“ನೀವುಘಟ್ಟದಮೇಲಿನವರೋ?”

60ರ ಹಿನ್ನೋಟ- ಡಾ. ರಂಗಸ್ವಾಮಿ ಹೆಚ್.ವಿ

“ನೀವುಘಟ್ಟದಮೇಲಿನವರೋ?”

 

ನಾನು ಸೀದಾ ಬಸ್ಸಿನಿಂದ ಇಳಿದವನೆ ಯಾರೋ ದಾರಿ ತೋರಿಸಲಾಗಿ ಸೀದಾ ಮುಂಡಪ್ಪಬೋಳೂರರ ಮನೆಯ ಮುಂದೆ ಹಾಜರಾದೆ.  ನಾನು ಬಾಗಿಲು ತಟ್ಟುತ್ತಿದ್ದಂತೆಯೇ ಅವರ ಶ್ರೀಮತಿ ಬಂದು ಬಾಗಿಲು ತೆಗೆದರು.

  ಮನೆ ಒಳಗೆ ಕರೆದು ನನ್ನ ಹೆಸರು ಮತ್ತು ವಿಳಾಸದ ಬಗ್ಗೆ ವಿಚಾರಿಸಿ ಮನೆ ಒಳಗೆ ಕೂರಿಸಿ ನೀರು ತಂದು ಕೊಟ್ಟು ಕೂತಿರಲು ಹೇಳಿದರು.  ಐದು ನಿಮಿಷ ನಾನು ಅತ್ತ ಇತ್ತ ಗಮನಿಸುವಷ್ಟರಲ್ಲಿ ಆಗಿನ್ನೂ ಸ್ನಾನ ಮುಗಿಸಿ,  ಬಿಳಿ ಪಂಚೆ ಉಟ್ಟು ಬರೀ ಮೈಯಲ್ಲಿ ಟವಲ್‌ನಿಂದ ತಲೆಒರೆಸಿಕೊಳ್ಳುತ್ತಾ ಕಟ್ಟುಮಸ್ತಾದ ಆಕೃತಿಯೊಂದು ಗಡಸು ಮಿಶ್ರಿತ ಆಪ್ತಧ್ವನಿಯಲ್ಲಿ “ಯಾರು ಮೆರಿಟ್ಸ್ಟುಡೆಂಟಾ ಬಂದಿರೋದು?  ಎಲ್ಲಿಂದ ಬಂದದ್ದು? ಒಬ್ಬನೆ ಬಂದದ್ದಾ?” ಅಂತ ನಾನು ಕೂತಿದ್ದ ಪಡಶಾಲೆ ಭಾಗಕ್ಕೆಬರಲಾಗಿ ನಾನು ತಕ್ಷಣ ಎದ್ದು ನಿಂತು ನಮಸ್ಕರಿಸಿ ಪರಿಚಯ ಮಾಡಿಕೊಂಡೆ.   ಅಷ್ಟು ಪರಿಚಯ ಮಾಡಿಕೊಂಡವರೆ ಅವರ ಶ್ರೀಮತಿಗೆ ಕಾಫಿ ಕೊಡಲು ತಿಳಿಸಿ “ಕೂತಿರು ನಿನಗೆ ಹಾಸ್ಟಲ್‌ ತೋರಿಸುವ” ಅಂತ ತಿಳಿಸಿ ಒಳ ಹೋದರು. 

