ಐನೂರರ ನೋಟು- ಎಂ.ವಿ.ನಾಗರಾಜಶೆಟ್ಟಿ

ಪ್ರಬಂಧ-ಕಥೆ

ಐನೂರರ ನೋಟು- ಎಂ.ವಿ.ನಾಗರಾಜಶೆಟ್ಟಿ

ಕತಾ ಸರಿತ್ಸಾಗರ


ಎಂ.ನಾಗರಾಜ ಶೆಟ್ಟಿ

 


 ಗಂಟೆ ಆರಾದರೂ ಶಿವಸ್ವಾಮಿ ಕ್ಯಾಷ್‌ಕ್ಯಾಬಿನ್ನಿಂದ ಹೊರ ಬರದೆ, ಹಣಕಟ್ಟಿದ ಚಲನ್‌ಗಳು, ಪೇಮೆಂಟ್ ಮಾಡಿದ ಚೆಕ್‌ಗಳನ್ನು ಹರಡಿಕೊಂಡು, ಒಂದೊಂದನ್ನೇ ಹಿಂದೆ-ಮುಂದೆ ತಿರುಗಿಸಿ ನೋಡುತ್ತಿದ್ದರು.


  ಸ್ವಾಮಿಕ್ಯಾಷಲ್ಲಿರುವಾಗ ಅತ್ತ, ಇತ್ತ ನೋಡುವವರಲ್ಲ. ಊರ ಮೇಲೆ ಊರು ಬಿದ್ದರೆ ತನಗೇನು ಎನ್ನುವಂತೆ, ಪ್ರತಿ ನೋಟನ್ನೂ ಬಿಡಿಸಿ, ಬಿಡಿಸಿ ಎಣಿಸಿ, ಚೆಕ್‌ಗಳ ಹಿಂದೆ ಡಿನೋಮಿನೇಷನ್ಸ್ ಬರೆದೇ ಪೇಮೆಂಟ್ ಮಾಡುತ್ತಾರೆ. ಕಸ್ಟಮರ್ಸ್ಗಳಿಂದ ಹಣ ತೆಗೆದುಕೊಳ್ಳುವಾಗಲೂ ಅಷ್ಟೆ; ಚಲನ್‌ಗಳಲ್ಲಿ ನಮೂದಿಸಿದ ನೋಟಿನ ವಿವರಗಳನ್ನು ಪರಿಶೀಲಿಸಿ, ಕಸ್ಟಮರ್ಸ್ ಬರೆದುದರಲ್ಲಿ ತಪ್ಪಿದ್ದರೆ ವಾಪಾಸು ಕೊಟ್ಟು, ಸರಿಯಾಗಿ ಬರೆದುಕೊಡಲು ಹೇಳುತ್ತಿದ್ದರು.


   ಹಣ ಪಡೆಯಲುಎಲ್ಲರೂ ಸರತಿಯಲ್ಲೆ ಬರಬೇಕು, ಇಲ್ಲವೇ ಟೋಕನ್ ಸಂಖ್ಯೆಕರೆಯುವವರೆಗೆ ಕಾಯಬೇಕು. ಇದರಲ್ಲಿ ಭೇದಭಾವವಿಲ್ಲ. ಬ್ಯಾಂಕಿನ ಸಿಬ್ಬಂದಿಗೂ ಇದೇ ನಿಯಮ ಅನ್ವಯವಾಗುತ್ತಿತ್ತು. ಹಿಂದೆಲ್ಲ ಸ್ಟಾಫ್‌ ಚೆಕ್‌ಕೊಟ್ಟರೆ ತಕ್ಷಣ ಹಣಕೊಡುತ್ತಿದ್ದರು. ಈಗೆಲ್ಲರೂ ಕಾಯಬೇಕು. ಹುಟ್ಟಿಸಿದವನು ಬಂದರೂ ಕ್ಯೂನಲ್ಲಿ ನಿಲ್ಲಿಸುತ್ತಾನೆಂದು ಒಳಗೊಳಗೆ ಕುಹಕವಾಡಿದರೂ ಆತನಿರುವವರೆಗೆ ಕ್ಯಾಷ್‌ನಲ್ಲಿ ಕೆಲಸ ಮಾಡುವ ಗೋಳು ಇಲ್ಲವಲ್ಲ ಎನ್ನುವ ಕಾರಣಕ್ಕೆ ಸ್ಟಾಫ್‌ ಕೂಡಾ ತುಟಿಪಿಟಿಕ್‌ ಎನ್ನದೆ ಸಹಿಸಿಕೊಂಡಿದ್ದರು.


   ಆತನ ಕ್ರಮಕ್ಕೆ ಮ್ಯಾನೇಜರ್‌ಗಳೂ ಒಗ್ಗಿಕೊಂಡಿದ್ದರು. ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸುತ್ತಾರೆ; ರಜೆ ಹಾಕುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಗ್ರಾಹಕರಕಂಪ್ಲೈಂಟ್‌ಇಲ್ಲ. ಮ್ಯಾನೇಜರ್‌ಗಳು ಸಂತೃಪ್ತರಾಗಲು ಇನ್ನೇನು ಬೇಕು?


  ಸ್ವಾಮಿ ತುಮಕೂರಲ್ಲೆ ಹುಟ್ಟಿ ಬೆಳೆದವರು. ಬ್ಯಾಂಕಲ್ಲಿ ಕೆಲಸ ಸಿಕ್ಕಿದ ಮೇಲೆ ಮೂರು ವರ್ ಷದೂರದೂರಿನಲ್ಲಿದ್ದರು. ಆಮೇಲೆ ಮಠದವರಿಂದ ಇನ್‌ಪ್ಲೂಯೆನ್ಸ್ ಮಾಡಿಸಿ ಹುಟ್ಟೂರಿಗೆ ಬಂದವರು ಹದಿನೈದು ವರ್ಷಗಳಿಂದ ಅಲ್ಲಾಡಿಲ್ಲ. ಪ್ರಮೋಷನ್ ಪಡೆದರೆ ಟ್ರಾನ್ಸ್ಫರ್‌ಅಗುತ್ತದೆಂದು ಅದನ್ನೂ ನಿರಾಕರಿಸಿ ಸುತ್ತಮುತ್ತಲ ಬ್ರಾಂಚುಗಳಲ್ಲೇ ಕೆಲಸ ಮಾಡಿಕೊಂಡು ಸುಖವಾಗಿದ್ದಾರೆ.


  ಸಂಜೆ ಐದು ಗಂಟೆಗೆ ಕೆಲಸದಅವಧಿ ಮುಗಿಯುತ್ತಲೇ ಒಂದೇ ಕಿಕ್ಕಿಗೆ ಸ್ವಾಮಿಯ ಹೀರೋಸ್ಪ್ಲೆಂಡರ್‌ ಗುರ‍್ರೆಂದು ಸ್ಟಾರ್ಟ್ ಆಗುತ್ತಿತ್ತು. ಅಂತದ್ದರಲ್ಲಿ ಈ ದಿನ ಕ್ಯಾಷ್‌ ಕೊಡದೆಯೇ, ಕೊಕ್ಕರೆಯಂತೆತಲೆ ತಗ್ಗಿಸಿ ಧ್ಯಾನಾವಸ್ಥೆಯಲ್ಲಿರುವುದನ್ನು ಕಂಡು ಆಶ್ಚರ್ಯಪಟ್ಟು, ಅಸಿಸ್ಟೆಂಟ್ ಮ್ಯಾನೇಜರ್ ಗೋಪಿನಾಥ್‌ ಕ್ಯಾಷ್‌ಕ್ಯಾಬಿನ್ ಹತ್ತಿರ ಬಂದರು. ಸಂಜೆ ವ್ಯವಹಾರ ಮುಗಿಸಿ ಹೊರಡುವ ಮುನ್ನ ಕ್ಯಾಷ್ ತಾಳೆ (ಟ್ಯಾಲಿ)ಮಾಡಿ ಜಂಟಿ ಸುಪರ್ದುದಾರರಿಗೆ (ಜಾಯಿಂಟ್‌ ಕಸ್ಟೋಡಿಯನ್ಸ್) ನಗದು ಒಪ್ಪಿಸಬೇಕು. ಬೆಳಿಗ್ಗೆ ಜಾಯಿಂಟ್‌ ಕಸ್ಟೋಡಿಯನ್ಸ್ ಸ್ಟ್ರಾಂಗ್‌ರೂಮಿಂದ ನಗದು ತೆಗೆದು ಕ್ಯಾಷಿಯರ್ ವಶಕ್ಕೊಪ್ಪಿಸುತ್ತಾರೆ. ದಿನದ ವ್ಯವಹಾರದಲ್ಲಿ ಗ್ರಾಹಕರಿಂದ ಪಡೆದ, ಗ್ರಾಹಕರಿಗೆ ಕೊಟ್ಟ ಹಣವನ್ನು ಲೆಕ್ಕ ಹಾಕಿ, ಉಳಿದುದನ್ನು ಸಿಂಗಲ್ ಲಾಕ್, ಡಬಲ್ ಲಾಕ್ ರಿಜಿಸ್ಟರುಗಳಲ್ಲಿ ಕ್ಯಾಷಿಯರ್ ನಮೂದಿಸುತ್ತಾರೆ. ಚಿಲ್ಲರೆ ಹಣವನ್ನು ಸಿಂಗಲ್ ಲಾಕ್ ಬುಕ್ಕಲ್ಲಿ ನಮೂದಿಸಿದರೆ, ನೋಟಿನ ಕಂತೆಗಳನ್ನು ಡಬಲ್ ಲಾಕ್ ಬುಕ್ಕಲ್ಲಿ ಬರೆಯಲಾಗುತ್ತದೆ. ಕ್ಯಾಷ್‌ನಲ್ಲಿ ಒಂದು ರೂಪಾಯಿ ವ್ಯತ್ಯಾಸವಾದರೂ ಕ್ಯಾಷಿಯರ್‌ ಜವಾಬ್ದಾರಿ. ಇದರಿಂದ ಕ್ಯಾಷ್‌ ಡಿಪಾರ್ಟ್ಮೆಂಟಲ್ಲಿ ಕೆಲಸ ಮಾಡಲು ಹೆಚ್ಚಿನವರಿಗೆ ಇಷ್ಟವಿಲ್ಲ.


