ಫೈಜ್ ಅಹ್ಮದ್ ಫೈಜ್: ಜೀವನ ಮತ್ತು ಕಾವ್ಯ
ಉರ್ದು ಮತ್ತು ಇಂಗ್ಲಿಷ್‌ನಲ್ಲಿ ಬರೆಯುತ್ತಿದ್ದ ಫೈಜ್ ಒಬ್ಬ ಕವಿಯಾಗಿರದೆ ಉತ್ತಮ ಗದ್ಯ ಬರಹಗಾರರೂ ಆಗಿದ್ದರು. ಅವರೊಬ್ಬ ಯಶಸ್ವಿ ಪತ್ರಕರ್ತ ಮತ್ತು ನಾಟಕಕಾರರೂ ಆಗಿದ್ದರು. ಅವರು ಕೇವಲ ಕವಿಯಾಗಿರದೆ ಒಬ್ಬ ಚಳುವಳಿಗಾರರಾಗಿದ್ದರು. ಜೀವನದಾದ್ಯಂತ ಅವರದ್ದು ಹೋರಾಟದ ಬದುಕಾಗಿತ್ತು. ಯಾವಾಗಲೂ ಅವರು ನುಡಿದಂತೆ ನಡೆದರು. ಪ್ಯಾಸಿಸ್ಟರ ವಿರುದ್ಧ ಹೋರಾಡುವ ಅವಕಾಶ ಬಂದಾಗ ಸೇನೆ ಸೇರಿ ಯುದ್ಧದಲ್ಲಿ ಪಾಲ್ಗೊಂಡರು. ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿ ಕಾರ್ಮಿಕರಿಗಾಗಿ ಸತತವಾಗಿ ದುಡಿದರು. ಇವರೊಬ್ಬ ಸಾಹಿತ್ಯ ಚಳುವಳಿಗಾರರೂ ಆಗಿದ್ದರು. ಆಫ್ರೋ್ರ-ಏಶಿಯನ್ ಕವಿ ಲೇಖಕರ ಬರವಣಿಗೆಗೆ ಮೀಸಲಾದ ಸಾಹಿತ್ಯ ಪತ್ರಿಕೆ 'ಲೋಟಸ್' ನ ಸಂಪಾದಕರಾಗಿದ್ದರು.
ಸ್ವಾತಂತ್ರತ್ರ್ಯದ ಅಂತರ್ಜಲ
ಫೈಜ್ ಅವರ ಕಾವ್ಯವು ವಿಶಿಷ್ಟವಾಗಿತ್ತು. ಅವರು ಮೂಲತಹ ರಮ್ಯ ಕವಿಯಾಗಿದ್ದರು. ಬಹಳಷ್ಟು ಕವಿತೆಗಳಲ್ಲಿ ರಮ್ಯತೆಯು ಕ್ರಾಂತಿ ಕವಿತೆಯಾಗಿ ಮಾರ್ಪಟ್ಟ ಜಾದುಗಾರಿಕೆಯನ್ನು ಕಾಣಬಹುದು. ದಬ್ಬಾಳಿಕೆಯ ವಿರುದ್ಧ ಕ್ರಾಂತಿ, ಅನ್ಯಾಯದ ವಿರುದ್ಧ ಪ್ರತಿಭಟನೆ, ಜೀವನದ ಸುಖ ಸಾಧನೆ ಮತ್ತು ಹೋರಾಟದ ಹಾದಿ ಇವುಗಳ ನಡುವಿನ ದ್ವಂದ್ವ ಚಿತ್ರಿಸುವಲ್ಲಿ ಫೈಜ್ ಅವರು ಶಾಸ್ತ್ರೀಯ ಕಲ್ಪನೆಯನ್ನು ಯಶಸ್ವಿಯಾಗಿ ಉಪಯೋಗಿಸಿಕೊಂಡರು. ಫೈಜ್ ಅವರ ಕಾವ್ಯವು ಆಧುನಿಕ ಮತ್ತು ಶಾಸ್ತ್ರೀಯತೆಯ ಸಮ್ಮಿಲನದ ಒಂದು ಸುಂದರ ಉದಾಹರಣೆಯಾಗಿದೆ.
ಎಲ್.ಕೆ.ಅತೀಕ್
ದಬ್ಬಾಳಿಕೆಯ ವಿರುದ್ಧ ಪ್ರತಿಭಟನೆ, ಸ್ವಾತಂತ್ರ‍್ಯ ಪ್ರೀತಿಯ ಛಲ, ಅಧಿಕಾರದ ಬಗ್ಗೆ ಪೂಜ್ಯಭಾವವಿಲ್ಲದ ಮನೋವೃತ್ತಿ ಇವು ಫೈಜ್ ಅಹ್ಮದ್ ಫೈಜ್ ಅವರ ಬಹಳಷ್ಟು ಕವಿತೆಗಳ ಮೂಲ ತಿರುಳಾಗಿವೆ. ಪ್ರೇಮ ಅವರ ಕವಿತೆಯ ಇನ್ನೊಂದು ಸರ್ವಶಕ್ತ ವಸ್ತು. ಈ ಶತಮಾನದ ಪ್ರಾರಂಭದಲ್ಲಿ ಉರ್ದು ಕಾವ್ಯ, ಬದಲಾವಣೆಯ ಯಾತನೆಯನ್ನು ಅನುಭವಿಸುತ್ತಿತ್ತು. ಯಾವ ಗಝಲ್ ಉರ್ದು ಕಾವ್ಯಕ್ಕೆ ಲಕ್ಷಣ ನಿರೂಪಿಸಿತೋ ಆ ಕಾವ್ಯಕ್ಕೆ ಅದು ಒಂದು ಮಿತಿಯೂ ಸಹ ಆಗಿತ್ತು. ಗಝಲಿನ ಶಾಸ್ತ್ರೀಯ ಅಳತೆಗೋಲಿನಲ್ಲಿದ್ದ ಉರ್ದು ಕಾವ್ಯವನ್ನು ಈ ಸಂಕೋಲೆಯಿAದ ಮುಕ್ತಿಗೊಳಿಸಲು ಬಂಡಾಯ ಮನೋವೃತ್ತಿಯ ಕವಿಗಳು ಪ್ರಯತ್ನಿಸುತ್ತಿದ್ದರು. ಇದೇ ಕಾಲದಲ್ಲಿ ಫೈಜ್ ಅಹ್ಮದ್ ಫೈಜ್ ಅವರ ಕಾವ್ಯ ರಚನೆ ಪ್ರಾರಂಭವಾಯಿತು. ಇದು ರಾಜಕೀಯವಾಗಿಯೂ ವಿಶಿಷ್ಟವಾದ ಕಾಲವಾಗಿತ್ತು. 