ಕಾರ್ತೀಕ ಮಾಸದಲ್ಲಿ ಅಂಕುರಿಸಿ ಚೈತ್ರ ಮಾಸದಲ್ಲಿ ಕಮರಿಹೋದ ಪ್ರೇಮ!?
ಚೈತ್ರ ಮಾಸದಲ್ಲಿ ಕಮರಿಹೋದ ಪ್ರೇಮ!?

ಹಳ್ಳಿಹೈದನೂರೆಂಟು ನೆನಪು
(ಹಾಸ್ಟಲ್ ಡೇ ಸಮಾರಂಭದಲ್ಲಿ ನಾಟಕದಲ್ಲಿನ ನನ್ನ ಪಾರ್ಟು ನೋಡಿ ಮೆಚ್ಚುಗೆ ಸೂಸಿದ ಯುವತಿಯ ಗುಂಗಿನಲ್ಲೇ ಆಕೆಯನ್ನು ಭೇಟಿಯಾದಾಗ ಏನಾಯಿತು.. ಮುಂದೆ ಓದಿ)
ಪರೀಕ್ಷೆ ಮುಗಿದ ಮಾರನೇ ದಿನ ಯುಗಾದಿ ಹಬ್ಬ. ಊರಿಗೆ ಹೋಗುವುದೋ ಬೇಡವೋ ಎಂಬ ಯೋಚನೆಯಲ್ಲಿದ್ದೆ. ಸಂಜೆ ವಿಶ್ವನಾಥನ ಗುಡಿಗೆ ಹೋಗಿ ಅಡ್ಡಬಿದ್ದು ಕಲ್ಲಿನ ಮೇಲೆ ಕುಳಿತಿದ್ದಾಗ ಗಂಗಣ್ಣ ಹತ್ತಿರ ಬಂದು, 'ಪರೀಕ್ಷೆ ಆಯ್ತು, ಹೆಂಗೆ ಬರಿದಿದ್ದೀರಿ?' ಎಂದ, 'ಚೆನ್ನಾಗಿ ಬರೆದಿದ್ದೇನೆ ಗಂಗಣ್ಣ' ಎಂದೆ. 'ಅಜ್ಜಿಯವರು ಸಿಕ್ಕಿದ್ದು ನಾಳೆ ಯುಗಾದಿ ಹಬ್ಬಕ್ಕೆ ಅವರ ಮನೆಗೆ ನೀವು ಹೋಗಬೇಕಂತೆ' ಅಂದರು. ನನಗೆ ಆಶ್ಚರ್ಯ, ಭಯ ಒಟ್ಟಿಗೇ ಆದವು. 'ನನಗೂ ಹೇಳೌವ್ರೆ ನೀನು ಅವರನ್ನು ಕರೆದುಕೊಂಡು ಬಾ' ಅಂತ ಅಂದರು. 'ಆಗಲಿ ಹೋಗೋಣ' ಎಂದೆ.
ಪರೀಕ್ಷೆ ಗಲಾಟೆಯಲ್ಲಿ ಯುಗಾದಿಗೆ ಹೊಸಬಟ್ಟೆ ವ್ಯವಸ್ಥೆ ಆಗಿರಲಿಲ್ಲ. ಇಸ್ತಿç ಮಾಡಿಸಿದ್ದ ಷರಟನ್ನು ಹಾಕಿಕೊಂಡು, ಗಂಗಣ್ಣನ ಜತೆ ಬಸ್ ಹತ್ತಿ ಸುಮಾರು ಗಂಟೆಗೆ ಅಜ್ಜಿಯವರ ಮನೆಗೆ ಹೋದೆ. ಹೊಸ ವರುಷ; ಹರುಷ ತುಂಬಿರಬೇಕಾದ ಮನೆ . ಬಾಗಿಲಲ್ಲಿ ಮಾವಿನ ಬೇವಿನ ತೋರಣವಿದ್ದರೂ ಯಾರೂ ನಮ್ಮನ್ನು ಸ್ವಾಗತಿಸಲಿಲ್ಲ. ಹಬ್ಬದ ಊಟ ಹಾಕಿ ಮುಖಕ್ಕೆ ಮಂಗಳಾರತಿ ಆಗಬಹುದೇನೋ ಎಂದುಕೊAಡು ಹಜಾರದಲ್ಲಿಯೇ ಕುಳಿತೆ, ಗಂಗಣ್ಣ ಒಳಗೆ ಹೋದರು, ಆಕೆಯ ಸದ್ದು-ಸುಳಿವೇ ಕಾಣಲಿಲ್ಲ. ಸ್ವಲ್ಪ ಹೊತ್ತಿನಲ್ಲಿ ಅಜ್ಜಿಯೇ ಹೊರಗೆ ಬಂದು, 'ಬಾರಪ್ಪ ಅಂದರು., “ ಈ ಸಲ ನಿನ್ನೆವರೆಗೂ ಪರೀಕ್ಷೆ ಅದಕ್ಕೆ ನೀನು ಊರಿಗೆ ಹೋಗಿ ಹಬ್ಬ ಮಾಡಿಕೊಳ್ಳಲು ಸಾಧ್ಯವಿಲ್ಲ ಅಂತ ನಾನೇ ಗಂಗಣ್ಣಂಗೆ ಹೇಳಿದ್ದೆ. ಬಂದ್ಯಲ್ಲಾ, ಸಂತೋಷ” ಎಂದರು. ಮನೆಯಲ್ಲಿ ಹೆಚ್ಚು ಜನ ಇರಲಿಲ್ಲ. ಆ ಹುಡುಗಿ ಅಜ್ಜಿಯ ತಂಗಿಯ ಮೊಮ್ಮಗಳು, ಅವರೆಲ್ಲಾ ಹಳ್ಳಿಯಲ್ಲಿದ್ದಾರೆ. ಈ ಹುಡುಗಿಯನ್ನು ಓದಲು ಇಲ್ಲಿ ಬಿಟ್ಟಿದ್ದಾರೆ ಎಂಬ ಮಾಹಿತಿ ನನಗೆ ಮೊದಲೇ ಇತ್ತು.
ಅಜ್ಜಿಯ ಮನೆಯಲ್ಲಿದ್ದ ಬೇರೆ ಯಾರೋ ಪೂಜೆ ಮಾಡಿ ಆರತಿ ತಂದುಕೊಟ್ಟರು. ಬೇವು ಬೆಲ್ಲ ಹಿಡಿದು ಪ್ರತ್ಯಕ್ಷಳಾದಳು ಆ ಹುಡುಗಿ, ಮುಖದಲ್ಲಿ ಕಳೆ ಇಲ್ಲ. ಕಣ್ಣಲ್ಲಿ ನೀರು ತುಂಬಿಕೊಂಡು ಬಂದು, ನನ್ನ ಕಡೆ ನೋಡದೆ ಕೈಯಲ್ಲಿ ಬೇವು ಬೆಲ್ಲ ಹಾಕಿದಳು. ಬೆಲ್ಲಕ್ಕಿಂತ ಬೇವೇ ಜಾಸ್ತಿ ಬಿದ್ದಿತ್ತು, ಕಣ್ಣಿಗೊತ್ತಿಕೊಂಡು ತಿಂದೆ. ನಂತರ ಸಹ ಭೋಜನ. ಅವಳು ನನಗೆ ಬಡಿಸಲೂ ಬರಲಿಲ್ಲ. ಅದಾಗಿ ನನ್ನ ಗಂಟಲಲ್ಲಿ ಊಟವೂ ಇಳಿಯಲಿಲ್ಲ. ಊಟ ಮಾಡಿದ ಶಾಸ್ತ್ರ ಮಾಡಿ ಕೈತೊಳೆದುಕೊಂಡು ಹೊರಗೆ ಜಗುಲಿಗೆ ಬಂದು ಕುಳಿತೆ. ಮುಂದೇನಾಗಬಹುದೆAದು ಮನೆಯಲ್ಲಿದ್ದ ಅಂದಿನ ವಾತಾವರಣವೇ ಹೇಳುತ್ತಿತ್ತು.
