ಹಾತ್ರಸ್ ಕಾಲ್ತುಳಿತ - ಮೌಢ್ಯ ಕೂಪದ ಪ್ರತಿಫಲ
“ ಮೌಢ್ಯರಹಿತ ಆದರ್ಶ ಸಮಾಜ !” ಕಟ್ಟುವ ಆಶಯದೊಂದಿಗೆ ತಮ್ಮ ಪ್ರತಿ ತಿಂಗಳ ಮೊದಲ ಮಂಗಳವಾರ ಈ ಅಧ್ಯಾತ್ಮ ಗುರು ನಡೆಸುವ ಸತ್ಸಂಗದಲ್ಲಿ ಸಾವಿರಾರು ಜನರು ಭಾಗವಹಿಸುತ್ತಾರೆ. ತನ್ನದೇ ಆದ ಖಾಸಗಿ ಸೇನೆ, ಮಹಿಳೆಯರ ಬ್ಲ್ಯಾಕ್ ಕಮಾಂಡೋ ಪಡೆಗಳನ್ನು ಹೊಂದಿರುವ ಭೋಲೆ ಬಾಬಾ. ತನ್ನ ಆಧ್ಯಾತ್ಮಿಕ ಬೋಧನೆಯನ್ನು ಭಕ್ತರಿಗೆೆ ತಲುಪಿಸಲು ಖಾಸಗಿ ಯು ಟ್ಯೂಬ್ ಚಾನೆಲ್ ಸಹ ನಡೆಸುತ್ತಾನೆ ಎನ್ನಲಾಗಿದೆ. ಮೂಲತಃ ದಲಿತ ಸಮುದಾಯಕ್ಕೆ ಸೇರಿದ ಈತನಿಗೆ ಜಾಟವ್ ಸಮುದಾಯದ ಅಪಾರ ಬೆಂಬಲ ಇರುವುದರಿಂದ ಸಹಜವಾಗಿಯೇ ಮುಖ್ಯವಾಹಿನಿಯ ಎಲ್ಲ ರಾಜಕೀಯ ಪಕ್ಷಗಳ ಒಡನಾಟ-ಕೃಪೆಯೂ ಇದೆ. ಹೀಗಾಗಿ ಈತನನ್ನು ಈವರೆಗೂ ಬಂಧಿಸಲಾಗಿಲ್ಲ.
ವರ‍್ತಮಾನ
ನಾ ದಿವಾಕರ
21ನೆಯ ಶತಮಾನದ ಡಿಜಿಟಲ್ ಯುಗದಲ್ಲಿ ಜಾಗತಿಕ ಮುಂದಾಳತ್ವವನ್ನು ವಹಿಸಿಕೊಳ್ಳಲು ಸಿದ್ಧವಾಗುತ್ತಿರುವ ಭಾರತ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಹೆಮ್ಮೆ ಪಡುವಂತಹುದು. ಈಗಾಗಲೇ ಚಂದ್ರಯಾನದ ಯಶಸ್ಸಿನಿಂದ ಉತ್ಸಾಹಿತವಾಗಿರುವ ದೇಶದ ವಿಜ್ಞಾನಿಗಳು ಮಂಗಳಯಾನದ ಕನಸು ಕಾಣುತ್ತಿರುವುದು ಸಹಜವೇ ಆಗಿದೆ. ಆದರೆ ಬೌದ್ಧಿಕ ನೆಲೆಯಲ್ಲಿ ವಿಜ್ಞಾನದ ಮುನ್ನಡೆ-ದೇಶದ ವೈಜ್ಞಾನಿಕ-ತಂತ್ರಜ್ಞಾನಾಧಾರಿತ ಬೆಳವಣಿಗೆ ಇವೆರಡರ ನಡುವೆ ಇರುವ ಒಂದು ದೊಡ್ಡ ಕಂದಕದಲ್ಲಿ ಭಾರತೀಯ ಸಮಾಜ ತನ್ನ ಪಾರಂಪರಿಕ-ಸಾಂಪ್ರದಾಯಿಕ ಮೌಢ್ಯದ ನೆಲೆಗಳನ್ನು ಕಾಪಾಡಿಕೊಂಡು ಬಂದಿರುವುದು ವರ್ತಮಾನವನ್ನು ಕಾಡಲೇಬೇಕಿದೆ. ಬಾಹ್ಯಾಕಾಶ ವಿಜ್ಞಾನಿಗಳೂ ತಮ್ಮ ವೈಜ್ಞಾನಿಕ ಸಾಧನೆ ಸಾಕಾರಗೊಳ್ಳುವುದಕ್ಕಾಗಿ ದೈವದ ಮೊರೆ ಹೋಗುವ ಒಂದು ದ್ವಂದ್ವದ ನಡುವೆಯೇ ಆಧುನಿಕ ಭಾರತೀಯ ಸಮಾಜ ವಿಜ್ಞಾನ-ವೈಜ್ಞಾನಿಕತೆ ಮತ್ತು ವೈಚಾರಿಕತೆಯ ನಡುವಿನ ಸೂಕ್ಷ್ಮ ಸಂಬಂಧಗಳನ್ನು ಪುನರ್ ಮನನ ಮಾಡಿಕೊಳ್ಳಬೇಕಿದೆ.
