ವಿಶ್ವದ ಎಲ್ಲ ಸ್ಥಳೀಯ ಭಾಷೆಗಳಿಗೆ ಗೋಳೀಕರಣ ಬಹಳ ಖತರ್ನಾಕ್..,
ಅಧ್ಯಾಪಕ, ಕವಿ.ನಾಟಕಕಾರ, ಭಾಷಾಂತರಕಾರ, ಲೇಖಕ, ವಿಮರ್ಶಕ ಹೀಗೆ ಬಹುಮುಖ ಪ್ರತಿಭೆಯ ಹಾಗೂ ಅವಧೂತನಂತೆ ಬದುಕಿ ಬಾಳಿದ ಹೆಚ್.ಎಸ್.ಶಿವಪ್ರಕಾಶ್ ಶುಕ್ರವಾರ, ಶನಿವಾರ ಎರಡೂ ದಿನ ತುಮಕೂರಿನಲ್ಲಿದ್ದರು, ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅವರು ವೇದಿಕೆಯಿಂದ ಮಾಡಿದ ಅಧ್ಯಕ್ಷೀಯ ಭಾಷಣದ ಪೂರ್ಣ ಪಾಠ ಇಲ್ಲಿದೆ. ಶಿವಪ್ರಕಾಶ್ ಅವರ ಹಿರೀಕರಂತೆಯೇ ತುಮಕೂರಿನಲ್ಲಿ ಕೆಲಕಾಲ ಇದ್ದು ಹೋದವರು, ಅವರ ಬರವಣಿಗೆ ಹಾಗೂ ಬದುಕಿನ ಮೇಲೆ ತುಮಕೂರಿನ ಪ್ರಭಾವ ದೊಡ್ಡ ಪ್ರಮಾಣದಲ್ಲೇ ಇದೆ ಎಂಬುದನ್ನು ಅವರೇ ಈ ಭಾಷಣದಲ್ಲಿ ವಿವರಿಸಿದ್ದಾರೆ. ಓದಿ, ಆನಂದಿಸಿ - ಸಂಪಾದಕ
ಹೆಚ್.ಎಸ್.ಶಿವಪ್ರಕಾಶ್
ತುಮಕೂರು ಜಿಲ್ಲಾ ಸಾಹಿತ್ಯ ಪರಿಷತ್ತಿನವರು ನನ್ನನ್ನು ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ. ಇದಕ್ಕಾಗಿ ನನ್ನ ಹೃತ್ಪೂರ್ವಕ ಧನ್ಯವಾದಗಳು. ಇದು ನನಗೆ ಅನಿರೀಕ್ಷಿತ. ಏಕೆಂದರೆ, ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನವರು ನನ್ನನ್ನು ಇಷ್ಟು ವರ್ಷಗಳಲ್ಲಿ ಕರೆದದ್ದು ಒಂದೇ ಒಂದು ಸಲ! ಒಟ್ಟಾರೆಯಾಗಿ ಅವರ ಕಣ್ಣಿಗೆ ನಾನು ಕಾಣುತ್ತಿಲ್ಲ; ನನ್ನ ಕಣ್ಣಿಗೆ ಅವರೂ ಕಾಣುತ್ತಿಲ್ಲ! ಅವರು ಗುರುತಿಸದ ನನ್ನನ್ನು ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನವರು ಗುರ್ತಿಸಿದ್ದಾರಲ್ಲ! ಅಷ್ಟು ಸಾಕು.
ನಾನು ತುಮಕೂರಿನಲ್ಲಿ ಸೇವೆ ಮಾಡಿದ ಕಾಲಾವಧಿಯನ್ನು ಅಲ್ಲಿಂದಾಚೆಗೆ ನಾಲ್ಕು ದಶಕಗಳ ನಂತರದ ಇಂದಿನ ಕಾಲಾವಾಧಿಯ ಜೊತೆಗೆ ಇಟ್ಟು ನೋಡಿದಾಗ ಜಗತ್ತಿನಲ್ಲಿ ಕೆಲವು ಮೂಲಭೂತವಾದ ಮಾರ್ಪಾಟುಗಳು ಜರುಗಿ ಅವು ಪ್ರಾದೇಶಿಕತೆಗಳ ಹಣೆ ಬರಹಗಳನ್ನು ತಲಸ್ಪರ್ಶಿಯಾಗಿ ಬದಲಾಯಿಸಿದೆ.
21ನೇ ಶತಮಾನದ ಮೊದಲ ಭಾಗದಲ್ಲಿ ಹಿಂದಿನ ಶತಮಾನದ ಕೆನೆಡಾದ ಸಾಹಿತ್ಯವನ್ನು ಕುರಿತ ಬರೆದ ವಿಖ್ಯಾತ ವಿಮರ್ಶಕ ನಾರ್ಥೋ ಫ್ರೈ ಎಂಬ ಲೇಖಕ ಹೇಳುತ್ತಾನೆ ‘ಇಂದಿನ ಪ್ರಾದೇಶಿಕತೆಗಳು ಕೇವಲ ಪ್ರಾದೇಶಿಕತೆಗಳಾಗಿ ಉಳಿದಿಲ್ಲ. ಸಂಪರ್ಕ ಮಾಧ್ಯಮಗಳ ಹಿಗ್ಗುವಿಕೆಯಿಂದ ಜಗತ್ತಿನ ವೈಶಾಲ್ಯ ಕುಗ್ಗುತ್ತಿದೆ. ಇಡೀ ಜಗತ್ತಿನ ಸಮಸ್ಯೆಗಳಿಂದ ಪ್ರಾದೇಶಿಕತೆಯನ್ನು ಬಿಡಿಸಿ ನೋಡುವುದು ಸುಲಭವಲ್ಲ’. 2001ರಲ್ಲಿ ಕೇಳಿದ ಈ ಮಾತುಗಳು ಅಂದಿಗಿಂತಲೂ ಇಂದು ಪ್ರಸ್ತುತವಾಗಿವೆ.
ಇವೊತ್ತಿಗೂ ಗೋಳೀಕರಣ ಜಗತ್ತಿನ ಮೂಲ ಮಂತ್ರವಾಗಿದೆ. ಆದರೆ ಕೇವಲ ಇದು ವಾಚಕ. ಇದರ ವಾಚ್ಯ ಮತ್ತು ವ್ಯಂಗ್ಯ ಮಾರ್ಕೆಟ್ಟೀಕರಣ ಮತ್ತು ಬಹುರಾಷ್ಟ್ರೀಯ ಕಂಪನಿಗಳ ದಬ್ಬಾಳಿಕೆ. ಇನ್ನು ಈ ಪ್ರದೇಶಿಕ ಚಳವಳಿಗಳು- ಉದಾಹರಣೆಗೆ ಆದಿವಾಸಿ ಚಳವಳಿಗಳು, ಸ್ವ್ರೀತ್ವವಾದಿ ಚಳವಳಿಗಳು, ಶೋಷಿತ ಜನ ವಿಭಾಗಗಳ ಹೋರಾಟಗಳು-ಇನ್ನೂ ಜೀವಂತವಾಗಿದ್ದರೂ ಅವು ಉದ್ದೇಶಿತ ಪರಿವರ್ತನೆ ತರುವಲ್ಲಿ ಪಡೆದಿರುವ ಸಫಲತೆ ಬಹಳ ಕಡಿಮೆ. ಜಗತ್ತಿನ ಪ್ರಜಾಪ್ರಭುತ್ವ ಬಾಹ್ಯ ವಹಿವಾಟಗಳ ಸೋಗಲಾಡಿತನವನ್ನೇ ಉಳಿಸಿಕೊಂಡೇ ಮಾರ್ಕೆಟ್ಟೀಕರಣದ ಅಜಿಂಡಾಗಳನ್ನು ಜನರ ಮೇಲೆ ಹೇರುವುದರಲ್ಲಿ ಯಶಸ್ವಿಯಾಗಿವೆ.