ಸ್ವಲ್ಪ ಹೊತ್ತಿನ ನಂತರ ಅಜ್ಜಿ ಗಂಗಣ್ಣನ ಜತೆ ಬಾಳೆಹಣ್ಣು, ಅಡಿಕೆ ಎಲೆ ತಟ್ಟೆ ತೆಗೆದುಕೊಂಡು ಹಜಾರಕ್ಕೆ ಬಂದರು. ನನ್ನ ಪಕ್ಕದಲ್ಲೇ ಕುಳಿತು ಬಾಳೆಹಣ್ಣು ಕೈಗೆ ಕೊಟ್ಟರು. ಬಿಡಿಸಿ ತಿಂದೆ. 'ಎಲೆ ಹಾಕೋ ಅಭ್ಯಾಸ ಇದೆಯಾ' ಅಂದರು. 'ಇಲ್ಲ ಅಜ್ಜಿ, ಅಂದೆ. 'ನೋಡಪ್ಪಾ, ನೀನು ತುಂಬ ಸಭ್ಯಸ್ತ ಎಂದು ಹಾಸ್ಟೆಲ್‌ನ ಎಲ್ಲರೂ ಹೇಳ್ತಾರೆ. ನಿನಗೆ ನನ್ನ ಮೊಮ್ಮಗಳ ಮೇಲೆ ಮನಸ್ಸಾಗೈತೆ ಅಂತನೂ ಗೊತ್ತು. ಆದರೆ ಅದು ಕೈಗೂಡಂಗಿಲ್ಲ. ಯಾಕೆಂದರೆ ನಮ್ಮ ತಮ್ಮನ ತಂಗಿ ಮಗ ಇಂಜಿನಿಯರ್ ಆಗವ್ನೆ, ಅವನ್ಗೆ ಇವಳನ್ನು ಕೊಟ್ಟು ಮದುವೆ ಮಾಡ್ಬೇಕು ಅಂತ ಮಾತುಕತೆ, ಎಲ್ಲಾ ಆಗಿ, ಮುಂದಿನ ಜೇಷ್ಠಮಾಸದಲ್ಲಿ ಮದುವೆ ಮಾಡಬೇಕಂತ ಎಲ್ಲಾ ನಿಶ್ಚಯ ಆಗಿದೆ. ಅವಳ ಆಸೇನ ನೀನು ಬಿಡು' ಅಂದು ನನ್ನ ಕೈ ಹಿಡಿದುಕೊಂಡು ಕೇಳಿದರು. ನನಗೆ ಏನು ಹೇಳಬೇಕೆಂದು ತೋರಲಿಲ್ಲ. ಬಾಯಿಯಿಂದ ಮಾತು ಹೊರಡಲಿಲ್ಲ. ಕಣ್ಣಲ್ಲಿ ಎರಡು ಹನಿ ನೀರು ತೊಟ್ಟಿಕ್ಕಿತು. ಒರೆಸಿಕೊಂಡು ಆಗಲಿ ಎಂದು ಹೇಳಿ, ಬರೀನಿ ಅಜ್ಜಿ ಎಂದು ಹೊರಟೆ. ಹಿಂದಿರುಗಿ ನೋಡಿದೆ. ಕಿಟಕಿಯಲ್ಲಿ ಅವಳು ಅಳುತ್ತಾ ಇದ್ದದ್ದು ಕಾಣಿಸಿತ್ತು. 'ರ‍್ತೀನಿ' ಎಂದು ಅವಳ ಕಡೆ ಕೈ ಬೀಸಿ, ಹೊರಗೆ ಬಂದೆ. ಬಸ್ ಹಿಡಿದು ಹಾಸ್ಟೆಲ್‌ಗೆ ಬಂದೆ. ಮಾರನೇ ದಿನ ಹಾಸ್ಟೆಲ್ ಲೆಕ್ಕ ಚುಕ್ತಮಾಡಿ, ಊರಿಗೆ ಮರಳಿದೆ. ಕಾರ್ತೀಕದಲ್ಲಿ ಅಂಕುರಿಸಿದ ಪ್ರೇಮ ಚೈತ್ರ ಮಾಸದಲ್ಲಿ ಕಮರಿ ಹೋಗಿತ್ತು.
