ಕಾವೇರಿ ವನ್ಯಧಾಮದಲ್ಲಿ ಬೆಟ್ಟಳಿಲು
ವೈವಿಧ್ಯಮಯ ಜೀವ ಸಂಕುಲಗಳನ್ನುತನ್ನೊಳಗೆ ಇರಿಸಿಕೊಳ್ಳುವ ಮೂಲಕ ರಾಜ್ಯದ ಗಮನ ಸೆಳೆದಿರುವ ಕಾವೇರಿ ವನ್ಯಧಾಮವು ಬಲು ಅಪರೂಪದ ಮತ್ತು ಅಳಿಯುವ ಭೀತಿಯಲ್ಲಿರುವ ಬೆಟ್ಟಳಿಲುಗೂ (ಗ್ರಿಜಲ್ಡ್ ಜೈಂಟ್ ಸ್ಕ್ವೀರಲ್) ಆಶ್ರಯ ನೀಡಿರುವುದು ವಿಶೇಷ.
ಪರಿಸರ ಪ್ರೇಮ
ಮರಸಪ್ಪ ರವಿ
ನಾವು ಸಾಮಾನ್ಯವಾಗಿ ಅಳಿಲಿನ ಹೆಸರನ್ನು ಕೇಳಿಯೇ ಇರುತ್ತೇವೆ. ರಾಮ ಲಂಕೆಯಿಂದ ಸೀತೆಯನ್ನು ರಾವಣನೊಂದಿಗೆ ಯುದ್ದ ಮಾಡಿ, ಬಿಡಿಸಿಕೊಂಡು ಬರಲು ಸಮುದ್ರಕ್ಕೆ ಸೇತುವೆ ನಿರ್ಮಿಸುವ ಸಂದರ್ಭದಲ್ಲಿ ಅಳಿಲು ಕೂಡ ಸಣ್ಣ-ಸಣ್ಣ ಕಲ್ಲುಗಳನ್ನು ತಂದು ತನ್ನ ಕೈಲಾದ ಸೇವೆಯನ್ನು ರಾಮನಿಗೆ ಮಾಡಿಸಿದ ಬಗ್ಗೆ ಕೇಳಿದ್ದೇವೆ. ಈಗ ಬಾಯಿ ಮಾತಿಗಾದರೂ ನಮ್ಮದೊಂದು ಅಳಿಲು ಸೇವೆ ಮಾಡುತ್ತೇನೆ ಎನ್ನುವ ಮಾತು ಈ ಕಥೆಯಿಂದಲೇ ರೂಢಿಗತವಾಗಿರಬೇಕೆನಿಸುತ್ತದೆ.
ಈಗ ನಾನು ಹೇಳ ಹೊರಟಿರುವುದು ಬೆಟ್ಟಳಿಲಿನ ಬಗ್ಗೆ. ಇದನ್ನು ಕೆಲವು ಕಡೆಗಳಲ್ಲಿ ಬೆಟ್ಟದ ಅಳಿಲು ಎಂದು ಕರೆಯುತ್ತಾರೆ.
ಅಳಿಲು ಹೇಗಿದೆ?: ‘ರತೂಫಾ ಮ್ಯಾಕ್ರೋರಾ’ ಇದರ ವೈಜ್ಞಾನಿಕ ಹೆಸರು. ಶ್ರೀಲಂಕಾದ ಕೇಂದ್ರೀಯ ಮತ್ತು ಆವಾ ಪ್ರಾಂತ್ಯಗಳ ಎತ್ತರದ ಪ್ರದೇಶಗಳಲ್ಲಿ ಕಂಡುಬರುವ ಈ ಜೀವಿ, ಕರ್ನಾಟಕದಲ್ಲಿ ಇಲ್ಲಿ ಮಾತ್ರ ಕಾಣಿಸುತ್ತಿದೆ. ಇದರಲ್ಲಿ ಒಟ್ಟು 26 ಪ್ರಭೇದಗಳಿದ್ದು, ಒಂದೊಂದು ರಾಜ್ಯದಲ್ಲಿ ಬೇರೆ ಬೇರೆ ಪ್ರಭೇದಗಳಿವೆ. ಅಂತರರಾಷ್ಟ್ರೀಯ ನಿಸರ್ಗ ಸಂರಕ್ಷಣೆಯ ಒಕ್ಕೂಟವು ಇದನ್ನು ಅಳಿವಿನಂಚಿನ ಭೀತಿಯಲ್ಲಿರುವ ಪ್ರಾಣಿ ಎಂದು ಗುರುತಿಸಿದೆ.