ಕಾರ್ಲ್ಮಾರ್ಕ್ಸ್ ಹೇಳಿದ ಪ್ರಕಾರ ಒಂದು ದಿನ ಜಗತ್ತಿನ ಎಲ್ಲ ಪ್ರಭುತ್ವಗಳು ಕಾಣೆಯಾಗಿ ಎಲ್ಲೆಡೆ ಸಮತಾವಾದದ ಸೌಹಾರ್ದ-ಶಾಂತಿಗಳು ಹರಡಬೇಕಾಗಿತ್ತು! ಆದರೆ ಈ ಹೊತ್ತು ಪ್ರಭುತ್ವಗಳ ಇಳಿತ ಕ್ಷೀಣವಾಗುತ್ತಿದೆ ನಿಜ. ಆದರೆ ಅದು ನಡೆಯುತ್ತಿರುವುದು ‘ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು’ ಎಂಬ ನಂಬುಗೆಯ ಆಧಾರದ ಮೇಲಲ್ಲ. ಲಾಭ, ಲಾಭ, ಲಾಭ ಇದೊಂದೆ ಇಂಜಿನ್ ಇಂದಿನ ಗೋಳೀಕರಣದ ನಿಷ್ಕುರುಣಿ ಯಂತ್ರ. ಇಂದು ಕನ್ನಡದ ಬರಹಗಾರನೊಬ್ಬ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಸಿದ್ಧರಬೆಟ್ಟದ ಪಕ್ಕದಲ್ಲಿರಲಿ; ಅಥವಾ ದಕ್ಷಿಣ ಅಮೆರಿಕಾದ ಬ್ರೆಜಿಲ್‌ನ ದಕ್ಷಿಣಾಗ್ರದ ಊರಿನಲ್ಲಿರಲಿ, ಮೇಲೆ ಹೇಳಿದ್ದು ಎಲ್ಲ ಪ್ರದೇಶಗಳ, ಎಲ್ಲ ನಾಡುಗಳ ಒಟ್ಟು ಹಿನ್ನೆಲೆ. ಈವೊಂದು ವಿವಿಧ ಪ್ರದೇಶಗಳಲ್ಲಿ ಬದುಕುತ್ತಿರುವ ಬರಹಗಾರರ ಜವಾಬುದಾರಿಗಳೇನು? ಗೊತ್ತುಗಳೇನು?
ಈ ಬಗ್ಗೆ ಯಥಾ ಶಕ್ತಿ, ಯಥಾ ಮತಿ. ಹತ್ತು ಹದಿನೈದು ವರುಷಗಳಿಂದ ಆಲೋಚಿಸುತ್ತಾ ಬಂದಿದ್ದೇನೆ. ಅದರ ಉಪಲಬ್ದಿಗಳನ್ನು ನಿಮ್ಮೊಡನೆ ಚುಟುಕಾಗಿ ಹಂಚಿಕೊಳ್ಳಲು ಇಚ್ಛಿಸುತ್ತೇನೆ. ಜಗತ್ತಿನ ವಿವಿಧ ಪ್ರದೇಶಗಳು ಶುದ್ದಾಂಗವಾಗಿ ಎಂದೂ ಪರಸ್ಪರ ಅಂಟು-ನAಟುಗಳಿಲ್ಲದೆ ಇರಲೇ ಇಲ್ಲ. ಎಲ್ಲ ಆದಿಮ ಧರ್ಮಗಳ ಲೋಕದೃಷ್ಟಿಯಲ್ಲಿ ಒಂದಿಲ್ಲದೆ ಇನ್ನೊಂದಿಲ್ಲ. ಪೂರ್ಣವಿಲ್ಲದೆ ಭಾಗವಿಲ್ಲ. ಇದನ್ನೇ ಅಲ್ಲಮಪ್ರಭು ‘ಭೂಮಿ ಆಕಾಶ ಒಂದು ಜೀವನದುದರ’ ಎಂದಿದ್ದಾನೆ. ತಂತ್ರಾಗಮನಗಳಲ್ಲಿ ಇದನ್ನೇ ‘ಸರ್ವಂ ಸರ್ವಾತಕಂ’ ಅನ್ನಲಾಗಿದೆ. ಇಡಿ ಮತ್ತು ಬಿಡಿ ಭಾಗಗಳ ನಡುವಿನ ಅವಿನಾ ಸಂಬಂಧ ಪ್ರಾಚೀನ ಕಾಲದಿಂದ ವಿಶ್ವವ್ಯಾಪಿಯಾಗಿರುವ ಮಂತ್ರ ಮಾಟಗಳ ಅಡಿಪಾಯವಾಗಿದೆ. ವಸ್ತು ವಸ್ತುವಿನ, ಲೋಕ ಲೋಕಗಳ, ಜೀವ ಜಡಗಳ ಬಿಡಸಲಾಗದ ಒಂದುತನದಿಂದಲೇ ಕಾವ್ಯ ಕಲೆಗಳಲ್ಲಿನ ಉಪಮೆ, ರೂಪಕಗಳು ಆವಿರ್ಭವಿಸಿದವು.
