ಸಾಮರಸ್ಯ ನಡಿಗೆ, ಸಹಬಾಳ್ವೆ ಸಮಾವೇಶ ನವೀನ್ ಸೂರಿಂಜೆ

ಸಾಮರಸ್ಯ ನಡಿಗೆ,
ಸಹಬಾಳ್ವೆ ಸಮಾವೇಶ
ನವೀನ್ ಸೂರಿಂಜೆ
ಸಾಮರಸ್ಯ ನಡಿಗೆ, ಸಹಬಾಳ್ವೆ ಸಮಾವೇಶಕ್ಕೂ ಪಂಜುರ್ಲಿ ದೈವಕ್ಕೂ ಏನು ಸಂಬಂಧ ? ಎಂಬ ಚರ್ಚೆಗಳು ನಡೆಯುತ್ತಿದೆ. ಕನ್ನಡದ ಸಾಕ್ಷಿ ಪ್ರಜ್ಞೆ, ತುಳು ಜನಪದ ವಿದ್ವಾಂಸ ಪುರುಷೋತ್ತಮ ಬಿಳಿಮಲೆಯವರು ಪಂಜುರ್ಲಿ ದೈವದ ನುಡಿಯನ್ನು ಉಲ್ಲೇಖಿಸಿ "ಬನ್ನಿ ಸಾಮರಸ್ಯವನ್ನು ಸಂಭ್ರಮಿಸೋಣಾ" ಎಂದು ಕರೆಕೊಟ್ಟಿದ್ದರು. ಇದು ಚರ್ಚೆಗೆ ಕಾರಣವಾಗಿದೆ.
ಪಂಜುರ್ಲಿ ಮಾತ್ರವಲ್ಲ, ಕರಾವಳಿಯ ಎಲ್ಲಾ ದೈವಗಳಿಗೂ ಉಡುಪಿಯಲ್ಲಿ ನಡೆಯುವ ಸಾಮರಸ್ಯ ನಡಿಗೆಗೂ ನೇರ ಸಂಬಂಧವಿದೆ. ಹಾಗೆ ನೋಡಿದರೆ ಕರಾವಳಿಯಲ್ಲಿ ನಡೆಯುವ ಎಲ್ಲಾ ದೈವಗಳ ಕೋಲ/ನೇಮ/ ಕಾಲಾವಧಿ ಉತ್ಸವವೆಂದರೆ ಅದೆಲ್ಲವೂ ಸಹಬಾಳ್ವೆಯ ಸಮಾವೇಶವೇ ಆಗಿದೆ.
ಪಂಜುರ್ಲಿ, ಜಾರಂದಾಯ, ಕೋಡ್ದಬ್ಬು, ತನ್ನಿಮಾನಿಗ, ರಾಹು, ಗುಳಿಗ, ಬಂಟ, ಕಲ್ಲುರ್ಟಿ, ಸತ್ಯಪ್ಪೆ ಹೀಗೆ ತುಳುನಾಡಿನ ಸಾರಮಾನಿ ದೈವಗಳನ್ನು ಭೂಮಿಯಲ್ಲಿ ಮನುಷ್ಯನ ಮೇಲೆ ದರ್ಶನ ಬರಿಸಿದಾಗ ಎಲ್ಲಾ ಜಾತಿ ಧರ್ಮಗಳನ್ನು ಕರೆದೇ ತನ್ನ ಧಾರ್ಮಿಕ ವಿಧಿವಿಧಾನಗಳನ್ನು ಪ್ರಾರಂಭಿಸುತ್ತದೆ. “ಗುತ್ತಿನಾರ್ಲೇ, ನೂಲ್ ಪಾಲ್, ಮೂಲ್ಯರೇ, ಪೂಜಾರ್ಲೇ, ಸೇಕುರ್ಕುಲೇ….. ಒರಿಯತ್ತು, ಒರಿಯಂದು…. ಪೂರ ಸಮದಾರಿಕೆತ್ತೇ ? ರಾಸಿ ಮಲ್ತೊನುಗನೇ?” (ಬಂಟರೇ, ಬ್ರಾಹ್ಮಣರೇ, ಮೂಲ್ಯರೇ, ಬಿಲ್ಲವರೇ, ಮುಸ್ಲೀಮರೇ...ಯಾರನ್ನೂ ಕರೆಯದೇ ಬಿಟ್ಟಿಲ್ಲವಲ್ಲಾ... ಎಲ್ಲರಿಗೂ ಸಮಾದಾನ ತಾನೇ ? ಎಲ್ಲರನ್ನೂ ಸೇರಿಸಿಕೊಳ್ಳೋಣಾವೇ ?) ಅಂತ ದೈವ ಎಲ್ಲಾ ಜಾತಿ ಧರ್ಮದವರನ್ನು ಕರೆದು ಗೌರವಿಸಿ ಅವರೆಲ್ಲರ ಅನುಮತಿ ಪಡೆದು ತನ್ನ ನಡಾವಳಿಯನ್ನು ಪ್ರಾರಂಭಿಸುತ್ತದೆ. ಇದೇ ಸಹಬಾಳ್ವೆಯ ಸಮಾವೇಶ. ಇದೇ ಸಾಮರಸ್ಯದ ನಡಿಗೆ. ಸಾಮರಸ್ಯ ನಡಿಗೆಗೂ ಹೀಗೇ ಎಲ್ಲಾ ಜನಸಮುದಾಯಗಳನ್ನು ಕರೆಯಲಾಗುತ್ತಿದೆ.