ನಾನು ಕಾಫಿ ಕುಡಿದು ಮುಗಿಸುವಷ್ಟರಲ್ಲಿ ತಾನು ಉಟ್ಟಿದ್ದ ಪಂಚೆ ಮೇಲೆಯೇ ಒಂದು ಶರ್ಟನ್ನು ಸಿಕ್ಕಿಸಿಕೊಂಡು ಬಂದು, ಬೀಗ ಹಾಕಿದ್ ದಹಾಸ್ಟಲ್‌ ತೆರೆದು ಪರಿಚಯಿಸಿದರು.  ದಸರಾ ರಜೆಗೆ ತೆರಳಿದ್ದ ವಿದ್ಯಾರ್ಥಿಗಳು ಇನ್ನೂಹಿಂತಿರುಗಿರಲಿಲ್ಲ.  ನನಗೆ ಹೇಗಪ್ಪಾ ಒಬ್ಬನೇ ಇರೋದು ಅನ್ನುವ ಆತಂಕ.  ಹುಡುಗರು ರಜಾ ಹೋದಾಗಿನಿಂದ ಕಸಗುಡಿಸಿದಂತೆಯೂ ಕಾಣಬರಲಿಲ್ಲ.  ಅವರೆ “ಒಂದೆರಡು ದಿನಗಳಲ್ಲಿ ಮಕ್ಕಳೆಲ್ಲಾ ಬರುವುದುಂಟು.  ಆಗಚಿಂತೆಯಿಲ್ಲ” ಅಂದರು.  ನಾನಾಗ “ಹಾಗಿದ್ದರೆ ನಾನು ಊರಿಗೆ ಹೋಗಿ ಮತ್ತೆ ಬರುತ್ತೇನೆ” ಅಂದೆ.  “ಮತ್ತೆ ಎಂತ ಹೋಗುವುದು, ಎರಡು ದಿನಕ್ಕೆ.  ಬೇಡ ಬೇಡ.  ಸುಮ್ಮನೆ ಖರ್ಚು.  ಇಲ್ಲೆ ಇರುವಿಯಂತೆ” ಅಂದರು.  ನಾನು ಹೇಗಪ್ಪಾ ಒಬ್ಬನೆ ಇರುವುದು ಅನ್ನುವ ಯೋಚನೆಯಲ್ಲಿಯೇ ಮಗ್ನನಾಗಿದ್ದೆ.

ಅಷ್ಟು ಆಜಾನು ಭಾವಿ ವ್ಯಕ್ತಿಯ ಅಂತರಾಳದಲ್ಲಿ ವಿದ್ಯಾರ್ಥಿಗಳ ಬಗ್ಗೆ ಇದ್ದ ಕಾಳಜಿ ಮಾತಿನಿಂದಲೆ ಅರ್ಥವಾಗುತ್ತಿತ್ತು.  ಅಷ್ಟು ಮಾತ್ರ ಪರಿಚಯದಲ್ಲಿಯೇ ನನಗೆ ಸ್ವಲ್ಪಧೈರ್ಯ ಮೂಡಿಬಂತು.  ಇಷ್ಟು ಪರಿಚಯಿಸಿ ಅವರೆ ಮತ್ತೆ ಹಾಸ್ಟಲ್‌ ಬೀಗ ತಾವೇ ಹಾಕಿಕೊಂಡು ಪುನ: ಮನೆಗೆ ಕರೆ ತಂದರು.  ಅವರ ಶ್ರೀಮತಿಗೆ ಪಡಸಾಲೆಯಿಂದಲೆ ಕೂಗಿ “ಮಕ್ಕಳೆಲ್ಲಾ ಬರುವವರೆಗೆ ರಂಗಸ್ವಾಮಿ ಮನೆಯಲ್ಲೇ ಇರಲಿ.  ಬಯಲು ಸೀಮೆಯವರಿಗೆ ಮಲೆನಾಡು ಸರಿ ಹೋಗುವುದಿಲ್ಲ.  ಎಷ್ಟೋ ಮಕ್ಕಳು ಓಡಿಹೋಗುವುದುಂಟು.” ಅಂದರು.  ನನಗೆ ಯಾಕೋ ಇದು ಬಹಳ ಇಕ್ಕಟ್ಟಿನ ಪರಿಸ್ಥಿತಿ ಅನ್ನಿಸಿತು.  ಪಡಶಾಲೆಗೆ ತೆರೆದುಕೊಳ್ಳುವಂತಿದ್ದರೂ ರೂಮೊಂದರಲ್ಲಿ ನನ್ನಲಗೇಜನ್ನು ಇರಿಸಿ ಉಳಿದುಕೊಳ್ಳಲು ತಿಳಿಸಿದರು.    