ವೈವಿಧ್ಯಮಯ ಜೀವ ಸಂಕುಲಗಳನ್ನುತನ್ನೊಳಗೆ ಇರಿಸಿಕೊಳ್ಳುವ ಮೂಲಕ ರಾಜ್ಯದ ಗಮನ ಸೆಳೆದಿರುವ ಕಾವೇರಿ ವನ್ಯಧಾಮವು ಬಲು ಅಪರೂಪದ ಮತ್ತು ಅಳಿಯುವ ಭೀತಿಯಲ್ಲಿರುವ ಬೆಟ್ಟಳಿಲುಗೂ (ಗ್ರಿಜಲ್ಡ್ ಜೈಂಟ್ ಸ್ಕ್ವೀರಲ್) ಆಶ್ರಯ ನೀಡಿರುವುದು ವಿಶೇಷ.
1027 ಚದರ ಕಿ. ಮೀ ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ಕಾವೇರಿ ಅಭಯಾರಣ್ಯ,ರಾಜ್ಯದಲ್ಲೇ ಹೆಚ್ಚು ವಿಸ್ತೀರ್ಣ ಹೊಂದಿರುವ ವನ್ಯಧಾಮ ಎಂಬ ಖ್ಯಾತಿ ಹೊಂದಿದೆ. ಹಲವು ಅಪರೂಪದ ಪ್ರಾಣಿಗಳನ್ನ ತನ್ನ ಒಡಲ್ಲಿ ಇಟ್ಟುಕೊಂಡಿರುವ ಕಾವೇರಿ ವನ್ಯಜೀವಿ ಧಾಮದಲ್ಲಿ ಈಗ ಬೆಟ್ಟಳಿಲು ಕೂಡ ಸೇರ್ಪಡೆಗೊಂಡಿದೆ.
ಪ್ರಪಂಚದಾದ್ಯಂತ ಐದು ಪ್ರದೇಶಗಳಲ್ಲಿ ಮಾತ್ರ ಈ ಅಳಿಲು ಕಂಡು ಬಂದಿದೆ. ರಾಜ್ಯದಲ್ಲಿರುವ ಅರಣ್ಯಗಳ ಪೈಕಿ ಕಾವೇರಿ ವನ್ಯಧಾಮಲ್ಲಿ ಮಾತ್ರ ಕಾಣಿಸಿಕೊಂಡಿರುವುದು ಖುಷಿಯ ವಿಚಾರ.
ಕನಕಪುರದ ಸಂಗಮ, ಚಾಮರಾಜನಗರ ಕೊತ್ತನೂರು, ಕೌದಳ್ಳಿ ವನ್ಯಜೀವಿ ವಲಯದ ಹೊಳೆಮುರದಟ್ಟಿ ಅರಣ್ಯ ಪ್ರದೇಶದಲ್ಲಿ ಈ ಅಳಿಲು ಕಾಣಿಸಿಕೊಂಡಿದೆ. ಮರಗಳು ಒಂದಕ್ಕೊಂದು ಅಂಟಿಕೊಂಡಿರುವ ಪ್ರದೇಶದಲ್ಲಿ ಇವುಗಳ ಇರುವಿಕೆ ಹೆಚ್ಚಾಗಿ ಕಂಡು ಬಂದಿದೆ.
