ಕರ್ನಾಟಕ ಹಾಲು ಒಕ್ಕೂಟವನ್ನು ಹತೋಟಿಗೆ ತೆಗೆದುಕೊಳ್ಳುವ ಕೇಂದ್ರದ  ಹುನ್ನಾರ  

nandini

ಕರ್ನಾಟಕ ಹಾಲು ಒಕ್ಕೂಟವನ್ನು ಹತೋಟಿಗೆ ತೆಗೆದುಕೊಳ್ಳುವ ಕೇಂದ್ರದ  ಹುನ್ನಾರ   

ಅದೇ ಸಾರ್… ವ್ಯಾಪಾರಿಗಳ ಕೈಗೆ ಕೊಟ್ರೆ ಅಷ್ಟೇ!

ರಾಜಾರಾಂ ತಲ್ಲೂರ್

ಹಾಲು ಸುದ್ದಿ ಮಾಡತೊಡಗಿದೆ. ಹಾಲಿನ ಉತ್ಪನ್ನಗಳ ಮಾರುಕಟ್ಟೆ “ನಿಂತ ನೀರು” ಆಗಿದೆಯಂತೆ. ಅದಕ್ಕೆ ಚರ್ಮದ ಗಂಟು ರೋಗದಿಂದ ಜಾನುವಾರುಗಳು ಸತ್ತದ್ದು ಮತ್ತು ಮೇವಿನ ದರ ಹೆಚ್ಚಿದ್ದು ಕಾರಣವಂತೆ.ಇನ್ನೊಂದೆಡೆ ಹಾಲಿನ ಉತ್ಪಾದನೆ ತಗ್ಗಿರುವುದರಿಂದ ಕೆಲವು ಹಾಲಿನ ಉತ್ಪನ್ನಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳಲು ಸರ್ಕಾರ ಶೀಘ್ರವೇ ಅನುಮತಿ ನೀಡಲಿದೆ ಎಂದು ಸರ್ಕಾರದ ಕಡೆಯಿಂದ ಹೇಳಿಕೆ ಬಂದಿದೆ.

ಸಾಮಾನ್ಯವಾಗಿ  ಹಣದುಬ್ಬರದ ಪರಿಸ್ಥಿತಿ ಉಂಟಾದಾಗ ಅದನ್ನು ನಿಭಾಯಿಸಲು ಅರ್ಥಶಾಸ್ತ್ರಜ್ಞರು ಹೇಳುವ ದಾರಿಗಳೆಂದರೆ, ಬೆಲೆ ಏರಿಸುವುದು, ಉತ್ಪಾದಕತೆ ಹೆಚ್ಚಿಸುವುದು (ಇಲ್ಲಿ ಆಮದಿಗೆ ಅವಕಾಶ), ವೆಚ್ಚ ತಗ್ಗಿಸುವುದು ಮತ್ತು ಬೇರೆ ಕಂಪನಿಗಳನ್ನು ಸ್ವಾಧೀನಪಡಿಸಿಕೊಂಡು ಗಾತ್ರ ಹಿಗ್ಗಿಸಿಕೊಳ್ಳುವ ಮೂಲಕ ಖರ್ಚು ತಗ್ಗಿಸಿಕೊಳ್ಳುವುದು.

ದೇಶದ ಹಾಲು ಉತ್ಪಾದನೆಯ ಮುಂಚೂಣಿಯಲ್ಲಿರುವ “ಅಮುಲ್”, ತನ್ನದೇ ರಾಜ್ಯದವರ ಸರ್ಕಾರ ದೇಶದಲ್ಲಿರುವುದರಿಂದ ಈ ಎಲ್ಲ ಕ್ರಮಗಳಿಗೂ ಧೈರ್ಯದಿಂದ ಒಟ್ಟಾಗಿ ಇಳಿದಂತೆ ಕಾಣಿಸುತ್ತಿದೆ. ಹಾಗಾಗಿ, ನಂದಿನಿಯನ್ನು ತನ್ನ ವಶಮಾಡಿಕೊಳ್ಳಲು ಅಮುಲ್ ಹೊರಟರೆ, ಈ ಹಂತದಲ್ಲಿ ಅದು ಅಚ್ಚರಿಯ ಸಂಗತಿಯೇನಲ್ಲ. ರಾಜಕಾರಣಿಗಳು “ಡಿನಾಯಲ್ ಮೋಡ್” ನಲ್ಲಿದ್ದಾರೆ ಎಂದರೆ ಆ ಬಗ್ಗೆ ಚಿಂತನೆ ನಡೆದದ್ದು ಹೌದು ಎಂದೇ ಭಾವಿಸಬೇಕು!!