ಮೂರು, ನಾಲ್ಕು ದಿನಗಳಲ್ಲೇ ಹಾಸ್ಟಲ್‌ಗೆ ಹುಡುಗರು ಬರತೊಡಗಿದರು.  ಕೆಲವು ಸೀನಿಯರ್‌ಗಳಿಗಂತೂ ಹೊಸಬನಾದನಾನು ಹೆಚ್ಎಂ ಮನೆಯಲ್ಲಿಯೇ ಠಿಕಾಣಿ ಹೂಡಿರುವುದನ್ನು ಕಂಡು ಆಶ್ಚರ್ಯವೋ ಆಶ್ಚರ್ಯ.  ಅದೂ ಅಲ್ಲೇಸ್ನಾನ, ಊಟದ ವ್ಯವಸ್ಥೆಯೂ ಇತ್ತಾಗಿ ಹಾಸ್ಟಲ್‌ ಮೆಸ್‌ ಅಧಿಕೃತವಾಗಿ ಪ್ರಾರಂಭವಾಗುವವರೆಗೆ ನಾನು ಪೂರ್ತಿ ಆಮನೆಗೆ ಹೊಂದಿಕೊಂಡಿದ್ದೆ.  ಬಯಲು ಸೀಮೆಯ ನನಗೆ ಅವರ ಭಾಷೆ, ಆಹಾರ ಪದ್ಧತಿಗಳೆಲ್ಲಾ ಹೊಚ್ಚ ಹೊಸದು.  ಕುಸೂಲಕ್ಕಿ ಅನ್ನ, ನೀರು ದೋಸೆಗಳನ್ನು ನಾನು ತಿಂದದ್ದು ಇಲ್ಲಿಯೇ.  ಮೊದಲು ಒಂದು ವಾರ ನಮ್ಮ ಬಯಲು ಸೀಮೆ ಊಟ ಇಲ್ಲವಲ್ಲ ಅಂತಅನ್ನಿಸಿದ್ದು ಹೌದಾದರೂ, ಸ್ವಲ್ಪದಿನದಲ್ಲೇ ಆರುಚಿಗೆ ಹೊಂದಿಕೊಂಡಿದ್ದೆ.

ನಮ್ಮ ಬಯಲು ಸೀಮೆ ಊರುಗಳಲ್ಲಿ ತಿಂಡಿ ಅಷ್ಟೊಂದು ಪ್ರಧಾನವಾದ ನಿಯಮಿತ ಪದ್ಧತಿಯಾಗಿರಲಿಲ್ಲ.  ಬೆಳಗ್ಗೆಯೇ ಅಡಿಗೆಸಿದ್ದವಾಗಿ ಬಿಡುತ್ತಿತ್ತು.  ಒಂದು ವೇಳೆ ತಿಂಡಿಮಾಡಬೇಕಿದ್ದರೆ ಮನೆಗಳಲ್ಲಿ ರಾಗಿರೊಟ್ಟಿ ಮತ್ತು ಜೋಳದ ರೊಟ್ಟಿಯನ್ನು ಸಾಮಾನ್ಯವಾಗಿ ಮಾಡುತ್ತಿದ್ದುದು.  ಅಪರೂಪಕ್ಕೆ ನೆಂಟರಿಷ್ಟರು ಬಂದರೆ ಮಾತ್ರ ಉಪ್ಪಿಟ್ಟು, ಪುರಿ ಹುಸಲಿ ಮಾಡುತ್ತಿದ್ದರು.  ಅದೂ ಪೇಟೆ ಕಡೆಯನೆಂಟರು ಬಂದಾಗ.

