ʼ ಚರಿತ್ರೆಯನ್ನು ಮರೆತವರಿಂದ ಚರಿತ್ರೆಯನ್ನು ಸೃಷ್ಟಿಸಲು ಸಾಧ್ಯವಿಲ್ಲʼ
ದಲಿತ ಹೋರಾಟದಲ್ಲಿ ಒಡಮೂಡಿದ ಕೋಟಿಗಾನಹಳ್ಳಿ ರಾಮಯ್ಯ ನಾಡಿನ ಬಹುಮುಖ್ಯ ಸಾಂಸ್ಕೃತಿಕ ವ್ಯಕ್ತಿ. ಅವರು ದಲಿತ ಚಳವಳಿಯ ಆತ್ಮಸಾಕ್ಷಿಯಂತಿದ್ದವರು. ಕೋಲಾರದ ಅಂತರಗಂಗೆ ಬೆಟ್ಟದಲ್ಲಿ ‘ಆದಿಮ’ವನ್ನು ಕಟ್ಟಿ ಬೆಳೆಸಿದವರು. ಅವರು ಹಲವು ವರ್ಷಗಳಿಂದ ‘ಆದಿಮ’ದಿಂದ ದೂರವಿದ್ದರು. ಕಾಂಗ್ರೆಸ್ ಶಾಸಕ ಕೊತ್ತೂರು ಮಂಜು ಇತ್ತೀಚೆಗೆ ಕಾರ್ಯಕ್ರಮವೊಂದಕ್ಕೆ ‘ಆದಿಮ’ಕ್ಕೆ ಆಗಮಿಸಿದ್ದರು; ಆಗ ಅವರು ‘ಆದಿಮ’ದ ಬಗ್ಗೆ ಅಸೂಕ್ಷ್ಮವಾಗಿ ಪ್ರತಿಕ್ರಿಯಿಸಿದ್ದರು. ಇನ್ನೊಂದು ಕಡೆ ಬಿಜೆಪಿ ಸಂಸದ ಮುನಿಸ್ವಾಮಿ ಅಂತರಗಂಗೆ ಬೆಟ್ಟವನ್ನು ಹಿಡಿತಕ್ಕೆ ತೆಗೆದುಕೊಂಡು ಅಲ್ಲಿನ ಬಂಡೆಗಳ ಮೇಲೆಲ್ಲ ಯೋಗ ಕುರಿತ ಸ್ಲೋಗನ್‌ಗಳನ್ನು ಬರೆಸಿದ್ದಾರೆ. ರಾಜಕಾರಣಿಯೊಬ್ಬರನ್ನು ಬರಮಾಡಿಕೊಳ್ಳಲು ಕಾರ್ಯಕರ್ತರು ತಮಟೆ ಹೊಡೆದು, ಪಟಾಕಿ ಸಿಡಿಸಿದ್ದರು. ಇದರಿಂದೆಲ್ಲ ನೊಂದ ಕೋಟಿಗಾನಹಳ್ಳಿ ರಾಮಯ್ಯವರು ಕಳೆದ ವಾರ ಆದಿಮದಲ್ಲಿ ಏರ್ಪಡಿಸಿದ್ದ ಹುಣ್ಣಿಮೆ 200ರ ಸಮಾರಂಭದಲ್ಲಿ ವಿಷಾದದಿಂದ ಆಡಿದ ವಿದಾಯದ ಮಾತುಗಳಿವು.
‘ಸಂವಿಧಾನ ರಕ್ಷಣೆಗಾಗಿ, ಪ್ರಜಾಪ್ರಭುತ್ವ ಉಳಿವಿಗಾಗಿ ಸಮಾವೇಶ’ದ ವೇದಿಕೆ ಮೇಲಿರುವ ಎಲ್ಲ ಒಡನಾಡಿಗಳೇ ಹಾಗೂ ನನ್ನ ಸಹೋದರ, ಸಹೋದರಿಯರೇ..
ಇದೊಂದು ಚಾರಿತ್ರಿಕ ಸಂದರ್ಭ ಅಂದುಕೊಂಡಿದ್ದೇನೆ. ಯಾಕೆಂದರೆ, ಇಂದು ಉದ್ಘಾಟನೆ ಹಾಗೂ ನನ್ನ ವಿದಾಯ ಎರಡೂ ಆಗಿರುವಂಥ ಭಾಷಣ ನನ್ನದು. ಏನು ಈ ನೆಲ, ನನ್ನ ಗುರು ಎನ್ನುವ ಮಾತುಗಳನ್ನಾಡಿದರು, ಅವು ತಪ್ಪು ಮಾತುಗಳು. ಯಾಕೆಂದರೆ, ನಾನು ಈ ನೆಲಕ್ಕೆ ವಿದಾಯ ಹೇಳುತ್ತಿದ್ದೇನೆ. ಐವತ್ತು ವರ್ಷಗಳ ಹಿಂದೆ ಇದೇ ಜಾಗದಲ್ಲಿ ನಾನು ದಲಿತ ಚಳವಳಿಗೆ ಎಂಟ್ರಿ ಆದೆ. ಬಸವಲಿಂಗಪ್ಪರ ಬೂಸಾ ಚಳವಳಿ ಆರಂಭವಾಗಿತ್ತು. ಅದರ ವಿರುದ್ಧ ಕೋಲಾರದಲ್ಲಿ ಚನ್ನೇಗೌಡ ಎಂಬುವವನ ನೇತೃತ್ವದಲ್ಲಿ ಕೋಲಾರ ಕಾಲೇಜು ವಿದ್ಯಾರ್ಥಿಗಳು ಒಂದು ಮೆರವಣಿಗೆ ಬಂದು ಬಸವಲಿಂಗಪ್ಪನವರ ಪ್ರತಿಕೃತಿಯನ್ನು ತಂದು ಇಲ್ಲಿ ಸುಟ್ಟರು. ಅದಕ್ಕೆ ಚಪ್ಪಲಿಯಲ್ಲಿ ಹೊಡೆದವನು ಒಬ್ಬ ದಲಿತ ವಿದ್ಯಾರ್ಥಿಯಾಗಿದ್ದ. ಆ ನೋವನ್ನು ತಡೆಯಲಾರದೇ ನಾನು ಮಾರನೇ ದಿನ ‘ಪ್ರಜಾವಾಣಿ’ಯಲ್ಲಿ ಒಂದು ಪತ್ರ ಬರೆದೆ. ಅಲ್ಲಿಂದ ಆಚೆಗೆ ನಾನು ದಲಿತ ಚಳವಳಿಗೆ ಬಂದೆ; ಐವತ್ತು ವರ್ಷ ಆಯಿತು. ಐವತ್ತು ವರ್ಷಗಳಲ್ಲಿ, ನಾವು ಯಾರೂ ಕೂಡ ಪಟಾಕಿ ಹೊಡೆದಿರಲಿಲ್ಲ. ಐವತ್ತು ವರ್ಷಗಳಲ್ಲಿ ನಾನು ನೋಡಿದ ರೀತಿಯಲ್ಲಿ ದಲಿತ ಚಳವಳಿಯಲ್ಲಿ ಪಟಾಕಿ ಹೊಡೆಯುವಂಥ ಸಂಭ್ರಮ ಇರಲಿಲ್ಲ. ಸಾವಿಗೂ ಪಟಾಕಿ ಹೊಡೆಯುತ್ತಿದ್ದೆವು. ಇಲ್ಲಿ ಯಾರು ಸತ್ತಿದ್ದಾರೋ ಗೊತ್ತಿಲ್ಲ.