   ಸ್ವಾಮಿ ಹತ್ತಿರ ಬಂದ ಗೋಪಿನಾಥರನ್ನು ನೋಡಿ ಪಾಕೆಟ್‌ನಿಂದ ಐನೂರರ ನೋಟನ್ನು ತೆಗೆದರು. ಜಾಯಿಂಟ್‌ ಕಸ್ಟೋಡಿಯನ್ ವಶಕ್ಕೆ ನಗದು ಒಪ್ಪಿಸುವಾಗ ಐನೂರು ಸೇರಿಸಿ “ಶಾರ್ಟ್ಇದೆ” ಎಂದರು. ಗೋಪಿನಾಥ್‌ಗೆ ಸ್ವಾಮಿ ಹಣ ಕಳೆದುಕೊಂಡಿದ್ದರೆಂದರೆ ನಂಬಲು ಕಷ್ಟವಾಯಿತು. ಕೆಲಸದ ಅವಧಿ ಮುಗಿದ ಕಾರಣ, ಮರು ಮಾತಾಡದೆ ಸ್ವಾಮಿಯಿಂದ ಪಡೆದ ದಿನದಂತ್ಯದ ನಗದನ್ನು, ಸಿಂಗಲ್ ಲಾಕ್ ಮತ್ತು ಡಬಲ್ ಲಾಕ್ ಪುಸ್ತಕಗಳ ಜೊತೆಯಲ್ಲಿ ಸ್ಟ್ರಾಂಗ್‌ರೂಮಿಗೆ ಒಯ್ದರು.

  ಸ್ವಾಮಿ ಹದಿನೆಂಟು ವರ್ಷಗಳ ಸರ್ವೀಸಲ್ಲಿ ಒಂದೇ ಒಂದು ಸಲ ಹಣ ಕಳೆದುಕೊಂಡಿದ್ದರು. ಆಗಲೂ ಪ್ರತಿಯೊಂದು ಟ್ರಾನ್ಸಾಕ್ಷನ್ ಪರಿಶೀಲಿಸಿ ಏಕೆ ಶಾರ್ಟ್ ಬಂತೆನ್ನುವುದನ್ನುಕಂಡು ಕೊಂಡಿದ್ದರು.ಆ ದಿನ ಕೌಂಟರ್ ಮುಂದೆ ಬಹಳ ಗ್ರಾಹಕರಿದ್ದರು. ಅವರನ್ನು ಕಳಿಸುವ ಗಡಿಬಿಡಿಯಲ್ಲಿ ನೋಟು ಎಣಿಸುವಾಗ ತಪ್ಪಾಗಿತ್ತು. ಇದರಿಂದ ಸ್ವಾಮಿ ಪಾಠ ಕಲಿತಿದ್ದರು. ಆ ಬಳಿಕ ಯಾರೇ ಕೂಗಾಡಿದರೂ, ಎಷ್ಟೇ ಹೊತ್ತಾದರೂ ನಿಧಾನವಾಗಿಯೇ ಎಣಿಸುತ್ತಿದ್ದರು. ಕೌಂಟಿಂಗ್‌ ಯಂತ್ರ ಬಳಕೆಗೆ ಬಂದ ಪ್ರಾರಂಭದಲ್ಲಿ ಸ್ವಾಮಿಗೆ ಅದರ ಮೇಲೂ ನಂಬಿಕೆ ಇರಲಿಲ್ಲ. ಮೆಷಿನ್‌ನಲ್ಲಿ ಕೌಂಟ್‌ ಆದ ಬಳಿಕವೂ ಮತ್ತೊಮ್ಮೆ ಕೈಯಲ್ಲಿ ಎಣಿಸುತ್ತಿದ್ದರು. ಕೈಯಲ್ಲಿ ಎಣಿಸುವುದಾದರೆ ಮೆಷಿನ್ ಯಾಕೆ, ಪೂಜೆ ಮಾಡುವುದಕ್ಕಾ ಎಂದು ಕಸ್ಟಮರೊಬ್ಬರು ಸ್ವಾಮಿಗೆ ಕೇಳಿಸುವಂತೆ ವ್ಯಂಗ್ಯವಾಡಿದ್ದರಿಂದ ಕೈಯಲ್ಲಿ ಎಣಿಸುವುದು ತಪ್ಪಿತು.


  ಸ್ವಾಮಿಗೆ ದುಡ್ಡಿನ ತಾಪತ್ರಯವೇನೂ ಇಲ್ಲ. ಗಾಂಧಿನಗರದಲ್ಲಿ ಸ್ವಂತ ಮನೆ, ಹೆಂಡತಿಯ ಹೆಸರಲ್ಲಿ ವಿದ್ಯಾನಗರದಲ್ಲಿ ಖಾಲಿ ಸೈಟು ಇದೆ. ಹೆಂಡತಿ ಕ್ಯಾತಸಂದ್ರದ ಖಾಸಗಿ ಶಾಲೆಯಲ್ಲಿ ಗಣಿತ ಶಿಕ್ಷಕಿ. ಕಳ್ಳನಿಗೆ ಕೊಟ್ಟರೂ ಲೆಕ್ಕ ಮಾಡಿಕೊಡಬೇಕು ಎನ್ನುವ ಲೆಕ್ಕಾಚಾರದ ಸ್ವಾಮಿ ಲೆಕ್ಕ ಹಾಕಿಯೇ ಗಣಿತದ ಶಿಕ್ಷಕಿಯನ್ನು ಮದುವೆಯಾದ ಎಂದು ಹತ್ತಿರದ ಸಂಬಂಧಿಕರೇ ಆಡಿಕೊಳ್ಳುತ್ತಿದ್ದರು.


ಕೌಂಟರಿನಲ್ಲಿರಶ್ಶ್ ಇಲ್ಲದ ದಿನ ಶಾರ್ಟ್ ಹೇಗೆ ಬಂತು ಎಂದು ಸ್ವಾಮಿಗೆ ಚಿಂತೆಯಾಗಿತ್ತು. ಪ್ರತಿಯೊಂದು ಚೆಕ್ಕನ್ನು ನೋಡಿ, ಯಾರಿಗೆಕೊಟ್ಟೆ, ಹೇಗೆ ಕೊಟ್ಟೆ ನೆನಪಿಸಿಕೊಳ್ಳಲು ಯತ್ನಿಸಿದರು. ಹಣ ಪಡೆದ ಚಲನ್‌ಗಳನ್ನು ಕೂಡಿಸಿದರು, ಗುಣಿಸಿದರು. ಎಲ್ಲವೂ ಸರಿಯಿತ್ತು. ಬೆಳಿಗ್ಗಿನಿಂದ ನಡೆದದ್ದನ್ನೆಲ್ಲ ನೆನಪಿಸಿಕೊಂಡರು. ಹೌಸ್‌ ಕೀಪರ್‌ ಜಯಮ್ಮ ಕೆಲವು ದಿನಗಳಿಂದ ತಡವಾಗಿ ಬರುತ್ತಿದ್ದರು. ಬೆಳಿಗ್ಗೆ ಹನ್ನೊಂದು ಗಂಟೆಗೆ ಕ್ಯಾಷ್‌ಕ್ಯಾಬಿನ್ ಹತ್ತಿರ ಬಂದು ʼಕ್ಲೀನ್‌ಮಾಡ್ಲಾʼ ಎಂದು ಕೇಳಿದ್ದರು. ಕ್ಯಾಬಿನ್‌ನಲ್ಲಿ ಮೂರು ದಿನಗಳಿಂದ ಕಸಬಿದ್ದಿತ್ತು. ಹಿಂದಿನ ದಿನ ಜಯಮ್ಮ ಕೇಳಿದಾಗಬೇಡ ಎಂದಿದ್ದರು. ಜಯಮ್ಮ ಕೇಳುವ ಹೊತ್ತಲ್ಲಿ ಕೌಂಟರ್ ಮುಂದೆ ಗ್ರಾಹಕರಿರಲಿಲ್ಲ. ಸಾಮಾನ್ಯವಾಗಿ ಸ್ವಾಮಿಕ್ಯಾಬಿನ್ನಿಂದ ಹೊರಗೆ ಬರುತ್ತಿರಲಿಲ್ಲ. ಜಯಮ್ಮನ ಮೇಲೆ ನಂಬಿಕೆ ಇದ್ದುದರಿಂದ ʼಹುʼಎಂದು ಕ್ಯಾಬಿನ್ನಿಂದಾಚೆ ಬಂದರು. ಜಯಮ್ಮ ಗುಡಿಸಿ ಒರೆಸುವವರೆಗೆ ಬಾಗಿಲಲ್ಲೇನಿಂತಿದ್ದರು.