ಇಂತಹದೇ ಒಂದು ಸನ್ನಿವೇಶದಲ್ಲಿ ಎರಡು-ಮೂರು ವರ್ಷಗಳ ಹಿಂದೆ ನಮ್ಮ ಬ್ಯಾಂಕಿಂಗ್ ತೊಟ್ಟಿಲಿನ ಎಲ್ಲ ಶಿಶುಗಳೂ ವ್ಯಾಪಾರಸ್ಥರ ಪಾಲಾದದ್ದನ್ನು ನೆನಪಿಟ್ಟುಕೊಳ್ಳಿ. ಅದರ ಫಲ ಈಗ ಏನೇನು ಅನುಭವಿಸುತ್ತಿದ್ದೀರಿ ಎಂಬುದನ್ನೂ ನೆನಪಿಟ್ಟುಕೊಳ್ಳಿ.

ಅಲ್ಲಿ ಮಹಾರಾಷ್ಟ್ರದಲ್ಲಿ ಶರದ್ ಪವಾರ್ ಎಚ್ಚೆತ್ತು, ಆಮದಿಗೆ ಮುಂದಾಗದಂತೆ ಎಚ್ಚರಿಕೆ ನೀಡಿ, ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಅವರ ರಾಜ್ಯದ ಹಿತಾಸಕ್ತಿ ಕಾಪಾಡಿಕೊಳ್ಳಲು ಅವರು ಮುಂದಾಗಿದ್ದಾರೆ. ನಮ್ಮಲ್ಲೂ ನಮ್ಮ ರಾಜಕಾರಣಿಗಳು ಸಕಾಲದಲ್ಲಿ ಎಚ್ಚೆತ್ತುಕೊಂಡರೆ ಒಳ್ಳೆಯದು.

ಹಾಲು ವ್ಯಾಪಾರ ಹೌದು. ಲಾಭ ಆಗಲಿಲ್ಲ ಎಂದು “ನೀರು ಕೂಟಿ” ವ್ಯಾಪಾರ ಮಾಡಲು ಹೊರಡಬಾರದು!!

 

 ಮನೆಗೆ ಕಳುಹಿಸಿ

ಪಲ್ಲವಿ ಇಡೂರ್

 

