ಸರ್ಕಾರಿ ಇಲಾಖೆಗಳಲ್ಲಿ ಭ್ರಷ್ಟಾಚಾರ ತಲೆ ಎತ್ತುತ್ತಾ ಇದೆ. ಆದರ ಬಲೆಗೆ ಬೀಳಬೇಡಿ, ದೇಶ ಮೊದಲು, ನಂತರ ನಾವು'

ಹಳ್ಳಿ ಹೈದನ ನೂರೆಂಟು ನೆನಪು ಸಿ.ಚಿಕ್ಕಣ್ಣ

   ಸರ್ಕಾರಿ ಇಲಾಖೆಗಳಲ್ಲಿ ಭ್ರಷ್ಟಾಚಾರ ತಲೆ ಎತ್ತುತ್ತಾ ಇದೆ.  ಆದರ ಬಲೆಗೆ ಬೀಳಬೇಡಿ, ದೇಶ ಮೊದಲು, ನಂತರ ನಾವು'

SSLC ಪರೀಕ್ಷೆಗಳ ಮಧ್ಯೆ ಮದುವೆ ತಯಾರಿ ನಡೆದಿದ್ದವು, ಭಾವಿ ಪತ್ನಿಯ ಮುಖವನ್ನು ಹೋಗಲಿ, ಅವಳ ಹೆಸರನ್ನು ನಾನು ಕೇಳಿರಲಿಲ್ಲ. ಇಲ್ಲಿಯವರೆಗಿನ ಬೆಳವಣಿಗೆಗಳನ್ನು ಒಂದು ಬಾರಿ ಅವಲೋಕಿಸಿದೆ.

ಕೂಲಿಮಠದಲ್ಲಿ ಮರಳ ಮೇಲೆ ಅಕ್ಷರ ಕಲಿಕೆಯ ಆರಂಭದಿಂದ ಹಿಡಿದು ಎಂಕಾಂ ಪದವಿ ಪಡೆಯುವವರೆಗೆ ನಾನು ಇಂಥದ್ದನ್ನೆ ಓದಬೇಕು, ಇಂಥ Subjects ತೆಗೆದುಕೊಂಡು, ಇಂಥ ಡಿಗ್ರಿ ಪಡೆಯಬೇಕೆಂದು ಪ್ರಯತ್ನ ಪಟ್ಟವನೇ ಅಲ್ಲ. ಫೇಲಾದರೆ ಮನೆಯಲ್ಲಿದ್ದು ವ್ಯವಸಾಯಕ್ಕೆ ತೊಡಗಿಸಿಕೊಳ್ಳಬೇಕೆಂಬ ಬೆದರುಬೊಂಬೆಯ ಭಯ ಹುಟ್ಟಿಸಿದ್ದರು, ಅಪ್ಪ ಅದನ್ನು ತಪ್ಪಿಸಿಕೊಂಡು ಒಂದೊಂದೇ ಮೆಟ್ಟಿಲುಗಳನ್ನು ಹತ್ತಿ ಈ ಹಂತ ತಲುಪುವುದರಲ್ಲಿ ಅದೃಷ್ಟ ಹಾಗೂ ದೈವಾನುಗ್ರಹ ಸಹಾಯ ಮಾಡಿದ್ದು, ನಾನೊಬ್ಬ ಸಮಯದ ಗೊಂಬೆಯಾಗಿದ್ದೆ. ನನ್ನ ಭವಿಷ್ಯವನ್ನು ನಾನೇ ರೂಪಿಸಿಕೊಳ್ಳುವ ಪ್ರಯತ್ನವನ್ನು ನನಗೆ ಅರಿವಿಲ್ಲದಂತೆಯೇ ಮಾಡುತ್ತಿದ್ದೆ. ಇದಕ್ಕೆ ಹಿರಿಯರ ಅನುಗ್ರಹ, ಅಕ್ಕ ಚೌಡಮ್ಮ, ಬಿಟಿಎನ್, ಆ‌.ಚಿಕ್ಕಯ್ಯ, ಶಂಕ್ರಪ್ಪ ಮೇಷ್ಟ್ರು ಮುಂತಾದವರ ಅವ್ಯಕ್ತ ಸಹಾಯ- ಸಹಕಾರಗಳೇ ಬೆನ್ನೆಲುಬಾಗಿದ್ದವು.