ನೀವೆಲ್ಲ ಬಹಳಷ್ಟು ಬಳಸಿರುವ ಚರಿತ್ರೆಯ ಎರಡು ಹೇಳಿಕೆಗಳಿಂದ ನಾನು ನನ್ನ ಮಾತನ್ನು ಆರಂಭಿಸುತ್ತೇನೆ. ಮೊದಲನೇದು, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಾತು: ಚರಿತ್ರೆಯನ್ನು ಮರೆತವರಿಂದ ಚರಿತ್ರೆ ಸೃಷ್ಟಿಸಲು ಸಾಧ್ಯವಿಲ್ಲ. ಇವತ್ತು ಇಲ್ಲಿ ನನಗೆ ಒಂದು ಗೊತ್ತಾಯಿತು. ಇಲ್ಲಿರುವವರಿಗೆ ಈ ನೆಲದ ಚರಿತ್ರೆಯ ಒಂದು ಸಣ್ಣ ನೆನಪು ಕೂಡ ಇಲ್ಲ ಎನ್ನುವುದು ತಿಳಿಯಿತು. ಹಾಗಾಗಿ ಬಾಬಾ ಸಾಹೇಬರ ಮಾತನ್ನು ನಾನು ಮತ್ತೆ ರೀಚೆಕ್ ಮಾಡಬೇಕಾಗಿದೆ. ಇನ್ನೊಂದು, ನೀಶೆ ಹೇಳಿಕೆ: ಚರಿತ್ರೆಯಿಂದ ನಾವು ಏನನ್ನು ಕಲಿತಿದ್ದೇವೆ ಎಂದರೆ, ನಾವು ಏನನ್ನೂ ಕಲಿತಿಲ್ಲ ಎನ್ನುವ ಹೇಳಿಕೆ. ಅದಕ್ಕೆ ಈ ವೇದಿಕೆ ಸಾಕ್ಷಿಯಾಗಿದೆ. ನಾವು ಇಲ್ಲಿ ಶ್ಯಾಡೋ ಪ್ಲೇ ಮಾಡುತ್ತಿದ್ದೇವಲ್ಲಾ, ನೆರಳಿನೊಂದಿಗೆ ಗುದ್ದಾಟಕ್ಕೆ ಹಚ್ಚಿದ್ದಾರಲ್ಲ ನಮ್ಮ ನಾಯಕರು, ಆ ಗುದ್ದಾಟ ಮುಂದುವರೆಯಲಿ ಅಂತ ಜೈಕಾರ ಹೇಳುತ್ತಾ ನನ್ನ ಮಾತು ಮುಂದುವರೆಸುತ್ತೇನೆ.
ಭಾರತ ದೇಶದಲ್ಲಿ ಈಗ ಸಂವಿಧಾನ ರಕ್ಷಿಸಿ, ಪ್ರಜಾಪ್ರಭುತ್ವ ರಕ್ಷಿಸಿ ಎಂದು ಹೋರಾಟ ಮಾಡುತ್ತಿರುವವರಿಗೆ ವಾಸ್ತವದ ಕಲ್ಪನೆ ಇಲ್ಲ ಎಂದು ನಾನು ಅಂದುಕೊಂಡಿದ್ದೇನೆ. ಏಕೆಂದರೆ, ನೀವು ಅಂದುಕೊಂಡಿರುವ ಸಂವಿಧಾನ ಅಥವಾ ನೀವು ಅಂದುಕೊಂಡಿರುವ ಪ್ರಜಾಪ್ರಭುತ್ವ ಉಳಿಸಬೇಕು ಎನ್ನುವ ಪರಿಸ್ಥಿತಿಯನ್ನು ಮೀರಿ ಮುಂದೆ ಹೋಗಿವೆ ಎನ್ನುವುದು ನಿಮಗೆ ಗೊತ್ತಾಗುತ್ತಿಲ್ಲ. ಪ್ರಜಾಪ್ರಭುತ್ವ ಉಳಿಸಿ ಎನ್ನುವುದು ಒಂದು ಕ್ಲೀಷೆಯಾಗಿದೆ. ಐವತ್ತು ವರ್ಷದ ನಮ್ಮ ಪ್ರಜ್ಞಾ ಪಯಣ ಎಲ್ಲಿಗೆ ಬಂದಿದೆ ಎಂದರೆ, ನಮ್ಮ ನಾಯಕರು ನಮ್ಮನ್ನು ಎಲ್ಲಿಗೆ ತಂದು ನಿಲ್ಲಿಸಿದ್ದಾರೆ ಎಂದರೆ, ನಾಲ್ಕು ದಾರಿಗಳು ಕೂಡುವ ಕಡೆಗೆ ತಂದು ನಿಲ್ಲಿಸಿದ್ದಾರೆ. ಅವು ಯಾವುವು ಎಂದರೆ, ಸ್ಥಾವರ ಅಂಬೇಡ್ಕರ್ ಮಾಡುವುದು. ಫ್ಲೆಕ್ಸ್ ಅಂಬೇಡ್ಕರ್ ಮಾಡುವುದು. ಪ್ರತಿಮೆಗಳು, ಪೂಜೆ, ಸೆಲಬ್ರೇಷನ್, ಹೂವಿನ ಪಲ್ಲಕ್ಕಿಗಳಲ್ಲಿ, ಮುತ್ತಿನ ಪಲ್ಲಕ್ಕಿಗಳಲ್ಲಿ ಮುಳುಗಿಸಿಬಿಟ್ಟು, ಅವರು ಏನು ಹೇಳಿದ್ದಾರೆ ಎನ್ನುವುದನ್ನು ಮರೆಸುವುದು. ಅದು ಒಂದು ದಾರಿ.
ಇನ್ನೊಂದು, ಸಂವಿಧಾನ ಬಂಧಿತ ಅಂಬೇಡ್ಕರ್, ಸಂವಿಧಾನ ರಕ್ಷಿಸಿ ಎನ್ನುವುದು, ಅದೆಷ್ಟೇ ತುರ್ತಿನ ಆದ್ಯತೆಯಾಗಿದ್ದರೂ ನಿಜವಾದ ಸಂವಿಧಾನ ಎಂದರೆ ಏನು, ನಿಜವಾದ ಡೆಮಾಕ್ರಸಿ ಎಂದರೆ ಏನು ಎನ್ನುವುದನ್ನು ನಾವು ಕಂಡುಕೊಳ್ಳದೇ ಇದ್ದರೆ, ಇದಕ್ಕೆ ಅರ್ಥವಿಲ್ಲ. ಆ ಕಾರಣಕ್ಕಾಗಿ ಇದು ಎರಡನೇ ದಾರಿ.
ಮೂರನೇ ದಾರಿ. ಬುದ್ಧ ಧರ್ಮ. ಮತಾಂತರ. ಬಾಬಾ ಸಾಹೇಬ್ ಅಂಬೇಡ್ಕರ್ 1956ರಲ್ಲಿ ದೀಕ್ಷೆ ಪಡೆದರು, ಐದು ಲಕ್ಷ ಜನ ಸೇರಿಸಿದರು, ಮತಾಂತರ ಆದರು. ನಾವೂ ಕೂಡ ಮತಾಂತರವಾದರೆ, ಆಗ ಅಂಬೇಡ್ಕರ್ ಹೇಳಿದಂತೆ ನಡೆದುಕೊಂಡಂತಾಗುತ್ತದೆ ಎನ್ನುವುದು. ಇದು ಇನ್ನೊಂದು ದಾರಿ. ಅದನ್ನು ಇವತ್ತಿನ ಚಾರಿತ್ರಿಕತೆಯಲ್ಲಿ ವಿಶ್ಲೇಷಣೆ ಮಾಡಿಕೊಳ್ಳುವುದು ಬರದೇ ಇರುವುದರಿಂದ ಈ ಬಿಕ್ಕಟ್ಟು ಬಂದಿದೆ ಎಂದು ನಾನು ಭಾವಿಸಿಕೊಂಡಿದ್ದೇನೆ.