 ಸ್ವಾಮಿ ಹೊರಗೆ ನಿಂತು ನೋಡುತ್ತಿದ್ದುದರಿಂದ ಜಯಮ್ಮ ಕೌಂಟರಿನಿಂದ ನೋಟು ಎತ್ತಿಕೊಳ್ಳಲು ಸಾಧ್ಯವೇ ಇರಲಿಲ್ಲ. ಜಯಮ್ಮ ಬರುವ ಸ್ವಲ್ಪ ಹೊತ್ತಿನ ಮುಂಚೆ ಕಂತೆ ಬಿಚ್ಚುವಾಗ ದಾರ ತುಂಡಾಗಿ ನೋಟುಗಳು ಕೆಳಕ್ಕೆ ಬಿದ್ದಿತ್ತು. ಬಿದ್ದ ನೋಟುಗಳನ್ನು ಬಗ್ಗಿ ಎತ್ತಿಕೊಂಡಿದ್ದರು. ಆಗ ನೋಟೊಂದು ಉಳಿದಿರಬೇಕು. ಅದು ಜಯಮ್ಮನಿಗೆ ಸಿಕ್ಕಿರಬಹುದೆನ್ನಿಸಿತು.


 ಆಗಲೇ ಬಹಳ ತಡವಾಗಿತ್ತು. ಬ್ಯಾಂಕಲ್ಲಿ ಮ್ಯಾನೇಜರ್ ಮತ್ತು ಅಸಿಸ್ಟೆಂಟ್ ಮ್ಯಾನೇಜರನ್ನು ಬಿಟ್ಟು ಉಳಿದವರೆಲ್ಲ ಹೊರಟುಹೋಗಿದ್ದರು. ಜಯಮ್ಮ ಎತ್ತಿಕೊಂಡಿದ್ದರೆ ಸಿಸಿಟಿವಿಯಲ್ಲಿ ಕಂಡೇ ಕಾಣುತ್ತದೆ. ಅವಳ ಬುದ್ದಿ ಮ್ಯಾನೇಜರ್‌ಗೂ ತಿಳಿಯುತ್ತದೆ. ಹುಡುಕುತ್ತಾ ಕೂರುವುದರಲ್ಲಿ ಅರ್ಥವಿಲ್ಲ ಎಂದು ಕೊಂಡುಕ್ಯಾಷ್‌ಕ್ಯಾಬಿನ್ ಬಂದ್ ಮಾಡಿ ಮ್ಯಾನೇಜರ್‌ ಚೇಂಬರ್‌ನತ್ತ ನಡೆದರು.

 * * * *

  ಮ್ಯಾನೇಜರ್‌ ಚಂದ್ರನ್‌ಗೆ ತಲೆತಿನ್ನುವ ಕೆಲಸಗಳು ಬೇಕಾದಷ್ಟಿದ್ದವು. ವಾರ್ಷಿಕ ಲೆಕ್ಕಾಂತ್ಯಕ್ಕೆ ಹತ್ತೇ ದಿನಗಳು ಉಳಿದಿದ್ದವು. ವಸೂಲಾಗದ ಸಾಲಗಳ ಬೆನ್ನು ಬಿದ್ದು, ಎನ್‌ಪಿಎ ಹೆಚ್ಚಾಗದಂತೆ ತಡೆಯಬೇಕಾಗಿತ್ತು. ಠೇವಣಿ ಸಂಗ್ರಹವೂ ನಿರೀಕ್ಷಿತ ಮಟ್ಟದಲ್ಲಿರದೆ ಮೇಲಧಿಕಾರಿಗಳಿಂದ ಪದೇ ಪದೇ ಫೋನು ಬರುತ್ತಿದ್ದು, ಸಮಜಾಯಿಷಿ ಹೇಳುವುದರಲ್ಲೇ ಹೈರಾಣಾಗುತ್ತಿದ್ದರು.


ಶಿವಸ್ವಾಮಿ ಚೇಂಬರಿನೊಳಗಡೆ ಬಂದಾಗ ಮೂರನೇ ಕಂತನ್ನು ಕಟ್ಟದ ಸುಸ್ತಿದಾರನೊಡನೆ ಚಂದ್ರನ್‌ ಜೋರಾಗಿ ಮಾತಾಡುತ್ತಿದ್ದರು. ಆತ ಸಾಲದ ಕಂತು ಕಟ್ಟದೆ ಇಂದು, ನಾಳೆ ಎಂದು ಸತಾಯಿಸುತ್ತಿದ್ದ. ನಾಲ್ಕೈದು ದಿನಗಳೊಳಗೆ ಸಾಲದ ಕಂತನ್ನು ಕಟ್ಟಿಸದಿದ್ದರೆ ಲಕ್ಷಾಂತರದ ಮೊತ್ತವನ್ನು ಅನುತ್ಪಾದಕವೆಂದು ಪರಿಗಣಿಸಲಾಗುತ್ತಿತ್ತು. ಇದರಿಂದ ದಕ್ಷ ಮ್ಯಾನೇಜರ್‌ ಎಂದು ಹೆಸರು ಮಾಡಿದ್ದ ಚಂದ್ರನ್ ಮೇಲಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗುತ್ತಿದ್ದರು; ವರ್ಗವೂ ಆಗುತ್ತಿತ್ತು.


ಚಂದ್ರನ್‌ ಯಾವಾಗಲೂ ಗ್ರಾಹಕರ ಹತ್ತಿರ ನಾಜೂಕಾಗಿಯೇ ಮಾತನಾಡುವವರು. ಅದಕ್ಕೆ ಸ್ಥಳೀಯರಲ್ಲದ್ದು ಒಂದು ಕಾರಣವಾದರೆ ಕೆಳ ವರ್ಗದಿಂದ ಬಂದ ಹಿನ್ನೆಲೆ ಮತ್ತೊಂದು ಕಾರಣ. ಆದರೆ ಈ ಬಾರಿ ಸೈರಣೆ ಕಳೆದುಕೊಂಡಿದ್ದರು. ಸುಸ್ತಿದಾರ ಉದ್ದೇಶಪೂರ್ವಕವಾಗಿ ಹಣ ಕಟ್ಟುತ್ತಿಲ್ಲವೆಂದು ಗೊತ್ತಾಗಿತ್ತು. ಆದ್ದರಿಂದ ದನಿ ಏರಿಸಿ ಮಾತನಾಡುತ್ತಿದ್ದರು. 

ಚಂದ್ರನ್ ಪಕ್ಕದಲ್ಲಿ ಬಂದು ನಿಂತ ಸ್ವಾಮಿಯನ್ನು ನೋಡಿದರು. ಅವರಿಗೆ ಕೂರಲು ಹೇಳಿ ಸುಸ್ತಿದಾರರನಿಗೆ ಹೇಳಬೇಕಾದ್ದನ್ನು ಖಡಕ್ಕಾಗಿ ಹೇಳಿ ಮುಗಿಸಿದರು. ಸ್ವಾಮಿ ಕೆಲಸದ ಸಮಯ ಮೀರಿದ ಮೇಲೆ ಚೇಂಬರಿಗೆ ಬಂದಿದ್ದು ಚಂದ್ರನ್‌ಗೆ ಆಶ್ಚರ್ಯ ತಂದಿತ್ತು. ಅಟೆಂಡೆನ್ಸ್ ಹಾಕುವಾಗ ಗುಡ್ ಮಾರ್ನಿಂಗ್ ಹೇಳುವುದು ಬಿಟ್ಟರೆ ಸ್ವಾಮಿ ಮ್ಯಾನೇಜರ್‌ ಚೇಂಬರಿಗೆ ಬರುವುದು ಅಪರೂಪ. ಸುಸ್ತಿದಾರನ ಹತ್ತಿರ ಮಾತಾಡಿ ತಲೆಕೆಟ್ಟಿದ್ದರೂ ಸಮಾಧಾನ ವಹಿಸಿ ಬಂದ ಕಾರಣವನ್ನು ಕೇಳಿದರು. ಸ್ವಾಮಿ ಐನೂರು ಶಾರ್ಟ್ ಬಂದಿರುವುದನ್ನು ಹೇಳಿದರು. ಬೆಳಿಗ್ಗೆ ಜಯಮ್ಮ ಕ್ಯಾಬಿನ್‌ನೊಳಗೆ ಬಂದುದನ್ನೂ, ಅವರು ಬರುವ ಸ್ವಲ್ಪ ಸಮಯದ ಮೊದಲು ಕೈ ಜಾರಿ ಐನೂರರ ನೋಟುಗಳು ಕೆಳಗೆ ಬಿದ್ದಿದ್ದನ್ನೂ ಹೇಳಿದರು. ಜಯಮ್ಮ ಕೆಳಗೆ ಬಿದ್ದಿದ್ದನ್ನು ಎತ್ತಿಕೊಂಡಿರಬಹುದು ಎಂದು ಅನುಮಾನ ವ್ಯಕ್ತ ಪಡಿಸಿದರು.