ದಕ್ಷಿಣ ಭಾರತ ಮತ್ತು ಸಿಂಹಳದಲ್ಲಿ ಕಂಡುಬರುವ ಒಂದು ವಿಶಿಷ್ಟವಾದ ಅಳಿಲು. ಗಾತ್ರ ಮತ್ತು ಆಕಾರದಲ್ಲಿ ನಮ್ಮ ಪಶ್ಚಿಮ ಘಟ್ಟಗಳ ಕಾಡುಗಳಲ್ಲಿ ಕಂಡುಬರುವ ಕೆಂಚಳಿಲಿನಂತೆ (Malabar Giant Squirrel, Ratufa indica) ಇದ್ದರೂ ಬಣ್ಣದಲ್ಲಿ ವ್ಯತ್ಯಾಸ. ಹೆಸರೇ ಸೂಚಿಸುವಂತೆ ಕೆಂಚಳಿಲು ಕೆಂಬಣ್ಣದ್ದಾದರೆ, ಬೆಟ್ಟಳಿಲು ಬೂದಿ ಬಣ್ಣದ್ದು. ಇವು ವಾಸಿಸುವ ಆವಾಸ ಸ್ಥಾನವೂ ವಿಶೇಷವಾದದ್ದೇ. ದಟ್ಟಾರಣ್ಯಗಳಿಗೆ ವಿರುದ್ಧವಾಗಿ, ಒಣ ಹವೆಯಲ್ಲಿ ಬೆಳೆಯುವ ಕುರುಚಲು ಹಾಗೂ ಎಲೆ ಉದುರಿಸುವ ಕಾಡುಗಳಲ್ಲೇ ಇವುಗಳ ವಾಸ.
ಕಂದು ಮಿಶ್ರಿತ ಬೂದು ಬಣ್ಣವನ್ನು ಹೊಂದಿರುವ ಈ ಅಳಿಲಿನ ಹೊಟ್ಟೆಯ ಭಾಗವು ಮಾಸಿದ ಬಿಳಿ ಬಣ್ಣದಿಂದ ಕೂಡಿದೆ. ಹೆಚ್ಚಾಗಿ ಹಗಲಿನಲ್ಲಿ ಸಕ್ರಿಯವಾಗಿರುವ ಇವು, ಮರಗಳಲ್ಲಿಯೇ ಹೆಚ್ಚಿನ ಸಮಯ ಕಳೆಯುತ್ತವೆ. ನದಿ ಬಯಲಿನ 50 ಮೀಟರ್ ಅಂತರದಲ್ಲಿರುವ ಬೃಹದಾಕಾರದ ಮರಗಳೇ ಇದರ ಪ್ರಮುಖ ಆವಾಸಸ್ಥಾನ ಎಂದು ಪರಿಸರ ವಿಜ್ಞಾನಿಗಳು ಗುರುತಿಸಿದ್ದಾರೆ.
ಸ್ಥಳೀಯವಾಗಿ ಸಿಗುವ ಹಣ್ಣು, ಮರದ ತೊಗಟೆ ಹಾಗೂ ಚಿಗುರು ಎಲೆಗಳೇ ಇವುಗಳಿಗೆ ಪ್ರಮುಖ ಆಹಾರವಾಗಿದ್ದು, :ಮೂಗಿನಿಂದ ದೇಹದ ಅಂಚಿನವರೆಗೆ 25ರಿಂದ 45 ಸೆಂ.ಮೀ ಉದ್ದವಿರುತ್ತದೆ. ವಿಶೇಷವೆಂದರೆ ದೇಹದ ಉದ್ದಕ್ಕಿಂತಲೂ ಅದರ ಬಾಲವೇ ಹೆಚ್ಚು ಉದ್ದವಿರುವುದು ಇದರ ಮತ್ತೊಂದು ವಿಶೇಷ. ಬಾಲದ ಉದ್ದ 30 ರಿಂದ 45 ಸೆಂ. ಮೀನಷ್ಟು ಇರುತ್ತದೆ. ಇದು ಸರಿ ಸುಮಾರು 1.53 ಕೆ.ಜಿ ತೂಕವಿದೆ ಎಂದು ದೃಢಪಟ್ಟಿದೆ.
