ನಾನು ಮತ್ತು ದೇವರು!?

“ರಾಜಕೀಯ ತತ್ಕಾಲದಧರ್ಮವಾದರೆ ಧರ್ಮ ದೀರ್ಘಕಾಲೀನ ರಾಜಕೀಯ” ಎಂದು ರಾಮಮನೋಹರ ಲೋಹಿಯಾ ಹೇಳುತ್ತಾರೆ. ಲೋಕಸಭಾಚುನಾವಣೆ ಸಮೀಪಿಸುತ್ತಿದ್ದಂತೆ ರಾಮನೇ ಮೈಮೇಲೆ ಬಂದಂತೆ ಆಡತೊಡಗಿದ್ದಾರೆ, ಹೋದ ಸಲದ ಚುನಾವಣೆಗೆ ಪುಲ್ವಾಮಾ ನೆಪದಲ್ಲಿ ದೇಶ ಭಕ್ತಿ ಓಟಾಗಿ ಉಕ್ಕಿ ಹರಿಯಿತು, ಈ ಸಲದ ಚುನಾವಣೆಗೆ ರಾಮಮಂದಿರ, ಒಟ್ಟಾರೆ ಗೆಲ್ಲ ಬೇಕಷ್ಟೇ, ಆದರೆ ಇಂಡಿಯಾದ ಹೆಣ್ಣುಮಕ್ಕಳಿಗೆ ದೇವರು, ಭಕ್ತಿಯನ್ನು ಅನಿವರ‍್ಯ ಮಾಡಿರುವುದು ಯಾರು, ಯಾಕೆ , ಹೇಗೆ ಎಂಬ ಪ್ರಶ್ನೆಗಳಿಗೆ ಈ ಬರಹ ಉತ್ತರ ಒದಗಿಸಬಲ್ಲದೇ ಓದಿ ನೋಡಿ- ಸಂಪಾದಕ

ನಾನು ಮತ್ತು ದೇವರು!?

ಅನುಭಾವ

ನೇತ್ರಾವತಿ.ಕೆ.ಬಿ

ಹೂಂ.. ನಾನು ಹುಟ್ಟಿದ್ದು ಬೆಳೆದಿದ್ದು, ತೋಟದ ಮನೆಯಲ್ಲಿ. ನಮ್ಮ ಮನೆಯಲ್ಲಿ ದೇವರ ಕೋಣೆ ಇರಲಿಲ್ಲ. ಅಥವಾ ದೇವರ ಫೋಟೋ ಕೂಡ ಇರಲಿಲ್ಲ. ಅದಲ್ಲದೆ ನಮ್ಮ ಅಪ್ಪ ಎಂದೂ ದೇವರಿಗೆ ಕೈ ಮುಗಿದದ್ದು ಇಲ್ಲ. ಅಮ್ಮ ಕೂಡ ಅಪ್ಪನಂತೆ ಎಂದೂ ದೇವರ ಬಗ್ಗೆ ನಮ್ಮ ಹತ್ತಿರ ಮಾತಾಡಿದ್ದಿಲ್ಲ. ಆದ್ದರಿಂದ ನಾವು ದೇವಸ್ಥಾನಕ್ಕೆಂದು ಪದೇ ಪದೇ ತೆರಳಿದ್ದು ಇಲ್ಲ.  ನನಗೆ ನೆನಪಿರುವಂತೆ ನಾನು ಸಣ್ಣವಳಿದ್ದಾಗ ಅಂದರೆ ನಾನು ಒಂದನೇ ತರಗತಿ ಓದುವಾಗ ನನ್ನ ತಮ್ಮನ  ತಲೆ  ಮುಡಿ ಕೊಡಲೆಂದು, ತಿರುಪತಿಗೆ ಕರೆದುಕೊಂಡು ಹೋಗಿದ್ದು ನಂತರ ಅಕ್ಕನಿಗೆ ಹುಶಾರಿಲ್ಲದಂತಾಗುತ್ತಿದ್ದುರಿಂದ ನೆಂಟರಿಷ್ಟರ ಕಾಟ ತಡೆಯಲಾರದೆ ಅಕ್ಕನಿಗೆ ಮುಡಿಕೊಡಲೆಂದು ಚುಂಚನಗಿರಿಗೆ ಕರೆದುಕೊಂಡು ಹೋಗಿದ್ದು ಬಿಟ್ಟರೆ ಎಂದೂ ನಮ್ಮನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿರಲಿಲ್ಲ.