ಋಷಿ ಮುನಿಗಳ ನಾಡು, ಸಾಧು ಸಂತರ ದೇಶ ಎಂದು ಕರೆಯಲಾಗುತ್ತಿದ್ದ ಭಾರತ ಇಸ್ರೋ ಸಂಸ್ಥೆಯ ಸಾಧನೆಗಳ ನೆಲೆಯಲ್ಲಿ ವಿಜ್ಞಾನ-ತಂತ್ರಜ್ಞಾನದ ದೇಶ ಎಂದು ಹೆಸರು ಗಳಿಸಿದ್ದರೂ, ಆಂತರಿಕವಾಗಿ ಸಮಾಜದ ಎಲ್ಲ ಸ್ತರಗಳನ್ನೂ ಆವರಿಸಿರುವ ಮೌಢ್ಯ ಮತ್ತು ಅವೈಚಾರಿಕತೆಯಿಂದ ಸೊರಗುತ್ತಿರುವುದು ಚಿಂತೆಗೀಡುಮಾಡುವ ವಿಚಾರ. ಶೈಕ್ಷಣಿಕವಾಗಿ ವಿಜ್ಞಾನ ಭೋದನೆ ಮತ್ತು ಕಲಿಕೆ ಎಷ್ಟೇ ಮುಂದುವರೆದಿದ್ದರೂ ತಳಸ್ತರದ ಸಮಾಜದ ಸಾಮಾನ್ಯರ-ಸುಶಿಕ್ಷಿತರ ನಡುವೆ ಇಂದಿಗೂ ಗಟ್ಟಿಯಾಗಿರುವ ಅತೀತ ಶಕ್ತಿಯ ಕಲ್ಪನೆಗಳು, ಅವುಗಳ ಸುತ್ತ ಶತಮಾನಗಳಿಂದಲೂ ರೂಢಿಗತವಾಗಿರುವ ನಂಬಿಕೆಗಳು ಭಾರತೀಯ ಸಮಾಜವನ್ನು ನಿರ್ದೇಶಿಸುವ ಪ್ರಧಾನ ವಾಹಿನಿಗಳಾಗಿವೆ. ಅನಕ್ಷರತೆ, ಬಡತನ ಮತ್ತು ದುರ್ಭರ ಜೀವನ ದೇಶದ ತಳಮಟ್ಟದ ಸಮಾಜವನ್ನು ಕಾಡುತ್ತಿರುವುದರಿಂದಲೇ, ಅಲ್ಲಿ ದೈವೀಕ-ಅತೀತ ನಂಬಿಕೆಗಳು ಅಂಧವಿಶ್ವಾಸಗಳಾಗಿ ಮಾರ್ಪಟ್ಟು ಸಮಾಜವನ್ನು ಮೌಢ್ಯದ ಕೂಪಕ್ಕೆ ತಳ್ಳುತ್ತಿವೆ.
ಹಾತ್ರಸ್- ಮೌಢ್ಯಕೂಪದ ಪ್ರತಿಫಲ
ಇದರ ಒಂದು ಆಯಾಮವನ್ನು ಇತ್ತೀಚಿನ ಉತ್ತರಪ್ರದೇಶದ ಹಾತ್ರಸ್ ದುರಂತದಲ್ಲಿ ಕಾಣಬಹುದು. ಬಾಬಾ ಭೋಲೆ ಬಾಬಾ ಎಂಬ ಸ್ವಘೋಷಿತ ದೇವಮಾನವ ಆಯೋಜಿಸಿದ್ದ ಸತ್ಸಂಗ ಸಭೆಯಲ್ಲಿ ಕಾಲ್ತುಳಿತಕ್ಕೆ ಸಿಲುಕಿ 128 ಜನರು ಮೃತಪಟ್ಟಿರುವುದು ಅಂಧವಿಶ್ವಾಸದ ಮತ್ತೊಂದು ಆಯಾಮವನ್ನು ತೆರೆದಿಟ್ಟಿದೆ. “ ಸಾಕಾರ ವಿಶ್ವಹರಿ ಭೋಲೆ ಬಾಬಾ ” ಎಂಬ ಹೆಸರಿನಲ್ಲಿ ಕಥಾವಾಚನಗಳನ್ನು, ಸತ್ಸಂಗ ಸಭೆಗಳನ್ನು ನಡೆಸುವ ಈ ಸ್ವಘೋಷಿತ ದೇವ ಮಾನವ, ಸೂರಜ್‌ಪಾಲ್ ಸಿಂಗ್ ಮೂಲತಃ ಪೊಲೀಸ್ ಕಾನ್‌ಸ್ಟೇಬಲ್ ಆಗಿ 10 ವರ್ಷಗಳ ಸೇವೆ ಸಲ್ಲಿಸಿ , ಲೈಂಗಿಕ ದೌರ್ಜನ್ಯದ ಅಪರಾಧಕ್ಕಾಗಿ ಜೈಲು ಶಿಕ್ಷೆ ಅನುಭವಿಸಿ, ವೃತ್ತಿಯನ್ನು ತೊರೆದು ಕೆಲವು ವರ್ಷಗಳ ಅಜ್ಞಾತವಾಸದ ನಂತರ ಅಧ್ಯಾತ್ಮವನ್ನು ಆಶ್ರಯಿಸಿ ಬಂದ ಮಹಾನುಭಾವ ! ಏಟಾ, ಕಾಸ್‌ಘಂಜ್, ಫರುಖಾಬಾದ್ ಮತ್ತು ರಾಜಸ್ಥಾನದ ವಿವಿಧ ಠಾಣೆಗಳಲ್ಲಿ ಈತನ ವಿರುದ್ಧ ಮೊಕದ್ದಮೆಗಳು ದಾಖಲಾಗಿರುವುದಾಗಿ ಎನ್‌ಡಿಟಿವಿ ಮೂಲಗಳು ವರದಿ ಮಾಡಿವೆ.