1917ರಲ್ಲಿ ನಡೆದ ರಷ್ಯಾದ ಬೋಲ್ಷೆವಿಕ್ ಕ್ರಾಂತಿಯು ತುಳಿತಕ್ಕೆ ಒಳಗಾದವರ ಮುಕ್ತಿಗೆ ಹೊಸ ಆಶಯವನ್ನು ಹುಟ್ಟು ಹಾಕಿತು. ಇದೇ ವೇಳೆಯಲ್ಲಿ ಆಳ್ವಿಕೆ ಮತ್ತು ಏಷಿಯಾದ ಬಹುಭಾಗಗಳಲ್ಲಿ ಆಂಗ್ಲರ ವಸಾಹತುಶಾಹಿತನವನ್ನು ಬಲಪಡಿಸಿಕೊಳ್ಳಲು ಪ್ರಯತ್ನಿಸುತ್ತಿತ್ತು. ಹಿಟ್ಲರನ ಅಡಿಯಲ್ಲಿ ಪ್ಯಾಸಿಸಂ ತನ್ನ ವಿಕೃತ ರೂಪವನ್ನು ಜರ್ಮನಿಯಲ್ಲಿ ಪ್ರಕಟಿಸಿ, ಯೂರೋಪಿನ ಬಹುಭಾಗಗಳಲ್ಲಿ ಪಸರಿಸುತ್ತಿತ್ತು. ಇದೇ ಸಂದರ್ಭದಲ್ಲಿ ಭಾರತದಲ್ಲಿ ಬ್ರಿಟಿಷರ ವಿರುದ್ಧ ಸ್ವಾತಂತ್ರ‍್ಯಕ್ಕಾಗಿ ಅತ್ಯುಗ್ರ ಹೋರಾಟ ನಡೆಯುತ್ತಿತ್ತು. ಈ ಘಟನೆಗಳು ಇಪ್ಪತ್ತನೇ ಶತಮಾನದ ಮೊದಲಿನ ಐವತ್ತು ವರ್ಷಗಳಲ್ಲಿ ಕವಿಗಳ ಭಾವನೆಗಳಿಗೆ ಆಕಾರ ನೀಡುತ್ತಿದ್ದವು.
ಪ್ರಗತಿಪರ ಕಾವ್ಯವು ಉರ್ದು ಸಾಹಿತ್ಯದಲ್ಲಿ ಆಧುನಿಕ ವಿಚಾರಗಳನ್ನು ಬಿಂಬಿಸಿತು. ಹೊಸ ಕವಿಸಮೂಹ ಉರ್ದು ಸಾಹಿತ್ಯದ ಸಾಂಪ್ರದಾಯಿಕತೆಯನ್ನು ಮುರಿದು ಆಧುನಿಕ ವಿಚಾರದ ಕವಿತೆಗಳನ್ನು ರಚಿಸಲು ಪ್ರಾರಂಭಿಸಿತು. ಅಂದು ಕಾವ್ಯದ ಮೂಲ ವಸ್ತುವಾಗಿದ್ದ ಪ್ರೀತಿಗೆ ಪ್ರತಿಯಾಗಿ ಸ್ವಾತಂತ್ರ‍್ಯ, ಸಮಾಜವಾದ, ಕಾರ್ಮಿಕ ಶೋಷಣೆಯ ಕೊನೆ ಮತ್ತು ಬಂಡವಾಳಶಾಹಿ ಪದ್ಧತಿಯ ಶೋಷಣೆ ಇವು ಕಾವ್ಯದ ಪ್ರಮುಖ ವಸ್ತುವಾಗಿ ಪರಿವರ್ತನೆಗೊಂಡವು. ಈ ಪ್ರಗತಿಪರ ಕವಿಗಳಲ್ಲಿ ಫೈಜ್‌ರವರು ಒಬ್ಬರು, ಫೈಜ್ ಅಹ್ಮದ್ ಫೈಜ್ ಅವರು ಒಬ್ಬ ಪ್ರಗತಿಪರ ಕವಿಯಾಗಿದ್ದರೂ ಎಲ್ಲರಿಗಿಂತ ಭಿನ್ನರಾಗಿದ್ದರು.
ಈಗ ಪಾಕಿಸ್ತಾನದಲ್ಲಿರುವ ಸಿಯಾಲಕೋಟದಲ್ಲಿ ಫೈಜ್ ಅವರು ದಿನಾಂಕ 13-02-1911 ರಂದು ಜನಿಸಿದರು. ಇವರ ತಂದೆ ಸುಲ್ತಾನ ಮಹಮದ ಖಾನ ಸಹ ಪಂಡಿತರಾಗಿದ್ದರು. ಅಂದಿನ ಅಫಘಾನಿಸ್ತಾನದ ದೊರೆಗೆ ಇವರು ಮುಖ್ಯ ಕಾರ್ಯದರ್ಶಿಯಾಗಿದ್ದರು. ಉರ್ದು ಸಾಹಿತ್ಯದೊಡನೆ ಇವರ ಸಂಬAಧ ಗಾಢವಾಗಿತ್ತು. ಫೈಜ್ ಅವರು ಸಾಹಿತ್ಯಕವಾಗಿ, ಸಂಸ್ಕೃತಿ ಮತ್ತು ಸಾಹಿತ್ಯದ ತೊಟ್ಟಿಲಲ್ಲಿ ಹುಟ್ಟಿದಂತಿತ್ತು. ಅವರ ಪ್ರಾಥಮಿಕ ವಿದ್ಯಾಭ್ಯಾಸವು ಪೌರಾತ್ಮ ಸಾಂಪ್ರದಾಯಿಕ ಆದರ್ಶದ ಶಿಕ್ಷಣದಲ್ಲಿ ಪ್ರಾರಂಭವಾಯಿತು. ತಮ್ಮ ನಾಲ್ಕನೆ ವರ್ಷದಲ್ಲಿಯೇ ಕುರಾನನ್ನು ಕಂಠಪಾಠ ಮಾಡಲು ಶುರು ಮಾಡಿದರು. ತಮ್ಮ ಐದನೆಯ ವರ್ಷದಲ್ಲಿ ಮೌಲ್ವಿ ಇಬ್ರಾಹಿಂ ಸಿಯಾಲಕೋಟರವರ ಸಂಸ್ಥೆಯನ್ನು ಸೇರಿ ಅರೆಬಿಕ್ ಮತ್ತು ಪರ್ಶಿಯನ್ ಭಾಷೆಗಳನ್ನು ಐದು ವರ್ಷಗಳವರೆಗೆ ಅಭ್ಯಾಸ ಮಾಡಿದರು. 1921ರಲ್ಲಿ ಸಿಯಾಲಕೋಟದ ಸ್ಕಾಚ್ ಮಿಶನ ಹೈಸ್ಕೂಲಿಗೆ ಪ್ರವೇಶ ಪಡೆದರು. ಅಲ್ಲಿ ಅವರು ಮೆಟ್ರಿಕ್ಯೂಲೇಶನ್ ಪರೀಕ್ಷೆಯನ್ನು 1927 ರಲ್ಲಿ ಪ್ರಥಮ ದರ್ಜೆಯಲ್ಲಿ ಪಾಸುಮಾಡಿದರು. ಮುಂದಿನ ವಿದ್ಯಾಭ್ಯಾಸಕ್ಕಾಗಿ ಅವರು ಸಿಯಾಲಕೋಟಿನ ರ‍್ರೇ ಕಾಲೇಜಿಗೆ ಹೋಗಿ ಅಲ್ಲಿ ಇಂಟರ್‌ಮೀಡಿಯಟ್ ಪರೀಕ್ಷೆಯನ್ನು ಪ್ರಥಮ ದರ್ಜೆಯಲ್ಲಿ ಮುಗಿಸಿದರು. ಅದೇ ಸಮಯಕ್ಕೆ ಅವರು ಆರೆಬಿಕ್ ಮತ್ತು ಪರ್ಶಿಯನ್ ಭಾಷೆಯನ್ನು ಮೌಲ್ವಿ ಸಯ್ಯದ ಮೀರ್ ಹಸನ್‌ರಲ್ಲಿ ಅಭ್ಯಾಸಿಸಿದರು.