ಹಾಗಂತ ನಾವು ದೇವರನ್ನು ನೋಡಿಯೇ ಇಲ್ಲ ಅಂತಲ್ಲ. ಕೂಗಳತೆ ದೂರದಲ್ಲಿದ್ದ ಅಜ್ಜಿಯ ತೋಟದ ಮನೆಯಲ್ಲಿ ರಾಂನವಮಿ ದೀಪಾವಳಿ ಗಣೇಶ ಹಬ್ಬ ನಾಗರಪಂಚಮಿ ಸಂಕ್ರಾಂತಿ ಹಬ್ಬಗಳು ತುಂಬಾ ವಿಜೃಂಭಣೆಯಿಂದ ನಡೆಯುತ್ತಿತ್ತು. ಆಗೆಲ್ಲಾ ನಾವು ಅಲ್ಲಿಗೆ ಹೋದರೂ ಬೇಗ ವಾಫಸ್ಸು ಬರಬೇಕಿತ್ತು ಅಪ್ಪನ ಆರ್ಡರ್‌.

ಅಮ್ಮನನ್ನ  ನಮ್ಮ ಮನೆಯಲ್ಲಿ ದೇವರ ಫೋಟೋ ಯಾಖೆ ಇಟ್ಟಿಲ್ಲ ಅಂತ ಕೇಳಿದ ನೆನಪು ಏನು ಉತ್ತರ ಕೊಟ್ಟಿತ್ತೆಂದು ತಿಳಿಯದು.  ಆದರೆ ಒತ್ತು ಕೊಟ್ಟು ನೆನಪಿನಲ್ಲಿ ಉಳಿಸಿಕೊಳ್ಳುವಷ್ಟು ಮಹತ್ವದ ವಿಷಯ ನನಗದಾಗಿರಲಿಲ್ಲ. ಅದಕ್ಕಾಗೇ ಅದು ಮರೆತು ಹೋಗಿದೆ. ಆದರೆ ಇವೆರಡೂ ಪ್ರಸಂಗ ನಮಗೆ ಮತ್ತೆ ದೇವಸ್ಥಾನಕ್ಕೆ ಹೋಗಬೇಕೆನ್ನುವ ಆಸೆಯಾಗಲೀ ಅದರ ಪ್ರಮೇಯ ನಮಗೂ ಒದಗಿ ಬಂದಿರಲಿಲ್ಲ. ಎಲ್ಲಿಯವರೆಗೆ ಅಂದರೆ ನಾನು ಇಂಜಿನಿಯರಿಂಗ್‌ ಗೆ ದಾವಣಗೆರೆಗೆ ಹೋಗುವವರೆಗೆ ನನಗೆ ಅದರ ಅವಕಾಶ ಅವಶ್ಯಕತೆ  ಎರಡೂ ಒದಗಿ ಬಂದಿರಲಿಲ್ಲ.