ಪ್ರಾಚೀನ ಕಾಲದಲ್ಲಿ ದೂರದೂರದ ಪ್ರದೇಶಗಳ ನಡುವಿನ ವಹಿವಾಟುಗಳು ಕಷ್ಟ ಸಾಧ್ಯವಾಗಿದ್ದವು. ಚೀಣಾ ಮತ್ತು ಟಿಬೆಟ್ಟುಗಳಿಂದ ಬೌದ್ಧವಾಙ್ಮಯಕೋಸ್ಕರ ದೂರ ಪ್ರವಾಸವನ್ನು ಕೈಗೊಂಡ ಭಿಕ್ಷುಗಳು ಹಿಮಾಲಯದ ಅಡ್ಡಗೋಡೆಗಳನ್ನು ದಾಟಿ ತಮ್ಮ ಗಮ್ಯ ಸ್ಥಾನಗಳಿಗೆ ಬರಬೇಕಾಯಿತು. ಕೆಲವು ಸಲ ಈ ತರದ ಕಠಿಣ ಪ್ರವಾಸಕ್ಕೂ ದಕ್ಕದಷ್ಟು ದೂರದಲ್ಲಿದ್ದ ಸಂಸ್ಕೃತಿಗಳು, ನಾಗರಿಕತೆಗಳು, ದಕ್ಷಿಣ ಅಮೆರಿಕದ ಆಜ್ಟಕ್, ಮಾಯನ್ ಮತ್ತು ಇನ್ಕಾ ನಾಗರಿಕತೆಗಳು, ಸಂಸ್ಕೃತಿಗಳು ಇತರ ಭೂ ವಲಯದಿಂದ ಬಹದೂರ ಇದ್ದ ಕಾರಣ ಗರಿಷ್ಟ ಮಟ್ಟದ ವಿಕಾಸವನ್ನು ಸಾಧಿಸದೆ ವಿನಾಶ ಮುಖಿಯಾದವು. ಆ ಕಳೆದ ಸಹಸ್ರಮಾನಗಳ ಪರಿಸ್ಥಿತಿಗಳಿಗೆ ಹೋಲಿಸಿದರೆ, ಇಂದಿನ ನಾವು ಬಹಳ ಅದೃಷ್ಟವಂತರು. ಒಜ್ಞಾನ ಮತ್ತು ತಂತ್ರಜ್ಞಾನದ ಮುನ್ನಡೆಯಿಂದ ಜಗತ್ತಿನಾದ್ಯಂತ ಸಂಪರ್ಕದ ಕೊಂಡಿಗಳು ಅಭೂತಪೂರ್ವವಾಗಿ ಅಭಿವೃದ್ಧಿ ಹೊಂದಿರುವುದರಿAದ ಸಾಂಸ್ಕೃತಿಕ ಅಭಿವ್ಯಕ್ತಿಗಳು ಒಂದು ಕಡೆಯಲ್ಲಿ ಪೂರ್ಣ ಪ್ರಕಟವಾಗುವ ಮೊದಲೇ ದೂರ ದೂರದ ಭೂ ಭಾಗಗಳಿಗೆ ಪ್ರಯತ್ತಿಸುತ್ತವೆ. ಈ ಪ್ರಕ್ತಿಯೆಯನ್ನು ಇನ್ನೂ ತೀವ್ರಗೊಳಿಸಿರುವುದು ವಿದ್ಯುನ್ಮಾನ ತಂತ್ರಜ್ಞಾನಗಳ ಆವಿಷ್ಕಾರ.ಜಗತ್ತಿನ ಯಾವುದೋ ಮೂಲೆಯಲ್ಲಿ ನಡೆದ ಘಟನೆಯನ್ನು ಕ್ಷಣಾರ್ಧದಲ್ಲಿ ಸಹಸ್ರಾರು ಮೈಲು ದೂರದ ಇನ್ನೊಂದು ಕಡೆ ಮಕ್ಕಳಾಟಿಕೆಯಂತೆ ಬಿತ್ತರಿಸಬಹುದು. ಜಗತ್ತಿನ ವಿವಿಧ ಪ್ರದೇಶಗಳು ಈಮೂಲಕ ಒಂದಾಗುತ್ತಿವೆ.
**
ಹೀಗೆ ನಾವು ಈ ತೆರನ ಒಂದುತನವನ್ನು ಸಂಭ್ರಮಿಸುವಾಗಲೇ ಇನ್ನೊಂದು ಬಗೆಯ ಅಕರಾಳ ವಿಕರಾಳ ಬೆಳವಣಿಗೆಯೂ ಆಗಿದೆ. ಇವತ್ತು ಜಗತ್ತು ಹೆಚ್ಚು ಹೆಚ್ಚು ಒಂದಾಗುತ್ತಿರುವುದು ವಿಶ್ವಮಾರುಕಟ್ಟೆಯ ಬುನಾದಿಯ ಮೇಲೆ. ಈ ಪ್ರಕ್ರಿಯೆಯನ್ನು ವಿಶ್ವೀಕರಣವೆಂದು ಅರಿತವರು ಕರೆಯುತ್ತಾರೆ. ಆದರೆ ನಾನು ‘ಗೋಳೀಕರಣ’ ಎಂಬ ಪದವನ್ನು ಬಳಸುತ್ತಿದ್ದೇನೆ. ಇಂದಿನ ಜಾಗತಿಕ ಕೊಂಡಿಗಳಿಗೆ ಮುಖ್ಯ ಕಾರಣ ಅಂತರರಾಷ್ಟ್ರೀಯ ಮಾರುಕಟ್ಟೆ ಸಂಸ್ಕೃತಿಯ ಒತ್ತಾಯವೇ ಹೊರತು, ಬೇರೆ ಯಾವುದೇ ಮಾನವೀಯ ಅಥವಾ ದೈವಿಕ ಸೆಳೆತಗಳಲ್ಲ. ಜಗತ್ತಿನಾದ್ಯಂತ ಪ್ರಭುತ್ವಗಳು ಖಿಲವಾಗುತ್ತಿವೆ. ಹಾಗಾದಾಗ ಗಡಿ ರೇಖೆಗಳಿರದ ಸಾಮ್ಯವಾದದ ನಾಗರಿಕತೆಯೊದು ಅಸ್ತಿತ್ವಕ್ಕೆ ಬರುತ್ತದೆಂದು ಕಾರ್ಲ್ ಮಾರ್ಕ್ಸ್ನ ಕಾಲಜ್ಞಾನವಾಗಿತ್ತು. ಆದರೆ ಆ ಕಾಲಜ್ಞಾನ ಅರ್ಧ ಮಾತ್ರ ನಿಜವಾಗಿದೆ. ಖಿಲವಾಗುತ್ತಿರುವ ಸಂಸ್ಕೃತಿಗಳ ಸುತ್ತ ಸಾಮ್ಯವಾದದ ವಾತಾವರಣ ಉಂಟಾಗಿಲ್ಲ. ಬದಲಿಗೆ ಜೀವ ಜಡಗಳೆಲ್ಲವನ್ನೂ ಮಾರಾಟ ಮತ್ತು ಹರಾಜುಗಳಿಗೆ ಇಳಿಸಿರುವ ಹೃದಯವಿಹೀನ ಸರಕು ಸಂಸ್ಕೃತಿ ಸರ್ವವ್ಯಾಪ್ತಿಯಾಗಿದೆ. ಈ ಸಂದರ್ಭದಲ್ಲಿ ಸಂಸ್ಕೃತಿಗಳು ವಿಕೃತಿಗಳಾಗಿ ಶುದ್ಧ ಅಧ್ಯಾತ್ಮಿಕತೆಯ ಮೌಲ್ಯಗಳು ಸಾಂಸ್ಕೃತಿಕ ಲೋಕದ ಅಮರ ನಿರ್ಮಿತಿಗಳು ಭುವಿಯೆಂಬ ಮಾಯಾ ಬಜಾರಿನಲ್ಲಿ ಬಿಕರಿಯಾಗುತ್ತಿವೆ. ಎಗ್ಗಿಲ್ಲದ ಲಾಭಕೋರತನದ ವಿನಾಶದ ಕುದುರೆಗಳು ಜಗ್ಗಾಡುತ್ತಿರುವ ಈ ಜಗತ್ತೆಂಬ ರಥದಲ್ಲಿ ಕೆಲವರ ಲಾಭಕ್ಕಾಗಿ ಹಲವು ಜೀವಿಗಳು ಮತ್ತು ಭೂಮಿಯಲ್ಲಿ ನಮ್ಮ ಬದುಕಿಗೆ ಅನಿವಾರ್ಯವಾದ ಪ್ರಾಕೃತಿಕ ಸಂಪನ್ಮೂಲಗಳು ಜಡ ಜಂಗಮಗಳು ಭಯಾನಕವಾದ ಮಹದಾಪಯದ ದವಡೆಗಳಲ್ಲಿ ಸಿಲುಕಿಕೊಂಡಿವೆ. ಈ ಪರಿಸ್ಥಿತಿಯ ಒಂದು ಮಗ್ಗಲು ಇಂದು ಪರಿಸರವಾದದಲ್ಲಿ ಚರ್ಚಿತವಾಗುತ್ತಿದೆ. ಪ್ರಗತಿ ಎಂಬುದು ಸದಾ ಮುನ್ನಡೆಯುವ ಪ್ರಕ್ರಿಯೆಯೆಂದು ಎರಡು ಶತಮಾನಗಳ ಹಿಂದಿನ ಎರಡು ಪ್ರಭಾವಿ ಸಿದ್ಧಾಂತಗಳು ನಂಬಿದ್ದವು.