ಇಲ್ಲಿನ ಬ್ಯಾಂಕುಗಳು ಮಣ್ಣು ಮುಕ್ಕಿಯಾಯಿತು. ಈಗ ನಮ್ಮ ರೈತರಿಗೆ, ಹೈನು ಉದ್ಯಮಕ್ಕೆ ವ್ಯವಸ್ಥಿತವಾಗಿ ಮಣ್ಣು ಹಾಕುವ ಅಜೆಂಡಾ ರೆಡಿಯಾಗಿದೆ. ಅದೆಷ್ಟೊ ಮನೆಗಳು ಇವತ್ತು ಹೈನುಗಾರಿಕೆಯಿಂದಲೇ ಸದೃಢವಾಗಿವೆ. ಸುಮಾರು 798 ಬಿಲಿಯನ್ ರೂಪಾಯಿಗಳಷ್ಟು ವ್ಯವಹಾರ 2021ರಲ್ಲೇ ದಾಖಲಿಸಿದೆ. 2027ರಷ್ಟರಲ್ಲಿ 1866.7 ಬಿಲಿಯನ್ ರೂಗಳಷ್ಟು ವಹಿವಾಟಿನ ನಿರೀಕ್ಷೆ ಇದೆಯಂತೆ.ಇದರಲ್ಲಿ ಸಿಂಹ ಪಾಲು ನಮ್ಮ ಕರ್ನಾಟಕ ಮಿಲ್ಕ್ ಫೆಡರೇಶನ್ ಆದ ಕೆಎಂಎಫ್ ದು.. ಸಾವಿರಾರು ಕನ್ನಡಿಗರಿಗೆ ಉದ್ಯೋಗದ ಮೂಲಕ ಬದುಕು ಕಟ್ಟಿಕೊಟ್ಟಿದೆ ಕೆಎಮ್ ಎಫ್. ಅಲ್ಲದೆ ಅನೇಕರಿಗೆ ಸ್ವಉದ್ಯೋಗಕ್ಕೊಂದು ದಾರಿಯಾಗಿಸಿದೆ. ಅದೆಷ್ಟೊ ಮನೆಯ ಮಕ್ಕಳ ಓದಿಗೆ ಆ ಮೂಲಕ ಬದುಕಿಗೆ ಬೆಳಕಾಗಿದೆ.

ನಾಳೆ ಕೆಎಮ್ ಎಫ್ ಕಳೆದುಕೊಂಡರೆ ಉದ್ಯೋಗ ಕಳೆದುಕೊಳ್ಳುವುದು ಕನ್ನಡಿಗರು. ಈಗೇನೊ ಅಮೂಲ್ ಅದೇ ಬೆಲೆಗೆ ಹಾಲು ಪ್ರಾಡಕ್ಟ್ ಗಳನ್ನ ಕೊಟ್ಟು ನಾಳೆ ಕೆಎಮ್ ಎಫ್ ಇಲ್ಲವಾದರೆ ದುಪ್ಪಟ್ಟು ಸುಲಿಯಲು ನಿಲ್ಲುವುದು ನಮ್ಮಿಂದಲೇ. ಜಿಯೊ ಲೂಟಿ  ಮಾಡಿದ್ದು ಈಗ ಹೇಗಿದೆ ಯೋಚಿಸಿ!

ಮೊದಲು ನಮ್ಮ ಕೋಟೆ ಬಾಗಿಲು ಭದ್ರ ಪಡಿಸಿಕೊಳ್ಳೋಣ. ಮಾರುಕಟ್ಟೆಯಲ್ಲಿ ನಂದಿನಿ ಪ್ರಾಡಕ್ಟ್ ಗಳು ಮತ್ತೆ ಬರುತ್ತವೆನ್ನುತ್ತಾರೆ. ಅದಾಗಬೇಕಾದರೆ ಅಮೂಲ್ ನಂತಹ ದಾಳಿಕೋರರನ್ನು ಹೊರಗಿಡಲೇಬೇಕು. ನಾನಂತೂ ಅಮೂಲ್ ತೆಗೆದುಕೊಳ್ಳುವುದಿಲ್ಲ.ಈ ಮೂಲಕ ಕನ್ನಡಿಗಳಾಗಿ ನನ್ನ ಕರ್ತವ್ಯ ಮಾಡುವೆ. ನೀವೂ ಕೈ ಜೋಡಿಸಿ. ಅಮೂಲ್ ಅನ್ನು ಹೊರಗೆ ಕಳುಹಿಸಿ ನಮ್ಮ ನಂದಿನಿಯನ್ನು ಉಳಿಸೋಣ .

ಇದೀಗ ನಂದಿನಿ ಸರದಿ

ಕನ್ನಡಿಗರೇ ಎಚ್ಚರ....!!