ಇದಕ್ಕೆ ಸಮಾನಾಂತರವಾಗಿ ಭೋಲೆ ಬಾಬಾ ಉತ್ತರಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ ಮತ್ತಿತರ ಉತ್ತರ ರಾಜ್ಯಗಳಲ್ಲಿ ಅಪಾರ ಸಂಖ್ಯೆಯ ಭಕ್ತಾದಿಗಳನ್ನೂ ಹೊಂದಿದ್ದಾನೆ ಎನ್ನಲಾಗಿದೆ. “ ಮೌಢ್ಯರಹಿತ ಆದರ್ಶ ಸಮಾಜ !” ಕಟ್ಟುವ ಆಶಯದೊಂದಿಗೆ ತಮ್ಮ ಪ್ರತಿ ತಿಂಗಳ ಮೊದಲ ಮಂಗಳವಾರ ಈ ಅಧ್ಯಾತ್ಮ ಗುರು ನಡೆಸುವ ಸತ್ಸಂಗದಲ್ಲಿ ಸಾವಿರಾರು ಜನರು ಭಾಗವಹಿಸುತ್ತಾರೆ. ಮೈನ್‌ಪುರಿ ಗ್ರಾಮದಲ್ಲಿರುವ ಈತನ ಆಶ್ರಮಕ್ಕೆ ದಿನನಿತ್ಯ ಸಾವಿರಾರು ಜನರು ಭೇಟಿ ನೀಡುತ್ತಾರೆ. ತನ್ನದೇ ಆದ ಖಾಸಗಿ ಸೇನೆ, ಮಹಿಳೆಯರ ಬ್ಲ್ಯಾಕ್ ಕಮಾಂಡೋ ಪಡೆಗಳನ್ನು ಹೊಂದಿರುವ ಭೋಲೆ ಬಾಬಾ. ತನ್ನ ಆಧ್ಯಾತ್ಮಿಕ ಬೋಧನೆಯನ್ನು ಭಕ್ತರಿಗೆ ತಲುಪಿಸಲು ಖಾಸಗಿ ಯು ಟ್ಯೂಬ್ ಚಾನೆಲ್ ಸಹ ನಡೆಸುತ್ತಾನೆ ಎನ್ನಲಾಗಿದೆ. ಸಹಜವಾಗಿಯೇ ಈ ಅಧ್ಯಾತ್ಮದ ಪರಿಚಾರಕನಿಗೆ ರಾಜಕೀಯ ಬೆಂಬಲವೂ ಗಟ್ಟಿಯಾಗಿದೆ. ಮೂಲತಃ ದಲಿತ ಸಮುದಾಯಕ್ಕೆ ಸೇರಿದ ಈತನಿಗೆ ಜಾಟವ್ ಸಮುದಾಯದ ಅಪಾರ ಬೆಂಬಲ ಇರುವುದರಿಂದ ಸಹಜವಾಗಿಯೇ ಮುಖ್ಯವಾಹಿನಿಯ ಎಲ್ಲ ರಾಜಕೀಯ ಪಕ್ಷಗಳ ಒಡನಾಟ-ಕೃಪೆಯೂ ಇದೆ.
ಮಂಗಳವಾರ ನಡೆದ ಸತ್ಸಂಗ ಸಭೆಗೆ ಎರಡೂವರೆ ಲಕ್ಷ ಜನ ಸೇರಿದ್ದರೆಂದು ಹೇಳಲಾಗಿದೆ. ಇಷ್ಟು ಅಗಾಧ ಜನಸಂಖ್ಯೆಯನ್ನು ನಿಯಂತ್ರಿಸಲು ಅಗತ್ಯವಾದ ರಕ್ಷಣಾ ಸೌಕರ್ಯಗಳನ್ನು ಒದಗಿಸದೆ ಇರುವುದು ದುರಂತಕ್ಕೆ ಕಾರಣವಾಗಿದೆ. ಸಭೆ ಮುಗಿದ ನಂತರ ಭೋಲೆ ಬಾಬಾ ನಿರ್ಗಮಿಸಿ ನಡೆದ ಹಾದಿಯಲ್ಲಿ ಆತನ ಪಾದಧೂಳನ್ನು ತೆಗೆದುಕೊಳ್ಳುವ ರಭಸದಲ್ಲಿ ನೂಕುನುಗ್ಗಲು ಹೆಚ್ಚಾಗಿ ಕಾಲ್ತುಳಿತ ಸಂಭವಿಸಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಮೃತಪಟ್ಟವರ ಪೈಕಿ 112 ಮಹಿಳೆಯರು, ಏಳು ಮಕ್ಕಳಿರುವುದು ವರದಿಯಾಗಿದೆ. ಕಾಲ್ತುಳಿತಕ್ಕೆ ಕಾರಣ ಏನೆಂಬುದು ತನಿಖೆಯ ನಂತರವಷ್ಟೇ ತಿಳಿಯಲಿದೆ. ಭೋಲೆ ಬಾಬಾನನ್ನು ಎಫ್‌ಐಆರ್‌ನಲ್ಲಿ ದಾಖಲಿಸದಿರುವುದು ಈ ಸ್ವಘೋಷಿತ ದೇವಮಾನವನ ಸಾಮಾಜಿಕ ಅಂತಸ್ತು/ಪ್ರಭಾವವನ್ನು ತೋರುವಂತಿದೆ. ಕಾರ್ಯಕ್ರಮವನ್ನು ಆಯೋಜಿಸಿದ್ದವರ ಪೈಕಿ ಐವರನ್ನು ಬಂಧಿಸಲಾಗಿದ್ದು ಪ್ರಮುಖ ಆರೋಪಿ ʼ ಸೇವಾದಾರʼ ದೇವಪ್ರಕಾಶ್ ಮಧುಕರ್ ಅವರಿಗೆ ಬಂಧನದ ವಾರಂಟ್ ಹೊರಡಿಸಲಾಗಿದೆ.
