ಡಿ.ದೇವರಾಜೇಅರಸು: ಮರೆಯಬಾರದ ಮಹಾನುಭಾವ

ಡಿ.ದೇವರಾಜೇಅರಸು: ಮರೆಯಬಾರದ ಮಹಾನುಭಾವ

ಅರಸು ನೆನಪು 


ಕೆ.ಪಿ.ಲಕ್ಷ್ಮೀ ಕಾಂತರಾಜೇಅರಸು

 
ಕರ್ನಾಟಕದ ರಾಜಕಾರಣದಲ್ಲಿ ಅರಸು ಹಿಂದುಳಿದ ವರ್ಗದವರ ಸಸಿಗಳನ್ನು ನೆಟ್ಟು ಹೋಗಿದ್ದಾರೆ. ಅವುಗಳು ಬೃಹತ್ ವೃಕ್ಷಗಳಾಗಿ ಫಲ ಕೊಡುತ್ತಿವೆ. ಗಾಂಧೀಜಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಅಂಬೇಡ್ಕರ್‌ ದಲಿತರು ಶೋಷಿತರು ಬೆಳಕಿನ ದೀವಿಗೆ ಹಿಡಿದು ಬದುಕಿನ ಮಾರ್ಗಕೋರಿದರು. ಈ ಮಾರ್ಗದಲ್ಲಿಯೇ ಸಾಗಿದ ಅರಸು ಎಲ್ಲಾ ದುರ್ಬಲರ ಮನೆಗಳಲ್ಲಿ ಅರಿವು ಮತ್ತು ಅಭಿವೃದ್ಧಿಯ ದೀಪ ಬೆಳಗಿದ್ದಾರೆ. ಅಂತೆಯೇ ಎಲ್ಲಾ ದುರ್ಬಲರ ಮೆನಮನಗಳಲ್ಲಿ ಕ್ರಾಂತಿ ದೀಪವಾಗಿ ಮಿನುಗುತ್ತಲೇ ಇದ್ದಾರೆ. ದಿವಂಗತ ಮುಖ್ಯಮಂತ್ರಿ ಎಸ್.ಬಂಗಾರಪ್ಪ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅರಸು ಅವರ ಹಾದಿಯಲ್ಲೇ ಆಡಳಿತನ ನಡೆಸಿದರು ಹಾಗೂ ರಾಜ್ಯದ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ದೇವರಾಜ ಅರಸು ಹಾಕಿಕೊಟ್ಟ ಮಾರ್ಗದಲ್ಲೇ ನಡೆಯುತ್ತಿರುವುದನ್ನು ಗಮನಿಸಬಹುದು. 