ಇನ್ನೊಂದು ಅಂಬೇಡ್ಕರ್ ಅಪಹರಣ. ಹುಸಿ ಕಥನಗಳ ನಿರ್ಮಾಣ. ಕಾಂಗ್ರೆಸ್, ಬಿಜೆಪಿಯಿಂದ ಹಿಡಿದು ಎಲ್ಲ ಪಕ್ಷಗಳೂ ಅಂಬೇಡ್ಕರ್ ಅವರನ್ನು ಅಪಹರಣ ಮಾಡಿವೆ. ಹೈಜಾಕ್ ಮಾಡಿವೆ ಅಪ್ರಾಪ್ರಿಯೇಟ್ ಮಾಡಿವೆ. ಮತ್ತು ತಮಗೆ ಬೇಕಾದ ರೀತಿಯಲ್ಲಿ, ತಮ್ಮ ಸಿದ್ಧಾಂತಕ್ಕೆ ಬೇಕಾದ ರೀತಿಯಲ್ಲಿ ಮಂಡಿಸುತ್ತಾ ಬಂದಿವೆ. ಇದು ಶುರುವಾಗಿದ್ದು ಸುಮಾರು 20 ವರ್ಷಗಳ ಹಿಂದೆ. ಆರ್‌ಎಸ್‌ಎಸ್ ಹುಟ್ಟುಹಾಕಿದ ಸ್ಕೂಲ್ ಆಫ್ ಥಾಟ್ ಇದು. ಅದೇನು ಮಾಡಿತು ಎಂದರೆ, ಬಾಬಾಸಾಹೇಬ್ ಅವರಲ್ಲಿರುವಂತಹ ಕ್ರಾಂತಿಕಾರಕ ಅಂಶಗಳು, ವೈಚಾರಿಕ ಅಂಶಗಳನ್ನು ತೆಗೆದು ಆ ಜಾಗದಲ್ಲಿ ಸುಳ್ಳು ಸುಳ್ಳು ಕಥೆಗಳನ್ನು ನಿರ್ಮಾಣ ಮಾಡುವುದು ಮಾಡಿತು. ಇದು ಆರಂಭವಾಗಿದ್ದು ತತ್ತೋಪಂತ್ ತೇಂಗಡಿ ಎನ್ನುವಂತಹ ನೆಹರೂ ಆಪ್ತವಲಯದಲ್ಲಿದ್ದವರಿಂದ. ಆತ ಆರ್‌ಎಸ್‌ಎಸ್‌ನವರಾಗಿದ್ದರು. ಆಮೇಲೆ ಅವರೊಂದು ಸ್ಕೂಲ್ ಹುಟ್ಟುಹಾಕಿದ್ದಾರೆ. ಭಾರತದ ಎಲ್ಲ ಪ್ರಾದೇಶಿಕ ಭಾಷೆಗಳಲ್ಲೂ 25 ಜನ ಸಂಶೋಧಕರನ್ನು ಹುಡುಕಿ, ಅವರಿಗೆ ಅಂಬೇಡ್ಕರ್ ಅವರ ಮೇಲೆ ಪುಸ್ತಕಗಳನ್ನು ಬರೆಯಲು ಹೇಳಿ, ಆ ಪುಸ್ತಕಗಳಲ್ಲಿ ಈ ಅಂಶ ಕಿತ್ತಾಕಿ ಬೇರೆ ಅಂಶ ತುಂಬಿ ಎಂದಿದ್ದಾರೆ. ನಮ್ಮ ಕನ್ನಡದಲ್ಲಿಯೇ 25 ವರ್ಷಗಳಲ್ಲಿ ಇಂಥ ಸುಮಾರು 25 ಪುಸ್ತಕ ಬಂದಿವೆ. ನಿಮ್ಮನ್ನು, ನಿಮ್ಮ ಮಕ್ಕಳನ್ನು ದಾರಿ ತಪ್ಪಿಸಲು ರಚನೆಯಾದ ಪುಸ್ತಕಗಳು ಅವು. ಇದು ಇನ್ನೊಂದು ದಾರಿ.
ಇನ್ನೊಂದು, ಸರ್ಕಾರವೇ ಪ್ರಾಯೋಜಿಸಿರುವ ಯಾತ್ರಾ ಅಂಬೇಡ್ಕರ್. ಫ್ಲೆಕ್ಸ್ ಅಂಬೇಡ್ಕರ್ ಆಯಿತು. ಪುತ್ಥಳಿ ಅಂಬೇಡ್ಕರ್ ಆಯಿತು. ದೀಕ್ಷಾ ಭೂಮಿ ಚಲೋ, ಚೈತ್ಯ ಭೂಮಿ ಚಲೋ. ಕೋರೆಗಾಂವ್ ಚಲೋ. ಹುಟ್ಟಿದೂರು ಮಾಹೆ ಚಲೋ. ಅಲ್ಲಿಗೆ ನಿಮ್ಮನ್ನು ಯಾತ್ರೆಗಳಲ್ಲೇ ಮುಳುಗಿಸ್ತಾ ಇದ್ದಾರೆ. ಫ್ಲೈಟ್‌ನಲ್ಲಿ ಹೋಗುವಷ್ಟು ದುಡ್ಡಿರುವವರು, ನಮ್ಮ ಕೆಲವು ನಾಯಕರಂತೆ, ಅವರು ಗ್ರೇಸಿನ್‌ಗೆ ಹೋಗ್ತಾರೆ, ಕೊಲಂಬಿಯಾ ಯೂನಿವರ್ಸಿಟಿಗೆ ಹೋಗ್ತಾರೆ. ಈ ಎಲ್ಲ ಯಾತ್ರಾ ಸ್ಥಳಗಳಿಗೆ ಹೋಗುವುದೇ ನಮ್ಮ ಜೀವನದ ಧ್ಯೇಯ ಎನ್ನುವಂತೆ ಮಾಡಿ, ಅಂಬೇಡ್ಕರ್ ಏನು ಹೇಳಿದ್ದಾರೆ ಎನ್ನುವುದನ್ನೇ ಮುಚ್ಚಿಹಾಕಿದ್ದಾರೆ. ಅದಕ್ಕೆ ಕೆಲವು ದಿನಾಂಕಗಳನ್ನು ಇಟ್ಟಿದ್ದಾರೆ. ಒಂದು ಡಿಸೆಂಬರ್ ಆರು. ಇನ್ನೊಂದು ಕೋರೆಗಾಂವ್ ಜನವರಿ ಒಂದು. ಇನ್ನೊಂದು ದೀಕ್ಷಾ ಭೂಮಿ ಅಕ್ಟೋಬರ್ 14. ಇನ್ನೊಂದು ಬಾಬಾಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನ, ಅದು ಏಪ್ರಿಲ್ 14. ಆದರೆ, ನಮಗೆ ಗೊತ್ತಿಲ್ಲ. ಈ ಎಲ್ಲ ದಿನಾಂಕಗಳನ್ನು ಕಿತ್ತುಹಾಕೋದಕ್ಕೆ ಈಗಾಗಲೇ ಆರ್‌ಎಸ್‌ಎಸ್ ಆರಂಭ ಮಾಡಿದೆ. ಅದರೊಳಗೆ ಒಂದು ಯಾವುದಪ್ಪಾ ಅಂದ್ರೆ, ಡಿಸೆಂಬರ್ 6ರಂದು ಬಾಬ್ರಿ ಮಸೀದಿ ಒಡೆದು ಹಾಕಿದ್ದು… ಅಲ್ಲಿಗೆ ಬಾಬಾ ಸಾಹೇಬರ ಪರಿನಿರ್ವಾಣವನ್ನು, ಕ್ರಾಂತಿಕಾರಕವಾದಂಥ ದಾರಿಯನ್ನು ಅಲ್ಲಿ ಮುಚ್ಚಿಹಾಕಲಾಯಿತು. ಇನ್ನೊಂದು ಈಗ ಕೋರೆಗಾಂವ್ ಗುರುತು. ಜನವರಿ ಒಂದು. ಆ ದಿನವನ್ನು ವಿಶ್ವಕರ್ಮ ಜಕಣಾಚಾರಿ ದಿನಾಚರಣೆಯಾಗಿ ಭಾರತದಾದ್ಯಂತ ಆಚರಣೆ ಮಾಡಲಾಗುತ್ತಿದೆ. ಏಪ್ರಿಲ್ 14 ಅನ್ನು ಅಳಿಸಿಹಾಕಲು ಹುನ್ನಾರ ನಡೀತಿದೆ, ಅದೂ ಕೂಡ ಆಗುತ್ತೆ.
