ಕುಚ್ಚಂಗಿ ಪ್ರಸನ್ನ
ಇವತ್ತು ಪತ್ರಿಕಾ ದಿನ, 1843ರ ಜುಲೈ ಒಂದೇ ತಾರೀಕಿನಂದು ಪಾದ್ರಿ ರೆವರೆಂಡ್ ಮಾಂಗ್ಲಿಂಗ್ ಎಂಬಾತ 'ಮಂಗಳೂರು ಸಮಾಚಾರ' ಹೆಸರಿನ ಪತ್ರಿಕೆಯನ್ನು ಪ್ರಕಟಿಸಿದ ದಿನವನ್ನು ನಾವು ಕನ್ನಡ ಹಾಗೂ ಕರ್ನಾಟಕದ ಪತ್ರಿಕಾ ದಿನ ಅಂತ ಆಚರಿಸುತ್ತಿದ್ದೇವೆ. ಇದೇ ತರ ಇಡೀ ಭಾರತಕ್ಕೂ ಪತ್ರಿಕಾ ದಿನ ಅಂತ ಒಂದು ದಿನವಿದೆ. ಅದು ನವೆಂಬರ್ 16, ಪತ್ರಿಕಾ ಸ್ವಾತಂತ್ರ್ಯಕ್ಕೆ ಅನುವು ಮಾಡಿಕೊಟ್ಟ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ 1956ರ ನವೆಂಬರ್ 16ರಂದು ಕಾರ್ಯಾರಂಭ ಮಾಡಿದ ದಿನವನ್ನು ರಾಷ್ಟ್ರೀಯ ಪತ್ರಿಕಾ ದಿನ ಅಂತ ಆಚರಿಸುತ್ತೇವೆ. ಆದರೆ ಪತ್ರಿಕಾ ವೃತ್ತಿಯೇ ಪ್ಯಾಶನ್ ಆದ ನನ್ನಂತವನಿಗೆ ದಿನವೂ ಪತ್ರಿಕಾ ದಿನವೇ.
ನಾನು ಪತ್ರಿಕಾ ವೃತ್ತಿ ಆರಂಭಿಸಿ ಬರುವ ಜನವರಿ 27ಕ್ಕೆ 38 ವರ್ಷವಾಗುತ್ತದೆ.ಈ ಅವಧಿಯಲ್ಲಿ ಹದಿನೈದು ವರ್ಷ ಕಾರ್ಯನಿರತ ಪತ್ರಕರ್ತ ಆಗಿರಲಿಲ್ಲ. ಆದರೆ ಆ ದಿನಗಳಲ್ಲೂ ತಡರಾತ್ರಿವರೆಗೂ ನ್ಯೂಸ್ ಚಾನೆಲ್ಗಳನ್ನು ಬದಲಿಸುತ್ತ, ಸಚಿವಾಲಯ ಗ್ರಂಥಾಲಯದಲ್ಲಿರುತ್ತಿದ್ದ ಎಲ್ಲ ಪತ್ರಿಕೆಗಳನ್ನು ತಿರುವಿಹಾಕುತ್ತ, ಬೆಳಕು ಹರಿದಾಗ ಲಾಟೀನನ್ನು ಆರಿಸದೇ ಬತ್ತಿಯನ್ನು ತೀರಾ ಕೆಳಕ್ಕೆ ಇಳಿಸಿ ಸಂಜೆವರೆಗೂ ಹಾಗೇ ಇಟ್ಟಿರುತ್ತೇವಲ್ಲ ಹಾಗೆ, ಪತ್ರಿಕಾವೃತ್ತಿಯ ಬೆಳಕು ನನ್ನೊಳಗೆ ಆರದಂತೆ ಉಳಿಸಿಕೊಂಡಿದ್ದೆ. ನಾನು ಪತ್ರಿಕಾವೃತ್ತಿಗೆ ಮರಳಲು ಒಂದು ಸರಿಯಾದ ನೆಪ ಬೇಕಿತ್ತು. 2017ರ ಏಪ್ರಿಲ್ ನಲ್ಲಿ ಅಂತ ನೆಪವೊಂದು ಸಿಕ್ಕಿಬಿಟ್ಟಿತು.