ಕುಮಾರ್ ತಾಡಿ

 

ಕರ್ನಾಟಕದಲ್ಲಿ ನಮ್ಮ ಹಿರಿಯರು ಕಟ್ಟಿ ಬೆಳೆಸಿದ್ದ ಬ್ಯಾಂಕುಗಳನ್ನು ತಿಂದು ಮುಕ್ಕಿದ್ದಾಯಿತು. ಈಗ ರೈತರ ಪಾಲಿನ ಸಂಜೀವಿನಿಯಾಗಿರುವ ನಂದಿನಿಯನ್ನು ಆಪೋಶನ ತೆಗೆದುಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಸಂಚು ಹೂಡಿದ್ದಾರೆ.

ಕನ್ನಡಿಗರೇ ಎಚ್ಚರ....!!

ಕೆಎಂಎಫ್ ಮತ್ತು ಅಮುಲ್ ಸಂಸ್ಥೆಗಳ ವಿಲೀನದ ಬಗ್ಗೆ ಕೇಂದ್ರ ಸಹಕಾರ ಸಚಿವರೂ ಆಗಿರುವ ಅಮಿತ್ ಶಾ ಪ್ರಸ್ತಾಪ ಮಾಡಿದ ದಿನದಿಂದ ರಾಜ್ಯದ ಹೈನು ಉದ್ಯಮಕ್ಕೆ ಗರ ಬಡಿದಿದೆ. ವಿಲೀನದ ಪ್ರಸ್ತಾವಕ್ಕೆ ಕನ್ನಡಿಗರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಹಿಂಬಾಗಿಲಿನಿಂದ ಅಮುಲ್ ಪ್ರವೇಶಿಸುತ್ತಿದೆ.

ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ನಂದಿನಿ ಹಾಲು ಮತ್ತು ಮೊಸರು ಮಾರುಕಟ್ಟೆಯಲ್ಲಿ ಮಾಯವಾಗುತ್ತಿದೆ. ಇದೇ ವೇಳೆ ಅಮುಲ್ ಉತ್ಪನ್ನಗಳ ಮಾರಾಟ ಭರದಿಂದ ಪ್ರಾರಂಭವಾಗಿದೆ. ಸಚಿವ ಅಮಿತ್ ಶಾ ನೇರ ಉಸ್ತುವಾರಿಯಲ್ಲಿಯೇ ಇವೆಲ್ಲ ನಡೆಯುತ್ತಿದೆ ಎನ್ನುವುದು ನಿಸ್ಸಂಶಯ.

ಗುಜರಾತ್ ಮೂಲದ ಅಮುಲ್ ಹಾಲು ಮತ್ತು ಮೊಸರು ಮಾರಾಟದ ಮೂಲಕ ಕರ್ನಾಟಕದ ಮಾರುಕಟ್ಟೆ ಪ್ರವೇಶಿಸಲು ಹಿಂದೆಯೂ ಪ್ರಯತ್ನಿಸಿತ್ತು. ಅದಕ್ಕೆ ನಾವು ಅವಕಾಶ ಕೊಡಲಿಲ್ಲ. ಈಗ ಬಿಜೆಪಿ ಕೆಂಪುಕಂಬಳಿ ಹಾಸಿ ಸ್ವಾಗತಿಸಿದೆ.

ಬಿಜೆಪಿ ಆಡಳಿತಾವಧಿಯಲ್ಲಿ ಕೆಎಂಎಫ್ ನಲ್ಲಿ ಹಾಲಿನ ಸಂಗ್ರಹ ಕಡಿಮೆಯಾಗುತ್ತಿದೆ. ದಿನಕ್ಕೆ 99 ಲಕ್ಷ ಲೀಟರ್ ಹಾಲು ಸಂಗ್ರಹವಾಗಬೇಕಾಗಿದ್ದ ಕಡೆ ಕೇವಲ 71 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಇದು ಕೆಎಂಎಫ್ ವಿರುದ್ಧದ ಷಡ್ಯಂತ್ರವೇ?