ಮುಂದಿನ ಉನ್ನತ ಶಿಕ್ಷಣಕ್ಕಾಗಿ ಲಾಹೋರಿಗೆ ತೆರಳಿದರು. ಲಾಹೋರಿನ ಸರಕಾರಿ ಕಾಲೇಜಿನಲ್ಲಿ ಫೈಜ್ ಅವರು ಬಿ.ಎ. ಆರ‍್ಸÀನ್ನು 1931ರಲ್ಲಿ ಮತ್ತು ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು 1933ರಲ್ಲಿ ಪಡೆದರು. ಮುಂದೆ ಲಾಹೋರಿನ ಓರಿಯಂಟಲ್ ಕಾಲೇಜು ಸೇರಿ ಅರೆಬಿಕ್ ಭಾಷೆಯಲ್ಲಿ ಎಂ.ಎ. ಪದವಿಯನ್ನು 1934ರಲ್ಲಿ ಪಡೆದರು. 1935ರಲ್ಲಿ ಅಮೃತಸರ ಕಾಲೇಜಿನಲ್ಲಿ ಇಂಗ್ಲೀಷ್ ಸಾಹಿತ್ಯ ಪಾಠ ಮಾಡಲು ಪ್ರಾರಂಭಿಸಿ, 1940ರವರೆಗೆ ಅಲ್ಲಿಯೇ ಉಳಿದು ಅನಂತರ ಅಲ್ಲಿಂದ ಹೊರಟು ಹಿಲೇ ಕಾಲೇಜಿನಲ್ಲಿ ಇಂಗ್ಲೀಷ್ ಸಾಹಿತ್ಯ ಕಲಿಸಲು ಲಾಹೋರಿಗೆ ಹೋದರು.
ಎರಡನೆ ಮಹಾಯುದ್ಧದ ಕಾಲದಲ್ಲಿ ಹಿಟ್ಲರನು ರಷ್ಯಾದ ಮೇಲೆ ದಾಳಿ ಮಾಡಿದಾಗ ಜಗತ್ತಿನಾದ್ಯಂತ ಸಮಾಜವಾದಿಗಳು ಆಕ್ರೋಶಗೊಂಡರು. ಕಾರ್ಮಿಕರ ಬಗ್ಗೆ ಅತೀ ಕಾಳಜಿಉಳ್ಳ ಫೈಜ್ ಅಹ್ಮದ್ ಫೈಜ್ ಅವರು ಜರ್ಮನಿಯ ವಿರುದ್ಧ ಹೋರಾಡಲು ಬ್ರಿಟಿಷ್ ಇಂಡಿಯನ್ ಸೈನ್ಯವನ್ನು ಸೇರಿದರು. ಲೆಫ್ಟಿನೆಂಟ್ ಕರ್ನಲ್ ಆದ ಮೇಲೆ ಅವರು ಅಲ್ಲಿಂದ ನಿವೃತ್ತಿಯಾದರು. ಸೈನ್ಯದಲ್ಲಿನ ಈ ಸೇವೆಗಾಗಿ ಬ್ರಿಟಿಷ್ ಸರಕಾರ ಅವರಿಗೆ ಎಮ್.ಬಿ.ಇ. ಬಿರುದನ್ನು ಕೊಟ್ಟು ಗೌರವಿಸಿತು. ಈ ಯುದ್ಧ ಮುಗಿದ ಕೂಡಲೆ ಉಪ ಖಂಡವು ಸ್ವತಂತ್ರವಾಗಿ ಇಬ್ಬಾಗವಾಯಿತು. ಫೈಜ್ ಅವರು ಪಾಕಿಸ್ತಾನ ಟೈಮ್ಸ್ ಪತ್ರಿಕೆಯ ಸಂಪಾದಕರಾಗಿ ಹೊಸ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು.
ಭಾರತದ ವಿಭಜನೆಯಿಂದಾಗಿ ನಡೆದ ಹಿಂಸಾಚಾರ ಫೈಜ್‌ರ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರಿತು. ಭಾರತಕ್ಕೆ ಸ್ವಾತಂತ್ರ‍್ಯ ಸಿಕ್ಕಿದ್ದು ಸಂತೋಷದ ಸುದ್ದಿಯಾಗಿದ್ದರೂ ಸ್ವಾತಂತ್ರ‍್ಯದ ಮುಂಜಾವನ್ನು ಈ ಕೆಳಗಿನಂತೆ ತಮ್ಮ ಕಾವ್ಯದಲ್ಲಿ ವಿವರಿಸಿದರು.
ಈ ಕಲೆ ಕಲೆಯ ಬೆಳಕು ಈ ಮುಸುಕಿನ ಮುಂಜಾವು
ಯಾವುದರ ನಿರೀಕ್ಷೆಯಿತ್ತೋ. ಇದು ಆ ಮುಂಜಾವು ಅಲ್ಲ-
ಎಲಿಸ್ ಕಾಥರಿನ್ ಜಾರ್ಜ್ ಎಂಬ ಆಂಗ್ಲ ಮಹಿಳೆಯೊಂದಿಗೆ ಫೈಜ್ ಅವರ ವಿವಾಹವಾಯಿತು. ಅವರಿಗೆ ಎರಡು ಹೆಣ್ಣು ಮಕ್ಕಳಿದ್ದರು.