ನಾನು ದೋಸೆಯನ್ನು ಯಾವುದೋ ಸಂದರ್ಭದಲ್ಲಿ ಹೋಟೆಲ್‌ನಲ್ಲಿ ತಿಂದಿದ್ದು ನೆನಪಿದೆ.  ಹಳ್ಳಿಗಾಡಿನ ನಮಗೆ ದೋಸೆ, ಇಡ್ಲಿಗಳೆಲ್ಲಾ ಹೋಟೆಲ್‌ನಲ್ಲಿ ಮಾತ್ರ ಮಾಡುವ ತಿಂಡಿಗಳು ಅನ್ನುವುದು ನಮ್ಮ ಬಲವಾದ ನಂಬಿಕೆಯಾಗಿತ್ತು.  ಪಂಚನಹಳ್ಳಿಗೆ ಬಂದನಂತರ ಸ್ವಲ್ಪ ನನ್ನ ಅಭಿಪ್ರಾಯದಲ್ಲಿ ಬದಲಾವಣೆಯಾಗಿತ್ತು.  ಅದು ಯಾಕೆಂದರೆ ನಮ್ಮ ಟೀಚರ್‌ಗಳು, ಹಾಗೂ ಸರ್ಕಾರಿ ಕೆಲಸದಲ್ಲಿದ್ದರ ಮನೆಗಳಲ್ಲಿ ಈವಗೈರೆ ತಿಂಡಿಗಳನ್ನು ನಾವು ನೋಡುತ್ತಿದ್ದೆವು.  ಆದರೆ ಈ ಮನೆಗಳಲ್ಲಿ ನಮ್ಮ ರೈತಾಪಿ ಮತ್ತು ಸಾಮಾನ್ಯ ಜನರ ರೀತಿಯ ರೊಟ್ಟಿ, ಮುದ್ದೆಗಳು ಅಷ್ಟಾಗಿ ಕಂಡು ಬರುತ್ತಿರಲಿಲ್ಲ.

  ಈ ಕಾರಣಕ್ಕೋ ಏನೋ ನಮಗೆ ಇಂತೆಲ್ಲಾ ಆಹಾರಗಳು ಸಾಮಾನ್ಯರು ಮತ್ತು ಬಡವರ ಆಹಾರಗಳೆಂದು ಅಂದುಕೊಂಡಿದ್ದೆವಾಗಿ ನಾವು ಅನ್ನ, ಇಡ್ಲಿ, ದೋಸೆಗಳನ್ನು ಉತ್ತಮರ ಆಹಾರಗಳು ಅನ್ನುವ ಭಾವನೆ ಬಲಗೊಂಡಿತ್ತು.  ನಾವೂ ಓದಿ ಸರ್ಕಾರಿ ಕೆಲಸಗಿಟ್ಟಿಸಿದರೆ ಈ ಆಹಾರಗಳೆಲ್ಲಾ ನಮಗೂ ಧಕ್ಕುತ್ತವೆಂದು ಕನಸುತ್ತಿದ್ದೆವು.