ಈಗ ನಾವು ನಿಜಕ್ಕೂ ಅಂಬೇಡ್ಕರ್ ವಾದಿಗಳಾಗಿದ್ರೆ ಮಾಡಬೇಕಾದದ್ದೇನು ಎನ್ನುವುದನ್ನು ಕೇಳಿಕೊಳ್ಳಬೇಕಾಗುತ್ತದೆ. ನನಗೆ ಬಾಬಾಸಾಹೇಬರ್ ಪರಿನಿರ್ವಾಣ ಇದೆಯಲ್ಲ, ಈ 66 ವರ್ಷ, ಆ ದಿನವನ್ನು ಸರಿಯಾಗಿ ಗ್ರಹಿಸಲೂ ಅವಕಾಶ ಇಲ್ಲದಂತೆ ಮಾಡಿ ಆ ದಿನವನ್ನು ಬರೀ ಆರಾಧನೆಯಲ್ಲಿ ತೊಡಗಿಸಿದ್ದರು. ಅದನ್ನು ಒಡೆಯಲಿಕ್ಕೋಸ್ಕರ ಇದೇ ವೇದಿಕೆಯಲ್ಲಿ ನಾವು ಡಿಸೆಂಬರ್ 6ನೇ ತಾರೀಖು ಕೆಇಬಿ ನೌಕರರ ಮೂಲಕ ಅದಕ್ಕೆ ಬೇರೊಂದು ರಾಜಕೀಯ ಆಯಾಮ ಬರಬೇಕು ಅಂತ ಒಂದು ಕಾರ್ಯಕ್ರಮ ಮಾಡಿದ್ವಿ. ಅದು ದ ಡೇ ಆಫ್ ರಿಸರೆಕ್ಷನ್ ಅಂಡ್ ರೆಸಿಸ್ಟೆನ್ಸ್. 66 ವರ್ಷ ಬೇಕಾಯಿತು ಅದನ್ನು ನಿಜವಾದ ಆಯಾಮಕ್ಕೆ ತೆಗೆದುಕೊಂಡು ಹೋಗಲು. ಯಾಕೆ ಅಂದರೆ, ಈ 66 ವರ್ಷಗಳಿಂದ ಅಂಬೇಡ್ಕರ್ ವಾದಿಗಳು ಅಂತ ಏನಿದ್ದಾರೆ, ನಾಯಕರು ಏನಿದ್ದಾರೆ ಅವರು ಸಿದ್ದಾಂತವನ್ನು ತಪ್ಪು ದಾರಿಯಲ್ಲಿ ನಡೆಸಿಕೊಂಡು ಬಂದಿದ್ದಾರೆ. ಅದಕ್ಕೆ ಹೊಸದೊಂದು ವೈಬ್ರೇಷನ್ ಬೇಕಿತ್ತು. ಅದಕ್ಕೆ ನಾನು R2 ಎಂದು ಕೊಟ್ಟಿದ್ದೆ. R2 ಅಂದರೆ, ದ ಡೇ ಆಫ್ ರಿಸರೆಕ್ಷನ್ ಅಂಡ್ ರೆಸಿಸ್ಟೆನ್ಸ್. ಯಾಕೆ ರಿಸರೆಕ್ಷನ್, ಏನು ಹಾಗೆಂದರೆ? ಅಂದ್ರೆ, ಅವರು ಮತ್ತೆ ಹುಟ್ಟಿ ಬರ್ತಾರೆ ಅಂತ. ಕ್ರೈಸ್ತರಲ್ಲಿ ಒಂದು ನಂಬಿಕೆ ಇದೆ, ಕ್ರಿಸ್ತ ಸತ್ತ ನಂತರ ಇಷ್ಟು ದಿನ ಆದಮೇಲೆ ಮತ್ತೆ ಬರ್ತಾನೆ ಅಂತ. ಅದನ್ನು ಅವರು ನಂಬ್ತಾರೆ, ಆಚರಣೆ ಮಾಡ್ತಾರೆ. ನಮಗೆ ಅಂಬೇಡ್ಕರ್ ಅವರು ಒಂದು ಧರ್ಮ ಆಗಿದ್ದಾರೆ. ಆ ಕಾರಣಕ್ಕೆ ನಾವೂ ಅದನ್ನು ನಂಬಿದ್ದೀವಿ. ಏನಂದ್ರೆ, ಅಂಬೇಡ್ಕರ್ ಅವರನ್ನು ಪುನರುತ್ಥಾನಗೊಳಿಸಬೇಕು. ಹೇಗೆ? ಅಂಬೇಡ್ಕರ್ ಅವರನ್ನು ಅವರ ಗೋರಿಗೆ ಹೋಗಿಬಿಟ್ಟು ಅಗೆದುಬಿಟ್ಟು ತೆಗೆಯೋದಾ… ಅವರನ್ನು ಚಿತಾಭಸ್ಮ ಮಾಡಿ ರಾಷ್ಟ್ರೀಯ ಗೌರವದೊಂದಿಗೆ ಬೀಳ್ಕೊಟ್ಟಿದ್ದೀವಿ ನಾವು, ಆ ಚಿತಾಭಸ್ಮ ಎಲ್ಲಿದೆಯೋ ಗೊತ್ತಿಲ್ಲ. ಯಾವ ಮೀನುಗಳು ತಿಂದಿವೆಯೋ; ಅವನ್ನು ಹುಡುಕಿಕೊಂಡು ಹೋಗಿ ಅವುಗಳ ಹೊಟ್ಟೆ ಬಗೆದು ನಾವು ಹುಡುಕಬೇಕಾಗುತ್ತೆ ಅಂಬೇಡ್ಕರ್ ಕಣಗಳನ್ನು, ಅಂಬೇಡ್ಕರ್‌ವಾದವನ್ನು. ಆ ದುರಂತ ನಮಗೆ ಬೇಕಾಗಿಲ್ಲ. ನಾವು ಈಗ ಮಾಡಬೇಕಿರೋದೇನು ಅಂದರೆ, ಅಂಬೇಡ್ಕರ್ ಅವರನ್ನು ರೀರೀಡ್ ಮಾಡಬೇಕಿದೆ. Rereading Babasaheb is our futuristic survival.