ಕರಾವಳಿಯ ದೈವಗಳೆಂದರೆ “ಪತ್ತಪ್ಪೆ ಜೋಕುಲೆನ್ ಒಂಜಿ ಮಟ್ಟೆಲ್ಡ್ ಪಾಡುನ ಶಕ್ತಿ”ಗಳು (ಹತ್ತು ತಾಯಿಯ ಮಕ್ಕಳನ್ನು ಒಂದೇ ಮಡಿಲಲ್ಲಿ ಹಾಕಿ ಸಾಕುವ ಶಕ್ತಿಗಳು) ಎಂದೇ ಬಣ್ಣಿಸಲಾಗುತ್ತದೆ. ಇಷ್ಟೆಲ್ಲಾ ಹೇಳುವ ಪಂಜುರ್ಲಿ, ಕಲ್ಲುರ್ಟಿ, ಸತ್ಯಪ್ಪೆ ನಮ್ಮ ಉಡುಪಿಯಲ್ಲಿ ನಡೆಯುವ ಸಹಬಾಳ್ವೆ ಸಮಾವೇಶಕ್ಕೆ ರಾಯಭಾರಿ ಆಗದಿದ್ದರೆ ಹೇಗೆ ?
ದೈವಗಳು ಮಾತ್ರವಲ್ಲ, ತುಳುನಾಡಿಗೆ ಬಂದ ಬ್ರಾಹ್ಮಣ ದೇವರೂ ಕೂಡಾ ಜಾತ್ಯಾತೀತ, ಧರ್ಮಾತೀತನಾಗುತ್ತಾನೆ. ಕರಾವಳಿಯ ದೈವಾರಾಧನೆ ಪರಂಪರೆಯೇ ಸಾಮರಸ್ಯ, ಸೌಹಾರ್ದತೆ, ಸಹಬಾಳ್ವೆಯದ್ದು. ತುಳುವ ಭಾಷೆಯ ಮೌಖಿಕ ಪರಂಪರೆಯ ಶ್ರೀಮಂತ ಅಭಿವ್ಯಕ್ತಿ ಬಲೀಂದ್ರ ಪಾಡ್ದನದ ಅವೃತ್ತಿಯೊಂದರಲ್ಲಿ, ತಾನು ದಾನವಾಗಿ ನೀಡಲಿರುವ ಮೂರು ಹೆಜ್ಜೆ ಭೂಮಿಯನ್ನು ಏನು ಮಾಡುತ್ತೀಯ ಎಂದು ಬಲಿ ಚಕ್ರವರ್ತಿಯು, ಶ್ರೀಹರಿ ಅವತಾರವಾಗಿದ್ದ ಬ್ರಾಹ್ಮಣ ವಾಮನನ್ನುಕೇಳುತ್ತಾನೆ. ಆಗ ವಾಮನನು,
“ದೇವೆರೆಗು ದೇವಾಲ್ಯೊ,
ದೈವೋಳೆಗು ಬದಿಮಾಡ,
ಬೆರ್ಮೆರೆಗು ಸಾನ,
ನಾಗೆರೆಗ್ ಬನ,
ಜೈನೆರೆ ಬಸ್ತಿ,
ಬ್ಯಾರಿಳೆ ಪಲ್ಲಿ,
ಕುಡುಂಬೆರೆ ಇಂಗ್ರೇಜಿ ಕಟ್ಟಾವ”
ಅನ್ನುತ್ತಾನೆ. (ದೇವರಿಗೆ ದೇವಾಲಯ, ನಾಗದೇವರಿಗೆ ಬನ, ಜೈನರಿಗೆ ಬಸದಿ, ಬ್ಯಾರಿ ಮುಸ್ಲೀಮರಿಗೆ ಮಸೀದಿ ಹಾಗೂ ಕ್ರಿಶ್ಚಿಯನ್ನರಿಗೆ ಚರ್ಚುಗಳನ್ನು ಕಟ್ಟಿಸುತ್ತೇನೆ). ಇದು ತುಳುನಾಡ ಸಂಸ್ಕೃತಿ. ಅದು ವೈದಿಕ ವಾಮನನ್ನೂ ಸಾಮರಸ್ಯ ಬಯಸುವ ಅಪ್ಪಟ ತುಳುವನನ್ನಾಗಿಸಿದೆ.
ಆದ್ದರಿಂದ ಪಂಜುರ್ಲಿ ಮಾತ್ರವಲ್ಲ, ಕರಾವಳಿಯ ಎಲ್ಲಾ ದೈವ ದೇವರುಗಳು ಮತ್ತು ಅದರ ನಿಜವಾದ ಅನುಯಾಯಿಗಳು ಸಾಮರಸ್ಯ ನಡಿಗೆ, ಸಹಬಾಳ್ವೆ ಸಮಾವೇಶದ ರಾಯಭಾರಿಗಳೇ ಆಗಿದ್ದಾರೆ.