ನನಗೆ ತುಂಬಾ ಕುತೂಹಲಕಾರಿ ಅನ್ನಿಸಿದ್ದು ನಮ್ಮ ಹೆಚ್‌ಎಂ ಮನೆಯಲ್ಲಿ ನೀರುದೋಸೆ ತಿಂದಾಗ.  ನಾನು ಮುಗ್ದವಾಗಿ ಹೆಚ್‌ಎಂ ಶ್ರೀಮತಿಯವರಾದ ಪುಷ್ಪಾರವರನ್ನು “ಇದೇನು ತಿಂಡಿ?” ಅಂತ ಕೇಳಿದರೆ ಅವರು “ಅದು ನೀರುದೋಸೆ ಅಲ್ಲವಾ?” ಅಂದು ಮತ್ತಷ್ಟು ಗಾಬರಿ ಉಂಟು ಮಾಡಿದರು.  ಬರೀ ನೀರಿನಲ್ಲಿ ದೋಸೆ ಮಾಡುವುದೆಂದರೆ?  ನಳ ಮಹಾರಾಜನಿಗಾದರೂ ಈ ನೀರಿನಲ್ಲಿ ದೋಸೆ ಮಾಡುವ ಕಲೆಸಿದ್ಧಿಸಿರಲಿಕ್ಕಿಲ್ಲ.  ಆದರೆ ಇದು ಈ ಮಂಗಳೂರಿನ ಜನರಿಗೆ ಸಿದ್ದಿಸಿದ್ದಾದರೂ ಹೇಗೆ ಅನ್ನುವ ಕುತೂಹಲ.  ಅದೂ ತೆಳ್ಳಗೆ, ಬೆಳ್ಳಗೆ ಒಂದೇ ಬಾರಿ ಮಡಿಚಿ ಬಾಯಿಗೆ ಇಟ್ಟುಕೊಳ್ಳುವಷ್ಟು ಅಷ್ಟೆ.  ಈ ಮಂಗಳೂರಿನವರಂತೆಯೇ ನಾಜೂಕಾದ ತಿಂಡಿ.  ಆ ದಿನ ಹೆಚ್ಎಂ ಮನೆಯಲ್ಲಿ ಸವಿದ ಆ ನೀರು ದೋಸೆ ರುಚಿ ಇನ್ನೂ ನಾಲಿಗೆ ಮೇಲೆ ಹಾಗೇ ಇರುವಂತೆ ಭಾಸವಾಗುತ್ತಿರುವುದು ಈ ತಿಂಡಿಯ ಮಹತ್ವಕ್ಕೆ ಸಾಕ್ಷಿ!  ಈವತ್ತಿಗೂ ನೀರು ದೋಸೆಯೆಂದರೆ ಬಾಯಲ್ಲಿ ನೀರೂರುತ್ತದೆ.  ಈ ಮಲೆನಾಡು ಸೀಮೆ ಒಕ್ಕಾಗಿನಿಂದ ನನಗೆತುಂಬಾ ಅಚ್ಚುಮಚ್ಚಿನ ತಿಂಡಿಗಳೆಂದರೆ ಗೋಲಿ ಬಜ್ಜಿ ಮತ್ತು ನೀರು ದೋಸೆಗಳು.  ಇಂದಿಗೂ ಈ ರುಚಿಗಾಗಿ ನಾನು ಹುಡುಕುವುದಿದೆ.  ನನಗೆ ಅಷ್ಟೆಅಲ್ಲ ಬಯಲು ಸೀಮೆಯ ಬಹಳ ಜನ ಬಹಳ ಆಪ್ತತೆಯಿಂದ ಬಯಸುವ ತಿನಿಸುಗಳಿವು.

ನಮ್ಮ ಹೆಚ್‌ಎಂ ಮಂಗಳೂರಿನವರು.  ನಮ್ಮ ಶಿಕ್ಷಕರಲ್ಲಿ ಮೂರ್ನಾಲ್ಕು ಜನ ಮಂಗಳೂರಿನವರಾದರೆ, ಒಂದಷ್ಟು ಜನ ಶಿವಮೊಗ್ಗದವರು.  ಕೊಟ್ಟಿಗೆ ಹಾರ ಮತ್ತು ಜಾವಳಿ ಪ್ರದೇಶಗಳು ಮಂಗಳೂರಿನ ಉಜಿರೆ, ಬೆಳ್ತಂಗಡಿಗಳಿಗೆ ಹೊಂದಿಕೊಂಡಭಾಗಗಳಿರಲಾಗಿ ಅಲ್ಲಿಯ ಸೊಗಡೆ ಇಲ್ಲಿಯೂ ಆವರಿಸಿತ್ತು. ಗೋಲಿಬಜ್ಜಿ, ಬಾಳೆಕಾಯಿ ಬೋಂಡ, ಪಕೋಡ,  ಬನ್ಸು, ಪೇಪರ್‌ ಅವಲಕ್ಕಿ, ಕುಸೂಲಕ್ಕಿ ಅನ್ನ ಇಲ್ಲಿನ ಊಟ, ತಿಂಡಿ ತಿನಿಸುಗಳು. ಇದನ್ನೆಲ್ಲಾ ಬಯಲು ಸೀಮೆ ಹುಡುಗರಾದ ನಾವು ಕಂಡದ್ದೇ ಇಲ್ಲ. ಎಲ್ಲವೂ ಹೊಸರುಚಿ.  ಗೋಲಿಬಜ್ಜಿ, ಕಾಯಿ ಚಟ್ಣಿಗಾಗಿ ಜೋಬಲ್ಲಿ ಸ್ವಲ್ಪ ಕಾಸಿದ್ದರೆ ಹೋಟೆಲ್‌ಗೆ ಓಡಿಹೋಗುತ್ತಿದ್ದೆವು.