ಕರ್ನಾಟಕದಲ್ಲಿ ಅಂಬೇಡ್ಕರ್ ಬಗ್ಗೆ ಅಧ್ಯಯನಗಳು ಶುರುವಾಗಿದ್ದು 1980ರ ಸುಮಾರಿಗೆ. 1978ರಲ್ಲಿ ವಿಧಾನಸೌಧದ ಮೆಟ್ಟಿಲ ಮೇಲೆ ನಾವು ಬೃಹತ್ತಾದ ರೀತಿಯಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿಯನ್ನು ಸಾರ್ವಜನಿಕವಾಗಿ ಆಚರಣೆ ಆರಂಭ ಮಾಡಿದ್ವಿ. ಯಾಕೆ ಆರಂಭ ಮಾಡಿದ್ವಿ ಅಂದರೆ, ಆಗ ದಲಿತ ಚಳವಳಿ ಎಂಥ ದುಃಸ್ಥಿತಿಯಲ್ಲಿತ್ತು ಅಂದರೆ, ಅನೇಕ ಕಡೆ ನಾವು ದೊಡ್ಡ ದೊಡ್ಡ ಫ್ಯೂಡಲ್ ಲಾರ್ಡ್‌ಗಳನ್ನು ಎದುರು ಹಾಕಿಕೊಂಡಿದ್ವಿ. ರಾಜಕೀಯ ನಾಯಕರನ್ನು ಎದುರು ಹಾಕಿಕೊಂಡಿದ್ವಿ. ಹಳ್ಳಿಗಳಲ್ಲಿ ದೌರ್ಜನ್ಯಗಳು ಶುರುವಾಗಿದ್ದವು. ನಮ್ಮ ಕಾರ್ಯಕರ್ತರು ಕೊಲೆಯಾಗ್ತಿದ್ದರು. ಕಾರ್ಯಕರ್ತರನ್ನು ಸಂರಕ್ಷಿಸಬೇಕಾದರೆ ನಾವು ಬೃಹತ್ ಶಕ್ತಿಯಾಗಬೇಕು ಅಂತ ಆ ಕಾರ್ಯಕ್ರಮವನ್ನು ನಾನೇ ವಿನ್ಯಾಸಗೊಳಿಸಿದ್ದು. ನಾನೇ ಅಂತ ಯಾಕೆ ಹೇಳುತ್ತಿದ್ದೇನೆ ಅಂದ್ರೆ, ಯಾವ ಕಾಲಕ್ಕೆ ಯಾವುದನ್ನು ಮಾಡಬೇಕು ಅದನ್ನು ಮಾಡ್ತಾ ಬಂದಿದ್ದ ಒಬ್ಬ ಚಾಕರ ನಾನಾಗಿದ್ದರಿಂದ ಈ ಮಾತನ್ನು ಹೇಳುತ್ತಿದ್ದೇನೆ. ಆನಂತರ ನಡೆದಿದ್ದು ಜನಕಲಾಮೇಳ. ಈ ಎರಡನ್ನು ಸರಿಯಾಗಿ ನಡೆಸೋದಕ್ಕೆ ನಮಗೆ ಸಾಧ್ಯವಾಗಿದ್ದಿದ್ರೆ ಇವತ್ತು ಈ ರೀತಿಯ ಬಿಕ್ಕಟ್ಟನ್ನು ನಾವು ಅನುಭವಿಸುತ್ತಾ ಇರಲಿಲ್ಲ. ಅದು ಬೇರೆ ವಿಚಾರ.
ಒಂದನೆಯದಾಗಿ, ಡಿಸೆಂಬರ್ 6, ಆಗಲೇ ಹೇಳಿದೆ; R1 ಮತ್ತು R2. ಇನ್ನೊಂದು ಡಿಸೆಂಬರ್ 25. ಅದು ಯಾಕೆ ಅಂದ್ರೆ ಮನುಧರ್ಮ ಶಾಸ್ತ್ರವನ್ನು ಸುಟ್ಟ ದಿನ. ಮಹಾಡ್ ನೆನಪಿಗೆ 25 ಬಹಳ ಮುಖ್ಯ ದಿನ. ಆನಂತರ ಡಿಸೆಂಬರ್ 30 ಬಹಳ ಮುಖ್ಯ, ಯಾಕೆ ಅಂದರೆ, ಕುವೆಂಪು ಜನ್ಮದಿನ. ಚರಿತ್ರೆಯಲ್ಲಿ ನಾವು ಕುವೆಂಪು ಅವರನ್ನು ಕೂಡ ಒಳಗೊಳ್ಳಬೇಕಾಗುತ್ತೆ. ಕುವೆಂಪು ಮತ್ತು ಬಾಬಾಸಾಹೇಬ್ ಮಧ್ಯೆ, ಅವರ ವಿಚಾರಗಳ ಮಧ್ಯೆ ಕೊಂಚ ವ್ಯತ್ಯಾಸವಿರಬಹುದಷ್ಟೇ ಹೊರತಾಗಿ, ಮಿಕ್ಕಂತೆ, ಅವರಿಬ್ಬರೂ ಕೂಡ ಮನುಷ್ಯನನ್ನು ವಿಶ್ವಮಾನವನನ್ನಾಗಿ ಮಾಡಲು ಹೊರಟಂಥ ಚೇತನಗಳಾಗಿದ್ದರಿಂದ ಅವರ ದಿನಾಚರಣೆ ಬಹಳ ಮುಖ್ಯ. ಒಂದು ಕೋರೆಗಾಂವ್ ಬಹಳ ಮುಖ್ಯ ನಮಗೆ. ಈಗ ಕೋರೆಗಾಂವ್ ಅಳಿಸಿಹಾಕಲು ಪ್ರಯತ್ನ ನಡೆಸಲಾಗುತ್ತಿದ್ದು, ಅದು ಇನ್ನು ಹತ್ತು ಹದಿನೈದು ವರ್ಷಗಳಲ್ಲಿ ಮುಚ್ಚಿಹೋಗುತ್ತೆ. ಯಾಕೆ ಅಂದರೆ, ಅವರು ಮೊದಲು ಒಂದು ನುಡಿಯನ್ನು, ನುಡಿಕಟ್ಟನ್ನು ಹುಟ್ಟು ಹಾಕ್ತಾರೆ, ಅದನ್ನು ನಡೆಸುತ್ತಾ ಬರ್ತಾರೆ, ಅದಕ್ಕೇನು ಶಕ್ತಿ ಇರಲ್ಲ. ಅದು ಬ್ರಾಹ್ಮಣರ ತಂತ್ರ. ಅದು ಮಂತ್ರ ಅಂತ ಅವರು ನಂಬಿದ್ದಾರೆ, ಯಾವುದನ್ನೇ ಆಗಲಿ ಅವರು ಉಚ್ಚರಿಸುತ್ತಾ ಹೋದರೆ ಅದು ನಿಜವಾಗುತ್ತೆ ಅನ್ನೋದು ಅವರ ನಂಬಿಕೆಯಾಗಿದೆ. ಆ ಕಾರಣಕ್ಕಾಗಿ ಅವರು ಮೊದಲು ನುಡಿಯನ್ನು ಹುಟ್ಟು ಹಾಕ್ತಾರೆ, ಆನಂತರ ನೂರು ವರ್ಷ ಬೇಕಾದರೂ ಅದನ್ನು ನಡೆಸಿಕೊಂಡು ಬರ್ತಾರೆ. ಇವತ್ತು ಅಧಿಕಾರ ಆಳ್ತಾ ಇರೋರು ನೂರು ವರ್ಷಗಳ ಕಾಲ ನಮ್ಮ ನುಡಿಕಟ್ಟುಗಳನ್ನು ಹುಟ್ಟು ಹಾಕಿ ಅದರ ಸುತ್ತ ಹುಸಿ ಚರಿತ್ರೆಯನ್ನು ಕಟ್ಟಿ ಹುಸಿ ನಿರ್ಮಾಣಗಳ ಮೂಲಕ ನಮ್ಮಿಡೀ ಮನಸ್ಸುಗಳನ್ನು ಆಕ್ರಮಣ ಮಾಡಿಕೊಂಡು ಅವರು ಗುಲಾಮರಾಗಿಸಿ ಅವರ ಅಭಿಪ್ರಾಯಗಳಿಗೆ ತಲೆಬಾಗೋ ಹಾಗೆ ಮಾಡ್ತಾರೆ. ಇನ್ನೊಂದು, R3. ರಿಕ್ಲಮೇಷನ್. ರಿಕ್ಲೇಮಿಂಗ್, ಏಪ್ರಿಲ್ 14, ಅಂದರೆ ಪ್ರತಿರೋಧ ಮತ್ತು ಮರುಪಡೆಯುವಿಕೆ. ಅದನ್ನು ಏಪ್ರಿಲ್ 14ಕ್ಕೆ ಮಾಡಬೇಕು.
ಈ ನಾಲ್ಕು ದಾರಿಗಳನ್ನು ನಾವು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಜೊತೆಗೆ ಅಂಬೇಡ್ಕರ್ ಓದಿಗೆ ಹೊಸ ರೀತಿಗಳನ್ನು ನೀವು ಕಂಡುಕೊಳ್ಳಬೇಕು. ಇಲ್ಲದಿದ್ದರೆ ಬಹಳ ಅಪಾಯಕಾರಿ ಪರಿಸ್ಥಿತಿ ಎದುರಿಸಬೇಕಾಗಿ ಬರುತ್ತದೆ. ಫ್ಯಾಸಿಸಂ ಇವತ್ತು ಸಂಪೂರ್ಣ ದೇಶವನ್ನು ಕೈವಶಪಡಿಸಿಕೊಂಡಿದೆ. ಮೊದಲು ಇಟಲಿ, ಜರ್ಮನೀಲಿ ಇತ್ತು. ಇದೀಗ ನಮ್ಮ ದೇಶದಲ್ಲಿ ನೆಲೆಗೊಂಡಿದೆ. ನೆಲೆಗೊಳ್ಳಲು ಬೇಕಾದ ಎಲ್ಲ ವ್ಯವಸ್ಥೆಯನ್ನು ಅವರು ಮಾಡಿಕೊಂಡಿದ್ದಾರೆ.