ಹಾಗಂತ ನಮ್ಮ ಜೀವನದಲ್ಲಿ ಏರು ಪೇರಿದ್ದರೂ ಅದು ದೇವರಿಂದ , ನಮ್ಮ ಹಣೆ ಬರಹ ಅಂತೆಲ್ಲ ನಾವು ಯೋಚಿಸಿಯೇ ಇರಲಿಲ್ಲ. ನಾವು ತೋಟ ಬಿಟ್ಟು ತಿಪಟೂರಿನಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದಾಗ ಅಕ್ಕಪಕ್ಕದವರು ವರಮಹಾಲಕ್ಷ್ಮಿ ಹಬ್ಬ ಗಣೇಶ ಹಬ್ಬ ಗೌರಿ ಹಬ್ಬಕ್ಕೆಂದು ಕುಂಕುಮಕ್ಕೆಂದು ಕರೆದಾಗ ಅದು ಹೊಸ ಕಲ್ಚರ್‌ ನಮಗೆ ಏಕೆಂದರೆ ತೋಟದ ಮನೆಯಲ್ಲಿ ಯಾರನ್ನೂ ಕುಂಕುಮಕ್ಕೆಂದು ಕರೆಯಲು ಯಾರೂ ಇರುತ್ತಿರಲಿಲ್ಲ.  ನಮ್ಮ ಸುತ್ತಲ ತೋಟಗಳೆಂದರೆ ಐದು ತೋಟದ ಮನೆಗಳು ಒಂದು  ರಿಟೈರ್ದ ಮಿಲಿಟರಿ ಡಾಕ್ಟರ್‌ ರ ತೋಟ ಅವರು ಚಿಕ್ಕನಾಯಕನಹಳ್ಳಿಯಲ್ಲಿ ಮನೆ ಹೊಂದಿದ್ದರಿಂದ ತೋಟದಲ್ಲಿ ಇರುತ್ತಿದ್ದು ವಿರಳ ಅವರ ಮಗ, ಸೊಸೆ ಕೂಡ ಹಬ್ಬಕ್ಕೆ ಅಲ್ಲಿಗೇ ತೆರಳುತ್ತಿದ್ದರು, ಇನ್ನು ಉಳಿದ್ದು ನಮ್ಮ ಮನೆ ನಮ್ಮ ಅಜ್ಜಿಯ ಮನೆ ಹಾಗೂ ಎರಡು ಮಸ್ಲಿಂ ಕುಟುಂಬಗಳ 3 ಮನೆ.