ನಮ್ಮ ಸರ್ಕಾರವು ಹಾಲಿಗೆ ನೀಡುವ ಸಹಾಯಧನವನ್ನು ಲೀಟರಿಗೆ 5 ರೂ.ಗಳಷ್ಟು ಹೆಚ್ಚಿಸಿತ್ತು. ಇದರಿಂದಾಗಿ 2012-13 ರಲ್ಲಿ 45 ಲಕ್ಷ ಲೀಟರ್ ಉತ್ಪಾದನೆಯಾಗುತ್ತಿದ್ದ ಹಾಲಿನ ಪ್ರಮಾಣವು 2017 ರ ವೇಳೆಗೆ 73 ಲಕ್ಷ ಲೀಟರಿಗೆ ಏರಿಕೆಯಾಗಿತ್ತು. ಈಗ ಕಡಿಮೆಯಾಗುತ್ತ ಸಾಗಲು ಕಾರಣವೇನು?

 

ಬಿಜೆಪಿ ಸರ್ಕಾರದ ರೈತದ್ರೋಹ

ನಮ್ಮ ಸರ್ಕಾರ ಐದು ವರ್ಷಗಳಲ್ಲಿ 1,356 ಕೋಟಿ ರೂಪಾಯಿಗಳನ್ನು ಹಾಲಿನ ಸಹಾಯಧನಕ್ಕಾಗಿ ರೈತರಿಗೆ ಕೊಟ್ಟಿದ್ದೆವು. ಆದರೆ ಬಿಜೆಪಿ ಸರ್ಕಾರ 2020 -21 ರಲ್ಲಿ 1186 ಕೋಟಿ ಖರ್ಚು ಮಾಡಿದ್ದರೆ 2023-24ಕ್ಕೆ ಕೇವಲ 1200 ಕೋಟಿ ರೂಪಾಯಿಗಳನ್ನು ಬಜೆಟ್ ನಲ್ಲಿ ಒದಗಿಸಿ ರೈತರಿಗೆ ಅನ್ಯಾಯ ಮಾಡಿದೆ.

ಕರ್ನಾಟಕದ ಬಿಜೆಪಿ ನಾಯಕತ್ವ ಎಷ್ಟೊಂದು ದುರ್ಬಲವಾಗಿದೆಯೆಂದರೆ ಒಂದೆಡೆ ಬೆಳಗಾವಿ ಗಡಿಪ್ರದೇಶದಲ್ಲಿ ಮಹಾರಾಷ್ಟ್ರ ಸರ್ಕಾರ ನೇರವಾಗಿ ತನ್ನ ಆಡಳಿತವನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದೆ. ಇನ್ನೊಂದೆಡೆ ಗುಜರಾತ್ ರಾಜ್ಯ ಅಮುಲ್ ಮೂಲಕ ಇಲ್ಲಿನ ರೈತರನ್ನು ಬೀದಿಗೆ ತಳ್ಳುವ ಪ್ರಯತ್ನ ಮಾಡುತ್ತಿದೆ.

ಹಿಂದಿ ಹೇರಿಕೆಯ ಮೂಲಕ ನಡೆಸುತ್ತಿರುವ ಭಾಷಾದ್ರೋಹ ಮತ್ತು ರಾಜ್ಯದ ಗಡಿಯೊಳಗೆ ಅತಿಕ್ರಮಿಸುವ ಮೂಲಕ ನಡೆಸುತ್ತಿರುವ ನೆಲದ್ರೋಹದ ಜೊತೆಗೆ ಈಗ ಕೆಎಂಎಫ್ ಅನ್ನು ಮುಚ್ಚಿಸುವ ಮೂಲಕ ರೈತದ್ರೋಹ ಮಾಡಲು ಬಿಜೆಪಿ ಸರ್ಕಾರ ಹೊರಟಿದೆ.