2025ಕ್ಕೆ ಆರ್‌ಎಸ್‌ಎಸ್ ಗೆ 100 ವರ್ಷವಾಗುತ್ತದೆ. ದೇಶವನ್ನು ಅವರು ಹಿಂದೂ ರಾಷ್ಟ್ರ ಎಂದು ಡಿಕ್ಲೇರ್ ಮಾಡುತ್ತಾರೆ. ರಾಷ್ಟ್ರಪಿತ ಆಗಿ ಸಾರ್ವಕರ್ ಅವರನ್ನು ನೇಮಕ ಮಾಡುತ್ತಾರೆ. ಏಕೆಂದರೆ, ನಮ್ಮ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರನ್ನು ಕೊಂದಾಯಿತು. ಅವರ ವಿಚಾರಗಳನ್ನು ಬಿಜೆಪಿ ತನ್ನ ಪ್ರಣಾಳಿಕೆ ಮಾಡಿಕೊಂಡಿತು. ಗಾಂಧಿಯನ್ನು ಕೊಂದು ಗಾಂಧಿ ಪ್ರಣೀತ ಸಮಾಜವಾದ ಅಂತ ಹಾಕ್ಕೊಂಡಿದ್ದಾರೆ. ಇದು ಫ್ಯಾಸಿಸಂ. ಇದನ್ನು ಅಂಬೇಡ್ಕರ್ ಅವರು ಮೈಕ್ರೋ ಫ್ಯಾಸಿಸಮ್ ಎಂದು ಹೇಳಿದ್ದಾರೆ. ನಾವೆಲ್ಲ ಮೈಕ್ರೋ ಫ್ಯಾಸಿಸ್ಟ್ಗಳು. ಅಂದರೆ ನಮ್ಮ ಕಿರುನಾಳಗಳಿಗೂ ಭೇದ ಅನ್ನೋದು, ಇನ್ನೊಬ್ಬನಿಗಿಂತ ನಾನು ಮೇಲೆ ಅನ್ನೋದು, ತರತಮ ಅನ್ನೋದು ಬಂದುಬಿಟ್ಟಿದೆ. ಇದು ಚಾತುರ್ವರ್ಣದ ಉದ್ದೇಶವಾಗಿತ್ತು. ಅವರಿಗೆ ಅದು ಬೇಕಾಗಿತ್ತು. ಚಾತುರ್ವರ್ಣದ ಭೇದ ಅಸ್ಪಶ್ಯರಿಗೆ, ಹಿಂದುಳಿದವರ ರಕ್ತನಾಳಗಳಿಗೆ ಕಳುಹಿಸಿಬಿಟ್ಟರೆ, ನಾವು ಗೆದ್ದೆವು ಅನ್ನೋದು ಅವರ ಭಾವನೆಯಾಗಿತ್ತು. ಈಗ ಅವರು ದಿಗ್ವಿಜಯಗೊಂಡಿದ್ದಾರೆ. ನಾವು ಕುಬ್ಜಗೊಂಡಿದ್ದೇವೆ. ಇದು ನಾವು ಅರ್ಥ ಮಾಡಿಕೊಳ್ಳಬೇಕಿರುವುದು.
ಈಗ ಇರುವ ಸ್ಥಿತಿ ಲಾಲೆಸ್ಲಾ. ಅಂಬೇಡ್ಕರ್ ಅವರು ಇದನ್ನು ಮೊದಲೇ ಬರೆದು ಇಟ್ಟಿದ್ದಾರೆ. ಬಂಡವಾಳಶಾಹಿಗಳು ಪ್ರಜಾಪ್ರಭುತ್ವವನ್ನು ಅಪಹರಣ ಮಾಡಿದರೆ ಎಂತಹ ಸ್ಥಿತಿ ನಿರ್ಮಾಣ ಆಗುತ್ತೆ ಎಂದು ಹೇಳಿದ್ದಾರೆ. ಈಗ ನಮಗೆ ಒಬ್ಬ ಸರ್ವಾಧಿಕಾರಿ ಇದ್ದಾನೆ. ಆತನ ಹೆಸರು ಮೋದಿ. ಇಂತಹವರ ಆಳ್ವಿಕೆಯಲ್ಲಿ ಕಾನೂನು ಇರುತ್ತೆ ಆದರೆ, ಅದನ್ನು ಪಾಲಿಸುವುದಿಲ್ಲ. ಕಾನೂನು ಇದೆ. ನಮ್ಮ ಅಕ್ಕತಂಗಿಯರ ಮೇಲೆ ದೌರ್ಜನ್ಯಗಳಾಗುತ್ತಿವೆ. ಅದಕ್ಕೆ ಪಟಾಕಿ ಅಲ್ಲ ಹೊಡೆಯಬೇಕಿರುವುದು, ನಿಜವಾದ ಅಂಬೇಡ್ಕರ್‌ವಾದಿಗಳಾಗಿದ್ದರೆ ಅತ್ಮಹತ್ಯೆ ಮಾಡಿಕೊಳ್ಳಬೇಕು.
ಲಿವಿಂಗ್ ಡೆಡ್.. ಕೊನೇ ಪದ. ಇದನ್ನು ಭಕ್ಷಿ ಎನ್ನುವ ಬಹಳ ದೊಡ್ಡ ನ್ಯಾಯವಾದಿ ಹೇಳಿದ್ದು. ಅಂಬೇಡ್ಕರ್ ಬಗ್ಗೆ ಉಪನ್ಯಾಸ ಮಾಡಿದವರು. ಕಾನ್ವರ್‌ಸೇಷನ್ ಎಂದು ಆ ಪುಸ್ತಕದ ಹೆಸರು. ಅಂಬೇಡ್ಕರ್ ಯೂನಿವರ್ಸಿಟಿ ಆ ಪುಸ್ತಕ ತಂದಿದೆ, ದಯಮಾಡಿ ತಾವು ಅದನ್ನು ಓದಬೇಕು. ಅವರು, ನೀವು ನಿಮ್ಮ ಅವಸಾನದಿಂದ ತಪ್ಪಿಸಿಕೊಳ್ಳಬೇಕೆಂದರೆ ಈ ನಾಲ್ಕು ಪದ ಅರ್ಥ ಮಾಡಿಕೊಳ್ಳಿ ಎಂದು ಹೇಳಿದ್ದಾರೆ. ಲಿವಿಂಗ್ ಡೆಡ್ ಎಂದರೆ, ಇವತ್ತು ನಾವು ನೀವು ಇರೋ ಸ್ಥಿತಿ. ನಾವು ಚೆನ್ನಾಗಿದ್ದೀವಿ. ಬಟ್ಟೆ ಹಾಕಿಕೊಳ್ತೀವಿ, ಬಟ್ಟೆ ಟ್ರೀಮ್ ಆಗಿರತೀವಿ, ನೀಲಿ ಶಾಲು ಹಾಕತೀವಿ, ಬದುಕಿರತೀವಿ, ಉಸಿರಾಟ ಮಾಡತಾ ಇರತೀವಿ, ಓಡಾಡತಾ ಇರತೀವಿ. ಆದರೆ, ಅಂಬೇಡ್ಕರ್ ಪ್ರಕಾರ ನಾವು ಬದುಕಿಲ್ಲ. ಸತ್ತೋಗಿದ್ದೇವೆ. ಇದು ನಾನು ಹೇಳಿದ್ದಲ್ಲ, ಅಂಬೇಡ್ಕರ್ ಹೇಳಿದ್ದು. ನನ್ನ ಬೈಬೇಡಿ ಆಮೇಲೆ.