ಡಿ.ದೇವರಾಜೇಅರಸು: ಮರೆಯಬಾರದ ಮಹಾನುಭಾವ

ಜನನ: 20 ಆಗಸ್ಟ್ 1915
ಮರಣ: 06 ಜೂನ್ 1982

ಸ್ವತಂತ್ರ ಪೂರ್ವದಲ್ಲಿ ಮೈಸೂರನ್ನು ಆಳಿದ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರನ್ನು ಈ ನಾಡು ಹೇಗೆ ಮರೆಯಲಾಗುವುದಿಲ್ಲವೋ ಅದೇ ರೀತಿ ಭಾಷಾ ಆಧಾರದ ಮೇಲೆ ಮೈಸೂರು + ಹೈದರಾಬಾದ್‌ ಕರ್ನಾಟಕ ಹಾಗೂ ಮುಂಬೈ ಕರ್ನಾಟಕದ ಜಿಲ್ಲೆಗಳನ್ನು ಕೂಡಿಸಿ ಮೈಸೂರು ರಾಜ್ಯ ಎಂಬುದಾಗಿ ರಚಿಸಲಾಗಿದ್ದ ಕನ್ನಡನಾಡನ್ನು ಏಕೀಕರಣಗೊಳಿಸಿ ‘ಕರ್ನಾಟಕ’ ರಾಜ್ಯ ಎಂದು ನಾಮಕರಣ ಮಾಡಿದ, ನಾಡಿನ ಹಿಂದುಳಿದ ವರ್ಗಗಳಿಗೆ ಅಭಿವೃದ್ಧಿಯ ಹಾದಿ ಸೃಜಿಸಿದ ಡಿ.ದೇವರಾಜೇ ಅರಸು ಜಾತಿಯ ಬಲವಿಲ್ಲದೆ ಕರ್ನಾಟಕವನ್ನು ದೀರ್ಘಕಾಲ ಆಳಿದ ಮುಖ್ಯಮಂತ್ರಿ. ಹಿಂದುಳಿದ ವರ್ಗಗಳ ಹರಿಕಾರ ಮಾತ್ರವಲ್ಲ, ನೀರಾವರಿ, ಶಿಕ್ಷಣ ಸೇರಿದಂತೆ ಹಲವು ಕ್ಷೇತ್ರಗಳ ಅಭಿವೃದ್ಧಿಗೆ ಮುನ್ನಡಿ ಬರೆದ ಧೀಮಂತ ತಮ್ಮಅದ್ಭುತ ಆಡಳಿತ ವೈಖರಿಯಿಂದ ಇತಿಹಾಸ ಪುಟಗಳಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ. ರಾಜ್ಯದ ಎಂಟನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ದೇವರಾಜೇ ಅರಸು ಅವರು 1972-77 ಹಾಗೂ 1978-80ರ ಎರಡು ಅವಧಿಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದವರು.( ದಿನಾಂಕ 20.03.1972ರಿಂದ 31.12.1977ರವರೆಗೆ ಮತ್ತು ದಿನಾಂಕ 28.02.1978ರಿಂದ ಜುಲೈ 1979ರವರೆಗೆ ಕಾಂಗ್ರೆಸ್ ಪಕ್ಷದಿಂದ ಹಾಗೂ ಆನಂತರ ದಿನಾಂಕ 07.01.1980ರವರೆಗೆ ಅರಸುಕಾಂಗ್ರೆಸ್ (ನಂತರ ಕಾಂಗ್ರೆಸ್ -ಸಮಾಜವಾದಿ ಎಂದಾಯಿತು) ಪಕ್ಷದಿಂದ ಮುಖ್ಯಮಂತ್ರಿಯಾಗಿದ್ದರು.

ವರ್ಣರಂಜಿತ ವ್ಯಕ್ತಿತ್ವ ಹೊಂದಿದ್ದರೂ ಅರಸು ತಮ್ಮ ಬಾಲ್ಯದಿಂದಲೂ ಅಂತ್ಯದವರೆಗೆ ಸವಾಲು ಸಂಘರ್ಷಗಳನ್ನು ಎದುರಿಸುತ್ತಲೇ ಶ್ರಮ ಜೀವಿಯಾಗಿಯೇ ಬದುಕು ಸವೆಸಿದರು. ದೇವರಾಜ ಅರಸು ಅವರ ಹುಟ್ಟೂರು ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕು ಬೆಟ್ಟದ ತುಂಗಗ್ರಾಮ. ಅವರ ತಂದೆಯ ಹೆಸರು ಕೂಡ ದೇವರಾಜ ಅರಸು. ಹುಲ್ಲಟ್ಟಿ ದೇವರಾಜ ಅರಸು ಮತ್ತು ದೇವೀರಮ್ಮಣ್ಣಿ ದಂಪತಿಗಳಿಗೆ ಮೂರು ಗಂಡು ಮಕ್ಕಳಲ್ಲಿ 1915 ಆಗಸ್ಟ್ 20 ರಂದು ಜನಿಸಿದ ದೇವರಾಜ ಅರಸು ಹಿರಿಯರು.