ರಾವಲ್ಪಿಂಡಿಯ ಪಿತೂರಿಯು ಫೈಜ್ ಅವರ ಜೀವನದ ಮೇಲೆ ಗಾಢವಾದ ಪರಿಣಾಮ ಬೀರಿತು. 1951ರಲ್ಲಿ ಪಾಕಿಸ್ತಾನ ಸರಕಾರದ ವಿರುದ್ಧ ಪಿತೂರಿ ಮಾಡಿದರೆಂಬ ಕಾರಣಕ್ಕಾಗಿ ಸಜ್ಜಾದ ಝಾಹೀರ ಮತ್ತು ಇತರ ಸೈನಿಕಾಧಿಕಾರಿಗಳ ಜೊತೆಯಲ್ಲಿ ಫೈಜ್‌ಅವರನ್ನೂ ಸಹ ಪಾಕಿಸ್ತಾನಿ ಸರಕಾರ ಬಂಧಿಸಿತು. ಪ್ರಧಾನ ಮಂತ್ರಿ ಲಿಯಾಕತ್ ಅಲಿ ಸರಕಾರದ ವಿರುದ್ಧ ಸೈನಿಕ ಪಿತೂರಿಗೆ ಸಮಾಜವಾದಿಗಳಾದ ಸಜ್ಜಾದ ಝಾಹೀರ ಮತ್ತು ಫೈಜ್ ಇವರು ಸಹಾಯಕರಾಗಿರುವರೆಂಬುದಾಗಿ ಸರಕಾರದ ನಿಲುವಾಗಿತ್ತು. ನ್ಯಾಯಾಲಯವು ಆಪಾದಿಸಿ ಇವರಿಗೆ ಎರಡುವರೆ ವರ್ಷ ಜೈಲು ಶಿಕ್ಷೆ ನೀಡಿತು. ನಿಜಕ್ಕೂ ಫೈಜ್ ಅವರು ಈ ಪಿತೂರಿಯಲ್ಲಿ ಭಾಗಿಯಾಗಿರಲಿಲ್ಲ. ಆದರೂ ಅವರು ನಾಲ್ಕು ವರ್ಷ ಸೆರೆಮನೆವಾಸ ಅನುಭವಿಸಿದರು. ಜೈಲಿನಲ್ಲಿ ಕಳೆದ ಕಾಲವು ಅವರ ಜೀವನದ ಮೇಲೆ ಆಳವಾದ ಪ್ರಭಾವ ಬೀರಿತು. ಜೈಲಿನಲ್ಲಿರುವಾಗ ಬರೆದ ಅವರ ಕವಿತೆಗಳು ಸ್ವಾತಂತ್ರ‍್ಯದ ಛಲ ಮತ್ತು ಕ್ರಾಂತಿಯನ್ನು ಸತ್ವಯುತವಾಗಿ ಬಣ್ಣಿಸುತ್ತಿದ್ದವು. 1958 ರಲ್ಲಿ ಜನರಲ್ ಆಯೂಬ್ ಖಾನ್ ರವರ ಅಧಿಕಾರ ಅವಧಿಯಲ್ಲಿ ಫೈಜ್ ಅವರನ್ನು ಪಾಕಿಸ್ತಾನ ಸರ್ಕಾರ ಪುನಃ ಬಂಧಿಸಿತು. ಮತ್ತೈದು ತಿಂಗಳು ಜೈಲಿನಲ್ಲಿ ಕಳೆದರು.
ಫೈಜ್ ಅಹ್ಮದ್ ಫೈಜ್ ಹತ್ತನೆಯ ತರಗತಿಯಲ್ಲಿರುವಾಗಲೆ ತಮ್ಮ ಬರವಣಿಗೆಯನ್ನು ಪ್ರಾರಂಭಿಸಿದರು. ಕೆಲವು ಕವಿಗೋಷ್ಠಿಗಳಲ್ಲಿ ಭಾಗವಹಿಸಿದರು. ಅವರ ಗುರುಗಳು ಉಳಿದ ಕವಿಗಳ ಕೃತಿಗಳ ಕುರಿತು ಅಭ್ಯಾಸಿಸಲು ಮಾರ್ಗದರ್ಶನ ನೀಡಿದರು. ಉರ್ದು ಪ್ರಗತಿಪರ ಕಾವ್ಯ ಚಳುವಳಿಯಲ್ಲಿ ಫೈಜ್ ಅವರು ಮುಂಚೂಣಿಯಲ್ಲಿದ್ದರು. ಸಜ್ಜಾದ ಝಾಹೀರ, ಮಹಮ್ಮದ ಜಫರ ಮುಂತಾದವರೊಡಗೂಡಿ ಭಾರತದಲ್ಲಿನ ಪ್ರಗತಿಪರ ಕವಿಗಳಿಗಾಗಿ ವೇದಿಕೆಯೊಂದನ್ನು 1936 ರಲ್ಲಿ ಇವರು ಸ್ಥಾಪಿಸಿದರು. ಪ್ರಗತಿಪರ ಕವಿಗಳ ವೇದಿಕೆಯ ಪಂಜಾಬ ಶಾಖೆಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದರು. ಪ್ರಗತಿಪರ ಕಾವ್ಯವು ಪ್ರಾರಂಭದಲ್ಲಿ ಫೈಜ್ ಅವರಿಗೆ ಪ್ರಸಿದ್ದಿಯನ್ನು ತಂದುಕೊಟ್ಟರೂ, ಇಂದು ಅವರಿಂದ ಉರ್ದು ಪ್ರಗತಿಪರ ಸಾಹಿತ್ಯ ಪ್ರಸಿದ್ಧವಾಗಿದೆ.