ಚಂದ್ರನ್‌ಗೆ ಇಕ್ಕಟ್ಟಿಗೆ ಸಿಕ್ಕಿದಂತಾಯಿತು. ಸ್ವಾಮಿ ತುಂಬಾ ಜಾಗ್ರತೆಯಿಂದ ಕೆಲಸ ಮಾಡಿ, ತಾನೂ ಹಣ ಕಳೆದುಕೊಳ್ಳದೆ, ಗ್ರಾಹಕರು ಅಪ್ಪಿತಪ್ಪಿ ಹೆಚ್ಚು ಕೊಟ್ಟರೆ ವಾಪಾಸು ಮಾಡುವ ವ್ಯಕ್ತಿ. ಈವರೆಗೆ ಯಾರ ಮೇಲೂ ಅಪವಾದ ಹೊರಿಸಿದವರಲ್ಲ. ಮನಸ್ಸಿಟ್ಟು ಕೆಲಸವನ್ನು ಮಾಡುತ್ತಿದ್ದರು. ಕ್ಯಾಷ್ ಹೊರತಾಗಿ ಇತರ ಕೆಲಸಗಳನ್ನು ಕೊಟ್ಟರೆ ಸಿಡುಕುವುದಿತ್ತು. ಆದ್ದರಿಂದ ಅವರನ್ನೇ ಹೆಚ್ಚಾಗಿ ಕ್ಯಾಷಲ್ಲಿ ಕೂರಿಸುತ್ತಿದ್ದರು. ನಿದ್ದೆ ಬರುವವರಿಗೆ ಹಾಸಿಗೆ ಹಾಸಿ ಕೊಟ್ಟಂತೆ ಕ್ಯಾಷ್ ಮಾಡಲು ಇಷ್ಟವಿಲ್ಲದ ಇತರರಿಗೆ ಇದರಿಂದ ಆರಾಮವಾಗಿತ್ತು. ಆದರೂ ಸ್ವಾಮಿ ಜಯಮ್ಮನ ಮೇಲೆ ಹೊರಿಸಿದ ಆರೋಪವನ್ನು ಒಪ್ಪುವ ಹಾಗಿರಲಿಲ್ಲ. 

ಚಂದ್ರನ್‌ ತುಮಕೂರಿಗೆ ಬ್ರಾಂಚ್ ಮ್ಯಾನೇಜರ್‌ರಾಗಿ ಬಂದ ಹೊಸದರಲ್ಲಿ ಜಯಮ್ಮ ಸ್ವೀಪರ್ ಆಗಿ ಕೆಲಸ ಮಾಡುತ್ತಿದ್ದರು. ಅದೇ ವರ್ಷ ಸ್ವೀಪರ್‌ಗಳನ್ನು ಹೌಸ್ ಕೀಪರುಗಳಾಗಿ ಬಡ್ತಿ ನೀಡುವ ಸುತ್ತೋಲೆ ಬಂದಿತ್ತು. ಚಂದ್ರನ್‌ಗೆ ಜಯಮ್ಮನ ಬಗ್ಗೆ ಹೆಚ್ಚೇನೂ ತಿಳಿದಿರಲಿಲ್ಲ. ಎಲ್ಲರ ಜೊತೆಚೆನ್ನಾಗಿರುವುದನ್ನೂ, ಹೇಳಿದ ಕೆಲಸವನ್ನು ಚಾಚೂ ತಪ್ಪದೆ ಮಾಡುತ್ತಿರುವುದನ್ನೂ ಗಮನಿಸಿದ್ದರು. ಆದರೆ ಆ ದಿನ ನಡೆದ ಘಟನೆ ಜಯಮ್ಮನ ಮೇಲಿದ್ದ ಅಭಿಪ್ರಾಯವನ್ನು ಬದಲಾಯಿಸಿತು.


ದಿನಾ ಬೆಳಿಗ್ಗೆ ಮ್ಯಾನೇಜರ್‌ ಅಥವಾ ಅಸಿಸ್ಟೆಂಟ್ ಮ್ಯಾನೇಜರ್ ಬ್ಯಾಂಕ್‌ ಓಪನ್ ಮಾಡುವ ಸಮಯಕ್ಕೆ ಸ್ವೀಪರ್ ಕೂಡಾ ಬರುತ್ತಾರೆ. ಅಧಿಕಾರಿಗಳು ಬಾಗಿಲು ತೆರೆದು ತಮ್ಮ ಪಾಡಿಗೆ ಕೆಲಸ ಮಾಡುತ್ತಿದ್ದರೆ, ಸ್ವೀಪರ್ ಗುಡಿಸಿ, ಒರೆಸಿ ಸ್ವಚ್ಚ ಮಾಡುತ್ತಾರೆ. ಅಂದು ಬೆಳಿಗ್ಗೆ ಜಯಮ್ಮ ಕೌಂಟರ್‌ಗಳನ್ನು ಕ್ಲೀನ್ ಮಾಡಿ ಸ್ಟ್ರಾಂಗ್‌ರೂಮ್‌ ಗುಡಿಸಲು ಹೋದವರು ಕೆಲವೇ ನಿಮಿಷಗಳಲ್ಲಿ ಹೊರಬಂದರು. ನೇರವಾಗಿ ಮ್ಯಾನೇಜರ್‌ ಚೇಂಬರಿಗೆ ನುಗ್ಗಿ ತಿಜೋರಿಯ ಮೇಲ್ಗಡೆ ನೋಟಿನ ಕಟ್ಟುಇದೆ ಎಂದು ಏದುಸಿರು ಬಿಡುತ್ತಾ ಹೇಳಿದರು. 


ಚಂದ್ರನ್‌ಗೆ ಆಶ್ಚರ್ಯವಾಯಿತು. ಹಾಗಾಗಲು ಸಾಧ್ಯವೇ ಇರಲಿಲ್ಲ. ಪ್ರತಿದಿನ ಸಂಜೆ ಕ್ಯಾಷಿಯರ್‌ಟ್ಯಾಲಿ ಮಾಡಿಕೊಟ್ಟ ಕ್ಯಾಷನ್ನು ಎಣಿಸಿ, ನೋಟಿನ ಕಟ್ಟುಗಳನ್ನು ವಿಂಗಡನೆ ಮಾಡಿ, ಸ್ಟ್ರಾಂಗ್‌ ರೂಮಿನ ತಿಜೋರಿಯಲ್ಲಿಟ್ಟು ಜಾಯಿಂಟ್‌ಕಸ್ಟೋಡಿಯನ್ಸ್ ಲಾಕ್ ಮಾಡುತ್ತಾರೆ. ಡಬಲ್ ಲಾಕ್ ಪುಸ್ತಕದಲ್ಲಿ ಬರೆದಿರುವ ನಗದಿಗೂ ತಿಜೋರಿಯಲ್ಲಿರುವ ಕ್ಯಾಷ್‌ಗೂ ಹೊಂದಿಕೆಯಾಗಿದೆ ಎನ್ನುವುದನ್ನು ಖಾತರಿ ಪಡಿಸಿಕೊಳ್ಳುತ್ತಾರೆ. ಸ್ಟ್ರಾಂಗ್‌ರೂಮಿನಲ್ಲಿ ನಗದುಇಟ್ಟ ಮೇಲೆ ಅವರೇ ಜವಾಬ್ದಾರರು. ಕ್ಯಾಷಿಯರಿಗೂ ಅದಕ್ಕೂ ಸಂಬಂಧವಿಲ್ಲ.

ಜಾಯಿಂಟ್‌ಕಸ್ಟೋಡಿಯನ್ಸ್ ಮಾರನೇ ದಿನ ವ್ಯವಹಾರ ಶುರುವಾಗುವ ಮೊದಲು, ಮತ್ತೊಮ್ಮೆ ನಗದನ್ನು ಪರಿಶೀಲಿಸಿ ಕ್ಯಾಷಿಯರ್‌ಗೆ ಅಗತ್ಯವಿರುವಷ್ಟು ಕೊಡುತ್ತಾರೆ. ಈ ನಡುವೆ ತಿಜೋರಿಯಲ್ಲಿಟ್ಟ ನಗದಿನಲ್ಲಿ ವ್ಯತ್ಯಾಸ ಕಂಡರೆ ಮೇಲಧಿಕಾರಿಗಳಿಗೆ ರಿಪೋರ್ಟ್ ಮಾಡಬೇಕಾಗುತ್ತದೆ. ಹೆಚ್ಚು ಕಮ್ಮಿ ಆದಲ್ಲಿ ತೀವ್ರಕ್ರಮ ಕೈಗೊಳ್ಳಲಾಗುತ್ತದೆ. ಹಿಂದಿನ ದಿನ ಚಂದ್ರನ್ ಗೋಪಿನಾಥರ ಜೊತೆಯಲ್ಲಿ ನೋಟಿನ ಕಂತೆಗಳೆಲ್ಲವನ್ನೂ ಪರಿಶೀಲಿಸಿ ತಿಜೋರಿಯಲ್ಲಿಟ್ಟು ಬಂದಿದ್ದರು. ಜತೆಯಲ್ಲೆ ಸ್ಟ್ರಾಂಗ್‌ರೂಮಿಗೆ ಬೀಗ ಹಾಕಿದ್ದರು. ಗೊಂದಲಕ್ಕೊಳಗಾದ ಚಂದ್ರನ್ ಗೋಪಿನಾಥರನ್ನು ಕರೆದರು. ಇಬ್ಬರೂ ಸೇಫ್ ರೂಮಿಗೆ ಹೋದರು. ಜಯಮ್ಮ ಹೇಳಿದ್ದು ಸರಿಯಾಗಿತ್ತು. ಕಬ್ಬಿಣದ ತಿಜೋರಿಯ ಮೇಲೆ ನೂರರಕಟ್ಟಿತ್ತು. ಏನಿದು ಎನ್ನುವಂತೆ ಚಂದ್ರನ್ ಗೋಪಿನಾಥರ ಮುಖ ನೋಡಿದರು. ಗೋಪಿನಾಥ್‌ತಲೆ ತಗ್ಗಿಸಿದರು.