 ಇಂದು ಅವರ 107ನೇ ಜನ್ಮ ದಿನ, ಕರ್ನಾಟಕ ಮಾತ್ರವಲ್ಲ ದೇಶದ ರಾಜಕೀಯ ಹಾಗೂ ಸಾಮಾಜಿಕ ನಾಯಕರಾಗಿದ್ದ ಅವರು ಧ್ವನಿ ಇಲ್ಲದವರ ಧ್ವನಿಯಾಗಿದ್ದರು. ಈ ಕಾರಣಕ್ಕಾಗಿಧ್ವನಿ ಇಲ್ಲದವರ ಧಣಿಯೂ ಹೌದು!. ಅರಸುಅವರುದುರ್ಬಲರಿಗೆ ಶೋಷಿತರಿಗೆ ಧ್ವನಿಯನ್ನು ಕೊಟ್ಟರು. ಕುರ್ಚಿಗಿಂತ ಸಾರ್ವಜನಿಕ ಹಿತವೇ ಅವರ ಗುರಿಯಾಗಿತ್ತು. ಜಾತಿಯ ಬಲವಿಲ್ಲದ ಕಾರಣಕ್ಕಾಗಿ ರಾಜಕಾರಣದಲ್ಲಿ ರಾಜೀ ಮಾಡಿಕೊಂಡರೂ, ತಮ್ಮ ಸಂಕಲ್ಪವನ್ನು ಅನುಷ್ಠಾನಗೊಳಿಸಲು ಮತ್ತು ಅವುಗಳನ್ನು ಕಾರ್ಯಗತಗೊಳಿಸುವಲ್ಲಿ ಎಂದು ರಾಜಿಮಾಡಿಕೊಳ್ಳುತ್ತಿರಲಿಲ್ಲ. ಹೀಗಾಗಿ ಬೇರೆ ಮುಖ್ಯಮಂತ್ರಿಗಳಿಗಿಂತ ವಿಭಿನ್ನರಾಗಿ ಎದ್ದು ಕಾಣುತ್ತಾರೆ. ಬಡವರ ಉದ್ಧಾರವಾಗಬೇಕಾದರೆ ಪ್ರಬಲ ಕೋಮುಗಳನ್ನು ಬಳಸಿಕೊಳ್ಳಬೇಕೆಂಬ ರಹಸ್ಯವನ್ನು ಅರಸು ಅತ್ಯಂತ ಚೆನ್ನಾಗಿ ಅರಿತಿದ್ದರು. ಹೀಗಾಗಿ ಭಾರತದ ಇತಿಹಾಸದಲ್ಲಿ ಕರ್ನಾಟಕವನ್ನು ಎದ್ದುಕಾಣುವಂತೆ ಮಾಡಿದ ದೇವರಾಜ ಅರಸು ಪಾತ್ರ ಹಿರಿದಾದುದು.