 

ಜೂನ್ 12, 1966ರಂದು ನಮ್ಮ ಮದುವೆ. ನಮ್ಮ ಮನೆ ಮುಂದೆ ಹಾಕಲಾದ ಅಡಿಕೆ ಮರ ತೆಂಗಿನ ಗರಿ.

ಚಪ್ಪರದಡಿಯಲ್ಲಿ, ನಮ್ಮ ಮನೆಯಿಂದ ಹಿಡಿದು ದೊಡ್ಡಚಿಕ್ಕಪ್ಪನವರ ಮನೆಯವರೆಗೂ ಹಾಕಿದ್ದ ಬೃಹತ್‌ ಚಪ್ಪರದಡಿಯಲ್ಲಿ ಒಂದೇ ಮುಹೂರ್ತದಲ್ಲಿ ನನ್ನ ಮತ್ತು ಕಾಂತಮ್ಮ ಹಾಗೂ ಜಯಮ್ಮ ಮತ್ತು ಬಾಣದ ರಂಗಯ್ಯನವರ ಮದುವೆ ಸರಳವಾಗಿ ಸಾಂಗವಾಗಿ ನೆರವೇರಿತು.

ಮದುವೆಗೂ ಮುನ್ನ ಐಪ್ರಿಲ್ ತಿಂಗಳಲ್ಲಿ ಮದುವೆಗೆ ಬಟ್ಟೆ ತೆಗೆಯಲು ಬೆಂಗಳೂರಿಗೆ ಹೋಗಿ , ಗಾಂಧಿನಗರದ ಹೆಸರಾಂತ ಟೈಲರ್ ಫಿಟ್ ನೆಸ್ ನ ಕೆಂಪಣ್ಣನ ಹತ್ತಿರ ಒಂದು ಸೂಟು ಮತ್ತು ಶರಟುಗಳು, 4 ಪ್ಯಾಂಟ್‌ಗಳನ್ನು ಹೊಲಿಸಿಕೊಂಡೆ.

ಮೇ ನಲ್ಲಿ: MPSC Interview (ಸಂದರ್ಶನ) ಇದೆ ಎಂದು ನೋಟೀಸು ಬಂದುದನ್ನು ಪುಟ್ಟಾಚಾರಿ ಊರಿಗೆ ಬಂದು ಕೊಟ್ಟ, ಅದನ್ನು ಕೈಲಿ ಹಿಡಿದು ನಾನು, ಅಪ್ಪ, ಇಬ್ಬರೂ ಮಧುಗಿರಿಯಲ್ಲಿ ನಮ್ಮ ಹಿಂದಿನ ಹಾಸ್ಟೆಲ್‌ ವಾರ್ಡನ್‌ ಆಗಿದ್ದ ಆರ್. ಚಿಕ್ಕಯ್ಯನವರನ್ನು ಕಂಡೆವು. ಅವರು ಸಿದ್ದಾಪುರದಲ್ಲಿದ್ದ ಮಧುಗಿರಿಯ ಲೋಕಸಭಾ ಸದಸ್ಯ ಶ್ರೀ ಮಾಲಿಮರಿಯಪ್ಪನವರ ಹತ್ತಿರ ಕರೆದುಕೊಂಡು ಹೋದರು. ಅವರಿಗೆ SSLC ಯಲ್ಲಿ ನಾನು ಅವರ ಹಾಸ್ಟೆಲ್‌ನಲ್ಲಿ ಓದಿಕೊಂಡು 1 Class ತೆಗೆದುಕೊಂಡಿದ್ದನ್ನು, ಎಂಕಾಂವರೆಗೆ ಆದ ಬೆಳವಣಿಗೆಯನ್ನು ವಿವರಿಸಿ, MPSC ಯಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಹುದ್ದೆಗೆ ಸಂದರ್ಶನ ಬಂದಿದ್ದನ್ನು ವಿವರಿಸಿದೆ. Interview ನೋಟೀಸನ್ನು ಕೈಗಿತ್ತೆ. ಆಗ ಎಂಪಿಎಸ್‌ಸಿ ಅಧ್ಯಕ್ಷರಾಗಿದ್ದ ಶ್ರೀ ಆರ್ ಚನ್ನಿಗರಾಮಯ್ಯನವರು, 1962ರಲ್ಲಿ ಮಧುಗಿರಿ ಕೊರಟಗೆರೆ ದ್ವಿ-ಸದಸ್ಯತ್ವದ ಶಾಸಕರಾಗಿದ್ದು, ನಂತರ ಎಂಪಿಎಸ್‌ಸಿ ಅಧ್ಯಕ್ಷರಾಗಿದ್ದರು. ಚನ್ನಿಗರಾಮಯ್ಯನವರಿಗೆ ಮಾತಾಡ್ತೀನಿ ಎಂದು ಹೇಳಿದ ಮಾಲಿಮರಿಯಪ್ಪನವರು, ಸಂದರ್ಶನದಲ್ಲಿ ಚೆನ್ನಾಗಿ ಉತ್ತರಿಸಲು ಹೇಳಿ, ದೇವರ ಅನುಗ್ರಹ ಆಗಲಿ ಎಂದು ನಮ್ಮನ್ನು ಬೀಳ್ಕೊಟ್ಟರು.