ಎಗ್ಗಿರದ ಪ್ರಗತಿಗೆ ಹವಣಿಸಿದರೆ ಪ್ರಕೃತಿ ತನ್ನ ಅನರೀಕ್ಷಿತ ವಿಕೋಪದ ಮೂಲಕ ಅದನ್ನು ಹದ್ದುಬಸ್ತಿಗೆ ತರುವುದೆಂದು ಆ ಶತಮಾನದ ಚಿಂತಕ ಮಾಲ್ಥಸ್ ವಾದಿಸಿದ. ಆದರೆ ಪ್ರಗತಿ ಯಜ್ಞದ ವಾಜಪೇಯಿಯಾಗಿದ್ದ ಕಾರ್ಲ್ ಮಾರ್ಕ್ಸ್ ಇದನ್ನು ಒಪ್ಪಲಿಲ್ಲ. ವಿಜ್ಞಾನದ ಬೆಳವಣಿಗೆಗೆ ಮಿತಿಯೇ ಇಲ್ಲ, ಆ ಬಗ್ಗೆ ಕಲ್ಪನೆಯಿಲ್ಲದೆ ಮಾಲ್ಥಾಸ್ ಹೀಗೆ ಹೇಳಿದ್ದಾನೆಂದು ವಾದಿಸಿದ. ಕಾರ್ಲ್ ಮಾರ್ಕ್ಸ್ನಂತೆ ಆ ಕಾಲದ ಪ್ರಗತಿಶೀಲ ಚಿಂತಕರು ಯಂತ್ರ ನಾಗರಿಕತೆಯನ್ನು ಕೊಲೆಗಳಿಲ್ಲದ ಕಾಮಧೇನು, ಕಲ್ಪವೃಕ್ಷಗಳೆಂದು ಬಗೆದಿದ್ದರು.
ಇಪ್ಪತ್ತನೇ ಶತಮಾನದ ದೊಡ್ಡ ಪಾಠವೆಂದರೆ, ವಿಜ್ಞಾನ, ತಂತ್ರಜ್ಞಾನದ ಪ್ರಗತಿಗೂ ಇತಿ ಮಿತಿಗಳಿವೆ ಎಂದು ಗೊತ್ತಾಗಿದೆ. ಅಲ್ಲದೆ ಜೀವ ಪರವಾದ ಸಾಂಸ್ಕೃತಿಕ ಅಧ್ಯಾತ್ಮಿಕ ಮೌಲ್ಯಗಳಿಲ್ಲದಿದ್ದರೆ ಪ್ರಗತಿಯ ಎಲ್ಲ ಸಾಧನೆಗಳು ನಮ್ಮ ಉದ್ದೇಶಗಳಿಗೆ ವಿರುದ್ಧವಾದ ದಿಕ್ಕಿನಲ್ಲಿ ನಮ್ಮನ್ನು ಒಯ್ಯುತ್ತವೆ ಎಂದು ಗೊತ್ತಾಗಿದೆ.
ಇಷ್ಟೆಲ್ಲ ಪ್ರವರ ಹೇಳಿದ ಕಾರಣ ನನ್ನನ್ನು ಕಾಡುತ್ತಿರುವ ಒಂದೇ ಒಂದು ಪ್ರಶ್ನೆ ಲಾಭಕೋರತನದ ಕಳ್ಳಾಟ, ಕೊಳ್ಳಾಟಗಳ ಶಕ್ತಿಗಳು ಜಗನ್ನಿಯಾಮಕವಾಗಿರುವ ವಿಷಮ ಪರಿಸರದಲ್ಲಿ ಕರುಣೆ ಮತ್ತು ಕೂಡುಬಾಳುಗಳ ಕೊಂಡಾಟವಾದ ಕಲೆ, ಸಂಸ್ಕೃತಿಗಳ ಜವಾಬುದಾರಿ ಏನು, ಎಂತಹದು? ಮರಾಠಿಯ ಮಹಾಕವಿ ತುಕಾರಾಮ ಹೇಳಿದ ಹಾಗೆ ‘ನಮ್ಮ ಮನೆಗಳಲ್ಲಿ ಶಬ್ದಗಳ ಹೊರತಾದ ಧನವಿಲ್ಲ, ಉಪಮೆ, ರೂಪಕಗಳಿಗೆ ಹೊರತಾದ ಸಾಧನಗಳಿಲ್ಲ’ ಮಾರಕಾಸ್ತ್ರಗಳ ಮಾರಣ ಹೋಮದಲ್ಲಿ ಲೆಕ್ಕಕ್ಕೆ ಸಿಗದಷ್ಟು ಅಬಾಲ ವೃದ್ಧ ಮನುಷ್ಯ ಜೀವಿಗಳು, ಅವರ ಕರುಳು ಬಳ್ಳಿಯಾದ ಅಡವಿ, ಗಿರಿ, ಸಮುದ್ರಗಳು ವಿನಾಶದಂಚಿನಲ್ಲಿ ಇವೆ. ನಾಗರಿಕತೆಯ ನೂರು ನಂದಾದೀಪಗಳು ಆರಿಹೋಗುತ್ತಿವೆ. ಭರವಸೆಯ ಸಾವಿರ, ಸಾವಿರ ನಕ್ಷತ್ರಗಳು ಆರಿಹೋಗಿವೆ. ಈ ಕತ್ತಲಿನಲ್ಲಿ ಜ್ಯೋತಿಯನ್ನು ಹೊತ್ತಿಸುವ ಕೆಲಸ ನಮ್ಮದಾಗಿದೆ. ಆ ಜ್ಯೋತಿಯ ಬೆಳಕಿನಲ್ಲಿ ನಮ್ಮ ನಮ್ಮಗಳ ಮತ್ತು ಇತರರ ಮಾನವೀಯ ಚಹರೆಗಳನ್ನು ಗುರುತಿಸಬೇಕಾಗಿದೆ. ಒಟ್ಟಾರೆಯಾಗಿ ಇಂದಿನ ಜಗನ್ನಿಯಾಮಕ ಶಕ್ತಿಗಳ ಪ್ರವಾಹಕ್ಕೆ ಇದಿರಾಗಿ ಕಲೆ, ಸಂಸ್ಕೃತಿಗಳು ಈಸಬೇಕಾಗಿದೆ, ಈಸಿ ಜಯಿಸಬೇಕಾಗಿದೆ. ಆದರೆ ವಾಸ್ತವದಲ್ಲಿ ಕಲೆ, ಸಾಹಿತ್ಯಗಳು ಬಹಳ ದೊಡ್ಡ ಪ್ರಮಾಣದಲ್ಲಿ ಗೋಳೀಕರಣದ ದೆಸೆಯಲ್ಲಿ ಸಾಗುತ್ತಾ ಮಾರುಕಟ್ಟೆಯ ಮಾರಣ ಹೋಮದ ಸಮಿತ್ತುಗಳಾಗಿವೆ.