ನೈತಿಕತೆ- ಉತ್ತರದಾಯಿತ್ವದ ಪ್ರಶ್ನೆ
ಕಾನೂನು/ನ್ಯಾಯಿಕ ಪರಿಭಾಷೆಯಲ್ಲಿ ಇಂತಹ ಯಾವುದೇ ದುರಂತಗಳು ಸಂಭವಿಸಿದರೂ ಮೂಲ ಕಾರಣಕರ್ತರು ಯಾರು, ಉತ್ತರದಾಯಿತ್ವ ಯಾರದು ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ. ಈ ಘಟನೆಯಲ್ಲೂ ಸಹ ಭೋಲೆ ಬಾಬಾ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಂಡು, ಇದು ಸಮಾಜಘಾತುಕ ಶಕ್ತಿಗಳು ನಡೆಸಿರುವ ಪಿತೂರಿ ಎಂದು ಆರೋಪಿಸಿದ್ದಾರೆ. ಭಾರತದ ಕಾನೂನು ವ್ಯವಸ್ಥೆಯಲ್ಲಿ “ ಷಡ್ಯಂತ್ರ ಮತ್ತು ಪಿತೂರಿ “ ಎಂಬ ರಾಜಕೀಯ ಪರಿಭಾಷೆ ಸಾಮಾನ್ಯವಾಗಿರುವುದರಿಂದ ಅಂತಿಮ ನ್ಯಾಯ ಎನ್ನುವುದು ಬಹುಮಟ್ಟಿಗೆ ಮರೀಚಿಕೆಯಾಗೇ ಉಳಿಯುತ್ತದೆ. ಕಳೆದ ಎರಡು ದಶಕಗಳಲ್ಲಿ ದೇಶದಲ್ಲಿ ಸಂಭವಿಸಿದ ಈ ರೀತಿಯ ಅಸ್ವಾಭಾವಿಕ ದುರಂತಗಳಲ್ಲಿ ಮಡಿದವರೆಲ್ಲರೂ ಅಬ್ಬೇಪಾರಿಗಳೆಂದೇ ಪರಿಗಣಿಸಬೇಕಾಗುತ್ತದೆ. ಏಕೆಂದರೆ ಯಾವುದೇ ಘಟನೆಯಲ್ಲೂ ದುರಂತಕ್ಕೆ ಮೂಲ ಕಾರಣ ಯಾರು ಎನ್ನುವುದು ನಿರ್ಧಾರವಾಗಿಲ್ಲ. ಮಡಿದವರಿಗೆ, ಗಾಯಗೊಂಡವರಿಗೆ, ಮೃತರ ಕುಟುಂಬದವರಿಗೆ ಸರ್ಕಾರಗಳು ನೀಡುವ ಪರಿಹಾರದ ಚೆಕ್ಕುಗಳೇ ಅಂತಿಮ ನ್ಯಾಯವನ್ನು ಸಂಕೇತಿಸುವುದು ಭಾರತದ ಆಡಳಿತ ವ್ಯವಸ್ಥೆಯ ವಿಧಾನವೇ ಆಗಿಹೋಗಿದೆ.
ಕಾಲ್ತುಳಿತ ಸಾವುಗಳ ದುರಂತ ಚರಿತ್ರೆ
2003 –ಆಗಸ್ಟ್ 27 ಮಹಾರಾಷ್ಟ್ರದ ನಾಸಿಕ್‌ನಲ್ಲಿ ಕುಂಭಮೇಳದಲ್ಲಿ ಕಾಲ್ತುಳಿತದಿಂದ 39 ಬಲಿ.
2005 ಜನವರಿ 5 – ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಮಾಂಢರದೇವಿ ವಾರ್ಷಿಕ ಉತ್ಸವದಲ್ಲಿ 340 ಬಲಿ.
2008 ಆಗಸ್ಟ್ 3 ಹಿಮಾಚಲ ಪ್ರದೇಶದ ಬಿಲಾಸಪುರ ನೈನಾ ದೇವಿ ದೇವಾಲಯದಲ್ಲಿ 162 ಬಲಿ.
2008 ಸೆಪ್ಟಂಬರ್30 – ರಾಜಸ್ಥಾನದ ಜೋಧಪುರ ಚಾಮುಂಡಾ ದೇವಾಲಯದಲ್ಲಿ 250 ಬಲಿ.
2010 ಮಾರ್ಚ್ 4 ಉತ್ತರಪ್ರದೇಶದ ಪ್ರತಾಪಘಡ ಜಿಲ್ಲೆಯ ರಾಮ್ ಜಾನಕಿ ದೇವಾಲಯದಲ್ಲಿ 63 ಬಲಿ.
2011 ಜನವರಿ 14 ಶಬರಿಮಲೆ ದೇವಸ್ಥಾನದಲ್ಲಿ 104 ಬಲಿ
2011 ನವಂಬರ್ 8 ಹರಿದ್ವಾರದ ಹರ್-ಕೀ-ಪೌಡಿ ಘಾಟ್‌ನಲ್ಲಿ 20 ಬಲಿ
2012 ನವಂಬರ್ 19 ಗಂಗಾತೀರದ ಅದಾಲತ್ ಘಾಟ್‌ನಲ್ಲಿ 20 ಬಲಿ
2013 ಅಕ್ಟೋಬರ್ 13 ಮಧ್ಯಪ್ರದೇಶದ ದತಿಯಾ ಜಿಲ್ಲೆಯ ರತ್ನಗಢ ದೇವಾಲಯದ ನವರಾತ್ರಿ ಉತ್ಸವದಲ್ಲಿ 115 ಬಲಿ
2014 ಅಕ್ಟೋಬರ್ 3 ಪಟ್ನಾದ ಗಾಂಧಿ ಮೈದಾನದಲ್ಲಿ ದಸರಾ ಉತ್ಸವದ ವೇಳೆ 32 ಬಲಿ
2015 ಜುಲೈ 14 ಆಂಧ್ರಪ್ರದೇಶದ ರಾಜಮಂಡ್ರಿಯ ಪುಷ್ಕರ ಉತ್ಸವದಲ್ಲಿ 27 ಬಲಿ.