ಉರ್ದು ಕಾವ್ಯ ಅತ್ಯುನ್ನತ ಎತ್ತರಕ್ಕೆ ಏರಿದ ಕಾಲದಲ್ಲಿ ಫೈಜ್ ಅವರು ಈ ಕಾಲವನ್ನು ಪ್ರತಿನಿಧಿಸಿದ್ದರು. ಪೌರಾತ್ಯ ಅದೃಷ್ಟವಾದಿ ಸಂಪ್ರದಾಯಕ್ಕೆ ವಿರುದ್ಧವಾಗಿ ಡಾ| ಮಹಮದ ಇಕ್ಬಾಲ್ ಅವರ ಧಾರ್ಮಿಕ ರೂಪಾರ್ಥವುಳ್ಳ ಕಾವ್ಯವು ಕ್ರಿಯಾಶೀಲವಾಗಿತ್ತು. ಶತ ಶತಮಾನಗಳಿಂದ ಸಾಂಪ್ರದಾಯಿಕವಾಗಿ ಬಂದ ಪ್ರೇಮವೇ ವಸ್ತುವಾಗಿದ್ದ ಉರ್ದು ಕಾವ್ಯಕ್ಕೆ ಡಾ. ಇಕ್ಬಾಲ್ ಅವರು ಹೊಸ ವಸ್ತುವನ್ನು ನೀಡಿದರು. ಈ ಹಿನ್ನೆಲೆಯಲ್ಲಿ ಫೈಜ್ ಅವರು ಹೊಸ ಅರ್ಥದಲ್ಲಿ ಮಾತನಾಡಹತ್ತಿದರು. ಫೈಜ್ ಅವರ ಕಾವ್ಯವು ವಿಶಿಷ್ಟವಾಗಿತ್ತು. ಅವರು ಮೂಲತಹ ರಮ್ಯ ಕವಿಯಾಗಿದ್ದರು. ಬಹಳಷ್ಟು ಕವಿತೆಗಳಲ್ಲಿ ರಮ್ಯತೆಯು ಕ್ರಾಂತಿ ಕವಿತೆಯಾಗಿ ಮಾರ್ಪಟ್ಟ ಜಾದುಗಾರಿಕೆಯನ್ನು ಕಾಣಬಹುದು. ದಬ್ಬಾಳಿಕೆಯ ವಿರುದ್ಧ ಕ್ರಾಂತಿ, ಅನ್ಯಾಯದ ವಿರುದ್ಧ ಪ್ರತಿಭಟನೆ, ಜೀವನದ ಸುಖ ಸಾಧನೆ ಮತ್ತು ಹೋರಾಟದ ಹಾದಿ ಇವುಗಳ ನಡುವಿನ ದ್ವಂದ್ವ ಚಿತ್ರಿಸುವಲ್ಲಿ ಫೈಜ್ ಅವರು ಶಾಸ್ತ್ರೀಯ ಕಲ್ಪನೆಯನ್ನು ಯಶಸ್ವಿಯಾಗಿ ಉಪಯೋಗಿಸಿಕೊಂಡರು. ಫೈಜ್ ಅವರ ಕಾವ್ಯವು ಆಧುನಿಕ ಮತ್ತು ಶಾಸ್ತ್ರೀಯತೆಯ ಸಮ್ಮಿಲನದ ಒಂದು ಸುಂದರ ಉದಾಹರಣೆಯಾಗಿದೆ.
ಫೈಜ್ ಅವರು ಸುಮಾರು ಹದಿನೈದು ಗದ್ಯ ಮತ್ತು ಪದ್ಯ ಸಂಗ್ರಹಗಳನ್ನು ಪ್ರಕಟಿಸಿರುತ್ತಾರೆ. ಅವರ ಮೊದಲನೆ ಕವನ ಸಂಗ್ರಹ 'ನಕ್ಷ ಪರ್ಯಾದಿ' 1941 ರಲ್ಲಿ ಪ್ರಕಟಗೊಂಡಿತು. 1982 ರವರೆಗೂ ತಮ್ಮ ಕವನ ಪ್ರಕಟಣೆಯನ್ನು ಮುಂದುವರಿಸಿದರು. ಅವರು ಕೇವಲ ಒಬ್ಬ ಕವಿಯಾಗಿರದೆ ಉತ್ತಮ ಗದ್ಯದ ಬರಹಗಾರರೂ ಆಗಿದ್ದರು. ಅವರೊಬ್ಬ ಯಶಸ್ವಿ ಪತ್ರಕರ್ತ ಮತ್ತು ನಾಟಕಕಾರರೂ ಆಗಿದ್ದರು. ಅವರು ಗದ್ಯವನ್ನು ಆಂಗ್ಲ ಮತ್ತು ಉರ್ದು ಭಾಷೆಯಲ್ಲಿ ಬರೆದಿರುತ್ತಾರೆ. ಅವರ ಕಾವ್ಯದ ಶರೀರ ಚಿಕ್ಕದಾಗಿದ್ದರೂ ಅರ್ಥಗರ್ಭಿತವಾಗಿದೆ. ಅವರು ಕೇವಲ ಕವಿಯಾಗಿರದೆ ಒಬ್ಬ ಚಳುವಳಿಗಾರರಾಗಿದ್ದರು. ಜೀವನದಾದ್ಯಂತ ಅವರದ್ದು ಹೋರಾಟದ ಬದುಕಾಗಿತ್ತು. ಯಾವಾಗಲೂ ಅವರು ನುಡಿದಂತೆ ನಡೆದರು. ಪ್ಯಾಸಿಸ್ಟರ ವಿರುದ್ಧ ಹೋರಾಡುವ ಅವಕಾಶ ಬಂದಾಗ ಸೇನೆ ಸೇರಿ ಯುದ್ಧದಲ್ಲಿ ಪಾಲ್ಗೊಂಡರು. ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿ ಕಾರ್ಮಿಕರಿಗಾಗಿ ಸತತವಾಗಿ ದುಡಿದರು. ಜಿನೇವಾದಲ್ಲಿ ನಡೆದ ಅಂತರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಸಮ್ಮೇಳನದಲ್ಲಿ ಅವರು ತನ್ನ ದೇಶದ ಕಾರ್ಮಿಕ ಪ್ರತಿನಿಧಿಯಾಗಿ ಭಾಗವಹಿಸಿದರು. ಇವರೊಬ್ಬ ಸಾಹಿತ್ಯ ಚಳುವಳಿಗಾರರೂ ಆಗಿದ್ದರು. ಆಫ್ರೋ್ರ-ಏಶಿಯನ್ ಕವಿ ಲೇಖಕರ ಬರವಣಿಗೆಗೆ ಮೀಸಲಾದ ಸಾಹಿತ್ಯ ಪತ್ರಿಕೆ 'ಲೋಟಸ್' ನ ಸಂಪಾದಕರಾಗಿದ್ದರು.