ಮಾರುಕಟ್ಟೆಯ ಸರಕೀಕರಣದ ಅಪಾಯಗಳನ್ನು ಎದುರಿಸಲೆಂದೇ ಪ್ರಾರಂಭವಾದ ರಾಷ್ಟ್ರೀಯ, ಪ್ರಾದೇಶಿಕ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕಲಾಭಿವ್ಯಕ್ತಿಗಳು ತಮ್ಮ ಕಾಲಡಿಯ ನೆಲವೇ ಬಿರುಕು ಬಿಡುವ ಸಂದರ್ಭದಲ್ಲಿ ಸರಕು ಸಂಸ್ಕೃತಿಗೆ ಮಾರುಕಟ್ಟೆಯ ಯಜಮಾನಿಕೆಗೆ ಶರಣು ಹೊಡೆದು ಮರಣಾಸನ್ನವಾಗಿವೆ. ಹಿಂದಿನ ಸಮಾಜಗಳಲ್ಲಿ ಕಲೆ ಮತ್ತು ಸಂಸ್ಕೃತಿಗಳಿಗಿದ್ದ ನಿರ್ಣಾಯಕ ಸ್ಥಾನವನ್ನು ಇವುಗಳಿಂದ ವಿದೂರವಾದ ವಾಣಿಜ್ಯೀಕೃತ ವಿಜ್ಞಾನ ತಂತ್ರಜ್ಞಾನಗಳು ಕಬಳಿಸಿಕೊಂಡಿವೆ. ಸುತ್ತಲೂ ಆವರಿಸುತ್ತಿರುವ ಕತ್ತಲಲ್ಲಿ ಒಂದು ದೀಪ ಹಚ್ಚುವುದು ಬಹಳ ನಮ್ರ ಕ್ರಿಯೆಯಾದರೂ ಅದಕ್ಕೆ ತನ್ನದೇ ಆದ ಮಹತ್ವವಿದೆ. ಇದನ್ನೇ ಬಸವಣ್ಣ ಹೇಳಿದ್ದು ’ತಮಂಧ ಘನ, ಜ್ಯೋತಿ ಕಿರಿದೆನ್ನಬಹುದೇ! ಬಾರದಯ್ಯ’ ಹನ್ನೆರಡನೆ ಶತಮಾನದ ಕಲ್ಯಾಣದಲ್ಲಿ ನಮ್ಮ ಹಿರೀಕರು ಗೀತ, ಮಾತುಗಳೆಂಬ ಜ್ಯೋತಿಗಳನ್ನು ಹಚ್ಚಿ ಆ ಕಾಲದ ತಮಂಧವನ್ನು ತಗ್ಗಿಸಲು ಪ್ರಯತ್ನಿಸಿದರು. ಆ ಹಿರೀಕರ ಆಶಯದ ಮರುದನಿಗಳು ಅಲ್ಲಿಂದ ಮುಂದಣ ಶ್ರೇಷ್ಠ ಸೃಜನದ ಗಳಿಗೆಗಳಲ್ಲಿ ಪುನರುಕ್ತಿಯಾಗುತ್ತಾ ಬರುತ್ತಿವೆ. ಮುಂದೇನು ಮಾಡಬೇಕು ಎಂಬುದರ ಬಗ್ಗೆ ನಮ್ಮ ಮುಂದೆ ಸ್ಪಷ್ಟ ದಿಕ್ಸೂಚಿಗಳಿಲ್ಲ, ಪ್ರಣಾಳಿಕೆಗಳಿಲ್ಲ. ನಾವು ಬೆಳಗುವ ಕಿರು ಜ್ಯೋತಿಗಳ ಬೆಳಕಿನಲ್ಲೇ ಎಲ್ಲವನ್ನೂ ಕಂಡುಕೊಳ್ಳಬೇಕಾಗಿದೆ. ಇವೆಲ್ಲದರ ನಡುವೆಯೂ ನಿರುಮ್ಮಳವಾಗಿರುವ ಕಣ್ಣಿದ್ದೂ ಕುರುಡಾದವರಿಗೆ, ಕಿವಿಯಿದ್ದೂ ಕಿವುಡಾದವರಿಗೆ, ಬದುಕ್ಕಿದ್ದೂ ಸತ್ತವರಿಗೆ ತುರ್ತಿನ ಸಂದೇಶವನ್ನು ಹೇಗೆ ಮುಟ್ಟಿಸಬೇಕು? ಈ ಒಂದು ಸಂದಿಗ್ದವನ್ನು ನಮ್ಮ ಸಮಕಾಲಿನ ಪ್ಯಾಲೆಸ್ಟೆನ್ ಕವಿ ಮಜವಾನ್ ಮಕೀಲ್ ಹೀಗೆ ಹೇಳುತ್ತಾನೆ ‘ನಾನು ಕವಿ. ಹಕ್ಕಿಗಳ ಹಾಡುಗಳನ್ನು ಕೇಳಿಸಿಕೊಳ್ಳಬೇಕು. ಅದಕ್ಕಾಗಿ ಈ ವಿಮಾನಗಳ ಹಾರಾಟವನ್ನು, ಬಾಂಬುಗಳ ವಿಸ್ಪೋಟಗಳು ನಿಲ್ಲಬೇಕು’.
ತುಮಕೂರು ಸಾಂಸ್ಕೃತಿಕವಾಗಿ ಒಂದು ಜಾಗೃತ ಸ್ಥಾನ. ಇಲ್ಲಿನ ನೀರು, ಗಾಳಿ, ಬೆಳಕುಗಳ ಸಾಕ್ಷಿಯಾಗಿ ನನ್ನ ಮನದಾಳದ ಮಾತುಗಳನ್ನು ನಿಮ್ಮ ಮುಂದಿಟ್ಟಿದ್ದೇನೆ. ಯಾವ ಸಿದ್ಧ ಪರಿಹಾರವೂ ನಮ್ಮಲಿಲ್ಲ. ಕಾರಣ ಇಂದಿನ ನಮ್ಮ ಹಲವು ಸಮಸ್ಯೆಗಳಿಗೆ ಗತದಲ್ಲಿ ಮಾದರಿಗಳೇ ಇಲ್ಲ!