2022 ಜನವರಿ 1 ಜಮ್ಮುಕಾಶ್ಮೀರದ ವೈಷ್ಣೋದೇವಿ ಮಂದಿರದಲ್ಲಿ 12 ಬಲಿ
( ಆಧಾರ : ಪ್ರಜಾವಾಣಿ ಜುಲೈ 3 2024)
ಬಹುಶಃ ಈ ಯಾವುದೇ ದುರಂತಗಳಲ್ಲೂ ಆರೋಪಿಗಳನ್ನು ಅಧಿಕಾರಶಾಹಿಯ ನಡುವೆ ಅಥವಾ ಭದ್ರತಾ ವ್ಯವಸ್ಥೆ ಕಲ್ಪಿಸಬೇಕಾದ ಪೊಲೀಸ್ ಮತ್ತಿತರ ರಕ್ಷಣಾ ಸಿಬ್ಬಂದಿಯ ನಡುವೆ ಗುರುತಿಸಿರುವ ಸಾಧ್ಯತೆಗಳಿವೆಯೆ ಹೊರತು, ಅಂತಿಮ ನ್ಯಾಯವಾಗಿ ಅಪರಾಧಿಗಳೆಂದು ಯಾರಿಗೂ ಶಿಕ್ಷೆಯಾಗಿರುವಂತೆ ಕಾಣುವುದಿಲ್ಲ. ಯಾವುದೇ ಸರ್ಕಾರವೂ ಇಂತಹ ಬೃಹತ್ ಜನಸಂದಣಿಯ ನಿರ್ವಹಣೆಯಲ್ಲುಂಟಾಗುವ ವೈಫಲ್ಯಗಳಿಗೆ ನೈತಿಕ ಹೊಣೆ ಹೊತ್ತಿರುವ ನಿದರ್ಶನಗಳು ಇಲ್ಲ. ಈ ಘಟನೆಯೂ ಭಿನ್ನವಾಗಿರಲಾರದು. ತಮ್ಮ ವ್ಯಕ್ತಿಗತ ನಂಬಿಕೆ, ಅಂಧವಿಶ್ವಾಸ ಮತ್ತು ಅತಿರೇಕದ ಭಕ್ತಿಗೆ ಮರುಳಾಗುವ ಜನಸಾಮಾನ್ಯರು ಇಂತಹ ಬೃಹತ್ ಉತ್ಸವಗಳಲ್ಲಿ, ಸಭೆಗಳಲ್ಲಿ ಸ್ವ ಇಚ್ಚೆಯಿಂದಲೇ ಭಾಗವಹಿಸುತ್ತಾರೆ. ದೇವರ ಮೂರ್ತಿಯ ದರ್ಶನಕ್ಕಾಗಿ, ತಾವು ನಂಬುವ ಸಂತ ಬಾಬಾಗಳ ಪಾದಸ್ಪರ್ಶಕ್ಕಾಗಿ ಅವರ ಪಾದಧೂಳಿಗಾಗಿ ಮುಗಿಬೀಳುತ್ತಾರೆ ಅಥವಾ ಅಲ್ಲಿ ವಿತರಿಸುವ ಪ್ರಸಾದ ಪಡೆಯಲು ನುಗ್ಗಲಾರಂಭಿಸುತ್ತಾರೆ. ಈ ಪ್ರಕ್ರಿಯೆಯಲ್ಲಿ ಸಂಭವಿಸುವ ನೂಕುನುಗ್ಗಲು ಕಾಲ್ತುಳಿತ ದುರಂತಕ್ಕೆ ಕಾರಣವಾಗುತ್ತದೆ.
ಮೌಢ್ಯ ಕೂಪಗಳ ಸಾಮಾಜಿಕ ಆಯಾಮ
ಆಧುನಿಕೀಕರಣಗೊಂಡ ನಗರವಾಸಿ ಅಕ್ಷರಸ್ಥ ಜನರೂ ಇಂತಹ ಪ್ರಸಂಗಗಳಲ್ಲಿ ಕಾಣುವುದು ವಿಡಂಬನೆಯಾದರೂ ವಾಸ್ತವ. ಏಕೆಂದರೆ ಅತಿಯಾದ ನಂಬಿಕೆ, ಅತಿರೇಕದ ಅಂಧವಿಶ್ವಾಸವು ಮನುಷ್ಯನ ವಿವೇಕವನ್ನು ಮಸುಕಾಗಿಸುತ್ತದೆ. ಹಾತ್ರಸ್ ದುರಂತ ಇಂತಹ ಒಂದು ಪ್ರಸಂಗ ಎನ್ನಬಹುದಷ್ಟೆ. ಇಲ್ಲಿ ಯಾರನ್ನು ಉತ್ತರದಾಯಿಯಾಗಿಸುವುದು ? ಈ ಪ್ರಶ್ನೆಗೆ ಉತ್ತರ ಶೋಧಿಸುತ್ತಾ ಹೋದರೆ ನಾವು ಮರಳಿ ನಮ್ಮ ನಾಗರಿಕ ಎನ್ನಬಹುದಾದ ಸಮಾಜದ ನಡುವೆಯೇ ಬಂದು ನಿಲ್ಲುತ್ತೇವೆ. ಯಾವುದೇ ಸಮಾಜದಲ್ಲಾದರೂ ಮನುಷ್ಯನಿಗೆ ಅಧ್ಯಾತ್ಮ-ಧರ್ಮ ಅಥವಾ ಇದರ ಸುತ್ತ ನಿರ್ಮಾಣವಾಗುವ ನಂಬಿಕೆ-ವಿಶ್ವಾಸಗಳು ಒಂದು ಸಾಂತ್ವನದ ನೆಲೆಯಾಗಿ ಕಾಣುತ್ತವೆ. ಹಾತ್ರಸ್ ಘಟನೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಅಲ್ಲಿ ನೆರೆದ ಜನರಲ್ಲಿ ತಳಸಮುದಾಯಗಳ, ಸಮಾಜದ ತಳಮಟ್ಟದಲ್ಲಿರುವ ಬಡ-ಅನಕ್ಷರಸ್ಥ-ಅರೆ ಅಕ್ಷರಸ್ಥ ಜನರೇ ಕಾಣಸಿಗುತ್ತಾರೆ.
