಯೂ ಆ ಮೊತ್ತವನ್ನು ಕೊಟ್ಟುಬಿಡಿ ಎಂಬುದಾಗಿಯೂ ಹೇಳಿಕೆ ನೀಡುತ್ತಾರೆ.

7) ಜುಲೈ 18ರಂದು ಮೈಸೂರು ಮೂಲದ ವಕೀಲ ಟಿ.ಜೆ.ಅಬ್ರಹಾಂ ಸ್ಥಳೀಯ ಲೋಕಾಯುಕ್ತ ಕಚೇರಿಯಲ್ಲಿ ಈ ಕುರಿತು ತನಿಖೆ ನಡೆಸುವಂತೆ ದೂರು ಸಲ್ಲಿಸುತ್ತಾರೆ.ಜುಲೈ 21ರಂದು ರಾಜ್ಯಪಾಲರಿಗೂ ಅಬ್ರಹಾಂ ದೂರು ನೀಡುತ್ತಾರೆ. ಜುಲೈ 26ರಂದು ರಾಜ್ಯಪಾಲರು ಶೋಕಾಸ್ ನೊಟೀಸ್ ಅನ್ನು ಸಿದ್ದರಾಮಯ್ಯನವರಿಗೆ ನೀಡುತ್ತಾರೆ.

8) ಆಗಸ್ಟ್ 17ರಂದು ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ವಿಚಾರಣೆ ನಡೆಸಲು ಅನುಮತಿ ನೀಡಿ ಆದೇಶ ಹೊರಡಿಸುತ್ತಾರೆ. ರಾಜ್ಯಪಾಲರ ಆದೇಶ ರದ್ದು ಕೋರಿ ಸಿದ್ದರಾಮಯ್ಯನವರು ಸಲ್ಲಿಸಿದ ಮನವಿ ಕುರಿತಂತೆ ರಾಜ್ಯ ಹೈಕೋರ್ಟ್ ಮುಂದಿನ ವಿಚಾರಣೆಯನ್ನು ಆ.29ಕ್ಕೆ ನಿಗದಿಪಡಿಸಿದೆ.

ಮುಡಾ ಸರ್ವೆ ನಂ 464ರ 3.46 ಎಕರೆ ಜಮೀನಿನಲ್ಲಿ 2001ರಲ್ಲೇ ನಿವೇಶನಗಳನ್ನು ಅಭಿವೃದ್ಧಿಪಡಿಸಿ, ಹಂಚಿಕೆ ಮಾಡಿದೆ ಎನ್ನುವುದಾದೇ ನಿಜ ಎನ್ನುವುದಾದಲ್ಲಿ ಸಿದ್ದರಾಮಯ್ಯನವರ ಭಾವಮೈದ 2004ರಲ್ಲಿ ಅದನ್ನು ಕೃಷಿ ಜಮೀನು ಎಂಬುದಾಗಿ ಅದು ಹೇಗೆ ಖರೀದಿಸಲು ಸಾಧ್ಯವಾಯಿತು? 2005ರಲ್ಲಿ ಕೃಷಿಯೇತರ ಉದ್ದೇಶಕ್ಕೆ ಪರಿವರ್ತಿಸಿಕೊಡಲು ಅದು ಹೇಗೆ ಸಾಧ್ಯವಾಯಿತು? ಜಮೀನು ಖರೀದಿಸುವ ಮುನ್ನ ಮಲ್ಲಿಕಾರ್ಜುನಯ್ಯ ಆ ಭೂಮಿಯನ್ನು ಕಣ್ಣಾರೆ ನೋಡಲೇ ಇಲ್ಲವೇ, ಹೇಗೆ ಎಂಬ ಪ್ರಶ್ನೆಗಳಿಗೆ ಸದ್ಯಕ್ಕಿನ್ನೂ ಉತ್ತರ ಸಿಕ್ಕಿಲ್ಲ .