ಕಾರ್ಮಿಕ ಚಳುವಳಿಗೆ ಅವರು ನೀಡಿದ ಕೊಡುಗೆಯನ್ನು ಗಮನಿಸಿ ರಷ್ಯಾ ಸರಕಾರ ಅವರಿಗೆ ಲೆನಿನ್ ಬಹುಮಾನ ನೀಡಿ ಗೌರವಿಸಿತು. ಹೋರಾಟದ ಬದುಕು ಅವರ ಧೋರಣೆಗೆ ಪ್ರಾಮಾಣಿಕತೆಯನ್ನು ನೀಡಿತು. ಇದಕ್ಕೆ ಕಾರಣ ಅವರ ಶಕ್ತಿಯುತವಾದ ಸರಳ ನುಡಿ. ಅವರ ಕಾವ್ಯ ಉದ್ದೇಶಪೂರಕವಾಗಿ ರಾಜಕೀಯವಾಗಿದ್ದರೂ ಭಾವನಾತ್ಮಕ ಮತ್ತು ಕಲಾತ್ಮಕವಾಗಿದೆ. ಇವರು ತಮ್ಮ ಕಾವ್ಯದಲ್ಲಿ ರಾಜಕೀಯ ತತ್ವಕ್ಕೆ ನೀಡಿದ ಪವಿತ್ರ ಸ್ಥಾನದಲ್ಲಿಯೂ ಸಹ ಕಾವ್ಯಸೌಂದರ್ಯವನ್ನು ತ್ಯಜಿಸಲಿಲ್ಲ, ಇವರ ಕಲ್ಪನೆ ಶಾಸ್ತ್ರೀಯವಾದದ್ದು. ಆದರೆ ಸಂದೇಶ ನಿಜಕ್ಕೂ ಆಧುನಿಕವಾಗಿತ್ತು. ಇವರ ಸಾಂಪ್ರದಾಯಿಕ ಸಂಕೇತಗಳಾದ 'ಮುಗ್ಧ ಚಂದ್ರ', 'ಸೂರ್ಯಾಸ್ತ', 'ಬೀಳುತ್ತಿರುವ ನಕ್ಷತ್ರ', 'ಕವಿಯುತ್ತಿರುವ ಕತ್ತಲು', ಸಾಮಾನ್ಯ ಜನರ ಹೃದಯವನ್ನು ಮಿಡಿಯುವಂತಿದ್ದವು. ಈ ಶಾಸ್ತ್ರೀಯ ಕಲ್ಪನೆಯೊಂದಿಗೆ ಅವರೆಂದಿಗೂ ಜೋಗುಳ ಹಾಡಲಿಲ್ಲ. ಬಿಗಿದ ತುಟಿಗಳನ್ನು ತೆರೆಯಲು ಕರೆ ನೀಡಿದರು. ದೌರ್ಜನ್ಯಕ್ಕೊಳಗಾದವರ ಕಾಲಿಗೆ ಸಂಕೋಲೆ ತೊಡಿಸಿದರೂ ಅವರು ಬೀದಿಯಲ್ಲಿ ಬೇಡಿಯೊಂದಿಗೆ ಮುನ್ನಡೆಯಬೇಕೆಂದು ಸನ್ನೆ ಮಾಡಿದರು.
ಫೈಜ್ ಅವರು ಗಝಲ್ ಕೂಡ ಬರೆದರು. ಆದರೆ ಅವರ ಪ್ರತಿಭಟನಾ ಕಾವ್ಯ ಅವರಿಗೆ ಪ್ರಸಿದ್ದಿಯನ್ನು ಅನುಯಾಯಿಗಳನ್ನು ದೊರಕಿಸಿಕೊಟ್ಟಿತು. ಅವರು ರಾಜಕೀಯ ಚಿಂತಕರಾಗಿದ್ದರು ಮತ್ತು ಅವರ ಕಾವ್ಯಗಳಲ್ಲಿ ಎಡಪಂಥೀಯ ಧೋರಣೆಗೆ ತೀವ್ರವಾದ ಒಲವಿತ್ತೆಂಬುದರಲ್ಲಿ ಸಂದೇಹವಿಲ್ಲ. ಆಗಿನ ಕಾಲದ ಪ್ರಗತಿಪರ ಕವಿಗಳಾದ ನ.ಮ. ರಶೀದ, ಪಿರಾಕ್ ಗೋರಕಪುರಿ, ಮಕದೋಮ್ ಮೊಹಿಯುದ್ದಿನ, ಮಜಾಜ್ ಮತ್ತು ಅಲಿ ಸರ್ದಾರ ಜಾಫ್ರಿ ಅವರಿಗಿಂತ ತೀರ ಭಿನ್ನರಾಗಿದ್ದರು. ಪ್ರಗತಿಪರ ಕಾವ್ಯದಲ್ಲಿ (ಸ್ಪಾರ್ಕ್ ರಿಯಲಿಸಂ) ಕಟು ವಾಸ್ತವವಾದ ಮಾತ್ರ ಇರಬೇಕು. ಕಲ್ಪನೆಗೆ ಅವಕಾಶವಿಲ್ಲ ಎಂಬ ನಂಬಿಕೆ ಇತ್ತು. ಆದರೆ ಫೈಜ್ ಅವರು ಸಾಂಪ್ರದಾಯಿಕವಾಗಿ ಬಂದ ಪ್ರಾಸಮಯ ಕಾವ್ಯವಾದ ಗಝಲ್ ಮತ್ತು ಪುರಾಣಯುಕ್ತ ಕವಿತೆಗಳನ್ನು ಸಂಪೂರ್ಣವಾಗಿ ಬಿಟ್ಟು ಕೊಡಲಿಲ್ಲ. ಕ್ರಾಂತಿಯ ಸಿದ್ಧಾಂತವನ್ನು ಪರಿಚಯಿಸುವುದಕ್ಕಾಗಿ ಅವರು ಈ ನಮೂನೆಗಳನ್ನು ಅಳವಡಿಸಿಕೊಂಡರು. ಫೈಜ್ ಅವರ ಕಾವ್ಯ ಮತ್ತು ಪ್ರೀತಿಯ ನಡುವಿನ ದ್ವಂದ್ವ ವಿವರಣೆ ಕಲ್ಪಿತವಾಗಿತ್ತು. ಅವರ 'ನನ್ನಿಂದ ಮೊದಲಿನಂತಹ ಪ್ರೀತಿಯ ಬಯಸದಿರು ಪ್ರಿಯತಮೆ'ಇದು ಇಂತಹ ದ್ವಂದ್ವದ ಬಗ್ಗೆ ಒಂದು ಉದಾಹರಣೆ. ಫೈಜ್ ಅವರು ಪ್ರೀತಿ ಮತ್ತು ಕ್ರಾಂತಿಯ ನಡುವಿನ ಸಂಬAಧವನ್ನು ಅವರ ಕಾವ್ಯದಲ್ಲಿ ದಾಖಲಿಸಿರುವರು. ಅವರ ಕೃತಿಯಲ್ಲಿ ವ್ಯಂಗ್ಯವನ್ನು ಸೂಕ್ತವಾಗಿ ಗಮನಿಸಬಹುದು. ಅವರ ಕವಿತೆ 'ಸ್ವಲ್ಪ ಪ್ರೀತಿಸಿದೆ ಕೊಂಚ ಕೆಲಸಮಾಡಿದೆ'ಇದು ಅವರ ಪ್ರೀತಿ ಮತ್ತು ಹೋರಾಟದ ಮೇಲಿರುವ ಅವರ ವಿಚಾರಕ್ಕೆ ಒಂದು ವ್ಯಂಗ್ಯ ಚಿತ್ರಣ. 'ಕಾವ್ಯದ ವಸ್ತು' ಎಂಬ ಕವಿತೆಯಲ್ಲಿ ಶತಮಾನಗಳ ದಬ್ಬಾಳಿಕೆ ಮತ್ತು ಪ್ರೇಮಿಯ ಶರೀರದ ಸುಂದರವಾದ ಓರೆ ಕೋರೆಗಳ ಬಗ್ಗೆ ಅನಿಶ್ಚಿತರಾಗಿರುತ್ತಾರೆ. ಅಂದಮಾತ್ರಕ್ಕೆ ಇವನ್ನೆಲ್ಲ ಅವರ ಮನಸ್ಸಿನಲ್ಲಿ ವಿಶ್ಲೇಷಿಸಲು ಸಾಧ್ಯವಾಗಿಲ್ಲವೆಂದರ್ಥವಲ್ಲ. ಈ ಕವಿತೆಗಳು ಒಂದು ಕಡೆ ಕ್ರಾಂತಿಯ ಬಗ್ಗೆ ಪ್ರೀತಿಯನ್ನು ತೋರಿಸಿದರೆ, ಇನ್ನೊಂದು ಕಡೆ ಎರಡರ ನಡುವಿನ ದ್ವಂದ್ವತೆಯ ಮೂಲಭೂತ ಸ್ವರೂಪವನ್ನು ತೋರಿಸುತ್ತವೆ.