ಇದೊಂದು ಅಳಿವಿನಂಚಿನಲ್ಲಿರುವ ಪ್ರಾಣಿಯಾಗಿ ಗುರುತಿಸಿಕೊಂಡಿದ್ದು, 1988ರಲ್ಲಿ ತಮಿಳುನಾಡಿನ ಮಧುರೈ ಜಿಲ್ಲೆಯಲ್ಲಿ ಇದರ ಹೆಸರಿನಲ್ಲೇ ವನ್ಯಧಾಮವನ್ನು (ಶ್ರೀವಿಲ್ಲಿಪುತ್ತೂರು ವನ್ಯಧಾಮ) ಸ್ಥಾಪನೆ ಮಾಡಲಾಗಿದೆ.
ಅಳಿವಿನಂಚಿನಲ್ಲಿರುವ ಈ ವಿಶಿಷ್ಟವಾದ ಜೀವಿಗಳ ರಕ್ಷಣೆಗೆ ಬೇಕಿರುವುದು ಅವುಗಳ ಆವಾಸ ಸ್ಥಾನಗಳ ರಕ್ಷಣೆ. ಹಿಂದೆ ಕಾವೇರಿ ನದಿಯ ಉದ್ದಕ್ಕೂ ಇದ್ದ ವಿಶಿಷ್ಟವಾದ ಕಾಡುಗಳು ಈಗ ಕಾವೇರಿ ವನ್ಯಧಾಮಕ್ಕೆ ಮಾತ್ರ ಸೀಮಿತವಾಗಿವೆ. ಇನ್ನುಳಿದ ಪ್ರದೇಶಗಳಲ್ಲಿ ವ್ಯವಸಾಯಕ್ಕಾಗಿ ಇಲ್ಲ ಮರನಾಟುಗಳಿಗಾಗಿ ಇಲ್ಲ ನಿರ್ಮಾಣ ಕಾರ್ಯಗಳಿಗಾಗಿ ಈ ಕಾಡುಗಳು ನಾಶವಾಗಿವೆ. ಈ ನದಿಯಂಚಿನ ಕಾಡುಗಳ ನಾಶ ಬೆಟ್ಟಳಿನ ವಿನಾಶ ಮಾತ್ರವಲ್ಲದೇ ನೆರೆಹಾವಳಿಯಂತಹ ಪ್ರಕೃತಿ ವಿಕೋಪಗಳಿಗೂ ಕಾರಣವಾಗುತ್ತದೆ.
ಭಾರತದ ಕೆಲವೇ ಪ್ರದೇಶಗಳಲ್ಲಿ ಕಾಣಸಿಗುವ ವಿಶಿಷ್ಟವಾದ ಜೀವಿಯೊಂದು ನಮ್ಮ ರಾಜ್ಯದಲ್ಲಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಬೇಕಿದ್ದೂ, ಇದನ್ನು ಸಂರಕ್ಷಿಸಬೇಕಾದದ್ದು ನಮ್ಮ ಕರ್ತವ್ಯ.
ಕಾವೇರಿ ವನ್ಯಜೀವಿ ಧಾಮ ವ್ಯಾಪ್ತಿಯ ಕನಕಪುರ ತಾಲೂಕಿನ ಸಂಗಮದ ಬಳಿ ಲೇಖಕರ ಕ್ಯಾಮೆರಾ ಕಣ್ಣಿಗೆ ಸೆರೆಸಿಕ್ಕ ಕೆಂದಳಿಲು.