********
ಮುಡುಪಯ್ಯನ ತೋಟದ ಬಾವಿ ಕೆಲಸ ಮುಗಿದು ಅದಕ್ಕೆ ಎಲೆಕ್ಟಿಕ್ ಪಂಪ್ ಸೆಟ್ ಹಾಕಿಸಲು ತಂದೆಯವರು ಪ್ರಯತ್ನ ಪಡುತ್ತಿದ್ದರು. ಬಳೆಹಳ್ಳಿಯ ಬಾವಿಗೆ MSEB ಯ HP ಯೋಜನೆಯಡಿಯಲ್ಲಿ ಪಂಪನ್ನು ಹಾಕಿಸಿದಂತೆ, ಇದಕ್ಕೂ ಪ್ರಯತ್ನಿಸಿದೆವು. ಮುಡುಪಯ್ಯನ ತೋಟದ ಜಮೀನು ಸರ್ಕಾರಿ 'ಫಡ' ಎಂದು RTC ಯಲ್ಲಿ ಬಂದಿದ್ದರಿಂದ ಅದರ ಆಧಾರದ ಮೇಲೆ HP ಸಿಸ್ಟಂ ಮೇಲೆ ಪಂಪ್‌ಸೆಟ್ ಒದಗಿಸಲು ಸಾಧ್ಯವಿಲ್ಲ ಎಂದು ಹಿಂಬರಹ ನೀಡಿದರು. ಸರಿ, ಮನೆಯಲ್ಲಿ ಸ್ಟಾಕ್ ಇದ್ದ ಅಡಿಕೆ, ಕಡಲೆ ಕಾಯಿಯನ್ನು ಮಂಡಿಗೆ ಹಾಕಿದೆವು. ಸುಮಾರು 4 ಸಾವಿರ ರೂ ಹಣ ಬಂತು. ಮಧುಗಿರಿಯಲ್ಲಿ ನೆಲೆಯಾಗಿದ್ದ ಕೊಯಮತ್ತೂರಿನ ಪಂಪು, ಮೋಟಾರ್, ಪೈಪು ತಯಾರಿಕರ ಹತ್ತಿರ ವ್ಯಾಪಾರ ಮಾಡಿ, MSEB ಯವರಿಂದ ವಿದ್ಯುತ್ ಅನುಮೋದನೆ ಪಡೆದು, ಕಂಬ, ತಂತಿ ವ್ಯವಸ್ಥೆ ಮಾಡಿ ಕರೆಂಟ್ ಪಂಪನ್ನು ಅಳವಡಿಸಿ ನೀರೆತ್ತುವಷ್ಟರಲ್ಲಿ ಜೂನ್ ತಿಂಗಳು ಮುಗಿದಿತ್ತು.
ಅಪ್ಪ ಆಳುಗಳ ಜತೆ ಸೇರಿ ವ್ಯವಸಾಯದ ಎಲ್ಲ ಕೆಲಸಗಳನ್ನು ನಿರ್ವಹಿಸುತ್ತಿದ್ದರು. ಜಯಣ್ಣ ಬಿಎ ಆನರ್ಸ್ಗೆ (ಕನ್ನಡ) ಬೆಂಗಳೂರು ಸೆಂಟ್ರಲ್ ಕಾಲೇಜಿಗೆ ಸೇರಿದ್ದನು. ದೊಡ್ಡಚೌಡಯ್ಯ ಈ ವರ್ಷ SSLC ಕಟ್ಟಿದ್ದನು. ಭಕ್ತರಹಳ್ಳಿಯ ಅಕ್ಕನ ಸಂಸಾರದಲ್ಲಿ ಎಲ್ಲವೂ ಸರಿ ಇರಲಿಲ್ಲ. ಅಣ್ಣ ತಮ್ಮಗಳ ಮಧ್ಯೆ ಮನಸ್ತಾಪ ಆರಂಭವಾಗಿ ಭಾಗವಾಗುವ ಮಾತುಗಳು ಚಾಲ್ತಿಯಲ್ಲಿದ್ದವು.
ಬಿಕಾಂ ಫಲಿತಾಂಶ: ಪತ್ರಿಕೆಯಲ್ಲಿ ಪ್ರಕಟವಾಗಿದ್ದವು, ಅದೃಷ್ಟವಶಾತ್ ನಾನು ಪಾಸಾಗಿ, ಬಚಾವಾಗಿದ್ದೆ. ಮುಂದೇನು? ಎಂಬ ಯಕ್ಷಪ್ರಶ್ನೆ ಎದುರಾಯಿತು. ಸಂಜೆ ಮನೆಯ ಕಡೆ ಶಂಕರಪ್ಪ ಕಾಕನವರು ಬಂದರು. 