1988ರಿಂದ ಎಂಟು ವರ್ಷ ನಾನು ಇತರ ಎಲ್ಲ ವರದಿಗಾರರಂತೆ ಕೇವಲ ವರದಿಗಳನ್ನು ತಂದು ಬರೆದುಕೊಟ್ಟು ಸಂಜೆ ಏಳೆಂಟು ಗಂಟೆ ಹೊತ್ತಿಗೆ ಮನೆಗೋ ಯಾವುದಾದರೂ ದಾಬಾದಲ್ಲೋ ನೆಲೆಗೊಂಡು ಬಿಟ್ಟಿದ್ದರೆ, 30 ವರ್ಷಗಳ ನಂತರ ವಾಪಸ್ ತುಮಕೂರಿಗೆ ಬಂದು ಪತ್ರಿಕೆಯೊಂದರ ಪ್ರಕಾಶಕ ಹಾಗೂ ಸಂಪಾದಕನಾಗಿ ಉಳಿಯಲು ಸಾಧ್ಯವಾಗುತ್ತಿರಲಿಲ್ಲ. ನಾನು ಪತ್ರಿಕಾ ವೃತ್ತಿಯನ್ನು ಆರಂಭಿಸಿದ ಸ್ಥಳೀಯ ದಿನಪತ್ರಿಕೆಯನ್ನು ಪ್ರಕಟಿಸುತ್ತಿದ್ದ ಮಾಲಿಕರ ಲೆಕ್ಕದಲ್ಲಿ ಅದು ಅವರು ಮಾಡುತ್ತಿದ್ದ ಇತರ ಬಿಸಿನೆಸ್ ಗಳಿಗೆ ಪೂರಕವಾದ ಗುರಾಣಿಯೋ ಆಯುಧವೋ ಆಗಿತ್ತು. ನಾನು ವರದಿಗಾರನಾಗಿ ಆ ಪತ್ರಿಕೆಯಲ್ಲಿ ಕೆಲಸ ಮಾಡಲು ಆರಂಭಿಸಿದ ಕೆಲವೇ ತಿಂಗಳಲ್ಲಿ 300 ಪ್ರತಿಗಳು ಮುದ್ರಣಗೊಳ್ಳುತ್ತಿರುವುದು ಕಂಡು ಬಂತು. ಅದರಲ್ಲಿ 120 ಪ್ರತಿಗಳನ್ನು ದೂರದ ಊರುಗಳಿಗೆ ಅಂಚೆಯಲ್ಲಿ ಕಳಿಸಲಾಗುತ್ತಿತ್ತು. ಅಚ್ಚುಮೊಳೆಗಳನ್ನು ವಾಪಸ್ ಖಾನೆಗಳಿಗೆ ಹಾಕುತ್ತಿದ್ದ ಸಣ್ಣಗೆ ಉದ್ದಕ್ಕಿದ್ದ ಗೋಪಿ ಎಂಬಾತ ಅಷ್ಟೂ ಪತ್ರಿಕೆಗಳನ್ನು ನಗರದ ಕೇಂದ್ರ ಭಾಗದಲ್ಲಿ ವಿತರಿಸುತ್ತಿದ್ದ. ಮೂವರು ಹೆಣ್ಣುಮಕ್ಕಳು ಬೆಳಗಿನ 9ರಿಂದ ಸಂಜೆ 6ರವರೆಗೆ ಎರಡು ಪುಟಗಳ ಪತ್ರಿಕೆಯನ್ನು ಸಿದ್ದಪಡಿಸಲು ಸುದ್ದಿಗಳನ್ನು ಅಚ್ಚುಮೊಳೆಯಲ್ಲಿ ಜೋಡಿಸಿಕೊಡುತ್ತಿದ್ದರು. ನಂತರ ಪುಟ ಕಟ್ಟುವ ಕೆಲಸ, ಗ್ಯಾಲಿಯಲ್ಲಿ ಒಂದೆರಡು ಪ್ರೂಫ್ ನೋಡಿದ ಮೇಲೂ ಪುಟ ಕಟ್ಟುವಾಗ ಕೆಲ ಸಣ್ಣಪುಟ್ಟ ಅಕ್ಷರಗಳು ಉದುರಿಹೋಗಿರುತ್ತಿದ್ದರಿಂದ ಮತ್ತೆ ಎರಡು ಸಲ ಪೇಜ್ ಪ್ರೂಫ್ ನೋಡಬೇಕಿತ್ತು. ನಂತರ ಡೆಮ್ಮಿ ಸೆಮಿ ಆಟೋಮ್ಯಾಟಿಕ್ ಶೀಟ್ ಫೆಡ್ ಸಿಲಿಂಡರ್ ಪ್ರಿಂಟಿಂಗ್ ಮೆಶಿನ್ ನಲ್ಲಿ ಎರಡೂ ಪುಟಗಳನ್ನು ಒಂದಾದ ಮೇಲೊಂದು ಮುದ್ರಿಸಬೇಕಿತ್ತು. ಈಗ ಹಾಗಿಲ್ಲ ಒಟ್ಟಿಗೇ ಹನ್ನೆರಡು ಪುಟಗಳನ್ನೂ ಒಂದೇ ಯಂತ್ರ ಎಲ್ಲ ಬಣ್ಣದಲ್ಲಿ ಮುದ್ರಿಸಿ,ಮಡಿಚಿ ಎಣಿಸಿ ಹೊರಗೆ ತಳ್ಳಿ ಬಿಡುತ್ತದೆ. ನಾವು ಕೊಟ್ಟ ಲೆಕ್ಕದಂತೆ ಬಂಡಲುಗಳನ್ನೂ ಕಟ್ಟಿಕೊಡುವ ಯಂತ್ರಗಳೂ ಇವೆ. ಅವತ್ತೂ ಇಂತ ಯಂತ್ರಗಳು ಇರಲಿಲ್ಲವೆಂತಲ್ಲ. ಅಂತ ಯಂತ್ರಗಳನ್ನು ಕೊಂಡು ತರುವ ಶಕ್ತಿ ಇರಬೇಕಿತ್ತಷ್ಟೇ.
ವರದಿಗಾರಿಕೆಯ ಜೊತೆಗೆ ಪತ್ರಿಕೆಗೆ ಜಾಹಿರಾತು ತರುವ, ಪ್ರಸಾರ ಹೆಚ್ಚಿಸುವ ಕೆಲಸದಲ್ಲೂ ತೊಡಗಿಕೊಂಡೆ, ಜೊತೆಗೆ ಜಾಬ್ ವರ್ಕ್ ಕೂಡಾ ವರಮಾನದ ಒಂದು ಭಾಗವಾಯಿತು. ಮೊದಲ ಒಂದೆರಡು ವರ್ಷ ಪತ್ರಿಕೆಯ ಖರ್ಚು ವರಮಾನಕ್ಕಿಂತ ಜಾಸ್ತಿ ಇದ್ದಾಗ ಸಂಪಾದಕರ ಇತರ ಬಿಸಿನೆಸ್ ನ ಅಂಗಡಿಗಳಿಂದ ಸಾಲ ತರುವುದು, ಮತ್ತೆ ವಾಪಸ್ ಕೊಡುವುದು ಹೀಗೇ ನಡೆದಿತ್ತು. ಮೂರನೇ ವರ್ಷಕ್ಕೆ ಪತ್ರಿಕೆಯ ವರಮಾನ-ಖರ್ಚು ಸಮದೂಗಿತು. ಆಮೇಲೆ ಲಾಭ ಬರತೊಡಗಿತು. ಎಂಟು ವರ್ಷ ಅಲ್ಲಿ ಕೆಲಸ ಮಾಡಿ ಸ್ವಂತದ ಮುದ್ರಣಾಲಯ ಹಾಕಲೆಂದು ಹೊರಬಂದೆ. ಒಂದು ವಾರಪತ್ರಿಕೆಯನ್ನೂ ಮಾಡಿದೆ. ನಾನು ಆರಂಭಿಸಿದ ʼ ಸುದ್ದಿ ಅಮೂಲ್ಯʼ ವಾರಪತ್ರಿಕೆಯನ್ನು ತುಮಕೂರಿನ ಲಂಕೇಶ್ ಪತ್ರಿಕೆ ಎಂದು ಓದುಗರು ಮೆಚ್ಚಿ ಬಣ್ಣಿಸತೊಡಗಿದರು. 1996ರ ಜುಲೈ 16ರಂದು ತಡ ರಾತ್ರಿ ನಮ್ಮ ಊರಿನ ತೋಟದ ಮನೆಯಲ್ಲಿ ದರೋಡೆ ನಡೆಯಿತು. ನನ್ನ ದಿಟ್ಟ ಹಾಗೂ ನೇರಾನೇರಾ ಬರವಣಿಗೆಯನ್ನು ನಿಲ್ಲಿಸಲೆಂದೇ ದರೋಡೆ ಮಾಡಿಸಲಾಯಿತು ಎಂಬಂತೆ ಎಲ್ಲರೂ ಹೇಳತೊಡಗಿದರು. ಒತ್ತಡದಲ್ಲಿ ಪತ್ರಿಕೆಯನ್ನು ನಿಲ್ಲಿಸಿ, ಪ್ರೆಸ್ ಅನ್ನೂ ಮಾರಿಬಿಟ್ಟೆ.