ಈ ಸಾಮಾನ್ಯ ಜನತೆಯ ಬದುಕು ಸದಾ ಸಂಘರ್ಷಮಯವಾಗಿರುತ್ತದೆ. ದಾರಿದ್ರ‍್ಯ ಅಲ್ಲದೆ ಹೋದರೂ ಬಡತನವಂತೂ ಕಾಡುತ್ತಿರುತ್ತದೆ. (ಅಯೋಧ್ಯೆಯಲ್ಲಿ ಬಿಜೆಪಿಯ ಸೋಲು ಇದಕ್ಕೆ ಸ್ಪಷ್ಟ ನಿದರ್ಶನ). ತಾವು ನಿತ್ಯ ಜೀವನದಲ್ಲಿ ಎದುರಿಸುವ ಹಸಿವು-ಬಡತನ-ನಿರುದ್ಯೋಗ-ನಿರ್ವಸತಿ-ಅನಾರೋಗ್ಯ ಮೊದಲಾದ ಸವಾಲುಗಳಿಗೆ ಕಾರಣವನ್ನು ಯಾವುದೋ ಅತೀತ ಶಕ್ತಿಯಲ್ಲಿ ಕಾಣುವ ಈ ಜನತೆ ಅದರ ಪರಿಹಾರಗಳನ್ನು ದೈವಗಳಲ್ಲಿ, ಸಂತ-ಬಾಬಾಗಳಲ್ಲಿ, ಸ್ವಘೋಷಿತ ದೇವಮಾನವರಲ್ಲಿ ಕಾಣುತ್ತಾರೆ. ವ್ಯಕ್ತಿಗತ ನೆಲೆಯಲ್ಲಿ ಮನಶ್ಶಾಂತಿ-ಸಾಂತ್ವನ ನೀಡುವ ಈ ಅಧ್ಯಾತ್ಮ-ಧರ್ಮ ಕೇಂದ್ರಗಳು ಸಾಮುದಾಯಿಕ ನೆಲೆಯಲ್ಲಿ ಅಂಧವಿಶ್ವಾಸವನ್ನು ಬೆಳೆಸುವ ಮೌಢ್ಯದ ಕೂಪಗಳಾಗಿ ಪರಿಣಮಿಸುತ್ತವೆ. ಅತೀತ ಶಕ್ತಿಯಲ್ಲಿನ ಅಪಾರ ನಂಬಿಕೆಯನ್ನೇ ಬಂಡವಾಳವಾಗಿ ಬಳಸಿಕೊಳ್ಳುವ ಸ್ವಘೋಷಿತ ದೇವಮಾನವರು ಭಕ್ತಾದಿಗಳ ಸಕಲ ಸಮಸ್ಯೆಗಳನ್ನೂ ನಿವಾರಿಸುವ ಭರವಸೆಯನ್ನು ಮೂಡಿಸಿರುತ್ತಾರೆ. ಈ ಭರವಸೆಯೇ ಜನಸಾಮಾನ್ಯರ ಭಾವಾತಿರೇಕದ ಅಂಧವಿಶ್ವಾಸದ ತಳಪಾಯವಾಗುತ್ತದೆ.
ಈ ಅಂಧಾಭಿಮಾನ ಅಥವಾ ಮೌಢ್ಯಾಚರಣೆಯನ್ನು ಹೋಗಲಾಡಿಸುವುದು ಹೇಗೆ, ಆ ಜವಾಬ್ದಾರಿ ಯಾರದು ? ದಿನನಿತ್ಯ ಮುಂಜಾನೆ ಜೋತಿಷ್ಯ ಶಾಸ್ತ್ರವನ್ನು ವಿಧಿವತ್ತಾಗಿ ಪ್ರಸಾರ ಮಾಡುವ ವಿದ್ಯುನ್ಮಾನ ವಾಹಿನಿಗಳಾಗಲೀ, ಯಾವ ಸುದ್ದಿಯನ್ನು ಮರೆತರೂ ದಿನಭವಿಷ್ಯ/ವಾರಭವಿಷ್ಯ ಕಾಲಂ ಮರೆಯದೆ ಪ್ರಕಟಿಸುವ ಮುದ್ರಣ ಮಾಧ್ಯಮಗಳಾಗಲೀ, ಅಸಾರಾಮ್ ಬಾಪು, ನಿತ್ಯಾನಂದ, ಭೋಲೆಬಾಬಾ ಮುಂತಾದ ಸ್ವಘೋಷಿತ ದೇವಮಾನವರನ್ನು ದೈವೀಕರಿಸಿ ಅವರಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಸರ್ಕಾರದಿಂದಲೇ ಒದಗಿಸುವ ರಾಜಕೀಯ ಪಕ್ಷಗಳಾಗಲೀ, ತಮ್ಮ ಚುನಾವಣಾ ಯಶಸ್ಸಿಗಾಗಿ ಈ ಬಾಬಾಗಳ ಪಾದಸ್ಪರ್ಶ ಮಾಡಲೂ ಹಿಂಜರಿಯದ ರಾಜಕೀಯ ನಾಯಕರಾಗಲೀ ಈ ಜವಾಬ್ದಾರಿಯನ್ನು ಹೊರುವ ನೈತಿಕತೆ ಉಳಿಸಿಕೊಂಡಿಲ್ಲ. ವೈಚಾರಿಕ ಪ್ರಜ್ಞೆಯನ್ನು ಜನಮಾನಸದಲ್ಲಿ ರೂಪಿಸುವ ನಿಟ್ಟಿನಲ್ಲಿ ಯಾವುದೇ ಆಡಳಿತಾತ್ಮಕ ಅಥವಾ ಸಾಂಘಿಕ ಕ್ರಮ ಕೈಗೊಳ್ಳದ ಈ ವಲಯಗಳಿಂದ ಸಮಾಜವು ವೈಚಾರಿಕತೆ-ವೈಜ್ಞಾನಿಕತೆಯನ್ನು ನಿರೀಕ್ಷಿಸುವುದಾದರೂ ಹೇಗೆ ?