ಆದ್ದರಿಂದ ನಮ್ಮನ್ನು ಕುಂಕುಮಕ್ಕೆಂದು ಕರೆದವರು ಮನೆಗೆ ಬಂದಾಗ ಅಮ್ಮ ಅವರಿಗೆ ಬರೀ ಕುಂಕುಮ ಹೂವು ಕೊಟ್ಟರೆ ಯಾಕೆ ನೀವು ಲಕ್ಷ್ಮಿ ಕೂರಿಸಿಲ್ಲವಾ, ಗಣೇಶ ಕೂರಿಸಿಲ್ಲವಾ ಪೂಜೆ ಮಾಡಬೇಕು ಮುಂದಿನ ಸಲ ಕೂರಿಸಿ ಅಂತ ಹೇಳಿ ಹೋಗುವವರೇ. ಇದರಿಂದ ಅಮ್ಮ ಅವರು ಮನೆಗೆ ಬಂದಾರು ಎಂದು ಒಂದು ದೇವರ ಗೂಡು ಕ್ರಿಯೇಟ್‌ ಮಾಡಿ ಅದರಲ್ಲಿ ಅಜ್ಜಿ ತಂದು ಕೊಟ್ಟಿದ್ದ ಒಂದು ಬೆಳ್ಳಿ ಗಣೇಶ, ಒಂದು ಶಿವ ಲಿಂಗ, ಒಂದು ಗಣೇಶ, ಸರಸ್ವತಿ, ಲಕ್ಷ್ಮಿ ಇದ್ದಂತಹ ಫೋಟೋ ತಂದು ದಿನಾ ದೀಪ ಹಚ್ಚಿ ಊದುಗಡ್ಡಿ ಹಚ್ಚತೊಡಗಿತು. ಮನೆಯ ಹಿತ್ತಲಲ್ಲೇ ಹೇರಳವಾಗಿ ಹೂವು ಬಿಡುತ್ತಿದ್ದರಿಂದ ಹೂವು ಕೊಳ್ಳುವ ಪ್ರಮೇಯ ಇರಲಿಲ್ಲ. ಅಪ್ಪ ಮೊದ ಮೊದಲು ಜಗಳವಾಡಿತು, ನಾವು ಮೂಕ ಪ್ರೇಕ್ಷಕರು, ಇಬ್ಬರೂ ಹಠ ಬಿಡಲೊಲ್ಲರು, ಕಡೆಗೆ ಅಮ್ಮ ನಿನಗೆ ಕೈಮುಗಿ ಪೂಜೆ ಮಾಡು ಅಂತ ಹೇಳಿಲ್ಲ, ಮನೆಗೆ ಬಂದವರು ಕೇಳುವ ಪ್ರಶ್ನೆಗೆ ನನಗೆ ಉತ್ತ ಕೊಡಲಾಗಲ್ಲ ನಾನು ಇದಕ್ಕಿಂತ ಜಾಸ್ತಿ ದೇವರು ಇಡಲ್ಲ ಆಯ್ತ ಅಂದಾಗ ಆಯ್ತು ಈ ದೀಪ ಊದುಕಡ್ಡಿ ಕೂಡ ಹಚ್ಚಕೂಡದು  ಅಂತ ಹಠ. ಕಡೆಗೆ ಸ್ವಲ್ಪ ದಿನ ಅಮ್ಮ ದೀಪ ಹಚ್ಚುತ್ತಿರಲಿಲ್ಲ ಅವು ಎಣ್ಣೆ ಬತ್ತಿಯೊಂದಿಗೆ ಅಲಂಕಾರಕ್ಕೆ ಇದ್ದವು ಊದುಬತ್ತಿ ಕೂಡ ಅಲಂಕಾರಕ್ಕೆ ನೋಡಿದವರು ಓ ಯಾವಾಗಲೋ ದೀಪ ಹಚ್ಚಿ ಊದುಬತ್ತಿ ಹಚ್ಚಿರಬಹುದು ಅನ್ನುವ ಥರ ಇತ್ತು. ಇನ್ನು ಹೂವು ಕೂಡ ಹಾಗೇ ಒಂದೇ ಒಂದು ಹೂವು ಫೋಟೋದ ಮೇಲಿರುತ್ತಿತ್ತು. ಹಾಗೇ ದಿನಕಳೆದಂತೆ ಅಪ್ಪ ಜನರು ಮನೆಗೆ ಬರುವುದು ಕುಂಕುಮಕ್ಕೆ ಕರೆಯುವುದ ಕಂಡು ಸ್ವಲ್ಪ ಸ್ವಲ್ಪವೇ ಗಮನಿಸಿಯೂ ಗಮನಿಸದಂತೆ ಇರಹತ್ತಿದಾಗ ಅಮ್ಮ ಎರಡು ಹೂವು ಒಂದು ಊದುಕಡ್ಡಿ, ಒಂದೇ ನಂದಾ ದೀಪ ಹೀಗೆ ಹಚ್ಚಿಡಲು ಶುರು ಮಾಡಿತು. ಆದರೂ ಅಪ್ಪ ಎಂದೂ ದೇವರಿಗೆ ಕೈಮುಗಿದಿರಲಿಲ್ಲ.