ಆದರೆ ಪತ್ರಿಕಾ ವೃತ್ತಿ ಬಿಟ್ಟು ಬೇರೇನೂ ಮಾಡಲು ಇಷ್ಟವಾಗಲಿಲ್ಲ, ನಮಗೆ ಏನು ಮಾಡುವುದು ಇಷ್ಟವೋ ಅದನ್ನೇ ಮಾಡಬೇಕು ಎನ್ನುತ್ತಾರೆ ಜಪಾನೀ ತತ್ವಜ್ಞಾನಿಗಳು. ಅದನ್ನು ಅವರು ʼಇಕಿಗಾಯ್ʼ ಅಂತ ಕರೀತಾರೆ, ನಿನ್ನೊಳಗಿನ ʼ ಇಕಿಗಾಯ್ʼ ಅನ್ನು ಕಂಡುಕೋ ಎನ್ನುತ್ತಾರೆ. ನನ್ನೊಳಗಿನ ʼ ಇಕಿಗಾಯ್ʼ ಪತ್ರಿಕಾ ವೃತ್ತಿ ಅಂತ ಅಂದುಕೊಂಡಿದ್ದೇನೆ. ಲಂಕೇಶ್, ಹಾಯ್ ಬೆಂಗಳೂರು, ಜನತಾ ಮಾಧ್ಯಮ, ನಂತರ ʼಜನವಾಹಿನಿʼ ಹೀಗೆ ವೃತ್ತಿ ಮುಂದುವರೆಸಿದೆ. ʼ 2001ರ ಸೆಪ್ಟೆಂಬರ್ ನಲ್ಲಿ ಕರ್ನಾಟಕ ಸರ್ಕಾರ ಸಚಿವಾಲಯದಿಂದ ನೌಕರಿಗೆ ಆದೇಶ ಬಂತು. ಜನವಾಹಿನಿʼ ಎಂಬ ಅಲ್ಪಾಯು ರಾಜ್ಯಮಟ್ಟದ ದಿನಪತ್ರಿಕೆ ಜೀವಂತ ಉಳಿದುಕೊಳ್ಳುವ ಭರವಸೆ ಇದ್ದಿದ್ದರೆ ನಾನು ಸರ್ಕಾರಿ ಕೆಲಸಕ್ಕೂ ಹೋಗುತ್ತಿರಲಿಲ್ಲ.