ಭಾಷೆಯೂ ಪೂರ್ತಿ ಮಂಗಳೂರಿನ ರೀತಿಯೇ.  ಎಳೆದು ಮಾತನಾಡುವ ರೀತಿ.  “ಎಂತಮಾರ್ರೆ? ನಿಮಗೆ ಮಂಡೆಸರಿ ಇಲ್ಲವೋ?” ಅನ್ನುವುದು ಇಲ್ಲಿ ಮಾಮೂಲಿ ಡೈಲಾಗ್. ಬಹಳ ಜನ ತುಳು ಮಾತನಾಡುವವರೂ ಇದ್ದರು.  ಅಚ್ಚ ಕನ್ನಡದಲ್ಲಿ ಪುಸ್ತಕದಲ್ಲಿರುವಂತೆಯೇ ಮಾತನಾಡುವ ಜನ.  ನಮ್ಮ ಬಯಲು ಸೀಮೆಯ ಭಾಷೆ ಮಾತಿನ ಶೈಲಿಯಾದರೆ, ಇಲ್ಲಿಯ ಭಾಷೆ ಒಂದು ರೀತಿ ಪುಸ್ತಕದ ಭಾಷೆ ಅನ್ನಿಸುತ್ತಿತ್ತು.  “ನೀವು ಘಟ್ಟದ ಮೇಲಿನವರೋ?” ಅಂತ ಬಯಲು ಸೀಮೆಯವರನ್ನು ಲೇವಡಿ ಮಾಡುವುದು ಸಾಮಾನ್ಯವಾದ್ದು.  

ಹಾಸ್ಟಲ್‌ ಶುರುವಾದರೂ ಸ್ವಲ್ಪದಿನ ನಾನು ಹೆಚ್‌ಎಂ ಮನೆಯಲ್ಲೇ ಇದ್ದೆ.  ಕಾರಣ ಹೆಚ್ಚಿನ ವಿದ್ಯಾರ್ಥಿಗಳು ಈ ಬಾರಿ ಹಾಸ್ಟಲ್‌ಗೆ ಸೇರಿದ್ದುದು.  ಸ್ವಲ್ಪದಿನ ಹೆಚ್ಎಂ ಮನೆಯಲ್ಲಿಯೇ ಇದ್ದುಕೊಂಡು ಮೆಸ್‌ನಲ್ಲಿ ಊಟಮಾಡಿಕೊಂಡು ಬಂದು ಇಲ್ಲಿಯೇ ಓದಿಕೊಳ್ಳುತ್ತಿದ್ದೆ.  ನಾವು ಮೆರಿಟ್‌ ವಿದ್ಯಾರ್ಥಿಗಳೆಲ್ಲಾ ಬಂದಾದ ಮೇಲೆ ಹಾಸ್ಟಲ್‌ನ ಮುಂಭಾಗದ ಹಜಾರದ ಭಾಗದಲ್ಲಿ ನಮಗೆಲ್ಲಾ ಜಾಗಮಾಡಿಕೊಟ್ಟಾದ ಮೇಲೆ ನಾನೂ ಅಲ್ಲಿಗೆ ಸೇರಿಕೊಂಡೆ.  ನಾವು ನಾಲ್ಕೈದು ಜನ ಈ ರೀತಿ ಆಯ್ಕೆಯಾಗಿ ಬಂದವರಿದ್ದೆವು.  ಅದರಲ್ಲಿ ಚಂದ್ರಶೇಖರ್‌ ಕೆಂಚಿಕೊಪ್ಪ ಲಕ್ಕವಳ್ಳಿ ಹತ್ತಿರದವ, ವಿನಾಯಕ, ಸೀತಾರಾಮು, ಚೆನ್ನಕೇಶವ, ಮತೊಬ್ಬ ಚಂದ್ರಶೇಖರ್‌ಹೀಗೆ. 