ಫೈಜ್ ಅವರದು ಹೋರಾಟದ ಬದುಕಾಗಿತ್ತು. ಹಲವಾರು ವರ್ಷಗಳ ಕಾಲ ಅವರು ತಮ್ಮ ದೇಶದಿಂದ ಹೊರಗುಳಿಯಬೇಕಾಯಿತು. ದೇಶದಿಂದ ಅಗಲಿದ ನೋವನ್ನು ಅವರ ಕವಿತೆಗಳು ಚಿತ್ರಿಸುತ್ತವೆ. ಅವರ ಸೆರೆಮನೆವಾಸ ಸ್ವಾತಂತ್ರ‍್ಯಕ್ಕಾಗಿ 'ಇರುವ ಹಂಬಲ’ದ ಕವಿತೆಯನ್ನು ಸೃಷ್ಟಿಸಿತು. ಕೊನೆಗೂ ಅಧಿಕಾರದ ವಿರುದ್ಧ ಪ್ರತಿಭಟಿಸಿ, ಹೋರಾಟದಲ್ಲಿ ಗೆಲವು ಸಾಧಿಸುವ ನಿರೀಕ್ಷೆ ಅವರಿಗೆ ಇತ್ತು.
ಫೈಜ್ ಅವರು 1984 ನವೆಂಬರ್ 20 ರಂದು ಲಾಹೋರಿನ ಆಸ್ಪತ್ರೆಯಲ್ಲಿ ಅಸುನೀಗಿದರು. ಅವರೊಂದಿಗೆ ಉರ್ದು ಕಾವ್ಯದ ಒಂದು ಸುವರ್ಣಕಾಲ ಕೊನೆಗೊಂಡಿತು. ಫೈಜ್ ಅವರು ದೇಶ ವಿಭಜನೆಯಾದ ಮೇಲೆ ಪಾಕಿಸ್ತಾನದಲ್ಲಿ ಉಳಿದರೂ ಅವರನ್ನು ಯಾವಾಗಲೂ ಉಪಖಂಡದ ಕವಿಯಾಗಿ ಕಾಣಲಾಯಿತು. ಅವರು ನಿಜಕ್ಕೂ ಇಡೀ ಜಗತ್ತಿನ ಕವಿ, ತುಳಿತಕ್ಕೆ ಮತ್ತು ದಬ್ಬಾಳಿಕೆಗೆ ಒಳಗಾದ ಈ ಜಗತ್ತಿನ ಜನ ಅವರ ಕವಿತೆಗಳಲ್ಲಿ ತಮ್ಮ ಧ್ವನಿಯನ್ನು ಕಂಡುಕೊಂಡರು. ಅವರ ನಂತರ ಉರ್ದು ಕಾವ್ಯ ಅವರಂತಹ ಇನ್ನೊಬ್ಬ ಮಹತ್ವದ ಕವಿಯನ್ನು ಕಾಣಲೇ ಇಲ್ಲ.
*****
ಕವಿ ಹೃದಯದ ಅಧಿಕಾರಿ ಎಲ್.ಕೆ.ಅತೀಕ್
ಕರ್ನಾಟಕದ ಹಿರಿಯ ಐಎಎಸ್ ಅಧಿಕಾರಿ ಎಲ್.ಕೆ.ಅತೀಕ್ (ಲುಥ್‌ಫುಲ್ಲಾ ಖಾನ್ ಅತೀಕ್ ) (ಜನನ 14.01.1965) ಅವರು ಕವಿಯೂ ಹೌದು. 23 ವರ್ಷಗಳ ಹಿಂದೆಯೇ ಇವರ ಮೊದಲ ಕವನ ಸಂಕಲನವನ್ನು ರಾಷ್ಟ್ರ ಕವಿ ದಿವಂಗತ ಜಿ.ಎಸ್.ಶಿವರುದ್ರಪ್ಪನವರು ಬಿಡುಗಡೆ ಮಾಡಿದ್ದರು. ಕವಿ ಹೃದಯದ ಜಿಲ್ಲಾಧಿಕಾರಿ ಎಂದು ಅತೀಕ್ ಅವರನ್ನು ಆಗ ಜನರು ಬಣ್ಣಿಸಿದ್ದರು.
ಇವತ್ತು ನಾಡಿನ ಜನಾನುರಾಗಿ ಹಾಗೂ ಮಾನವೀಯ ನಡೆಯ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಹಣಕಾಸು ಇಲಾಖೆಯ ಮುಖ್ಯಸ್ಥರೂ ಆಗಿರುವ ಎಲ್.ಕೆ.ಅತೀಕ್ ಅವರು ಹೆಸರಾಂತ ಕವಿ,ಪತ್ರಕರ್ತ, ಸ್ವಾತಂತ್ರ್ಯ ಹೋರಾಟಗಾರ ಫೈಜ್ ಅಹ್ಮದ್ ಫೈಜ್ ಅವರ ಕವಿತೆಗಳನ್ನು ಕನ್ನಡಕ್ಕೆ ತಂದಿದ್ದಾರೆ. ಉರ್ದು ಭಾಷೆಯಲ್ಲಿದ್ದ ಫೈಜ್ ಅವರ ಪದ್ಯಗಳನ್ನು ಅವುಗಳ ಆಕಾರ, ಆಂತರ್ಯಗಳನ್ನು ಅವು ಇರುವಂತೆಯೇ ಕನ್ನಡಕ್ಕೆ ತರುವಲ್ಲಿ ಅತೀಕ್ ಯಶಸ್ವಿಯೂ ಆಗಿದ್ದಾರೆ.
