ಜನ ದ್ರೋಹಿ

ಕವನ

ಜನ ದ್ರೋಹಿ

ಪಾಬ್ಲೊ ನೆರೂಡ

 

ಜನ ದ್ರೋಹಿ

________________

ಈ ಎಲ್ಲ ಕೆಡುಗಾಲದ ನಡುವೆ

ಗಹಗಹಿಸುವ ನಿರಂಕುಶಿ

ವಂಚಿತ ಬಡವನ ಭರವಸೆಯ ಮೇಲೆ

ಬರೆಯೆಳೆಯುತಿರುವನು.

ಎಲ್ಲ ದೇಶಗಳಿಗೂ ತಮ್ಮವೇ ಯಾತನೆ

ಪ್ರತಿ ಹೋರಾಟಕ್ಕೂ ತನ್ನದೇ ರೋಧನೆ,

ಬಾ ಇಲ್ಲಿ, ಹೇಳು ನನಗೆ:

ನೆತ್ತರುದಾಹಿಗಳಲಿ, ಕಡಿವಾಣವಿಲ್ಲದ ಜನಪೀಡಕರಲ್ಲಿ

ಹಸಿರು ರಾಜ ಚಾವಟಿಯಿಂದ ದಂಡಿಸುವಂಥ

ದ್ವೇಷಾಂಧದ, ನಿರಂಕುಶತೆ ತುಳುಕುವ

ನನ್ನ ದೇಶದ ನಾಯಕನಂಥವನಿರಲು ಸಾಧ್ಯವೇ, ಹೇಳು!

ಈತ ತನ್ನ ಭರವಸೆಗಳನು ತೂರಿ,

ಹೊಸಕಿ ಹಾಕಿ, ಹೂಂಕರಿಸಿ ನಗುತ್ತಾನೆ.

ಈತನ ರಾಜದಂಡ ಪಾಪಗಳಿಂದ ಕೆತ್ತಿದೆ.

ನಿರ್ಗತಿಕರ ಮೇಲೆ ಇವನ ನರ್ತನ

ಬಡಜನರ ನೋವೆಂದರೆ, ಅಪಹಾಸ್ಯ ಇವನಿಗೆ.

ಈತನ ಜನದ್ರೋಹಿ ತೀರ್ಪುಗಳಿಂದ

ನೊಂದು ನಜ್ಜುಗುಜ್ಜಾದವರ

ಕಪ್ಪು ಕಣ್ಣುಗಳು ಸೆರೆಮನೆಯ ಹಿಂದೆ

ಸೇರಿಕೊಂಡಾಗ

ತನ್ನ ಒಡ್ಡೋಲಗದಲಿ

ಒಡವೆ ಧರಿಸಿ, ಮದಿರೆಬಟ್ಟಲು

ಹಿಡಿದು ತಕಧಿಮಿ ಕುಣಿಯುವನು.

ಇರಲಿ, ಕಪ್ಪು ಕಣ್ಣುಗಳು ಕೂಡ

ಕಪ್ಪಿರುಳು ಪೂರ ದಿಟ್ಟಿಸುತಲಿರುವವು.

[ಆಗ ನೀನೇನು ಮಾಡಿದೆ? ಆಳ ಕಂದಕದಲ್ಲಿ

ಹೂತದನಿಗಳ, ದ್ರೋಹಕ್ಕೆ ಒಳಗಾದ

ನಿನ್ನ ಸೋದರರ ನೋವನ್ನು

ನಿನ್ನ ಶಬ್ದಗಳು ಹಾಡಿದವೇನು?

ಬೆಂಕಿಯುಗುಳುವ ನಿನ್ನ ಪದಗಳು

ನಿನ್ನ ಜನರನು ರಕ್ಷಿಸಲು, ಅವರ ಪರ ದನಿಯೆತ್ತಲು

ಓಡಿ ಬಂದವೇನು?]

(ಚಿಲಿಯ ಸರ್ವಾಧಿಕಾರಿ ಅಗಸ್ತೊ ಪಿನೊಶ್‌ ವಿರುದ್ಧ ಆಕ್ರೋಶದ ಕವಿತೆ)

ಕನ್ನಡಕ್ಕೆ: ಕೇಶವ ಮಳಗಿ