 ಶ್ರಮಿಕ ವರ್ಗದಿಂದ ಬಂದಿದ್ದ ಅರಸು ಶೋಷಿತರನ್ನು ಕೂಡಿಹಾಕಿದ್ದ ಕೋಟೆಯ ಗೋಡೆಗಳನ್ನು ಒಡೆದು ಜಗತ್ತಿನದರ್ಶನ ಮಾಡಿಸಿದರು. ಸಿರಿತನ-ಬಡತನ, ಭೂಮಾಲಿಕ-ಗೇಣಿದಾರ ಇವುಗಳ ಅಂತರವನ್ನುಕಡಿಮೆ ಮಾಡಲು ಪ್ರಯತ್ನಿಸುವುದರ ಮೂಲಕ ಶೋಷಣಾರಹಿತ ಸಮಾಜವನ್ನುಕಟ್ಟಲು ಪ್ರಯತ್ನಿಸಿದ್ದು ಅವರ ಕ್ರಿಯಾಶೀಲ ರಾಜಕಾರಣಕ್ಕೆ ಸಾಕ್ಷಿ. ಉಳುವವನೇ ಭೂಮಿ ಒಡೆಯ  ಎಂಬ ಪ್ರಗತಿಪರ ಶಾಸನದ ಮೂಲದಗೇಣಿದಾರರಿಗೆ ಶಕ್ತಿ ತುಂಬಿದರು. ಭೂಮಿಗೆಗೇಣಿದಾರನೇಒಡೆಯ ಎಂಬ ಕಾನೂನು ಜಾರಿಗೆ ಬಂದತಕ್ಷಣವೇಗ್ರಾಮೀಣ ಪ್ರದೇಶದ ಭೂಮಾಲೀಕರು ಇದನ್ನುತಮ್ಮ ಅಸ್ತಿತ್ವಕ್ಕೆ ಬಿದ್ದ ಪೆಟ್ಟು ಎಂದು ತಿಳಿದು ನ್ಯಾಯಾಲಯದ ಮೆಟ್ಟಿಲೇರಲು ನಿರ್ಧರಿಸಿದ್ದರು. ಗೇಣಿದಾರರಿಗೆ ಭೂಮಿಯ ಹಕ್ಕು ಒದಗಿಸಿದ್ದ ಅರಸು ಅವರು ಭೂಮಾಲಿಕರ ಈ ತಂತ್ರಕ್ಕೆ ಪ್ರತಿಯಾಗಿ ಭೂ-ಸುಧಾರಣೆಗೆ ಸಂಬಂಧಿಸಿದ ವಿಷಯಗಳನ್ನು ನ್ಯಾಯಾಲಯದ ವ್ಯಾಪ್ತಿಗೆ ಬಾರದ ರೀತಿಯಲ್ಲಿ ನೋಡಿಕೊಂಡರು. ನ್ಯಾಯಾಲಯದ ಬಗ್ಗೆ ಹಳ್ಳಿಯ ಜನರಲ್ಲಿ ಭಯವನ್ನು ಅರಿತವರಾಗಿದ್ದಅವರು ಭೂಮಾಲಿಕರ ಕಿರುಕುಳದಿಂದ ಗೇಣಿದಾರರನ್ನು ಪಾರಾಗಿಸುವ ಸಲುವಾಗಿ ರಾಜ್ಯ ಹಾಗೂ ಜಿಲ್ಲಾಮಟ್ಟದಲ್ಲಿ ಭೂ-ಸುಧಾರಣಾ ಮಂಡಳಿಗಳನ್ನು ರಚಿಸಿದರು. ಇದು ನೀಡುವತೀರ್ಪನ್ನು ನ್ಯಾಯಾಲಯದಲ್ಲಿಯಾವರೀತಿಯಿಂದಲೂ ಪ್ರಶ್ನಿಸಿದಂತೆ ವ್ಯವಸ್ಥೆ ಮಾಡಿದರು. ಭೂ-ಸುಧಾರಣಾ ಮಂಡಳಿಯಲ್ಲಿ ರೈತ ಪ್ರತಿನಿಧಿಗಳು, ಸ್ಥಳೀಯ ಶಾಸಕರು ಮತ್ತುದಲಿತ ಪ್ರತಿನಿಧಿಗಳಿರುವಂತೆ ವ್ಯವಸ್ಥೆ ಮಾಡಿದರು. ಗೇಣಿದಾರರಿಗೆ ಭೂಮಿಯ ಹಕ್ಕು ಒದಗಿಸಿಕೊಟ್ಟದ್ದಲ್ಲದೇ ಅಂತಿಮವಾಗಿ ಅದನ್ನು ದಕ್ಕಿಸಿಕೊಡುವಲ್ಲಿ ರಚಿಸಿದ ಭೂನ್ಯಾಯ ಮಂಡಳಿಗಳ ಪಾತ್ರ ಮತ್ತುಇದರ ಹಿಂದಿನ ಅರಸುಅವರ ಸಂಕಲ್ಪಬದ್ಧ ದಿಟ್ಟ ನಿರ್ಧಾರಚಾರಿತ್ರಿಕವಾದುದು.