1991 ಬ್ಯಾಚಿನ ಐಎಎಸ್ ಅಧಿಕಾರಿಯಾಗಿರುವ ಅತೀಕ್ ಅವರು ತುಮಕೂರು ಜಿಲ್ಲೆಯ ಪಾವಗಡ ಮೂಲದವರು , ಕೊರಟಗೆರೆ ತಾಲೂಕಿನ ಅಕ್ಕಿರಾಂಪುರದಲ್ಲಿ ವಿದ್ಯಾಭ್ಯಾಸ ಮಾಡಿದವರು ಎನ್ನುವುದು ನಮಗೆ ಇನ್ನೂ ಹೆಮ್ಮೆಯ ಸಂಗತಿ. ಇವರು ಕವಿಯಾಗಿ ಮಾತ್ರವಲ್ಲದೇ ದಕ್ಷ ಆಡಳಿತಗಾರರಾಗಿಯೂ ಹೆಸರು ಮಾಡಿದ್ದಾರೆ. ಕಾರವಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಮಂಡ್ಯ ಹಾಗೂ ಹಾಸನ ಜಿಲ್ಲಾಧಿಕಾರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಸರ್ವ ಶಿಕ್ಷಾ ಅಭಿಯಾನದಲ್ಲಿ, ವಿಶ್ವ ಬ್ಯಾಂಕ್ ನೆರವಿನ ಗ್ರಾಮೀಣ ಕುಡಿಯುವ ನೀರು ಯೋಜನೆಯ ಯಶಸ್ವಿ ಅನುಷ್ಟಾನದ ಹಿಂದೆ ಅತೀಕ್ ಕಾರ್ಯತತ್ಪರತೆ ಇದೆ.
ಭಾರತ ಸರ್ಕಾರದಲ್ಲೂ ನಿಯೋಜನೆ ಮೇರೆಗೆ ಪ್ರಧಾನ ಮಂತ್ರಿಯವರ ಕಾರ್ಯಾಲಯದಲ್ಲಿ ಕಾರ್ಯ ನಿರ್ವಹಿಸಿದ ಅತೀಕ್ ಅವರು ವಿಶ್ವ ಬ್ಯಾಂಕ್ ಕಾರ್ಯಕಾರಿ ನಿರ್ದೇಶಕರಿಗೆ ಹಿರಿಯ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಜಡ ಕಡತಗಳಲ್ಲೇ ಮುಳುಗಿ ಸಿನಿಕರಾಗಿಬಿಡುವ ಬ್ಯೂರೋಕ್ರಟಿಕ್‌ಗಳ ನಡುವೆ ಮಾನವೀಯ ಹೃದಯದ ಸ್ವಾತಂತ್ರ್ಯಪ್ರೇಮಿ ಅಧಿಕಾರಿಯೊಬ್ಬರು ಮುಖ್ಯಮಂತ್ರಿಯವರ ಸಚಿವಾಲಯದ ಮುಖ್ಯಸ್ಥರಾಗಿರುವುದು ನಿಜಕ್ಕೂ ಕನ್ನಡಿಗರ ಸೌಭಾಗ್ಯ ಎಂದರೆ ತಪ್ಪಲ್ಲ.
--****--
ನನ್ನಿಂದ ಮೊದಲಿನಂಥ ಪ್ರೀತಿ ಬಯಸದಿರು ಪ್ರಿಯತಮೆ
ನನ್ನಿಂದ ಮೊದಲಿನಂಥ ಪ್ರೀತಿ ಬಯಸದಿರು ಪ್ರಿಯತಮೆ
ನಾ ತಿಳಿದಿದ್ದೆ ನೀನಿದ್ದರೆ ಬಾಳು ಬಂಗಾರ ಎಂದು
ನಿನ್ನ ಚಿಂತೆ ಇದ್ದರೆ ಜಗದ ಚಿಂತೆ ಏಕೆ ಬೇಕು
ನಿನ್ನ ಮುಖದಿಂದಲೆ ಜಗದಲಿ ವಸಂತಗಳ ಚೆಲುವು
ನಿನ್ನ ಕಣ್ಣುಗಳ ಬಿಟ್ಟರೆ ಮತ್ತೇನಿದೆ ಪ್ರಪಂಚದಲಿ
ನೀನು ಸಿಕ್ಕರೆ ವಿಧಿ ತಲೆಬಾಗುವುದು ನನ್ನ ಮುಂದೆ
ಹಾಗಿರಲಿಲ್ಲ ನಾನು ಹಾಗಾಗ ಬಯಸಿದ್ದೆ
ಇನ್ನೂ ದುಃಖಗಳಿವೆ ಜಗದಲಿ ಪ್ರೀತಿಯ ಹೊರತು
ಇನ್ನೂ ಸುಖಗಳಿವೆ ಮಿಲನದ ಸುಖಗಳ ಹೊರತು
ರೇಷ್ಮೆ ಪೀತಾಂಬರಗಳಿಂದ ಹೆಣೆದ
ಲೆಕ್ಕವಿಲ್ಲದ ಶತಮಾನಗಳ ಕಪ್ಪು ಅಮಾನವೀಯ ಗಾರುಡಿಗಳು
ಮೈಯೆಲ್ಲಾ ಮಣ್ಣಾದ ರಕ್ತದಲಿ ಮಿಂದ
ಬೀದಿ ಬಜಾರುಗಳಲ್ಲಿ ಎಲ್ಲೆಡೆ ಮಾರಾಟವಾಗುತ್ತಿರುವ ದೇಹಗಳು
ರೋಗಗಳ ಉರಿವ ಕುಂಡಗಳಿಂದ ಹೊರಬರುವ ಶರೀರಗಳು
ಕೀವು ಸೋರುತಿರುವ ಬೆಂದಿರುವ ಗಾಯಗಳು
ಆ ಕಡೆಗೂ ಮರಳುತ್ತದೆ ದೃಷ್ಟಿ ಏನು ಮಾಡಲಿ
ಈಗಲೂ ಆಕರ್ಷಕ ನಿನ್ನ ಚೆಲುವು ಆದರೇನು ಮಾಡಲಿ
ಇನ್ನೂ ದುಃಖಗಳಿವೆ ಜಗದಲಿ ಪ್ರೀತಿಯ ಹೊರತು
ಇನ್ನೂ ಸುಖಗಳಿವೆ ಮಿಲನದ ಸುಖಗಳ ಹೊರತು
ನನ್ನಿಂದ ಮೊದಲಿನಂಥ ಪ್ರೀತಿ ಬಯಸದಿರು ಪ್ರಿಯತಮೆ
ಮೂಲ: ಫೈಜ್ ಅಹ್ಮದ್ ಫೈಜ್
ಕನ್ನಡಕ್ಕೆ: ಎಲ್.ಕೆ.ಅತೀಕ್