ಕಟಾವೀರನಹಳ್ಳಿ ನಾಗರಾಜು ಅವರ ʼಪುಟ್ಟಮ್ಮಯ್ಯʼ

ಓದಿನ ಪ್ರೀತಿಗಾಗಿ

ಕಟಾವೀರನಹಳ್ಳಿ ನಾಗರಾಜು ಅವರ ʼಪುಟ್ಟಮ್ಮಯ್ಯʼ

 

 

"ಪುಟ್ಟಮ್ಮಯ್ಯ" ಕಾದಂಬರಿಯಲ್ಲಿನ ಅಮ್ಮಯ್ಯ, ಅಮ್ಮಣ್ಣಿ ಪದಗಳು ತುಮಕೂರಿನ ಸಿರಾದ ಭಾಷೆಯ ಸೊಬಗನ್ನು ತಿಳಿಸುತ್ತವೆ. ಕಾದಂಬರಿಯ ಲೇಖಕರಾದ ಪ್ರೊ. ಕಟಾವೀರನಹಳ್ಳಿ ನಾಗರಾಜು ಮೂಲತಃ ಸಿರಾ ತಾಲ್ಲೂಕಿನ ಕಟಾವೀರನಹಳ್ಳಿಯವರು. ಪುಟ್ಟಮ್ಮಯ್ಯ ಹೆಸರೇ ಹೇಳುವಂತೆ ಇದು ಹೆಣ್ಣೊಬ್ಬಳ ಸುತ್ತ ಹೆಣೆದುಕೊಂಡ ಕಥೆಯಾಗಿದೆ. ಕುವೆಂಪುರವರ ಮಲೆಗಳಲ್ಲಿ ಮದು ಮಗಳು ಕಾದಂಬರಿ ಪ್ರೇರಣೆಯಿಂದ ರೂಪುಗೊಂಡಂತೆ ಪುಟ್ಟಮ್ಮನ ಸುತ್ತ-ಮುತ್ತ ಸುಳಿದಾಡುವ ಎಲ್ಲಾ ವ್ಯಕ್ತಿಗಳು ಇಲ್ಲಿ ಪಾತ್ರಗಳಾಗಿ ಸುಳಿದಾಡಿವೆ. ಅನೇಕ ಯಕ್ಷಗಾನ ಪ್ರಸಂಗಗಳು, ಸತ್ಯವತಿ, ನಳ-ದಮಯಂತಿ, ಅಮೃತಮತಿ, ಇಂದ್ರಜಿತನ ಕಾಳಗ...ಮುಂತಾದ ಮೌಲ್ಯವುಳ್ಳ ಕಥಾ ಪ್ರಸಂಗಗಳನ್ನು ಇಲ್ಲಿ ಕಾಣಲಾಗಿ, ಅದರೊಳಗಿನ ಹೆಣ್ಣುಗಳಂತೆ ಈ ಕಾದಂಬರಿಯೊಳಗಿನ ಹೆಣ್ಣುಗಳು ಗಟ್ಟಿಗಿತ್ತಿಯರೆಂಬುದನ್ನು ಸೂಕ್ಮವಾಗಿ  ಬಿಂಬಿಸಲಾಗಿದೆ.

 ಕರಿಯಜ್ಜಿಯ ಬಳಿ ಸಾಲ ಪಡೆದು ಜೀತಕ್ಕಿರುವ ಕೋನಪ್ಪ ಮತ್ತವನ ಹೆಂಡತಿ ದೇವೀರಿ. ದೇವೀರಿಗೆ ಸಾಲ ತೀರಿಸಿ ತಮ್ಮದೇ ಜಮೀನು ಹೊಂದುವ ಹಂಬಲವನ್ನು ಕೋನಪ್ಪನಲ್ಲಿ ಅರುಹುತ್ತಾಳೆ. ಇದು ಆ ಕಾಲದಲ್ಲಿದ್ದ ಜೀತಪದ್ದತಿಯನ್ನೂ, ಜಾತಿಪದ್ದತಿಯನ್ನೂ ಇಲ್ಲಿ ಬಿಂಬಿಸಲಾಗಿದೆಯಾದರೂ ಮನೆಯ ಮಗನಂತೆ ಸಂತೋಷಪಡುತ್ತಿದ್ದುದನ್ನು ಇಲ್ಲಿ ಗಮನಿಸಬೇಕಾಗುತ್ತದೆ. ಈ ಎರಡೂ ಪಾತ್ರಗಳು ಕಾದಂಬರಿಯ ಅರ್ಧದಲ್ಲೇ ಕಳೆದು ಹೋಗುತ್ತವೆ.