 

MPSC ಕಛೇರಿ ಈಗಿನ ಹೈಕೋರ್ಟ್ ಕಟ್ಟಡದ ಪಕ್ಕದ MGID ಪಕ್ಕದಲ್ಲಿತ್ತು. ಅಲ್ಲಿ ಸಂದರ್ಶನ ಏರ್ಪಾಡಾಗಿತ್ತು. ಸಂದರ್ಶನಕ್ಕೆ ಹೋದರೆ ಅಲ್ಲಿ ಕೆ. ಬಾಣದ ರಂಗಯ್ಯ ಪ್ರತ್ಯಕ್ಷರಾದರು. ಒಂದು ತಿಂಗಳ ಹಿಂದೆ Commerce Lecturer Selec- tionಗೆ ಕರೆದ ಸಂದರ್ಶನಕ್ಕೆ ಹಾಜರಾಗಿ ಬಂದೆ ಎಂದು ಹೇಳಿದ್ದರು.

 

ಸಂದರ್ಶನದ ಮೊದಲ ಸರದಿ ಬಾಣದ ರಂಗಯ್ಯನದು. ಆತ MCom I

Rank Gold Medalist, ಬಿಕಾಂ / ಎಂಕಾಂಗೆ ಇದ್ದದ್ದೇ ಒಂದು ಹುದ್ದೆ, ಈತನ

Rank ನೋಡಿ ಸೆಲೆಕ್ಟ್ ಮಾಡಿಬಿಟ್ಟರೆ ನನ್ನ ಕತೆ ಗೋವಿಂದ ಎಂಬ ಅಳುಕು ನನ್ನನ್ನು ಕಾಡಲಾರಂಭಿಸಿತು. Alphabetical Order ಮೇಲೆ ಸಂದರ್ಶನಕ್ಕೆ ಕರೆಯುತ್ತಿದ್ದರು. ಬಾಣದ ರಂಗಯ್ಯ ಹೊರಬಂದ ಮೇಲೆ ಇನ್ನೊಬ್ಬರನ್ನು ಕರೆದರು. ಈ ಮಧ್ಯೆ ನಾನು ಬಾಣದ ರಂಗಯ್ಯನವರನ್ನು 'ಹೇಗೆ ನಡೀತು' ಎಂದು ಕೇಳಿದೆ. 'ಇಲ್ಲಯ್ಯ, ಅಧ್ಯಕ್ಷರು ನನಗೆ ನೀನಾಗಲೇ Lecturer ಆಗಿ Select ಆಗಿಬಿಟ್ಟಿದ್ದೀಯ. ಈಗೇಕೆ ಬಂದೆ' ಎಂದು ಹೇಳಿ ನನಗೇನೂ ಪ್ರಶ್ನೆ ಕೇಳದೆ ಕಳುಹಿಸಿದರು ಎಂದರು. `Congratulation' ಎಂದು ಅವರನ್ನು ಅಭಿನಂದಿಸಿ, `Interview ಮುಗಿಸಿಕೊಂಡು ಬರ್ತೀನಿ, ಸ್ವಲ್ಪ ಇರು' ಎಂದೆ. 15 ನಿಮಿಷಗಳಲ್ಲಿ ಸರದಿ ಬಂತು. ಒಳಗೆ ಅಧ್ಯಕ್ಷರು, 3 ಜನ ಸದಸ್ಯರು ಕುಳಿತಿದ್ದರು. ಅಧ್ಯಕ್ಷರು ನನಗೆ ಮಧುಗಿರಿಯ ಕೋಟೆ ಬಗ್ಗೆ, ದಂಡಿನದಿಬ್ಬದ ಬಗ್ಗೆ ಪ್ರಶ್ನೆ ಕೇಳಿದರೆ, ಒಬ್ಬ ಸದಸ್ಯರು ಅಂದಿನ ವಿದ್ಯಮಾನದ ಬಗ್ಗೆ ಪ್ರಶ್ನೆ ಕೇಳಿದರು, ಉತ್ತರಿಸಿದೆ. 'ಸರಿ ಹೋಗು' ಎಂದರು.

 

ಹೊರಗೆ ಬಂದು ಬಾಣದ ರಂಗಯ್ಯ ನಾನು ಇಬ್ಬರೂ ಹೈಕೋರ್ಟ್‌ ಕ್ಯಾಂಟೀನಿಗೆ ಹೋಗಿ ತಿಂಡಿ ತಿಂದೆವು. ಮರದ ಅಡಿ ಕುಳಿತು ಮದುವೆ ಬಗ್ಗೆ ಅದೂ ಇದೂ ಮಾತನಾಡಿದೆವು. 'ನಿನ್ನ ತಂಗಿ ನನಗೆ, ನನ್ನ ತಂಗಿ ನಿನಗೆ ಚೆನ್ನಾಗಿದೆ ಕಣಯ್ಯ Exchange Programme' ಎಂದು ಒಬ್ಬರಿಗೊಬ್ಬರು ತಮಾಷೆ ಮಾಡಿಕೊಂಡೆವು. 'ನೀನು ನನಗೆ ಭಾವ, ನಾನು ನಿನಗೆ ಭಾವ” ಎಂದು ಕೈ ಕುಲಕಿಕೊಂಡು ನಕ್ಕು ಸಂಭ್ರಮ ಪಟ್ಟೆವು.