ಕೊನೆಯದಾಗಿ ಕನ್ನಡ ಸಾಹಿತ್ಯ ಕುರಿತ ಈ ಜಿಲ್ಲಾ ಸಮ್ಮೇಳನದಲ್ಲಿ ಕನ್ನಡ ಕುರಿತಾದ ಕೆಲವು ಮಾತುಗಳನ್ನು ಹೇಳಬೇಕಾಗಿದೆ. ವಿಶ್ವ ಸಂಸ್ಕೃತಿಗೆ ವಿಶಿಷ್ಟ ಕಾಣಿಕೆಗಳನ್ನು ನೀಡಿರುವ ಕನ್ನಡ ಸಂಸ್ಕೃತಿಯ ಚೌಕಟ್ಟಿನಲ್ಲಿ ತುಮಕೂರು ಜಿಲ್ಲೆಯ ಭೂಮಿಕೆಯು ಕಡಿಮೆಯೇನಲ್ಲ! ಕರ್ನಾಟಕದ ಹಲವು ಕನ್ನಡಗಳಲ್ಲಿ ತುಮಕೂರು ಕನ್ನಡದ ಉಪಭಾಷೆಯು ತನ್ನದೇ ಆದ ವೈಶಿಷ್ಟ್ಯವನ್ನು ಸಾಧಿಸಿದೆ. ವಿಶ್ವದ ಎಲ್ಲ ಸ್ಥಳೀಯ ಭಾಷೆಗಳಿಗೆ ಗೋಳೀಕರಣ ಬಹಳ ಖತರ್ನಾಕ್ಕಾಗಿ ಪರಿಣಮಿಸಿದೆ. ಹಿಂದೆ ಗತದ ಬಂಧನಗಳಿಂದ ಜಗತ್ತಿನ ವಸಾಹತುಗಳ ಜನತೆಯನ್ನು ಬಿಡುಗಡೆ ಮಾಡಲು ನೆರವಾದ ಅಂದಿನ ಇಂಗ್ಲಿಶ್ ಭಾಷೆ ಇಂದು ಗೋಳೀಕರಣದ ಏಕಮುಖತೆಯ ಪ್ರಧಾನ ಇಂಜಿನ್ನಾಗಿ ಕೆಲಸ ಮಾಡುತ್ತಿದೆ. ಈ ಪ್ರಕ್ರಿಯೆಯಲ್ಲಿ ಮೋಸ ಹೋಗದಿರಲು ಇಂಗ್ಲಿಶಿನ ಕಲಿಕೆ ನಮಗೆ ಅನಿವಾರ್ಯ. ಆದರೆ ಅದರ ಹುಚ್ಚು ಪ್ರವಾಹದಲ್ಲಿ ಕೊಚ್ಚಿಹೋಗದ ಹಾಗೆ ಉಳಿಯಲು ನಮ್ಮ ಭಾಷೆಯ ವ್ಯವಹಾರವನ್ನು, ಸಂಸ್ಕೃತಿಯನ್ನು ಮತ್ತು ಅಭಿವ್ಯಕ್ತಿಯನ್ನು ಮುಕ್ಕುಗೊಡಲೊಲ್ಲದ ಛಲ ನಮಗಿಂದು ಬೇಕಾಗಿದೆ. ನಮ್ಮ ಸಾಮೂಹಿಕ ಕನಸು ಮತ್ತು ಕಣಸುಗಳನ್ನು ಉಳಿಸಿಕೊಳ್ಳಲು ನಮ್ಮ ಕನ್ನಡ ಅಳಿಯದಂತೆ ನೋಡಿಕೊಳ್ಳುವ ಶೈಕ್ಷಣಿಕ ಮತ್ತು ಶಾಸನಾತ್ಮಕ ಪ್ರಯತ್ನಗಳನ್ನು ಅವಿರತವಾಗಿ ನಡೆಸಬೇಕಾಗಿದೆ. ನಮ್ಮ ಸಾಮೂಹಿಕ ನಮ್ಮತನವನ್ನು ಕಳೆದುಕೊಳ್ಳದೆ ಇಂದಿನ ಬೆಳಕಿನಲ್ಲಿ ವಿಕಾಸ ಹೊಂದುವ ಸಂಕಲ್ಪಶಕ್ತಿ ಈ ಕ್ಷಣದ ಮಹತ್ವದ ಜರೂರಿ.
ಎಲ್ಲರಿಗೂ ನಮಸ್ಕಾರ
ತುಮಕೂರು
29 ಡಿಸೆಂಬರ್ 2023.
ತುಮಕೂರಿನ -ತುಮಕೂರಿಗರ ಒಡನಾಟದ ಸವಿ ನೆನಪು
ನಾನು ತುಮಕೂರಿನಲ್ಲಿ ಹುಟ್ಟಿದವನಲ್ಲ, ಬೆಳದವನಲ್ಲ. ನನ್ನ ಹಿರೀಕರು ಗುಬ್ಬಿ, ತುಮಕೂರು ಕಡೆಯಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿದವರು. ಇಷ್ಟಾದರೂ ತುಮಕೂರಿನೊಂದಿಗೆ ನನಗೆ ಗಾಢವಾದ ಸಂಬಂಧವುಂಟಾಯಿತು ಮತ್ತು ನೂರಾರು ಸಿಹಿ-ಕಹಿ ನೆನಪುಗಳಿವೆ. ನಾನು ಬೆಂಗಳೂರಿನಲ್ಲಿ ಹುಟ್ಟಿ ಬೆಳೆದರೂ ನನ್ನ ಸೃಜನಶೀಲ ವ್ಯಕ್ತಿತ್ವ ಸುಳಿದೆಗೆದು ಬೆಳೆದದ್ದು ತುಮಕೂರಿನಲ್ಲಿ. 1977 ರಿಂದ 1992ರ ಅವಧಿಯಲ್ಲಿ. ಆಗ ನಾನು ತುಮಕೂರು ಸರ್ಕಾರಿ ಕಲಾ ಕಾಲೇಜಿನಲ್ಲಿ ಇಂಗ್ಲಿಶ್ ಅಧ್ಯಾಪಕನಾಗಿ ನೌಕರಿ ಮಾಡುತ್ತಿದ್ದೆ. ಆಗ ತುಮಕೂರಿನ ವಾತಾವರಣ ನನಗೆ ನೀಡಿದ ಕೊಡುಗೆಗಳು ಬಹುಮುಖಿಯಾದವು, ಬಹುಮೌಲಿಕವಾದವು.
ತುಮಕೂರಿನ ಸುತ್ತಮುತ್ತಲ ಭಿನ್ನ ಭಿನ್ನ ಗ್ರಾಮೀಣ ಪ್ರಾದೇಶಿಕ ಹಿನ್ನೆಲೆಗಳಿಂದ ಬಂದ ವಿದ್ಯಾರ್ಥಿಗಳಿಗೆ ನಾನು ಕಲಿಸಿದ್ದಕ್ಕಿಂತ ಅವರು ನನಗೆ ಕಲಿಸಿದ್ದೇ ಹೆಚ್ಚು. ಅವರ ಒಡನಾಟ, ಸಂಗಾತಗಳಲ್ಲಿ ಕನ್ನಡ ಭಾಷೆಯ ಹಲವು ಸೂಕ್ಷ್ಮಗಳನ್ನು ಗ್ರಹಿಸಲು ಸಾಧ್ಯವಾಯಿತು. ಆ ಸೂಕ್ಷ್ಮಗಳು ನಾನು ಹುಟ್ಟಿ ಬೆಳೆದ ಬೆಂಗಳೂರಿನ ಸಪಾಟು ಕನ್ನಡದಲ್ಲಿ ನನಗೆ ಸಿಕ್ಕಿರಲಿಲ್ಲ. ಮಧ್ಯಮ ವರ್ಗದ ಮೇಲು ಜಾತಿಯ ಸಂಗದಲ್ಲಿ ಹುಟ್ಟಿಬೆಳೆದ ನನಗೆ ಈ ಪ್ರದೇಶದ ಹಿಂದುಳಿದ ಮತ್ತು ದಲಿತ ವರ್ಗಗಳ ವಿದ್ಯಾರ್ಥಿಗಳ ಜೊತೆಗಿನ ಗಾಢ ಸಂಬಂಧದಿಂದ ಅನೇಕ ಸಾಂಸ್ಕೃತಿಕ ಸೂಕ್ಷ್ಮ ಮತ್ತು ವೈವಿಧ್ಯಗಳನ್ನು ಅರಿತುಕೊಳ್ಳಲು ಮತ್ತು ನನ್ನ ಕಾವ್ಯ, ನಾಟಕಗಳಲ್ಲಿ ಅಳವಡಿಸಲು ಸಾಧ್ಯವಾಯಿತು. ಹೀಗಾಗಿ ತುಮಕೂರು ನನಗೆ ಒಂದು ರೀತಿಯಲ್ಲಿ ನನ್ನ ವ್ಯಕ್ತಿತ್ವಕ್ಕೆ ಮರು ಹುಟ್ಟನ್ನು ನೀಡಿತು.