    ಎಂದೂ ಒಬ್ಬರನ್ನೊಬ್ಬರು ನೋಡಿರದ ಬೇರೆ ಜಾತಿಯ ಹುಡುಗಿ ಆಲಮ್ಮ ಹಾಗೂ ಕಾದಂಬರಿಯ ನಾಯಕ ಮೇಲ್ಜಾತಿಯ ಚಿಕ್ಕಾವಲ್ಲಪ್ಪನೂ ಯಾವುದೋ ಘಳಿಗೆಯಲ್ಲಿ ಕೂಡುತ್ತಾರೆ. ಬೇರೆ ಜಾತಿಯ ಆಲಮ್ಮಳಿಗೆ ಅನ್ಯಾಯವಾಗಬಾರದೆಂದು ನಿಶಾ ವಿವಾಹವಾಗುತ್ತಾನೆ. ಇದನ್ನರಿಯದ ತಾಯಿ ಇನ್ನೂ ಮೈನೆರೆಯದ, ಅಣ್ಣನ ಮಗಳಾದ ಪುಟ್ಟಮ್ಮಳನ್ನು ಚಿಕ್ಕಾವಲ್ಲಪ್ಪನಿಗೆ ತಂದುಕೊಳ್ಳುತ್ತಾಳೆ.  ಚಿಕ್ಕಾವಲ್ಲಪ್ಪ ತನ್ನ ತಾಯಿಗೆ  ಆಲಮ್ಮಳ ಸಂಬಂಧದ ಸುಳಿವೂ ಸುಳಿಯದಂತೆ ಸಂಸಾರ ಸಾಗಿಸುತ್ತಾನೆ. ಪುಟ್ಟಮ್ಮ ಮೈನೆರೆದರೂ ಅವಳ ಜೊತೆ ಸಂಸಾರ ಪ್ರಾರಂಭಿಸುವುದಿಲ್ಲ. ತಾಯಿ ಕರಿಯಮ್ಮಳಿಗೆ ಮಗನಿಗೆ ಮಕ್ಕಳಿಲ್ಲದ ಚಿಂತೆಯಾದರೆ, ಇತ್ತ ಆಲಮ್ಮಳು ಹೆಣ್ಣುಮಗುವನ್ನು ಹಡೆದಿರುತ್ತಾಳೆ. ಚಿಕ್ಕಾವಲ್ಲಪ್ಪ ಮಾನವೀಯ ಧರ್ಮ ಮೆರೆದು ನಿಶಾ ವಿವಾಹವಾದದ್ದು ಒಂದು ಕಡೆಯಾದರೆ, ಮನೋಧರ್ಮಕ್ಕೆ ವಿರುದ್ಧವಾಗಿ ಪುಟ್ಟಮ್ಮಳನ್ನು ವರಿಸಿ ಅವಳಿಗೆ ದ್ರೋಹವೆಸಗುತ್ತಾನೆ. ಈ ನೋವು ಅವನನ್ನು ಕಾಡಿದ್ದು ಅಲ್ಲಲ್ಲಿ ಬಂದುಹೋಗಿದೆ. ಕೋನಪ್ಪ ಮತ್ತು ಚಿಕ್ಕಾವಲ್ಲಪ್ಪನ ಹೆಂಡತಿ, ಇಬ್ಬರೂ ಶೋಷಿತರಾಗಿದ್ದು, ಅದನ್ನು ಎಲ್ಲೂ ಕಾಣಗೊಡುವುದು ಎರಡೂ ಪಾತ್ರಗಳ ಸಾಮ್ಯತೆಯನ್ನು ತೋರುತ್ತದೆ. ಪುಟ್ಟಮ್ಮ ಪರಿವಾರ, ಹೊಲ, ಎಮ್ಮೆ, ಹಸುಗಳ ಆರೈಕೆಯಲ್ಲಿ ತನ್ನೆಲ್ಲಾ ನೋವುಗಳನ್ನು ಮರೆಮಾಚುತ್ತಾಳೆ.