15-16ವರ್ಷ ವಿಧಾನ ಸೌಧ, ವಿಕಾಸಸೌಧಗಳಲ್ಲಿದ್ದು, ಸ್ವಯಂ ನಿವೃತ್ತಿ ಪಡೆದು 2017ರ ಜುಲೈ 31ರಂದು ಬಿಡುಗಡೆ ಪಡೆದೆ.. ಆ ದಿನಗಳಲ್ಲಿ ವಿಧಾನ ಸೌಧದ ಎರಡನೇ ಮಹಡಿಯಲ್ಲಿ ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರರಾಗಿದ್ದ ಹಾಗೂ ತುಮಕೂರಿನಲ್ಲಿ ಪ್ರಜಾವಾಣಿ ವರದಿಗಾರರಾಗಿದ್ದಾಗ ನನ್ನ ಕಷ್ಟದ ದಿನಗಳನ್ನು ಕಂಡು ಮರುಗಿದ್ದ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಹಾಗೂ ಮುಖ್ಯಮಂತ್ರಿಯವರ ಪರಿಹಾರ ನಿಧಿ ಶಾಖೆಯ ಮುಖ್ಯಸ್ಥರಾಗಿ ದಿನವೊಂದಕ್ಕೆ 400-500 ಕಡತಗಳನ್ನು ಪರಿಶೀಲಿಸಿ ಅನುಮೋದನೆ ಕೊಡುತ್ತ ಸರ್ಕಾರವನ್ನು ವಂಚಿಸುತ್ತಿದ್ದವರನ್ನು ಪತ್ತೆ ಹಚ್ಚಿ ಜೈಲಿಗೆ ಕಳಿಸಿದ್ದ ಹಿರಿಯ ಕೆಎಎಸ್ ಅಧಿಕಾರಿ ಡಾ.ವೆಂಕಟೇಶಯ್ಯನವರು ನಾನು ಸರ್ಕಾರಿ ನೌಕರಿ ತೊರೆಯುವುದನ್ನು ಒಪ್ಪಲಿಲ್ಲ. ಇಂತ ಹತ್ತಾರು ಹಿತೈಷಿಗಳಿಗೆ ನನ್ನ ಒಳಗಿನ ಒತ್ತಡ ಅರ್ಥವಾಗುವಂತಿರಲಿಲ್ಲ, ಆದರೂ ಅವರನ್ನೆಲ್ಲ ಒಪ್ಪಿಸಿ ಹೊರಬಂದೆ. ಕೋಲಾರ ಮೂಲದ ʼ ಬೆವರ ಹನಿʼ ದಿನಪತ್ರಿಕೆಯ ಮಾಲಿಕತ್ವ ಪಡೆದು, ಮತ್ತೆ ಪತ್ರಿಕಾ ವೃತ್ತಿಗೆ ಮರಳಿದೆ.
ಪತ್ರಿಕೆಯೊಂದನ್ನು ಮುದ್ರಿಸಿ, ಪ್ರಕಟಿಸುವುದಕ್ಕಿಂತ ಕೇವಲ ವರದಿಗಾರನೋ ಉಪಸಂಪಾದಕನೋ ಆಗಿರುವುದು ಅತ್ಯಂತ ಸರಳ ಮತ್ತು ಸುಲಭ. ಒಪ್ಪಿಸಿದ ಕೆಲಸ ಮಾಡಿ ಮುಗಿಸಿದರೆ ಸಾಕು, ಮಾಲಿಕನಾಗುವುದೆಂದರೆ ಹಾಗಲ್ಲ, ಇಂಡಿಯಾದ ರೈತ ಹಾಗೂ ಪತ್ರಿಕೆಗಳ ಮಾಲಿಕರಿಗೂ ಒಂದು ಸಾಮ್ಯತೆ ಇದೆ, ಏನೆಂದರೆ ಇವರಿಬ್ಬರೂ ಅವರವರ ಉತ್ಪನ್ನಗಳನ್ನು ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ದರಕ್ಕೆ ಮಾರುತ್ತಾರೆ. ರೈತ ಮಾರುಕಟ್ಟೆಯ ದಳ್ಳಾಳಿಗಳ ವಂಚನೆ ಜಾಲದಲ್ಲಿ ರೈತ ಮೋಸ ಹೋದರೆ, ಪತ್ರಿಕೆಯ ಮಾಲೀಕರು ಜಾಹಿರಾತು ವರಮಾನದ ಕಾರಣಕ್ಕೆ ಪತ್ರಿಕೆಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಾರೆ. ಈ ರಿಯಾಯಿತಿ ದರವೇ ಜನರಿಗೆ ಅಭ್ಯಾಸವಾಗಿ, ವಾಸ್ತವಿಕ ಮುದ್ರಣ ದರ ನಿಗದಿಪಡಿಸಿದರೆ ಯಾರಾದರೂ ಇರಲಿ ಪತ್ರಕರ್ತರಾಗಿರುವ ನಾವೇ ಕೊಳ್ಳುವುದಿಲ್ಲ ಗೊತ್ತಾ.