ತುಮಕೂರಿನ ಸರ್ಕಾರಿ ಕಾಲೇಜಿನಲ್ಲಿದ್ದ ಪುಸ್ತಕಗಳು ನಿಜಕ್ಕೂ ಸರಸ್ವತಿಯ ಭಂಡಾರಗಳಾಗಿದ್ದವು. ಆ ಗ್ರಂಥಾಲಯಗಳ ಪುಸ್ತಕಗಳ ಅರ್ಹನಿಶಿ ಓದಿನ ಮೂಲಕ ನನ್ನ ಭಾವನೆ ಮತ್ತು ಚಿಂತನೆಯ ಗಡಿಗಳನ್ನು ವಿಸ್ತರಿಸಿಕೊಳ್ಳಲು, ಗಾಢಗೊಳಿಸಿಕೊಳ್ಳಲು ಅವಕಾಶವಾಯಿತು.
ತುಮಕೂರಿನಲ್ಲಿ ಸಿಕ್ಕಿದ ಸಹವಾಸಗಳು ನನಗೆ ಹೊಸ ತೆರಪನ್ನು ನೀಡಿದವು. ಕವಿಗಳಾಗಿದ್ದ ವೀಚಿ, ವಿಮರ್ಶಕರಾಗಿದ್ದ ಕೆ ಜಿ ನಾಗರಾಜಪ್ಪ, ಅಧ್ಯಾಪಕರಾಗಿದ್ದ ಪ್ರೊ. ಎಚ್ ಜಿ ಸಣ್ಣಗುಡ್ಡಯ್ಯ, ಕವಿಯಾಗಿದ್ದ ಕೆ. ಬಿ. ಸಿದ್ಧಯ್ಯ ಇಂತಹವರೊಂದಿಗಿನ ಸಂವಾದ, ವಾಗ್ವಾದಗಳು ನನಗೆ ಒದಗಿ ಬಂದವು. ವಾಮಪಂಥೀಯ ಚಳವಳಿಯ ಮುಂಚೂಣಿಯಲ್ಲಿದ್ದ ದಿವಂಗತ ಕೆ ಆರ್ ನಾಯಕ್, ದಸ್ತಗೀರ್ ಸಾಹೆಬ್ ಮತ್ತು ಹಾಗಲವಾಡಿ ಚೆನ್ನಪ್ಪನವರ ಜೊತೆಗಿನ ಸ್ನೇಹ ಸಂಬಂಧಗಳು ಅಪೂರ್ವವಾಗಿದ್ದವು. ಬೀಡಿ ಕಾರ್ಮಿಕರ ಸಂಘಟನೆ, ರೈತ ಸಂಘಟನೆ, ಚಿಕ್ಕಮಗಳೂರು ಲೋಕಸಭಾ ಚುನವಾಣೆಯ ಸಂದರ್ಭದಲ್ಲಿ ನಾವು ನಡೆಸಿದ ಪ್ರಚಾರ ಇತ್ಯಾದಿಗಳು ಪ್ರಗತಿಪರ ರಾಜನೀತಿಯ ದರ್ಶನವನ್ನು ಒಂದು ಸ್ಪಷ್ಟ ಪ್ರಾದೇಶಿಕ ಹೋರಾಟಗಳ ಸಂದರ್ಭದಲ್ಲಿ ಅರ್ಥಮಾಡಿಕೊಳ್ಳುವಂತೆ ನೆರವು ನೀಡಿದ್ದವು.
ಆಗ ನನಗೆ ಸಿಕ್ಕಿದ ವೈಚಾರಿಕ ಪ್ರಾಪ್ತಿಗಳು ನನಗೆ ದೊರತದ್ದು ಅಮೂರ್ತ ಸ್ವರೂಪದಲ್ಲಲ್ಲ! ಒಂದು ಸ್ಪಷ್ಟವಾದ, ವಿಶಿಷ್ಟವಾದ ಪ್ರಾದೇಶಿಕ ಚಳವಳಿಗಳ ಪ್ರಯೋಗದಲ್ಲಿ. ನಾವು ಯಾರೂ 24/ 7 ಸಾಹಿತಿಗಳಾಗಿ, ಬುದ್ದಿಜೀವಿಗಳಾಗಿ ಬದುಕಲು ಸಾಧ್ಯವಿಲ್ಲ.
ನಮ್ಮ ಬಾಳುವಾಸೆಗೆ ಹಾಲನ್ನೆರೆಯುವವು ಪ್ರಧಾನವಾಗಿ ಗೆಳೆತನಗಳು ಮತ್ತು ಒಡನಾಟಗಳು.ನನಗೆ ನನ್ನ ಆತ್ಮೀಯ ವಿದ್ಯಾರ್ಥಿಗಳ ಮೂಲಕ ದೊರಕಿತು. ನನ್ನ ಕಷ್ಟ ಸುಖಗಳಲ್ಲಿ ನನ್ನ ವಿದ್ಯಾರ್ಥಿಗಳು ನನ್ನನ್ನು ಕೈಹಿಡಿದು ಮುಗ್ಗರಿಸದಂತೆ ನೋಡಿಕೊಂಡರು. ಅವರಿಗೂ ಮನದಾಳದ ನನ್ನ ಧನ್ಯವಾದಗಳು.