ಇನ್ನು ನಮ್ಮ ವಿದ್ಯಾಭ್ಯಾಸಕ್ಕೆ ಬಂದರೆ ನಾನು ಶಾಲೆಯಲ್ಲಿ ರ್ಯಾಂಕ್‌ ಹೋಲ್ಡರ್‌, ತಮ್ಮ ಕೂಡ, ಅಕ್ಕ ಆಗಾಗ ಕಾಡುವ ಗೂರಲಿನಿಂದ ಚೆನ್ನಾಗೆ ಓದುತ್ತಿದ್ದಳು, ರ್ಯಾಂಕ್‌ ಸ್ಟೂಡೆಂಟ್‌ ಅಂತ ಅಲ್ಲ. ಆದರೆ ಮುಂದೆ ಅವಳು ಡಿಗ್ರಿ ಬಿಎಸ್‌ಸಿ ಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸ್‌ ಆದಾಗ ಎಂಥಾ ಖುಷಿ. ಅಂದರೆ ದೇವರ ಜಂಟಾಟ ದೇವಸ್ಥಾನದ ಗೋಜಲುಗಳಿಲ್ಲದೆ ನಮ್ಮ ಜೀವನ ಸುಖಕರವಾಗೇ ಇತ್ತು, ನನಗೆ ಇಂಜಿನಿಯರಿಂಗ್‌ ಸೀಟು ಸಿಕ್ಕಿ ದಾವಣಗೆರೆಗೆ ಹೋದಾಗ ಕೂಡ ನನ್ನ ಜೀವನ ಚೆನ್ನಾಗೆ ಇತ್ತು. ಆದರೆ ಹೋದ ಎರಡು ತಿಂಗಳಲ್ಲಿ ನಮ್‌ ಹಾಸ್ಟೆಲ್‌ ಪಕ್ಕದಲ್ಲೇ ಇದ್ದ ರಾಮನ ದೇವಸ್ಥಾನಕ್ಕೆ ಸಂಜೆ ಹೊತ್ತು ವಾಕಿಂಗ್‌ ಕಂ ದೇವರ ದರ್ಶನಕ್ಕೆ ಹಾಸ್ಟೆಲ್‌ ಹುಡುಗಿಯರೆಲ್ಲ ಗುಂಪುಕಟ್ಟಿಕೊಂಡು ಹೋಗಲು ಶುರು ಮಾಡಿದರು, ನಾವು ಫಸ್ಟ್‌ ಇಯರ್‌ ನವರು ಮಾತ್ರ ಆ ಹಾಸ್ಟೆಲ್‌ ನಲ್ಲಿ ಇದ್ದದ್ದು ಹಾಗಾಗಿ ನಾವು ಒಟ್ಟು 13 ಜನರಿದ್ದೆವು ಅಷ್ಟೆ. ನಾನು ಮೊದ ಮೊದಲು ನಿರಾಕರಿಸಿದೆ, ಒಂದಷ್ಟು ದಿನ ಸುಮ್ಮನಿದ್ದ ಅವರು ಪುನಃ ಕರೆದರು, ಒಂದು ದಿನ ನನ್ನನ್ನ ಎಳೆದೇ ಒಯ್ದರು ಅದೇನಾಗುತ್ತೋ ಬಾ ನೋಡೇ ಬಿಡೋಣ ಎಂದು?!.

ನನಗೆ ಮನಸ್ಸಿನಲ್ಲಿ ಕಸಿವಿಸಿ ಆತಂಕ ಭಯ ಮೈಯೆಲ್ಲಾ ಬೆವರಿದ ಅನುಭವ. ಎಲ್ಲರನ್ನು ನಾನೂ ಅನುಕರಿಸಿದೆ. ಕೆಲವರು ನನ್ನ ತಪ್ಪುಗಳನ್ನು ತಿದ್ದಿದರು. ಪ್ರಸಾದ ಕೂಡ ಸಿಕ್ಕಿತು. (ನಮಗೆಲ್ಲಾ ಆಶ್ಚರ್ಯ ವೆಂದರೆ ನಮ್ಮ ಕಾಲೇಜಿನ ನಮ್ಮ ಸಹಪಾಠಿ ಆ ದೇವಸ್ಥಾನದ ಅರ್ಚಕ ಆತ ನಮ್ಮನ್ನೆಲ್ಲ ಆದರದಿಂದ ಮಾತಾಡಿಸಿ ಪ್ರಸಾದ ನೀಡಿದ್ದ). ಒಂದಷ್ಟು ಹೊತ್ತು ಅಲ್ಲೇ ಕುಳಿತೆವು. ನನ್ನ ಗೆಳತಿಯರ ಪ್ರಶ್ನೆ. ಹೂಂ.. ಈಗ ಹೇಳು ನಿನಗೇನಾದರೂ ತೊಂದರೆ ಅನ್ನಿಸುತ್ತಿದೆಯಾ? ಇಲ್ಲಿ ಕುಳಿತಿರುವಾಗ ಮನಸ್ಸಿಗೆ ಆಹ್ಲಾದಕರ ಅನುಭವವಾಗುತ್ತಿಲ್ಲವಾ? ಅಂತೆಲ್ಲಾ ಪ್ರಶ್ನೆಗೆ ನಗು ಮಾತ್ರ ಉತ್ತರವಾಗಿತ್ತು.