ಈಗ ನೋಡಿ, ಮುಖ ಪುಟ ಹಾಗೂ ಕೊನೇ ಪುಟಗಳನ್ನು ಬಣ್ಣದಲ್ಲಿ ಮುದ್ರಿಸಿ ಒಟ್ಟು ಎಂಟು ಪುಟಗಳ ʼ ಬೆವರ ಹನಿʼ ದಿನಪತ್ರಿಕೆಯನ್ನು ಮುದ್ರಿಸಿಕೊಡಲು ನನಗೆ ಕಮ್ಮಿ ಎಂದರೂ 16 ರೂಪಾಯಿ ಖರ್ಚು ಬರುತ್ತಿದೆ. ನಾನು ಈ ಪತ್ರಿಕೆಯನ್ನು ಕೇವಲ 3.00 ರೂಪಾಯಿಗೆ ಮಾರುತ್ತಿದ್ದೇನೆ, ಈ 3.00 ರೂಗಳಲ್ಲಿ ವಿತರಕರ ಕಮಿಶನ್, ಸಾಗಾಟ ಕಳೆದು ನನಗೆ ಉಳಿಯುವುದು ಕೇವಲ ರೂ.1.50 ಮಾತ್ರ, ಉಳಿದ 14.50 ರೂಗಳನ್ನು ನಾನು ಜಾಹಿರಾತಿನಿಂದ ಭರ್ತಿ ಮಾಡಿಕೊಳ್ಳಬೇಕು. ಅಷ್ಟು ಪ್ರಮಾಣದ ಜಾಹಿರಾತು ಬರಬೇಕು. ಪತ್ರಿಕೆ ಪ್ರಕಟಿಸಲು, ಸಿಬ್ಬಂದಿ ವೇತನ, ಮುದ್ರಣ ಕಾಗದ, ವಿದ್ಯುತ್ ಬಿಲ್, ಪ್ಲೇಟ್,ಇಂಕ್, ಕೆಮಿಕಲ್ ಗಳು ಇತ್ಯಾದಿ ಖರ್ಚುಗಳನ್ನು ನಿಭಾಯಿಸುವಷ್ಟು ಮೊತ್ತದ ಜಾಹಿರಾತಾದರೂ ತಂತಾನೆ ಬರುತ್ತದೆಯೇ , ಖಂಡಿತಾ ಇಲ್ಲ, ಅಲ್ಲೂ ಕುತ್ತಿಗೆ ಕುಯ್ಯುವ ಪೈಪೋಟಿ ಇದೆ. ಸಾಲವನ್ನುಎಷ್ಟು ಅಂತ ಮಾಡಲು ಸಾಧ್ಯ.
ಇಷ್ಟೆಲ್ಲ ಪರಿಸ್ಥಿತಿಯಲ್ಲೂ ʼ ಬೆವರ ಹನಿʼ ದಿನಪತ್ರಿಕೆ ಎರಡು ಆವೃತ್ತಿಗಳಲ್ಲಿ ಕೋವಿಡ್ ಬಿಕ್ಕಟ್ಟಿನಲ್ಲೂ ನಿಲ್ಲದೆ ನಿರಂತರವಾಗಿ ಪ್ರಸಾರವಾಗುತ್ತಿದೆ. 12 ವರ್ಷಗಳ ಸೀನಿಯಾರಿಟಿ ಪಡೆದಿರುವ ಕೋಲಾರ ಆವೃತ್ತಿ ನಾಲ್ಕು ಪುಟಗಳಲ್ಲಿ ಪ್ರತ್ಯೇಕವಾಗಿ ಹೊರಬರುತ್ತಿದೆ. ನಾನು 2018ರ ಅಕ್ಟೋಬರ್ ನಲ್ಲಿ ಆರಂಭಿಸಿದ ʼ ಬೆವರ ಹನಿʼ ತುಮಕೂರು ಆವೃತ್ತಿ ಇದೀಗ ʼಪ್ರಾದೇಶಿಕ ದಿನಪತ್ರಿಕೆʼ ಎಂಬ ಸ್ಥಾನ ಹಾಗೂ ಮಾನ್ಯತೆ ಪಡೆದಿದೆ.