ಅವರು ಸೇಫ್‌ನಲ್ಲಿರುವ ವೇಳೆಯಲ್ಲಿ ಫೋನ್ ಬಂದಿತ್ತು. ಫೋನಲ್ಲಿ ಮಾತನಾಡುತ್ತಾ ಗೋಪಿನಾಥ್ ನೋಟಿನ ಕಂತೆಯನ್ನುತಿಜೋರಿಯಲ್ಲಿಡಲು ಮರೆತಿದ್ದರು. ಸೇಫ್ ರೂಮಿನ ಒಳಗೆ ಸಿಸಿ ಕ್ಯಾಮರಾ ಇರಲಿಲ್ಲ. ಜಯಮ್ಮ ನೋಟಿನಕಟ್ಟನ್ನು ಎತ್ತಿಕೊಂಡಿದ್ದರೆ ಅವರ ಮೇಲೆ ಅನುಮಾನ ಬರುತ್ತಿರಲಿಲ್ಲ. ಜಾಯಿಂಟ್‌ ಕಸ್ಟೋಡಿಯನ್ಸ್ ಶಿಕ್ಷೆಗೆ ಗುರಿಯಾಗುತ್ತಿದ್ದರು. ಜಯಮ್ಮ ಇಬ್ಬರನ್ನೂ ಗಂಡಾಂತರದಿಂದ ಪಾರು ಮಾಡಿದ್ದರು. ಚಂದ್ರನ್‌ಗೆ ಜಯಮ್ಮನ ಪ್ರಾಮಾಣಿಕತೆ ಮೆಚ್ಚಿಗೆಯಾಯಿತು. ಅವರೇ ಮುತುವರ್ಜಿ ವಹಿಸಿ ಆಕೆಗೆ ಹೌಸ್‌ಕೀಪರ್ ಆಗಿ ಭಡ್ತಿ ನೀಡಲು ರೆಕಮೆಂಡ್ ಮಾಡಿದರು. ಪ್ರಮೋಷನ್ ಸಿಕ್ಕ ಬಳಿಕ ತಮ್ಮಲ್ಲೇ ಉಳಿಸಿಕೊಳ್ಳಲು ಪ್ರಯತ್ನ ಪಟ್ಟು ಯಶಸ್ವಿಯೂ ಅದರು. 


ಚಂದ್ರನ್‌ಗೆ ಜಯಮ್ಮನಿಂದ ಅನುಕೂಲಗಳೂ ಇದ್ದವು. ಚಂದ್ರನ್‌ಗೆ ಬಂದ ಹೊಸತರಲ್ಲಿ ಕನ್ನಡ ಬರುತ್ತಿರಲಿಲ್ಲ. ಸಿಬ್ಬಂದಿ ಇಂಗ್ಲಿಷಲ್ಲಿ ಮಾತನಾಡುತ್ತಿದ್ದುದರಿಂದ ತೊಂದರೆ ಇರಲಿಲ್ಲ; ಗ್ರಾಹಕರಜೊತೆ ವ್ಯವಹರಿಸಲು ಕಷ್ಟವಾಗುತ್ತಿತ್ತು. ಜಯಮ್ಮ ವಾಸವಾಗಿದ್ದ ಪೂರ್ ಹೌಸ್‌ ಕಾಲೋನಿಯಲ್ಲಿ ತಮಿಳರ ಕುಟುಂಬ ಇದ್ದುದರಿಂದ ಆಕೆಗೆ ಅಲ್ಪ, ಸ್ವಲ್ಪ ತಮಿಳು ಬರುತ್ತಿತ್ತು. ಚಂದ್ರನ್‌ ಜಯಮ್ಮನ ಜೊತೆ ಮಾತಾಡುತ್ತಾ ಕನ್ನಡಕಲಿತು ಕೊಂಡರು. ಇದಲ್ಲದೆ ಜಯಮ್ಮನಿಂದ ಇನ್ನೊಂದು ಮುಖ್ಯವಾದ ಅನುಕೂಲವೂ ಇತ್ತು. ಜಯಮ್ಮ ಲೋಕಲ್‌ ಆಗಿದ್ದರಿಂದ ಎಲ್ಲರ ಬಗೆಗೂ ಸಾಕಷ್ಟು ತಿಳಿದಿತ್ತು. ಸಾಲ ಕೊಡುವ ಮೊದಲು ಅನುಮಾನ ಬಂದರೆ ಜಯಮ್ಮನ ಹತ್ತಿರ ವಿಚಾರಿಸುತ್ತಿದ್ದರು. ಜಯಮ್ಮ ಅವರಿವರಲ್ಲಿ ಕೇಳಿ ತಿಳಿದು ಚಂದ್ರನ್‌ಗೆ ಹೇಳುತ್ತಿದ್ದರು.

ಸ್ವಾಮಿಚೇಂಬರ್‌ಗೆ ಬರುವ ಮೊದಲು ಫೋನಲ್ಲಿ ಮಾತನಾಡಿದ್ದ ಸುಸ್ತಿದಾರ ಇತ್ತೀಚೆಗೆದೊಡ್ಡ ಕಾರು ಕೊಂಡುಕೊಂಡ ಮಾಹಿತಿಯನ್ನು ಜಯಮ್ಮನೇ ಕೊಟ್ಟಿದ್ದರು. ಆದ್ದರಿಂದಲೇ, ಕಂತುಕಟ್ಟಲು ಆತ ಉದ್ದೇಶ ಪೂರ್ವಕ ಉದಾಸೀನ ಮಾಡುತ್ತಾನೆನ್ನುವುದು ಚಂದ್ರನ್‌ಗೆ ಗೊತ್ತಾಗಿತ್ತು. ಸ್ವಾಮಿ ಹೇಳಿದ್ದರ ಬಗ್ಗೆ ಚಂದ್ರನ್‌ ಯೋಚಿಸಿದರು. ಜಯಮ್ಮತೆಗೆದುಕೊಂಡಿರಲಿಕ್ಕಿಲ್ಲವೆಂದರೆ ಸ್ವಾಮಿ ಒಪ್ಪುವವರಲ್ಲ. ಐನೂರುರುಪಾಯಿ ಬಗ್ಗೆ ಅಷ್ಟೊಂದುತಲೆ ಕೆಡಿಸಿಕೊಳ್ಳುವುದು ಯಾಕೆ ಎಂದು ಹೇಳುವಂತಿಲ್ಲ. ಬ್ಯಾಂಕಿನ ನಿಯಮಗಳ ಪ್ರಕಾರ ಹಣಕಾಸಿನ ವಿಷಯದಲ್ಲಿ ನೂರಾದರೂ, ಸಾವಿರವಾದರೂ ಒಂದೇ. ಹೆಚ್ಚು ಕಡಿಮೆಯಾದರೆ ಶಿಕ್ಷಾರ್ಹ ಅಪರಾಧ. 

ಸ್ವಾಮಿ ಸಿಸಿ ಟಿವಿಯಲ್ಲಿ ಪರೀಕ್ಷಿಸಲು ಅಪೇಕ್ಷಿಸುತ್ತಾರೆಂದು ಚಂದ್ರನ್ ತಿಳಿದಿತ್ತು. ದಿನದಟ್ರಾನ್ಸಾಕ್ಷನ್‌ ರಿವೈಂಡ್ ಮಾಡುವುದು ಕಷ್ಟವೂ ಆಗಿರಲಿಲ್ಲ. ಜಯಮ್ಮ ನೋಟನ್ನು ಎತ್ತಿಕೊಂಡಿದ್ದುಕಂಡರೆ ಫಜೀತಿಯಾಗುತ್ತದೆನ್ನುವುದನ್ನು ಚಂದ್ರನ್ ಬಲ್ಲರು. ಆದರೆ ಸ್ವಾಮಿಯನ್ನು ಸಮಾಧಾನ ಪಡಿಸಲು ಬೇರೆದಾರಿ ಇರಲಿಲ್ಲ.  ಒಲ್ಲದ ಮನಸ್ಸಿನಿಂದ ಸಿಸಿಟಿವಿಯಲ್ಲಿ ದಿನದ ಕಲಾಪಗಳನ್ನು ನೋಡಲುಪಕ್ರಮಿಸಿದರು.


ಜಯಮ್ಮಕ್ಯಾಷ್‌ಕೌಂಟರಿನ ಒಳಗೆ ಹೋಗುವಲ್ಲಿಂದ ದೃಶ್ಯಗಳು ತೆರೆಯ ಮೇಲೆ ಕಂಡವು. ಸ್ವಾಮಿಕ್ಯಾಷಿಂದ ಹೊರಬಂದು ಬಾಗಿಲ ಹತ್ತಿರ ನಿಂತಿದ್ದು, ಜಯಮ್ಮ ಗುಡಿಸಿ ಕಸವನ್ನು ಬುಟ್ಟಿಗೆ ಸುರಿದಿದ್ದು, ಕೌಂಟರ್ ಒರೆಸಿದ್ದು ಸ್ಪಷ್ಟವಾಗಿ ಕಾಣುತ್ತಿತ್ತು. ಗುಡಿಸುವಾಗ ಜಯಮ್ಮನ ಬೆನ್ ನುತೋರುತ್ತಿತ್ತು. ಸ್ವಾಮಿ ತಿರುಗಾ, ತಿರುಗಾ ಹಾಕಿಸಿ ನೋಡಿದರು. ಜಯಮ್ಮ ನೋಟುಎತ್ತಿಕೊಂಡಿದ್ದು ಕಾಣಲೇಇಲ್ಲ. 