ಮೆರಿಟ್ ವಿದ್ಯಾರ್ಥಿಗಳೆಂದರೆ ಒಂದು ರೀತಿಯ ವಿಶೇಷ ಗೌರವವಿತ್ತು.  ಜಾವಳಿ ಸುತ್ತಮುತ್ತಲಿನ ತಾಲ್ಲೂಕು, ಜಿಲ್ಲೆಗಳಲ್ ಲಿಉತ್ತಮ ಶಿಕ್ಷಣಕ್ಕೆ ಮತ್ತು ಶಿಸ್ತಿಗೆ ಹೆಸರುವಾಸಿಯಾಗಿತ್ತಾಗಿ ಉತ್ತಮ ಫಲಿತಾಂಶದ ಕಾರಣಕ್ಕಾಗಿಯೂ ಹೆಚ್ಚಾಗಿ ಪ್ರತಿಷ್ಠಿತರ ಮತ್ತು ಶ್ರೀಮಂತರಮಕ್ಕಳು ಈ ಶಾಲೆಯನ್ನು ಸೇರುತ್ತಿದ್ದರು.  ನಮ್ಮ ಹಾಸ್ಟಲ್‌ವಾರ್ಡನ್‌ ಮತ್ತು ಹೆಚ್‌ಎಂ ಮುಂಡಪ್ಪಬೋಳೂರರು ಮೆರಿಟ್‌ ವಿದ್ಯಾರ್ಥಿಗಳಾದ ನಮ್ಮನ್ನು ಮತ್ತು ಇತರೆ ವಿದ್ಯಾರ್ಥಿಗಳನ್ನು ಒಟ್ಟೊಟ್ಟಿಗೆ ಕಲೆಹಾಕಿ ಎಲ್ಲರಿಗೂ ಓದಿಕೊಳ್ಳಲು ಉತ್ತಮ ಅವಕಾಶ ಕಲ್ಪಿಸಲು ಪ್ರಯತ್ನ ಪಡುತ್ತಿದ್ದರು.  ಆದರೆ ಈ ಪ್ರಯತ್ನ ಅಷ್ಠಾಗಿ ಫಲಪ್ರದವಾಗಲಿಲ್ಲ.  ನಾವು ಹೊರಗೆ ಪಠ್ಯೇತರ ಚಟುವಟಿಕೆಗಳಲ್ಲಿ ಮಾತ್ರ ಬೆರೆಯುತ್ತಿದ್ದೆವಾದರೂ, ಪಾಠ ಪ್ರವಚನಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕತೆಯನ್ನು ನಾವು ಕಾಯ್ದುಕೊಂಡು ಬಿಡುತ್ತಿದ್ದೆವು. ಯಾವಾಗಲೂ ಪುಸ್ತಕ ಹಿಡಿದು ಕೂಚು ಬಟ್ಟರಂತಿದ್ದ ನಮ್ಮನ್ನ ಬೇರೆ ವಿದ್ಯಾರ್ಥಿಗಳು ಅಷ್ಟಾಗಿ ಇಷ್ಟಪಡುತ್ತಿರಲಿಲ್ಲ.   

ಜಾವಳಿ ಶಾಲೆಗೆ ಒಂದು ವಿಶಿಷ್ ಟಮೆರುಗು ಇತ್ತು.  ಒಂದು ಪ್ರಕೃತಿ ಸೌಂದರ್ಯದ ಕಾರಣಕ್ಕಾದರೆ, ಮತ್ತೊಂದು ಒಳ್ಳೆ ಭೋದಕವರ್ಗ.  ಒಬ್ಬರಿಗಿಂತ ಒಬ್ಬರು ಮೀರಿಸುವಂತಿದ್ದ ಶಿಕ್ಷಕರು.  ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳೆರಡಕ್ಕೂ ಸಮಾನ ಆಸಕ್ತಿ ತೋರುತ್ತಿದ್ದು ಇಲ್ ಲಿ ಹೆಚ್ಚುಗಾರಿಕೆ.      