ನಾಡಿನ ರೈತರು, ರೈತರ ಹಿತರಕ್ಷಣೆಗಾಗಿ ಕಟ್ಟಿರುವ ಕೆಎಂಎಫ್ ನ ಕಬಳಿಕೆಯ ವಿರುದ್ಧ ಕನ್ನಡಿಗರೆಲ್ಲರೂ ಒಮ್ಮತದಿಂದ ವಿರೋಧಿಸಬೇಕಾಗುತ್ತದೆ. ಅಮುಲ್ ಉತ್ಪನ್ನಗಳನ್ನು ಖರೀದಿಸವುದಿಲ್ಲ ಎಂದು ಕನ್ನಡಿಗರೆಲ್ಲರೂ ಪ್ರತಿಜ್ಞೆ ಮಾಡಬೇಕು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಕ್ಷಣ ಮಧ್ಯಪ್ರವೇಶಿಸಿ ಹಿಂಬಾಗಿಲಿನಿಂದ ಪ್ರವೇಶಿಸುತ್ತಿರುವ ಅಮುಲ್ ಸಂಸ್ಥೆಯನ್ನು ತಡೆಯಬೇಕಾಗಿದೆ. ಈ ಸಂಬಂಧ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರಿಗೆ ರಾಜ್ಯದ ಜನಾಭಿಪ್ರಾಯವನ್ನು ಗಮನಕ್ಕೆ ತಂದು ಈ ದ್ರೋಹ ಚಿಂತನೆಯನ್ನು ನಿಲ್ಲಿಸಬೇಕು.

 

ನಮ್ಮದೇ ಬ್ರ್ಯಾಂಡ್ ನಂದಿನಿ ಉಳಿಸಬೇಕು

ಅಭಿಮನ್ಯು ರಮೇಶ್

ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳಿಯ ಮೇಲೆ ಗುಜರಾತ್ ಹಾಲು ಉತ್ಪಾದಕರ ಮಹಾಮಂಡಳಿಯ ಕೆಟ್ಟ ಕಣ್ಣು ಬಿದ್ದಿದೆ. ಇದಕ್ಕೆ ಕನ್ನಡಿಗರಿಂದ ಭಾರೀ ವಿರೋಧವೂ ವ್ಯಕ್ತವಾಗುತ್ತಿದೆ. ನಮ್ಮದೇ ನಂದಿನಿ ಬ್ರಾಂಡ್‌ಗೆ ದಶಕಗಳ ಇತಿಹಾಸದ ಯಶಸ್ಸು ದಕ್ಕಿರುವಾಗ ಅಮುಲ್ ಅನ್ನು ಅದರ ಮೇಲೆ ಹೇರುವ ಜರೂರತ್ತಾದರೂ ಏನು ಎಂಬುದಕ್ಕೆ ಆ ಅ(ಪರಿ)ಮಿತ ಅಹಂನ ಗುಜರಾತಿವಾಲಾ ಸ್ಪಷ್ಟ ಉತ್ತರ ನೀಡಬೇಕು. ಈ ತಿಕ್ಕಲುತನದ ನಿರ್ಧಾರಕ್ಕೆ ಮೂಗಬಸವರಂತೆ ಅಂಟಿಕೊಂಡಿರುವ ರಾಜ್ಯಾಡಳಿತವೂ ಇದುವರೆಗೂ ತುಟಿಬಿಚ್ಚಿಲ್ಲ. ಈಗಾಗಲೇ ನಂದಿನಿ ಹಾಲು ಮತ್ತು ಮೊಸರಿನ ಮೇಲೆ ಅಮುಲ್ ಹಾಲು ಮತ್ತು ಮೊಸರಿನ ಸವಾರಿ ಆರಂಭವಾಗಿದೆ. ಇದನ್ನು ಮೊಳಕೆಯಲ್ಲಿಯೇ ಚಿವುಟಿ ಹಾಕದಿದ್ದರೆ ಇಡೀ ಕೆಎಂಎಫ್ ನಾಳೆ ಜಿಎಂಎಫ್(ಗುಜರಾತಿ)ಮಯ ಆಗಲಿದೆ.