  ಸ್ವತಂತ್ರ ಪೂರ್ವ ಕಾಲಘಟ್ಟದಲ್ಲಿ ಅಂತರ್ಜಾತಿ ವಿವಾಹ ಎನ್ನುವುದು ಕಠಿಣವಾಗಿದ್ದು, ಲೇಖಕರು ಇದನ್ನು ಗಾಂಧರ್ವ ವಿವಾಹ ಎಂದು ಕರೆದಿದ್ದಾರೆ. ಚಿಕ್ಕಾವಲ್ಲಪ್ಪ ಸ್ವತಂತ್ರ ಹೋರಾಟದಲ್ಲಿ ಭಾಗಿಯಾಗಿ ಅನೇಕ ಬಾರಿ ಜೈಲಿಗೂ ಹೋಗಿಬಂದಿದ್ದು ರಾಜಕೀಯ ನಾಯಕನಂತೆ ಬಿಂಬಿತವಾಗಿದ್ದಾನೆ. ಇದು ಪ್ರತಿಯೊಂದು ಹಳ್ಳಿಯಲ್ಲೂ ಸ್ವತಂತ್ರ ಹೋರಾಟದಲ್ಲಿ ಭಾಗಿಯಾಗಿದ್ದರೆಂಬುದನ್ನು ಲೇಖಕರು ಇಲ್ಲಿ ಸಾಕ್ಷಿಯಾಗಿಸಿದ್ದಾರೆ. ಕಾದಂಬರಿಯಲ್ಲಿ ಬರುವ ಹೆಣ್ಣು ಗಂಡಿನ ಪ್ರೇಮ, ಕಾಮಗಳ ತೃಷೆಗೆ ಪ್ರಕೃತಿ ದೈವದ ಕೃಪೆಯಿದೆಯೆಂಬುದನ್ನು ತೋರಿಸಲು ಕಾದಂಬರಿಯುದ್ದಕ್ಕೂ ಪ್ರಕೃತಿಸೂಚಕಗಳನ್ನು ಹಾಸಿದ್ದಾರೆ.