ಹಾಸ್ಟೆಲ್‌ ಗೆ ವಾಪಸ್ಸು ಬಂದ ನಂತರ ನನಗೆ ಮನಸ್ಸಿನಲ್ಲಿ ಉಂಟು ಮಾಡುತ್ತಿದ್ದ ಪ್ರಶ್ನೆಗೆ ಉತ್ತರ ಹಾಗೂ ಸಮಜಾಯಿಷಿ ಕೊಡಲು ಪ್ರಯತ್ನ ಪಟ್ಟೆ ಆದರೂ. ಮನಸ್ಸು ಮನೆಯಿಂದ ದೂರ ಇದ್ದದ್ದರಿಂದ ಅಪ್ಪ ಅಮ್ಮನ ಪ್ರಭಾವ ಕಡಿಮೆ ಆಗಿತ್ತೋ ಗೆಳತಿಯರ ಪ್ರಭಾವಕ್ಕೆ ನಾನು ಒಳಗಾಗಿದ್ದೆ,  ಇಷ್ಟು ಹೊತ್ತಿಗೆ ನಮ್ಮ ಅಪ್ಪ ಯಾಕೆ ದೇವರನ್ನು ಪೂಜಿಸುತ್ತಿರಿಲ್ಲ. ಯಾಕೆ ದೇವಸ್ಥಾನಕ್ಕೆ ಕರೆದುಕೊಂಡು ಹೋಗುತ್ತಿರಲಿಲ್ಲ, ಅಂತ ಅರ್ಥ ಆಗಿತ್ತು. ಅದಕ್ಕೆಲಾ ಕಾರಣ ನಮ್ಮ ಜಾತಿ, ಜಾತೀಯತೆ, ಅಸ್ಪಷ್ಯತೆ. ಅಪ್ಪನ ನಿಲುವು ಸರಿ ಇತ್ತು ಅಂತ ತುಂಬಾ ಹಿಂದೆಯೇ ತಿಳಿದು ಅದರಂತೆ ಮನಸ್ಸಿನ್ಲೇ ಮಾನ್ಯ ಮಾಢಿಕೊಂಡಿದ್ದೆ.

ಕಾಣದೂರಲ್ಲಿ ದೇವಸ್ಥಾನದ ಅರ್ಚಕನಿಗೆ ನನ್ನ ಜಾತಿ ಏನು ಗೊತ್ತು ? ಒಂದೊಮ್ಮೆ ಆತ ಕೇಳಿದರೆ ಏನು ಹೇಳುವುದು ಅಂತೆಲ್ಲಾ ಮನಸ್ಸು ಗೋಜಲು ಗೋಜಲು. ಒಂದೆರಡು ವಾರ ದೇವಸ್ಥಾನದ ತಂಟೆಗೆ ಹೋಗದೆ ಹಾಸ್ಟೆಲ್‌ ನಲ್ಲೇ ಉಳಿದೆ.