ಮದುವೆಯಾದ ಒಂದು ತಿಂಗಳಲ್ಲಿ ಎಲ್ಲಾ ಶಾಸ್ತ್ರಗಳು ಮುಗಿದಿದ್ದವು. ಜುಲೈ 8ರಂದು ಪ್ರಜಾವಾಣಿಯಲ್ಲಿ ಎಂಪಿಎಸ್ ಸಿ ಯಿಂದ 11 ಜನ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸಹಾಯಕ ನಿರ್ದೇಶಕರ ಹುದ್ದೆಗೆ ಆಯ್ಕೆಯಾದವರ ಹೆಸರುಗಳನ್ನು ಪ್ರಕಟಿಸಿದ್ದರು. ಅದರಲ್ಲಿ Sl.No 7 ರಲ್ಲಿ ನನ್ನ ಹೆಸರಿತ್ತು. ಮನೆಯಲ್ಲಿ ಸಂಭ್ರಮಿಸಿದೆವು. 'ನೋಡಪ್ಪ, ಮನೆಗೆ ಸೊಸೆ ಬಂದ ಘಳಿಗೆ, ಅವಳ ಕಾಲ್ಗುಣ ಎಷ್ಟು ಚೆನ್ನಾಗೈತೆ' ಅಂತ ಅಮ್ಮ ಹೊಗಳಿದರೆ, 'ಇನ್ನು ನೀನು ಊರು ಬಿಟ್ಟಾಂಗೇನಾ' ಎಂದು ಅಪ್ಪ ಹಂಗಿಸಿದರು. ಈ ಮಧ್ಯೆ ಶ್ರೀ ಕೆ. ಬಾಣದ ರಂಗಯ್ಯನವರು ಸರ್ಕಾರಿ ಕಾಲೇಜು ಉಪನ್ಯಾಸಕರಾಗಿ ಆಯ್ಕೆಯಾಗಿದ್ದನ್ನು MPSC ಪ್ರತ್ಯೇಕವಾಗಿ ಪ್ರಕಟಿಸಿತ್ತು. ಇಬ್ಬರೂ ಭಾವಂದಿರೂ ಅಧಿಕಾರಿಗಳಾಗಿ ಆಯ್ಕೆಯಾಗಿದ್ದೆವು. ದಿನಾಂಕ 20- 07-1966ರಂದು ನನಗೆ RPAD ಮೂಲಕ ಆದೇಶ ಬಂತು, ದಿ. 27-07-1966 ರಂದು ನಾನು ವಿಧಾನಸೌಧದ ಪಕ್ಕದಲ್ಲಿದ್ದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಕಲ್ಲು ಕಟ್ಟಡದಲ್ಲಿದ್ದ ಜಾಯಿಂಟ್ ಡೈರೆಕ್ಟರ್‌ (ಆಡಳಿತ) ಅವರನ್ನು ಭೇಟಿಯಾಗಿ, ಮೂಲ ದಾಖಲೆಗಳನ್ನು ಸಲ್ಲಿಸಿ, ಸರ್ಕಾರಿ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡೆ.

ಈ ಹುದ್ದೆಗೆ ಆಯ್ಕೆಯಾದ ಎಲ್ಲರೂ ಒಂದು ಕಡೆ ಸೇರಿ ಪರಸ್ಪರ ಪರಿಚಯ ಮಾಡಿಕೊಂಡು, ನಂತರ ಒಟ್ಟಿಗೆ ಜಂಟಿ ನಿರ್ದೇಶಕ (ಆಡಳಿತ)ರಾಗಿದ್ದ ಎಂ. ಶಂಕರನಾರಾಯಣ IAS ಅವರನ್ನು ಭೇಟಿ ಮಾಡಿದೆವು. ಅವರು ನಮ್ಮನ್ನೆಲ್ಲಾ ಸ್ವಾಗತಿಸಿ, “ನಿಮಗೆ 35-36 ವರ್ಷಗಳ ಕಾಲ ಈ ಇಲಾಖೆಯಲ್ಲಿ ಕೆಲಸ ಮಾಡುವ ಅವಕಾಶವಿದೆ. ನಿಷ್ಠೆ, ಪ್ರಾಮಾಣಿಕತೆ, ಶ್ರದ್ಧೆಯಿಂದ ದುಡಿಯಿರಿ, ಸರ್ಕಾರಿ ಇಲಾಖೆಗಳಲ್ಲಿ ಭ್ರಷ್ಟಾಚಾರ ತಲೆ ಎತ್ತುತ್ತಾ ಇದೆ. ನೀವೆಲ್ಲಾ ಯುವಕರು, ಆದರ ಬಲೆಗೆ ಬೀಳಬೇಡಿ, ದೇಶ ಮೊದಲು, ನಂತರ ನಾವು' ಎಂದೆಲ್ಲಾ ಹೇಳಿದರು. ಕಾಫಿ ಬಿಸ್ಕತ್‌ ತರಿಸಿಕೊಟ್ಟರು. ಆಡಳಿತ ವಿಭಾಗದ ಸಹಾಯಕ ನಿರ್ದೇಶಕರನ್ನು ಕರೆಸಿ, ಇವರಿಗೆ ಯಾವುದಾದರೊಂದು ರೂಮು ಬಿಟ್ಟುಕೊಟ್ಟು, ಕೂರಲು ಕುರ್ಚಿಗಳ ವ್ಯವಸ್ಥೆ ಮಾಡಿ, ನಂತರ 2 ವರ್ಷದ ಪ್ರೊಬೇಷನರಿ ಅವಧಿಯ ಶೆಡ್ಯೂಲನ್ನು ತಯಾರಿಸಿ ಮಂಡಿಸಿ ಎಂದರು.