ಆಲಮ್ಮ ಮತ್ತವಳ ಮಗಳು ಆಗಾಗ ಕೆಲಸದ ನೆಪದಲ್ಲಿ ಪುಟ್ಟಮ್ಮನ ಮನೆಗೆ ಬರುತ್ತಿದ್ದುದು, ಅವಳು ಅವರಿಗೆ  ಪ್ರೀತಿ, ಆದರ ತೋರುತ್ತಿದ್ದುದು, ಗಂಡನ ಸಂಬಂಧದ ಸುಳಿವನ್ನು ಕಂಡೂ ಕಾಣದಂತೆ ಚಿತ್ರಿಸಲಾಗಿದೆ. ಮೇಲುನೋಟಕ್ಕೆ ಪುಟ್ಟಮ್ಮ ಇದನ್ನು ಒಪ್ಪಿಕೊಂಡಂತೆ ಭಾಸವಾಗುತ್ತದೆ. ೨೦ ವರ್ಷಗಳಿಂದ ಬಂಜೆ ಎಂಬ ಸಮಾಜದ ನಿಂದನೆ ಮಾತುಗಳಿಗೆ ಗುರಿಯಾಗಿದ್ದ ಅವಳು ಹೊಲೆಯರ ಹೊನ್ನಯ್ಯನ ಶಾಸ್ತ್ರದಂತೆ ಅರಳೀಮರ, ಬೇವಿನಮರದ ಪೂಜೆಯನ್ನೂ ಮಾಡುತ್ತಾಳೆ. ಇದು ಶಾಸ್ರ್ತಗಳಿಗೆ  ಜಾತಿ ಮಡಿವಂತಿಕೆಯಿಲ್ಲವೆಂಬುದನ್ನು, ಮೌಡ್ಯತೆಯನ್ನೂ ಹೇಳುತ್ತದೆ. ೨೦ ವರ್ಷಗಳು ಮೈಥುನದ ಆನಂದವನ್ನೇ ಸವಿಯದ ಅವಳು ದೇವರಿಗೇ ಶಾಪ ಕೊಡಲು ಹಿಡಿ ಮಣ್ಣನಿಡಿದು ಅನುವಾಗಲು, ಪ್ರಕೃತಿ ಸೂಚಕಗಳು ಶುಭು ಶಕುನಗಳು ಗೋಚರಿಸಿ ಮನೆಗೆ ಹಿಂದಿರುಗುತ್ತಾಳೆ. ಭೋರ್ಗರೆವ ಹಳ್ಳ, ಕಾರ್ಗತ್ತಲು, ಒಂಟಿತನ ಪುಟ್ಟಮ್ಮನೊಳಗಿನ ಯೌವನದ ಸರ್ಪ ಹೆಡೆಬಿಚ್ಚಿ ಮಲಗಿರುತ್ತದೆ. ಆಲಮ್ಮನ ಮನೆಗೆ ಹೊರಟಿದ್ದ ಚಿಕ್ಕಾವಲ್ಲಪ್ಪ  ಮನೆಗೆ ಹಿಂದಿರುಗಿ ಕಾರ್ಗತ್ತಲೊಳಗೆ ಪುಟ್ಟಮ್ಮಳನ್ನು ತನಗರಿವಿಲ್ಲದೆ ಕೂಡಿ ೨೦ ವರ್ಷಗಳ ಮೈಥುನದ ಅನಂದವನ್ನು ಕೊಟ್ಟು ಪಶ್ಚಾತ್ತಾಪದ ಜ್ವಾಲೆಯಿಂದ ಮುಕ್ತಿ ಹೊಂದುತ್ತಾನೆ. ಪಂಚಭೂತಗಳ ಸಮ್ಮುಖದಲ್ಲಿ  ಅವಳೊಡಲೊಳಗೆ ಬೀಜಾಂಕುರವಾಗುತ್ತದೆ ಎಂಬುದು ತುಂಬಾ ವರ್ಣನೀಯವಾಗಿದೆ.

     ಪುಟ್ಟಮ್ಮಯ್ಯ ಕಾದಂಬರಿ ಕುತೂಹಲಕಾರಿಯಾಗಿದ್ದು,ಪುಟ್ಟಮ್ಮ ಎಷ್ಟೆಲ್ಲ ಬವಣೆ, ನೋವುಗಳಿದ್ದರೂ ತನ್ನೊಡಲೊಳಗೆ ಎಲ್ಲವನ್ನೂ ಗೌಣವಾಗಿಸಿಕೊಂಡು, ಎಲ್ಲಿಯೂ ತೋರಗೊಡದೆ ಕಾದಂಬರಿ ಪ್ರಶಾಂತವಾಗಿ ತಣ್ಣಗೆ ಸಾಗುತ್ತದೆ. ಮುಂದುವರಿದ ಭಾಗ ಇದೆಯೇನೋ ಎಂಬಂತೆ ಓದುಗನನ್ನು ಓದಿದ ನಂತರವೂ ಹಿಡಿದಿಡುತ್ತದೆ. ಸ್ವತಂತ್ರ ಪೂರ್ವಕಾಲದ  ನಾಯಕನ ಹೋರಾಟ, ಅಂತರ್ಜಾತಿ ವಿವಾಹ, ಹೆಣ್ಣಿನ ಶೋಷಣೆ, ಜೀತಪದ್ದತಿ, ಬಾಲ್ಯ ವಿವಾಹ, ಹೆಣ್ಣಿನ ಸೈರಣೆಯ ಗುಣ, ಮೌಢ್ಯಗಳನ್ನು ಎತ್ತಿಹಿಡಿಯುವಲ್ಲಿ ಉತ್ಸಾಹ ತೋರಿದ್ದರೂ ಯಾವುದನ್ನೂ ಎತ್ತಿ ಹಿಡಿದಿಲ್ಲ. ಹೌದು ಮತ್ತು ಅಲ್ಲವೆಂಬಂತೆ ಕಾದಂಬರಿಯೊಳಗೆ ಎಲ್ಲವನ್ನೂ ಹಿಡಿದಿಡಲಾಗಿದೆ.