ಅವರಲ್ಲೆಲ್ಲ ಮತ್ತೊಬ್ಬ ಅರಸೀಕೆರೆಯ ಹುಡುಗಿ ಮತ್ತೊಮ್ಮೆ ಬಲವಂತ ಮಾಡಿ ದೇವಸ್ಥಾನಕ್ಕೆ ಕರೆದೊಯ್ದಳು. ಅಲ್ಲಗೆ ನನ್ನ ದೇವರ ನಡುವಿನ ಹೋರಾಟ ಹೊಸ ತಿರುವು ಪಡೆಯಿತು. ನಾನೂ ಅವರಲ್ಲೊಬ್ಬಳಾಗಿ ಅವರೊಟ್ಟಿಗೆ ದೇವಸ್ಥಾನಕ್ಕೆ ಹೋಗಲು ಶುರುಮಾಡಿದೆ. ಅದೇ ರೀತಿ ನಮ್ಮ ಕಾಲೇಜಿಗೆ ತೆರಳುವ ಹಾದಿಯಲ್ಲಿ ಒಂದು ಪುಟ್ಟ ಗೂಡಿನ ಥರದ ಗುಡಿ ಡಿಪ್ಲೊಮಾ ಕಾಲೇಜಿಗೆ ಅಂಟಿಕೊಂಡಂತೆ ಇತ್ತು ಎಲ್ಲರೂ ಅದಕ್ಕೆ ಕೂಮುಗಿದು ಮುಂದಕ್ಕೆ ನಡೆಯು ವರು, ನಾನೂ ಕೂಡ ಅದೇ ರೀತಿ ಅನುಕರಣೆ ಮಾಡಲು ಶುರುಮಾಡಿದೆ. (just like in PK) , ಇಂಜಿನಿಯರಿಂಗ್‌ ಓದಲು ಅಲ್ಲಿ ಇದ್ದಷ್ಟು ದಿನ ದೇವರು ದೇವಸ್ಥಾನ ಅಂತ ಗೆಳತಿಯರೊಡಗೂಡಿ ಎಲ್ಲದಕ್ಕೂ ದೇವರಿಗೆ ಮೊರೆ ಹೋಗತೊಡಗಿದೆ. ಮೊದಲ ವರ್ಷ ಒಂದೇ ಬಾರಿ ಪಾಸ್‌ ಆಗಿದ್ದ ನಾನು ಎರಡನೇ ವರ್ಷದಿಂದ 2 subject ಉಳಿದು carry farward ಆಯಿತು. ಇದೇ ಮುಂದುವರಿಯಿತು. ಅಂತೂ ಇಂತೂ ಇಂಜಿನಿಯರಿಂಗ್‌ ಮುಗಿಸುವ ಹೊತ್ತಿಗೆ ಪ್ರತಿ ಕೆಲಸಕ್ಕು ದೇವರಿಗೆ ಕಾಣಿಕೆ ಇಡುವುದು, ಹರಕೆ ಕಟ್ಟುವುದು, ದೇವರ ಮೇಲೆ ಭಾರ ಹಾಕುವುದು. ನಾನು ದೇವರಿಗೆ ಉಪವಾಸ ಮಾಡಲಿಲ್ಲ, ಪೂಜೆ ಮಾಡಲಿಲ್ಲ ಅದಕ್ಕೇ ಹೀಗಾಗಿದೆ ಅಂತ ಬೇಸರಪಟ್ಟುಕೊಳ್ಳಲು ಶುರುಮಾಢಿದೆ. ಈಗಲೂ ನನಗೆ ಅದೇ ಕಾಡುವುದು... ನಾನೇಕೆ ಅಂದು ನನ್ನ ಗೆಳತಿಯರ  ಒತ್ತಾಯಕ್ಕೆ ಮಣಿದು ದೇವಸ್ಥಾನಕ್ಕೆ ತೆರಳಿದೆ ? ನನ್ನ ಜೀವನ ಅದಕ್ಕೆ ಮುಂಚೆಯೇ ಚೆನ್ನಾಗಿತ್ತು... ಅಂತ. ನೋ ಯು ಟರ್ನ ಹಾಗಿದ್ದರೆ ಚೆನ್ನಾಗಿತ್ತು.

***