ಇಲ್ಲಿನ ಶಾಲಾಗ್ರಂಥಾಲಯ ಒಂದು ಜಿಲ್ಲಾಮಟ್ಟದ ಗ್ರಂಥಾಲಯದಂತೆ ಇತ್ತು.  ಪಠ್ಯದ ಪೂರಕ ಅಂಶಗಳ ಜೊತೆಗೆ ಕತೆ ಕಾದಂಬರಿಗಳ ಆಗರವೇ ಆಗಿತ್ತು.  ಹೆಚ್ಚಿನಪುಸ್ತಕಗಳನ್ನು ವಿದ್ಯಾರ್ಥಿಗಳು ಮತ್ತು ಪೋಷಕರು ದಾನ ಮಾಡಿದವಾಗಿದ್ದವು. ವಿದ್ಯಾರ್ಥಿಮತ್ತು ಶಿಕ್ಷಕರ ಸಮಿತಿಯ ಸಹಯೋಗದಲ್ಲಿ ನಿರ್ವಹಿಸಲಾಗುತ್ತಿತ್ತು. 

ಮುಂಡಪ್ಪ ಬೋಳೂರರು ಮುಖ್ಯೋಪಾಧ್ಯಾಯರು ಅಂತ ಈಗಾಗಲೆ ಪರಿಚಯಿಸಿದ್ದೇನೆ.  ಇವರದು ಭೀಮಕಾಯದ ಆಕೃತಿ.  ಅವರು ಮಂಗಳೂರಿನ ಭಾಷೆಯಲ್ಲಿ ಜೋರು ಮಾಡುತ್ತಾ ಕೈಯಲ್ಲಿ ಒಂದು ಕೋಲು ಹಿಡಿದು ನಮ್ಮ ಹಾಸ್ಟಲ್‌ ಕಡೆ ಪಂಚೆ, ಬನಿಯನ್‌ನಲ್ಲಿ ಹೆಜ್ಜೆ ಹಾಕಿದರೆಂದರೆ ನಾವೆಲ್ಲಾ ಪುಸ್ತಕ ಹಿಡಿದು ಗಂಭೀರವಾಗಿ ಓದುತ್ತಿರುವಂತೆ ನಟಿಸುತ್ತಿದ್ದೆವು.                                                                                                                                                       

                        

ಶಾಲೆಯ ಆಡಳಿತದಲ್ಲಿ ಎಷ್ಟುಆಸಕ್ತಿ ಹೊಂದಿದ್ದರೋ, ಹಾಸ್ಟಲ್‌ನಲ್ಲಿ ವಿದ್ಯಾರ್ಥಿಗಳ ಅನುಕೂಲಗಳ ಬಗ್ಗೆಯೂ ಅಷ್ಟೆ ಆಸಕ್ತಿವಹಿಸುತ್ತಿದ್ದರು.   ಶಾಲೆಯ ಅಧ್ಯಕ್ಷರಾದ ಗುರ್ಜಾರರಿಗೆ ಅಚ್ಚುಮೆಚ್ಚಿನವರಾಗಿರಲಾಗಿ ಶಾಲೆಯ ಕೆಲಸಕಾರ್ಯಗಳಲ್ಲಿ ಇವರ ಮಾತು ನಡೆಯುತ್ತಿತ್ತು.  ಅವರು ಅಪರೂಪಕ್ಕೆ ಒಂದೊಂದು ಬಾರಿ ಪಾಠ ಪ್ರವಚನಗಳಲ್ಲಿ ಭಾಗವಹಿಸುತ್ತಿದ್ದರು.   ವಿಶೇಷವಾಗಿ ಅವರು ಹತ್ತನೇತರಗತಿ ವಿದ್ಯಾರ್ಥಿಗಳಿಗೆ ಮಾತ್ರ ಇಂಗ್ಲಿಷ್‌ ಪಾಠ ಮಾಡುತ್ತಿದ್ದರು.  ಉಳಿದಂತೆ ಶಾಲೆ ಆಡಳಿತ ಮತ್ತು ಅಭಿವೃದ್ಧಿಯ ಕಡೆಹೆಚ್ಚಿನ ಗಮನ ಹರಿಸುತ್ತಿದ್ದರು.