 ಅರಸು ಕೇವಲ ಗೇಣಿದಾರರಿಗೆ ಭೂಮಿ ಹಕ್ಕು ಒದಗಿಸಿಕೊಟ್ಟು ಸುಮ್ಮನಾಗಲಿಲ್ಲ. ಅವರ ಮನಸ್ಸು ಶೋಷಣೆಯ ವಿಮೋಚನೆಗೆ ಹುಡುಕಾಟ ನಡೆಸುತ್ತಲೇಇತ್ತು. ಆ ಕಾಲಕ್ಕೆ ಶತಶತಮಾನಗಳಿಂದ ಉಳ್ಳವರ ಅಹಂಕಾರದ ಪ್ರತಿಷ್ಠೆಯಾಗಿ ಪಾರಂಪರಿಕವಾಗಿ ಬೆಳೆದು ಬಂದ ಜೀತ ಪದ್ದತಿ ತೀವ್ರ ಸ್ವರೂಪದಲ್ಲಿತ್ತು. ಇದರತ್ತ ತಮ್ಮ ಸೂರ್ಯಕಿರಣ ನೋಟ ಬೀರಿದ ಅರಸು ಜೀತ ಪದ್ಧತಿ ನಿರ್ಮೂಲನೆ ಕಾಯ್ದೆ ರೂಪಿಸಿತು. ಈ ಮೂಲಕ ಸಾವಿರಾರು ಜೀತಗಾರರನ್ನು ಜೀತ ಮುಕ್ತಗೊಳಿಸಿತು. ಅವರು ಸ್ವತಂತ್ರರಾಗಿ ಬದುಕಲು ವ್ಯವಸ್ಥೆ ಕಲ್ಪಿಸಿಕೊಟ್ಟಿತು.


 ರಾಜ್ಯದಲ್ಲಿ ನಿರುದ್ಯೋಗಿಗಳ ಸಮಸ್ಯೆಗಳನ್ನು ಮನಗಂಡಿದ್ ದಅರಸು ದೇಶದಲ್ಲಿಯೇ ಪ್ರಥಮ ಮತ್ತು ವಿಶಿಷ್ಟವಾದ ಸ್ಟೈಫಂಡ್‌ ಯೋಜನೆಯನ್ನು ಜಾರಿಗೆ ತಂದರು. ಪದವಿ ಗಳಿಸಿದ ತರುವಾಯ ಜೀವನೋಪಾಯ ಮಾಡಲು ಅಲೆಯಬೇಕಾಗಿದ್ದ ನಿರುದ್ಯೋಗಿ ಪದವೀಧರರಿಗೆ ಈ ಯೋಜನೆ ವರದಾನವಾಯಿತು. ಪಶ್ಚಿಮ ಬಂಗಾಳ, ಕೇರಳದಂತಹ ಪ್ರಗತಿಪರ ರಾಜ್ಯಗಳು ಅರಸುರವರ ಯೋಜನೆಯನ್ನು ಅನುಸರಿಸಿದವು. ಈ ನಿಟ್ಟಿನಲ್ಲಿ ವೃದ್ಧಾಪ್ಯವೇತನ, ಅಂಗವಿಕಲ ವೇತನ, ವಿಧವಾ ವೇತನ ಜಾರಿಅವರ ಸಾಮಾಜಿಕ ಒಳಜೋಟಕ್ಕೆ ಸಾಕ್ಷಿ ಆಗಿವೆ. ಅಭಿವೃದ್ಧಿರಾಷ್ಟç ನಿರ್ಮಾಣ ಮತ್ತು ಸಮಾಜ ಸುಧಾರಣೆ ಮೊದಲಾದ ಬಹುಮುಖಿ ಚಿಂತನೆ ಹೊಂದಿದ್ದ ಅರಸು, ತಮ್ಮ ಚಿಂತನೆಗಳನ್ನು ತಮ್ಮ ಅವಧಿಯಲ್ಲೇ ಕಾರ್ಯರೂಪಕ್ಕೆ ತಂದಿದ್ದು ಚರಿತ್ರಾರ್ಹ ಸಂಗತಿ.