ಸಮಾಜದಲ್ಲಿ, ವಿಶೇಷವಾಗಿ ತಳಮಟ್ಟದಲ್ಲಿ ಸಾಮಾನ್ಯರ ನಡುವೆ ವೈಚಾರಿಕತೆಯ ಬೀಜಗಳನ್ನು ಬಿತ್ತುವ ಕೆಲಸ ನಾಗರಿಕರ ನಡುವಿನಿಂದಲೇ ಆರಂಭವಾಗಬೇಕಿದೆ. ತಮ್ಮ ನಿತ್ಯ ಬದುಕಿನ ಜಂಜಾಟಗಳಿAದ ಮುಕ್ತಿಗಾಗಿ ದೇವಮಾನವ-ಬಾಬಾಗಳನ್ನು ಆಶ್ರಯಿಸುವ ತಳಸಮಾಜದ ಜನರಿಗೆ ಅವರ ಸಂಕಷ್ಟಗಳಿಗೆ ಕಾರಣಗಳನ್ನು ತಿಳಿಸುವಂತೆಯೇ ಅದಕ್ಕೆ ಪರಿಹಾರೋಪಾಯ ಮಾರ್ಗಗಳನ್ನೂ ತಿಳಿಸುವುದು ಆಧುನಿಕತೆಗೆ ತೆರೆದುಕೊಂಡು ಹಿತವಲಯದಲ್ಲಿರುವ ಸಮಾಜದ ಆದ್ಯತೆ ಮತ್ತು ಕರ್ತವ್ಯವಾಗಬೇಕಿದೆ. ಎರಡಕ್ಕೂ ನಮ್ಮ ಸಮಾಜ, ನಾವು ಆಯ್ಕೆ ಮಾಡುವ ಸರ್ಕಾರ, ನಾವು ಸಹಿಸಿಕೊಳ್ಳುವ ಆಳ್ವಿಕೆ ಮತ್ತು ಆಡಳಿತ ವ್ಯವಸ್ಥೆಯೇ ಉತ್ತರದಾಯಿ ಎನ್ನುವುದನ್ನು ಜನತೆಗೆ ಮನದಟ್ಟು ಮಾಡಬೇಕಿದೆ. ದೈವದಲ್ಲಿನ ಸಾಮಾನ್ಯ ಜನರ ನಂಬಿಕೆಗಳನ್ನು ಬಳಸಿಕೊಂಡು ಮೌಢ್ಯವನ್ನು ಬಿತ್ತುವ ಸಾಂಸ್ಕೃತಿಕ ಶಕ್ತಿಗಳ ಪ್ರಭಾವವನ್ನು ತೊಡೆದುಹಾಕಬೇಕಿದೆ. ಈ ರೀತಿಯ ಮೌಢ್ಯ ಮತ್ತು ಅಂಧವಿಶ್ವಾಸ ಎಲ್ಲ ಧರ್ಮೀಯರಲ್ಲೂ ಇದೆ ಎಂಬ ಅರಿವೂ ನಮ್ಮೊಳಗಿರಬೇಕಾಗುತ್ತದೆ. ಹಾಗೆಯೇ ಇದನ್ನೇ ಬಳಸಿಕೊಂಡು ತಮ್ಮ ಸಾಮ್ರಾಜ್ಯಗಳನ್ನು ವಿಸ್ತರಿಸಿಕೊಳ್ಳುವ ಶಕ್ತಿಗಳೂ ಧರ್ಮಾತೀತವೇ ಆಗಿರುತ್ತವೆ.