 ಸ್ವಾಮಿಗೆ ಮುಖಭಂಗವಾದಂತಾಯಿತು. ಜಯಮ್ಮನ ಮೇಲೆ ಅಪವಾದ ಹೊರೆಸಿದ್ದಕ್ಕೆ ಪುರಾವೆ ಇರಲಿಲ್ಲ. ಸಿಟ್ಟಿನಲ್ಲೂ, ಬೇಸರದಲ್ಲೂ“ ಸಾರಿ ಸರ್” ಎಂದಷ್ಟೇ ಹೇಳಿ ಹೊರ ನಡೆದರು. ಅವರು ಸಿಟ್ಟಿಂದ ಒದ್ದಿದ್ದಕ್ಕೆ ಬೈಕ್ʼಕುಂಯ್ಯೋʼಎನ್ನುತ್ತಾ ಸ್ಟಾರ್ಟ್ ಆದ ಶಬ್ದ ಕೇಳಿಸಿತು. 

ಸ್ವಾಮಿ ಹೋದ ನಂತರ ವರ್ಷಾಂತ್ಯದ ಕೆಲಸದಲ್ಲಿ ತೊಡಗಿಕೊಳ್ಳುವುದು ಚಂದ್ರನ್‌ಗೆ ಕಷ್ಟವಾಯಿತು.ಸ್ವಾಮಿತಲೆಗೆ ಹುಳ ಬಿಟ್ಟಿದ್ದರು. ಚಂದ್ರನ್‌ ಜಯಮ್ಮನ ಕೆಲಸದಲ್ಲಿ ಯಾವ ಲೋಪವನ್ನೂ ಕಂಡಿರಲಿಲ್ಲ. ಹಿಂದಿದ್ದ ಮ್ಯಾನೇಜರ್‌ಗಳೂ ಒಳ್ಳೆಯ ಅಭಿಪ್ರಾಯವನ್ನೇ ಕೊಟ್ಟಿದ್ದರು. ಆದರೆ ಆಕೆಗೆ ಹಣದ ತಾಪತ್ರಯವಿರುವುದು ಅವರಿಗೆ ತಿಳಿದಿತ್ತು. ಜಯಮ್ಮನಿಗೆ ಮಗು ಹುಟ್ಟಿದ ಮೂರು ವರ್ಷಕ್ಕೆ ಗಂಡತೀರಿಕೊಂಡಿದ್ದ. ಜಯಮ್ಮಅವರಿವರ ಮನೆ ಕೆಲಸ ಮಾಡಿ ಮಗು ಮತ್ತು ಅತ್ತೆಯನ್ನು ಸಾಕುತ್ತಿದ್ದರು. ಆಕೆ ಹಿಂದಿದ್ದ ಮ್ಯಾನೇಜರೊಬ್ಬರ ಮನೆಗೆ ಕೆಲಸಕ್ಕೆ ಹೋಗುತ್ತಿದ್ದರು. ಅವರು ಜಯಮ್ಮನ ಕಷ್ಟಕ್ಕೆ ಮರುಗಿ, ಬ್ಯಾಂಕಲ್ಲಿ ಸ್ವೀಪರ್ ಕೆಲಸ ಕೊಡಿಸಿದ್ದರು. ಎರಡು ವರ್ಷಗಳ ಹಿಂದೆ ಮಗಳ ಮದುವೆ ಆಗಿತ್ತು. ಆಗ ಬ್ಯಾಂಕಿನಿಂದ ಸಾಲ ಪಡೆದಿದ್ದಲ್ಲದೆ ಇತರ ಸಾಲಗಳೂ ಇದ್ದವು. ಕೆಲವು ತಿಂಗಳ ಹಿಂದೆ ಅತ್ತೆಕಾಯಿಲೆಯಿಂದ ಆಸ್ಪತ್ರೆ ಸೇರಿದಾಗ ಜಯಮ್ಮನ ಹತ್ತಿರ ದುಡ್ಡಿರಲಿಲ್ಲ. ಸಹೋದ್ಯೋಗಿಗಳು ಅಷ್ಟಿಷ್ಟು ಹಣಕಾಸಿನ ನೆರವು ನೀಡಿದ್ದರು. 

ಹತ್ತು ದಿನಗಳ ಹಿಂದೆ ಜಯಮ್ಮ “ಮಗಳು ಬಂದಿದ್ದಾಳೆ, ಒಂದು ವಾರ ರಜೆ ಬೇಕು” ಎಂದು ಚಂದ್ರನ್‌ಗೆ ಹೇಳಿದ್ದರು. ಅತ್ತೆ ಆಸ್ಪತ್ರೆಗೆ ಸೇರಿದ್ದರಿಂದ ಮಗಳ ಹೆರಿಗೆ ಗಂಡನ ಊರಲ್ಲೇ ಆಗಿತ್ತು. ಬಾಣಂತಿ, ಮಗುವನ್ನು ನೋಡಿಕೊಳ್ಳುವ ಉದ್ದೇಶದಿಂದ ಜಯಮ್ಮರಜೆ ಕೇಳಿದ್ದರು. ಜಯಮ್ಮನಿಗೆ ರಜೆ ಮಂಜೂರು ಮಾಡಬೇಕಾದರೆ ಬದಲಿ ಕೆಲಸಗಾರರು ಬೇಕು. ಬ್ಯಾಂಕ್ ಅನುಮೋದಿಸಿದ ಪ್ಯಾನೆಲ್‌ನ ಸ್ವೀಪರ್‌ಗಳು ಯಾರೂ ಸಿಗಲಿಲ್ಲ. ಬೇರೆ ಕೆಲಸಗಳನ್ನು ಕೆಲ ದಿನಗಳ ಮಟ್ಟಿಗೆ ನಿಲ್ಲಿಸಬಹುದು ಅಥವಾ ಯಾರಿಂದಲೋ ಮಾಡಿಸಬಹುದು. ಆದರೆ ಗುಡಿಸಿ, ಒರೆಸುವ ಕೆಲಸ ಯಾರೂ ಮಾಡುವುದಿಲ್ಲ, ಮಾಡದೇ ಇರಲೂ ಆಗುವುದಿಲ್ಲ. ಆದ್ದರಿಂದ ಚಂದ್ರನ್‌ಜಯಮ್ಮನಿಗೆ “ಕ್ಲೀನ್ ಮಾಡಿ ಬಿಟ್ಟು ಹೋಗಿ, ಲೇಟಾಗಿ ಬಂದ್ರೂ ಪರವಾಯಿಲ್ಲ” ಎಂದಿದ್ದರು. ಅದರಂತೆತಡವಾಗಿ ಬರುತ್ತಿದ್ದ ಜಯಮ್ಮ ಅಂದೂ ಕೆಲಸ ಮುಗಿಸಿ ಹೋಗುವಾಗ “ ಬರ್ತೇನೆ ಸಾರ್” ಎಂದಿದ್ದರು. ಅಗ ಅವರ ಮುಖದಲ್ಲಿ ಆತಂಕ ಕಂಡಿರಲಿಲ್ಲ. ಹಣದ ಅಗತ್ಯವಿದ್ದುದರಿಂದ ಕೆಳಗೆ ಬಿದ್ದದ್ದನ್ನುಎತ್ತಿಕೊಂಡರೇ? ಹಾಗಿದ್ದರೆ ಸಿ ಸಿ ಟಿವಿಯಲ್ಲಿ ಕಾಣಲಿಲ್ಲವೇಕೆ? ಹತ್ತು ಸಾವಿರದ ಕಂತೆಗೆ ಆಸೆ ಪಡದವರು ಐನೂರು ಎತ್ತಿಕೊಳ್ಳುತ್ತಾರೆಯೇ? ಚಂದ್ರನ್‌ಗೆತಲೆಕೆಟ್ಟು ಹೋಯಿತು. ಬಹಳ ಜಾಗರೂಕತೆಯಿಂದಕ್ಯಾಷ್ ಮಾಡುವ ಸ್ವಾಮಿ ಜಯಮ್ಮ ಎತ್ತಿಕೊಂಡಿದ್ದಾರೆಂದು ಸುಮ್ಮನೆ ಹೇಳುವವರಲ್ಲ. ಹಾಗೆಂದು ಹೇಳಿದ್ದಕ್ಕೆ ಪುರಾವೆಯಿಲ್ಲದೆ ತೀರ್ಮಾನಕ್ಕೆ ಬರುವಂತಿಲ್ಲ.


ಜಯಮ್ಮನಿಗೆ ಕೇಳಿದರೆ ನಿಜ ತಿಳಿಯುತ್ತದೆ. ಆಕೆ ತೆಗೆದಿಲ್ಲ ಎಂದಾದರೆ ಚಿಂತೆಇಲ್ಲ. ತೆಗೆದಿದ್ದೇನೆ ಎಂದುಒಪ್ಪಿಕೊಂಡರೆ ಏನು ಮಾಡುವುದು? ಮುಚ್ಚಿಡುವಂತಿಲ್ಲ. ಖಡಕ್ ಮನುಷ್ಯನಾಗಿರುವ ಸ್ವಾಮಿ ರಿಪೋರ್ಟ್ ಮಾಡಿಎನ್ನುತ್ತಾರೆ. ಬೇಡ ಎಂದರೆ ಜಯಮ್ಮನನ್ನು ರಕ್ಷಿಸಿದಂತಾಗುತ್ತದೆ. ರಿಪೋರ್ಟ್ ಮಾಡಿದರೆ ಜಯಮ್ಮನ ಮೇಲೆ ಕ್ರಮ ಕೈಗೊಳ್ಳುವುದು ಗ್ಯಾರಂಟಿ. ಗೊಂದಲದಲ್ಲಿ ಸಿಲುಕಿದ ಚಂದ್ರನ್‌ಗೆ ʼಬೆಕ್ಕು ಹಾಲು ಕುಡಿದಿದ್ದಕ್ಕೆ ಮುಠ್ಠಾಳನೊಬ್ಬ ಅದರ ಹೇಲನ್ನು ದೂರಿದʼ ತಮಿಳುಗಾದೆ ನೆನೆದು ನಗು ಬಂತು.
 * * * * 