ಈಗ ನಾವು ಮುಖ್ಯವಾಗಿ ಅರ್ಥಮಾಡಿಕೊಳ್ಳಬೇಕಿರುವುದೇನೆಂದರೆ, ಇಂಥ ಹುಸಿ ಹೇಳಿಕೆ ಬದಲಾಗಿ ಅದರ ನಿಜವಾದ ಅರ್ಥಗಳಲ್ಲಿ ಪ್ರಜಾಪ್ರಭುತ್ವಕ್ಕೆ ಬಂದಿರುವ ಕುತ್ತನ್ನು ಎದುರಿಸಲು ನಾವು ಸನ್ನದ್ಧರಾಗಬೇಕಿದೆ. ಯಾವ ರೀತಿ ಸನ್ನದ್ದರಾಗಬೇಕು, ತಮಟೆ ಹೊಡೆಯುವುದರಿಂದ ಆಗುತ್ತಾ? ಅದು ಆಗೋದಿಲ್ಲ. ಅದನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಒಳ್ಳೆಯ ಅದ್ಭುತ ಬರಹಗಳ ಮೂಲಕ ನಮ್ಮ ಮುಂದೆ ಇಟ್ಟಿದ್ದಾರೆ. ‘ದ ಚಾಲೆಂಜಸ್ ಬಿಫೋರ್ ದ ಪಾರ್ಲಿಮೆಂಟೆಡ್ ಡೆಮಾಕ್ರಸಿ ಇನ್ ಇಂಡಿಯಾ ಅಂಡ್ ದೇರ್ ರೆಮಿಡೀಸ್’… ಅದರಲ್ಲವರು ಎಷ್ಟು ಸ್ತರಗಳಲ್ಲಿ ಹೇಳ್ತಾರೆ ಅಂದರೆ, ಈ ಕಾಲವನ್ನು 1956ರಲ್ಲೇ ಅಂಬೇಡ್ಕರ್ ಅವರು ಪುಸ್ತಕಗಳಲ್ಲಿ ಬರೆದಿಟ್ಟಿದ್ದಾರೆ, ಇವತ್ತು ನಾವು ಅನುಭವಿಸುತ್ತಿರುವ ಈ ಸ್ಥಿತಿ ಬರುತ್ತೆ ಎಂದು. ಅವರು ಸಂವಿದಾನದ ಅರ್ಪಣಾ ದಿನ ಮಾಡಿದ ಭಾಷಣದಲ್ಲಿ ಏನು ಹೇಳಿದ್ದಾರೆ ಅಂದರೆ, ಭಾರತ ದೇಶ ಇವತ್ತಿನಿಂದ ಬಹಳ ವಿರೋಧಾಭಾಸದ ಕಡೆಗೆ ನಡೆಯುತ್ತದೆ. ನಾವು ರಾಜಕೀಯ ಮಾಡೋಕೆ ಕೊಟ್ಟಿದ್ದೀವಿ ಹಾಗೂ ಮತದಾನದ ಹಕ್ಕನ್ನು ಕೊಟ್ಟಿದ್ದೀವಿ. ಆದರೆ, ಆರ್ಥಿಕ ಮತ್ತು ಸಾಮಾಜಿಕವಾಗಿ ಆಗಬೇಕಿರುವ ಕೆಲಸಗಳು ಆಗಲಿಲ್ಲವಾದರೆ, ಪ್ರಜಾಪ್ರಭುತ್ವ ಫೇಲ್ ಆಗುತ್ತೆ. ನಮ್ಮ ಪ್ರಜಾಪ್ರಭುತ್ವಕ್ಕೆ ಕಡಿಮೆ ವಯಸ್ಸೆ ಇರಬಹುದು ಆದರೆ, ಅದು ಇಷ್ಟು ಬೇಗ ಬಂಡವಾಳಶಾಹಿಗಳಿಂದ ಹೈಜಾಕ್ ಆಗುತ್ತೆ ಎಂದು ಅಂದುಕೊಂಡಿರಲಿಲ್ಲ.
ಚೇತನ್ ಅವರು ಒಮ್ಮೆ ಒಂದು ಮಾತು ಹೇಳಿದ್ದರು. ಅದನ್ನು ದಲಿತರು ವಿರೋಧಿಸಿದ್ದರು. ಯಾಕೆ ವಿರೋಧಿಸುತ್ತಿದ್ದಾರೆ ಅವರು ಹೇಳಿರುವುದು ಸರಿಯಾಗಿಯೇ ಇದೆಯಲ್ಲ ಎಂದುಕೊಂಡೆ. ‘ನಾವು ಇನ್ನಷ್ಟು ಸುಂದರಗೊಳಿಸಬೇಕಿದೆ’ ಎನ್ನುವುದು ಬಹಳ ಒಳ್ಳೆಯ ಮಾತು. ಯಾಕೆ ಅಂದರೆ, ಒಂದು ಕೆಟ್ಟ ಸಂವಿಧಾನ ಆದರೂ ಅದನ್ನು ಜಾರಿಗೊಳಿಸುವವರು ಉತ್ತಮರಾದರೆ, ಅದನ್ನು ಚೆನ್ನಾದ ರೀತಿಯಲ್ಲಿ ಜಾರಿಗೊಳಿಸಬಹುದು. ಅದೆಷ್ಟೇ ಚೆನ್ನಾಗಿರೋ ಸಂವಿಧಾನ ಆದರೂ ಕೆಟ್ಟವರು ಬಂದು ಅದನ್ನು ಕೆಡಿಸಬಹುದು’ ಎಂದು ಅಂಬೇಡ್ಕರ್ ಹೇಳಿದ್ದರು. ‘ಇದು ನಾನು ಪೂರ್ಣ ಸಮಾಧಾನ ಪಟ್ಟುಕೊಳ್ಳುವಂತೆ ಬರೆದಿರುವ ಸಂವಿಧಾನ ಅಲ್ಲ. ಅದನ್ನೇನೂ ತಲೆ ಮೇಲೆ ಹೊತ್ತು ಕುಣಿಯಬೇಕಿಲ್ಲ, ಪೂಜಿಸಬೇಕಿಲ್ಲ. ಸಂವಿಧಾನದ ಒಳಗೆ ಇರಬೇಕಾದದ್ದು ಇಲ್ಲ. ಇರೋದರಲ್ಲೇ ಅದು ಜಾರಿಗೆ ಬರಲಿಲ್ಲ ಅಂದ್ರೆ ನಾನೇ ಮೊದಲಿಗ ಇದನ್ನು ಬೆಂಕಿಗೆ ಹಾಕೋದಕ್ಕೆ’ ಎಂದು ಅಂಬೇಡ್ಕರ್ ಅವರು ಹೇಳಿದ್ದರು.