ನಮ್ಮ ರಾಜ್ಯದಲ್ಲಿ ಅಮುಲ್ ಹಾಲು ಮತ್ತು ಮೊಸರು ಮಾರಾಟ ಮಾಡುವಂತೆಯೇ ಇಲ್ಲ. ಆದರೆ, ಮುಕ್ತ ಮಾರುಕಟ್ಟೆ ನೆಪದಲ್ಲಿ ಗುಜರಾತ್ ಹಾಲು ಉತ್ಪಾದಕರ ಮಹಾಮಂಡಳಿಯು ಪ್ರಧಾನಿ ಮತ್ತು ಗೃಹಮಂತ್ರಿಗಳ ಅಣತಿಯಂತೆ ನಮ್ಮ ರಾಜ್ಯದ ಹಾಲು ಉತ್ಪಾದಕರ ಆದಾಯಕ್ಕೆ ಕುತ್ತು ತರಲು ಹೊರಟಿರುವುದು ನಿಜಕ್ಕೂ ಕನ್ನಡಿಗರು ಸಹಿಸಲು ಅಸಾಧ್ಯದ ಮಾತು.

ಮುಕ್ತ ಮಾರುಕಟ್ಟೆ ವ್ಯವಸ್ಥೆ ಇದೆ ಎಂದಾಕ್ಷಣ ಯಾವುದೇ ಸಂಸ್ಥೆ ಸ್ವಯಂ ನಿಯಂತ್ರಣ ರೇಖೆ ಮೀರಿ ಮುನ್ನುಗ್ಗುವುದು ಸಮಾಜ ವಿರೋಧಿ ನೀತಿಯಾಗಲಿದೆ. ಹಾಲು ಸಹಕಾರಿ ಮಹಾಮಂಡಲಗಳ ನಡುವಿನ ಅಲಿಖಿತ ಒಪ್ಪಂದ ಏರ್ಪಟ್ಟಿರುತ್ತದೆ. ಅದಕ್ಕೆ ಕಿಂಚಿತ್ತು ಬೆಲೆ ಕೊಡದ ಅಮುಲ್ ದಾರ್ಷ್ಟ್ಯತನ ಸಹಿಸಲು ಅಸಾಧ್ಯ. ಹಾಲಿನ ಕೊರತೆ ಇರುವ ರಾಜ್ಯಗಳಿಗೆ ಯಾವುದೇ ಮಹಾಮಂಡಲ ಹಾಲು ಸರಬರಾಜು ಮಾಡಬಹುದು. ಆದರೆ, ನಮ್ಮ ರಾಜ್ಯದಲ್ಲಿಯೇ ಹೆಚ್ಚುವರಿ ಹಾಲು ಉತ್ಪಾದನೆ ಆಗುತ್ತಿರುವಾಗ ಅಮುಲ್ ಈ ಹೇರಿಕೆ ಗುಂಡಾವರ್ತನೆ ಎಂದು ಅನಿಸದೆ ಇರದು. ಇದರಿಂದ ನಂದಿನಿ ಹಾಲು ಮಾರಾಟ ಸಂಸ್ಥೆ ಮತ್ತು ರೈತರಿಗೆ ದೊಡ್ಡ ಮಟ್ಟದ ಆರ್ಥಿಕ ಹೊಡೆತ ಬೀಳುವುದು ಖಚಿತ.

ಹೀಗಾಗಿ ನಾವು ಕನ್ನಡಿಗರು ಒಕ್ಕೊರಲಿನಿಂದ ಇದೀಗ ಅಮುಲ್‌ನ ಈ ನೀತಿ ವಿರುದ್ಧ ಧ್ವನಿ ಎತ್ತಲೇಬೇಕು. ಆ ಮೂಲಕ ನಮ್ಮದೆ ಕರ್ನಾಟಕ ಹಾಲು ಉತ್ಪಾದಕ ಮಹಾಮಂಡಲಿ ಮತ್ತು ರಾಜ್ಯದ ಹಾಲು ಉತ್ಪಾದಕರ ಹಿತ ಕಾಪಾಡಬೇಕು. ಬನ್ನಿ ಕೈಜೋಡಿಸಿ ಎಲ್ಲರೂ ಇದನ್ನು ವಿರೋಧಿಸೋಣ