ಮ್ಯಾನೇಜರ್‌ ರಜೆ ಕೊಡಲಾಗುವುದಿಲ್ಲ ಎಂದು ಹೇಳಿದ್ದರಿಂದ ಜಯಮ್ಮತಡವಾಗಿ ಬ್ಯಾಂಕಿಗೆ ಹೋಗಿ ಬೇಗ, ಬೇಗ ಕೆಲಸ ಮುಗಿಸಿ ಮನೆ ಸೇರುತ್ತಿದ್ದರು. ರಜೆ ಸಿಕ್ಕದ್ದರಿಂದ ಬಾಣಂತಿ ಮಗಳು, ಮೊಮ್ಮಗಳೊಡನೆ ಹೆಚ್ಚು ಸಮಯ ಕಾಲ ಕಳೆಯಲೂ ಆಗುತ್ತಿರಲಿಲ್ಲ.ಮಗಳು ಅಮ್ಮನಒದ್ದಾಟ ಗಮನಿಸಿದ್ದಳು. ಬ್ಯಾಂಕು- ಮನೆ ಎಂದು ಓಡಾಡುವುದನ್ನು; ಅತ್ತೆಯ ಆರೈಕೆಗೆ ಕಷ್ಟ ಪಡುವುದನ್ನು; ದುಡ್ಡಿಗೆ ಪರದಾಡುವುದನ್ನು ಅರಿತಿದ್ದಳು. ತಾನಿದ್ದಷ್ಟು ದಿನವೂ ಅಮ್ಮನಿಗೆ ಕಷ್ಟವೆನ್ನುವುದು ಮನವರಿಕೆಯಾಗಿತ್ತು. ಗಂಡನ ಊಟ- ತಿಂಡಿಗೆ ತೊಂದರೆ ಎನ್ನುವ ನೆವ ಹೇಳಿ ತಿಂಗಳೊಪ್ಪತ್ತಿನಲ್ಲೇ ಹೊರಟು ನಿಂತಳು.

ಜಯಮ್ಮನಿಗೆ ಮಗಳು ಹೊರಡುವ ಕಾರಣದ ಅರಿವಾಗಿತ್ತು. ಅವಳು ಬಲವಂತ ಮಾಡಿ ನಿಲ್ಲಿಸುವ ಸ್ಥಿತಿಯಲ್ಲಿ ಇರಲಿಲ್ಲ. ಅದರೆ ಮೊಮ್ಮಗಳಿಗೆ ಏನನ್ನಾದರೂ ಹಾಕದೆ ಕಳಿಸುವಂತಿಲ್ಲ. ಬೆಳ್ಳಿಯ ಕಾಲ್ಗೆಜ್ಜೆ ಹಾಕುವ ಯೋಚನೆ ಮಾಡಿದರು. ಬ್ಯಾಂಕಿಗೆ ಚಿನ್ನ ಪರೀಕ್ಷಿಸಲು ಬರುವ ಆಚಾರಿಗೆ ತಿಂಗಳಿಗೆ ಐನೂರು ಕೊಡುತ್ತೇನೆಂದು ಒಪ್ಪಿಸಿ ಕಾಲ್ಗೆಜ್ಜೆಕೊಂಡರು. ಮಗಳನ್ನು ಗಂಡನ ಮನೆಗೆ ಬಿಟ್ಟು ಬರಬೇಕೆಂದಿತ್ತು. ಆದರೆ ಕಾಯಿಲೆ ಬಿದ್ದಿರುವ ಅತ್ತೆಒಬ್ಬರನ್ನೇ ಮನೆಯಲ್ಲಿ ಬಿಟ್ಟು ಹೋಗುವಂತಿರಲಿಲ್ಲ. 

ಬಸ್ ಚಾರ್ಜಿಗೂ ದುಡ್ಡುಕೊಡದೆ ಮಗಳನ್ನು ಕಳಿಸಿಕೊಡಲು ಜಯಮ್ಮನಿಗೆ ಇಷ್ಟವಿರಲಿಲ್ಲ. ಬ್ಯಾಂಕಿಗೆ ಬಂದುಖಾತೆ ತೆಗೆಸಿ ನೋಡಿದರೆ ಮಿನಿಮಮ್ ಬ್ಯಾಲನ್ಸ್ಕೂಡಾ ಇರಲಿಲ್ಲ. ಆಗಲೇ ಕೆಲವರಿಂದ ಸಾಲ ಪಡೆದಿದ್ದರಿಂದ ಮತ್ತೆ ಕೇಳುವ ಹಾಗೂ ಇರಲಿಲ್ಲ. 

ಇದೇ ಚಿಂತೆಯಲ್ಲಿ ಸ್ವಾಮಿಗೆಕ್ಯಾಬಿನ್ ಕ್ಲೀನ್ ಮಾಡಲೇ ಎಂದು ಕೇಳಿದ್ದರು. ಮೂರು ದಿನಗಳಿಂದ ಗುಡಿಸದೆ ಕ್ಯಾಬಿನಲ್ಲಿ ಕಸ ತುಂಬಿತ್ತು. ಸಾಮಾನ್ಯವಾಗಿ ಕ್ಯಾಷ್ ಬಿಟ್ಟೇಳದ ಸ್ವಾಮಿ ಒಪ್ಪಿ ಹೊರ ಬಂದಿದ್ದರು. ಕ್ಯಾಷ್‌ ಕೌಂಟರ್‌ನ ಕೆಳಗೆ ಕಾಗದದ ಕವರ್‌ಗಳು, ಪ್ಲಾಸ್ಟಿಕ್ ರ್ಯಾಪರ್ಸ್, ದಾರ, ರಬ್ಬರ್ ಬ್ಯಾಂಡ್‌ಗಳು ಬಿದ್ದಿದ್ದವು. ಅದರಲ್ಲೆ ಐನೂರರ ನೋಟು ಇತ್ತು. ಜಯಮ್ಮ ನಿಮಿಷವೂ ಯೋಚಿಸದೆ ಅದನ್ನು ಕಸದ ಬುಟ್ಟಿಗೆ ಸುರಿದರು. ಗುಡಿಸಿ ಮೂರು ದಿನಗಳಾಗಿದ್ದರಿಂದ ಎಂದಾದರೂ ಬಿದ್ದಿರಬಹುದು, ಕಷ್ಟದ ಸಮಯಕ್ಕೆ ಒದಗಿತು ಎಂದುಕೊಂಡರು. ಜಯಮ್ಮ ಮಗಳನ್ನು ಬಸ್ಸಿಗೆ ಬಿಟ್ಟು ಬರುವಾಗ ಫಕ್ಕನೆ ಸ್ವಾಮಿ ಚಲನ್‌ಗಳನ್ನೂ ಪೇಮೆಂಟ್ ಮಾಡಿದ ಚೆಕ್‌ಗಳನ್ನೂ ತಂದುಕೊಡಲು ಹೇಳಿದ್ದು ನೆನಪಾಯಿತು. ಮಗಳನ್ನು ಕಳಿಸುವ ಗಡಿಬಿಡಿಯಲ್ಲಿ ಈ ಕುರಿತು ಯೋಚಿಸಿರಲಿಲ್ಲ. ಹಾಗಿದ್ದರೆ ಇಂದೇ ಕಡಿಮೆ ಬಂದಿದೆ, ಏನಾಗಿದೆ ಎಂದು ನೋಡಲು ಸ್ವಾಮಿಚೆಕ್, ಚಲನ್ ತರಿಸಿರಬಹುದೆನ್ನಿಸಿತು. 