 ಪ್ರಗತಿಪರ ಹಾಗೂ ವೈಜ್ಞಾನಿಕ ನೋಟ ಹೊಂದಿದ್ದ ದೇವರಾಜೇ ಅರಸು ಇಂಗ್ಲೀಷ್ ಲೇಖಕ ಅಲೆಕ್ಸಿಸ್‌ಕ್ಯಾರೆಲ್ ಬರೆದ “ ಮ್ಯಾನ್‌ ಆಫ್‌ದ ಅನ್‌ ನೋನ್” ಎಂಬ ಪುಸ್ತಕವನ್ನು ಓದುತ್ತಿದ್ದರು. ‘ಮನುಷ್ಯನನ್ನು ನಾವೆಷ್ಟು ತಿಳಿದುಕೊಂಡಿದ್ದೇವೆ’ ಎಂಬ ಪ್ರಶ್ನೆಯನ್ನು ಆಗಾಗ ಚರ್ಚಿಸುತ್ತಿದ್ದರು. ಮಾರ್ಕ್ಸ್, ಲೆನಿನ್, ಮಹಾತ್ಮಗಾಂಧಿ, ಎಂ.ಎನ್.ರಾಯ್, ಆಚಾರ್ಯ ವಿನೋಬ ಭಾವೆಇವರೆಲ್ಲರ ಪ್ರಭಾವ ಅರಸು ಮೇಲೆ ದಟ್ಟವಾಗಿತ್ತು. ಆದರೆ ಅರಸು ಇವರ‍್ಯಾರನ್ನೂ ಪೂರ್ಣವಾಗಿ ಒಪ್ಪಿರಲಿಲ್ಲ. ಅರಸು ಅವರು ಚಿಂತನ ಶೀಲರಾದ್ದರಿಂದ ಪ್ರಸ್ತುತ ಭಾರತದ ಸಂದರ್ಭದಲ್ಲಿ ಜಾತಿಗಿಂತ ವರ್ಗ ಮುಖ್ಯ ಎಂಬ ನಂಬಿಕೆ ಅವರದ್ದಾಗಿತ್ತು.


 ದೇವರಾಜ ಅರಸು ಅವರು ಎಲ್.ಜಿ.ಹಾವನೂರು ನೇತೃತ್ವದಲ್ಲಿ ರಚಿಸಿದ್ದ ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಿದ ಪರಿಣಾಮ ಉದ್ಯೋಗ ಮತ್ತು ಶಿಕ್ಷಣದಲ್ಲಿ ಹಿಂದುಳಿದ ಹಾಗೂ ದುರ್ಬಲ ವರ್ಗದವರಿಗೆ ಶೇಕಡ 48ರಷ್ಟು ಮೀಸಲಾತಿ ದೊರೆಯಿತು. ಅದುವರೆಗೂ ಕೀಳರಿಮೆಯ ಕುಲುಮೆಯಲ್ಲಿ ಬೆಂದ ಜನ ತಮ್ಮ ಪ್ರತಿಭೆ-ಕೌಶಲ್ಯಗಳ ಪ್ರಕಾಶನಕ್ಕೆ ಅವಕಾಶ ಪಡೆದು ಬೆಳಗಿದರು. ಈ ಪರಿವರ್ತನೆ ದುರ್ಬಲ ವರ್ಗ ಮಾತ್ರವಲ್ಲದೆ ಮೇಲ್ಜಾತಿಯ ಕೆಳಸ್ತರದವರಲ್ಲೂ ಆತ್ಮವಿಶ್ವಾಸದ ಹೊಸಬೆಳಕು ಮೂಡಿಸಿತು. ಅದರ ಫಲವನ್ನು ನಾವೀಗ ಕಾಣುತ್ತಿದ್ದೇವೆ. ಕ್ರಾಂತಿಕಾರಕ ಭಾಷಣ ಮಾಡದೆ ಮೌನದಲ್ಲಿಯೇ ಪರಿವರ್ತನೆಯಕ್ರಾಂತಿ ಸಾರಿದಅರಸು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಹೊಸ ಸಮಾಜವಾದಕ್ಕೆ ಭಾಷ್ಯ ಬರೆದರು.


ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರು ಸಂಸ್ಥಾನದ ದೊರೆ ನಾಲ್ವಡಿಕೃಷ್ಣರಾಜಒಡೆಯರ್‌ ಅವರಿಂದ ಪ್ರಭಾವಿತರಾಗಿದ್ದ ಇವರು ನಾಲ್ವಡಿಯವರು ಮೈಸೂರುರಾಜ್ಯದ ಹಿಂದುಳಿದ ವರ್ಗದವರ ಏಳಿಗೆಗಾಗಿ ರಾಷ್ಟçದಲ್ಲಿ ಪ್ರಪ್ರಥಮವಾಗಿ ಜಾರಿಗೆ ತಂದ ಡಾ|| ಮಿಲ್ಲರ್‌ ಆಯೋಗಂತೆಯೇ ಸ್ವಾತಂತ್ರ್ಯ  ನಂತರ ಅರಸು ಅವರು ಕರ್ನಾಟಕದಲ್ಲಿ ಎಲ್ ಜಿ .ಹಾವನೂರು ಆಯೋಗದ ಮೂಲಕ ಜಾರಿಗೆ‌ ತಂದ ಹಿಂದುಳಿದ ವರ್ಗಗಳ ಶೈಕ್ಷಣಿಕ ಮತ್ತು ಉದ್ಯೋಗ ಮೀಸಲಾತಿ ನೀತಿಯನ್ನು 1980ರ ದಶಕದಲ್ಲಿ ಇತರೆ ರಾಜ್ಯಗಳು ಅಳವಡಿಸಿಕೊಂಡಿದ್ದು ವಿಶೇಷ. ಇದೇ ಮಾದರಿಯನ್ನು ಅನುಸರಿಸಿ ಕೇಂದ್ರದಲ್ಲಿ ಮಂಡಲ್‌ ಆಯೋಗವೂ ರಚನೆಯಾಯಿತು. ವಿ.ಪಿ.ಸಿಂಗ್‌ರ ಸರ್ಕಾರ ಮಂಡಲ್‌ ಆಯೋಗದ ವರದಿಯನ್ನು ಅನುಷ್ಟಾನಗೊಳಿಸುವ ಪ್ರಯತ್ನ ಮಾಡಿದರು. 1993ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಪಿ.ವಿ.ನರಸಿಂಹರಾಯರ ನೇತೃತ್ವದ ಕಾಂಗ್ರೆಸ್ ಹಿಂದುಳಿದ ವರ್ಗಗಳಿಗಾಗಿ ಕೇಂದ್ರ ಸರ್ಕಾರದ ಸೇವೆಗಳಲ್ಲಿ ಉದ್ಯೋಗ ಮೀಸಲಾತಿ ಸೌಲಭ್ಯ ಕಲ್ಪಿಸಿತು. 


 ರಾಜ್ಯದಲ್ಲಿ ಒಕ್ಕಲಿಗ,. ಲಿಂಗಾಯತರಂಥ ಪ್ರಬಲ ವರ್ಗದವರೇ ಆಡಳಿತ ಚುಕ್ಕಾಣಿ ಹಿಡಿಯುತ್ತಿದ್ದ ಸನ್ನಿವೇಶದಲ್ಲಿ ತೀರಾ ಸೂಕ್ಷö್ಮಜನ ಸಂಖ್ಯೆಯ ಅರಸು ಸಮುದಾಯಕ್ಕೆ ಸೇರಿದ ದೇವರಾಜ ಅರಸರು  ನಾಡಿನ ಮುಖ್ಯಮಂತ್ರಿ ಸ್ಥಾನ ತಲುಪಿದ್ದೇ ಒಂದು ಅಚ್ಚರಿಯ ಸಂಗತಿ.