ತುಮಕೂರಿನ ಪರಿಸರವೂ ಕೂಡ ಹಲವು ರೀತಿಯಲ್ಲಿ ನನ್ನ ಹೃನ್ಮನಗಳ ವಿಕಾಸಕ್ಕೆ ಕಾರಣವಾಯಿತು. ಸುತ್ತಮುತ್ತಲ ಬೆಟ್ಟಗುಡ್ಡಗಳನ್ನು ಹತ್ತುವುದು, ಹೊಲಗದ್ದೆ, ಕಾಡುಗಳಲ್ಲಿ ಓಡಾಡುವುದು. ಹಳ್ಳಿಗಳಲ್ಲಿ ಅಡ್ಡಾಡುವುದು ಮುಂತಾದವು. ಆಗಿನ್ನೂ ನಗರ ಜೀವನದ ಹೊರಗೇ ಉಳಿದಿದ್ದ ಜೀವ ಹಾಗೂ ಜೀವನ ಸೂಕ್ಷ್ಮಗಳನ್ನು ನನಗೆ ಗುರುತು ಮಾಡಿಕೊಟ್ಟವು. 1982ರ ಸುಮಾರಿನಲ್ಲಿ ನಾನು ತುಮಕೂರಿನಿಂದ ಬೆಂಗಳೂರಿಗೆ ವರ್ಗವಾಗಿ ಹೋದೆ. ಆ ನಂತರ 1997ರಲ್ಲಿ ದೆಹಲಿಗೆ ಹೋದೆ. ಅಲ್ಲಿಂದಾಚೆಗೆ 2019ರ ತನಕ ನಾನು ದೆಹಲಿಗನೇ ಆದೆ. ಆ ನಡುವೆ ಮೂರುವರೆ ವರ್ಷ ಜರ್ಮನಿಯ ನಿವಾಸಿಯಾಗಿದ್ದೆ. ಅದಲ್ಲದೆ ಈ ಅವಧಿಯಲ್ಲಿ ಬಹುಮಟ್ಟಿಗೆ ಭಾರತದ ಮೂಲೆ ಮೂಲೆಗಳಲ್ಲಿ ಮತ್ತು ಜಗತ್ತಿನ ವಿವಿಧ ದೇಶಗಳಲ್ಲಿ ಪ್ರವಾಸ ಮಾಡಿ ಬಂದೆ. ಈ ಎಲ್ಲ ಅನುಭವಗಳಿಂದ ರೂಪಿತವಾದ ದೃಷ್ಟಿಕೋನದ ಮೂಲಕ ಹೊರಳಿ ನೋಡಿದಾಗ ತುಮಕೂರಿನಲ್ಲಿ ನಾನು ಪಡೆದುಕೊಂಡ ಕರ್ತಾರ ಶಕ್ತಿಯ ಸಂಪನ್ಮೂಲಗಳು ಎಲ್ಲದ್ದಕ್ಕಿಂತ ಮೌಲಿಕವಾದದ್ದು ಎಂದು ತುಂಬು ಹೃದಯದಿಂದ ಸ್ಮರಿಸಿಕೊಳ್ಳುತ್ತಾನೆ. ನನ್ನ ಪ್ರಸ್ತುತ ಸಂವೇದನೆಯಲ್ಲಿ ಈಗ ತುಮಕೂರಿನ ನೆನಪುಗಳು, ಪ್ರಭಾವಗಳು ಕೇವಲ ತುಮಕೂರಿನವಲ್ಲ! ನಾನು ಹೊಕ್ಕು ಬಂದ ದೇಶ-ವಿದೇಶಗಳ ಹಲವು ಚಿತ್ರ-ವಿಚಿತ್ರಗಳಲ್ಲಿ ಸಿಡಿದುಹೋಗಿವೆ. ನನ್ನ ಕೃತಿಗಳಲ್ಲಿ ಹಾಸುಹೊಕ್ಕಾಗಿರುವ ಲೋಕಾನುಭವಗಳಲ್ಲಿ ತುಮಕೂರಿನ ಭೂಮಿಕೆ ಬಹಳ ಪ್ರಧಾನವಾದದ್ದು. ನನ್ನ ಮರುಜನ್ಮಕ್ಕೆ ಕಾರಣವಾದ ತುಮಕೂರು ನನಗೆ ಈ ಸಂದರ್ಭದಲ್ಲಿ ಗೌರವ ಸ್ಥಾನವನ್ನು ನೀಡಿದೆ. ತುಂಬಾ ಸಂತೋಷ. ಇದಕ್ಕಾಗಿ ಹೃತ್ಪೂರ್ವಕ ಕೃತಜ್ಞತೆಗಳು.
ಸಾಂಸ್ಕೃತಿಕ ತೂಗು ತೊಟ್ಟಿಲು
ಜಗತ್ತಿನ ಕನ್ನಡ ಭಾಷಿಕ ಸಮುದಾಯದ ಸಾಂಸ್ಕೃತಿಕ ಮತ್ತು ಸಾರಸ್ವತ ವಿಕಾಸದಲ್ಲಿ ತನ್ನದೇ ಆದ ಛಾಪನ್ನು ತುಮಕೂರು ಜಿಲ್ಲೆ ಹೊಂದಿದೆ. ಬುಡಕಟ್ಟು ಸಮಾಜಗಳ ಆದಿಮ ಕಾವ್ಯಗಳಲ್ಲಿ ಜೀವ ಮತ್ತು ಜೀವಪರತೆಯನ್ನು ಮೆರೆಸುವ ಜುಂಜಪ್ಪನ ಕಾವ್ಯಕ್ಕೆ ಈ ಪ್ರದೇಶ ಭಿತ್ತಿಯಾಗಿದೆ. ವಚನ ವಾಙ್ಮಯದ ವಿಕಾಸ ತನ್ನ ಮೂರನೇ ಹಂತ ತಲೂಪಿದ್ದು ಶ್ರೀ ಯಡಿಯೂರು ಸಿದ್ದಲಿಂಗೇಶ್ವರ ಮತ್ತು ಗೂಳೂರು ಸಿದ್ಧವೀರಣ್ಣೊಡೆಯರಂತಹರ ಸಾರ್ಥಕ ಯತ್ನಗಳ ಮೂಲಕ. ಆಧುನಿಕ ರಂಗಭೂಮಿಯ ತಳಪಾಯ ಹಾಕಿದ ಗುಬ್ಬಿ ವೀರಣ್ಣನಂತಹವರ ಹೊಸಕಾಲದ ಭರತ ಮುನಿಗಳು ಈ ಜಿಲ್ಲೆಯವರೆ. ಅಸಂಖ್ಯಾತ ಅರಿವಿನ ಗಣಿಗಳನ್ನು ಹಿಗ್ಗಿಸಿ ಹೊಸ ದಿಶೆಗಳತ್ತ ನಮ್ಮನ್ನು ಕರೆದೊಯ್ಯಬಲ್ಲ, ಕೆಸ್ತೂರ ದೇವರು, ಶಂಕರಾನAದ ಮುಂತಾದ ಶಿವಯೋಗಿಗಳು ಈ ಗಾಳಿಯ ಉಸಿರನ್ನೇ ಆಡಿದವರು. ಉಚಿತ ಅನ್ನ ಮತ್ತು ಜ್ಞಾನ ದಾಸೋಹಗಳ ಕೇಂದ್ರವಾದ ಶ್ರೀ ಸಿದ್ಧಗಂಗಾ ಮಠ ಇದೇ ಸೀಮೆಯ ಬಹಳ ದೊಡ್ಡ ಹೆಮ್ಮೆಯಾಗಿದೆ. ಕಳೆದ ಶತಮಾನದಲ್ಲಿ ಅನೇಕ ಸಾಂಸ್ಕೃತಿಕ ವಿಭೂತಿಗಳು ಇಲ್ಲಿ ತಮ್ಮ ಹೆಜ್ಜೆ ಗುರುತುಗಳನ್ನು ಬಿಟ್ಟುಹೋಗಿದ್ದಾರೆ. ಹಾಗೆಯೇ ಇಂದು ನಮ್ಮ ಜೊತೆಯಿರುವ ನಟರಾಜ ಬೂದಾಳು, ನಟರಾಜ ಹುಳಿಯಾರ್ ಹಾಗೂ ರಂಗಭೂಮಿಯ ನಟರಾಜ ಹೊನ್ನವಳ್ಳಿ ಮುಂತಾದವರು ಇಂದಿನ ಹೊಸಕಾಲದ ಭರವಸೆಗಳಾಗಿದ್ದಾರೆ.