ವೈಚಾರಿಕತೆಯ ಬೀಜಬಿತ್ತನೆ ಅಭಿಯಾನ
ವೈಚಾರಿಕತೆಯನ್ನು ತಮ್ಮ ಜೀವನದ ಮಾರ್ಗವಾಗಿ ಅನುಸರಿಸಿದ ಮಹನೀಯರ ಜೀವಗಾಥೆಗಳನ್ನು ಶಿಕ್ಷಣದಲ್ಲಿ ಅಳವಡಿಸಿದ ಮಾತ್ರಕ್ಕೆ ವೈಚಾರಿಕತೆ ಬೆಳೆಯುವುದಿಲ್ಲ. ವೈಚಾರಿಕ-ವೈಜ್ಞಾನಿಕ ಮನಸ್ಥಿತಿಯನ್ನು ಯುವ ಸಮೂಹದಲ್ಲಿ, ವಿಶಾಲ ಸಮಾಜದಲ್ಲಿ ಮೂಡಿಸಬೇಕಾದರೆ ವರ್ತಮಾನದ ಸಾಮಾಜಿಕ-ಸಾಂಸ್ಕೃತಿಕ ವಿಕೃತಿಗಳನ್ನು ಎಳೆಯ ವಯಸ್ಸಿನಿಂದಲೇ ಮನದಟ್ಟು ಮಾಡಬೇಕಾಗುತ್ತದೆ. ಜನಸಾಮಾನ್ಯರು ತಮ್ಮ ನಿತ್ಯಬದುಕಿನ ಸಂಕಷ್ಟಗಳಿಂದ ಪಾರಾಗಲು ಶರಣಾಗುವ ಮೌಢ್ಯದ ಆವರಣವನ್ನು ಭೇದಿಸಿ, ಅಲ್ಲಿ ವೈಚಾರಿಕ ಪ್ರಜ್ಞೆಯನ್ನು ಬಿತ್ತುವ ಕೆಲಸ ಸಮಾಜದಿಂದಲೇ ಆಗಬೇಕಿದೆ. ಸಾಮಾನ್ಯ ಜನರಲ್ಲಿ ಬೇರೂರಿರುವ ಆಸ್ತಿಕತೆಯನ್ನು ಗೌರವಿಸುತ್ತಲೇ, ಅಂಧವಿಶ್ವಾಸಗಳಿಂದ ದೂರವಾಗುವಂತೆ ತಿಳುವಳಿಕೆ ಮೂಡಿಸಬೇಕಿದೆ. ಜಾತಿ-ಸಂಸ್ಕೃತಿ-ಧರ್ಮ ಮತ್ತು ಸಂಪ್ರದಾಯಗಳ ಹೆಸರಿನಲ್ಲಿ ಜನರ ನಡುವೆ ಬಿತ್ತಲಾಗುತ್ತಿರುವ ಮೌಢ್ಯದ ಬೀಜಗಳನ್ನು, ಅದರಿಂದ ಮೊಳೆತಿರುವ ಅಂಧವಿಶ್ವಾಸದ ಸಸಿಗಳನ್ನು ಎಳೆಯದರಲ್ಲೇ ಕಿತ್ತೊಗೆಯುವ ಅಭಿಯಾನಕ್ಕೆ ಇಡೀ ಸಮಾಜವೇ ಕೈಜೋಡಿಸಬೇಕಿದೆ. ಆಗ ಮಾತ್ರ “ ನಾವು ಪ್ರಬುದ್ಧರು-ಪ್ರಜ್ಞಾವಂತರು ” ಎಂದು ಎದೆಮುಟ್ಟಿ ಹೇಳಬಹುದು.
ಆಗ ಸ್ವಘೋಷಿತ ದೇವಮಾನವರು, ಅಧ್ಯಾತ್ಮ-ಜೋತಿಷ್ಯ-ವಾಸ್ತುಶಾಸ್ತ್ರದ ಉದ್ಯಮಿಗಳು ನಿರುದ್ಯೋಗಿಗಳಾಗುತ್ತಾರೆ, ಇವರು ಕಟ್ಟಿಕೊಂಡಿರುವ ಬೃಹತ್ ಸಾಮ್ರಾಜ್ಯಗಳು ಕುಸಿಯುತ್ತವೆ. ಇದಕ್ಕೆ ಮುಖ್ಯವಾಗಿ ಯುವ ಪೀಳಿಗೆಯಲ್ಲಿ ಪ್ರಶ್ನಿಸುವ ಮನೋಭಾವ ಬೆಳೆಸಬೇಕಿದೆ. ಯಾವುದೂ ಪ್ರಶ್ನಾತೀತವಲ್ಲ ಎಂಬ ಭಾವನೆ ಬೆಳೆಸಬೇಕಿದೆ. ಹಾತ್ರಸ್ ದುರಂತದಲ್ಲಿ ಮಡಿದ ನೂರಾರು ತಾಯಂದಿರು ತಮ್ಮ ಮಕ್ಕಳ ಶ್ರೇಯಸ್ಸಿಗಾಗಿ ಇಂತಹ ಮೌಢ್ಯಕ್ಕೆ ಶರಣಾಗಿರುತ್ತಾರೆ, ಆದರೆ ಈ ಮಕ್ಕಳ ಶ್ರೇಯಸ್ಸು-ಮುನ್ನಡೆ ದೇಶದ ಸಾಮಾಜಿಕ ಜವಾಬ್ದಾರಿ-ಆರ್ಥಿಕ ಹೊಣೆ ಮತ್ತು ಆಡಳಿತಾತ್ಮಕ ಆದ್ಯತೆ ಎಂಬ ವಾಸ್ತವವನ್ನು ಜನತೆಗೆ ತಿಳಿಸಿಹೇಳಬೇಕಿದೆ. ಇಲ್ಲಿ ನಮಗೆ ಅಂಬೇಡ್ಕರ್, ಪೆರಿಯಾರ್, ಮಾರ್ಕ್ಸ್ ದಾರಿದೀಪವಾಗುತ್ತಾರೆ. ರಾಜಕೀಯ-ಜಾತಿ ಅಸ್ಮಿತೆಗಳಿಂದಾಚೆ ನಿಂತು ಯೋಚಿಸುವ ಕ್ಷಮತೆ ಮತ್ತು ವ್ಯವಧಾನವನ್ನು ನಾವು ಬೆಳೆಸಿಕೊಳ್ಳಬೇಕಿದೆ.
ಈ ನಿಟ್ಟಿನಲ್ಲಿ ಯೋಚಿಸಲು ಸಾಧ್ಯವೇ ? ನೋಡೋಣ.