'ಏನ್ಮಾಡ್ತೀಯಾ? ಮುಂದೆ ಓದ್ತೀಯೋ ಅಥವಾ ಯಾವುದಾದರೂ ಕೆಲಸಕ್ಕೆ ಪ್ರಯತ್ನ ಮಾಡ್ತೀಯೋ ಅಂದರು. ಅಪ್ಪ-ಅಮ್ಮ ಇಬ್ಬರೂ 'ಎಲ್ಲಿಯೂ ಬೇಡ, ನಾವು ಎಷ್ಟು ದಿನ ಈ ವ್ಯವಸಾಯ ಕಟ್ಟಿಕೊಂಡು ಏಗೋದು, ನಮಗಂತೂ ಮಾಡಿ ಮಾಡಿ ಸಾಕಾಗೋಗಿದೆ. ಅವನು ಇಲ್ಲೇ ಇದ್ದು ವ್ಯವಸಾಯ ನೋಡಿಕೊಂಡಿರಲಿ' ಎಂದು ಒಮ್ಮತದ ಅಭಿಪ್ರಾಯ ಮುಂದಿಟ್ಟರು. ಚಿಕ್ಕಪ್ಪ 'ಏನಯ್ಯಾ' ಅಂತ ನನ್ನ ಕಡೆ ನೋಡಿದರು. ನಾನು 'ಎಂಕಾಂ ಮಾಡಬೇಕು. ಅದಾದ ಮೇಲೆ ಮುಂದಿನ ಯೋಚನೆ' ಎಂದೆ. 'ಓದಲಿ ಬಿಡಣ್ಣ, ನಮ್ಮ ವಂಶದೊಳಗೆ ಈ ಎಂಎ, ಎಂಎಸ್ಸಿ ಪಾಸು ಮಾಡಿದವರೇ ಇಲ್ಲ. ನಾನೂ ಬಿಎ ಪಾಸುಮಾಡಿ ನಿಲ್ಲಿಸಿಬಿಟ್ಟೆ ಅವನಾದರೂ ಓದಲಿ' ಎಂದರು. ಚಿಕ್ಕಪ್ಪನವರ ಮಾತಿಗೆ ಅಪ್ಪ ಎಂದೂ, ಯಾವತ್ತೂ ಹೆಚ್ಚು ಮನ್ನಣೆ ಕೊಡುತ್ತಿದ್ದರು. ಅದಕ್ಕೆ ಮುಂದೆ ಮಾತಾಡಲಿಲ್ಲ. 'ಮೌನಂ ಸಮ್ಮತಿ ಲಕ್ಷಣಂ' ಎಂದುಕೊಂಡು ಹೊರಗೆ ಹೋದೆ.
ಎರಡು ದಿನ ಬಿಟ್ಟು ಬೆಂಗಳೂರಿಗೆ ಹೋಗಿ, ಕಾಲೇಜಿನಲ್ಲಿ ಆಂಜನಪ್ಪನವರನ್ನು ಕಂಡೆ. ನಿನ್ನ ಮಾರ್ಕ್ಸ್ ಕಾರ್ಡ್ ಬಂದಿದೆ ತೆಗೆದುಕೋ ಎಂದು ಕೊಟ್ಟರು. 'ಯಾಕೆ III class? ಬರೀ ನಾಟಕ, ಸಿನಿಮಾ ಗೀಳು ಹಚ್ಚಿಕೊಂಡರೆ ಹೀಗೇ ಆಗೋದು. ಇನ್ಮೇಲಾದ್ರೂ ಬುದ್ಧಿ ಕಲಿ, ಮೈಸೂರಿನ ಮಾನಸ ಗಂಗೋತ್ರಿಯಲ್ಲಿ, ಎಂಕಾಂ ಆರಂಭವಾಗಿ 2ನೇ ವರ್ಷ ಆಗಿದೆ, ನಿನಗೆ ಗೊತ್ತಿರೋ ಬಿ.ಟಿ.ಎನ್. ಅವರೆ HOD, ಸೀಟು ಗಿಟ್ಟಿಸಿಕೋ' ಅಂದರು. 'ಆಗಲಿ ಸಾರ್' ಎಂದು ಹೇಳಿ, ಪ್ರಾಂಶುಪಾಲರಾದ ಜಿ.ಆರ್. ರೆಡ್ಡಿಯವರನ್ನು ಕಂಡೆ, 'ಬಾಪ್ಪ, ಏನು ರಿಸೆಲ್ಟ್?' ಅಂದರು. III classನಲ್ಲಿ ಪಾಸು ಸಾರ್' ಅಂದೆ. 'ನೀನು extra caricular activities ನಲ್ಲೆ 3 ವರ್ಷ ಕಳೆದೆ. ಅದರ ಪ್ರತಿಫಲ ಇದು' ಎಂದು ಹೇಳಿ 'ಏನೂ ಅಧೈರ್ಯ ಪಡಬೇಡ, ಮುಂದೆ ಪೋಸ್ಟ್ ಗ್ರಾಜುಯೇಟ್ ಮಾಡು' ಎಂದು ಧೈರ್ಯ ಹೇಳಿದರು. ಅವರ ಕಾಲಿಗೆ ನಮಸ್ಕರಿಸಿ ಹೊರ ಬಂದು ಹಾಸ್ಟೆಲ್ ಹತ್ತಿರ ಹೋದೆ. ಅಲ್ಲಿ ಒಂದು ರಾತ್ರಿ ತಂಗಿದ್ದು, ಮರುದಿನ ರೈಲು ಹತ್ತಿ ಮೈಸೂರು ಕಡೆ ಪ್ರಯಾಣ ಬೆಳೆಸಿದೆ.
(ಮುಂದಿನ ‘ ಕಿನ್ನರಿ’ಗೆ)