 

ನಂತರ ಅವರೇ ಕೈಗಾರಿಕೆ ವಾಣಿಜ್ಯ ಇಲಾಖಾ ನಿರ್ದೇಶಕರಾದ ಟಿ. ಶಾಮಣ್ಣ IAS ಅವರ ಭೇಟಿಯನ್ನು Fix ಮಾಡಿಕೊಟ್ಟರು. ಮಧ್ಯಾಹ್ನ 4-00 ಗಂಟೆಗೆ ಅವರೊಂದಿಗೆ ಭೇಟಿ ಮತ್ತು ಚರ್ಚೆ ಎಂಬ ಸಂದೇಶ ಬಂತು. ಖುಷಿಯಿಂದ ನಾವೆಲ್ಲ ಕಬ್ಬನ್ ಪಾರ್ಕ್‌ನಲ್ಲಿದ್ದ ಕ್ಯಾಂಟೀನ್‌ಗೆ ಹೋಗಿ ಊಟ ಮಾಡಿಕೊಂಡು ಸುಮಾರು 3-30ಕ್ಕೆ ಮತ್ತೆ ಬಂದೆವು. ಶ್ರೀ ಪುಂಗನೂರು ಉಪನಿರ್ದೇಶಕರು ಅವರ ಕೊಠಡಿಯ ಪಕ್ಕದ ಕೋಣೆಯನ್ನು ನಮಗೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಿದ್ದರು.

ಸಂಜೆ 5-00 ಗಂಟೆ ಹೊತ್ತಿಗೆ ಇಲಾಖಾ ನಿರ್ದೇಶಕರಾದ ಟಿ. ಶಾಮಣ್ಣ ಅವರನ್ನು ನೋಡಲು ಅವಕಾಶ ಸಿಕ್ಕಿತು. ಎಂ. ಶಂಕರನಾರಾಯಣನ್ ಅವರೇ ಖುದ್ದಾಗಿ ನಮ್ಮನ್ನು ಅವರ ಕೋಣೆಗೆ ಕರೆದುಕೊಂಡು ಹೋದರು. ನಾವೆಲ್ಲ ಸಾಲಾಗಿ ನಿಂತು ನಮ್ಮ ಪರಿಚಯ ಮಾಡಿಕೊಂಡ ಮೇಲೆ, Meeting Table ನಲ್ಲಿ ಕುಳಿತುಕೊಳ್ಳಲು ಅನುವು ಮಾಡಿಕೊಟ್ಟರು. ಅದರ ಮೇಲೆ ಕಾಫಿ-ಬಿಸ್ಕಟ್ ವ್ಯವಸ್ಥೆಯಾಗಿತ್ತು. ರಾಮಣ್ಣನವರು ಸುಮಾರು 7 ವರ್ಷಗಳಿಂದ ಕೈಗಾರಿಕೆ ಇಲಾಖೆಯ ನಿರ್ದೇಶಕರಾಗಿ ಒಳ್ಳೆಯ ಹೆಸರು ಮಾಡಿದ್ದರು. ಅಂತಹ ಅನುಭವೀ ನಿರ್ದೇಶಕರ ಕೈಕೆಳಗೆ ಕೆಲಸ ಮಾಡುವ ಅವಕಾಶ ಬಂದೊದಗಿದ್ದಕ್ಕಾಗಿ ಸಂತೋಷವಾಗಿತ್ತು.