ಅಂಬೇಡ್ಕರ್ ಅವರ ಬರಹಗಳನ್ನು ಓದುವ ರೀತಿಯಲ್ಲಿ ಓದಬೇಕು. ಅವರ ಮಾತುಗಳನ್ನು ಸರಿಯಾಗಿ ಗ್ರಹಿಸಬೇಕು. ‘ದ ಎಸೆನ್ಶಿಯಲ್ ಅಂಬೇಡ್ಕರ್: ಎಡಿಟೆಡ್ ಬೈ ಬಾಲಚಂದ್ರ ಮುಂಗೇಕರ್’ ಪುಸ್ತಕದ ಬ್ಲರ್ಬ್‌ನಲ್ಲಿರುವ ಎರಡು ಪ್ಯಾರಾ ಓದಿದರೆ ಸಾಕು; ಅದರ ಸಾರಾಂಶ ಏನೆಂದ್ರೆ, “ಜಾತಿಯಲ್ಲಿ ಜಾತಿಯಿಲ್ಲ, ಉಪಜಾತಿಯಲ್ಲಿ ಜಾತಿ ಜೀವಂತವಾಗಿದೆ” ಎನ್ನುವುದು. ಭಾರತೀಯರ ಜಾತಿ ಕಣ್ಣಿಗೆ ಕಾಣಿಸಲ್ಲ. ಅಲ್ಲಿ ನೀರು ಮುಟ್ಟಿಸಲ್ಲ. ಅಲ್ಲಿ ಹೊಡೀತಾರೆ ಬಡೀತಾರೆ ಅನ್ನೋದಲ್ಲ. ಭಾರತೀಯರೆಲ್ಲರ ಮನಸ್ಸು ಕೂಡ ಜಾತಿಮಯವಾಗಿದೆ. ಅದನ್ನು ಅರ್ಥಮಾಡಿಕೊಳ್ಳೋಕೆ ಸಾಧ್ಯವಿಲ್ಲ. ಇದು ಎಷ್ಟು ಕಾಂಪ್ಲೆಕ್ಸ್ ಅಂದ್ರೆ, ನಾನು ಅವನಿಗೆ ಅನ್ಯಾಯ ಮಡ್ತಾ ಇದ್ದೀನಾ, ಅವನು ನನಗೆ ಜಾತಿಭೇದ ಮಾಡ್ತಾ ಇದ್ದಾನಾ ಅನ್ನೋದು ಅರ್ಥ ಮಾಡಿಕೊಳ್ಳೋಕೆ ಸಾಧ್ಯವಿಲ್ಲ.
ಇನ್ನೊಂದು, ಬ್ರಾಹ್ಮಣರ ಕುರಿತು ಅಂಬೇಡ್ಕರ್ ಒಂದು ಮಾತು ಹೇಳಿದ್ದಾರೆ. ಬಸವಣ್ಣ ಬ್ರಾಹ್ಮಣನೇ. ಗೊತ್ತು ನನಗೆ. ಅದಲ್ಲ ವಿಚಾರ. ಹೆಂಗೆ ಅರ್ಥ ಮಾಡಿಕೊಳ್ಳಬೇಕು ಬ್ರಾಹ್ಮಣನನ್ನು ಅನ್ನೋದರ ಬಗ್ಗೆ ಬಾಬಾಸಾಹೇಬರು ಒಂದು ಮಾತು ಹೇಳಿದ್ದಾರೆ; ‘ಒಬ್ಬ ಬ್ರಾಹ್ಮಣನನ್ನು ಕ್ರಾಂತಿಕಾರಿ, ಸಮಾಜ ಬದಲಾವಣೆಗೆ ಬರ್ತಾನೆ, ಜಾತಿ ಹೋಗಲಿ ಅಂತಾನೆ, ಸಮಾನತೆ ಆಚರಿಸ್ತಾನೆ ಅಂತ ದಯವಿಟ್ಟು ನೀವು ನಿರೀಕ್ಷೆ ಮಾಡಬೇಡಿ. ಅದು ಆಗದೇ ಇರೋದು. ಹೆಂಗೆ ಇಂಗ್ಲೆಂಡ್ ಪಾರ್ಲಿಮೆಂಟ್‌ನಲ್ಲಿ ಅವರು ನೀಲಿ ಕಣ್ಣಿನ ಮಕ್ಕಳನ್ನು ಕೊಂದು ಬಿಡಿ ಎಂದು ಕಾನೂನು ಮಾಡುವುದು ಅಸಂಭವವೋ ಅದೇ ರೀತಿ ಭಾರತದಲ್ಲಿ ಬ್ರಾಹ್ಮಣ ಬಂದು ವಿಚಾರವಾದಿ ಆಗತಾನೆ ಅಥವಾ ಕ್ರಾಂತಿಕಾರಿ ಆಗತಾನೆ ಎಂಬುವುದು ಅಸಂಭವ’. ಅದಕ್ಕೆ ಅಪವಾದಗಳಿವೆ. ಕುದ್ಮುಲ್ ರಂಗರಾವ್ ಇದ್ದಾರೆ, ರಾಮಗೋಪಾಲಸ್ವಾಮಿ ಅಯ್ಯರ್ ಇದ್ದಾರೆ. ಇನ್ನೂ ಅನೇಕರಿದ್ದಾರೆ, ನಾನು ಇಲ್ಲ ಎನ್ನಲ್ಲ. ಯಾಕೆ ನಿಮ್ಮಲ್ಲಿ ಒಬ್ಬ ವಾಲ್ಟೇರ್ ಹುಟ್ಟಕ್ಕೆ ಸಾಧ್ಯ ಇಲ್ಲ ಎಂದು ಅಂಬೇಡ್ಕರ್ ಕೇಳ್ತಿದ್ರು. ಅಂಥ ದಿಟ್ಟ ಧೀಮಂತರು ಬರಲ್ಲ. ಭಾರತದ ದೇಶದ ಮಿದುಳನ್ನು ಹಾಗೂ ಎಲ್ಲ ಪಕ್ಷಗಳ, ಎಲ್ಲ ಸಿದ್ದಾಂತಗಳ ಮಿದುಳನ್ನು ಆಕ್ರಮಣ ಮಾಡಿಕೊಂಡ ಬ್ರಾಹ್ಮಣಶಾಹಿಯಿಂದ ನಾವು ಸಂಪೂರ್ಣವಾಗಿ ಅಂಬೇಡ್ಕರ್ ರಿಸರೆಕ್ಷನ್ ಅನ್ನು ಕಾಣೋಕೆ ಸಾಧ್ಯ ಇಲ್ಲ. ಹಾಗಾಗಿ, ನಾವು ನಮ್ಮ ನಮ್ಮ ಕಣ್ಣುಗಳ ಮೂಲಕ ಎಲ್ಲವನ್ನು ಕಾಣಬೇಕು, ಅರ್ಥ ಮಾಡಿಕೊಳ್ಳಬೇಕು. ನಮ್ಮ ನಡೆಗಳಲ್ಲಿರುವ ತಪ್ಪುಗಳ ಮೂಲಕವೇ ನಾವು ಕಲಿಯಬೇಕಾಗುತ್ತೆ.
ಕೋಲಾರ ನೆಲ ಒಂದು ಕಾಲಕ್ಕೆ ಇಡೀ ಭಾರತ ದೇಶಕ್ಕೆ ಅಥವಾ ಇಡೀ ಪ್ರಪಂಚಕ್ಕೆ ಒಂದು ಚಳವಳಿ ಹೇಗೆ ಇರಬೇಕು ಎಂಬುದಕ್ಕೆ ಮಾದರಿಯಾಗಿತ್ತು, ಇದೀಗ ಹೇಗೆ ಇರಬಾರದು ಎಂಬುದಕ್ಕೆ ಮಾದರಿಯಾಗಿದೆ. ಇನ್ನು ನಾನು ಈ ನೆಲದಲ್ಲಿ ಇರಲ್ಲ. ನಾನು ಸೆಲ್ಯೂಟ್ ಹೇಳ್ತಾ ಇದ್ದೀನಿ, ಬೇರೆ ನೆಲವನ್ನು ನಾನು ನನ್ನ ಪ್ರಯೋಗ ಭೂಮಿ ಮಾಡಿಕೊಂಡು ನನ್ನ ಚಟುವಟಿಕೆ ಆರಂಭಿಸ್ತೀನಿ.ಈ ಮಾತುಗಳನ್ನು ಹೇಳಲು ಬೆಳಗ್ಗೆ ಎಂಟು ಗಂಟೆಯಿಂದ ಬಹಳ ಸಹನೆಯಿಂದ ಕಾದಿದ್ದೇನೆ, ನಾನು ನಾಯಕರಿಗೆ ಒಂದು ಮಾತು ಹೇಳ್ತೀನಿ. ನೀವು ಸಮಯ ಪಾಲನೆ ಮಾಡಲಿಲ್ಲ ಎಂದರೆ, ನೀವು ಅಂಬೇಡ್ಕರ್‌ವಾದಿಯಾಗುವುದಿಲ್ಲ. ಥ್ಯಾಂಕ್ಯು.