ಸ್ವಾಮಿಎಲ್ಲವನ್ನೂ ಹುಡುಕುತ್ತಾರೆ.ಎಲ್ಲೂ ಸಿಗದಿದ್ದಾಗ ನಾನು ಕ್ಲೀನ್ ಮಾಡಲು ಬಂದಿದ್ದು ನೆನಪಾಗುತ್ತದೆ. ಆಗ ಅನುಮಾನ ಪಡಬಹುದು. ನನ್ನನ್ನು ಕೇಳಬಹುದು. ಸಿಕ್ಕಿಲ್ಲ ಎಂದರಾಯಿತು. ಇಷ್ಟಕ್ಕೂಕ್ಯಾಷಿಂದ ಹಣ ಎತ್ತಿಕೊಂಡಿಲ್ಲ. ಕಸದಲ್ಲಿ ಬಿದ್ದಿತ್ತು. ಅಕಸ್ಮಾತಾಗಿ ಕಣ್ಣಿಗೆ ಬಿತ್ತು. ನೋಡದಿದ್ದರೆ ಹೋಗೇ ಬಿಡುತ್ತಿತ್ತು. ಕಸದಲ್ಲಿ ಬಿದ್ದಿದನ್ನು ಎತ್ತಿಕೊಂಡರೆ ಏನು ತಪ್ಪು? ಜಯಮ್ಮ ಸಮಾಧಾನ ಪಟ್ಟುಕೊಂಡರು. ಆದರೆ ಸ್ವಾಮಿಸುಮ್ಮನಾಗುತ್ತಾರೆಯೇ? ಮ್ಯಾನೇಜರ್‌ಗೆದೂರುಕೊಡಬಹುದು. ಮ್ಯಾನೇಜರ್‌ಕರೆಸುತ್ತಾರೆ. ಅವರುಜೋರು ಮಾಡುವುದಿಲ್ಲ. ಐನೂರು ನೋಡಿದಿಯೇನಮ್ಮಎಂದು ಕೇಳುತ್ತಾರೆ. ಅವರಿಗೆ ಇಲ್ಲಎನ್ನಲಾದೀತೇ?ಮ್ಯಾನೇಜರ್‌ಗೆತನ್ನ ಮೇಲೆ ವಿಶ್ವಾಸವಿರುವುದು ಜಯಮ್ಮನಿಗೆಗೊತ್ತಿತ್ತು. ಕೆಲವೊಮ್ಮೆ ತಡವಾದಾಗ ಅವಳ ಹತ್ತಿರ ಬ್ಯಾಂಕಿನ ಕೀ ಕೊಡುತ್ತಾರೆ. ಅವರೂರಿಗೆ ಹೋಗುವಾಗ ಮನೆ ನೋಡಿಕೊಳ್ಳಲು ಹೇಳುತ್ತಾರೆ. ಯಾವಕೋಣೆಗೂ ಬೀಗ ಹಾಕಿರುವುದಿಲ್ಲ. ಅಂತವರಿಗೆ ಸುಳ್ಳು ಹೇಗೆ ಹೇಳುವುದು? ಮ್ಯಾನೇಜರ್ ಕೇಳಿದರೆ, ಕಸದಲ್ಲಿ ಸಿಕ್ಕಿತೆಂದು ಹೇಳಬೇಕು. ವಾಪಾಸು ಕೊಡದಿದ್ದದ್ದು ತಪ್ಪಲ್ವಎನ್ನುತ್ತಾರೆ. ಮುಂದೆ ಹೀಗೆ ಮಾಡಬೇಡಿ ಎಂದು ಬುದ್ದಿ ಹೇಳಬಹುದು.ಆದರೆ ಸ್ವಾಮಿ ಸುಮ್ಮನಾಗುವ ಪೈಕಿಯಲ್ಲ… 


”ಸಾರ್, ಹೀಗೇ ಬಿಡಬೇಡಿ. ಐನೂರು ತೆಗೆದವಳು ಐದು ಸಾವಿರ ತೆಗೀತಾಳೆ… ರಿಪೋರ್ಟ್ ಮಾಡಿ” ಎಂದು ಹೇಳಬಹುದು. ಹಿಂದೊಮ್ಮೆಕಸ್ಟಮರ್ ಕ್ಯಾಷಿಯರ್‌ಗೆ ಸಾವಿರ ಹೆಚ್ಚು ಕೊಟ್ಟಿದ್ದರು. ಅದನ್ನವರು ಹಿಂತಿರುಗಿಸಿರಲಿಲ್ಲ. ಕೆಲವು ದಿನಗಳಾದ ಮೇಲೆ ಗೊತ್ತಾಗಿ ಕಸ್ಟಮರ್ ವಿಚಾರಿಸಿದ್ದರು. ಕ್ಯಾಷಿಯರ್ ಒಪ್ಪಿಕೊಳ್ಳಲಿಲ್ಲ. ಕಸ್ಟಮರ್‌ಕಂಪ್ಲೈಂಟ್‌ಕೊಟ್ಟರು. ಹಣಕಟ್ಟಿದ ಚಲನ್ ಪರಿಶೀಲನೆ ಮಾಡಿದಾಗಡಿನೋಮಿನೇಷನ್ ಬರೆಯವಾಗ ತಪ್ಪಾಗಿ ಸಾವಿರ ಹೆಚ್ಚು ಕೊಟ್ಟಿದ್ದು ಸಾಬೀತಾಯಿತು. ಕ್ಯಾಷಿಯರ್ ಕೆಲಸ ಕಳೆದುಕೊಂಡರು.

ಇದನ್ನು ನೆನೆದು ಜಯಮ್ಮ ನಡುಗಿದರು. ರಿಪೋರ್ಟ್ ಮಾಡಿದರೆ ಕೆಲಸ ಹೋಗುತ್ತೆ. ಛೆ! ಎಂತಾ ಕೆಲಸ ಮಾಡಿಬಿಟ್ಟೆ ಎಂದು ಪರಿತಪಿಸಿದರು.

ತಾನೆಂದೂ ಮೋಸ ಮಾಡಿಲ್ಲ. ಗಂಡತೀರಿಕೊಂಡ ಮೇಲೆ ಕಷ್ಟದಿಂದ ಮಗಳನ್ನು, ಅತ್ತೆಯನ್ನು ಸಾಕಿದ್ದೇನೆ. ಯಾರಿಗೂ ತೊಂದರೆಕೊಡದೆ ಗೌರವದಿಂದ ಬದುಕಿದ್ದೇನೆ. ನನಗೇಕೆ ಇಂಥಾ ಬುದ್ದಿ ಬಂತು? ಈ ಸಲ ಬಚಾವಾದರೆ ಸಾಕು. ಮುಂದೆಂದೂ ಇಂಥಾ ಕೆಲಸ ಮಾಡಲಾರೆ ಎಂದು ಸಾವಿರ ಸಲ ಹೇಳಿಕೊಂಡರು. ಅತ್ತೆಗೆ ಊಟ ಮಾಡಿಸಿ, ಬರಿ ಹೊಟ್ಟೆಯಲ್ಲೇ ಮಲಗಿದಜಯಮ್ಮನಿಗೆ ನಿದ್ದೆ ಬರಲಿಲ್ಲ.

 * * * * *


ಇದಾಗಿಎರಡು ವರ್ಷಗಳು ಕಳೆದವು. 


ಈ ನಡುವೆ ಶಿವಸ್ವಾಮಿಗೆ ಗುಬ್ಬಿಗೆ ಟ್ರಾನ್ಸ್ಫರ್‌ ಆಯಿತು. ಐನೂರು ಕಳೆದುಕೊಂಡ ನಂತರ ಸ್ವಾಮಿ ಇನ್ನಷ್ಟು ಜಾಗ್ರತೆ ವಹಿಸಿದರು. ಕ್ಯಾಷ್‌ಕ್ಯಾಬಿನ್‌ಗೆ ಬೀಗ ಹಾಕಿ ಕೂರುತ್ತಿದ್ದರು. ಒಮ್ಮೆಜನರಲ್ ಮ್ಯಾನೇಜರ್ ಬಂದಾಗಲೂ ಹೊರಗೆ ಬರಲಿಲ್ಲ. ಕ್ಯಾಬಿನ್ನಿನ ಒಳಗಿನಿಂದಲೇ ಮಾತನಾಡಿದರು. ಕೆಲವರ ಪ್ರಕಾರ ಸ್ವಾಮಿಗೆಟ್ರಾನ್ಸ್ಫರ್‌ ಆಗಿದ್ದು ಇದೇ ಕಾರಣಕ್ಕೆ.


 ಮ್ಯಾನೇಜರ್‌ ಚಂದ್ರನ್‌ಗೆ ಪ್ರೋಮೋಷನ್ ಬಂತು. ಬ್ಯಾಂಕಲ್ಲಿ ಬೀಳ್ಕೊಡುಗೆ ಏರ್ಪಡಿಸಿದ್ದರು. ಸಮಾರಂಭ ಮುಗಿದ ನಂತರ ಜಯಮ್ಮಅಂಜುತಂಜುತ್ತಾ ಮ್ಯಾನೇಜರ್ ಹತ್ತಿರ ಬಂದರು. ಮ್ಯಾನೇಜರ್‌ ತನಗೆ ಮಾಡಿದ ಉಪಕಾರಅವರ ಮನಸ್ಸಲ್ಲಿತ್ತು.

“ಸಾರ್ ನಾಳೆ ಬೆಳಿಗ್ಗೆ ನಮ್ಮ ಮನೆಗೆ ಕಾಫಿಗೆ ಬರ್ಬಹುದೇ?” ಜಯಮ್ಮ ಕೇಳಿದಳು.
ಚಂದ್ರನ್‌ ಯೋಚಿಸಿದರು.


“ಬರುತ್ತೇನೆ. ಆದರೆ ಹೊರಗಿಂದ ಏನೂ ತರಿಸುವಂತಿಲ್ಲ”


ಜಯಮ್ಮನಿಗೆ ಖುಷಿಯಾಯಿತು. ಮನೆಗೆ ಬಂದ ಮ್ಯಾನೇಜರ್‌ಗೆ ಬಿಸಿಬಿಸಿ ತಟ್ಟೆ ಇಡ್ಲಿ ಬಡಿಸಿದಳು.
ಚಂದ್ರನ್‌ಗೆ ತೃಪ್ತಿಯಾಯಿತು. 


ಹೊರಡುವ ಮುನ್ನ ಜಯಮ್ಮನಿಗೆ ಹೇಳಿದರು “ನಿಮ್ಮ ಹತ್ತಿರ ಒಂದು ವಿಷಯ ಕೇಳಬೇಕು. ಹೇಗೂ ನಾನು ಹೊರಟಿದ್ದೇನೆ. ನಿಮಗೇನೂ ತೊಂದರೆಯಾಗುವುದಿಲ್ಲ” ಎಂದು ನಿಮಿಷ ತಡೆದರು.

 
“ ಅಂದು ಐನೂರು ನಿಮಗೆ ಸಿಕ್ಕಿತ್ತೇ?” ಚಂದ್ರನ್ ಕೇಳಿದರು.


ಜಯಮ್ಮ ಉತ್ತರಿಸಲಿಲ್ಲ. ಕಣ್ಣುಗಳಲ್ಲಿ ನೀರುತುಂಬಿತ್ತು. 


**********