2018ರಲ್ಲಿ ಸ್ಥಾಪಿಸಿದ ʼ ಮೈತ್ರೇಯ ಬುದ್ಧ ಪ್ರೆಸ್ʼನಲ್ಲಿ 3 ವರ್ಷದ ಹಿಂದೆ ಎಂಟು ಪುಟಗಳ ಬಣ್ಣದ ಆಫ್ ಸೆಟ್ ಯಂತ್ರ ಅಳವಡಿಸಿದ್ದು ಪತ್ರಿಕೆ ದಿನವೂ ಬಣ್ಣದಲ್ಲಿ ಮುದ್ರಣಗೊಳ್ಳುತ್ತಿದೆ. ಪತ್ರಿಕೆಯ ವರದಿಗಾರರು, ಉಪಸಂಪಾದಕರು, ತಾಲೂಕು ಹಾಗೂ ಜಿಲ್ಲಾ ವರದಿಗಾರರು ಮತ್ತು ಏಜೆಂಟರು ಹಾಗೂ ಪ್ರೆಸ್ ನ ಎಲ್ಲ ಸಿಬ್ಬಂದಿ ತಮ್ಮದೇ ಸ್ವಂತದ್ದೆನ್ನುವಂತೆ ಸ್ವಯಂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ನಾನು ಎಂದಿನಂತೇ ಈ ತಂಡದ ಕೋಚ್ ನಂತೆ ಸುಮ್ಮನೇ ಆಟ ನೋಡುತ್ತಾ ಆಗಾಗ ಸೂಚನೆಗಳನ್ನು ಕೊಡುತ್ತಾ ಇದ್ದೇನೆ. ನನ್ನ ಹಿತೈಷಿಗಳು ಎಂದಿನಂತೆ ಗೊಣಗದೇ ಸಹಕಾರ ಹಾಗೂ ಬೆಂಬಲ ಕೊಡುತ್ತಿದ್ದಾರೆ. ಇವರೆಲ್ಲರ ಜೊತೆಗೆ ʼ ಬೆವರ ಹನಿʼ ದಿನಪತ್ರಿಕೆಯನ್ನು ಅತ್ಯಂತ ಕಕ್ಕುಲಾತಿಯಿಂದ ದಿನವೂ ಹುಡುಕಿ ಓದುವ ಓದುಗ ಪ್ರಭುಗಳಾದ ನೀವಿದ್ದೀರಿ. ನನ್ನ ನಿಯತ್ತನ್ನ ಮೆಚ್ಚಿ ನೀವೆಲ್ಲ ಕೊಡುತ್ತಿರುವ ಜಾಹಿರಾತು ಮೊತ್ತದಲ್ಲಿ ಆಯಾ ತಿಂಗಳ ಖರ್ಚನ್ನು ಅದು ಹೇಗೋ ನಿಭಾಯಿಸಿಕೊಂಡರೂ ಬಣ್ಣದ ಮುದ್ರಣ ಯಂತ್ರಗಳ ಸಾಲ ತೀರುವಳಿ ಬಾಕಿ ಇದೆ.
ಇಷ್ಟೊಂದು ಕಷ್ಟ ಮತ್ತು ತಾಪತ್ರಯವಿರುವಾಗ ನೆಮ್ಮದಿಯಾಗಿ ವಿಧಾನ ಸೌಧದಲ್ಲಿ ನಿದ್ದೆ ಮಾಡಿಕೊಂಡು ಇರೋದು ಬಿಟ್ಟು ಇಲ್ಲೇಕೆ ಬಂದು ನಿದ್ದೆಗೆಟ್ಟು ಒದ್ದಾಡುತ್ತಿರುವುದೇಕೆ ಎಂದು ಕೇಳಿದರೆ ನಾನು ಹೇಳುವೆ ಇದು ನನ್ನ ʼ ಇಕಿಗಾಯ್ʼ.